ಮಾನಸಾಳ ಆಪ್ತ ಗೆಳತಿ ತನುಜಾಳ ಏಕೈಕ ಪುತ್ರಿ ರಮ್ಯಾಳ ಮದುವೆ ಮೈಸೂರಿನಲ್ಲಿ ನಡೆಯಲಿತ್ತು. ತನುಜಾ ಎಲ್ಲ ಸ್ನೇಹಿತರನ್ನು ಒಗ್ಗೂಡಿಸಲು ಎಲ್ಲರ ನಂಬರ್‌ ಸಂಗ್ರಹಿಸಿ ಒಂದು ವಾಟ್ಸ್ ಆ್ಯಪ್‌ ಗ್ರೂಪ್‌ ಮಾಡಿದಳು. ಅದೆಷ್ಟೋ ವರ್ಷಗಳ ನಂತರ ಪರಸ್ಪರರ ಪರಿಚಯ ಆಗಿತ್ತು. ಅವರೆಲ್ಲ ವ್ಯಸ್ತ ಗೃಹಸ್ಥರಾಗಿದ್ದರು. ಆದರೆ ಕಾಲೇಜು ದಿನಗಳ ಮೋಜು ಮಜವನ್ನು ನೆನಪಿಸಿಕೊಂಡು ಅಂದಿನ ಯುವಕ ಯುವತಿಯರಂತೆ ಆಗಿಬಿಟ್ಟಿದ್ದರು. ತನುಜಾ ಆ ಗ್ರೂಪಿಗೆ `ಹ್ಯಾಪಿನೆಸ್‌’ ಎಂದು ನಾಮಕರಣ ಮಾಡಿದಳು. ಎಲ್ಲರೂ ಅವಕಾಶ ಸಿಕ್ಕಾಗೆಲ್ಲ ಆ ಗ್ರೂಪ್‌ ನಲ್ಲಿ ತಮಾಷೆ, ನಗುವಿನ ಅಲೆ ಹರಿಸುವಂತಹ ಸಂದೇಶ ಕಳುಹಿಸುತ್ತಿದ್ದರು.

ಅದರಲ್ಲಿ ತನುಜಾಳ ಆಗ್ರಹದ ಸಂದೇಶ ಹೀಗಿತ್ತು, “ಎಲ್ಲರೂ ಮದುವೆಗೆ ಬರುವ ಸಿದ್ಧತೆ ಮಾಡಿಕೊಳ್ಳಿ. ಈ ಮದುವೆಯ ಸಮಾರಂಭವನ್ನೇ `ರೀ ಯೂನಿಯನ್‌’ ಎಂದು ಭಾವಿಸಿ ಮೋಜು ಮಜಾ ಮಾಡಲು ಬನ್ನಿ. ಈಗ ಇಷ್ಟೇ ಜನರ ಬಗ್ಗೆ ಮಾತ್ರ ಗೊತ್ತಾಗಿದೆ. ಉಳಿದವರನ್ನು ನಾನು ಫೇಸ್‌ ಬುಕ್‌ ನಲ್ಲಿ ಹುಡುಕಿ ತೆಗಿತೀನಿ. ನಾನು ಎಲ್ಲರ ನಿರೀಕ್ಷೆಯಲ್ಲಿದ್ದೇನೆ.”

ಸದಾ ಹಸನ್ಮುಖಿ ಹಾಗೂ ಮೇಧಾವಿ ವಿದ್ಯಾರ್ಥಿನಿಯಾಗಿದ್ದ ತನುಜಾ ಎಲ್ಲರನ್ನೂ ಒಗ್ಗೂಡಿಸಿ ಒಂದೊಳ್ಳೆ ಕೆಲಸ ಮಾಡಿದ್ದಳು.

ಬೆಂಗಳೂರಿನಲ್ಲಿ ವಾಸವಿದ್ದ ಮಾನಸಾ ಅದೆಷ್ಟೋ ಸಲ ತನುಜಾಳ ಜೊತೆ ಮಾತನಾಡಿದ್ದಳು. ಆದರೆ ಈಗ ಮಾನಸಾ ದ್ವಂದ್ವದಲ್ಲಿದ್ದಳು. ರಮ್ಯಾಳ ಮದುವೆಗೆ ಹೋಗಿ ಎಲ್ಲ ಸ್ನೇಹಿತರನ್ನು ಭೇಟಿಯಾಗುವ ಇಚ್ಛೆ ಅವಳಿಗಿತ್ತು. ಪತಿ ರಮೇಶ್‌ ಮತ್ತು ಮಗಳು ನವ್ಯಶ್ರೀ ಖುಷಿಯಿಂದಲೇ ಅನುಮತಿ ಕೊಟ್ಟರು.

“ಹೋಗು, ನಿನ್ನ ಸ್ನೇಹಿತರ ಬಳಗದೊಂದಿಗೆ ಎಂಜಾಯ್‌ ಮಾಡಿ ಬಾ. ನಾವೇನಾದರೂ ಬಂದರೆ ನಿನ್ನ ಆನಂದಕ್ಕೆ ಕಲ್ಲು ಹಾಕಿದಂತೆ,” ಎಂದು ರಮೇಶ್‌ ಹೇಳಿದ. ಮಾನಸಾ ಮುಗುಳ್ನಕ್ಕಳು.

