ಪತಿ : ಏನಪ್ಪ, ಲೇಡೀಸ್ ಚಪ್ಪಲಿ ಕೊಳ್ಳಬೇಕು. ಒಂದಿಷ್ಟು ಬೇರೆ ಬೇರೆ ತರಹದ್ದು ತೋರಿಸಿ.
ಅಂಗಡಿಯವನು : ನಿಮ್ಮ ಬಜೆಟ್ ಗೆ ತಕ್ಕಂತೆ ಎಲ್ಲಾ ಗುಣಮಟ್ಟದಲ್ಲೂ ಲಭ್ಯ. ಯಾವ ತರಹದ್ದು ಬೇಕು?
ಪತಿ : ಲೈಟ್ ವೆಯ್ಟ್ ಹಾಗೂ ಮೃದು ಆಗಿರಬೇಕು. ದುಡ್ಡು ಎಷ್ಟಾದರೂ ಆಗಲಿ….
ಅಂಗಡಿಯವನು : ಗೊತ್ತಾಯ್ತು ಬಿಡಿ!
ನಗರದ ಯುವ ಪ್ರೇಮಿಗಳಾದ ಗುಂಡ, ಗುಂಡಿ ಡಿನ್ನರ್ ಗೆಂದು ಒಂದು ಹೋಟೆಲ್ ಗೆ ಬಂದಿದ್ದರು.
ಮಾಣಿ : ನಿಮಗೆ ಏನು ತಂದುಕೊಡಲಿ?
ಗುಂಡಿ : ಆ ಚಕ್ರಾಕಾರದ ರೊಟ್ಟಿ ಇದೆಯಲ್ಲ…. ಅದನ್ನೇ ಕೊಡಿ!
ಮಾಣಿ : ನನಗೆ ಗೊತ್ತಾಗಲಿಲ್ಲ.
ಗುಂಡ : ಇವಳು ಈಗ ತಾನೇ ಹಳ್ಳಿಯಿಂದ ಬೆಂಗಳೂರಿಗೆ ಹೊಸದಾಗಿ ಬಂದಿದ್ದಾಳೆ. ಪಿಜ್ಜಾ ತಂದುಕೊಡಿ ಅಂತ ಕೇಳ್ತಿದ್ದಾಳೆ.
ಪಾರ್ವತಿ ತನ್ನೆಲ್ಲ ಗೆಳತಿಯರನ್ನು ಕಿಟೀ ಪಾರ್ಟಿಗೆ ಮನೆಗೆ ಆಹ್ವಾನಿಸಿದ್ದಳು.
ಪಾರ್ಟಿ ಮುಗಿದ ನಂತರ ಅವಳು ಎಲ್ಲರಿಗೂ ಹೇಳಿದಳು, “ಡಾಕ್ಟರ್ ನನಗೆ 2-3 ವಾರ ಕ್ವಾರೆಂಟೈನ್ ಆಗಿರಬೇಕೆಂದು ಹೇಳಿದ್ದಾರೆ. ಅದಕ್ಕೆ ಮುಂಚೆ ಒಂದು ಕಿಟೀ ಪಾರ್ಟಿ ಕೊಡಬಾರದೇಕೆ ಎಂದು ನಿರ್ಧರಿಸಿದೆ. ಈಗ ನೀವೇನಂತೀರಿ?” ಅವರೆಲ್ಲ ಕಣ್ಕಣ್ಣು ಬಿಡುತ್ತಾ ಓಡಿಹೋದರು.
ಆಫೀಸಿನಲ್ಲಿ ಕುಳಿತು ಬೋರ್ ಆಗಿದ್ದ ಪತಿ ಟೈಂಪಾಸ್ ಗೆಂದು ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ಏನೋ ಮೆಸೇಜ್ ಕಳಿಸಿದ, `ಹಾರಲೇ…. ನಾ ಹಾಡಲೇ… ಮುಗಿಲೇ ನಿನ್ನ ಎತ್ತರಕ್ಕೆ….’
