ಹೆಚ್ಚು ದುಬಾರಿಯ ಡಿಸೈನರ್ ಡ್ರೆಸ್ ಧರಿಸಿದರೆ, ಅಷ್ಟೇ ಸುಂದರವಾಗಿ ಕಾಣಬಹುದು ಎಂದು ಬಹುತೇಕ ಹುಡುಗಿಯರಿಗೆ ಬ್ರೈಡಲ್ ಲುಕ್ ಕುರಿತಂತೆ ತಪ್ಪುಕಲ್ಪನೆಗಳಿರುತ್ತವೆ. ಆದರೆ ಅದು ಹಾಗಲ್ಲ. ಫ್ಯಾಷನ್ ಡಿಸೈನರ್ ಹಾಗೂ ಕನ್ಸ್ಟೆಂಟ್ ಗಳ ಪ್ರಕಾರ, ವಧು ಸುಂದರ ಹಾಗೂ ಆಕರ್ಷಕವಾಗಿ ಕಂಡುಬರಲು ಹಣಕ್ಕಿಂತ ಹೆಚ್ಚಾಗಿ ತಮಗೆ ಯಾವುದು ಹೆಚ್ಚಾಗಿ ಶೋಭಿಸುತ್ತದೆ ಎಂದು ಕಂಡುಕೊಳ್ಳುವುದು ಮುಖ್ಯ. ಕಡಿಮೆ ಬಜೆಟ್ ನಲ್ಲಿಯೇ ನಮ್ಮ ದೇಹಕ್ಕೆ ಸೂಕ್ತವಾಗುವಂತಹ ಪೋಷಾಕುಗಳನ್ನು ಆಯ್ದುಕೊಂಡು ಕೂಡ ಆಕರ್ಷಕವಾಗಿ ಕಾಣಬಹುದಾಗಿದೆ. ಈಚೆಗೆ ಮಾರುಕಟ್ಟೆಯಲ್ಲಿ ವಧುವಿಗಾಗಿಯೇ ಪ್ರತಿಯೊಂದು ರೇಂಜ್ ನಲ್ಲೂ ಹಲವು ಆಕರ್ಷಕ ಬಗೆಯ ಡಿಸೈನ್ ಗಳು ಮತ್ತು ಆ್ಯಕ್ಸೆಸರೀಸ್ ಲಭ್ಯವಿವೆ. ಅವು ಆಕೆಯ ಸೌಂದರ್ಯಕ್ಕೆ ಮೆರುಗು ನೀಡಬಲ್ಲವು.
ಪ್ಲ್ಯಾನಿಂಗ್ ಅತ್ಯಗತ್ಯ : ಫ್ಯಾಷನ್ ಡಿಸೈನರ್ ರಾಖಿ ಹೀಗೆ ಹೇಳುತ್ತಾರೆ, “ವಧು ಮದುವೆ ದಿನದಂದು ಅತ್ಯಂತ ಸುಂದರವಾಗಿ ಕಂಡುಬರಲು ಮೊದಲಿನಿಂದಲೇ ಪ್ಲ್ಯಾನಿಂಗ್ ಮಾಡುವುದು ಅತ್ಯವಶ್ಯ. ಉದಾಹರಣೆಗೆ : ಬಜೆಟ್ ಎಷ್ಟಿದೆ ಹಾಗೂ ಆ ಬಜೆಟ್ ನಲ್ಲಿ ಏನೇನು ಖರೀದಿಸಬಹುದು ಎಂಬುದನ್ನು ಯೋಜನೆ ಮಾಡಬೇಕು. ಎಷ್ಟು ಹಣವನ್ನು ಸೀರೆಗಳಿಗಾಗಿ, ಆಭರಣಗಳಿಗೆ ಹಾಗೂ ಮೇಕಪ್ ಮುಂತಾದವುಗಳಿಗೆ ಖರ್ಚು ಮಾಡಬೇಕು ಎನ್ನುವುದನ್ನು ಅರಿತುಕೊಂಡರೆ ಒಳ್ಳೆಯದು.
