ಪ್ರಭಾ ಹಾಗೂ ಕಿರಣ್‌ ಪ್ರೀತಿಸಿ ಮದುವೆಯಾದರು. ಎರಡು ವರ್ಷಗಳ ತನಕ ಅವರ ಪ್ರೀತಿಯ ಸೊಗಸು ಜೋರಾಗಿಯೇ ಇತ್ತು. ಆದರೆ ಇದೀಗ ಅವರ ದಾಂಪತ್ಯ ಜೀವನ ವಿಚ್ಛೇದನದ ದಾರಿಯಲ್ಲಿ ಸಾಗುತ್ತಿದೆ.

“ಮುಂಬೈನಂಥ ಮಹಾನಗರಿಯಲ್ಲಿ ಪ್ರತಿವರ್ಷ ಸುಮಾರು 9000 ವಿಚ್ಛೇದನದ ಅರ್ಜಿಗಳು ದಾಖಲಾಗುತ್ತವೆ. ಅದರಲ್ಲಿ ಹೆಚ್ಚಿನ ಪ್ರಕರಣಗಳು ಪ್ರೀತಿಸಿ ಮದುವೆ ಮಾಡಿಕೊಂಡವುಗಳೇ ಆಗಿರುತ್ತವೆ,” ಎನ್ನುತ್ತಾರೆ ಅಲ್ಲಿನ ಹಿರಿಯ ಹೈಕೋರ್ಟ್‌ ವಕೀಲರು.

ಅಂದಹಾಗೆ, ಪ್ರೀತಿಸಿ ಮದುವೆಯಾದವರು ಪರಸ್ಪರರಿಂದ ಹೆಚ್ಚಿನ ಅಪೇಕ್ಷೆ ಇಟ್ಟುಕೊಂಡು ಇರುತ್ತಾರೆ. ಹೀಗಾಗಿ ಅವರು ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ರೊಮ್ಯಾನ್ಸ್ ಸಂದರ್ಭದಲ್ಲಿ ಇಬ್ಬರೂ ಕನಸಿನ ಲೋಕದಲ್ಲಿ ಕಳೆದು ಹೋಗಿರುತ್ತಾರೆ. ಆದರೆ ಮದುವೆಯ ಬಳಿಕ ವಾಸ್ತವವನ್ನು ಎದುರಿಸಬೇಕಾಗಿ ಬಂದಾಗ ಪರಿಸ್ಥಿತಿ ಅದಲು ಬದಲಾಗಿಬಿಡುತ್ತದೆ.

ಮನೋತಜ್ಞ ಡಾ. ದಿನೇಶ್‌ ಹೇಳುವುದು ಏನೆಂದರೆ, ಮದುವೆಗೂ ಮುಂಚೆ ಯುವಕ ಯುವತಿ ಸಾಮಾನ್ಯವಾಗಿ ತಮ್ಮದೇ ಆದ ರೊಮ್ಯಾಂಟಿಕ್‌ ಇಮೇಜೊಂದನ್ನು ಸೃಷ್ಟಿಸಿ ಕೊಂಡಿರುತ್ತಾರೆ. ಅದು ವಾಸ್ತವಿಕತೆಯೊಂದಿಗೆ ಸ್ವಲ್ಪ ಸಂಬಂಧ ಹೊಂದಿರುವುದಿಲ್ಲ. ಇದರಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ.

