ಮದುವೆಯ ನಂತರದ ದೀಪಾವಳಿ ಬರುತ್ತಿದ್ದು, ನೀವು ಕುಟುಂಬದವರಿಂದ ಬಹುದೂರ ಪತಿಯ ಜೊತೆಗೆ ಇರುತ್ತಿದ್ದರೆ, ಅವರಿಗೆ ಕುಟುಂಬದವರಿಂದ ದೂರ ಇದ್ದೇವೆ ಎಂಬ ಅನುಭೂತಿ ಬರದಂತೆ ನೋಡಿಕೊಳ್ಳಿ.
ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಹಬ್ಬ ಆಚರಿಸುವುದು ನೈತಿಕ ಜವಾಬ್ದಾರಿಯಷ್ಟೇ ಅಲ್ಲ, ಪರಂಪರೆಯೂ ಆಗಿದೆ. ಒಂದು ವೇಳೆ ಹೀಗಾಗದಿದ್ದರೆ ವ್ಯಕ್ತಿ ಉದಾಸನಾಗುತ್ತಾನೆ.
ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅನುರಾಧಾ ಹೀಗೆ ಹೇಳುತ್ತಾರೆ, “ನನ್ನ ಗಂಡನ ನೌಕರಿಯ ಒಂದು ವಿಶೇಷ ಕಾರಣದಿಂದ ನಮ್ಮ ಮೊದಲ ದೀಪಾವಳಿಯನ್ನು ಬೇರೊಂದು ನಗರದಲ್ಲಿ ಕಳೆಯಬೇಕಾಗಿ ಬಂತು. ನಾನು ಅವರ ಜೊತೆಗೇ ಇದ್ದೆ. ಅವರನ್ನು ಹೇಗೆ ಖುಷಿಪಡಿಸುವುದು ಎಂದು ನಾನು ವಿಚಾರದಲ್ಲಿ ಮುಳುಗಿದ್ದೆ. ಆಗ ನನ್ನ ಗೆಳತಿಯೊಬ್ಬಳು ಕೆಲವು ಟಿಪ್ಸ್ ಕೊಟ್ಟಳು.
ಗಂಡನೊಂದಿಗೆ ಹೊರಗಡೆ ಇದ್ದಾಗ ದೀಪಾವಳಿಯನ್ನು ಹೇಗೆ ಖುಷಿಯಿಂದ ಆಚರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ :
ಸಂಗಾತಿಗಾಗಿ ಸಿಂಗರಿಸಿಕೊಳ್ಳಿ
ಹಬ್ಬಗಳು ಬಂದಾಗ ಮನಸ್ಸಿನಲ್ಲಿ ಖುಷಿಯ ಸಿಂಚನವಾಗುತ್ತದೆ. ಚೆನ್ನಾಗಿ ಅಲಂಕರಿಸಿಕೊಳ್ಳುವುದು ಹಾಗೂ ಒಳ್ಳೆಯ ಡಿಸೈನಿನ ಬಟ್ಟೆಗಳನ್ನು ಧರಿಸುವ ನಿಮ್ಮ ಹವ್ಯಾಸವನ್ನು ಈ ಸಂದರ್ಭದಲ್ಲಿ ಪೂರೈಸಿಕೊಳ್ಳಬಹುದು. ಪತಿಗೆ ಇಷ್ಟವಾಗುವ ಬಟ್ಟೆಗಳನ್ನು ಧರಿಸಬೇಕೆಂಬ ಆಲೋಚನೆ ನಿಮಗಿರಬೇಕು. ಜೊತೆಗೆ ಎಕ್ಸ್ ಪರ್ಟ್ ಗಳ ಸಲಹೆ ಕೂಡ ಕೇಳಬಹುದು.