20,000 ರೂ.ಗಳಿಂದ 50,000 ರೂ. ಬಜೆಟ್ ನಲ್ಲಿ ಲೆಹಂಗಾ/ಸೀರೆ : ಈ ಮಿತಿಯಲ್ಲಿ ನಿಮ್ಮ ಬಜೆಟ್ ಇದ್ದರೆ 6,000 ರೂ.ಗಳಿಂದ 30,000 ರೂ.ಗಳ ನಡುವೆ ಲೆಹಂಗಾ ಹಾಗೂ ಲೆಹಂಗಾ ಸೀರೆ ಖರೀದಿಸಬಹುದು. 6,000 ರೂ.ಗಳಿಂದ 8,000 ರೂ.ಗಳ ತನಕ ಲಾಚಾ ಸ್ಟೈಲ್ ಲಹಂಗಾ ಖರೀದಿಸಬಹುದು. ಲಾಚಾ ಸ್ಟೈಲ್ ಲೆಹಂಗಾದಲ್ಲಿ ಅದರ ಮೇಲೆ ಶಾರ್ಟ್ ಬ್ಲೌಸ್ ಹಾಗೂ ಹೆವಿ ಎಂಬ್ರಾಯಿಡರಿ ಇರುವ ಉದ್ದನೆಯ ಕೋಟಿನಂತಹದನ್ನು ಧರಿಸಲಾಗುತ್ತದೆ. ಈ ರೀತಿಯ ಲಹಂಗಾಗಳ ದುಪಟ್ಟಾ ಸಾಧಾರಣವಾಗಿರುತ್ತದೆ. ಅದರ ಮೇಲೆ ಸ್ಟೋನ್ ಅಳವಡಿಸಿ ನೀವು ಅದನ್ನು ಹೆವಿ ಮಾಡಿಕೊಳ್ಳಬಹುದು.
ಇದು ಹೆಚ್ಚು ದುಬಾರಿಯೇನೂ ಆಗಿರುವುದಿಲ್ಲ. ನೀವು 10,000 ರೂ.ಗಳ ರೇಂಜ್ ನಲ್ಲಿ ಬ್ರೊಕೆಟ್ ಫ್ಯಾಬ್ರಿಕ್ ಮೇಲೆ ಡಿಸೈನ್‌ಮಾಡಲ್ಪಟ್ಟ ಲೆಹಂಗಾ ತೆಗೆದುಕೊಳ್ಳಬಹುದು. ಇದು ಹೆವಿ ಲುಕ್ ನೀಡುತ್ತದೆ. 3ಡಿ ಅಂದರೆ ಮೂರು ಶೇಡ್ ಗಳಲ್ಲಿ ಡಿಸೈನ್ ಮಾಡಲ್ಪಟ್ಟ ಲೆಹಂಗಾ ಕೂಡ ಖರೀದಿಸಬಹುದು. 3ಡಿ ಲೆಹಂಗಾಗಳು 10-20 ಸಾವಿರ ರೂ. ದರಗಳಲ್ಲಿ ಬೇರೆ ಬೇರೆ ಡಿಸೈನ್ ಗಳಲ್ಲಿ ಲಭ್ಯವಾಗುತ್ತವೆ. ನೀವು ನೆಟ್ ಫ್ಯಾಬ್ರಿಕ್ ನಲ್ಲಿ ಗೋಲ್ಡನ್ ಪರ್ಲ್ ಹಾಗೂ ಗ್ಲಾಸ್ ಸ್ಟೋನ್ ನಿಂದ ಎಂಬ್ರಾಯಿಡರಿ ಮಾಡಲ್ಪಟ್ಟ ಲೆಹಂಗಾವನ್ನು ತೆಗೆದುಕೊಳ್ಳಬಹುದು.
ಮೇಕಪ್ : ನೀವು ಯಾವ ನಗರದ ಯಾವ ಭಾಗದಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿದ್ದೀರಿ ಎನ್ನುವುದರ ಮೇಲೆ ಮೇಕಪ್ ದರಗಳು ಅನ್ವಯಿಸುತ್ತವ. 6,000 ರೂ.ಗಳಿಂದ 7,000 ರೂ.ಗಳ ರೇಂಜ್ ನಲ್ಲಿ ಕಲರ್ ಎಸೆನ್ಸ್, ಲ್ಯಾಕ್ಮೆ, ರೆವಲಾನ್, ಕ್ರೈಲಾನ್ ನಂತಹ ಬ್ರ್ಯಾಂಡ್ ನ ಮೇಕಪ್ ಮಾಡಿಸಿಕೊಳ್ಳಬಹುದು.