“ನನಗಂತೂ ರಜೆ ಸಿಗೋದಿಲ್ಲ. ಹೊಸ ಜಾಬ್‌ ಬೇರೆ. ನೀನು ಅವಶ್ಯವಾಗಿ ಹೋಗಿ ಬಾಮ್ಮಾ,”ಎಂದಳು ನವ್ಯಶ್ರೀ.

ರಮೇಶ್‌ ಗೆ ಸೇಲ್ಸ್ ಕ್ಲೋಸಿಂಗ್‌ ಇತ್ತು. ಆದರೆ ಮಾನಸಾ ತನ್ನ ದುಃಖ, ನೋವನ್ನು ಯಾರ ಮುಂದೆಯೂ ಹೇಳಿಕೊಳ್ಳುವಂತಿರಲಿಲ್ಲ.

`ಹ್ಯಾಪಿನೆಸ್‌’ ಗ್ರೂಪ್‌ ನಲ್ಲಿ ಅಖಿಲ್ ‌ನ ಹೆಸರು ಕೂಡ ಇತ್ತು. ಆ ಹೆಸರನ್ನು ನೋಡುತ್ತಿದ್ದಂತೆಯೇ ಮಾನಸಾಳ ಮೈ ಮನಸ್ಸು ಕುದ್ದು ಹೋಗುತ್ತಿತ್ತು. ಕ್ರೋಧದ ಜ್ವಾಲಾಮುಖಿ ಪುಟಿದೇಳುತ್ತಿತ್ತು. ಮಾನಸಾ, ರಮೇಶ್‌ ಹಾಗೂ ನವ್ಯಶ್ರೀಗೆ `ಹ್ಯಾಪಿನೆಸ್‌’ ಗ್ರೂಪ್‌ಬಗ್ಗೆ ಹೇಳಿದ್ದಳು. ಆ ಕುರಿತಂತೆ ನವ್ಯಶ್ರೀ ಹೇಳಿಯೇ ಬಿಟ್ಟಿದ್ದಳು, “ಅಮ್ಮಾ, ಹ್ಯಾಪಿನೆಸ್‌ ಗ್ರೂಪ್‌ ಬಗ್ಗೆ ನೀವು ಸ್ವಲ್ಪವೂ ಹ್ಯಾಪಿ ಆಗಿರುವ ಬಗ್ಗೆ ಕಾಣ್ತಿಲ್ಲವಲ್ಲ. ಆ ಗ್ರೂಪ್‌ ಮಾಡಿದ ಬಳಿಕ ನೀವು ಮತ್ತಷ್ಟು ಉದಾಸ ಹಾಗೂ ದುಃಖಿತರಾಗಿರುವಂತೆ ಕಾಣ್ತಿದೆ.” ಮಾನಸಾ ನಕ್ಕವಳಂತೆ ನಟಿಸುತ್ತಾ, “ಅದು ನಿನ್ನ ಭ್ರಮೆ,” ಎಂದು ಹೇಳುತ್ತಾ ಅವಳ ಮಾತನ್ನು ತಳ್ಳಿ ಹಾಕಿದಳು. ಆದರೆ ಅದೇ ಸತ್ಯವಾಗಿತ್ತು. ಉಳಿದ ಸ್ನೇಹಿತರ ಕಾರಣದಿಂದ ಅವಳು ಗ್ರೂಪ್‌ ಬಿಟ್ಟು ಹೋಗುವ ಹಾಗೆಯೂ ಇರಲಿಲ್ಲ. ಅಖಿಲ್ ‌ನ ಅಸ್ತಿತ್ವ ಅವಳ ಸಹನೆಯ ವ್ಯಾಪ್ತಿಯನ್ನು ಮೀರಿದ್ದಾಗಿತ್ತು. ಹಿಂದೆ ನಡೆದ ಘಟನೆ ಮಾನಸಾಳ ತನುಮನದ ಗಾಯವನ್ನು ಇನ್ನಷ್ಟು ನೋವಾಗುವಂತೆ ಮಾಡುತ್ತಿತ್ತು. ಈ ಕಾರಣದಿಂದ ಅವಳು ಇನ್ನು ಅಪರಾಧೀಪ್ರಜ್ಞೆಯಿಂದ ತೊಳಾಡುತ್ತಿದ್ದಳು. ರಮೇಶ್‌ ನಂತಹ ಅಪ್ಪಟ ಪ್ರೀತಿಪಾತ್ರ ಗಂಡನಿಗೆ ತಾನು ಮೋಸ ಮಾಡಿದ್ದೇನೆ ಎಂದು ಅವಳ ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ಮದುವೆಗೂ ಕೆಲವು ತಿಂಗಳುಗಳ ಮೊದಲು ಅಖಿಲ್ ‌ತನ್ನ ಮೇಲೆ ಅತ್ಯಾಚಾರ ನಡೆಸಿದ ಎಂದು ಅವಳು ಈವರೆಗೂ ರಮೇಶ್‌ ನ ಮುಂದೆ ಹೇಳಲು ಆಗಿರಲಿಲ್ಲ.