ಪತ್ನಿ ಅದನ್ನು ಗಮನಿಸಿದ ನಂತರ ಉತ್ತರಿಸಿದಳು, `ಮುಗಿಲಿನಿಂದ ಧರೆಗೆ ಇಳಿದ ಮೇಲೆ ಅಗತ್ಯವಾಗಿ ತರಕಾರಿ ಕೊಂಡು ಮನೆ ಸೇರುವುದು!’
ಅವಿವಾಹಿತ ಮಗ : ಅಪ್ಪ, ಅಮ್ಮನಲ್ಲಿ ಅದೇನು ಕಂಡು ಮರುಳಾಗಿ ಮದುವೆ ಆದೆ ನೀನು?
ತಂದೆ : ಏನು ಹೇಳಲಪ್ಪ…. ಅವಳ ತುಟಿಯಂಚಿನ ಆ ಸಣ್ಣ ಮಚ್ಚೆ…. ನಾನು ಸಂಸಾರ ಸಾಗರಕ್ಕೆ ಜಿಗಿಯುವಂತೆ ಮಾಡಿತು!
ಮಗ : ಸಾಸುವೆ ಕಾಳಿಗಾಗಿ ಸಾಗರಕ್ಕೆ ಜಿಗಿತವೇ?
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು….
ರಾಧಾ : ನೀವೇನೇ ಹೇಳಿ, ಈ ವಾಟ್ಸ್ ಆ್ಯಪ್ ಬಂದ ಮೇಲೆ ಮಾನವರು ಬಹಳ ಮುಂದುವರಿದುಬಿಟ್ಟರು!
ಸುಧಾ : ಅದೇ ಹೇಗೆ ಹೇಳ್ತೀರಿ?
ರಾಧಾ : ಈಗ ನನ್ನನ್ನೇ ನೋಡಿ, 2-3 ಸ್ಟೇಷನ್ ಹಿಂದೆ ಇಳಿಯಬೇಕಿತ್ತು. ಮುಂದೆ ಬಂದಿದ್ದೇನೆ.
ಪ್ರಿಯಾ : ಏ ನಿನಗೆ ಗೊತ್ತಾ, ಈ ಸಿನಿಮಾಗಳಲ್ಲಿ ಹೀರೋ ಹೀರೋಯಿನ್ ಮಧ್ಯೆ ಹಾಡಿನ ದೃಶ್ಯ ಬಂದಾಗ, ದಿಂಬು ಕಿತ್ತು ಕೋಣೆ ತುಂಬಾ ಹತ್ತಿ ಹರಡುತ್ತಾರಲ್ಲ ಬಿಡಿ ಬಿಡಿಯಾಗಿ…. ಅಂಥದ್ದು ಎಲ್ಲೂ ಸಿಗಲ್ಲ ಅಂತೀನಿ!
ಉಮಾ : ಈಗ ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಳ್ತಿದ್ದಿ?
ಪ್ರಿಯಾ : ಮೊನ್ನೆ ಶನಿವಾರ ನನ್ನನ್ನು ಬಾಯ್ ಫ್ರೆಂಡ್ ಜೊತೆ ಮಾಲ್ ನಲ್ಲಿ ನೋಡಿದ ನಮ್ಮಮ್ಮ ಮನೆಗೆ ಬಂದ ತಕ್ಷಣ ನನ್ನತ್ತ ಬೀಸಿದ ತಲೆದಿಂಬಿನಿಂದ ನಾನು ಒಂದು ಕ್ಷಣ ಕೋಮಾಗೇ ಹೋಗಿಬಿಟ್ಟೆ ಗೊತ್ತಾ….?
ಮೊಮ್ಮಗು : ತಾತಾ, ಈಗ ಎಚ್ಚರವಾಗಿ ಏನೋ ನೋಡ್ತಿದ್ದೀಯಲ್ವಾ, ಎಲ್ಲಿ ಒಮ್ಮೆ ಕಣ್ಣು ಮುಚ್ಚಿಕೋ ನೋಡೋಣ.
ತಾತಾ : ಆಯ್ತು, ಇಗೋ ಕಣ್ಣು ಮುಚ್ಚಿಕೊಂಡೆ.
