ರಾಮು : ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಅನ್ನೋದೂ ಸತ್ಯ.

ಶ್ಯಾಮು : ಅದನ್ನು ನಾನೂ ಒಪ್ತೀನಿ. ಆ ಮಹಿಳೆ ಅವನಿಗೆ ಎಷ್ಟು ಕಾಟ ಕೊಡ್ತಾಳೇಂದ್ರೆ ಅವನು ದುಃಖಿತನಾಗಿ ತನ್ನ ಕೆಲಸದಲ್ಲಿ ತಲ್ಲೀನನಾಗುತ್ತಾನೆ, ಶ್ರಮಹಿಸಿ ಕೆಲಸ ಮಾಡ್ತಾನೆ. ಯಶಸ್ಸು ತಾನಾಗೇ ಬರುತ್ತೆ.

ಈ ಪ್ರಪಂಚದಲ್ಲಿ 2 ಕೆಲಸ ಬಹಳ ಕಷ್ಟ. ಮೊದಲನೆಯದು ನಮ್ಮ ಐಡಿಯಾನ ಇನ್ನೊಬ್ಬರ ತಲೆಗೆ ತುಂಬುವುದು. ಎರಡನೇಯದು ಇನ್ನೊಬ್ಬರ ಹಣಾನ ನಮ್ಮ ಜೇಬಿಗೆ ಹಾಕ್ಕೊಳ್ಳೋದು.

ಮೊದಲನೇ ಕೆಲಸದಲ್ಲಿ ನಿಪುಣರಾದವರನ್ನು ಟೀಚರ್‌ ಅಂತಾರೆ.

ಎರಡನೇ ಕೆಲಸದಲ್ಲಿ ನಿಪುಣರಾದವರನ್ನು ಬಿಸ್‌ ನೆಸ್‌ ವುಮನ್‌ ಅಂತಾರೆ. ಮೇಲಿನ ಎರಡೂ ಕೆಲಸದಲ್ಲಿ ನಿಪುಣರಾದವರನ್ನು ಹೆಂಡತಿ ಅನ್ನುತ್ತಾರೆ.

ಮಹಿಳೆ : ನನ್ನ ಗಂಡನಿಗೆ ಪ್ರಮೋಶನ್‌ ಸಿಗಲಿ. ಹಣ, ಬಂಗಲೆ, ವಾಹನ ಎಲ್ಲಾ ಸಿಗಲಿ. ನನಗೇನೂ ಬೇಡ. ಎಲ್ಲ ಅವರಿಗೇ ಸಿಗಲಿ. ಆಮೇಲೆ…. ನಾನು ಅವರಿಂದ ಎಲ್ಲ ಕಿತ್ಕೋತೀನಿ.

ಒಬ್ಬ ಪೆದ್ದ ಪುರುಷ ತನ್ನ ಹೆಂಡತಿಗೆ ಸ್ವಲ್ಪ ಹೊತ್ತು ತೆಪ್ಪಗಿರು ಅನ್ನುತ್ತಾನೆ.

ಆದರೆ ಒಬ್ಬ ಬುದ್ಧಿವಂತ ಪುರುಷ ನಿನ್ನ ತುಟಿಗಳು ಮೌನವಾಗಿರುವಾಗ ನಿನ್ನ ಮುಖ ಬಹಳ ಸುಂದರವಾಗಿರುತ್ತದೆ ಅನ್ನುತ್ತಾನೆ.

ಒಂದು ಪುಸ್ತಕದ ಲಕ್ಷಾಂತರ ಪ್ರತಿಗಳು ಮಾರಾಟವಾದವು. ಅದಕ್ಕೆ ಕಾರಣ ಟೈಪಿಂಗ್‌ ನಲ್ಲಾದ ಒಂದು ಸಣ್ಣ ತಪ್ಪು.

ಪುಸ್ತಕದ ಹೆಸರು, `ಆ್ಯನ್‌ ಐಡಿಯಾ ಕೆನ್‌ ಚೇಂಜ್‌ ಯುವರ್‌ ಲೈಫ್‌.’ ಅದು `ಆ್ಯನ್‌ ಐಡಿಯಾ ಕೆನ್‌ ಚೇಂಜ್‌ ಯುವರ್‌ ವೈಫ್‌’ ಎಂದು ತಪ್ಪಾಗಿ ಅಚ್ಚಾಗಿತ್ತು.