ಅಖಿಲ್ ‌ಅವಳ ಸಹಪಾಠಿ. ಅವಳ ಒಳ್ಳೆಯ ಸ್ನೇಹಿತ, ಬಾಲ್ಯದ ಗೆಳೆಯ. ಅವನ ಮೇಲೆ ಅವಳು ಬಹಳ ವಿಶ್ವಾಸ ಇಟ್ಟುಕೊಂಡಿದ್ದಳು. ಮಾನಸಾಳ ಮದುವೆ ರಮೇಶ್‌ ಜೊತೆಗೆ ನಿರ್ಧಾರವಾದಾಗ ಅವಳ ಸ್ನೇಹಿತರೆಲ್ಲ ಬಹಳ ಸಂತೋಷಪಟ್ಟಿದ್ದರು. ರಮೇಶ್‌ ಬೆಂಗಳೂರಿನವನಾಗಿದ್ದ. ಅಖಿಲ್ ‌ಮಾನಸಾಳ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಇರುತ್ತಿದ್ದ. ಮದುವೆ ಕೆಲವು ತಿಂಗಳು ಬಳಿಕ ನಡೆಯಲಿತ್ತು. ಅಖಿಲ್ ‌ನ ಅಕ್ಕ ಸಂಗೀತಾಳಿಗೂ ಮಾನಸಾಳಿಗೂ ಒಳ್ಳೆಯ ಸ್ನೇಹವಿತ್ತು. ಮಾನಸಾ ತನ್ನ ತಾಯಿ ತಂದೆಯ ಏಕೈಕ ಪುತ್ರಿ. ಮಾನಸಾಳಿಗೆ ಏನಾದರೂ ಶಾಪಿಂಗ್‌ ಗೆ ಹೋಗಬೇಕಿದ್ದರೆ, ಸಂಗೀತಾಳೇ ಅವಳಿಗೆ ಸಾಥ್‌ ಕೊಡುತ್ತಿದ್ದಳು. ಮದುವೆ ನಿಶ್ಚಿತಾರ್ಥದ ಬಳಿಕ ಮಾನಸಾ ಯಾವುದೊ ಕೆಲಸದ ನಿಮಿತ್ತ ಸಂಗೀತಾಳನ್ನು ಭೇಟಿಯಾಗಲೆಂದು ಅವಳ ಮನೆಗೆ ಹೋಗಿದ್ದಳು.

ಆಗ ಮೊಬೈಲ್ ‌ಇರಲಿಲ್ಲ. ಹೀಗಾಗಿ ಮಾನಸಾ ಎಂದಿನಂತೆ ಅಖಿಲ್ ನ ಮನೆಯೊಳಗೆ ಹೋಗಿ ಡ್ರಾಯಿಂಗ್‌ ರೂಮಿನಲ್ಲಿ ಕುಳಿತಳು.

“ಅಖಿಲ್, ಅಕ್ಕ ಎಲ್ಲಿದ್ದಾಳೆ….?” ಎಂದು ಮಾನಸಾ ಕೇಳಿದಳು.

“ನೀನು ಕುಳಿತುಕೊ. ಸ್ವಲ್ಪ ಹೊತ್ತಿನಲ್ಲಿಯೇ ಬರುತ್ತಾಳೆ,” ಎಂದ ಅಖಿಲ್‌.

“ಆಂಟಿ ಮತ್ತು ಅಂಕಲ್?”

“ಹೊರಗೆ ಹೋಗಿದ್ದಾರೆ?”

“ಸರಿ ಹಾಗಾದರೆ. ನಾನು ಆಮೇಲೆ ಬರ್ತೀನಿ,” ಎಂದು ಹೇಳುತ್ತಾ ಮಾನಸಾ ಎದ್ದಳು. ಆಗ ಅಖಿಲ್ ‌ಅಳ ಹತ್ತಿರ ಬಂದು, “ಕುಳಿತುಕೋ. ನಾನಿದ್ದೀನಲ್ಲ,” ಎಂದ.

ಮಾನಸಾ ಪುನಃ ಕುಳಿತುಕೊಂಡಾಗ, ಅಖಿಲ್ ಅವಳ ಹತ್ತಿರವೇ ಬಂದು ಕುಳಿತುಕೊಂಡು, “ಯಾವಾಗ ನಿನ್ನ ನಿಶ್ಚಿತಾರ್ಥ ಆಯಿತೊ, ಆಗಿನಿಂದ ನೀನು ಬಹಳ ಸುಂದರವಾಗಿ ಕಾಣ್ತಿದ್ದೀಯಾ….” ಎಂದ ಅಖಿಲ್‌.

ಅವಳು ನಕ್ಕು, “ಥ್ಯಾಂಕ್ಸ್,” ಎಂದು ಹೇಳಿದಳು.