ಮೊಮ್ಮಗು : ಇರು, ತಕ್ಷಣ ಅಪ್ಪನಿಗೆ ಹೇಳ್ತೀನಿ. ನಿನ್ನೆ ಸಂಜೆ ಆ ಎದುರುಮನೆ ಅಂಕಲ್ ಬಳಿ ಅಪ್ಪ ಹೇಳ್ತಿದ್ದರು, `ಈ ಮುದುಕ ಯಾವಾಗ ಕಣ್ಣು ಮುಚ್ಚುತ್ತಾನೋ ಗೊತ್ತಿಲ್ಲ,’ ಅಂತ!
ಮಹೇಶ : ಲೋ ಸುರೇಶ…. ಬೇಗ ಬಾಗಿಲು ತೆಗಿ… ನಾನು ಸಾಯ್ತಿದ್ದೀನಿ!
ಸುರೇಶ : ಏನಾಯ್ತೋ…. ಯಾಕಿಷ್ಟು ಗಾಬರಿಯಿಂದ 4 ರಸ್ತೆ ದಾಟಿ ಇಷ್ಟು ಹೊತ್ತಿಗೇ ನಮ್ಮ ಮನೆಗೆ ಓಡಿ ಬಂದಿದ್ದೀಯಾ?
ಮಹೇಶ : ಏನು ಹೇಳಲಿ ನಾನು…. ಬೆಳಗ್ಗೆ ಯಾವುದೋ ಮೂಡ್ ನಲ್ಲಿ ಹೆಂಡತಿ ಎದುರು `ನೀನೇ ನೆಲೆಸಿರುವೆ ನನ್ನ ಹೃದಯದ ತುಂಬಾ….’ ಅಂತಾ ಹಾಡಿದ್ದೇ ತಪ್ಪಾಯ್ತು. ಅದು ನಿಜವೇ ಅಲ್ಲವೇ ತಿಳಿಯಲು ಭಾರಿ ಚಾಕು ಹಿಡಿದು ನನ್ನ ಹೃದಯ ಕೊಯ್ದು ನೋಡಲು ಅಟ್ಟಿಸಿಕೊಂಡು ಬರ್ತಿದ್ದಾಳೆ…..
ಟೀಚರ್: ಏಕವಚನ ಮತ್ತು ಬಹುವಚನಕ್ಕೆ ಉದಾಹರಣೆ ಕೊಡಿ.
ಗುಂಡ : ನವ ವಧು ತನ್ನ ಗಂಡನನ್ನು ಕರೆಯುವ ಹಾಗೂ ತವರಿನವರನ್ನು ಹೊಗಳುವ ವಿಧಾನ!
ಗುಂಡ ಗುಂಡಿಯನ್ನು ಪ್ರೇಮಿಸುತ್ತಾ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ. ಅವಳು ಕ್ಯಾರೇ ಅನ್ನಲಿಲ್ಲ.
ಅವನ ಕಾಟ ಹೆಚ್ಚಿದಾಗ, ತನ್ನ ಗ್ಲಾಮರ್, ಫ್ಯಾಷನ್ ಖರ್ಚು ವಹಿಸಬಲ್ಲೆಯಾ ಎಂದು ದಬಾಯಿಸಿದಳು. ಗುಂಡ ಆಗುತ್ತದೆ ಎಂದು ಒಪ್ಪಿದ.
ಸಂಜೆ ಭೇಟಿಯಾಗಲು ಹೇಳಿದ ಗುಂಡಿ, ಅಡಿಯಿಂದ ಮುಡಿಯವರೆಗೆ ಹಳದಿಮಯವಾಗಿ ಬಂದಿದ್ದಳು. ಕಳೆದ ವಾರವಿಡೀ ಜಾಂಡೀಸ್ ನಿಂದ ನರಳುತ್ತಿದ್ದ ಅವಳು ಹಳದಿ ಕಂಗಳು, ಹಳದಿ ನೇಲ್ ಪಾಲಿಶ್, ಹೇರ್ ಕಲರ್ ಮಾತ್ರವಲ್ಲದೆ ಮ್ಯಾಚಿಂಗ್ ಗೆಂದು ಹಲ್ಲುಜ್ಜದೆಯೇ ಬಂದಿದ್ದಳಂತೆ!
