ಸೆಕ್ಸ್ ಎನ್ನುವುದು ಕೇವಲ ದೈಹಿಕ ಚಟುವಟಿಕೆಯಷ್ಟೇ ಅಲ್ಲ, ಅದರಲ್ಲಿ ಭಾವನಾತ್ಮಕ ಬಾಂಧವ್ಯ ಸೇರಿರುತ್ತದೆ. ಆರ್ಥಿಕ ಒತ್ತಡದ ಕಾರಣದಿಂದ ಭಾವನಾತ್ಮಕ ವಲಯದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ, ಚಿಂತೆಯಲ್ಲಿ ಮುಳುಗಿದ ಮನಸ್ಸು ದೇಹದೊಂದಿಗೆ ಪರಿಪೂರ್ಣವಾಗಿ ಜೊತೆ ಕೊಡುವುದಿಲ್ಲ. ಆ ಕಾರಣದಿಂದ ಸೆಕ್ಸ್ ಲೈಫ್‌ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತದೆ. ಇದರ ಪರಿಣಾಮ ಕೇವಲ ಗಂಡ ಹೆಂಡತಿಯ ಮೇಲಷ್ಟೇ ಅಲ್ಲ, ಕುಟುಂಬ ಹಾಗೂ ಮಕ್ಕಳ ಮೇಲೂ ಆಗುತ್ತದೆ. ಕೆಟ್ಟ ಸೆಕ್ಸ್ ಲೈಫ್‌ ನ ಪ್ರಭಾವ ವ್ಯಕ್ತಿಯೊಬ್ಬನ ಕಾರ್ಯ ಸಾಮರ್ಥ್ಯದ ಮೇಲೂ ಉಂಟಾಗುತ್ತದೆ.

ಅಂದಹಾಗೆ ಪ್ರತಿಯೊಂದು ಬಗೆಯ ಒತ್ತಡ ಸೆಕ್ಸ್ ಲೈಫ್‌ ನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರ್ಥಿಕ ಒತ್ತಡ ಉಂಟಾದಾಗ ಅದು ಕೇವಲ ಆ ವ್ಯಕ್ತಿಯ ಮೇಲಷ್ಟೇ ಅಲ್ಲ, ಸಂಗಾತಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣವೇನೆಂದರೆ, ಹಣದ ಕೊರತೆಯಿಂದಾಗಿ ಡಾಕ್ಟರ್‌ ಹಾಗೂ ಔಷಧಿ ಎರಡೂ ಕಷ್ಟಕರವಾಗಿ ಪರಿಣಮಿಸುತ್ತದೆ.

ಸಂಗಾತಿಯನ್ನು ಖುಷಿಯಿಂದಿಡಲು ಉಡುಗೊರೆ ತಂದುಕೊಡುವುದಿರಲಿ, ಹೊರಗೆ ಸುತ್ತಾಡಲು ಹೋಗುವುದೂ ಕಷ್ಟವಾಗುತ್ತದೆ. ಯಾರು ವರ್ಷಾನುವರ್ಷಗಳಿಂದ ಜೊತೆಯಿರುತ್ತಾರೊ, ಅವರು ಕೂಡ ಕೊರತೆಗಳನ್ನು ಎಣಿಸಲು ಶುರು ಮಾಡುತ್ತಾರೆ. ಕೋವಿಡ್ ನ ಕಾರಣದಿಂದ ಉದ್ಯೋಗ ಕಳೆದುಕೊಳ್ಳುವುದು ಇಲ್ಲಿ ಪೂರ್ತಿ ಸಂಬಳ ದೊರೆಯದಿರುವುದು, ಸಕಾಲಕ್ಕೆ ಸಂಬಳ ಕೈಗೆ ಬರದಿರುವುದು, ಬಾಡಿಗೆ ಕೊಡಲು ಆಗದಿರುವುದು ಮುಖ್ಯವಾಗಿವೆ.