ಜ್ಯೂವೆಲರಿ : ವಧುವಿಗೆ ಅತ್ಯಂತ ಹೆವಿಯಾಗಿರುವ ಆಭರಣಗಳು ಹೆಚ್ಚು ಒಪ್ಪುತ್ತವೆ. ಆದರೆ ಅವು ಅತ್ಯಂತ ದುಬಾರಿಯಾಗಿರುತ್ತವೆ. ಇವನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. 1,000 ರೂ.ಗಳಿಂದ 3,000 ರೂ.ಗಳಲ್ಲಿ ಕುಂದನ್, ಲೈಟ್ ಗೋಲ್ಡ್, ರೇಡಿಯಂ ಪಾಲಿಶ್ ನ ಆಭರಣಗಳು ಕೆಲವು ನಗರಗಳಲ್ಲಿ ಬಾಡಿಗೆ ಆಧಾರದ ಮೇಲೆಯೂ ದೊರೆಯುತ್ತವೆ.
ಮುಂಚೆ 2-3 ನೆಕ್ಲೇಸ್ ಹಾಕಿಕೊಳ್ಳುವ ಪದ್ಧತಿ ಇತ್ತು. ಆದರೆ ಈಗ ಒಂದೇ ಆಭರಣ ಅದೂ ಹೆವಿಯಾಗಿರುವಂಥದ್ದನ್ನು ಧರಿಸುವ ಪದ್ಧತಿ ಹೆಚ್ಚು ಚಾಲ್ತಿಯಲ್ಲಿದೆ.
ಆ್ಯಕ್ಸೆಸರೀಸ್ : ಆ್ಯಕ್ಸೆಸರೀಸ್ ನಲ್ಲಿ ಬ್ರೈಡಲ್ ಪರ್ಸ್ ಮತ್ತು ಬಳೆಗಳು ಹೆಚ್ಚು ಮಹತ್ವದ್ದಾಗಿವೆ. ವಧುವಿಗೆ ತಕ್ಕಂತೆ ಈ ಎರಡೂ ವಸ್ತುಗಳು ಹೆಚ್ಚು ಹೆವಿಯಾಗಿದ್ದರೆ ಉತ್ತಮ. ವಧುವಿಗೆಂದೇ ವಿಶೇಷವಾಗಿ ತಯಾರಿಸಲ್ಪಟ್ಟ ಹರಳುಗಳ ಡಿಸೈನಿಂಗ್ ಇರುವ ಫೈಬರ್ ಹಾಗೂ ಸ್ಪಾರ್ಕ್ ಬಳೆಗಳು 1,000 ರೂ.ಗಿಂತ ಮೇಲ್ಪಟ್ಟು ದರದಲ್ಲಿ ದೊರೆಯುತ್ತವೆ. ಹೆಚ್ಚು ಹರಳುಗಳು ಇದ್ದರೆ ಅದರ ಬೆಲೆಯೂ ಅಷ್ಟೇ ಹೆಚ್ಚಾಗುತ್ತದೆ. ಕಡಿಮೆ ದರದಲ್ಲಿ ನೀವು ಹಿಂದೆ ಮುಂದೆ ಒಂದೊಂದು ಸ್ಟೋನ್ ಅಳವಡಿಸಿಕೊಂಡು ಸೆಟ್ ತಯಾರಿಸಿಕೊಳ್ಳಬಹುದು. ಇದರಿಂದ ನಿಮಗೆ ಹೆವಿ ಲುಕ್ ದೊರೆಯುತ್ತದೆ.
