*ಕವನ: ಬಿಡುಗಡೆ*
ಸೂತ್ರದ ಗೊಂಬೆಯೇನು ನಾನು?
ನನಗೂ ಮನಸೆಂಬುದಿಲ್ಲವೇನು?
ತವರಿನಟ್ಟದಲಿ ಕನಸೆಲ್ಲ ಕಟ್ಟಿಟ್ಟು
ನಿನ್ನೆಡೆಗೆ ಬಂದೆನು ಅಡಿಯನಿಟ್ಟು
ಕಣ್ಣಂಚ ಕಂಬನಿ ಅಲ್ಲಲ್ಲೇ ಒರೆಸಿ
ಬಾರದ ನಗುವ ತುಟಿಯೊಳಿರಿಸಿ
ನೀ ಕುಣಿಸಿದಂತೆ ಕುಣಿದೆನು ನಲ್ಲ
ಥೈ ಥೈ ತಕ ಥೈ…
ಕುಣಿವ ಹೆಜ್ಜೆಯು ಸೋತಿಹುದು
ತೊಟ್ಟ ಗೆಜ್ಜೆಯೂ ಸವೆದಿಹುದು
ಬಿಡುಗಡೆ ಬಯಸಿದೆ ಕಣ ಕಣವು
ಮುಗಿದಿದೆ ದೊರೆ ನಮ್ಮಋಣವು
ಬಹುಕಾಲ ಬಾಳಿದೆನು ನೆರಳಾಗಿ
ತುಸುಕಾಲ ಬಾಳಲೇ ನನಗಾಗಿ?
ಮಾತಿಂದ ನೀ ಎನ್ನ ಜರಿಯದಿರು
ಕಣ್ಣಿಂದಲೇ ಇರಿದೆನ್ನ ಕೊಲ್ಲದಿರು
ಕಳುಹು ಬಾರ ಬಾಗಿಲಿಗೆ ಬಂದು.
ಬಂಧ ಮುಕ್ತವಾಗಿಸು ನೀ ಇಂದು…!
ಜಾನಕಿ ರಾವ್.
ಕಥೆ
*ನನಗಾಗಿ ನಾನು*
ಜಾಹ್ನವಿ!!! ಸೂರ್ಯ ನೆತ್ತಿಯ ಮೇಲೆ ಬಂದರೂ ಇನ್ನು ಮಲಗಿದೀಯಲ್ಲ ಏಳು…! ನಾಳೆ ನಿನ್ನ ನೋಡಲು ವರನ ಕಡೆಯವರು ಬರ್ತಿದಾರೆ ತುಂಬಾ ಒಳ್ಳೆಯ ಸಂಬಂಧವಂತೆ ಜೋಯಿಸರು ಹೇಳ್ತಿದ್ರು.
ಅಮ್ಮಾ ಏನಮ್ಮಾ ನಿಂದು ಬೆಳಿಗ್ಗೆ ಬೆಳಿಗ್ಗೆನೇ…!?
ಪುಟ್ಟ ,ಈ ಸಂಬಂಧ ಕುದುರಿದರೆ ಶುಭಸ್ಯಶೀಘ್ರಂ ಅಂತ ಮದುವೆ ಕಾರ್ಯವೊಂದು ನೆರವೇರಲಿ ಅಷ್ಟು ಸಾಕು ನಮ್ಮ ಮನಸಿಗೂ ನೆಮ್ಮದಿ ಕಣಮ್ಮಾ…! ಅಂತ ಮನದ ಮಾತುಗಳನ್ನು ಹೇಳುತ್ತ ಒಂದು ಕ್ಷಣ ಭಾವುಕತೆ ಆವರಿಸಿತು ಅಚಲಾಳಿಗೆ.