ಹಬ್ಬದ ದಿನ ಸಂಜೆ ನೀವು ಅಲಂಕರಿಸಿಕೊಳ್ಳಲು ತಯಾರಾದರೆ, ಆಗ ಪತಿಯ ನೆರವು ಕೇಳಬಹುದು. ನಿಮ್ಮ ಕೂದಲಿಗೆ ಕ್ಲಿಪ್ ಹಾಕಿ ಎಂದು ಹೇಳಿ, ಕೈಗಳಿಗೆ ಮೃದುವಾಗಿ ಬಳೆ ತೊಡಿಸಿ ಎಂದು ವಿನಂತಿಸಿಕೊಳ್ಳಿ. ನಿಮ್ಮದು ಬ್ಯಾಕ್ ಬಟನ್ ಬ್ಲೌಸ್ ಆಗಿದ್ದರೆ, ಗಂಡನಿಗೆ ಬಟನ್ ಹಾಕಿ ಎಂದು ಹೇಳಿ. ನೇಲ್ ಪೇಂಟ್ ಹಾಕಿಸಿಕೊಳ್ಳಲು, ಸೀರೆ ಉಟ್ಟುಕೊಳ್ಳಲು ಅವರ ನೆರವು ಪಡೆದುಕೊಳ್ಳಬಹುದು. ನಿಮ್ಮ ಈ ರೀತಿಯ ಕೋರಿಕೆ ಅವರ ಮನಸ್ಸಿನಲ್ಲಿ ಪ್ರೀತಿಯ ಹುಚ್ಚು ಹೊಳೆಯನ್ನೇ ಹರಿಸಬಹುದು. ಅಂದಿನ ರಾತ್ರಿ ಸುಮಧುರ ರಾತ್ರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಬಾಡಿ ಲ್ಯಾಂಯಾಂಗ್ವೇಜ್ ಬಗ್ಗೆ ಗಮನ ಕೊಡಿ ಡ್ರೆಸ್ ನ ಜೊತೆ ಜೊತೆಗೆ ನಿಮ್ಮ ನಡಿಗೆಯ ಬಗೆಗೂ ಪರಿಪೂರ್ಣ ಗಮನ ಕೊಡಿ. ಹೆಜ್ಜೆ ಹಾಕುವಾಗ ಯಾವಾಗಲೂ ಚಿಕ್ಕಚಿಕ್ಕ ಹೆಜ್ಜೆಗಳನ್ನಿಡಿ. ನಿಮ್ಮ ಚಪ್ಪಲಿಯ ಹೀಲ್ ಎಷ್ಟಿರಬೇಕೆಂದರೆ, ನೀವು ನಿರಾಳವಾಗಿ ನಡೆದಾಡಲು ಸುಲಭವಾಗಬೇಕು.
ಸಮರ್ಪಣೆಯ ಭಾವ ಇರಲಿ
ನಿಮ್ಮ ಸಮರ್ಪಣೆ ಪತಿಗೆ ಈ ಹಬ್ಬ ಎಂದೂ ಮರೆಯದ ನೆನಪಾಗುತ್ತದೆ. ರಾತ್ರಿಯ ಮೆರುಗು ದೀಪಗಳ ನಡುವೆ ಪತಿಯ ಜೊತೆಗೆ ಮುಕ್ತವಾಗಿ ಸಮಾಗಮ ನಡೆಸಿ. ನಿಮ್ಮ ಪ್ರೀತಿ ಅವರನ್ನು ಖುಷಿಪಡಿಸುತ್ತದೆ. ಈ ಮಾತುಗಳಂತೂ ಮನೆಯ ಹೊರಗಿರುವವರದ್ದಾಯಿತು. ಮನೆಯಲ್ಲಿಯೇ ಇದ್ದರೆ ಹಬ್ಬವನ್ನು ಹೀಗೆ ಆಚರಿಸಬೇಕು.