ಫುಟ್ ವೇರ್ : ಯಾವುದೇ ಒಂದು ಡ್ರೆಸ್ ನ ಶೋಭೆ ಅದರ ಫುಟ್ ವೇರ್ ನ್ನು ಅವಲಂಬಿಸಿ ಇರುತ್ತದೆ. ಲೆಹಂಗಾದ ಜೊತೆಗೆ ಹೆವಿ ವರ್ಕ್ ಇರುವ ಸ್ಯಾಂಡಲ್ ಶೋಭಿಸುತ್ತವೆ. ಸ್ಯಾಂಡಲ್ ನ ಮುಂದಿನ ಭಾಗ ಹೆವಿಯಾಗಿರಬೇಕು. 700 ರೂ.ಗಳಿಂದ 1,400 ರೂ. ಬಜೆಟ್ ನಲ್ಲಿ ನೀವು ಟೂ ಲೈನಿಂಗ್ ಸ್ಟೋನ್ ವರ್ಕ್ ಇರುವ ಹೈ ಪೆನ್ಸಿಲ್ ಹೀಲ್ ತೆಗೆದುಕೊಳ್ಳಬಹುದು. 1,500 ರೂ.ಗಳಿಂದ ಹಿಡಿದು 3,000 ರೂ.ಗಳ ತನಕ ನಿಮ್ಮ ಹೈ ಹೀಲ್ ನಿಂದ ಹೆವಿ ಸ್ಟೋನ್ ವರ್ಕ್ ಇರುವ ಸ್ಯಾಂಡಲ್ಸ್ ಮತ್ತು ಬಟರ್ ಫ್ಲೈ ಶೇಪ್ ನಲ್ಲಿ ಎಂಬ್ರಾಯಿಡರಿ ಇರುವ ಸ್ಯಾಂಡಲ್ಸ್ ಗಳು ಕೂಡ ದೊರೆಯುತ್ತವೆ.
60 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳ ಬಜೆಟ್ ನಲ್ಲಿ ಲೆಹಂಗಾ/ಸೀರೆ : 35,000 ರೂ.ಗಳಿಂದ 50,000 ರೂ.ಗಳ ರೇಂಜ್ ನಲ್ಲಿ ನಿಮಗೆ ಡಿಸೈನರ್ ಲೆಹಂಗಾ ದೊರೆಯುತ್ತದೆ. ಡಿಸೈನರ್ ಲೆಹಂಗಾದಲ್ಲಿ ನೀವು ವೆಲ್ವೆಟ್ ಫ್ಯಾಬ್ರಿಕ್ ನಲ್ಲಿ ಡಿಸೈನ್ ಮಾಡಿದ `ಎ’ ಕಟ್ ಇರುವ ಹೆವಿ ಎಂಬ್ರಾಯಿಡರಿ ಲೆಹಂಗಾ ತೆಗೆದುಕೊಳ್ಳಬಹುದು. ಘಾಘ್ರಾ ಚೋಲಿ ಸ್ಟೈಲ್ ಇರುವ, ಪ್ಯೂರ್ ನೆಟ್ ಫ್ಯಾಬ್ರಿಕ್ ನಲ್ಲಿ ವಲ್ವೆಟ್ ನಿಂದ ವರ್ಕ್ ಮಾಡಿದ ಲೆಹಂಗಾ ಧರಿಸಿ ನೀವು ಎಲ್ಲರ ಆಕರ್ಷಣೆಯ ಕೇಂದ್ರವಾಗಬಹುದು. ಡಿಸೈನ್ ನ ಜೊತೆಗೆ ಬಣ್ಣದ ಬಗೆಗೂ ಗಮನವಿರಲಿ.
ಈಚೆಗೆ ಮೆಜೆಂತಾ, ರೆಡ್, ಸೀ ಗ್ರೀನ್, ಪಿಂಕ್ ಹೆಚ್ಚು ಚಾಲ್ತಿಯಲ್ಲಿವೆ. 60,000 ರೂ.ಗಳ ತನಕ ನಿಮಗೆ ಆ್ಯಪ್ಲಿಕ್ ವರ್ಕ್ ಇರುವ ಲೆಹಂಗಾ ಮತ್ತು ಮಲ್ಟಿಕಲರ್ಸ್ ನಲ್ಲಿ ಡಿಸೈನ್‌ಮಾಡಿದ ಲೆಹಂಗಾ ದೊರೆಯುತ್ತದೆ.