ಅಷ್ಟರಲ್ಲಿ ಅಚಲಾ…! ಅಚಲಾ ಅಂತ ಕರೆಯುತ್ತಲೇ ಮನೆಯೊಳಗೆ ಬಂದ ಅಶೋಕ ನೋಡು ನೀನು ಹೇಳಿದ ಸಾಮಾನುಗಳನ್ನೆಲ್ಲ ತಂದಿದೀನಿ…ಅಂತ ಹೇಳುತ್ತ ಅರೇ ಏನಾಯ್ತು ಯಾಕೀ ಕಣ್ಣೀರು ಅಂತ ಗಾಬರಿಯಿಂದ ಕೇಳಿದಾಗ,
ಏನಿಲ್ಲ ಏನಿಲ್ಲ ರೀ ಅಂತ ಕಣ್ಣೀರ ಮರೆಮಾಚಿ ಕೈಯಲ್ಲಿನ ಚೀಲ ತೆಗೆದುಕೊಂಡು ಒಳನಡೆದಳು ಅಚಲ.
ಸಿಹಿಗನಸಿನ ಲೋಕದಲ್ಲಿ ವಿಹರಿಸುತ್ತ ಮಲಗಿರುವ ಮಗಳ ತಲೆ ಮೇಲೆ ಪ್ರೀತಿಯಿಂದ ಕೈ ಸವರುತ್ತ ಎಷ್ಟು ಬೇಗ ದೊಡ್ಡವಳಾಗಿ ಬಿಟ್ಟೆ ಕಂದ ಎನ್ನುತ್ತಲೇ,
ತಂದೆಯ ಬೆಚ್ಚನೆಯ ಸ್ಪರ್ಶದಿಂದ ಥಟ್ಟನೆ ಎಚ್ಚೆತ್ತ ಜಾಹ್ನವಿ ಅಪ್ಪ ನೋಡಿಪ್ಪ ಈ ಅಮ್ಮಂದು ಯಾವಾಗಲೂ ಇದೇ ಗೋಳು ನನಗಂತೂ ಅರ್ಥವಾಗ್ತಿಲ್ಲ…!
ಯಾವುದೋ ತುಂಬಾ ಒಳ್ಳೆಯ ಸಂಬಂಧವಂತೆ ಜೋಯಿಸರು ಹೇಳಿದ್ರಂತೆ…! ಇವಳದ್ದು ಮತ್ತದೇ ರಾಗ ಶುರುವಾಯ್ತು. ಅಪ್ಪ ನನಗೆ ಇಷ್ಟು ಬೇಗ ಮದುವೆ ಮಾಡಿಕೊಳ್ಳುವ ಆಸೆ ಖಂಡಿತ ಇಲ್ಲ,ನೀವಾದರೂ ನನ್ನ ಮನದ ಆಸೆಯನು ಅರ್ಥ ಮಾಡ್ಕೋಳ್ಳಿ ಅಪ್ಪ ಪ್ಲೀಸ್…!
ಜಾಹ್ನವಿ ನನ್ನ ಮಾತು ಸಮಾಧಾನದಿಂದ ಕೇಳು ಕಂದಾ… ! ನೀನು ಇಂಜಿನಿಯರಿಂಗ್ ಮುಗಿಸಿ ಕೆಲಸ ಸಿಕ್ಕ ಮೇಲೆ ಮದುವೆ ಮಾಡಬೇಕೆಂಬುದು ನಿಮ್ಮ ಅಮ್ಮನದಷ್ಟೇ ಅಲ್ಲ ನನ್ನ ಹೊಂಗನಸು ಕೂಡ.
ದೇವರ ದಯೆಯಿಂದ ಇಷ್ಟು ಒಳ್ಳೆಯ ಸಂಬಂಧ ನಮ್ಮ ಮನೆಗೇ ಹುಡುಕಿಕೊಂಡು ಬಂದಿರುವಾಗ ಬೇಡ ಅನ್ನುವುದು ಸರಿಯಲ್ಲ ಪುಟ್ಟ, ನೋಡಿ ಪರಸ್ಪರ ಒಪ್ಪಿಗೆಯಾದರೆ ಮಾತ್ರ ಮುಂದುವರೆಯೋಣ…! ಇಲ್ಲದಿದ್ದರೆ ಬೇಡಾ ಓಕೆ ನಾ.. ಅಂತ ರಮಿಸಿದಾಗ,
ಒಲ್ಲದ ಮನಸ್ಸಿನಿಂದಲೇ ಅಪ್ಪನ ಕೈ ಕುಲುಕಿ ಸರಿಯೆಂದು ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದಳು ಜಾಹ್ನವಿ.