ನೈಜ ಪ್ರೇಮಕ್ಕೆ ಅತ್ಯವಶ್ಯ

ನೈಜ ಪ್ರೀತಿಗಾಗಿ ಬೇಕಾಗಿರುವುದು ಏನೆಂದರೆ ಪರಸ್ಪರರ ಗುಣಗಳನ್ನು ಪರೀಕ್ಷಿಸುವುದು ಹಾಗೂ ಅವಲೋಕಿಸುವುದು, ಪರಸ್ಪರರ ಬಗ್ಗೆ ಕಾಳಜಿ ವಹಿಸುವುದು ಹಾಗೂ ಸುಖದುಃಖವನ್ನು ಪರಸ್ಪರರಲ್ಲಿ ಹಂಚಿ ಕೊಳ್ಳಬೇಕು. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ಪ್ರಭಾ ಹಾಗೂ ಕಿರಣ್‌ ಅವರ ರೊಮ್ಯಾನ್ಸ್ ಅಂತ್ಯಗೊಳ್ಳಲು ಅವರ ಸ್ವಾರ್ಥದಿಂದ ಕೂಡಿದ ವರ್ತನೆ ಕಾರಣವಾಯಿತು. ನಿಜವಾದ ಅರ್ಥದಲ್ಲಿ ಗಂಡಹೆಂಡತಿ ಯಾರೆಂದರೆ, ಅವರು ಪರಸ್ಪರ ಹಿಡಿತದಲ್ಲಿಟ್ಟುಕೊಳ್ಳುವ ಬದಲು, ಒಬ್ಬರು ಇನ್ನೊಬ್ಬರನ್ನು ತಮ್ಮದೇ ಆದ ರೀತಿಯಲ್ಲಿ ಜೀವಿಸಲು ಅವಕಾಶ ಕೊಡುವುದಾಗಿದೆ. ನಿಜವಾದ ಪ್ರೀತಿ ಯಾರನ್ನೂ ಗುಲಾಮನನ್ನಾಗಿಸುವುದಿಲ್ಲ. ಗಂಡಹೆಂಡತಿ ಪರಸ್ಪರ ಇದನ್ನು ಸಮತೋಲನದಿಂದಿಟ್ಟುಕೊಳ್ಳುವುದು ಅತ್ಯವಶ್ಯ. ಆಗಲೇ ಪ್ರೀತಿಯಲ್ಲಿ ಗಾಢತೆ ಬರುತ್ತದೆ. ಪರಸ್ಪರರ ದೃಷ್ಟಿಯಲ್ಲಿ ನೆಲೆಗೊಳ್ಳುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಒಬ್ಬರು ಇನ್ನೊಬ್ಬರನ್ನು ನನ್ನ ಅಧೀನ ಎಂದು ಭಾವಿಸುವುದು ಪ್ರೀತಿಯಲ್ಲಿ ಕಹಿ ಭಾವನೆಯನ್ನು ತುಂಬುತ್ತದೆ.

ಡಾ. ದಿನೇಶ್‌ ಹೀಗೆ ಹೇಳುತ್ತಾರೆ, “ಪ್ರೇಮಿಗಳ ಅಥವಾ ದಂಪತಿಗಳ ಮನಸ್ಸಿನಲ್ಲಿ ಕೇವಲ ರೊಮ್ಯಾಂಟಿಕ್‌ ಕಾಲ್ಪನಿಕ ಚಿತ್ರವೇ ಇರುತ್ತದೋ ಅವರಿಗೆ ಯಾವಾಗ ಕಷ್ಟವಾಗುತ್ತದೆಂದರೆ, ಇಬ್ಬರಲ್ಲಿ ಒಬ್ಬರು ಯಾವಾಗ ಆ ಕಾಲ್ಪನಿಕ ಚಿತ್ರಕ್ಕೆ ಸೂಕ್ತ ಎನಿಸುವುದಿಲ್ಲವೋ, ಆಗ ಅವರಿಗೆ ತಾವು ಪರಸ್ಪರರನ್ನು ಪ್ರೀತಿಸುತ್ತಿಲ್ಲ ಎಂದು ಅನಿಸತೊಡಗುತ್ತದೆ. ಪರಸ್ಪರರರಿಂದ ಹೆಚ್ಚು ಅಪೇಕ್ಷೆ ಇಟ್ಟುಕೊಳ್ಳದೆ, ಸಂಗಾತಿಯ ಸ್ವಾತಂತ್ರ್ಯದ ಅಗತ್ಯತೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಪಡುವ ಗಂಡಹೆಂಡತಿಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಅರಿತುಕೊಂಡಾಗಲೇ ಗಂಡಹೆಂಡತಿ ನಡುವಿನ ಸಂಬಂಧ ಮತ್ತಷ್ಟು ಗಾಢವಾಗುತ್ತದೆ. ಪರಸ್ಪರರ ದೌರ್ಬಲ್ಯಗಳು, ಕೊರತೆಗಳು, ಸ್ನೇಹಿತರು, ಸಂಬಂಧಿಕರು ಹಾಗೂ ಅವರದೇ ಆದ ವಿಚಾರಗಳನ್ನು ಒಪ್ಪುವ ಸ್ಥಿತಿಯನ್ನು ಉಂಟು ಮಾಡುತ್ತಾರೊ ಅವರ ನಡುವೆ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ. ಪರಸ್ಪರರಿಗೆ ಮೇಲಿಂದ ಮೇಲೆ `ಐ ಲವ್ ಯೂ’ ಹೇಳದೇ ಇರಬಹುದು. ಅವರ ಮಧ್ಯೆ ವಿಶ್ವಾಸವಿದ್ದರೆ, ಅದೇ ಅವರ ನೈಜ ಪ್ರೀತಿ ಎನಿಸಿ ಕೊಳ್ಳುತ್ತದೆ. ಆವೇಶದ ಪ್ರೀತಿಯಲ್ಲಿ ಪರಿಪಕ್ವತೆ ಇರುವುದಿಲ್ಲ. ಹೀಗಾಗಿ ಅದು ಬೇಸರ ಹುಟ್ಟಿಸುತ್ತದೆ. ಪರಸ್ಪರರ ಬಗೆಗಿನ ಆತ್ಮೀಯತೆ, ಉದಾರತೆ ಹಾಗೂ ಮೃದುಧೋರಣೆಗಳೇ ಇಂದಿನ ಆಧುನಿಕ ಪ್ರೀತಿಯ ಹೊಸ ವ್ಯಾಖ್ಯೆಗಳಾಗಿವೆ.

ಸಮರ್ಪಣೆಯ ಅಪೇಕ್ಷೆ

04062012vk1226

ಪತ್ನಿ ತನ್ನದೆಲ್ಲವನ್ನು ನನಗೆ ಸಮರ್ಪಣೆ ಮಾಡಬೇಕೆಂದು ತಿಳಿವಳಿಕೆಯಿಲ್ಲದ ಪತಿ ಅಪೇಕ್ಷಿಸುತ್ತಾನೆ. ಇಂತಹ ತಪ್ಪುಕಲ್ಪನೆಗೆ ತುತ್ತಾದ ಪತಿ ತಾನೂ ಒತ್ತಡಕ್ಕೆ ಸಿಲುಕುತ್ತಾನಲ್ಲದೆ, ಹೆಂಡತಿಯ ಜೀವನವನ್ನು ಕೂಡ ಹಾಳು ಮಾಡುತ್ತಾನೆ. ವಾಸ್ತವ ಜೀವನದಲ್ಲಿ ಹೀಗಾಗಬಾರದು. ಪರಸ್ಪರ ಗಾಢ ಸಂಬಂಧ ಪರಸ್ಪರರ ತಿಳಿವಳಿಕೆಯನ್ನು ಅವಲಂಬಿಸಿರುತ್ತದೆ. ಸಮರ್ಪಣೆಯ ಅಪೇಕ್ಷೆ ಇಟ್ಟುಕೊಳ್ಳದೇ ಇರುವುದೇ ಜಾಣತನ. ಹೀಗೆ ಮಾಡುವುದರಿಂದ ಪರಸ್ಪರರನ್ನು ಅರಿತು ಕೊಳ್ಳುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ಗಂಡಹೆಂಡತಿ ಪರಸ್ಪರರ ಕೊರತೆಗಳೊಂದಿಗೆ ಪ್ರೀತಿಸಬೇಕು. ಇದೇ ಸುಖಿ ದಾಂಪತ್ಯದ ಮೊದಲ ಹೆಜ್ಜೆಯಾಗಿದೆ. ಸೆಕ್ಸ್ ಬಗೆಗೂ ಕೂಡ ಒತ್ತಾಯ ಒತ್ತಡದ ತಂತ್ರ ಒಳ್ಳೆಯದಲ್ಲ.