ಕಂಪನಿಗಳು ಬಗೆಬಗೆಯ ನೆಪವೊಡ್ಡಿ ಕೆಲಸಗಾರರಿಗೆ ತೊಂದರೆ ಕೊಡುತ್ತವೆ. ಏಕೆಂದರೆ ಅವರು ತೊಂದರೆಗೆ ಹೆದರಿ ಕೆಲಸ ಬಿಟ್ಟು ಬಿಡಲಿ ಎನ್ನುವುದಾಗಿರುತ್ತದೆ. ಆರ್ಥಿಕ ಹಿಂಜರಿತಕ್ಕೆ ಬೇರೆ ಕಾರಣ ಇರಬಹುದು. ಆದರೆ ಅದರ ಪ್ರಭಾವ ಸೆಕ್ಸ್ ಮೇಲಂತೂ ಆಗಿಯೇ ಆಗುತ್ತದೆ. ಆ ಕಾರಣದಿಂದ ಗಂಡ ಹೆಂಡತಿ ನಡುವಿನ ಸ್ವಾಭಾವಿಕ ಸಂಬಂಧಕ್ಕೆ ಏಟು ಬೀಳುತ್ತದೆ.

ಆರ್ಥಿಕ ಒತ್ತಡದ ಪರಿಣಾಮಗಳು

ಆರ್ಥಿಕ ಬಿಕ್ಕಟ್ಟಿನಿಂದ ಜನರು ದೊಡ್ಡ ನಗರಗಳಿಂದ, ಚಿಕ್ಕ ನಗರಗಳಿಗೆ, ದೊಡ್ಡ ಮನೆಗಳಿಂದ ಚಿಕ್ಕ ಮನೆಗಳಿಗೆ ಶಿಫ್ಟ್ ಆಗಬೇಕಾಯಿತು. ಮಕ್ಕಳನ್ನು ಭಾರಿ ಪ್ರತಿಷ್ಠಿತ ಶಾಲೆಗಳಿಂದ, ಸಾಧಾರಣ ಶಾಲೆಗಳಿಗೆ ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾಯಿತು. ಆರ್ಥಿಕ ಬಿಕ್ಕಟ್ಟಿನ ಪ್ರಭಾವ ಸಾಮಾಜಿಕ ಜೀವನದ ಮೇಲೂ ಉಂಟಾಗುತ್ತದೆ. ಅದು ಒತ್ತಡಕ್ಕೆ ಮುಖ್ಯ ಕಾರಣವಾಗಿದೆ.

ಮಹಿಳೆಯರ ಮೇಲೆ ಇದರ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡನೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಕಷ್ಟವಾಗುತ್ತದೆ. ಎಷ್ಟೋ ಸಲ ಗಂಡ ಆಸಕ್ತಿ ತೋರಿಸಿದರೆ ಹೆಂಡತಿ ಅದಕ್ಕೆ ನಿರಾಕರಿಸುತ್ತಾಳೆ.

ಆರ್ಥಿಕ ಒತ್ತಡವನ್ನು ಕಡಿಮೆಗೊಳಿಸಲು ಜನರು ಹೆಚ್ಚೆಚ್ಚು ಕೆಲಸ ಮಾಡುತ್ತಾರೆ. ಈ ಕಾರಣದಿಂದಲೂ ಸೆಕ್ಸ್ ಸಂಬಂಧಕ್ಕಾಗಿ ಸಮಯ ಸಿಗುವುದಿಲ್ಲ. ಅದಕ್ಕೂ ಮೇಲಾಗಿ ದೇಹದ ದಣಿವು ಸೆಕ್ಸ್ ಸಂಬಂಧಗಳ ತೊಂದರೆ ಹೇಗಿರುತ್ತದೋ ಹಾಗೆಯೇ ಇರುವಂತೆ  ಮಾಡುತ್ತದೆ.