ಮನೆಯನ್ನು ಬೆಳಗಿಸಿ
ದೀಪಾವಳಿಯ ಹಬ್ಬದಲ್ಲಿ ಬೆಳಕಿನ ವಿಷಯ ಇಲ್ಲ ಎಂದರೆ ಹೇಗಾಗುತ್ತದೆ? ಇಂಟೀರಿಯರ್ ಡಿಸೈನರ್ ರಾಜೇಶ್ ಹೀಗೆ ಹೇಳುತ್ತಾರೆ, “ದೀಪಾವಳಿಯ ಹಬ್ಬದಲ್ಲಿ ಗಂಡನನ್ನು ಖುಷಿಪಡಿಸಲು ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಲು ದೀಪಗಳ ಹೊರತಾಗಿ ಸುಗಂಧ ಪಸರಿಸುವ ಕ್ಯಾಂಡಲ್ ಗಳನ್ನು ಹಚ್ಚಿ. ವಾತಾವರಣ ಮತ್ತಷ್ಟು ಮಧುರವಾಗುತ್ತದೆ. ಫ್ಲೋಟಿಂಗ್ ಕ್ಯಾಂಡಲ್ ನ್ನು ಉಪಯೋಗಿಸಿ. ನೀರಿನಿಂದ ತುಂಬಿದ ಅಗಲವಾದ ಪಾತ್ರೆಯಲ್ಲಿ ಹೂಗಳ ಪಕಳೆಗಳ ನಡುವೆ ತೇಲಾಡುವ ಕ್ಯಾಂಡಲ್ ಗಳು ಮನಸ್ಸನ್ನು ಆಕರ್ಷಿಸುತ್ತವೆ ಹಾಗೂ ವಾತಾವರಣವನ್ನು ರೊಮ್ಯಾಂಟಿಕ್ ಗೊಳಿಸುತ್ತವೆ.
ವಿಶಿಷ್ಟ ಶೈಲಿ ಅನುಸರಿಸಿ
ಹಬ್ಬದ ಸಂದರ್ಭದಲ್ಲಿ ನಿಮ್ಮ ಮಾತನ್ನು ವಿಶಿಷ್ಟ ಗತ್ತಿನಲ್ಲಿ ಹೇಳಿ. ಲವ್ ನೋಟ್ಸ್ ಸಿದ್ಧಪಡಿಸಿ. ಮನದ ಮಾತುಗಳನ್ನು ಬರೆದು ಆ ಪತ್ರವನ್ನು ಅವರಿಗೆ ಸುಲಭವಾಗಿ ಕಂಡು ಬರುವಂತಹ ಜಾಗ ಅಂದರೆ ಬಾಥ್ ರೂಮಿನ ಕನ್ನಡಿ, ದಿಂಬಿನ ಕವರ್, ಪೇಪರಿನ ಒಳಪುಟಗಳಲ್ಲಿ ಪಿನ್ ಮಾಡಿಡಿ. ಅವರ ಮೂಡ್ ನ್ನು ಮತ್ತಷ್ಟು ರೊಮ್ಯಾಂಟಿಕ್ ಗೊಳಿಸಲು `ಶುಭ ದೀಪಾವಳಿ’ ಎಂದು ಹೇಳಿ ಪ್ರೀತಿಯಿಂದ ಎಬ್ಬಿಸಿ.
ಗರ್ಭಾ ನೃತ್ಯ
ದೀಪಾವಳಿಯ ಸಂದರ್ಭದಲ್ಲಿ ಗರ್ಭಾ ಝಲಕ್ ಕೇಳಿ ಬರುತ್ತಿರುತ್ತದೆ. ಇದು ಕೇವಲ ಒಂದು ನೃತ್ಯವಷ್ಟೇ ಅಲ್ಲ, ಸಾಮೂಹಿಕ ಕಾರ್ಯಕ್ರಮವೇ ಆಗಿರುತ್ತದೆ. ಇದು ಪ್ರೀತಿ ವ್ಯಕ್ತಪಡಿಸುವ ಒಂದು ವಿಶಿಷ್ಟ ಅವಕಾಶ ಆಗಿರುತ್ತದೆ. ನಿಮ್ಮ ಎಲ್ಲ ಸ್ನೇಹಿತರು, ನೆರೆಯವರನ್ನು ಆಮಂತ್ರಿಸಿ. ಗಂಡನೊಂದಿಗೆ ಗರ್ಭಾ ಆಡುತ್ತ ಕಣ್ಣಲ್ಲೇ ಪ್ರೀತಿಯನ್ನು ವ್ಯಕ್ತಪಡಿಸಿ.
