ಹೆಣ್ಣುಮಕ್ಕಳು ಮನಸ್ಸು ಮಾಡಿದ್ರೆ ಅದೆಂಥಾ ಸಾಧನೆ ಬೇಕಾದರೂ ಮಾಡುತ್ತಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ನಟಿ ರಂಜನಿ ರಾಘವನ್. ರಂಜನಿ ರಾಘವನ್​ಗೆ ಜಸ್ಟ್ 30 ವರ್ಷ. ಇಡೀ ಕರುನಾಡೇ ಮೆಚ್ಚಿಕೊಂಡು ಅಪ್ಪಿಕೊಂಡಿರುವ, ಅಭಿಮಾನದಿಂದ ಕನ್ನಡತಿ ಎಂಬ ಕಿರೀಟ ತೊಟ್ಟಿರುವ ರಂಜನಿ ರಾಘವನ್ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕನ್ನಡ ಟೀಚರ್ ಎಂದೇ ಖ್ಯಾತಿ ಗಳಿಸಿರುವ ರಂಜನಿ, ನಟಿಯಾಗಿ, ಬರಹಗಾರ್ತಿಯಾಗಿ ಎಲ್ಲರ ಮನೆಮಾತಾಗಿ ಇದೀಗ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.

ಹೌದು, ‘ಪುಟ್ಟಗೌರಿ ಮದುವೆ’, ‘ಕನ್ನಡತಿ’ ಧಾರಾವಾಹಿಗಳ ಮೂಲಕ ಮನೆಮನೆಗಳಲ್ಲಿ ಎಲ್ಲರ ಮನಮುಟ್ಟುವಂತೆ ನಟಿಸಿದ್ದ ನಟಿ ರಂಜನಿ ರಾಘವನ್ ಈ ವರ್ಷದಿಂದ ನಿರ್ದೇಶಕಿ ಆಗುತ್ತಿದ್ದಾರೆ. ಹೊಸ ವರುಷದ ಮೊದಲ ದಿನವೇ ಅವರು ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು ಅವರು ಇನ್ನೂ ಕುತೂಹಲ ಮೂಡಿಸಿದ್ದಾರೆ. ಸ್ವರಮಾಂತ್ರಿಕ ಇಳಯರಾಜ ಅವರ ಜತೆಗಿನ ಫೋಟೋ ಅನ್ನು ರಂಜನಿ ಶೇರ್‌ ಮಾಡಿಕೊಂಡು ಮಹತ್ವದ ವಿಚಾರ ರಿವೀಲ್‌ ಮಾಡಿದ್ದಾರೆ. ತಾವು ನಿರ್ದೇಶಕಿಯಾಗಲು ಹೊರಟಿರುವ ಬಗ್ಗೆ ರಂಜನಿ ಮನದಾಳದ ಮಾತನ್ನು “ಗೃಹಶೋಭಾ” ಜೊತೆ ಹಂಚಿಕೊಂಡಿದ್ದಾರೆ. ವಿಶೇಷ ಏನು ಅಂದ್ರೆ ರಂಜನಿ ರಾಘವನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ನಿರ್ದೇಶನ ಮಾಡುತ್ತಿರುವುದು. ಹೌದು. ಇವರ ಚೊಚ್ಚಲ ಚಿತ್ರಕ್ಕೆ ಇಳಯರಾಜ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಸಂಯೋಜನೆ ಮಾಡುತ್ತಿದ್ದಾರೆ. ಹೀಗಾಗಿ ರಂಜನಿ ಡೈರೆಕ್ಷನ್ ಇಡೀ ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ.

RANJANI RAGHAVAN (5)

ನನ್ನ ಕಥೆ ನನ್ನ ಕನಸಿನ ಕೂಸು : ಈ ಕುರಿತಂತೆ ಸೋಷಿಯಲ್ ಮೀಡಿಯಾ ಇನ್ಸ್​ಟಾದಲ್ಲಿ ಸುದೀರ್ಘವಾದ ಪೋಸ್ಟ್ ಮಾಡಿರುವ ನಟಿ ರಂಜನಿ ರಾಘವನ್ ತನ್ನ ಹೊಸ ಪಯಣ ಕುರಿತು ವಿವರ ನೀಡಿದ್ದಾರೆ ಮತ್ತು ಆತ್ಮೀಯರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಹೊಸ ಚಿತ್ರದ ಹೊಸ ಭೇಟಿಯ ಬಗ್ಗೆ ಬರೆಯುತ್ತಾ, “ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನು ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನು ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿವೆ. ಈ ಕಥೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನು ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ. ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನು ಮೆಚ್ಚಿ ಜೊತೆಗೆ ನಿಂತಿದ್ದಾರೆ” ಎಂದು ಖುಷಿ ಹಂಚಿಕೊಂಡಿದ್ದಾರೆ.