ಮಹಿಳೆಯರ ಮೇಲೆ ಪರಿಣಾಮ

ಆರ್ಥಿಕ ಬಿಕ್ಕಟ್ಟು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರ ಮೇಲೆಯೇ ಅದು ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಪುರುಷರಿಗಿಂತ  ಮಹಿಳೆಯರಿಗೇ ಆರ್ಥಿಕ ಚಿಂತೆ ಹೆಚ್ಚು ಕಾಡುತ್ತದೆ. ಇವೆಲ್ಲ ಸಂಗತಿಗಳ ಚಿಂತೆಯ ಜೊತೆಗೆ ಅವರ ಮನಸ್ಸು ಸೆಕ್ಸ್ ಬಗ್ಗೆ ಒಲವು ತೋರುವ ಹಾಗೂ ಅದರ ಖುಷಿ ಅನುಭವಿಸಲು ಅವಕಾಶ ಕೊಡುವುದಿಲ್ಲ. ಆರ್ಥಿಕ ಒತ್ತಡ ಸೆಕ್ಸ್ ಲೈಫ್‌ ನ್ನು ಹೆಚ್ಚು ಪ್ರಭಾವಿತಗೊಳಿಸುತ್ತದೆ. ಈ ಒತ್ತಡದಲ್ಲಿ ಇಷ್ಟಪಟ್ಟು ಕೂಡ ವರ್ತನೆಯ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ.

ಒತ್ತಡದ ಕಾರಣದಿಂದ ಹಲವು ಬಗೆಯ ದೈಹಿಕ ತೊಂದರೆಗಳು ಹೆಚ್ಚುತ್ತವೆ. ತಲೆನೋವು, ಹೊಟ್ಟೆನೋವು, ಅತಿ ರಕ್ತದೊತ್ತಡ ಮತ್ತು ಎದೆನೋವು ಅವುಗಳಲ್ಲಿ ಮುಖ್ಯವಾಗಿವೆ. ಈ ತೊಂದರೆಗಳು ಹೆಚ್ಚಾದಾಗ ಸೆಕ್ಸ್ ಲೈಫ್‌ ನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಾನಸಿಕ ಆರೋಗ್ಯದಿಂದ ಖಿನ್ನತೆ, ಚಿಂತೆ, ಪ್ಯಾನಿಕ್‌ ಅಟ್ಯಾಕ್‌ ನ ಜೊತೆ ಜೊತೆಗೆ ಭಾವನಾತ್ಮಕ ಸಮಸ್ಯೆಗಳು ಕೂಡ ಸೆಕ್ಸ್ ಲೈಫ್ ನ್ನು ಹಳಿ ತಪ್ಪಿಸುತ್ತವೆ.

ಒತ್ತಡ ಹೆಚ್ಚುವ ಕಾರಣದಿಂದ ದೇಹದ ಹಾರ್ಮೋನುಗಳ ಚಯಾಪಚಯಾ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ. ಒತ್ತಡದ ಕಾರಣದಿಂದ ಮೆದುಳಿನಲ್ಲಿ ನಕಾರಾತ್ಮಕ ವಿಚಾರಗಳು ಉತ್ಪತ್ತಿಯಾಗುತ್ತವೆ. ಅದು ಲೈಂಗಿಕ ಸಂಬಂಧದ ಮೇಲೆ ಪ್ರಭಾವ ಬೀರುವುದು ಸಹಜವೇ ಆಗಿದೆ.

ಹದಗೆಡುವ ಮಾನಸಿಕ ಆರೋಗ್ಯ

arthik-tanav-2

ಮನಸ್ಸು ಖುಷಿಯಾಗಿರದಿದ್ದರೆ ಮೂಡ್‌ ಸರಿಯಾಗಿರದಿದ್ದರೆ, ಭಾವನಾತ್ಮಕ ಏರುಪೇರು ಆಗುತ್ತಿದ್ದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮನಸ್ಸು ಆಗದು. ಒಬ್ಬರ ಸೆಕ್ಸ್ ಲೈಫ್‌ ಸರಿಯಾಗಿರದಿದ್ದರೆ, ಅದು ಇನ್ನೊಬ್ಬರ ಮೇಲೂ ಪ್ರಭಾವ ಬೀರುತ್ತದೆ. ಒತ್ತಡದ ಕಾರಣದಿಂದ ಸಂಬಂಧದ ಕುರಿತಂತೆ ಮನಸ್ಸಿನಲ್ಲಿ ಹಲವು ಬಗೆಯ ವಿಚಾರಗಳು ಬರುತ್ತಿರುತ್ತವೆ. ಇಂತಹ ಸ್ಥಿತಿಯಲ್ಲಿ ಸಂಗಾತಿ ಕೂಡ ಕಂಗಾಲಾಗುತ್ತಾಳೆ. ಆಗ ಸಂಬಂಧದ ಬಗ್ಗೆಯೇ ಪ್ರಶ್ನೆಗಳು ಏಳಬಹುದು.

