2021ರ ಕೆಲವು ತಿಂಗಳುಗಳನ್ನು ನಾವು ಕೊರೋನಾದ ಆತಂಕದ ಮಧ್ಯೆಯೇ ಕಳೆದೆವು. ಆಗ ನಮ್ಮ ಜೀವನದ ವೇಗ ಅಷ್ಟಿಷ್ಟು ಕಡಿಮೆಯಾಗಿತ್ತು. ಭಯ, ಯೋಚನೆ, ಭವಿಷ್ಯಕ್ಕಿಂತ ವರ್ತಮಾನದ ಚಿಂತೆ ಆವರಿಸಿಕೊಂಡಿತ್ತು. ಓದು, ಉದ್ಯೋಗ, ಸುತ್ತಾಟ, ಶಾಪಿಂಗ್ ಅಥವಾ ಹೋಟೆಲ್ ಗೆ ಹೋಗಿ ಏನಾದರೂ ವಿಶೇಷವಾದದ್ದನ್ನೇ ತಿನ್ನಬೇಕೆಂದರೂ ತಿನ್ನಲಾಗುತ್ತಿರಲಿಲ್ಲ. ಪಾರ್ಟಿ, ಮೋಜುಮಜ, ಸಂಬಂಧಿಕರ ಮನೆಗೆ ಹೋಗುವುದು ಹೆಚ್ಚು ಕಡಿಮೆ ನಿಂತೇಹೋಗಿತ್ತು.
ಕೊರೋನಾದ ಆತಂಕದಿಂದ ಒಂದಿಷ್ಟು ದೂರವಾಗಿ ನಾವೀಗ 2022ರಲ್ಲಿ ಬಂದು ನಿಂತಿದ್ದೇವೆ. ಈಗಲೂ ಕೂಡ ಹೊರಗೆ ಹೋಗುವಾಗ ಒಂಚೂರು ಅಳುಕು ಆಗಿಯೇ ಆಗುತ್ತದೆ. ಹಾಗಂತ ಮನೆಯಲ್ಲಿಯೇ ಇರುವುದು ಜೀವನವಲ್ಲ. ಹೊರಗೆ ಬಂದು ವಾಸ್ತವ ಬದುಕಿನ ಆನಂದ ಪಡೆಯಬೇಕು. ಅದಕ್ಕಾಗಿ ಒಂದಷ್ಟು ಎಚ್ಚರಿಕೆ ವಹಿಸುತ್ತಾ, ಸಾಮಾಜಿಕ ಹೊಂದಾಣಿಕೆ ಮಾಡಿಕೊಳ್ಳುತ್ತಾ ಮುಂದೆ ಮುಂದೆ ಸಾಗಬೇಕಿದೆ.
ಜನರನ್ನು ಭೇಟಿಯಾಗಿ
ಕೊರೋನಾದ ಅವಧಿಯಲ್ಲಿ ಬಹಳಷ್ಟು ಜನರು ಮಾನಸಿಕವಾಗಿ ಜರ್ಝರಿತರಾಗಿದ್ದರು. ನಾವು ದೈಹಿಕ ಆರೋಗ್ಯದ ಬಗ್ಗೆ ಎಷ್ಟು ಗಮನ ಕೊಡುತ್ತೇವೋ, ಮಾನಸಿಕ ಆರೋಗ್ಯದ ಬಗೆಗೂ ಅಷ್ಟೇ ಕಾಳಜಿ ತೋರಬೇಕಿದೆ. ಇದರಿಂದ ಮನುಷ್ಯ ಯೋಚಿಸುವ, ಅನುಭವ ಹಾಗೂ ಕಾರ್ಯ ನಿರ್ವಹಣಾ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಒತ್ತಡ ಹಾಗೂ ಖಿನ್ನತೆ ಒಮ್ಮೆ ಒಬ್ಬ ವ್ಯಕ್ತಿಯನ್ನು ಆವರಿಸಿಕೊಂಡುಬಿಟ್ಟರೆ ಅದರ ನೇರ ಪರಿಣಾಮ ಸಂಬಂಧ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೂ ಉಂಟಾಗುತ್ತದೆ. ಯಾರು ಮಾನಸಿಕವಾಗಿ ವೀಕ್ ಆಗಿರುತ್ತಾರೊ, ಅವರಿಗೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಕೆಲವರು ಹೇಗಿರುತ್ತಾರೆಂದರೆ, ಅವರು ಮಾನಸಿಕವಾಗಿ ಬಹಳ ಗಟ್ಟಿಗರಾಗಿರುತ್ತಾರೆ.