“ಈ ಸಿನಿಮಾ ಮಾಡುತ್ತಿರುವುದು ನನ್ನ ದೊಡ್ಡ ಜವಾಬ್ದಾರಿ. ಇಳಯರಾಜ ಅವರನ್ನು ನೋಡಿದಾಗ ಒಬ್ಬ ಗುರುಗಳನ್ನು ನೋಡಿದ ಭಾವನೆ. ಅವರು ನಮ್ಮ ಸಿನಿಮಾವನ್ನು ಇಷ್ಟಪಟ್ಟು ಸಂಗೀತ ನೀಡುತ್ತಿದ್ದಾರೆ. ಅದಕ್ಕಿಂತ ಅದೃಷ್ಟ ಇನ್ನೇನು ಇಲ್ಲ. ಒಂದು ಒಳ್ಳೆಯ ಕಥೆಯನ್ನು ಜನರಿಗೆ ತಲುಪಿಸುವ ಯೋಚನೆಯಲ್ಲಿದ್ದೇನೆ.. ಕನ್ನಡಿಗರು, ಕನ್ನಡ ಸಿನಿಮಾ ಪ್ರೇಕ್ಷಕರು ಜತೆಯಿರಲಿ ಎಂಬುದು ನನ್ನ ಕೋರಿಕೆ” ಎಂದಿದ್ದಾರೆ ರಂಜನಿ ರಾಘವನ್.

ಮೂಕಾಂಬಿಕೆ ನನ್ನವ್ವ ಎಂದ ಇಳಯರಾಜ: “ಸೆಪ್ಟೆಂಬರ್ 13, 2023ರಂದು ಅವರನ್ನು ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ “ಚೆನ್ನೈಗೆ ಹೋಗಿ ಅವರನ್ನು ಭೇಟಿಯಾಗಿ, ಕಾಲಿಗೆ ಬಿದ್ದು ಒಂದು ಫೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು” ಅಂತಷ್ಟೇ ಅಂದುಕೊಂಡಿದ್ದು, “ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ. ಕೊಲ್ಲೂರು ಮೂಕಾಂಬಿಕೆ ನನ್ನವ್ವ” ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ “ಒನ್ ಕಾಲ್ ಅವೇ” ಅನ್ನೋ ಜಂಭ ಹುಟ್ಟಿಸಿದ್ದಾರೆ. ಹೋದ ವರ್ಷ 2024 ಜನವರಿ 1 ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು, ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನು ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ” ಎಂದು ತಮಗೆ ಸಹಕಾರ ನೀಡುತ್ತಿರುವ, ಪ್ರೋತ್ಸಾಹದ ಮಾತುಗಳ ಮೂಲಕ ಬೆನ್ನಿಗೆ ನಿಂತಿರುವ ಆತ್ಮೀಯರಿಗೆ ಹಾಗೂ ಅಭಿಮಾನಿಗಳಿಗೆ ರಂಜನಿ ರಾಘವನ್ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯದ ಖುಷಿ ವಿಚಾರ ಏನು ಅಂದ್ರೆ ಇಳಯರಾಜ ಈಗಾಗಲೇ ಮೂರು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಮ್ಯೂಸಿಕಲ್ ಜರ್ನಿ ಸಿನಿಮಾ ಆಗಿರೋದ್ರಿಂದ ಇಳಯರಾಜ ಸಂಗೀತ ಮತ್ತಷ್ಟು ಮೆರಗು ನೀಡೋದ್ರಲ್ಲಿ ಅನುಮಾನವೇ ಇಲ್ಲ.