ಮರುದಿನ ಬೆಳಿಗ್ಗೆಯೇ ಮನೆಯಲ್ಲಿ ಸಂಭ್ರಮದ ವಾತಾವರಣ…! ಅಜ್ಜ ಅಜ್ಜಿಯರ ಜೊತೆಗೆ ಸೋದರ ಮಾವನ ಪರಿವಾರವೂ ಬಂದಿಳಿದಾಗ ಮನೆಯು ನಿಜಕ್ಕೂ ಮದುವೆ ಮನೆಯಂತೆ ಕಂಗೊಳಿಸುತ್ತಿತ್ತು.ಅಂತೂ ಇಂತೂ ಮನೆಯವರೆಲ್ಲರ ಒತ್ತಾಯದ ಮೇರೆಗೆ ಅವರಿಷ್ಟದಂತೆಯೇ…ಆಯ್ತು ಎನ್ನುತ್ತಲೇ ಜಾಹ್ನವಿ ಸಮರ್ಥನ ಮಡದಿಯಾಗಿ ಮನೆಮನದ ಹೊಸ ಬಾಳಿನ ಹೊಸ್ತಿಲಲಿ ನಿಂತಿದ್ದಳು.
ತಂದೆ ತಾಯಿಗೆ ಒಬ್ಬಳೇ ಮಗಳೆಂದು ತುಂಬಾ ಮುದ್ದಿನಿಂದ ಮುತ್ತು…! ಮುತ್ತಿನಂತೆ ಕಣ್ರೆಪ್ಪೆಯಲ್ಲಿಟ್ಟು ನೋಡಿಕೊಂಡಿದ್ದ ಹೆತ್ತವರನು ಅಗಲಿದ ನೋವಿನಿಂದ ಮನದಾಳದಿ ದುಃಖದ ಕಟ್ಟೆಯೊಡೆದು ಅದಾಗಲೇ ಹೊರಹೊಮ್ಮಿತ್ತು.
ಗಂಡನ ಮನೆಗೆ ನಂದಾದೀಪವಾಗಿ ಬಂದ ಜಾಹ್ನವಿಗೆ ಒಂದೆರಡು ದಿನಗಳಲ್ಲಿಯೇ ಕಷ್ಟಪಟ್ಟು ಗಿಟ್ಟಿಸಿದ ಕೆಲಸಕ್ಕೆ ರಾಜೀನಾಮೆ ಕೊಡುವಂತೆ ಮನೆಯ ಉಸ್ತುವಾರಿಯದು ಹೆಗಲೇರಿತ್ತು. ಅತ್ತೆ ಮಾವನ ಆಸೆ ಆಕಾಂಕ್ಷೆಗಳ ಜೊತೆಗೆ ಗಂಡ, ಒಬ್ಬ ನಾದಿನಿ, ಮೈದುನನ ಬೇಕು ಬೇಡಗಳನ್ನರಿತು ಬೆರೆತು ಬದುಕಿನ ಬಂಡಿ ಮುನ್ನಡೆದಿತ್ತು.
ಬಾಳ ಸಂಗಾತಿಯಾದ ಸಮರ್ಥ ನಿಗೆ ಯಾವಾಗಲೂ ತನ್ನ ಹೆತ್ತವರು ಮತ್ತು ಒಡಹಟ್ಟಿದವರ ಬಗ್ಗೆಯೇ ಯೋಚನೆ. ನವವಿವಾಹಿತ ಜೋಡಿ ಒಂದು ದಿನವೂ
ಮಧುಚಂದ್ರ, ಸಿನಿಮಾ ಪಾರ್ಕ್ ಅಂತ ಸುತ್ತುವ ಅವಕಾಶ ಒದಗಿ ಬರಲೇ ಇಲ್ಲ. ಏಕಾಂತದಲ್ಲಿ ಕೂಡ ಕಷ್ಟ-ಸುಖ ಕೇಳುವ ಗಂಡನ ಪ್ರೀತಿ ಮತ್ತು ಕಾಳಜಿಯಂತೂ ಗಗನ ಕುಸುಮವಾಗಿತ್ತು.ಯಾಂತ್ರಿಕ ಜೀವನದಡಿಯಲ್ಲಿ ನಾದಿನಿ, ಮೈದುನರ ಮದುವೆ ಮಾಡಿ ಕಳಿಸುವ ಹೊತ್ತಿಗೆ ಅವಳಿ ಜವಳಿ ಗಂಡು ಮಕ್ಕಳು ಅಖಿಲ್ ಮತ್ತು ನಿಖಿಲ್ ರ ಆಗಮನದಿಂದ ಜಾಹ್ನವಿಯ ಜೀವನದಲ್ಲಿ ಹೊಸಬೆಳಕು ಮೂಡಿತ್ತು.