ಆದರೆ ಅವರು ತಮ್ಮ ದೈಹಿಕ ಆರೋಗ್ಯ ಕಳೆದುಕೊಳ್ಳುತ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವುದು ಹಾಗೂ ಜನರ ಸಂಪರ್ಕದಿಂದ ವಂಚಿತರಾಗಿರುವುದು.
ನೀವು ಕಳೆದ ಅನೇಕ ತಿಂಗಳುಗಳಿಂದ ನಿಮ್ಮ ಆಪ್ತರೊಬ್ಬರ ಸಂಪರ್ಕದಿಂದ ದೂರ ಇದ್ದಿದ್ದರೆ, ಈಗ ಹೊಸ ವರ್ಷದ ಆರಂಭದಲ್ಲಿ ಅವರನ್ನು ಭೇಟಿಯಾಗಿ ಮಾತನಾಡಿ, ಅವರ ಮಾನಸಿಕ ಆರೋಗ್ಯ ಸುಧಾರಣೆಯ ಬಗ್ಗೆ ಧೈರ್ಯ ತುಂಬಿ. ಇದು ಅವರಲ್ಲಿ ಬಹಳಷ್ಟು ಬದಲಾವಣೆಗೆ ಕಾರಣವಾಗುತ್ತದೆ.
ಎಚ್ಚರದಿಂದಿರಿ ಸುರಕ್ಷಿತರಾಗಿರಿ
ಮನುಷ್ಯ ಸಮಾಜ ಜೀವಿ. ಮಾನಸಿಕವಾಗಿ ಆರೋಗ್ಯದಿಂದಿರಲು ಜನರನ್ನು ಭೇಟಿಯಾಗಿ ಮಾತನಾಡಿಸುವುದು ಅತ್ಯವಶ್ಯಕ.
ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ಪಾಲ್ಗೊಂಡು ನಾವು ಅದೆಷ್ಟು ಖುಷಿ ಅನುಭವಿಸುತ್ತಿದ್ದೆವು. ಕೌಟುಂಬಿಕ ಅಥವಾ ಸ್ನೇಹದ ವಾತಾವರಣ ನಿರ್ಮಾಣವಾಗುವುದರಿಂದ ಅದೆಷ್ಟು ಖುಷಿಯ ಕ್ಷಣಗಳು ನಮ್ಮದಾಗುತ್ತಿದ್ದವು. ಭೇಟಿಯ ಬಳಿಕ ಅದೆಷ್ಟೋ ದಿನಗಳ ಕಾಲ ನಾವು ಆ ನೆನಪಿನ ಬುತ್ತಿಯ ಸಿಹಿಯಲ್ಲಿರುತ್ತಿದ್ದೆವು. ಯಾವುದೇ ಸಮಾರಂಭ ನಡೆಸಿದರೂ, ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಸಮಾರಂಭಗಳನ್ನು ನಡೆಸಬೇಕಾದ ಅನಿವಾರ್ಯತೆ ಇತ್ತು. ಇದೀಗ ನಾವು ಆ ಸ್ಥಿತಿಯಿಂದ ಹೊರಬಂದರೂ, ಒಂದಿಷ್ಟು ಅಳುಕಿನ ನಡುವೆಯೇ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಈಗಲೂ ಮಾಸ್ಕ್, ಸ್ಯಾನಿಟೈಸರ್ ಮತ್ತು ಸೋಶಿಯಲ್ ಡಿಸ್ಟೆನ್ಸಿಂಗ್ ಅನಿವಾರ್ಯವೇ ಆಗಿದೆ.