ಮೇಕಪ್ : ಲ್ಯಾಕ್ಮೆಯ ಬ್ಯೂಟಿ ಎಕ್ಸ್ ಪರ್ಟ್ ರಾಣಿ ಪ್ರಕಾರ, 12,000 ರೂ.ಗಳಿಂದ 15,000 ರೂ.ಗಳ ತನಕ ನೀವು ಕ್ರೈವಾನ್, ಕಲರ್ ಬಾರ್, ಮ್ಯಾಕ್ ನಂತಹ ಹಲವು ಬ್ರ್ಯಾಂಡ್ ಗಳ ಮೇಕಪ್ ಮಾಡಿಸಿಕೊಳ್ಳಬಹುದು. ಇದು ಫೋಟೋಜೆನಿಕ್ ಮೇಕಪ್ ಆಗಿರುವುದರ ಜೊತೆಗೆ 16-17 ಗಂಟೆಯ ತನಕ ಹಾಗೆಯೇ ಉಳಿದಿರುತ್ತದೆ.
ಜ್ಯೂವೆಲರಿ : ನಿಮ್ಮ ಪೋಷಾಕಿಗೆ ತಕ್ಕಂತೆ ಪೋಲ್ಕಿ ಟೋಪಾಜ್, ಮೂನ್ ಸ್ಟೋನ್ ಮತ್ತು ಸ್ಟೋನ್ ಜ್ಯೂವೆಲರಿಯನ್ನು ಬಾಡಿಗೆಗೆ ಪಡೆಯಬಹುದು. ಈ ಆರ್ಟಿಫಿಶಿಯ್ ಬ್ರೈಡಲ್ ಜ್ಯೂವೆಲರಿಯು 3,000 ರೂ.ಗಳಿಂದ ಹಿಡಿದು 10,000 ರೂ.ಗಳ ತನಕ ಬಾಡಿಗೆಗೆ ದೊರೆಯುತ್ತದೆ. ಒಂದು ವೇಳೆ ನಿಮ್ಮ ಲೆಹಂಗಾದಲ್ಲಿ ಕಾಪರ್ ವರ್ಕ್ ನ ಟಚ್ ಇದ್ದರೆ ನೀವು ಗೋಲ್ಡ್ ಪ್ಲೇಟೆಡ್ ಗಿಂತ ಕಾಪರ್ ಪ್ಲೇಟೆಡ್ ಜ್ಯೂವೆಲರಿ ಸೆಟ್ ನ್ನೇ ತೆಗೆದುಕೊಳ್ಳಿ.
ಫುಟ್ ವೇರ್ : 4,000 ರೂ.ಗಳಿಂದ 8,000 ರೂ.ವರೆಗೆ ನೀವು ಡಿಸೈನರ್ ಹೀಲ್ ವುಳ್ಳ ಸ್ಯಾಂಡಲ್ ಖರೀದಿಸಬಹುದು. ಫ್ಯಾಷನ್ ಕನ್ಸಲ್ಟೆಂಟ್ ರೊಬ್ಬರ ಪ್ರಕಾರ, ಇದೇ ರೇಂಜ್ ನಲ್ಲಿ ನೀವು ಗೋಲ್ಡನ್ ಹಾಗೂ ಪ್ಲಾಟಿನಂ ಕಲರ್ ನಲ್ಲಿ ಪೀಪಲ್ ಟೋಜ್ ಹೀಲ್ ನಲ್ಲಿ ಡಿಸೈನರ್ ವರ್ಕ್ ಸ್ಯಾಂಡಲ್ ಕೊಳ್ಳಬಹುದು. ನೀವು ಸ್ಟೋನ್ ಅಳವಡಿಸಿದ ಡಿಸೈನರ್ ಹೀಲ್ ಇರುವ ಸ್ಯಾಂಡಲ್ ಧರಿಸಿದರೆ ನಿಮ್ಮ ಓವರ್ ಆಲ್ ಲುಕ್ ಅತ್ಯಂತ ಗ್ಲಾಮರಸ್ ಆಗಿ ಕಂಡುಬರುತ್ತದೆ. ಕಡಿಮೆ ಹೀಲ್ ನಲ್ಲಿ ನೀವು ಫಿನಿಶಿಂಗ್ ಸ್ಟೋನ್ ಇರುವ ಬ್ರೈಡಲ್ ಸ್ಯಾಂಡಲ್ ಕೂಡ ಟ್ರೈ ಮಾಡಬಹುದು. ಲೆಹಂಗಾದ ಜೊತೆ ಸೀಕ್ವೆನ್ಸ್ ವರ್ಕ್ ಇರುವ ಬ್ಲ್ಯಾಕ್ ಶೂ ಕೂಡ ಧರಿಸಬಹುದು. ಇದರ ಹೀಲ್ ಕೂಡ ಡಿಸೈನರ್ ಆಗಿರುತ್ತದೆ.