ಸುಂದರ ಕನಸು ನನಸಾಗುವ ಭರದಲ್ಲಿಯೇ ಅಲ್ಲಿಂದಲೇ ಬಾಳ ಪಯಣದ ಹಾದಿ ಇನ್ನಷ್ಟು ಕಠಿಣವಾಗುತ್ತಾ ಹೋಯಿತು, ಎಲ್ಲವನ್ನೂ ಕಣ್ಣಿಗೆ ಒತ್ತಿಕೊಂಡು ಖುಷಿಯಿಂದ ಆಯ್ತು ಎನ್ನುತ್ತಲೇ ತನ್ನೆಲ್ಲ ಕರ್ತವ್ಯಗಳನ್ನು ಸಮಯಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಳು. ಕಾಲಾಂತರದಲ್ಲಿ ಅತ್ತೆ ಮಾವನ ಆರೈಕೆ ಬಹು ಕಷ್ಟವಾದರೂ ಎಷ್ಟೇ ನಿಷ್ಠೆಯಿಂದ ಮಾಡಿದರೂ ವಯೋ ಸಹಜವಾದ ಕಾಯಿಲೆಯಿಂದ ಅವರು ಇಹ ಲೋಕದ ಪಯಣ ಮುಗಿಸಿದ್ದರು.
ಪ್ರತಿ ದಿನ ಮಕ್ಕಳ ಬೆನ್ನೆಲುಬಾಗಿ ಸಹಕರಿಸಿ ಧೈರ್ಯದಿಂದ ಸಂಸಾರ ರಥದ ಸಾರಥಿಯಾದ
ನನಗೆ ಇತ್ತೀಚೆಗೆ ಯಾಕೋ ಮನಸ್ಸಿಗೆ ಸಮಾಧಾನವೇ ಸಿಗುತ್ತಿಲ್ಲ ಅಂತ ಅದೆಷ್ಟೋ ಸಲ ಚಿಂತಿಸಿದ್ದೆ ಬಂತು… ಸ್ಪಷ್ಟ ಚಿತ್ರಣ ಮಾತ್ರ ಕಣ್ಮುಂದೆ ಇದ್ದರೂ ಅರಿಯದಾದೆ. ಆಗ ಅನಿಸಿದ್ದು,
ಹುಟ್ಟಿದಾಗಿನಿಂದ ಹೆತ್ತವರು, ಕೈ ಹಿಡಿದ ಗಂಡ ಜೊತೆಗೆ ಅವನ ಮನೆಯವರು,ಮಕ್ಕಳಿಬ್ಬರ ಆಸೆ ಮತ್ತು ಆಕಾಂಕ್ಷೆಗಳ ಅಡಿಯಲ್ಲಿ ಬದುಕು ಸವೆಸಿದೆನಲ್ಲ,ನನ್ನಾಸೆ ಆಕಾಂಕ್ಷೆಗಳ ಕುರಿತು ಅರೆಕ್ಷಣವೂ ಯೋಚಿಸದಷ್ಟು ಮೂಢಳಾಗಿ ಎಲ್ಲರ ಕಾಳಜಿ, ಆರೈಕೆ ಮಾಡುವುದರಲ್ಲಿಯೇ ಇಷ್ಟು ವರ್ಷಗಳ ಕಾಲ ವ್ಯಸ್ತಳಾಗಿದ್ದೆ…!