ಆಗಿಹೋದುದರ ಬಗ್ಗೆ ಚಿಂತೆ ಬೇಡ

ನಿನ್ನೆಯ ಬಗ್ಗೆ ಇಂದು ವಾದ ವಿವಾದ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅದು ಸಂಬಂಧದ ಮಾಧುರ್ಯಕ್ಕೆ ಕೊಳ್ಳಿ ಇಡುತ್ತದೆ. ಆರಂಭದ ದಿನಗಳ ಪ್ರೀತಿಯ ಆವೇಗ, ಉತ್ತೇಜನ ದಿನಗಳೆದಂತೆ ಕಡಿಮೆಯಾಗುವುದು ಸಹಜ. ಅಂದಿನ ದಿನಗಳನ್ನು ನೆನೆದು ದುಃಖಿತರಾಗುವ ಬದಲು ಈಗಿರುವ ಸ್ಥಿತಿಯಲ್ಲೇ ಖುಷಿ ಹೊಂದುವುದನ್ನು ಹೆಂಡತಿ ರೂಢಿಸಿಕೊಳ್ಳಬೇಕು. ಪ್ರೀತಿಯಲ್ಲಿ ಭವಿಷ್ಯದ ಚಿಂತೆಗಿಂತ ವರ್ತಮಾನದ ಮಹತ್ವ ಹೆಚ್ಚು. ಮದುವೆಯಾದ 1-2 ವರ್ಷಗಳ ಬಳಿಕ ಮನೆಯ ಜವಾಬ್ದಾರಿ ಹಾಗೂ ಕೆರಿಯರ್‌ ನ ಧಾವಂತದಿಂದಾಗಿ ಪರಸ್ಪರರ ಬಗ್ಗೆ ಸೆಳೆತ ಕಡಿಮೆಯಾಗುತ್ತದೆ. ಆದರೆ ಇದು ಆಕಸ್ಮಿಕವಾಗಿ ಗಮನಕ್ಕೆ ಬಂದಾಗ ಭಾರಿ ಆಘಾತ ಉಂಟಾಗುತ್ತದೆ. ಕೋರ್ಟ್‌ ಶಿಪ್‌, ಡೇಟಿಂಗ್‌, ಮೊಬೈಲ್ ‌ನಲ್ಲಿ ಗಂಟೆಗಳ ಕಾಲ ಮಾತನಾಡುವುದು ಮದುವೆಯ ಬಳಿಕ ಇಷ್ಟಪಟ್ಟರೂ ಕೂಡ ದೊರೆಯುವುದಿಲ್ಲ. ಹತಾಶೆ, ಒತ್ತಡ ಮನೆ ಮಾಡುವುದರಿಂದ ದಾಂಪತ್ಯ ಸುಖದಿಂದ ವಂಚಿತರಾಗ ಬೇಕಾಗುತ್ತದೆ. ಇದೇ ಅಂತ್ಯವಲ್ಲ, ಈ ಬದಲಾವಣೆ ಪ್ರೀತಿಯ ಕೊನೆ ಎಂದೂ ಕರೆಸಿ ಕೊಳ್ಳುವುದಿಲ್ಲ. ಪ್ರೀತಿ ಕೂಡ ಹವಾಮಾನದ ಹಾಗೆ ಬದಲಾಗುತ್ತದೆ. ಗತಿಸಿಹೋದ ಕ್ಷಣಗಳನ್ನು ಸ್ಮರಣಾರ್ಹ ನೆನಪುಗಳಾಗಿಸಿಕೊಳ್ಳಿ. ಆ ನೆನಪುಗಳು ಹೃದಯಕ್ಕೆ ನೆಮ್ಮದಿ ನೀಡುತ್ತವೆ.

ಮಾತುಗಳನ್ನಾಡದೆಯೇ ಪರಸ್ಪರರ ಭಾವನೆಗಳನ್ನು, ಮೂಡ್‌ ನ್ನು ಅರಿತುಕೊಳ್ಳುವುದು ಯಶಸ್ವಿ ಗಂಡ ಹೆಂಡತಿಯ ಲಕ್ಷಣಗಳಾಗಿವೆ. ಆದರೆ ಇಂದಿನ ವಾತಾವರಣದಲ್ಲಿ ಮೌನದಿಂದ ಏನೂ ಸಾಧಿಸಲು ಆಗದು. ಅದು ತಪ್ಪುಕಲ್ಪನೆಗಳನ್ನು ಹೆಚ್ಚಿಸುತ್ತದೆ. ಅದನ್ನು ನಿವಾರಿಸಲು ಭಾವನೆ ವ್ಯಕ್ತಪಡಿಸುವುದು ಅತ್ಯವಶ್ಯ.

ಸಮಾನತೆಯನ್ನು ಅರಿತುಕೊಳ್ಳಿ

ಇಂದಿನ ಪ್ರಿಯಕರ ಪ್ರೇಯಸಿಯೇ ಇಲ್ಲಿ ಗಂಡಹೆಂಡತಿ ಆಗಿರಬಹುದು. ಅವರು ಪರಸ್ಪರರನ್ನು ಸಮಾನರು ಎಂದು ಭಾವಿಸಬೇಕು ಮತ್ತು ದೈಹಿಕ ಹಾಗೂ ಬೌದ್ಧಿಕವಾಗಿ ಪರಸ್ಪರರನ್ನು ಅರಿತುಕೊಂಡರೆ ಸಂಬಂಧದ ಬಿಸುಪು ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ. ಗಂಡಹಂಡತಿ ಮಾನವೀಯ ಅವಶ್ಯಕತೆಗಳಿಗೆ ಅನುಗುಣವಾಗಿಯೂ ತಮ್ಮನ್ನು ಸಮಾನರೆಂದು ಭಾವಿಸುತ್ತಾರೆ. ಯಾವ ಗಂಡಹೆಂಡತಿಯರು ಈ ಸಂಗತಿಯನ್ನು ಅರಿತುಕೊಳ್ಳುತ್ತಾರೊ, ಅವರಲ್ಲಿ ಗಾಢ ಹೊಂದಾಣಿಕೆ ಉಂಟಾಗುತ್ತದೆ. ಇದೇ ನಿಜವಾದ ಪ್ರೀತಿ. ಅದು ಹೆಚ್ಚು ದಿನ ಬಾಳಿಕೆ ಬರುತ್ತದೆ.

ಯಾವುದು ಸರಿ ಯಾವುದು ತಪ್ಪು?

ಪ್ರೀತಿಯ ನಿಟ್ಟಿನಲ್ಲಿ ಯೋಚನೆ ಹಾಗೂ ಭಾವನೆಯನ್ನು ಅತ್ಯಂತ ತಿಳಿವಳಿಕೆಯಿಂದ ಅರ್ಥ ಮಾಡಿಕೊಳ್ಳುವ ಅವಶ್ಯಕತೆಯಿರುತ್ತದೆ. ಪ್ರೀತಿಯಲ್ಲಿ ಯಾವಾಗಲೂ ಯಾವುದು ಸರಿ, ಯಾವುದು ತಪ್ಪು ಎಂದು ತಕ್ಕಡಿಯ ಎರಡು ಬೇರೆ ಬೇರೆ ತಟ್ಟೆಯಲ್ಲಿ ಹಾಕಲಾಗವುದು. ಆದರೆ ಗಂಡ ಆಫೀಸಿಗೆ ಹೊರಡುತ್ತಿದ್ದಂತೆ ಸ್ನೇಹಿತರ ಜೊತೆ ಫೋನ್‌ ನಲ್ಲಿ ಮಗ್ನರಾಗಿರುವುದಾಗಲಿ ಅಥವಾ ಎಲ್ಲಿಯಾದರೂ ಸುತ್ತಾಡಲು ಹೋಗುವುದಾಗಲಿ ಮಾಡುವುದು ತಪ್ಪು. ಗಂಡ ಮನೆಗೆ ಬಂದ ನಂತರ ಮುಗುಳ್ನಗೆಯ ಸ್ವಾಗತ ನೀಡದೇ ಇರುವುದು ಕೂಡ ತಪ್ಪು. ನಿಮ್ಮ ಹಾಗೂ ಗಂಡನ ಲೈಂಗಿಕ ಇಚ್ಛೆಯನ್ನು ಕಡೆಗಣಿಸದಿರಿ. ಸಮಾಗಮ ಸುಖ ಯಶಸ್ವಿ ಜೀವನದ ಮೂಲಮಂತ್ರವಾಗಿದೆ. ಇದನ್ನು ಚಾಚೂ ತಪ್ಪದೇ ಅನುಸರಿಸಿ ಹಾಗೂ ನಿಮ್ಮ ದಾಂಪತ್ಯವೆಂಬ ತೋಟ ಸದಾ ಹಸಿರಾಗಿರುವಂತೆ ನೋಡಿಕೊಳ್ಳಿ.

ರುಚಿತಾ ಮೋಹನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