ಆ್ಯಕ್ಸೆಸರೀಸ್ : ಬ್ರೈಡಲ್ ಬಳೆಗಳಲ್ಲಿ ಕುಂದನ್ ಮತ್ತು ಸ್ಟೋನ್ ಇರುವ ಕಲರ್ ಫುಲ್ ಸಿಂಗಲ್ ಲೈನ್ ಸ್ಟೋನ್ ನ ಬ್ಯಾಂಗಲ್ ನ ಪೂರ್ಣ ಸೆಟ್ ಕೂಡ ಮಾಡಿಸಿಕೊಳ್ಳಬಹುದು. ಇದರಲ್ಲಿ ನಿಮಗೆ ಹಲವು ಬಗೆಯ ಕಲರ್ ಮತ್ತು ಡಿಸೈನ್ ಗಳು ದೊರೆಯುತ್ತವೆ. ಈ ಸೆಟ್ ನ ಬೆಲೆ ಕನಿಷ್ಠ 3,500 ರೂ. ಆಗುತ್ತದೆ. ಹೊಳೆಯುವ ಬಳೆಗಳನ್ನೇ ಹೆಚ್ಚು ತೆಗೆದುಕೊಳ್ಳಿ. ಯಾವ ಬಳೆಗಳಲ್ಲಿ ಸ್ಟೋನ್ ವರ್ಕ್ ಹೆಚ್ಚಿಗೆ ಇರುತ್ತದೋ, ಅದು ಅಷ್ಟೇ ದುಬಾರಿಯಾಗಿರುತ್ತದೆ. ಈ ಸೆಟ್ ನ್ನು ನೀವು 10,000 ರೂ.ತನಕ ಮಾಡಿಸಿಕೊಳ್ಳಬಹುದು.
1 ಲಕ್ಷ ರೂ. ಗಳಿಂದ 2 ಲಕ್ಷ ರೂ.ಗಳ ಬಜೆಟ್ ನಲ್ಲಿ ಲೆಹಂಗಾ : ಫ್ಯಾಷನ್ ಕನ್ಸಲ್ಟೆಂಟ್ ರವಿ ಅವರ ಪ್ರಕಾರ, ಲೆಹಂಗಾದ ಬೆಲೆ ಎಷ್ಟು ಹೆಚ್ಚಿಗೆ ಇರುತ್ತದೋ, ಅದರ ಫ್ಯಾಬ್ರಿಕ್ ಹಾಗೂ ಎಂಬ್ರಾಯಿಡರಿಯ ಗುಣಮಟ್ಟ ಅಷ್ಟೇ ಉನ್ನತವಾಗಿರುತ್ತದೆ. 80,000 ರೂ.ಗಳ ರೇಂಜ್ ನಲ್ಲಿ ನಿಮಗೆ ಸೂಕ್ಷ್ಮ ರೇಷ್ಮೆ ಕುಸುರಿ ಹಾಗೂ ಜರ್ದೋಜಿ ವರ್ಕ್ ಇರುವ ಲೆಹಂಗಾ ದೊರೆಯುತ್ತದೆ. ಜೊತೆಗೆ ಇದರಲ್ಲಿ ಬಳಸಲ್ಪಡುವ ಸ್ಟೋನ್, ಕ್ರಿಸ್ಟಲ್ ಹಾಗೂ ತಾಮ್ರದ ಮುತ್ತುಗಳು ಹೆಚ್ಚು ಹೊಳೆಯುತ್ತವೆ. 1,20,000 ರೂ.ಗಳ ರೇಂಜ್ ನಲ್ಲಿ ಅಪ್ಪಟ ರೇಷ್ಮೆಯ ಮೇಲೆ ಬಿಳಿ ಮುತ್ತುಗಳಿಂದ ಎಂಬ್ರಾಯಿಡರಿ ಹಾಗೂ ಡಿಸೈನ್ ಮಾಡಿದ ಲೆಹಂಗಾ ದೊರೆಯುತ್ತದೆ.