ಹೌದು!!! ಇಷ್ಟೆಲ್ಲ ಕಷ್ಟಪಟ್ಟು ದುಡಿಯುವ ನನಗೆ ಪ್ರತಿಯಾಗಿ ಸಿಕ್ಕಿದ್ದೇನು…!? ನೋಡುಗರ ದೃಷ್ಟಿಯಲ್ಲಿ ನಮ್ಮದು ಸುಖೀ ಕುಟುಂಬವೇ ಆರ್ಥಿಕವಾಗಿ ತುಂಬಾನೇ ಶ್ರೀಮಂತಿಕೆಯಿದ್ದರೂ ಮನೆಯವರಲ್ಲಿ ಹೃದಯ ಶ್ರೀಮಂತಿಕೆಯ ಕೊರತೆ ತಾಂಡವವಾಡುತ್ತಿತ್ತು. ಗಂಡ ಮಕ್ಕಳಿಗೆ ತಮ್ಮಿಂದಲೇ ಎಲ್ಲ ತಾವೇ ಶ್ರೇಷ್ಠರೆಂಬ ಭಾವ…! ಗೃಹಿಣಿಯಾಗಿರುವ ನಾನು ಇವರೆಲ್ಲರ ದೃಷ್ಟಿಯಲ್ಲಿ ಕೂಲಿಯಾಳಿಗಿಂತ ಕಡೆಯಾಗಿ ಹೋಗಿದ್ದೇನೆ…! ಹಿಡಿ ಪ್ರೀತಿ ಮತ್ತು ತುಸುವೇ ಕಾಳಜಿ ತೋರುವ ಒಂದು ಜೀವವೂ ಇರದ ಜೀವನವೂ ಒಂದು ಜೀವನವೇ…!? ಈ ಪಂಜರದ ಗಿಣಿಯಂತಹ ಬದುಕು ನನಗೆ ಬೇಡಾ ಇನ್ನಾದರೂ ನಾನು ನನ್ನನ್ನು ಮೊದಲು ಪ್ರೀತಿಸಬೇಕು, ನನ್ನಿಷ್ಟದ ಹವ್ಯಾಸಗಳನ್ನು ಬೆಳೆಸಿಕೊಂಡು ಬದುಕಿನಲ್ಲಿ ಹೊಸ ಹೆಜ್ಜೆಯಿಡಬೇಕು ಎಂದುಕೊಂಡು,
ಬಿಡುಗಡೆ ಬಯಸಿದೆ ಕಣ ಕಣವು
ಮುಗಿದಿದೆ ದೊರೆ ನಮ್ಮ ಋಣವು…!
ಎಂದು ಮನದಲ್ಲಿಯೇ ದೃಢ ನಿರ್ಧಾರ ಮಾಡಿ ತನ್ನ ಮೆಚ್ಚಿನ ಸ್ನೇಹಿತೆ ಅವನಿ ಗೆ ಕಾಲ್ ಮಾಡಿದಳು.
ಹಾಯ್ !!! ಅವನಿ ಹೇಗಿದೀಯಾ!?
ನಾನು ಸೂಪರಾಗಿದೀನಿ ಕಣೇ ನೀನು ಹೇಗಿದ್ದಿ ಮುದ್ದು ಅಂತ ಕೇಳುತ್ತಲೇ ಜಾಹ್ನವಿ,
ತನ್ನ ಮನದ ಮಾತುಗಳನ್ನು ಅರುಹಲು ಕೇಳಿದ ಅವನಿ…! ತುಂಬಾ ಖುಷಿಯಿಂದ ಸಧ್ಯ ಈಗಲಾದರೂ ನಿನಗೆ ನಿನ್ನ ಮೇಲಿನ ಪ್ರೀತಿಯ ಅರಿವಾಯ್ತಲ್ಲ…! ಅಷ್ಟು ಸಾಕು ಆದಷ್ಟು ಬೇಗ ಬಾ ನಾನು ನಮ್ಮದೇ ಆದಂತಹ ಯಶಸ್ವಿನಿ ಹೆಲ್ತ್ ಆಂಡ್ ಹೋಮ್ ಕೇರ್ ನಲ್ಲಿ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಮಾಡ್ತೀನಿ…! ಓಕೆ ಟೇಕ್ ಕೇರ್ ಸಿ ಯೂ ಸೂನ್… ಬೈ ಅಂತ ಫೋನಿಟ್ಟಳು.
