ಲಕ್ಷಾಂತರ ಕನ್ನಡ ಸಾಹಿತ್ಯಾಸಕ್ತರ ಆಗಮನದೊಂದಿಗೆ ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನ ಕಳೆಗಟ್ಟಿದ್ದ ಸಾಹಿತ್ಯ ಸಂತೆಯಲ್ಲಿ ಎಲ್ಲರ ಅಕ್ಕರೆಯ ಮಾತು ಕನ್ನಡ ಡಿಂಡಿಮ ಬಾರಿಸಿತು. ಈ ಬಾರಿ ಸಾಹಿತ್ಯದ ಜೊತೆ ಬಾಡೂಟ ಸವಿಯಬೇಕೆಂಬ ಕೆಲವರ ಒತ್ತಾಸೆಯ ವಿವಾದದ ನಡುವೆಯೂ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆ.. ಪುಸ್ತಕಗಳ ಖರೀದಿ ಭರಾಟೆ.. ಹಲವು ಕವಿಗೋಷ್ಠಿಗಳು.. ಮೂರು ದಿನಗಳ ಸಂವಾದಗಳಲ್ಲಿ ಕೇಳಿಬಂದ ಬಾಡೂಟದ ನಗೆಚಟಾಕಿಗಳು.. ಶುದ್ಧಸಸ್ಯಾಹಾರಿ ಭೋಜನ ವ್ಯವಸ್ಥೆ.. ಬಸ್ ನಿಲ್ದಾಣದಿಂದ ಸಮ್ಮೇಳನ ಸ್ಥಳಕ್ಕೆ ಉಚಿತ ಬಸ್ ವ್ಯವಸ್ಥೆ.. ಮಂಡ್ಯ ನಗರದೆಲ್ಲೆಡೆ ರಾರಾಜಿಸಿದ ಕನ್ನಡ ಬಾವುಟಗಳು.. ಹೀಗೆ ಹತ್ತು ಹಲವು ವಿಶೇಷತೆಯ ಜೊತೆ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು.
ಸಮಸ್ಯೆಗೆ ಸಾಹಿತ್ಯವೇ ಖಡ್ಗವಾಗಲಿ : ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಬಳಿ ರಾಜಮಾತೆ ಕೆಂಪರಾಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ‘ನುಡಿ ಬಿಟ್ಟರೆ ನಾಡು ಬಿಟ್ಟಂತೆ.. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ’ ಅನ್ನೋ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಜನರ ಸಮಸ್ಯೆಗೆ ಸಾಹಿತ್ಯವೇ ಖಡ್ಗವಾಗಲಿ ಎಂದು ಕರೆ ಕೊಟ್ಟರು. ಕನ್ನಿಡಗರ ಮಾತೃಭಾಷೆ ಕನ್ನಡ ಉಳಿಯಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಾಗಿದೆ. ಪ್ರಸ್ತುತ ಹಳೆಯ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೇ ಬಾಯಿಪಾಠ ಮಾಡುವ ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಬದಲಾವಣೆ ಮಾಡಿದರೆ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಕನ್ನಡ ಬೆಳೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಕನ್ನಡಾಭಿವೃದ್ಧಿಗೆ ಗೊರುಚ 16 ಹಕ್ಕೊತ್ತಾಯ: ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ 96ರ ಇಳಿವಯಸ್ಸಿನ ಸಾಹಿತ್ಯ ಗೊ.ರು. ಚನ್ನಬಸಪ್ಪ ಅವರು ಮೊದಲ ದಿನದ ತಮ್ಮ ಭಾಷಣದಲ್ಲಿ ಕನ್ನಡಾಭಿವೃದ್ಧಿಗೆ ಅಗತ್ಯವಾದ 16 ಹಕ್ಕೊತ್ತಾಯಗಳನ್ನು ಮಂಡಿಸಿದರು. ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲೀಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಅನುಮತಿ ನೀಡಬಾರದು. ಅಗತ್ಯವೆನಿಸಿರುವ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಕನ್ನಡ ವಿಶ್ವವಿದ್ಯಾಲಯ ಮತ್ತು ಜಾನಪದ ವಿವಿಗಳು ಅನುಭವಿಸುತ್ತಿರುವ ಹಣಕಾಸು ಮತ್ತು ಬೋಧನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗೊರುಚ ಅವರು ಒತ್ತಿ ಹೇಳಿದರು.