ಇದನ್ನು ಹತ್ತಿರದಿಂದ ನೋಡಿ ತಿಳಿದ ಗುಂಡ, ಅಲ್ಲಿಂದ ಓಡಿಹೋದವನು ಮತ್ತೆ ಅವಳಿಗೆ ಕಾಣಲೇ ಇಲ್ಲವಂತೆ!
ರಶ್ಶಾದ ಬಸ್ಸಿನಲ್ಲಿ ಇಬ್ಬರು ಹುಡುಗಿಯರು ನನಗೆ ತನಗೆ ಸೀಟ್ ಬೇಕೆಂದು ಕಿತ್ತಾಡುತ್ತಿದ್ದರು.
ಇದನ್ನು ಗಮನಿಸಿದ ಒಬ್ಬ ವೃದ್ಧೆ ಅವರಿಗೆ ನಯವಾಗಿ, “ನಿಮ್ಮಲ್ಲಿ ಯಾರು ಕಿರಿಯರೋ ಅವರು ಇನ್ನೊಬ್ಬರಿಗೆ ಕುಳಿತುಕೊಳ್ಳಲು ಬಿಡಿ!” ಎಂದು ಸಲಹೆ ನೀಡಿದರು.
ನಾನಲ್ಲ ತಾನಲ್ಲ ಹಿರಿಯರು ಎಂದು ಅವರು ಕಿತ್ತಾಟ ಶುರು ಮಾಡಿದಾಗ, ಇನ್ನೊಬ್ಬ ತಾತಾ ಬಂದು, ಆ ಅಜ್ಜಿ ಪಕ್ಕ ಕುಳಿತೇಬಿಟ್ಟರು.
ಶೆಟ್ಟರ ಅಂಗಡಿ ಯಾವಾಗಲೂ ಗ್ರಾಹಕರಿಂದ ತುಂಬಿರುತ್ತಿತ್ತು. ವ್ಯಾಪಾರ ಅಷ್ಟು ಜೋರಾಗಿತ್ತು. ಅವರ ಅಂಗಡಿ ಎದುರೇ ಅತ್ಯಾಧುನಿಕ ಫುಲ್ ಪದವೀಧರ ಹೊಸ ಅಂಗಡಿ ತೆರೆದ. ತನ್ನ ಡಿಗ್ರಿಗಳಿಂದ ಶೆಟ್ಟರ ವ್ಯಾಪಾರಕ್ಕೆ ನಷ್ಟ ಮಾಡಲೇಬೇಕೆಂದು ನಿರ್ಧರಿಸಿದ.
ಎದುರಾಳಿಗೆ ಕಾಂಪಿಟಿಶನ್ ಕೊಡಲು ಸರಕುಗಳ ಬೆಲೆ ಕಡಿಮೆ ಮಾಡುವುದು ಹಳೇ ಸ್ಟಾಟರ್ಜಿ ಎಂದು ಓದಿದ್ದನ್ನು ನೆನಪಿಸಿಕೊಂಡ.
5 ರೂ.ಗೆ ಕೊಂಡ ತೆಂಗಿನಕಾಯನ್ನು ಶೆಟ್ಟರು 10 ರೂ.ಗೆ ಮಾರುತ್ತಿದ್ದರು. ಇವನು ಆಗ ಕಾಯಿ ಬೆಲೆಯನ್ನು ಬೇಕೆಂದೇ 8 ರೂ.ಗೆ ಇಳಿಸಿ ಮಾರಿದ. ಶೆಟ್ಟರು ಬಿಟ್ಟಾರಾ? ಅವರೂ 8 ರೂ.ಗಳಿಗೆ ಇಳಿಸಿದರು. ಎದುರಾಳಿಯನ್ನು ಮಣಿಸುವ ಮತ್ತೊಂದು ಅಸ್ತ್ರ ಎಂಬ ತನ್ನ ಪುಸ್ತಕೀಯ ಜ್ಞಾನ ಪ್ರದರ್ಶಿಸಲು ಅವನು 6 ರೂ.ಗೆ ಇಳಿಸಿದ. ಹಾಗೆ ಮಾಡಿದರೂ ಶೆಟ್ಟರು ತನ್ನಂತೆಯೇ ಬೆಲೆ ಇಳಿಸಿದ್ದರೂ, ಅವರ ವ್ಯಾಪಾರ ಜೋರಾಗಿರುವುದನ್ನು ಗಮನಿಸಿ ಇವನು ದಂಗಾದ.