ಜ್ಯೂವೆಲರಿ : ಈ ರೀತಿಯ ಜ್ಯೂವೆಲರಿಗಳಲ್ಲಿ ನೀವು ಚಿನ್ನ ಹಾಗೂ ವಜ್ರಗಳ ಸೆಟ್ ಹೊರತಾಗಿ ಆರ್ಟಿಫಿಶಿಯಲ್ ಜ್ಯೂವೆಲರಿಯಲ್ಲಿ ನೀವು ಪರ್ಲ್ ಪ್ರೆಶಸ್ ಸ್ಟೋನ್ ರೂಬಿಯಿಂದ ತಯಾರಾದ ಜ್ಯೂವೆಲರಿ ಸೆಟ್ ಧರಿಸಿದರೆ ಹೆಚ್ಚು ಸೂಕ್ತ ಎನಿಸುತ್ತದೆ. ಈ ರೀತಿಯ ಕೃತಕ ಆಭರಣಗಳು ದಿನಕ್ಕೆ 5,000 ರೂ.ಗಳಿಂದ 15,000 ರೂ. ದರದಲ್ಲಿ ಬಾಡಿಗೆ ರೂಪದಲ್ಲಿ ದೊರೆಯುತ್ತವೆ.
ಮೇಕಪ್ : ಬ್ಯೂಟಿ ಎಕ್ಸ್ ಪರ್ಟ್ ಪೂಜಾ ಅವರ ಪ್ರಕಾರ, 15,000 ರೂ.ಗಳಲ್ಲಿ ನೀವು ಮ್ಯಾಕ್ ಪ್ರಾಡಕ್ಟ್ ಗಳಿಂದ ಬ್ರೈಡಲ್ ಮೇಕಪ್ ಮಾಡಿಸಬಹುದು. ಇದರಿಂದ ನಿಮ್ಮ ಮುಖದ ಶೇಪ್ ಮತ್ತು ಕಟ್ಸ್ ಸಾಕಷ್ಟು ಎದ್ದು ಕಾಣುತ್ತವೆ. ಇದು 16-18 ಗಂಟೆಗಳ ಕಾಲ ಸ್ಥಿರವಾಗಿ ಉಳಿಯುತ್ತದೆ. ಇದರ ಹೊರತಾಗಿ ನೀವು ಏರ್ ಬ್ರಶ್ ಮೇಕಪ್ ಕೂಡ ಮಾಡಿಸಿಕೊಳ್ಳಬಹುದು. ಏರ್ ಬ್ರಶ್ ಬ್ರೈಡಲ್ ಮೇಕಪ್ 16,000 ರೂ.ಗಳಿಂದ ಆರಂಭವಾಗುತ್ತದೆ. ಚಿಕ್ಕ ನಗರಗಳಲ್ಲಿ ಈ ತೆರನಾದ ಮೇಕಪ್ ಗೆ ಸಾಕಷ್ಟು ಕಡಿಮೆ ಮೊತ್ತ ಪಡೆಯಲಾಗುತ್ತದೆ.
ಆ್ಯಕ್ಸೆಸರೀಸ್ : ವಧುವಿನ ಬಳೆಗಳನ್ನು ನೀವು 5,000 ರೂ.ಗಳಿಂದ 15,000 ರೂ.ಗಳ ತನಕ ಸ್ಟರ್ಡ್, ಸ್ಟೋನ್ ಮತ್ತು ಮುತ್ತುಗಳನ್ನು ಅವಳಡಿಸಲ್ಪಟ್ಟ ಬ್ರೈಡಲ್ ಸೆಟ್ ಮಾಡಿಸಬಹುದು. ಇದರಲ್ಲಿ ಹಿಂದೆ ಮುಂದೆ ಹಾಗೂ ನಡುವಿನ ಹರಳು ತುಂಬಾ ಭಾರವಾದದ್ದಾಗಿರುತ್ತದೆ. ನಡುವೆ ಸಿಂಗಲ್ ಲೈನ್ ಮುತ್ತುಗಳು ಅಥವಾ ಹರಳುಗಳು ಅಳವಡಿಸಲ್ಪಟ್ಟಿರುತ್ತವೆ. ಇದರ ಹೊರತಾಗಿ ನೀವು ಕುಸುರಿ ಕೆಲಸವಿರುವ ಬ್ರೈಡಲ್ ಸೆಟ್ ಕೂಡ ಮಾಡಿಸಬಹುದು.
