ಪೋಹಾ ಪನೀರ್ಚಾಪ್

ಸಾಮಗ್ರಿ : 1 ಕಪ್‌ ಪೇಪರ್‌ ಅವಲಕ್ಕಿ, 150 ಗ್ರಾಂ ತುರಿದ ಪನೀರ್‌, 2 ಬೆಂದ ಆಲೂ, ಒಂದಿಷ್ಟು ಹೆಚ್ಚಿದ ಪುದೀನಾ, ಕೊ.ಸೊಪ್ಪು, ಹಸಿಮೆಣಸು, ಈರುಳ್ಳಿ, ರುಚಿಗೆ ತಕ್ಕಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಚಾಟ್‌ ಮಸಾಲೆ, ಅಮ್ಚೂರ್‌ ಪುಡಿ, ಬಿಳಿ ಎಳ್ಳು, ಕರ್ಬೂಜಾ ಬೀಜ, ಗಸಗಸೆ, ಒಂದಿಷ್ಟು ಟೂತ್‌ ಪಿಕ್‌, ಕರಿಯಲು ಎಣ್ಣೆ.

ವಿಧಾನ : ಮೊದಲು ಅವಲಕ್ಕಿಯನ್ನು ತೊಳೆದು ಸ್ಟೀಲ್ ಜರಡಿಯಲ್ಲಿ ಸೋಸಿಕೊಳ್ಳಿ. ಒಂದು ಬೇಸನ್ನಿಗೆ ಈ ಅವಲಕ್ಕಿ ಜೊತೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ಹದಕ್ಕೆ ಕಲಸಿಡಿ. ಅದರಿಂದ ಸುರುಳಿ ಮಾಡಿ, ಚಿತ್ರದಲ್ಲಿರುವಂತೆ ಟೂತ್‌ ಪಿಕ್‌ ಗೆ ಸಿಗಿಸಿಡಿ. ಇದನ್ನು ಎಳ್ಳು, ಗಸಗಸೆಯಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಟೊಮೇಟೊ ಸಾಸ್‌ ಜೊತೆ ಸವಿಯಿರಿ.

ಸ್ಪೆಷಲ್ ಮಸಾಲೆ ಪಕೋಡ

ಸಾಮಗ್ರಿ : 2 ಕಪ್‌ ಅಕ್ಕಿಹಿಟ್ಟು, 1 ಕಪ್‌ ಕಡಲೆಹಿಟ್ಟು, ಹೆಚ್ಚಿದ 4 ಈರುಳ್ಳಿ, ಒಂದಿಷ್ಟು ಕೊ.ಸೊಪ್ಪು, ಪುದೀನಾ, ಕರಿಬೇವು, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಅರಿಶಿನ, ಚಾಟ್‌ ಮಸಾಲ, ಗರಂಮಸಾಲ, ತರಿತರಿ ಕಡಲೆಕಾಯಿ ಬೀಜ, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಎಲ್ಲಾ ಹೆಚ್ಚಿದ ಪದಾರ್ಥ, 2 ಬಗೆ ಹಿಟ್ಟು, ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದರಿಂದ ಸಣ್ಣ ಉಂಡೆ ಹಿಡಿದು, ಅಂಗೈ ಮೇಲೆ ಜಿಡ್ಡು ಸವರಿ ಚಿತ್ರದಲ್ಲಿರುವಂತೆ ಪಕೋಡ ತರಹ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಸಾಸ್‌, ಚಟ್ನಿ ಜೊತೆ ಬಿಸಿ ಬಿಸಿ ಕಾಫಿಯೊಂದಿಗೆ ಸವಿಯಲು ಕೊಡಿ.

ಆಲೂ ಕುರ್ಕುರೆ

AA-kurkure-aalloo-(10)

ಸಾಮಗ್ರಿ : 4-5 ಆಲೂ, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓರಿಗೆನೋ, ಪಾರ್ಸ್ಲೆ, ಕರಿಯಲು ಎಣ್ಣೆ.