ದೂರ ದೂರ ಕುಳಿತು, ಕೈ ಅಲ್ಲಾಡಿಸುತ್ತ ಏನನ್ನಾದರೂ ಹೇಳುವುದು, ಕೇಳುವುದು ಮಾಡಬೇಕಾದ ಸ್ಥಿತಿಯಿಂದ ನಾವೀಗ ದೂರ ಬಂದಿದ್ದೇವೆ. ಈಗ ಹತ್ತಿರ ಕುಳಿತು ಆತ್ಮೀಯ ಕುಶಲ ಸಂಭಾಷಣೆ ನಡೆಸುವ ಸ್ಥಿತಿಗೆ ಬಂದಿದ್ದೆವೆ. ಹೊಸ ವರ್ಷದಲ್ಲಿ ಪರಸ್ಪರ ಭೇಟಿಯಾಗಿ ಮಾತನಾಡುವ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು.
ಕತ್ತಲೆಯ ಬಳಿಕ ಬೆಳಕು
ಬ್ರಿಟಿಷ್ ಜನರಲ್ `ವಾನ್ಸೆಟ್ ಸಾಕೆಟ್ರಿ’ಯಲ್ಲಿ ಪ್ರಕಟವಾದ ಒಂದು ಸಂಶೋಧಾತ್ಮಕ ಲೇಖನದಲ್ಲಿ ಹೀಗೆ ಉಲ್ಲೇಖಿಸಲಾಗಿತ್ತು. ಕೊರೋನಾ ವೈರಸ್ ಕೇವಲ ದೈಹಿಕವಾಗಿ ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಜರ್ಝರಿತಗೊಳಿಸುತ್ತದೆ. ಬೇರೊಂದು ಸಂಶೋಧನಾ ಲೇಖನದಲ್ಲಿ ಕಂಡು ಬಂದ ಪ್ರಕಾರ, ಕೆಲವು ಜನರಲ್ಲಿ ನರಮಂಡಲಕ್ಕೂ ಸಮಸ್ಯೆಯಾಗುತ್ತದೆ.
ಮಾನಸಿಕ ಆರೋಗ್ಯದಿಂದ ಬಹಳ ದಿನಗಳ ಕಾಲ ಗುಣಮುಖರಾಗದಿದ್ದಾಗ, ಅದು ಮೆದುಳಿನ ಮೇಲೂ ಪ್ರಭಾವ ಬೀರುತ್ತದೆ. ಕೇವಲ ವೃದ್ಧರಷ್ಟೇ ಅಲ್ಲ, ಏಕಾಂಗಿಯಾಗಿರುವವರು, ವಯಸ್ಕರು, ದಂಪತಿಗಳು, ಪುರುಷರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲ ವಯಸ್ಸಿನವರು ಮಾನಸಿಕ ಆರೋಗ್ಯದಿಂದ ಸೆಣಸಬೇಕಾಗುತ್ತದೆ.
ದೈನಂದಿನ ರೊಟಿನ್ ನಿಂದ ದೂರ ಉಳಿದಿರುವುದು, ಮನೆಯಲ್ಲಿಯೇ ಇದ್ದೂ ಇದ್ದು ಮೆದುಳಿಗೆ ದೊರಕುವ ಸಂಕೇತಗಳು ಸ್ಥಗಿತಗೊಳ್ಳುತ್ತವೆ. ಈ ಸಂಕೇತಗಳು ಮನೆಯ ಹೊರಗಿನ ವಾತಾವರಣ ಹಾಗೂ ಬಾಹ್ಯ ಚಟುವಟಿಕೆಗಳಿಂದ ದೊರಕುತ್ತವೆ. ಆದರೆ ಮನೆಯಲ್ಲಿಯೇ ನಿರಂತರ ಇದ್ದಿರುವುದರಿಂದ ಅವು ಬಂದ್ ಆಗುತ್ತವೆ. ಈ ಎಲ್ಲ ಕಾರಣಗಳಿಂದ ಖಿನ್ನತೆ ಮತ್ತು ಚಿಂತೆ ಹೆಚ್ಚಿರುವ ಪ್ರಕರಣಗಳು ನಮಗೆ ಕಂಡುಬರುತ್ತವೆ. ಇದನ್ನು ಸಾಮೂಹಿಕ ಒತ್ತಡ ಎಂದೂ ಕರೆಯಬಹುದಾಗಿದೆ.
ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಚಿಂತೆಯಾಗಿತ್ತು. ಕೆಲವರಿಗೆ ನೌಕರಿ ಕಳೆದುಕೊಂಡ ಚಿಂತೆ, ಮತ್ತೆ ಕೆಲವರಿಗೆ ಹಣಕಾಸು ಸ್ಥಿತಿಯನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂಬ ಒತ್ತಡವಿತ್ತು. ಮನೆಯಲ್ಲಿಯೇ ಹೆಚ್ಚು ಕಾಲ ಇದ್ದಿದ್ದರಿಂದಾಗಿ, ಹೊರಗೆ ಹೋಗಿ ಸ್ವತಂತ್ರವಾಗಿ ಸುತ್ತಾಡುವುದು ಹೇಗೆಂಬ ಒತ್ತಡವಿತ್ತು.
ಮನೋತಜ್ಞರು ಇದನ್ನು `ಜೀವನೋ ಫೋಬಿಯಾ’ ಅಂದರೆ ‘ಫಿಯರ್‌ಆಫ್ ಹ್ಯೂಮನ್’ಗೆ ತುತ್ತಾಗಿರುವುದು ಎಂದು ಹೇಳುತ್ತಾರೆ. ಇಂತಹ ಸ್ಥಿತಿಯಲ್ಲಿ ಜನರು ಬೇರೊಬ್ಬ ವ್ಯಕ್ತಿಗಳ ಎದುರು ಬರಲು ಗಾಬರಿಯಾಗುತ್ತಾರೆ. ಮಾತಾಡಲು ಹೆದರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ಮೆದುಳು ಹೊಸ ಸಂಗತಿಯನ್ನು ಸ್ವೀಕರಿಸುವುದಿಲ್ಲ. ವಿಡಿಯೋದಲ್ಲಿ ನೋಡಿ ಸಹಜತೆಯ ಅನುಭವ ಪಡೆದುಕೊಳ್ಳಬಹುದು ಎಂದು ಅವರು ಅಂದುಕೊಳ್ಳುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧವೇ ಘಟಿಸುತ್ತಿದೆ.
ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ತಾವು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಖಚಿತವಾಗಿ ಹೇಳಬೇಕೆಂದರೆ, ಜೀವನ ಮೊದಲಿನಂತಿಲ್ಲ. ಆದರೆ ಇದರರ್ಥ ಜೀವನದಲ್ಲಿ ಖುಷಿಯೇ ಉಳಿದಿಲ್ಲ ಎಂದಲ್ಲ. ಇಂತಹ ಸ್ಥಿತಿಯಲ್ಲಿ ನಮ್ಮನ್ನು ನಾವು ಶಾಂತವಾಗಿಟ್ಟುಕೊಂಡು ಖುಷಿಯಿಂದರಲು ಪ್ರಯತ್ನಿಸಬೇಕು.
ಮಾನಸಿಕ ಆರೋಗ್ಯದ ಕಾಳಜಿ ಸುರಕ್ಷತೆಯ ಎಲ್ಲ ನಿಯಮಗಳನ್ನು ಈಗಲೂ ಪಾಲಿಸಬೇಕಾದ ಸ್ಥಿತಿ ಇದೆ. ಮಾನಸಿಕ ಆರೋಗ್ಯಕ್ಕೆ ಪೂರಕ ವಾತಾವರಣ ಈಗ ಮೊದಲಿನಂತೆ ಇಲ್ಲ ಎಂದೆನಿಸಿದರೂ, ಜನರ ಜೊತೆ ಬೆರೆಯುವಿಕೆಯ ಮೂಲಕ ಅದರ ಕೊರತೆಯನ್ನು ನೀಗಿಸಿಕೊಳ್ಳಬಹುದು. ಸ್ವಲ್ಪ ಅಂತರ ಕಾಪಾಡಿಕೊಳ್ಳುವುದರ ಮೂಲಕ, ಮಾಸ್ಕ್ ಧರಿಸುವುದನ್ನು ಉಸಿರುಗಟ್ಟುವಿಕೆ ಎಂದು ಭಾವಿಸದೇ, ಸ್ನೇಹಿತರು, ಸಂಬಂಧಿಕರನ್ನು ಅವಶ್ಯವಾಗಿ ಭೇಟಿಯಾಗಿ. ಅದು ಒಂದು ರೀತಿಯ ಎನರ್ಜಿ ನೀಡುತ್ತದೆ.