ಹಳೆಯ ನೆನಪನ್ನು ಮೆಲುಕು ಹಾಕಿ
ಹಳೆಯ ನೆನಪುಗಳನ್ನು ಮೆಲುಕು ಹಾಕಲು ದೀಪಾವಳಿಗಿಂತ ಉತ್ತಮ ಅವಕಾಶ ಮತ್ತಾವುದಿದೆ? ಅವರು ನಿಮ್ಮ ಕಾಲೇಜಿಗೆ ಕದ್ದು ಮುಚ್ಚಿ ಬರುತ್ತಿದ್ದುದು ಪಾರ್ಕ್ ನಲ್ಲಿ ಪ್ರಥಮ ಚುಂಬನ ನೀಡಿದ್ದು, ಗಂಟೆಗಟ್ಟಲೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದುದು, ಎಸ್‌ಎಂಎಸ್ ಮಾಡಿದ್ದು, ಮುನಿಸಿಕೊಂಡಿದ್ದು, ನಿಮ್ಮನ್ನು ಅವರು ರಮಿಸಿದ್ದು ಹೀಗೆ ಹಳೆಯ ನೆನಪುಗಳನ್ನು ದೀಪಾವಳಿಯ ರಾತ್ರಿ ನೆನೆಪಿಸಿಕೊಂಡು ಹಬ್ಬವನ್ನು ಮತ್ತಷ್ಟು ರೊಮ್ಯಾಂಟಿಕ್ ಮಯವಾಗಿಸಿಕೊಳ್ಳಿ.
ಬೆಡ್ ರೂಮ್ ರೊಮ್ಯಾಂಟಿಕ್ ಆಗಲಿ
ನಿಮ್ಮ ಬೆಡ್ ರೂಮನ್ನು ಹೇಗೆ ಸಿಂಗರಿಸಿ ಕೊಳ್ಳಬೇಕೆಂದರೆ, ರೊಮ್ಯಾನ್, ಮಾಡಬೇಕೆಂಬ ಮೂಡ್ ಮನಸ್ಸಿನಲ್ಲಿ ತಂತಾನೇ ಮೂಡಬೇಕು. ದೀಪಾವಳಿಯ ಸಂದರ್ಭದಲ್ಲಿ ಕೆಂಪು ಗುಲಾಬಿಗಳಿಂದ ಕೂಡಿದ ಹೊದಿಕೆ ಹೊದಿಸಿ. ಮಂಚದ ಜೊತೆಗೆ ಸುವಾಸಿತ ಕ್ಯಾಂಡಲ್ ಇಡಿ. ಮಂಚದ ತುದಿಗೆ ಹೂ ಪಕಳೆಗಳನ್ನು ಹಾಕಿ. ಒಂದು ಪುಟ್ಟ ಟೇಬಲ್ ಮೇಲೆ ಹೂಗುಚ್ಛದ ಜೊತೆಗೆ ಗಾಜಿನ ಬಟ್ಟಲಿನಲ್ಲಿ ಫ್ಲೋಟಿಂಗ್ ಕ್ಯಾಂಡಲ್ ಇಡಿ. ರೂಮ್ ಫ್ರೆಶ್ ನರ್ ನಿಂದ ಕೋಣೆಯನ್ನು ಘಮಘಮ ಎನ್ನುವಂತೆ ಮಾಡಿ.