ಆ ದಿನ ಅಖಿಲ್ ‌ಗೆ ಅದೇನಾಗಿತ್ತೋ ಏನೋ…. ಅವನು ಅಷ್ಟೊಂದು ಒಳ್ಳೆಯ ಪವಿತ್ರ ಸ್ನೇಹದ ಮೇಲೆ ಕಳಂಕ ಬರುವಂತೆ ನಡೆದುಕೊಂಡಿದ್ದು ಏಕೆ ಎನ್ನುವ ಬಗ್ಗೆ ಈಗಲೂ ಮಾನಸಾಳಿಗೆ ಸರಿಯಾಗಿ ಗೊತ್ತಾಗಲಿಲ್ಲ.

ಅಖಿಲ್ ‌ಮನೆಯ ಬಾಗಿಲು ಮುಚ್ಚಿ ಮಾನಸಾಳ ಮೇಲೆ ಒಮ್ಮೆಲೆ ರಾಕ್ಷಸನಂತೆ ಮುಗಿಬಿದ್ದ. ಮಾನಸಾ ಕೂಗಿದಳು ಅತ್ತು ಅತ್ತು ವಿನಂತಿಸಿಕೊಳ್ಳುತ್ತಿದ್ದಳು. ಆದರೂ ಅವನು ಅಳನ್ನು ಬಿಡಲಿಲ್ಲ. ಆ ಬಳಿಕ ಅಖಿಲ್ ‌ತಲೆ ಹಿಡಿದುಕೊಂಡು ಕುಳಿತುಬಿಟ್ಟ. ಮಾನಸಾ ಅವನ ಕೆನ್ನೆಗೆ ಸತತವಾಗಿ ಬಾರಿಸಿ ಅಳುತ್ತಲೇ ಅಲ್ಲಿಂದ ತನ್ನ ಮನೆ ಕಡೆಗೆ ಹೊರಟಳು. ಮನೆಗೆ ಬಂದು ಅವಳು ತನ್ನ ಅಪ್ಪ ಅಮ್ಮನ ಮುಂದೆ ನಡೆದ ಘಟನೆಯನ್ನು ವಿವರಿಸಿದಳು. ಆಗ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅವಳು ಭಾವಿ ಪತಿ ರಮೇಶ್‌ ಮುಂದೆಯೂ ಇದನ್ನು ಹೇಳಲು ಇಚ್ಛಿಸಿದ್ದಳು. ಆದರೆ ಅಮ್ಮ ಅಪ್ಪ ಈ ಬಗ್ಗೆ ಯಾರ ಮುಂದೆಯೂ ಬಾಯಿ ಬಿಡಬಾರದು ಎಂದು ಕಟ್ಟಪ್ಪಣೆ ಮಾಡಿದರು. ಅಮ್ಮ ಅಪ್ಪ ಅವಳಿಗೆ ಎಲ್ಲ ರೀತಿಯಲ್ಲೂ ಧೈರ್ಯ ತುಂಬಿದ್ದರು. ಆದರೆ ಮಾನಸಾಳ ಮನಸ್ಸಿನ ಗಾಯ ಇನ್ನೂ ಹಸಿಯಾಗಿಯೇ ಇತ್ತು. ಅವಳು ಈಗಲೂ ಈ ಅಪರಾಧೀಪ್ರಜ್ಞೆಯಿಂದ ಹೊರಬರಲು ಆಗಿರಲಿಲ್ಲ. ರಮೇಶ್ ಜೊತೆಗಿನ ಅಂತರಂಗದ ಕ್ಷಣದಲ್ಲಿ ಅವಳು ಅದೆಷ್ಟೋ ಮಾನಸಿಕ ಕ್ಷೋಭೆ ಅನುಭವಿಸುತ್ತಿದ್ದಳು. ಬಲಾತ್ಕಾರದ ಕಪ್ಪು ಛಾಯೆ ಅವಳ ಕಣ್ಮುಂದೆ ಬಂದು ಅವಳನ್ನು ಮತ್ತಷ್ಟು ವ್ಯಾಕುಲಳನ್ನಾಗಿಸುತ್ತಿತ್ತು. ದೇಹದ ಮೇಲೆ ಗಾಯವಾದರೆ ಕಂಡುಬರುತ್ತದೆ. ಆದರೆ ಮನಸ್ಸಿನ ಮೇಲಾದ ಗಾಯವನ್ನು ಯಾರೊಬ್ಬರೂ ಗಮನಿಸಲು ಆಗಿರಲಿಲ್ಲ.

ಬಳಿಕ ತನುಜಾಳ ಫೋನ್‌ ಬಂತು, “ಮದುವೆಗೆ ಇನ್ನೆರಡೇ ದಿನ ಉಳಿದಿದೆ. ನೀನು ಇಷ್ಟೊಂದು ಹತ್ತಿರವಿದ್ದೂ ಬೇಗ ಬರುತ್ತಿಲ್ಲವಲ್ಲಾ….?” ಎಂದು ಕೇಳಿದಳು.