ಸೋಶಿಯಲ್ ಮೀಡಿಯಾ ಅಥವಾ ಇಂಟರ್ ನೆಟ್ ನಿಮ್ಮನ್ನು ಬೇಸರಗೊಳಿಸುವುದಿಲ್ಲ. ವಾಸ್ತವದಲ್ಲಿ ಬೇಸರ ಅಥವಾ ವಾಸ್ತವಿಕ ಜೀವನದಿಂದ ಪಲಾಯನದ ಭಾಗವಾಗಿದ್ದು, ಇದು ನಮ್ಮನ್ನು ಇಂಟರ್ ನೆಟ್ ನತ್ತ ನೂಕುತ್ತದೆ.
ಇತ್ತೀಚಿನ ದಿನಗಳಲ್ಲಿ ಬೇಸರದ ದೂರುಗಳು ಸಾಮಾನ್ಯವಾಗಿವೆ. ಒಂದು ವೇಳೆ ನೀವು ಕೂಡ ಖುಷಿಯ ಹುಡುಕಾಟ ಅಥವಾ ಜೀವನ ನಿರರ್ಥಕ ಆಗಿರುವ ಅನುಭವದಿಂದ ಡಿಜಿಟಲ್ ಸಾಧನಗಳ ಜೊತೆ ಬೇಕಾಬಿಟ್ಟಿ ಸಮಯ ಹಾಳು ಮಾಡುತ್ತಿದ್ದರೆ, ಅದು ನಿಮಗೆ ಕಷ್ಟಕರವಾಗಿ ಪರಿಣಮಿಸಬಹುದು.
ನೀವು ಕೇವಲ ಮನರಂಜನೆ ಅಥವಾ ಬೇಸರ ನೀಗಿಸಲು ಇಂಟರ್ ನೆಟ್ ನ್ನು ಬಳಸುತ್ತಿದ್ದರೆ ಮತ್ತೊಂದು ಸಮಸ್ಯೆ ಇದೆ. ನಿಮ್ಮ ಬಗ್ಗೆ ಅಪೇಕ್ಷೆ ಇಟ್ಟುಕೊಂಡವರಿಗೆ, ಪ್ರೀತಿ ಇಟ್ಟುಕೊಂಡವರಿಗೆ ನೀವು ಒಂದಿಷ್ಟು ಸಮಯ ಕೊಡಿ. ಮುಖಾಮುಖಿಯಾಗಿ ಕುಳಿತು ಮಾತಾಡಿದರೆ ನಿಮಗೂ ಖುಷಿ ಹಾಗೂ ಅವರಿಗೂ ನೆಮ್ಮದಿಯ ಅನುಭವವಾಗುತ್ತದೆ.
ಹೊಸ ವರ್ಷದ ಹೊಸ ಸಂಕಲ್ಪವೆಂದರೆ, ಜನರನ್ನು ಸಂಪರ್ಕಿಸುವುದು, ಭೇಟಿಯಾಗುವುದು. ನಿಮ್ಮ ಸಾಮಾಜಿಕ ವ್ಯಾಪ್ತಿ ಕಿರಿದಾಗಿದ್ದರೂ ಸರಿ, ಸಮಯ ಸಂದರ್ಭ ಬಂದಾಗೆಲ್ಲ ಅವರನ್ನು ಭೇಟಿಯಾಗಿ. ಇದರಿಂದ ನಿಮಗೆ ಸ್ವತಃ ಬದಲಾಣೆಯ ಅನುಭವವಾಗುತ್ತದೆ. ಎಷ್ಟೋ ದಿನಗಳ ಹೊರೆಯೊಂದನ್ನು ಇಳಿಸಿದ ಖುಷಿ ಮೂಡುತ್ತದೆ.
ಇನ್ನೊಬ್ಬರ ಮುಗುಳ್ನಗು, ನಗು, ಖುಷಿಯ ಅನುಭವ ನಿಮ್ಮಲ್ಲಿ ಹೊಸದೊಂದು ಶಕ್ತಿಯನ್ನು ಜಾಗೃತಗೊಳಿಸುತ್ತದೆ ಹಾಗೂ ಒತ್ತಡ ಮುಕ್ತಿಯಾಗುತ್ತಿರುವುದು ಗಮನಕ್ಕೆ ಬರುತ್ತದೆ.