ಪತ್ನಿ : ರೀ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?

ಪತಿ : ಬಹಳಷ್ಟು!

ಪತ್ನಿ : ಅದೇ ಎಷ್ಟು?

ಪತಿ : ಎಷ್ಟೂಂದ್ರೆ ನಿನ್ನಂಥವಳೇ ಇನ್ನೊಬ್ಬಳನ್ನು ಮದುವೆ ಆಗುವಷ್ಟು.

ಪತಿ : ಈಗ ನೀನೇ ಈ ಮನೆಯನ್ನು ಕನಸಿನ ಮನೆಯನ್ನಾಗಿ ಮಾಡಬಹುದು. ನನಗೆ ನೆಮ್ಮದಿಯ ಕ್ಷಣಗಳನ್ನು ನೀಡಬಹುದು.

ಪತ್ನಿ : ಹೌದಾ…. ಹೇಗೆ?

ಪತಿ : ತೌರುಮನೆಗೆ ಹೋಗಿ.

ಒಬ್ಬ ಪ್ರಸಿದ್ಧ ಸಂತರು ಪ್ರವಚನ ನೀಡುತ್ತಿದ್ದರು, “ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಒಬ್ಬ ಮಹಿಳೆಯ ಬಾಹುಗಳಲ್ಲಿ ಕಳೆದೆ. ಆದರೆ ಅವಳು ನನ್ನ ಪತ್ನಿಯಲ್ಲ…..”

ಕೇಳುವವರು ಆಶ್ಚರ್ಯದಿಂದ ಮೂಕರಾಗಿದ್ದರು.

ಸ್ವಲ್ಪ ಹೊತ್ತು ಸುಮ್ಮನಿದ್ದ ಸಂತರು ಮುಂದೆ ಹೇಳಿದರು, “ಅಂದಹಾಗೆ ಅವಳು ನನ್ನ ತಾಯಿ.”

ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.

ಅಲ್ಲೊಬ್ಬ ಆತುರಗಾರನಿದ್ದ. ಇದನ್ನು ಮನೆಯಲ್ಲಿ ಹೇಳಿ ಹೆಂಡತಿಯ ಹೊಟ್ಟೆ ಉರಿಸಬೇಕೆಂದುಕೊಂಡ.

ಅವನು ಮನೆಗೆ ಬಂದು ಹೆಂಡತಿಗೆ ಹೇಳಿದ, “ನನ್ನ ಬದುಕಿನ ಅತ್ಯಂತ ಸುಂದರ ಕ್ಷಣಗಳನ್ನು ಒಬ್ಬ ಮಹಿಳೆಯ ಬಾಹುಗಳಲ್ಲಿ ಕಳೆದಿದ್ದೇನೆ. ಆದರೆ ಅವಳು ನನ್ನ ಹೆಂಡತಿ ಅಂದರೆ ನೀನಲ್ಲ.”

ಅನು ಸ್ವಲ್ಪ ಹೊತ್ತು ಅಲ್ಲೇ ನಿಂತು ಎರಡನೇ ಸಾಲನ್ನು ನೆನೆಸಿಕೊಳ್ಳಲು ಪ್ರಯತ್ನಿಸಿದ. ಆದರೆ ಎದುರಿಗೆ ಕ್ರೋಧತಪ್ತಳಾಗಿದ್ದ ಹೆಂಡತಿಯನ್ನು ಕಂಡು ಅವನಿಗೆ ಯಾವುದೂ ನೆನಪಾಗಲಿಲ್ಲ. ನಂತರ ಮುಂದೆ ಒಂದು ದಿನ ಅವನಿಗೆ ಎರಡನೇ ಸಾಲು ನೆನಪಾದಾಗ ಆಸ್ಪತ್ರೆಯ ಬೆಡ್‌ ರೂಮಿನಲ್ಲಿ ಬಿದ್ದುಕೊಂಡು ನರಳುತ್ತಿದ್ದ.