“ತನು…. ನಾನು ಬರೋದು ಸ್ವಲ್ಪ ಕಷ್ಟ……”

ಅಳ ಮಾತನ್ನು ಮಧ್ಯದಲ್ಲೇ ತಡೆದ ತನುಜಾ, “ಮಾನಸಾ, ನಾನು ನಿನ್ನ ಯಾವ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ನಮ್ಮ ಗ್ರೂಪಿನ ಕೆಲವರು ನಾಳೆಯೇ ಬರಲಿದ್ದಾರೆ. ನೀನು ಆದಷ್ಟು ಬೇಗ ಬಂದು ನನ್ನ ಮನೆ ಸೇರು,” ಎಂದು ಆಗ್ರಹಿಸಿದಳು.

“ಸರಿ ಪ್ರಯತ್ನಿಸ್ತೀನಿ…..”

“ಪ್ರಯತ್ನ ಗಿಯತ್ನ ಏನೂ ಇಲ್ಲ ಬೇಗ ಬಾ…..”

“ಸರಿ. ನಾಳೆಯೇ ಬರ್ತೀನಿ,” ಎಂದಳು ಮಾನಸಾ.

ನಂತರ ಗ್ರೂಪ್‌ ನಲ್ಲಿದ್ದ ಸಂದೇಶ ಓದತೊಡಗಿದಳು. ನಾಳೆ ಯಾರ್ಯಾರು ಬರಲಿದ್ದಾರೆ ಎನ್ನುವುದನ್ನು ಪರಿಶೀಲಿಸಿದಳು. ಕೋಮಲ್, ಶೀತಲ್, ವಿನುತಾ, ಸುಭಾಷ್‌, ಅಂಜಲಿ, ವಿಜಯ್‌ ಹೀಗೆ ಹತ್ತು ಹಲವು ಹೆಸರುಗಳಿದ್ದವು. ಆದರೆ ಅಖಿಲ್ ನ ಹೆಸರೇ ಕಾಣಲಿಲ್ಲ. ಅವಳು ನೆಮ್ಮದಿಯ ನಿಟ್ಟುಸಿರುಬಿಟ್ಟಳು.

ಎಲ್ಲರ ಹಸನ್ಮುಖಿ ಮುಖಗಳು ಅವಳ ಕಣ್ಮುಂದೆ ಬಂದು ಹಾಯ್ದು ಹೋದವು. ಅವಳು ಎಲ್ಲರನ್ನೂ ನೆನಪಿಸಿಕೊಂಡು ಮುಗುಳ್ನಕ್ಕಳು. ಆದರೆ ಅಖಿಲ್ ‌ನ ಮುಖ ನೆನಪಿಸಿಕೊಳ್ಳಲು ಇಷ್ಟಪಡಲಿಲ್ಲ. ಹೀಗಾಗಿ ಅವಳು ಗ್ರೂಪ್‌ ನಲ್ಲಿ ಆ್ಯಕ್ಟಿವ್ ‌ಆಗಿ ಇರುತ್ತಿರಲಿಲ್ಲ. ಅಖಿಲ್ ಕೂಡ ಕೆಲವು ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ `ಹೌದು’ ಅಥವಾ `ಇಲ್ಲ’ ಎಂದಷ್ಟೇ ಉತ್ತರ ಕೊಡುತ್ತಿದ್ದ. ಸ್ನೇಹಿತರ ಖುಷಿ, ನಗು, ಜೋಕ್ಸ್ ಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.

ರಮೇಶ್‌ ಹಾಗೂ ನವ್ಯಶ್ರೀ ಮಾನಸಾಳ ಸಿದ್ಧತೆಗೆ ಸಂಪೂರ್ಣ ಸಹಕಾರ ಕೊಟ್ಟರು. ಅವಳು ಎರಡು ದಿನಗಳ ಮಟ್ಟಿಗೆ ಮೈಸೂರಿಗೆ ಹೊರಟಳು. ಅವಳು ಮೈಸೂರು ತಲುಪುವ ಹೊತ್ತಿಗೆ ಎಲ್ಲ ಸ್ನೇಹಿತರು ಅಲ್ಲಿಗೆ ಬಂದುಬಿಟ್ಟಿದ್ದರು. ಆಕಸ್ಮಿಕವಾಗಿ ಅಖಿಲ್ ‌ನ ಮೇಲೆ ಗಮನ ಹೋದಾಗ ಅವಳ ಕ್ರೋಧದ ಜ್ವಾಲೆ ಒಮ್ಮೆಲೆ ಪುಟಿದೆದ್ದಿತು. ಮನಸ್ಸು ಕಹಿಯಾಯಿತು. ಒಂದು ಸಲ ತಿರಸ್ಕಾರಭರಿತ ನೋಟ ಬೀರಿ ಮುಖ ತಿರುಗಿಸಿದಳು. ಆಮೇಲೆ ಅಪ್ಪಿತಪ್ಪಿಯೂ ಕೂಡ ಅವನತ್ತ ಮುಖ ಮಾಡಲಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಎಲ್ಲಕ್ಕೂ ಕೊನೆಯದಾಗಿ ಬಂದು ತಲುಪಿದ ಅವನ ಬಗ್ಗೆ ಎಲ್ಲರೂ ಟೀಕೆಗಳ ಮಳೆ ಸುರಿಸಿದರು. ಎಲ್ಲ ಗೆಳೆಯರು ಕೈ ಕುಲುಕಿ ನಕ್ಕಿದ್ದೇ ನಕ್ಕಿದ್ದು. ಸಮಯ ಎಲ್ಲರ ಮೇಲೂ ತನ್ನದೇ ಆದ ಪ್ರಭಾವ ಬೀರಿತ್ತು. ಆದರೆ ಎಲ್ಲ ಗೆಳೆಯರು ಈಗಲೂ ಅದೇ ಹಳೆಯ ಸ್ನೇಹಿತರಂತೆ ಖುಷಿಯಿಂದ ಕಾಲ ಕಳೆಯುತ್ತಿದ್ದರು. ಅಖಿಲ್ ‌ಎಲ್ಲರಿಗಿಂತ ಹೆಚ್ಚು ಶಾಂತ ಹಾಗೂ ಏಕಾಂಗಿಯಾಗಿಯೇ ಉಳಿದುಬಿಟ್ಟಿದ್ದ.