ಸಂಜೆಯ ಚಹಾದೊಂದಿಗೆ ಸಮರ್ಥನ ಮುಂದೆ ತನ್ನ ಮನದ ದೃಢ ನಿರ್ಧಾರದಂತೆ…! ಇನ್ನುಳಿದ ದಿನಗಳನ್ನು ತನ್ನಿಷ್ಟದಂತೆಯೇ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ತನ್ನ ಆತ್ಮೀಯ ಗೆಳತಿ ಅವನಿ ಯ ಜೊತೆಗೆ ಇರುವುದಾಗಿ ತಿಳಿಸಿ, ಗಂಡ ಮತ್ತು ಮಕ್ಕಳ ಪ್ರತ್ಯುತ್ತರಕ್ಕೂ ಕಾಯದೇ ತನ್ನ ಬಟ್ಟೆಬರೆಗಳನ್ನು ಜೋಡಿಸಿಕೊಳ್ಳಲು ತನ್ನ ರೂಮಿನತ್ತ ನಡೆದರೆ…! ಅಪ್ಪ, ಮಕ್ಕಳು ಜಾಹ್ನವಿಯ ಈ ನಡೆನುಡಿಯಿಂದ ಆಶ್ಚರ್ಯಚಕಿತರಾಗಿ ಒಬ್ಬರ ಮುಖ ಒಬ್ಬರು ನೋಡುತ್ತ…! ಹೆಂಡತಿ ಮತ್ತು ತಾಯಿಯ ಕುರಿತು ತಮ್ಮಿಂದಾದ ನಿರ್ಲಕ್ಷ್ಯ ದ ವರ್ತನೆಗೆ ಮಾತು ಬಾರದೇ ಮೂಕರಾಗಿದ್ದರು.
ತನ್ನೆಲ್ಲ ಲಗೇಜ್ ತೆಗೆದುಕೊಂಡು ಬಂದ ಜಾಹ್ನವಿಗೆ ಗಂಡ ಮತ್ತು ಮಕ್ಕಳ ಮುಖ ನೋಡಿ ಸ್ವಲ್ಪ ಬೇಜಾರಾದರೂ ಅವರೆಲ್ಲರ ಇದುವರೆಗಿನ ನಡೆನುಡಿಯಿಂದ ಮಾನಸಿಕ ಖಿನ್ನತೆಯ ಅಂಚಿನಲ್ಲಿದ್ದ ತನ್ನನ್ನು ಜಾಗೃತಗೊಳಿಸಿದ್ದು ಅವನಿ ಯ ಹಿತವಾದ ಪ್ರೀತಿ ಮತ್ತು ಕಾಳಜಿ ಪೂರ್ವಕ ನಡೆನುಡಿಯೆಂಬುದನ್ನು ಮನಗಂಡು ಮನೆಯ ಹೊಸ್ತಿಲ ಬಳಿ ಬಂದಾಗ ಹಿಂದೆಯೇ ಬಂದ ಗಂಡ ಮಕ್ಕಳಿಗೆ, ಕೊನೆಯ ಬಾರಿ ಎಂಬಂತೆ ಕಣ್ತುಂಬಿಕೊಂಡು ಕಣ್ಣಲ್ಲೇ ವಿದಾಯ ಹೇಳಿ ಗಟ್ಟಿ ಮನಸ್ಸು ಮಾಡಿ ನಿಡಿದಾದ ನಿಟ್ಟುಸಿರಿನೊಂದಿಗೆ ಜೀವನದ ಮುಸ್ಸಂಜೆ ಯಲಿ
“ನನಗಾಗಿ ನಾನು”ಅನ್ನುವ ಸಾರ್ಥಕ ಕ್ಷಣಗಳನ್ನರಿಸಿ ಮುನ್ನಡೆದಳು…!
ವಂದನೆಗಳು.
-ಉಮಾ ನಾಗರಾಜ್.