ಭಾವನಾತ್ಮಕ ರೂಪದಲ್ಲಿ ಸ್ಥಿರವಾಗಿರದ ವ್ಯಕ್ತಿಯ ಜೊತೆ ಸಮಾಗಮ ನಡೆಸಲು ಸಂಗಾತಿ ಹಿಂದೇಟು ಹಾಕಬಹುದು. ನಾವು ಒತ್ತಡದ ಸ್ಥಿತಿಯಲ್ಲಿದ್ದಾಗ ಸಂಬಂಧದ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ. ಎಷ್ಟೋ ಸಲ ಒತ್ತಡದ ಕಾರಣದಿಂದ ಪರಸ್ಪರ ಆತ್ಮೀಯ ಮಾತುಕಥೆ ಸಹ ನಡೆಸಲು ಆಗುವುದಿಲ್ಲ. ಅದು ಈ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸೆಕ್ಸ್ ಲೈಫ್‌ ನ್ನು ಉತ್ತಮಗೊಳಿಸಲು ಒತ್ತಡವನ್ನು ಕೊನೆಗೊಳಿಸಬೇಕು. ಇಲ್ಲವೇ, ನಿಮ್ಮ ಯೋಜನೆಯನ್ನು ಬದಲಿಸುವುದು ಅವಶ್ಯವಾಗುತ್ತದೆ. ಹೇಳಲು ಸುಲಭ. ಆದರೆ ಇದನ್ನು ಅನುಷ್ಠಾನದಲ್ಲಿ ತರುವುದು ಸುಲಭವಲ್ಲ. ಇಂತಹದರಲ್ಲಿ ಒತ್ತಡದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಏಕೆಂದರೆ ಒತ್ತಡ ಜೀವನದ ಮೇಲೆಯೇ ಸವಾರಿ ಮಾಡುವಂತಾಗಬಾರದು. ವ್ಯಾಯಾಮ ಹಾಗೂ ಕೌನ್ಸೆಲಿಂಗ್‌ ಮೂಲಕ ಇದನ್ನು ಸಾಧ್ಯವಾಗಿಸಬಹುದು.

ಮೇಲ್ಕಂಡ ಪ್ರಯತ್ನಗಳ ಮೂಲಕ ಒತ್ತಡದ ಮಟ್ಟವನ್ನು ಕಡಿಮೆಗೊಳಿಸಬಹುದು. ಆಗ ಸೆಕ್ಸ್ ಲೈಫ್‌ ಗೆ ಅಷ್ಟು ದುಷ್ಪರಿಣಾಮ ಉಂಟಾಗದು. ಹಾಗೆಂದೇ ಬೆಡ್‌ ರೂಮ್ ಗೆ ಹೋಗುವ ಮುನ್ನ ಇತರೆ ವಿಚಾರಗಳನ್ನು ಬಿಟ್ಟು ಹೋಗಿ ಎಂದು ಸಲಹೆ ನೀಡಲಾಗುತ್ತದೆ.

ಹಾರ್ಮೋನುಗಳ ಅಸಮತೋಲನ

ಒತ್ತಡದ ಸ್ಥಿತಿಯಲ್ಲಿ ದೇಹದಲ್ಲಿ ಸ್ಟ್ರೆಸ್‌ ಹಾರ್ಮೋನು `ಕಾರ್ಟಿಸೋಲ್’ನ ಮಟ್ಟ ಹೆಚ್ಚುತ್ತದೆ. ಕಾರ್ಟಿಸೋಲ್ ಹಾಗೂ ಎಪಿನೆಫ್ರಿನ್ ಮಟ್ಟ ಹೇರಳವಾದಾಗ ಹೆಲ್ದೀ ಸೆಕ್ಸ್ ಲೈಫ್‌ ಎನ್ನುವುದು ಇರುವುದಿಲ್ಲ. ಇದು ಮಹಿಳೆಯರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಆ ಕಾರಣದಿಂದ ಅವರ ಸೆಕ್ಸ್ ಲೈಫ್‌ ಪ್ರಭಾವಿತಗೊಳ್ಳುತ್ತದೆ.