ತನುಜಾಳ ಗಂಡ ವಿಕಾಸ್‌ ಹಾಗೂ ಮಗಳು ರಮ್ಯಾ ಎಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತಿಸಿದರು. ಎಲ್ಲರಿಗೂ ಹೋಟೆಲ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ರೂಮ್ ಶೇರ್‌ ಮಾಡಿಕೊಳ್ಳುತ್ತಿದ್ದರು. ಅಖಿಲ್ ‌ನನ್ನು ಹೊರತುಪಡಿಸಿ ಎಲ್ಲರೂ ಒಂದೇ ರೂಮಿನಲ್ಲಿ ಕುಳಿತಿದ್ದರು. ಮಾತುಕಥೆ ನಡೆಸಿದ್ದರು, ಹರಟೆ ಹೊಡೆಯುತ್ತಿದ್ದರು. ಅವರ ನಡುವೆ ಅದೆಷ್ಟೋ ಮಾತುಗಳಿದ್ದವು, ಘಟನೆಗಳ ಮೆಲುಕುಗಳಿದ್ದವು.

ಅಖಿಲ್ ‌ಕಾಣದೇ ಇದ್ದಾಗ ವಿಜಯ್‌ ಕೇಳಿದ, “ಎಲ್ಲಿ ಹೋದ ಆ ಅಖಿಲ್‌. ಅವನು ಬಹಳ ಸೀರಿಯಸ್‌ ಆಗಿದ್ದಾನಲ್ಲ…..?”

“ಹೌದು, ಅವನು ಬಹಳ ಬದಲಾದಂತೆ ಕಾಣ್ತಿದೆ. ಬಹಳ ಮೌನಿ, ಗಂಭೀರ ಆಗಿದ್ದಾನೆ,” ಮೋನಿಕಾ ಹೇಳಿದಳು.

ಅಖಿಲ್ ‌ಅಲ್ಲೆಲ್ಲೂ ಇಲ್ಲದೇ ಇದ್ದಾಗ ಮಾನಸಾ ಬಹಳ ಖುಷಿಯಿಂದ ಸಹಜವಾಗಿರುತ್ತಿದ್ದಳು. ಡಿನ್ನರ್‌ ಗೂ ಸ್ವಲ್ಪ ಮೊದಲು ಪವನ್ ಅಖಿಲ್ ನನ್ನು ಕರೆದುಕೊಂಡು ಬಂದ.

“ಎಲ್ಲಿ ಮಾಯವಾಗಿ ಬಿಟ್ಟಿದ್ಯೋ, ಇಲ್ಲಿಯೇ ಎಲ್ಲರ ಜೊತೆ ಕುಳಿತುಕೊ,” ಎಂದು ಸ್ನೇಹಿತರು ಕೇಳಿದಾಗ ಅಖಿಲ್ ‌ನಗಲೋ ಬೇಡವೋ ಎಂಬಂತೆ ನಕ್ಕು ಎಲ್ಲರ ಜೊತೆ ಕುಳಿತುಕೊಂಡ. ಅವನು ಗಂಭೀರನಾಗಿ ಕುಳಿತುಕೊಂಡಿರುವುದನ್ನು ಕಂಡು ಹಲವರು ಹಲವು ರೀತಿಯ ಪ್ರಶ್ನೆಗಳನ್ನು ಕೇಳತೊಡಗಿದರು.

ಅಷ್ಟರಲ್ಲಿ ಮಾನಸಾ, “ನಾನೀಗ ಬಂದೆ,” ಎಂದು ಹೇಳುತ್ತಾ ಅಲ್ಲಿಂದ ಹೊರ ನಡೆದಳು.