ವಿಧಾನ : ಮೊದಲು ಸುಮಾರಾಗಿ ಅರೆಬೆರೆ ಆಲೂ ಬೇಯಿಸಿ, ಇದರ ಸಿಪ್ಪೆ ಸುಲಿದು, ಸಣ್ಣ ತುಂಡಗಳಾಗಿಸಿ. ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ, ಶುಂಠಿ ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಖಾರ ಸೇರಿಸಿ ಈ ಮಿಶ್ರಣಕ್ಕೆ ಆಲೂ ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಇದಕ್ಕೆ ಪಾರ್ಸ್ಲೆ, ಓರಿಗೆನೋ ಸೇರಿಸಿ ಕೆದಕಬೇಕು. ಅಗತ್ಯವೆನಿಸಿದರೆ ನಂತರ ಇದನ್ನು ಬೇಕ್‌ ಮಾಡಿ ಅಥವಾ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಸರ್ವ್ ಮಾಡಿ.

ದಹೀ ಪನೀರ್ರೋಲ್

AA-dahi-paneer-roll-(3)

ಸಾಮಗ್ರಿ : 8-10 ಬ್ರೆಡ್‌ ಪೀಸ್‌, ಅರ್ಧರ್ಧ ಕಪ್‌ ಕೆನೆ ಮೊಸರು, ತುರಿದ ಪನೀರ್‌, ಮೈದಾ, ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಬೆಣ್ಣೆ, ಕರಿಯಲು ಎಣ್ಣೆ.

ವಿಧಾನ : ಮೊದಲು ಬ್ರೆಡ್‌ ಪೀಸ್‌ ಅಂಚು ಕತ್ತರಿಸಿ, ಲಘುವಾಗಿ ಲಟ್ಟಣಿಗೆಯಿಂದ ಲಟ್ಟಿಸಿ ತೆಳ್ಳಗೆ ಮಾಡಿ. ಮೊಸರಿಗೆ ಉಪ್ಪು, ಖಾರ, ಗರಂಮಸಾಲ, ಹಸಿ ಮೆಣಸು, ಪನೀರ್‌, ಕೊ.ಸೊಪ್ಪು ಸೇರಿಸಿ. ಬ್ರೆಡ್ಡಿಗೆ ಬೆಣ್ಣೆ ಹಚ್ಚಬೇಕು. ಮೈದಾಗೆ ತುಸು ಬೆಣ್ಣೆ, ಉಪ್ಪು, ಖಾರ ಸೇರಿಸಿ ಬೋಂಡ ಹಿಟ್ಟಿನಂತೆ ಕಲಸಿಡಿ. ಬ್ರೆಡ್ಡಿಗೆ ಈ ದಪ್ಪ ಮೊಸರಿನ ಮಿಶ್ರಣ ಹರಡಿರಿ. ಇದನ್ನು ರೋಲ್ ಮಾಡಿ, ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಸಾಸ್‌, ಕಾಫಿ, ಟೀ ಜೊತೆ ಇದನ್ನು ಬಿಸಿಯಾಗಿ ಸವಿಯಲು ಕೊಡಿ.

ಹೆಸರು ಬೇಳೆಯ ತ್ರಿಕೋನಗಳು

ಸಾಮಗ್ರಿ : ನೆನೆಸಿ ರುಬ್ಬಿದ 1 ಕಪ್‌ ಹೆಸರುಬೇಳೆ ಹಿಟ್ಟು, ಮಿಶ್ರ ತರಕಾರಿ ಹೋಳು (ಒಟ್ಟಾಗಿ 1 ಕಪ್‌), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಮಿಕ್ಸ್ಡ್ ಹರ್ಬ್ಸ್, ಬೆಣ್ಣೆ, ತುರಿದ ಚೀಸ್‌, ಶೇರ್ವನ್‌ ಸಾಸ್‌, ಟೊಮೇಟೊ ಕೆಚಪ್‌, ಅರ್ಧ ಸೌಟು ರೀಫೈಂಡ್‌ ಎಣ್ಣೆ.