ಕಾರ್ಟಿಸೋಲ್ ‌ಮಟ್ಟ ಹೇರಳವಾದಾಗ ಸೆಕ್ಸ್ ಹಾರ್ಮೋನ್‌ ಬಿಡುಗಡೆಯಲ್ಲಿ ತೊಂದರೆಯಾಗುತ್ತದೆ. ಅದರಿಂದ ಸೆಕ್ಸ್ ಇಚ್ಛೆ ಕಡಿಮೆಯಾಗುತ್ತದೆ. ಹಾಗಾಗಿ ನಿಮ್ಮನ್ನು ನೀವು ಶಾಂತ ಹಾಗೂ ಕೂಲ್ ‌ಆಗಿಟ್ಟುಕೊಳ್ಳಿ.

ಒತ್ತಡ ಮಹಿಳೆಯರ ಮುಟ್ಟಿನ ಮೇಲೂ ದುಷ್ಪರಿಣಾಮವನ್ನುಂಟು ಮಾಡಬಹುದು. ಅದರಿಂದಾಗಿ ಮುಟ್ಟಿನಲ್ಲಿ ಏರುಪೇರಾಗುತ್ತದೆ. ಈ ಕಾರಣದಿಂದ ದೇಹದಲ್ಲಿ ಹಾರ್ಮೋನು ಬದಲಾವಣೆ ಉಂಟಾಗುತ್ತದೆ. ಅದು ಮೂಡ್‌ ಸ್ವಿಂಗ್‌ ನ್ನು ಹೆಚ್ಚಿಸುತ್ತದೆ. ಅದರಿಂದಾಗಿ ಒತ್ತಡ ಹೆಚ್ಚುತ್ತದೆ.

ಆರ್ಥಿಕ ಒತ್ತಡ ಕೇವಲ ಹಾರ್ಮೋನುಗಳ ಸಮತೋಲನದ ಮೇಲಷ್ಟೇ ಪ್ರಭಾವ ಮಾಡುವುದಿಲ್ಲ. ಅದು ಭಾವನಾತ್ಮಕವಾಗಿಯೂ ಪರಿಣಾಮ ಉಂಟು ಮಾಡುತ್ತದೆ. ಈ ಸಂದರ್ಭದಲ್ಲಿ ಆತ್ಮೀಯ ಮಾತುಕತೆ ನಡೆಸಲಾಗುವುದಿಲ್ಲ ಹಾಗೂ ಸಂಗಾತಿಯಿಂದ ದೂರ ಉಳಿಯಲು ನೆಪ ಹುಡುಕುತ್ತಾರೆ.

ಸೆಕ್ಸ್ ಕೇವಲ ದೈಹಿಕ ಕ್ರಿಯೆಯಷ್ಟೇ ಅಲ್ಲ, ಅದರಲ್ಲಿ ಭಾವನೆಗಳು ಕೂಡ ಸೇರಿರುತ್ತವೆ. ಆರ್ಥಿಕ ಒತ್ತಡದ ಸ್ಥಿತಿಯಲ್ಲಿ ಮನಸ್ಸನ್ನು ಸಮಾಗಮಕ್ಕೆ ಸನ್ನದ್ಧುಗೊಳಿಸುವುದು ಕಠಿಣವಾಗುತ್ತದೆ. ಆರ್ಥಿಕ ಒತ್ತಡದ ಕಾರಣದಿಂದ ಪರಸ್ಪರ ನಿಕಟತೆ ಕಡಿಮೆಯಾಗುತ್ತದೆ. ಅದು ಸಂಬಂಧಕ್ಕೆ ಮಾರಕವಾಗಿ ಪರಿಣಮಿಸುತ್ತದೆ.

ಒತ್ತಡದಿಂದ ಮುಕ್ತರಾಗುವುದು ಹೇಗೆ?