“ಕುದಿಯುವ ನೀರು ಬಿದ್ದು ನಿಮ್ಮ ಶರೀರವೆಲ್ಲಾ ಸುಟ್ಟು ಹೋಗಿದೆ. ಕೆಲವು ತಿಂಗಳು ಬೆಡ್‌ ಮೇಲೆ ಕಳೆಯಬೇಕು,” ಎಂದು ನರ್ಸ್ ಹೇಳಿದಳು.

ನೀತಿ : ಕಾಪಿ ಮಾಡಬೇಡಿ. ಒಂದು ವೇಳೆ ಸರಿಯಾಗಿ ಹೇಳಲು ಬರದಿದ್ದರೆ ಸುಮ್ಮನಿರಿ.

ಒಬ್ಬ ಸೇಲ್ಸ್ ಮನ್‌ ಮನೆ ಮನೆಗೆ ಸುತ್ತಿ ಪುಸ್ತಕಗಳನ್ನು ಮಾರುತ್ತಿದ್ದ. ಅವನು ಒಂದು ಮನೆಯ ಕಾಲಿಂಗ್‌ ಬೆಲ್ ‌ಒತ್ತಿದಾಗ ಒಬ್ಬ ಮಹಿಳೆ ಬಾಗಿಲು ತೆರೆದಳು.

ಸೇಲ್ಸ್ ಮನ್‌ : ಮೇಡಂ, ನನ್ನ ಬಳಿ ಒಂದು ಪುಸ್ತಕ ಇದೆ. ಅದರಲ್ಲಿ ಗಂಡನ ಸುಳ್ಳು ಕಂಡುಹಿಡಿಯುವ 500 ಸುಲಭ ಟಿಪ್ಸ್ ಕೊಡಲಾಗಿದೆ.

ಮಹಿಳೆ : ನಾನು ಅದನ್ನು ಖರೀದಿಸುತ್ತೇನೆಂದುಕೊಂಡಿದ್ದೀರಾ?

ಸೇಲ್ಸ್ ಮನ್‌ : ಹೌದು. ಏಕೆಂದರೆ ನಾನು ಇವತ್ತೇ ನಿಮ್ಮ ಗಂಡನಿಗೆ ಒಂದು ಪುಸ್ತಕ ಮಾರಿದ್ದೇನೆ. ಅದರಲ್ಲಿ ಹೆಂಡತಿಗೆ ನೆಪ ಹೇಳು 100 ಉಪಾಯಗಳಿವೆ ಗೊತ್ತಾ!?

ಮಿಲಿಟರಿ ಟ್ರೇನಿಂಗ್‌ ನಲ್ಲಿ ಮೇಜರ್‌ ಸೈನಿಕ ಚೆಂಗಪ್ಪನನ್ನು ಕೇಳಿದರು, “ಕೈಯಲ್ಲಿ ಏನಿದೆ?”

ಚೆಂಗಪ್ಪ : ಸರ್‌, ಇದು ರೈಫಲ್.

ಮೇಜರ್‌ : ಇದು ರೈಫಲ್ ಅಲ್ಲ, ನಿನ್ನ ಗೌರವ, ನಿನ್ನ ತಾಯಿ.

ನಂತರ ಮೇಜರ್‌ ಇನ್ನೊಬ್ಬ ಸೈನಿಕ ಆನಂದ್‌ ಬಳಿ ಬಂದು ಅದೇ ಪ್ರಶ್ನೆ ಕೇಳಿದರು, ನಿನ್ನ ಕೈಯಲ್ಲಿರೋದೇನು?

ಆನಂದ್‌ : ಸರ್‌, ಇದು ಚೆಂಗಪ್ಪನ ತಾಯಿ. ನಮ್ಮ ಆಂಟಿ.

ಇಬ್ಬರು ಗೆಳತಿಯರು ಚಾಂದನಿ ಚೌಕದಲ್ಲಿ ಸುತ್ತಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರ ದೃಷ್ಟಿ ಒಬ್ಬ ಮಹಿಳೆಯ ಮೇಲೆ ಬಿತ್ತು. ಅವಳು ತನ್ನ ಗಂಡನನ್ನು ಕಿಟಕಿಯಿಂದ ಕೆಳಗೆ ತಳ್ಳಿದಳು. ಅವನು ಕೆಳಗಿದ್ದ ಕಸದ ತೊಟ್ಟಿಯಲ್ಲಿ ಬಿದ್ದ.