ಮಾದಕ ಚಟಗಳಿಂದ ದೂರ ಇರಿ
ಮಾನಸಿಕ ಒತ್ತಡಗಳಿಂದ ಹೊರಬರಲು ಮದ್ಯ ಹಾಗೂ ಅಮಲಿನ ಪದಾರ್ಥಗಳ ಸೇವನೆ ಅಥವಾ ನಿದ್ರೆ ಮಾತ್ರೆಗಳನ್ನು ಸೇವಿಸುವುದಕ್ಕಿಂತ ಯಾರನ್ನು ಭೇಟಿಯಾದರೆ ನಿಮ್ಮಲ್ಲಿ ಜೀವನೋತ್ಸಾಹ ಚಿಮ್ಮುತ್ತದೋ ಅಂಥವರನ್ನು ಭೇಟಿಯಾಗಿ. ಅವರೊಂದಿಗೆ ಸಾಕಷ್ಟು ಸಮಯ ಕಳೆಯಿರಿ. ಅವರ ಮಾತುಗಳನ್ನು ಆಲಿಸಿ, ಕೆಲವು ಸಂಗತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಮಾನಸಿಕ ಆರೋಗ್ಯ ಪರಿಪೂರ್ಣವಾಗಿ ಭಾವನಾತ್ಮಕ ಆಯಾಮವನ್ನು ಅವಲಂಬಿಸಿದೆ. ನಮ್ಮ ಸಾಮಾಜಿಕ ಜೀವನ ಸಮರ್ಪಕವಾಗಿದ್ದರೆ ನಾವು ಮಾನಸಿಕವಾಗಿ ಆರೋಗ್ಯವಾಗಿ ಇದ್ದೇ ಇರುತ್ತೇವೆ ಮತ್ತು ನಮ್ಮ ಸಂಬಂಧಗಳನ್ನು ನೆಮ್ಮದಿಯಿಂದ ನಿರ್ವಹಣೆ ಮಾಡಲು ಸಾಧ್ಯ. ಆಗ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿ ಸ್ವತಃ ಬರುತ್ತದೆ.
ಕೊರೋನಾ ಹಾವಳಿ ಇದೆ. ಅದು ಇನ್ನೂ ಕೆಲವು ವರ್ಷಗಳ ತನಕ ನಮ್ಮ ಆಸುಪಾಸಿನಲ್ಲಿ ಇದ್ದೇ ಇರುತ್ತದೆ. ಅದು ಹಾಗೂ ಬೇರೆ ಯಾವುದೇ ರೋಗಗಳ ಬಗ್ಗೆ ಖಿನ್ನತೆಯಿಂದ ಜೀವಿಸುವ ಬದಲು, ಸಾಮಾಜಿಕ ಜೀವನ ನಡೆಸಲು ನಮ್ಮನ್ನು ನಾವು ಅಣಿಗೊಳಿಸಬೇಕಿದೆ. ನಮ್ಮ ಪ್ರೀತಿ ಪಾತ್ರರನ್ನು, ಸ್ನೇಹಿತರನ್ನು, ಸಂಬಂಧಿಕರನ್ನು ಹಾಗೂ ಪರಿಚಿತರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿ. ಮಾನಸಿಕ ಆರೋಗ್ಯಕ್ಕೆ ಔಷಧಿಗಳೇ ಮಾನದಂಡ ಎಂದು ಭಾವಿಸುವ ಬದಲು, ನಿಮ್ಮ ಮನಸ್ಸಿನ ಮಾತನ್ನು ಇತರರೊಂದಿಗೆ ಶೇರ್ ಮಾಡಿ. ಮನಸೋಕ್ತ ನಗು, ಸುಖ ದುಃಖ ಹಂಚಿಕೊಳ್ಳುತ್ತಾ ಯಾವುದೇ ಸ್ಥಿತಿಗೆ ಸಲಾಲೊಡ್ಡಲು ನಿಮ್ಮನ್ನು ನೀವು ಸನ್ನದ್ದುಗೊಳಿಸಿ.
– ಸುಧಾಮಣಿ