ಮೊದಲು ತುಸು ಲಾಸ್ ಆದರೂ ಅದು `ಸೋಲೇ ಗೆಲುವಿನ ಸೋಪಾನ’ ಎಂಬ ತತ್ವ ನಂಬಿ ಮುಂದುವರಿಯಬೇಕು ಎಂದು ಹಠ ಬಿಡದ ತ್ರಿವಿಕ್ರಮನಂತೆ ಈ ಸಲ ಶೆಟ್ಟರನ್ನು ಸೋಲಿಸುವುದು ಶತಸಿದ್ಧ ಎಂದು ಅಲನು ಕಾಯಿ ಬೆಲೆಯನ್ನು 4. ರೂ.ಗೆ ಇಳಿಸಿ ನಷ್ಟದಲ್ಲೇ ಮಾರತೊಡಗಿದ.
ಶೆಟ್ಟರೂ 4 ರೂ.ಗೆ ಇಳಿಸಿ ಕಾಯಿ ಮಾರತೊಡಗಿದರು. ಇವನ ವ್ಯಾಪಾರವೇನೋ ದ್ವಿಗುಣಗೊಂಡಿತು. ಆದರೆ ಶೆಟ್ಟರ ವ್ಯಾಪಾರ ಚೆನ್ನಾಗಿಯೇ ಇತ್ತು. ಇವನು ಎಣಿಸಿದಂತೆ ಅವರು ಅಂಗಡಿ ಬಾಗಿಲು ಹಾಕಿ ಬಂದ್ ಮಾಡಲಿಲ್ಲ. ಹೀಗೇ 5-6 ತಿಂಗಳು ನಡೆಯಿತು. ಇವನಿಗೆ ಅಪಾರ ನಷ್ಟ ಆಗತೊಡಗಿತು.
ಒಂದು ದಿನ ಈ ಹೋಟೆಲ್ ನಲ್ಲಿ ತಲೆ ಮೇಲೆ ಕೈ ಹೊತ್ತು ಕಾಫಿ ಕುಡಿಯುತ್ತಿರುವಾಗ, ಶೆಟ್ಟರೂ ಸಹ ಅಲ್ಲಿಗೆ ಬಂದರು. ಇವನೇ ಅವರನ್ನು ಕರೆಸಿ, ಕಾಫಿಗೆ ಆರ್ಡರ್ ನೀಡುತ್ತಾ, “ನಮ್ಮಿಬ್ಬರ ಪೈಪೋಟಿಯಲ್ಲಿ ದಿನೇ ದಿನೇ ಇಬ್ಬರಿಗೂ ಲಾಸ್ ಆಗುತ್ತಿದೆ. ಕಾಯಿ ವ್ಯಾಪಾರದಿಂದ ನನಗೆ ಸುಮಾರು 50 ಸಾವಿರ ಲಾಸ್ ಆಯ್ತು. ನಿಮಗೆಷ್ಟು ಲಾಸು?” ಎಂದು ಕೇಳಿದ.
ಹಳೇ ಹುಲಿ ಶೆಟ್ಟರು ನಸುನಗುತ್ತಾ ಹೇಳಿದರು, “ನಾನು ಯಾಕೆ ಲಾಸ್ ಮಾಡಿಕೊಳ್ಳಲಿ? ನಿಮ್ಮ ಅಂಗಡಿಯಿಂದ 4 ರೂ.ಗೆ ಕಾಯಿ ತರಿಸಿ ಅದನ್ನೇ ನಾನು ಮಾರುತ್ತಿದ್ದೆ!” ಎನ್ನುವುದೇ?