ವಿಧಾನ : ಹೆಸರು ಬೇಳೆಯ ಹಿಟ್ಟಿಗೆ ಉಪ್ಪು, ಮೆಣಸು ಸೇರಿಸಿ ಚೆನ್ನಾಗಿ ಗೊಟಾಯಿಸಿ ಒಂದು ಕಡೆ ಇಡಿ. ಮಿಶ್ರ ತರಕಾರಿ ಹೋಳನ್ನು ಲಘುವಾಗಿ ಬೇಯಿಸಿ. ನಂತರ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಬೆಂದ ತರಕಾರಿ ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಮೆಣಸು ಉಳಿದೆಲ್ಲ ಸಾಮಗ್ರಿ ಬೆರೆಸಿ ಕೆದಕಬೇಕು. ಇದನ್ನು ಕೆಳಗಿಳಿಸಿ ಮಿಕ್ಸ್ಡ್ ಹರ್ಬ್ಸ್ ಉದುರಿಸಿ. ಇದೀಗ ಹಿಟ್ಟಿನಿಂದ ದಪ್ಪ ದೋಸೆ ತಯಾರಿಸಿ. ಅದರ ಮಧ್ಯೆ 2-3 ಚಮಚ ತರಕಾರಿ ಮಿಶ್ರಣ ಹರಡಿ. ಇದನ್ನು 2 ಭಾಗವಾಗಿ ಮಡಿಚಿ, ಕೆಳಗಿಳಿಸಿ. ಇದನ್ನು ತ್ರಿಕೋನಾಕಾರವಾಗಿ ಕತ್ತರಿಸಿ. ಇದರ ಮೇಲೆ ಚೀಸ್‌ ಉದುರಿಸಿ, ಮೈಕ್ರೋವೇವ್ ‌ನಲ್ಲಿ ತುಸು ಬಿಸಿ ಮಾಡಿ, ನಂತರ ಸವಿಯಲು ಕೊಡಿ.

ಚೈನೀಸ್ಭೇಲ್

AA-chinese-bhail-(18)

ಸಾಮಗ್ರಿ : 1 ಪ್ಯಾಕೆಟ್‌ ನೂಡಲ್ಸ್, ಅರ್ಧರ್ಧ ಕಪ್‌ ತುರಿದ ಕ್ಯಾರೆಟ್‌, ಎಲೆಕೋಸು, 3 ಬಗೆ ಕ್ಯಾಪ್ಸಿಕಂ, ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಗ್ರೀನ್‌/ರೆಡ್‌ ಚಿಲೀ ಸಾಸ್‌, ವಿನಿಗರ್‌, ಶೇರ್ವನ್‌ ಸಾಸ್‌, ಸಕ್ಕರೆ, ತುಪ್ಪ, ಕರಿಯಲು ಎಣ್ಣೆ.

ವಿಧಾನ : ಮೊದಲು ನೂಡಲ್ಸ್ ಬೇಯಿಸಿ. ಅದರ ನೀರು ಬಸಿದು, ಕೊಳಾಯಿ ನೀರಿನ ಅಡಿ ಸ್ಟೀಲ್ ‌ಜರಡಿಯಲ್ಲಿರಿಸಿ ತೊಳೆಯರಿ. ಒಂದು ಬಾಣಲೆಯಲ್ಲಿ ಮೊದಲು ಎಣ್ಣೆ ಬಿಸಿ ಮಾಡಿ. ಬೆಂದ ನೂಡಲ್ಸ್ ಹಾಕಿ ಕರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಅರ್ಧ ಸೌಟು ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಒಂದೊಂದಾಗಿ ಎಲ್ಲಾ ತುರಿದ, ಹೆಚ್ಚಿಕೊಂಡ ತರಕಾರಿ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಎಲ್ಲಾ ಬೆರೆಸಿ ಇದಕ್ಕೆ ಉಳಿದ ಸಾಮಗ್ರಿ, ಸಾಸ್‌ ಆಮೇಲೆ ಕರಿದ ನೂಡಲ್ಸ್ ಸೇರಿಸಿ. ಕೊ.ಸೊಪ್ಪು ಉದುರಿಸಿ ಎಲ್ಲವನ್ನೂ  ಕೈಯಾಡಿಸಿ, ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