ಸರ್ಕಾರದ ಸಚಿವಾಲಯ, ಕಚೇರಿಗಳ ಹೊರತಾಗಿ ಉಳಿದ ಇಲಾಖೆಗಳ ನಿರ್ದೇಶನಾಲಯ ಕಚೇರಿಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕಚೇರಿಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು ಎಂದು ಸಮ್ಮೇಳನಾಧ್ಯಕ್ಷರು ಪರಭಾಷೆಯ ಒತ್ತಡವನ್ನು ಬಲವಾಗಿ ವಿರೋಧಿಸಿದರು. ಸರ್ವಾಧ್ಯಕ್ಷರು ಪ್ರಮುಖವಾಗಿ 18 ವರ್ಷ ಮೇಲ್ಪಟ್ಟವರನ್ನುದ್ದೇಶಿಸಿ ಮಾತನಾಡಿ ತಂತ್ರಜ್ಞಾನದ ಜತೆಜತೆಗೆ ಕನ್ನಡದ ಏಳ್ಗೆ ಕಾಣಬೇಕೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು ಇಡೀ ಏಳೂವರೆ ಕೋಟಿ ಕನ್ನಡಿಗರ ಆಶಯದಂತಿತ್ತು.
ಮೊದಲ ದಿನ ಊಟದ್ದೇ ಸದ್ದು : ಬಳಿಕ ನಡೆದ ಕವಿಗೋಷ್ಠಿ, ಸಂವಾದಗಳಲ್ಲಿ ಪಾಲ್ಗೊಂಡಿದ್ದ ಪ್ರಕಾಶಕರು, ಲೇಖಕರು ಮತ್ತು ಸಾಹಿತ್ಯಾಸಕ್ತರಿಂದ ಕೇಳಿಬಂದಿದ್ದು ಒಂದೇ ಕೂಗು.. ಅದು ಪುಸ್ತಕೋದ್ಯಮದ ಅಭಿವೃದ್ಧಿ. ಹೆಚ್ಚು ಬಂಡವಾಳ ಹಾಕಿ ಪುಸ್ತಕಗಳನ್ನು ಮುದ್ರಿಸಿದ್ದರೂ ಕೂಡ ಅವುಗಳ ಮಾರುಕಟ್ಟೆ ಕಷ್ಟವಾಗುತ್ತಿದೆ. ಪ್ರಚಾರದ ಕೊರತೆ ಇದೆ. ಅದಕ್ಕಾಗಿ ಲೇಖಕರು ಮತ್ತು ಪ್ರಚಾರಕರು ಆಧುನಿಕ ವಿಧಾನಗಳನ್ನು ಅನುಸರಿಸಬೇಕು ಎಂಬ ಸಲಹೆ ಸೂಚನೆ ಸಿಕ್ಕಿತು. ಮೊದಲ ದಿನವೇ ಲಕ್ಷಾಂತರ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಆಗಮಿಸಿದ್ದರಿಂದ ಸಾಹಿತ್ಯ ಹಬ್ಬ ಜನಜಾತ್ರೆಯಾಗಿ ಪರಿವರ್ತಿನೆ ಆಗಿತ್ತು. ಇನ್ನು ಸಮ್ಮೇಳನದ ಪ್ರಮುಖ ಬಹುಚರ್ಚಿತ ವಿಷಯವಾಗಿದ್ದು ಅಂದರೆ ಅದು ಭೋಜನ ವ್ಯವಸ್ಥೆ. ಸಮ್ಮೇಳನ ಆರಂಭಕ್ಕೂ ತಿಂಗಳಿಗೂ ಮುನ್ನವೇ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದರಿಂದ ಬಾಡೂಟ ವ್ಯವಸ್ಥೆ ಆಗಬೇಕು ಎಂಬುದು ಕೆಲ ವರ್ಗದ ಬೇಡಿಕೆಯಾಗಿತ್ತು. ಆದರೆ, ಅದ್ಯಾವುದರ ಗೋಜಿಗೆ ಹೋಗದ ಸಮ್ಮೇಳನ ವ್ಯವಸ್ಥಾಪಕರು ಸಸ್ಯಹಾರ ಭೋಜನ ವ್ಯವಸ್ಥೆ ಮಾಡಿದ್ದರು. ಹೋಳಿಗೆ, ಬೆಲ್ಲದ ಮೈಸೂರು ಪಾಕ್, ಮುದ್ದೆ, ಖಡಕ್ ರೊಟ್ಟಿ, ಸೊಪ್ಪಿನ ಸಾರು, ಅನ್ನ, ಮೊಸರು ಹೀಗೆ ಹಲವು ಬಗೆಯ ಮೆನು ಕೂಡ ಇತ್ತು. ಆದರೆ, ಮೊದಲ ದಿನವೇ ಊಟಕ್ಕಾಗಿ ಜಗಳವಾಡುವುದು, ಪರದಾಡುವುದು ಕಂಡುಬಂದಿತ್ತು. ಮಧ್ಯಾಹ್ನ 2 ಗಂಟೆಗೆ ಊಟ ಖಾಲಿ, ಅನ್ನ ಖಾಲಿ, ರೆಡಿಯಾಗ್ತಿದೆ ಎಂಬ ಮಾತು ಕೇಳಿಬಂದಿತ್ತು. ಕೆಲವರು ಕಾಯುವುದು ಬೇಡ ಎಂದು ಹೊರನಡೆದರೆ, ಇನ್ನು ಕೆಲವರು ಕಾದು ಊಟ ಮಾಡಿ ಹೋದರು.
ಸಮ್ಮೇಳನದ ಮೊದಲ ದಿನವಿಡೀ ತಂಡೋಪತಂಡವಾಗಿ ಜನರು ಭೇಟಿ ನೀಡಿದಂತೆ ಎರಡನೇ ದಿನವೂ ಜನಸಾಗರವೇ ಹರಿದುಬಂದಿತ್ತು. ಆದರೆ, ಗೋಷ್ಠಿಗಳು ನಡೆಯುವ ವೇದಿಕೆಗಳು, ಪ್ರೇಕ್ಷಕರು ಕುಳಿತುಕೊಳ್ಳುವ ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಪುಸ್ತಕ ಮಳಿಗೆ, ಊಟದ ಮಳಿಗೆ, ವಾಣಿಜ್ಯ ಮಳಿಗೆಗಳತ್ತ ಹೆಜ್ಜೆ ಹಾಕುತ್ತಿದ್ದರು. ಸಂಜೆ ಆಗುತ್ತಿದ್ದಂತೆಯೇ ಪ್ರಧಾನ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಮುಗಿಬಿದ್ದಿದ್ದರು. ಪ್ರಧಾನ ವೇದಿಕೆ, ಸಮಾನಂತರ ವೇದಿಕೆ 1 ಮತ್ತು 2ರ ಕಡೆಯೂ ಸಾರ್ವಜನಿಕರ ಆಗಮನ ಕಡಿಮೆಯಾಗಿತ್ತು. ಬೆರಳಿಣಿಕೆಯಷ್ಟು ಸಾಹಿತ್ಯಾಸಕ್ತರು ಮಾತ್ರವೇ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು. ಸಮ್ಮೇಳನ ಸ್ಥಳದ ಅಕ್ಕಪಕ್ಕದ ರಸ್ತೆಬದಿಗಳಲ್ಲಿ ಜನಸಾಮಾನ್ಯರ ಕೈಗೆಟಕುವ ಬೆಲೆಗೆ ವಿಭಿನ್ನ ಮಾದರಿಯ ಸಾಮಾಗ್ರಿಗಳ ಮಾರಾಟದ ಭರಾಟೆ ಜೊರಾಗಿತ್ತು. ನೂರಾರು ಅಂಗಡಿಗಳಲ್ಲಿ ಚೂಡಿದಾರ್, ಸೀರೆ, ಟೀ ಶರ್ಟ್, ಪ್ಯಾಂಟ್, ಪಾತ್ರೆ, ಌಂಟಿಕ್ಗಳು, ಬೊಂಬೆ, ಮಕ್ಕಳ ಆಟದ ಸಾಮಾಗ್ರಿಗಳು, ರಂಗೋಲಿ ಅರಳಿಸುವ ವಸ್ತುಗಳು, ಕಬ್ಬಿನ ಜ್ಯೂಸ್, ಐಸ್ಕ್ರೀಂ, ಎಳನೀರು ಸೇರಿದಂತೆ ನಾನಾ ಬಗೆಯ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಯಿತು. ಇದೇ ವೇಳೆ ದಿಢೀರನೇ ಮಳೆ ಸುರಿದದ್ದು ಕೊಂಚ ಕಸಿವಿಸಿಯಾಯಿತು. ಮಳೆ ಬರುವ ಮುನ್ಸೂಚನೆ ಇರದಿದ್ದರಿಂದ ಮಳೆ ನೀರು ಸೋರದಂತೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಪುಸ್ತಕ ಮಳಿಗೆಗಳ ಒಳಗೆ ನೀರು ಸುರಿದು ಮಾರಾಟಗಾರರಿಗೆ ಕಿರಿಕಿರಿ ಉಂಟಾದರೆ, ಹೊರಗೆ ಕೆಸರು ಆಗಿದ್ದರಿಂದ ಜನರಿಗೆ ಸ್ವಲ್ಪ ಬೇಸರ ತಂದಿತ್ತು.
ಸೆಂಚುರಿ ಹೊಡೀತಿನಿ – ಗೊರುಚ : ಇದರ ಮಧ್ಯೆ, ಅತ್ತ ಪ್ರಧಾನ ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ನಾಡೋಜ ಗೊ.ರು. ಚನ್ನಬಸಪ್ಪ, ರಾಜ್ಯದಲ್ಲಿ ತ್ರಿಭಾಷೆಗಿಂತ ದ್ವಿಭಾಷೆ ಸೂತ್ರವೇ ಸರಿ ಎಂದು ಪ್ರತಿಪಾದಿಸಿದರು. 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು. ಮಕ್ಕಳಿಗೆ ಮಾಧ್ಯಮಗಳನ್ನು ತುರುಕಬಾರದು. ಪ್ರಾಥಮಿಕ ಹಂತದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಕಲಿಸಬಾರದು. ಇಂಗ್ಲೀಷ್ ತರಬೇತಿ ಮಾಧ್ಯಮವಾಗಬೇಕು. ಹೀಗಾಗಿ ದ್ವಿಭಾಷೆ ಸೂತ್ರ ಒಳ್ಳೇದು ಎಂದು ಅಭಿಪ್ರಾಯಪಟ್ಟರು. ಸಂವಾದದ ನಡುವೆ, ಜಾನಪದ ವಿದ್ವಾಂಸ ಡಾ. ಬಸವರಾಜ್ ನೆಲ್ಲೀಸರ ಕೇಳಿದ ಆರೋಗ್ಯದ ಗಟ್ಟಿನ ಪ್ರಶ್ನೆಗೆ ಗೊರುಚ ಕೊಟ್ಟ ಉತ್ತರ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ನೂರು ವರ್ಷ ಬದುಕುತ್ತೀರಿ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ. ಅವರ ಮಾತನ್ನು ಸುಳ್ಳು ಮಾಡಬಾರದು ಅಂತಾ ಇನ್ನು ಮೂರು ವರ್ಷ ದಾಟಿ ಸೆಂಚುರಿ ಬಾರಿಸುತ್ತೇನೆ ಎಂದು ಗೊರುಚ ನಗುತ್ತಾ ಉತ್ತರಿಸಿದರು.