ಅದನ್ನು ಕಂಡು ಮೊದಲನೆಯಳು, “ದೆಹಲಿಯ ಹೆಂಗಸರು ಬಹಳ ವೇಸ್ಟ್ ಮಾಡ್ತಾರೆ ಕಣೆ,” ಎಂದಳು.

ಇನ್ನೊಬ್ಬಳು, “ಹೇಗೆ ಹೇಳ್ತೀಯಾ?” ಎಂದಳು.

ಮೊದಲನೆಯಳು, “ನೀನೇ ನೋಡು, ಆ ಗಂಡಸು ಇನ್ನೂ 45 ವರ್ಷ ಅವಳ ಕೆಲಸಕ್ಕೆ ಬರ್ತಿದ್ದ. ಅವಳು ಈಗಲೇ ಅವನನ್ನು ಕಸದ ತೊಟ್ಟೀಲಿ ಬಿಸಾಕಿಬಿಟ್ಟಳು,” ಎಂದಳು.

ಗುಂಡ ಮನೆಗೆ ಬಂದು ನೋಡಿದಾಗ ಅವನ ಹೆಂಡತಿ ರಮಾ ಅಳುತ್ತಿದ್ದಳು.

ಗುಂಡ : ಯಾಕೇ ಅಳ್ತಿದ್ದೀ?

ರಮಾ : ನಿಮ್ಮ ಅಮ್ಮ ನನಗೆ ಅವಮಾನ ಮಾಡಿದ್ದಾರೆ.

ಗುಂಡ : ಏನೇ ಮಾಡಿದರು? ಪಾಪ, ಅನೇಕ ವರ್ಷಗಳಿಂದ ಅವರ ಪಾಡಿಗೆ ಅವರು ಹಳ್ಳೀಲಿ ಇದ್ದಾರೆ.

ರಮಾ : ಇಂದು ಬೆಳಗ್ಗೆ ನಿಮಗೊಂದು ಲೆಟರ್‌ ಬಂದಿತ್ತು. ನಾನು ಅದನ್ನು ಕೂಡಲೇ ತೆರೆದು ಓದಿದೆ. ಕಡೆಯಲ್ಲಿ ಏನು ಬರೆದಿತ್ತು ಗೊತ್ತಾ? ಪ್ರೀತಿಯ ರಮಾ, ನೀನು ಈ ಪತ್ರ ಓದಿದ ನಂತರ ನನ್ನ ಮಗನಿಗೂ ಓದೋಕೆ ಕೊಡು. ಮರೀಬೇಡ ಅಂತ ಬರೆದಿದ್ರು.

ತಾತ ಮತ್ತು ಅಜ್ಜಿ ತಮ್ಮ ಯೌವನದ ದಿನಗಳನ್ನು ನೆನೆಸಿಕೊಂಡು ಮತ್ತೆ ಆ ದಿನಗಳನ್ನು ಆಚರಿಸಲು ನಿರ್ಧರಿಸಿದರು. ಮರುದಿನ ನದಿ ತೀರದಲ್ಲಿ ಭೇಟಿಯಾಗಲು ತೀರ್ಮಾನಿಸಿದರು.

ತಾತ ಬೆಳಗ್ಗೆ ಬೇಗನೆ ಎದ್ದು ಕೈಯಲ್ಲಿ ಗುಲಾಬಿ ಹೂ ಹಿಡಿದು ನದಿ ತೀರಕ್ಕೆ ಹೋದರು. ಆದರೆ ಅಜ್ಜಿ ಬರಲಿಲ್ಲ. ತಾತ ಮನೆಗೆ ಬಂದು ಕೋಪದಿಂದ ಕಿರುಚಿದರು, “ಯಾಕೇ ನೀನು ಬರಲಿಲ್ಲ? ನಾನು ಅಲ್ಲಿ ನಿನಗಾಗಿ ಕಾಯ್ತಿದ್ದೆ.”

ಅಜ್ಜಿ ನಾಚುತ್ತಾ, “ಬರೋಣಾಂತಿದ್ದೆ. ನಮ್ಮಮ್ಮ  ಬಿಡಲಿಲ್ಲ,” ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