ಅವಳು ನೇರವಾಗಿ ಟೆರೇಸ್‌ ಮೇಲೆ ಹೋಗಿ ಮುಕ್ತ ವಾತಾವರಣದಲ್ಲಿ ಉಸಿರು ತೆಗೆದುಕೊಳ್ಳತೊಡಗಿದಳು. ಅಷ್ಟರಲ್ಲಿಯೇ ಹಿಂದಿನಿಂದ ಏನೋ ಸದ್ದಾಗಿ ಹಿಂತಿರುಗಿ ನೋಡಿದಾಗ ಅಲ್ಲಿ ಅಖಿಲ್ ‌ನನ್ನು ಕಂಡು ಚಕಿತಳಾದಳು. ಕೋಪ ಹಾಗೂ ದ್ವೇಷದ ತೀವ್ರ ಅಲೆ ಅವಳ ಹೃದಯದಲ್ಲಿ ಬಂದುಹೋಯಿತು. ಅವಳು ಏನೊಂದೂ ಮಾತನಾಡದೇ ಅಲ್ಲಿಂದ ಹೋಗಲು ಸಿದ್ಧಳಾದಾಗ, ಅಖಿಲ್ ‌ಅವಳನ್ನು ತಡೆದು, “ಮಾನಸಾ ಪ್ಲೀಸ್‌, ನನ್ನನ್ನು ಕ್ಷಮಿಸು,” ಎಂದು ಕೇಳಿದ.

ಅಖಿಲ್ ‌ನ ದುಃಖಭರಿತ ಕಂಠದಿಂದ ಹೊರಬಂದ ನಡುಗುತ್ತಿದ್ದ ಧ್ವನಿಯನ್ನು ಆಲಿಸಿ ಮಾನಸಾ ಸ್ತಬ್ಧಳಾಗಿ ನಿಂತಳು.

“ನಾನು ನಿನ್ನಿಂದ ಕ್ಷಮೆ ಕೇಳಲು ವರ್ಷಾನುವರ್ಷಗಳಿಂದ ಚಡಪಡಿಸುತ್ತಿರುವೆ. ನನ್ನ ತಪ್ಪು ನನ್ನನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. `ಹ್ಯಾಪಿನೆಸ್‌’ ಗ್ರೂಪ್‌ ನಲ್ಲೂ ನಾನು ಬರುವ ಬಗ್ಗೆ ಸೂಚನೆ ಕೊಡಲಿಲ್ಲ. ನನ್ನಿಂದಾಗಿ ನೀನು ಬರದೇ ಇರು

ವಂತಾಗಬಾರದು ಎನ್ನುವುದು ನನ್ನ ಯೋಚನೆಯಾಗಿತ್ತು. ಇಂದು ನನ್ನ ಮಾತುಗಳನ್ನು ಕೇಳಿಸಿಕೋ ಪ್ಲೀಸ್‌…….” ಅಖಿಲ್ ಅತ್ಯಂತ ಗಂಭೀರ, ಉದಾಸಭರಿತ ಧ್ವನಿಯಲ್ಲಿ ಹೇಳಿದ.

ಮಾನಸಾ ರೇಲಿಂಗ್‌ ಹಿಡಿದುಕೊಂಡು ದಿಗ್ಭ್ರಮೆಯಿಂದ ನಿಂತಿದ್ದಳು. ಒಂದಿಬ್ಬರು ಮಾತ್ರ ಫೋನ್‌ ನಲ್ಲಿ ಮಾತನಾಡುತ್ತಾ ಅತ್ತಿತ್ತ ಹೆಜ್ಜೆ ಹಾಕುತ್ತಿದ್ದರು. ಅಖಿಲ್ ‌ನ ಮುಖದಲ್ಲಿ ಪಶ್ಚಾತ್ತಾಪ ಹಾಗೂ ದುಃಖದ ಭಾವ ಎದ್ದು ಕಾಣುತ್ತಿತ್ತು ಅವನ ಕಣ್ಣುಗಳು ಕಣ್ಣೀರು ತುಂಬಿಕೊಂಡು ನಿಂತಿದ್ದ.

ಅಖಿಲ್ ‌ತನ್ನ ಮಾತು ಮುಂದುವರಿಸುತ್ತಾ, “ನಾನು ಬಹುದೊಡ್ಡ ತಪ್ಪು ಮಾಡಿದ್ದೆ. ಆಗ ನಾನು ಅದೇಕೆ ಹಾಗೆ ರಾಕ್ಷಸನಂತೆ ವರ್ತಿಸಿದೆನೊ ಏನೋ….. ಒಂದೇ ಕ್ಷಣದಲ್ಲಿ ಕೆಳಮಟ್ಟಕ್ಕೆ ತಲುಪಿಬಿಟ್ಟೆ. ನಿನ್ನಂತಹ ಒಬ್ಬ ಒಳ್ಳೆಯ ಸ್ನೇಹಿತೆಯನ್ನು ಕಳೆದುಕೊಂಡೆ. ನಿನ್ನಿಂದಾಗಿ ನಾನೆಂದೂ ಖುಷಿಯಿಂದಿರಲು ಆಗಲಿಲ್ಲ. ಈವರೆಗೂ ನಿನ್ನ ಆ ಕಣ್ಣೀರು, ಅಳು, ಆಕ್ರಂದನ, ನಿನ್ನ ವೇದನೆ ನನ್ನನ್ನು ಕ್ಷಣ ಕ್ಷಣ ಬೆಂಕಿಯ ಜ್ವಾಲೆಯಲ್ಲಿ ಸುಡುತ್ತಿರುತ್ತದೆ. ನನ್ನ ಮೊದಲ ಮದುವೆಯಾದಾಗ ಈ ಅಪರಾಧೀಪ್ರಜ್ಞೆ ನನ್ನನ್ನು ಎಷ್ಟೊಂದು ಆರಿಸಿಕೊಂಡಿತ್ತೆಂದರೆ, ನಾನು ಸಹಜ ಜೀವನ ನಡೆಸಲು ಆಗಲೇ ಇಲ್ಲ. ಹಾಗಾಗಿ ಆ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತು.