Ranjini Raghavan (2)

ಕರುನಾಡ ಹೆಮ್ಮೆ ಈ ಕನ್ನಡತಿ: ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಹೆಚ್ಆರ್ನಲ್ಲಿ ಎಂಬಿಎ ಮುಗಿಸಿರುವ ರಂಜನಿ ರಾಘವನ್ ಕಿರುತೆರೆಗೆ ಎಂಟ್ರಿ ಕೊಟ್ಟು ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅಪ್ಪಟ ಕನ್ನಡತಿಯಾಗಿ ತಮ್ಮ ಪಾತ್ರದಿಂದಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಕೆಲ ಸೀರಿಯಲ್​ಗಳಿಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಕನ್ನಡವಲ್ಲದೇ ಮಲಯಾಳಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ, ‘ರಾಜಹಂಸ’ ಮೂಲಕ ಬಿಗ್ ಸ್ಕ್ರೀನ್​ಗೆ ಎಂಟ್ರಿ ಕೊಟ್ಟ ರಂಜನಿ ರಾಘವನ್, ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ, ಕಾಂಗರೂ ಸೇರಿದಂತೆ ಕೆಲ ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ತಾವು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಟನೆ ಮಾಡ್ತಾರಾ ಅನ್ನೋದು ಇನ್ನೋ ಗೊತ್ತಾಗಿಲ್ಲ.

Ranjini Raghavan (1)

ಕ್ರಿಯೇಟಿವ್ ರೈಟರ್ ರಂಜನಿ : ನಟನೆ ಜೊತೆಗೆ ಬರಹಗಾರ್ತಿಯಾಗಿಯೂ ಹೆಸರು ಮಾಡಿದ್ದಾರೆ. ‘ಕತೆ ಡಬ್ಬಿ’ ಎಂಬ ಪುಸ್ತಕ ಬರೆದಿದ್ದು, ಅದು ಕೇವಲ 6 ತಿಂಗಳಲ್ಲಿ 15ಕ್ಕೂ ಹೆಚ್ಚು ಎಡಿಷನ್​ಗಳಲ್ಲಿ ಮುದ್ರಣಗೊಂಡು ಮಾರಾಟವಾಗಿದ್ದು ಇವರ ಹೆಗ್ಗಳಿಕೆಗೆ ಹಿಡಿದ ಕನ್ನಡಿಯಾಗಿದೆ. ಬಳಿಕ ಇವರ ಎರಡನೇ ಪುಸ್ತಕ ‘ಸ್ವೈಪ್ ರೈಟ್’ 2022ರ ಡಿಸೆಂಬರ್ ರಿಲೀಸ್ ಆಗಿದ್ದು, ಒಂದೇ ತಿಂಗಳಲ್ಲಿ 5 ಸಾವಿರ ಪ್ರತಿಗಳು ಮಾರಾಟವಾಗಿದ್ದು ಇವರ ಮೇಲಿಟ್ಟುರವ ಯುವಜನರ ಪ್ರೀತಿ ಮತ್ತು ಮೆಚ್ಚುಗೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಹೀಗೆ ಕನ್ನಡ ಚಿತ್ರರಂಗ, ಕನ್ನಡ ಸಾಹಿತ್ಯದಲ್ಲಿ ಸದಾ ಕ್ರಿಯಾಶೀಲರಾಗಿರುವ ನಟಿ ರಂಜನಿ ರಾಘವನ್ ಅವರಿಗೆ ನಿರ್ದೇಶನದ ಪಯಣದಲ್ಲೂ ಯಶಸ್ಸು ಸಿಗಲಿ ಎಂದು ಎಲ್ಲೆಡೆ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಷ್ಟೇ ಅಲ್ಲ, ಸಿಂಪಲ್ ಆಗಿ ಡ್ರೆಸ್ ಹಾಕಿಕೊಂಡು ನ್ಯಾಚುರಲ್ ಬ್ಯೂಟಿ ಆಗಿ ಕಾಣಿಸಿಕೊಳ್ಳೊ ರಂಜನಿ ರಾಘವನ್​ಗೆ ಸ್ಯಾಂಡಲ್​ವುಡ್​ನಲ್ಲೂ ಬಹುಪರಾಕ್ ಹಾಕಲಾಗ್ತಿದೆ.

—————

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