ಆರ್ಥಿಕ ಒತ್ತಡವನ್ನು ಕಡಿಮೆಗೊಳಿಸಲು ಹಣಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ಜೀವನದಿಂದ ದೂರಗೊಳಿಸಬೇಕು. ಎಲ್ಲಿಯವರೆಗೆ ಆರ್ಥಿಕ ಬಿಕ್ಕಟ್ಟು ಮುಂದುವರಿಯತ್ತದೋ ಅಲ್ಲಿಯವರೆಗೆ ಪರಸ್ಪರ ಆತ್ಮೀಯ ಮಾತುಕತೆ ನಡೆಸುತ್ತಲೇ ಇರಿ. ನಿಮ್ಮ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಿ ಹಾಗೂ ಬೇಗನೇ ಯಾವುದಾದರೂ ಪರಿಹಾರ ಸಿಗುತ್ತದೆಯೇ ಎಂದು ಸಕಾರತ್ಮಕವಾಗಿ ಯೋಚಿಸಿ. ಯಾವ ಸಂಗತಿಗಳು ನಿಮಗೆ ತೊಂದರೆ ಕೊಡುತ್ತಿರುತ್ತವೋ ಅವಕ್ಕೆ ಬೆನ್ನು ತೋರಿಸಿ ಓಡಿಹೋಗುವ ಬದಲು ಅವನ್ನು ದಿಟ್ಟತನದಿಂದ ಎದುರಿಸಿ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ.

ನಿಮ್ಮ ಸಂಗಾತಿಗೆ ಜೊತೆ ಕೊಡಿ, ಸಮಯ ಕೊಡಿ ಹಾಗೂ ಭರವಸೆ ತುಂಬಿ. ನಿಮ್ಮ ಇತಿಮಿತಿಗೆ ಅನುಗುಣವಾಗಿ ಎಲ್ಲಿಯಾದರೂ ಸುತ್ತಾಡಲು ಹೋಗಿ. ಅದರಿಂದ ಒತ್ತಡ ಕಡಿಮೆಯಾಗುತ್ತದೆ. ಮೂಡ್‌ ಸರಿಯಾಗುತ್ತದೆ. ಒತ್ತಡ ಕಡಿಮೆ ಮಾಡಲು ವ್ಯಾಯಾಮ ಉತ್ತಮ ಉಪಾಯ. ರಿಲ್ಯಾಕ್ಸಿಂಗ್‌ ಮ್ಯೂಸಿಕ್‌ ಕೂಡ ವಾತಾವರಣ ತಿಳಿಗೊಳಿಸಲು ಸಹಾಯ ಮಾಡುತ್ತದೆ.

ಆರ್ಥಿಕ ಒತ್ತಡದ ಸ್ಥಿತಿಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿರುವುದು ಅತ್ಯವಶ್ಯಕ. ಮೂಡ್‌ ಮತ್ತು ವರ್ತನೆಯನ್ನು ತಿಳಿಗೊಳಿಸಲು ಪ್ರಯತ್ನಿಸಿ. ಆಗ ತೊಂದರೆಯನ್ನು ಎದುರಿಸುವುದು ಸುಲಭವಾಗುತ್ತದೆ.

ಸಂಗಾತಿಗೆ ನೀವು ಏನು ತಿಳಿ ಹೇಳಬೇಕೆಂದರೆ, ಯಾವಾಗಲೂ ಹೀಗೆಯೇ ಇರುವುದಿಲ್ಲ. ಈ ದಿನಗಳು ಬದಲಾಗುತ್ತವೆ. ಈ ಸಮಯವನ್ನು ಗಟ್ಟಿಯಾಗಿ ನಿಂತು ಎದುರಿಸಬೇಕೆಂದು ಹೇಳಿ.

ನಿಮಗೆ ಯಾವ ಕೆಲಸಗಳು ಖುಷಿ ಕೊಡುತ್ತವೋ ಅಂತಹ ಕೆಲಸ ಮಾಡಿ. ನಿಮ್ಮ ಹವ್ಯಾಸಗಳಿಗೆ ಸಾಕಷ್ಟು ಸಮಯ ಕೊಡಿ. ಉದಾಹರಣೆಗೆ ಪುಸ್ತಕ ಓದುವುದು, ಪೇಂಟಿಂಗ್‌, ಗಾರ್ಡನಿಂಗ್‌ ಮುಂತಾದ. ಒತ್ತಡ ಹೆಚ್ಚಾದಾಗ ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಭೇಟಿಯಾಗಿ. ಇಂತಹ ಸಂದರ್ಭದಲ್ಲಿ ನಿಮಗೆ ಕೌನ್ಸೆಲಿಂಗ್‌ ಬಹಳಷ್ಟು ನೆರವಾಗುತ್ತದೆ.

ಶೈಲಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