ಬಳಿಕ ಅಂದು ರಾತ್ರಿ ಮಂಡ್ಯದ ಖಾಸಗಿ ಹೋಟೆಲ್ನಲ್ಲಿ ನಡೆದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳ ಸಭೆಯಲ್ಲಿ ಮುಂದಿನ ಸಮ್ಮೇಳನದ ಸ್ಥಳವನ್ನು ನಿಗದಿ ಮಾಡಲಾಯಿತು. ಸುದೀರ್ಘವಾದ ಚರ್ಚೆ ಬಳಿಕ ಮುಂದಿನ 88ನೇ ಸಾಹಿತ್ಯ ಸಮ್ಮೇಳವನ್ನು ಬಳ್ಳಾರಿಯಲ್ಲಿ ನಡೆಸಲು ನಿರ್ಣಯಿಸಲಾಯಿತು. ಈ ಮೂಲಕ ಬಳ್ಳಾರಿಯಲ್ಲಿ ನಾಲ್ಕನೇ ಬಾರಿಗೆ ಸಾಹಿತ್ಯ ತೇರೆ ಎಳೆದಂತಾಗಲಿದೆ. 1926 ಮತ್ತು 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಬಳಿಕ 1958ರಲ್ಲಿ ವಿ.ಕೃ. ಗೋಕಾಕ್ ಅಧ್ಯಕ್ಷತೆಯಲ್ಲಿ ಸಾಹಿತ್ಯ ಜಾತ್ರೆ ಜರುಗಿತ್ತು. ಇದೀಗ ಬರೋಬ್ಬರಿ 66 ವರ್ಷಗಳ ಬಳಿಕ ಬಿಸಿಲನಾಡಿಗೆ ನುಡಿಹಬ್ಬದ ಭಾಗ್ಯ ಸಿಕ್ಕಂತಾಗಿದೆ.
ಸಮ್ಮೇಳನದ ಕೊನೆಯ ದಿನ ಮೂರನೇ ದಿನ ಕವಿಗೋಷ್ಠಿ ಮತ್ತು ಸಂವಾದಗಳಿಗೆ ಮೀಸಲಿಡಲಾಗಿತ್ತು. ಮಾಂಸಹಾರದ ಅನಗತ್ಯ ಚರ್ಚೆಯ ಮಧ್ಯೆ ಅಕ್ಕರೆಯ ನಾಡಿನಲ್ಲಿ ನಡೆದ ಸಕ್ಕರೆಯಂತಹ ಸಾಹಿತ್ಯ ಸಮ್ಮೇಳನದ ಸಮಾರೋಪದ ದಿನದಂದು ಪ್ರಧಾನ ವೇದಿಕೆಯಲ್ಲಿ ನಡೆದ ಗೋಷ್ಠಿಗಳು ಕನ್ನಡ ಪೋಷಣೆಯನ್ನು ಮತ್ತೆ ಸಾರಿ ಸಾರಿ ಹೇಳಿದಂತಿತ್ತು. ತಂತ್ರಜ್ಞಾನಕ್ಕೆ ಕನ್ನಡ ಪ್ರೀತಿ ಕಲಿಸುವ, ಮುಂದಿನ ಪೀಳಿಗೆಗೆ ತಾಂತ್ರಿಕ ಮಾಧ್ಯಮದ ಮೂಲಕವೇ ಕನ್ನಡವನ್ನು ಜೀವಿಸುವಂತೆ ಮಾಡಲು ಸರ್ವಾಧ್ಯಕ್ಷ ಗೊರುಚ ಅಧ್ಯಕ್ಷೀಯ ಭಾಷಣದಲ್ಲಿ ಕೊಟ್ಟ ಸಲಹೆಯನ್ನು ಕೆಲ ಗೋಷ್ಠಿಗಳು ಎತ್ತಿಹಿಡಿದವು. ವಿಶೇಷವೆಂದರೆ, ದೂರದಲ್ಲಿದ್ದ ಅನಿವಾಸಿ ಕನ್ನಡಿಗರನ್ನೂ ಸೆಳೆದಿದ್ದು ಸಮ್ಮೇಳನದ ದೊಡ್ಡ ಯಶಸ್ಸಾಗಿದೆ. ಸ್ತ್ರೀ ಸಬಲೀಕರಣ, ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ, ಪುಸ್ತಕೋದ್ಯಮ, ಆಧುನಿಕತೆಯಲ್ಲಿ ಕನ್ನಡ ಸಾಹಿತ್ಯದ ಕ್ರಾಂತಿ ಹೀಗೆ ಹತ್ತಾರು ವಿಷಯಗಳ ಮೇಲೆ ನಡೆದ ಸಂವಾದ, ಗೋಷ್ಠಿಗಳು ನಾಡು, ನುಡಿ, ಜಲದ ಹಿರಿಮೆಯನ್ನು ಮತ್ತಷ್ಟು ಸಾರಿದಂತಿತ್ತು.
ಪಂಚ ನಿರ್ಣಯ : ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳ ಮೇಲೆ ನಾಡಿನ ಹಿರಿಯ-ಕಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು ನಡೆಸಿದ ಚಿಂತನ ಮಂಥನದ ಬಳಿಕ 5 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವು ಕೂಡಲೇ ಜಾರಿ ಆಗಬೇಕು. ಕಸಾಪ ಅಧ್ಯಕ್ಷರನ್ನು ರಾಜ್ಯ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಬೇಕು. ಎಲ್ಲಾ ಕನ್ನಡ ಶಾಲೆಗಳಿಗೆ ಕಟ್ಟಡ, ಆಟದ ಮೈದಾನ ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸಬೇಕು. ಕನ್ನಡಿಗರಿಗೆ ಉದ್ಯೋಗಕ್ಕೆ ತಡೆಯಾಗಿ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಲ್ಲಿ ಸಮಪರ್ಕವಾಗಿ ಎದುರಿಸಬೇಕು, ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕು. ದಾವಣಗೆರೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಪರಿಷತ್ತಿನ ಜತೆ ಅತಿ ಶೀಘ್ರದಲ್ಲೇ ನಡೆಸಬೇಕು ಮತ್ತು ರಾಷ್ಟ್ರಕವಿಯನ್ನು ಅತಿ ಶೀಘ್ರದಲ್ಲೇ ಘೋಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.