ಫುಟ್ ವೇರ್ : ಫುಟ್ ವೇರ್ ನಲ್ಲಿ ನೀವು 4,000 ರೂ.ಗಳಿಂದ 10,000 ರೂ.ಗಳ ತನಕದ ದರದಲ್ಲಿ ಗೋಲ್ಡನ್, ಸಿಲ್ವರ್, ಪ್ಲಾಟಿನಂ ಶೇಡ್ ನಲ್ಲಿ ಪೀಪಲ್ ಟೋಸ್ ಹೀಲ್ ನಲ್ಲಿ ಡಿಸೈನ್ ಮಾಡಲ್ಪಟ್ಟ ವೆಡ್ಡಿಂಗ್ ಸ್ಯಾಂಡಲ್ ಕೂಡ ಮಾಡಿಸಬಹುದು.
2 ಲಕ್ಷ ರೂ.ಗಳಿಗಿಂತ ಹೆಚ್ಚಿನ ಬಜೆಟ್ : ಒಂದು ವೇಳೆ ನಿಮ್ಮ ಬಜೆಟ್ 2 ಲಕ್ಷ ರೂ.ಗಳಿಗೂ ಮಿಕ್ಕಿದ್ದಲ್ಲಿ ನೀವು ಒಬ್ಬ ಫ್ಯಾಷನ್ ಡಿಸೈನರ್ ನ್ನೇ ಬುಕ್ ಮಾಡಿಸಬಹುದು. ಅವರು ನಿಮ್ಮ ದೇಹಕ್ಕನುಗುಣವಾಗಿ ಡ್ರೆಸ್ ಡಿಸೈನ್ ಮಾಡಿ ಮೇಕಪ್, ಜ್ಯೂವೆಲರಿ ಹಾಗೂ ಫುಟ್ ವೇರ್ ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತಾರೆ.
ಲೆಹಂಗಾ : ಮೊಘಲ್ ರಾಯಲ್ ಸ್ಟೈಲ್ ಅಥವಾ ಎಥ್ನಿಕ್ ವರ್ಕ್ ನಲ್ಲಿ ಡಿಸೈನ್ ಮಾಡಲ್ಪಟ್ಟು ಡಿಸೈನರ್ ಲೆಹಂಗಾದ ಹೊರತಾಗಿ ಹ್ಯಾಂಡ್ ಮೇಡ್ ಥ್ರೆಡ್ ವರ್ಕ್ ಇರುವ ಡಿಸೈನರ್ ಲೆಹಂಗಾ ಕೂಡ ತೆಗೆದುಕೊಳ್ಳಬಹುದು. ಶಿಫಾನ್ ನ ಫ್ಯಾಬ್ರಿಕ್ ಮೇಲೆ ಕ್ರಿಸ್ಟಲ್ ಹಾಗೂ ಚಿನ್ನಬೆಳ್ಳಿಯ ಎಂಬ್ರಾಯಿಡರಿ ಮಾಡಲ್ಪಟ್ಟ ಎಕ್ಸ್ ಕ್ಲೂಸಿವ್ ಲೆಹಂಗಾ ಕೂಡ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ.
ಫುಟ್ ವೇರ್ : ಫುಟ್ ವೇರ್ ನಲ್ಲಿ ನಿಮಗೆ ಪರ್ಲ್ ವೆಲ್ವೆಟ್, ಸ್ಟರ್ಡ್ ಹಾಗೂ ರಿಯಲ್ ಕ್ರಿಸ್ಟಲ್ ನಿಂದ ಡಿಸೈನ್ ಮಾಡಲ್ಪಟ್ಟ ಡಿಸೈನರ್ ಫುಟ್ ವೇರ್ ಕೂಡ ದೊರೆಯುತ್ತವೆ. ಇವುಗಳ ರೇಂಜ್ 10,000 ರೂ.ಗಳಿಂದ 50,000 ರೂ.ತನಕ ಇರುತ್ತದೆ.
– ನಿರ್ಮಲಾ ಕುಮಾರ್.