“ಮನೆಯರ ಒತ್ತಡಕ್ಕೆ ಮಣಿದು ಪುನಃ ಮದುವೆಯಾದೆ. ಎರಡನೇ ಪತ್ನಿ ಜೊತೆಗೆ ಅದೇ ಅಪರಾಧೀಪ್ರಜ್ಞೆ ನನ್ನನ್ನು ಆವರಿಸಿಕೊಂಡಿರುತ್ತಿತ್ತು. ನಿನ್ನೊಂದಿಗೆ ನಡೆಸಿದ ಕುಕೃತ್ಯ ಯಾವಾಗಲೂ ನನ್ನನ್ನು ನಿದ್ದೆಗೆಡುವಂತೆ ಮಾಡಿತು. ಈ ತಪ್ಪಿಗೆ ನಾನು ಬಹುದೊಡ್ಡ ಸಜೆ ಅನುಭವಿಸಿದೆ. ಈ ಅಪರಾಧೀಪ್ರಜ್ಞೆ ಎರಡನೇ ಸಲ ನನ್ನ ಕುಟುಂಬ ಕೂಡುವಂತೆ ಮಾಡಲಿಲ್ಲ. ಅವಳೂ ಕೂಡ ನನಗೆ ವಿಚ್ಛೇದನ ಕೊಟ್ಟು ಹೊರಟು ಹೋದಳು.

“ಅಮ್ಮಅಪ್ಪ ತೀರಿಕೊಂಡರು. ಅಕ್ಕ ವಿದೇಶದಲ್ಲಿದ್ದಾಳೆ. ನಾನೀಗ ಏಕಾಂಗಿಯಾಗಿದ್ದೇನೆ. ನಾನು ತಪ್ಪು ಮಾಡಿದ್ದೆ. ಅದಕ್ಕೆ ಸಾಕಷ್ಟು ಶಿಕ್ಷೆಯನ್ನು ಅನುಭವಿಸಿರುವೆ. ಈಗ ನನ್ನನ್ನು ಕ್ಷಮಿಸು. ವರ್ಷಾನುವರ್ಷಗಳಿಂದ ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿರುವೆ,” ಎಂದು ಹೇಳಿದ ಅವನ ಕಣ್ಣುಗಳಿಂದ ಕಣ್ಣೀರು ಹರಿಯುತ್ತಲೇ ಇತ್ತು. ಅವನು ಕಣ್ಣೆತ್ತಿ ಅಚ್ಚರಿಯಾಗಿ ನಿಂತಿದ್ದ ಮಾನಸಾಳನ್ನು ನೋಡಿದ ಬಳಿಕ ಅಲ್ಲಿಂದ ಹೊರಡಲು ತಿರುಗಿದ.

ದಣಿದವನಂತೆ ಹೆಜ್ಜೆ ಹಾಕುತ್ತಾ ಹೋದ ಅಖಿಲ್ ‌ನನ್ನು ನೋಡಿ ಅವಳಿಗೆ ಆಘಾತವೇ ಆಯಿತು. ಪುರುಷನಿಗೂ ಇಷ್ಟೊಂದು ಅಪರಾಧೀಪ್ರಜ್ಞೆ ಇರುತ್ತಾ? ಯಾವುದಾದರೂ ಪುರುಷ ಅಪರಾಧ ಮಾಡಿ ವರ್ಷಾನುವರ್ಷ ಕ್ಷಣಕ್ಷಣಕ್ಕೂ ನರಳುತ್ತಾ ಇರುತ್ತಾನೆಯೇ? ಕ್ಷಣಾರ್ಧದ ಆವೇಶ ಪುರುಷನನ್ನು ಈ ರೀತಿ ಜೀವನವಿಡೀ ಆಪೋಷನ ತೆಗೆದುಕೊಳ್ಳುತ್ತಿರುತ್ತದಾ? ರೇಪ್ ಮಾಡಿದ ಬಳಿಕ ಆ ಅಪರಾಧೀಪ್ರಜ್ಞೆ ಅವನ ಜೀವನದ ಮೇಲೆ ಪ್ರಭಾವ ಬೀರಿ ಅವನ ಜೀವನವನ್ನು ಹಾನಿ ಮಾಡುತ್ತಿರುತ್ತಾ? ಅವಳು ವಿಚಲಿತಳಾಗಿದ್ದಳು. ದಿಗ್ಭ್ರಮೆಗೊಂಡಿದ್ದಳು. ಅವಳಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