ಬಾಡೂಟ ಭೋಜನ – ಮಂಡ್ಯ ಹೊಸ ದಾಖಲೆ : ಕೆಲವೊಂದು ಸಣ್ಣಪುಟ್ಟ ಗೊಂದಲಗಳ ಮಧ್ಯೆ ಸಮಾಪ್ತಿಗೊಂಡ ಮಂಡ್ಯ ಸಾಹಿತ್ಯ ಸಮ್ಮೇಳನ ಹೊಸ ದಾಖಲೆ ಬರೆಯಿತು. ಸಮ್ಮೇಳನದ ಮೂರು ದಿನ 4 ಲಕ್ಷದ 69 ಸಾವಿರಕ್ಕೂ ಹೆಚ್ಚು ಜನ ಭೋಜನ ಸವಿದಿದ್ದು ರೆಕಾರ್ಡ್ ಆಗಿ ನಿರ್ಮಾಣವಾಯಿತು. ಮೊದಲ ದಿನ 1 ಲಕ್ಷದ 90 ಸಾವಿರ, ಎರಡನೇ ದಿನ 1 ಲಕ್ಷದ 70 ಸಾವಿರ ಹಾಗೂ 3ನೇ ದಿನ 2 ಲಕ್ಷ ಜನರು ಸಮ್ಮೇಳನದಲ್ಲಿ ಊಟ ಮಾಡಿದ್ದಾರೆ. ಊಟಕ್ಕೆ ಬಳಕೆಯಾದ ಅಡಿಕೆ ತಟ್ಟೆಗಳು, ಬಾಳೆ ಎಲೆಗಳ ಮೇಲೆ ಈ ಲೆಕ್ಕಾಚಾರ ಹಾಕಲಾಗಿದೆ. ಬಾಡೂಟ ಅನ್ನೋ ಪ್ರಗತಿಪರರ ಕೂಗಿನ ಮಧ್ಯೆ ಸಮ್ಮೇಳನದಲ್ಲಿ 10 ಬಗೆಯ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಹೋಳಿಗೆ, ಬಾದುಷಾ, ಮೈಸೂರು ಪಾಕ್, ಡ್ರೈ ಜಾಮೂನು, ಕೊಬ್ಬರಿ ಮಿಠಾಯಿ, ಲಾಡು, ಹಾರ್ಲಿಕ್ಸ್ ಬರ್ಫಿ, ನಾಮದಲಗೆ, ಕ್ಯಾರೆಟ್ ಹಲ್ವಾ ಹಾಗೂ ಸ್ವೀಟ್ ಪೊಂಗಲ್ನ್ನ ತಯಾರಿಸಲಾಗಿತ್ತು. ಇದೆಲ್ಲದರ ಮಧ್ಯೆ ಸಕ್ಕರೆ ನಾಡಿನ ನುಡಿ ಜಾತ್ರೆ ಮತ್ತೊಂದು ಘಟನೆಗೆ ಸಾಕ್ಷಿಯಾಯಿತು. ಸಮ್ಮೇಳನದ ಆರಂಭಕ್ಕೂ ಮುಂಚಿನಿಂದಲೂ ಪ್ರಗತಿಪರರು ಸಾಹಿತ್ಯ ಜಾತ್ರೆಯಲ್ಲಿ ಬಾಡೂಟ ವಿತರಿಸಬೇಕು ಅಂತಾ ಜಿಲ್ಲಾಡಳಿತಕ್ಕೆ ಪಟ್ಟುಹಿಡಿದಿದ್ದರು. ಸಂಘಟಕರ ವಿರೋಧವನ್ನೂ ಲೆಕ್ಕಿಸದೇ ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬಡಿಸಲಾಯಿತು. ಪೊಲೀಸರ ಅಡ್ಡಿ ಮಧ್ಯೆನೂ 200-250 ಜನರಿಗೆ ಚಿಕನ್, ಮೊಟ್ಟೆ, ಮುದ್ದೆ, ಅನ್ನ, ಸಾಂಬಾರ್ ಅನ್ನ ಉಣಬಡಿಸಿ ಸಾಹಿತ್ಯ ಸಂತೆಯಲ್ಲಿ ಆಹಾರ ಸಂಸ್ಕೃತಿಯಲ್ಲಿ ಸಮಾನತೆ ತಂದಿದ್ದೇವೆ ಅಂತಾ ಕೆಲ ಮುಖಂಡರು ಖುಷಿಪಟ್ಟರು. ಅಲ್ಲಿಗೆ ಕೆಲವೊಂದು ಸಣ್ಣಪುಟ್ಟ ಎಡವಟ್ಟಿನೊಂದಿಗೆ, ಕನ್ನಡ ಉಳಿವಿಗೆ ಮಂಡಿಸಿದ ಹಕ್ಕೊತ್ತಾಯಗಳೊಂದಿಗೆ ಸಕ್ಕರೆ ನಾಡಿನ ಅಕ್ಕರೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಾರಗೊಂಡಿತು.
========================================
ಸುನೀತಾ ಬಿ ಎಂ