ಮದುವೆಯ ಫೋಟೋ ಚೆಂದವಾಗಿ ಅಲಂಕರಿಸಿ ನಮ್ಮದು ಈಚೆಗಷ್ಟೇ ಮದುವೆಯಾಗಿದೆ ಎಂಬಂತೆ ಅವರಿಗೆ ಅನುಭೂತಿ ಮಾಡಿಕೊಡಿ. ಇಷ್ಟು ಕಡಿಮೆ ಅಂತರದಲ್ಲಿ ನಮ್ಮ ನಡುವೆ ಅದೆಷ್ಟು ಗಾಢ ಸಂಬಂಧ ಏರ್ಪಟ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಡಿ.
ಅಡುಗೆಮನೆ ರೊಮ್ಯಾನ್ಸ್
ದೀಪಾವಳಿಯ ಸಂದರ್ಭ ಹಾಗೂ ಅಡುಗೆಮನೆಯಲ್ಲಿ ರುಚಿಕರವಾದ ತಿಂಡಿಗಳು ಇಲ್ಲವೇ ಎನ್ನುವುದು ಸಾಧ್ಯವೇ ಇಲ್ಲ. ಅಡುಗೆ ಮನೆಯಲ್ಲಿ ಇಬ್ಬರೂ ಸೇರಿಯೇ ರುಚಿಕರ ತಿಂಡಿಗಳನ್ನು ಸಿದ್ಧಪಡಿಸಿ. ಮೈದಾ ನಾದುತ್ತಾ ಅವರ ಕೈಬೆರಳುಗಳಲ್ಲಿ ನಿಮ್ಮ ಕೈಬೆರಳು ಸೇರಿಸಿ ಅವರ ಕೆನ್ನೆಗೆ ಮೈದಾ ಹಚ್ಚಿ. ಪ್ರೀತಿಯಿಂದ ಅವರ ಬಾಯಿಗೆ ಗೋಡಂಬಿ, ಒಣದ್ರಾಕ್ಷಿಗಳನ್ನು ಹಾಕಿ ಹಾಗೂ ಪ್ರೀತಿಯಿಂದ `ಐ ಲವ್ ಯೂ’ ಎಂದು ಹೇಳಿ. ಆಗ ನೋಡಿ ಪ್ರೀತಿ ಅವರನ್ನು ಹೇಗೆ ಆವರಿಸಿಕೊಳ್ಳುತ್ತದೆಂದು. ಬಳಿಕ ಅವರೂ ಕೂಡ ತಮ್ಮ ತುಂಟಾಟ ಶುರು ಮಾಡುತ್ತಾರೆ. ಆಗ ನಿಮ್ಮ ಹಬ್ಬದ ಸಂತಸ ದ್ವಿಗುಣಗೊಳ್ಳುತ್ತದೆ.
ಕ್ಯಾಂಡಲ್ ಲೈಟ್ ಡಿನ್ನರ್
ಅವರ ಮೆಚ್ಚಿನ ಅಡುಗೆ ಸಿದ್ಧಪಡಿಸಿ, ಸುಂದರ ಮೇಣದ ಬತ್ತಿಗಳ ನಡುವೆ ಕಣ್ಣಲ್ಲಿ ಕಣ್ಣಿಟ್ಟು ತಿನ್ನುವ ಆ ಕ್ಷಣಗಳನ್ನು ಸ್ಮರಣಾರ್ಹವಾಗಿಸಿಕೊಳ್ಳಿ. ದೀಪಾವಳಿಯನ್ನು ಮತ್ತಷ್ಟು ಖುಷಿಮಯವಾಗಿಸಿಕೊಳ್ಳಲು ಈ ಟಿಪ್ಸ್ ಅನುಸರಿಸಿ.
– ಪಿ. ರುಚಿತಾ