ಸೌಂದರ್ಯದ ನೇರ ಸಂಬಂಧ ಕಲೆಯಿಲ್ಲದ ಹೊಳೆಯು ತ್ವಚೆ ಹಾಗೂ ನೈಸರ್ಗಿಕ ಹೊಳಪಿನೊಂದಿಗೆ ಇದೆ. ಹವಾಮಾನ ಪ್ರಖರ ಬಿಸಿಲಿನದ್ದೇ ಆಗಿರಬಹುದು, ಆದರೆ ಸೌಂದರ್ಯದ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ. ಬೇಸಿಗೆಯಲ್ಲೂ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಡಯೆಟ್ ಅನುಸರಿಸಿ :
ಪ್ರತಿದಿನ ಆರೋಗ್ಯಕರ ಡಯೆಟ್
ಪ್ರತಿಯೊಂದು ಹವಾಮಾನದಲ್ಲೂ ಆರೋಗ್ಯಕರ ಡಯೆಟ್ ನ ಅಭ್ಯಾಸ ಮಾಡಿಕೊಳ್ಳಿ. ಚಳಿಗಾಲದಲ್ಲಂತೂ ಜನರು ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಆಹಾರ ಸೇವಿಸುತ್ತಾರೆ. ಆದರೆ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ನಿರ್ಲಕ್ಷ್ಯ ವಹಿಸುತ್ತಾರೆ. ನೀವು ಕೂಡ ಹಾಗೆಯೇ ಮಾಡುತ್ತಿರುವಿರಾದರೆ ಸ್ವಲ್ಪ ಎಚ್ಚರವಹಿಸಿ. ಏಕೆಂದರೆ ನಿಮ್ಮ ಡಯೆಟ್ ಡಿಸ್ಟರ್ಬ್ ಆದರೆ ತ್ವಚೆ ಅನಾರೋಗ್ಯಕರ ಟಿಶ್ಯೂಸ್ ನಿರ್ಮಿಸುತ್ತದೆ. ಅಂದರೆ ಚರ್ಮದ ಹೊಸ ಜೀವಕೋಶಗಳು ನಿರ್ಮಾಣವಾಗುತ್ತಿದ್ದಂತೆ ಅವು ಅನಾರೋಗ್ಯಕ್ಕೀಡಾಗುತ್ತವೆ.
ಇಂತಹ ಸ್ಥಿತಿಯಲ್ಲಿ ಚರ್ಮದಲ್ಲಿ ಹೊಳಪು ಕಂಡುಬರುವುದಿಲ್ಲ. ಆ ಹೊಳಪು ಬರುವುದು ಆರೋಗ್ಯಕರ ಆಹಾರ ಸೇವನೆ ಮಾಡಿದಾಗ ಮಾತ್ರ. ಹೀಗಾಗಿ ಸೌಂದರ್ಯ ಕಾಪಾಡಿಕೊಳ್ಳಲು ಆಹಾರದ ಬಗ್ಗೆ ಗಮನಕೊಡುವುದು ಅತ್ಯವಶ್ಯ.
ಆರೋಗ್ಯಕರ ತ್ವಚೆಗಾಗಿ ನಿಮ್ಮ ಡಯೆಟ್ ನಲ್ಲಿ ಇವನ್ನೆಲ್ಲ ಸೇರಿಸಿಕೊಳ್ಳಿ.
ಹಸಿರು ಸೊಪ್ಪುಗಳೊಂದಿಗೆ ಸ್ನೇಹ
ಸುಂದರ ತ್ವಚೆಗಾಗಿ ಎಲ್ಲಕ್ಕೂ ಮೊದಲು ನಿಮ್ಮ ಡಯೆಟ್ ನಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸಿಕೊಳ್ಳಿ. ಬೇಸಿಗೆಯಲ್ಲಿ ತ್ವಚೆ ಮಾಲಿನ್ಯ ಹಾಗೂ ಬಿಸಿಲಿನ ಕಾರಣದಿಂದ ಹೆಚ್ಚು ಹಾನಿಗೊಳಗಾಗುತ್ತದೆ. ಕೆಮಿಕಲ್ ಹಾಗೂ ಜಂಕ್ ಫುಡ್ ಗಳು ಕೂಡ ಹಾನಿಯನ್ನುಂಟು ಮಾಡುತ್ತವೆ. ನೀವು ಮಾಡಬೇಕಾದ ಒಂದು ನಿರ್ಧಾರವೆಂದರೆ, ದಿನದ ಮೂರು ಹೊತ್ತಿನ ಆಹಾರದಲ್ಲಿ ಒಂದಾದರೂ ಹಸಿರು ಸೊಪ್ಪನ್ನು ಅವಶ್ಯವಾಗಿ ಸೇವಿಸಿ.
ಡಾರ್ಕ್ ಚಾಕಲೇಟ್ ನಿಂದ ಸೌಂದರ್ಯ
ಚಾಕಲೇಟ್ ಕೇವಲ ಫ್ಯಾಟ್ ಹಾಗೂ ತೂಕನ್ನವಷ್ಟೇ ಹೆಚ್ಚಿಸುವುದಿಲ್ಲ. ನೀವು ಡಾರ್ಕ್ ಚಾಕಲೇಟ್ ನ್ನು ಸರಿಯಾದ ರೀತಿಯಲ್ಲಿ ಸಮತೋಲನ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ, ಅದು ತ್ವಚೆಯನ್ನು ಸುಂದರಗೊಳಿಸುವ ಕೆಲಸ ಮಾಡುತ್ತದೆ. ಡಾರ್ಕ್ ಚಾಕಲೇಟ್ ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುತ್ತದೆ. ಹೀಗಾಗಿ ಇದು ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಆದ ಏಜಿಂಗ್ ಎಫೆಕ್ಟ್ ನ್ನು ತ್ವಚೆಯ ಮೇಲೆ ಬರಲು ಬಿಡುವುದಿಲ್ಲ.
ಹುಳಿ ಹಣ್ಣುಗಳ ಲಾಭ
ಸೀಸನ್ ಹಣ್ಣುಗಳು, ಕಿತ್ತಳೆ, ನಿಂಬೆ, ಕಿವೀ, ಮಾವು, ನೆಲ್ಲಿ, ಮುಂತಾದ ಹುಳಿ ಹಣ್ಣುಗಳು ತ್ವಚೆಗೆ ಅಪೂರ್ವ ಕಳೆ ತಂದುಕೊಡುವ ಕೆಲಸ ಮಾಡುತ್ತವೆ. ನೀವು ನೈಸರ್ಗಿಕವಾಗಿ ಕಲೆರಹಿತ ಹೊಳಪುಳ್ಳ ತ್ವಚೆ ಬಯಸುವಿರಾದರೆ, ಇವುಗಳಲ್ಲಿ ಯಾವುದಾದರೊಂದು ಹಣ್ಣನ್ನು ಪ್ರತಿದಿನ ಸೇವಿಸಿ. ಬೇಸಿಗೆಯಲ್ಲಿ ಈ ಹಣ್ಣುಗಳು ಸುಲಭವಾಗಿ ಲಭಿಸುತ್ತವೆ. ಇವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ತ್ವಚೆ ಆಂತರಿಕವಾಗಿ ಸೌಂದರ್ಯ ಪಡೆದುಕೊಳ್ಳುತ್ತದೆ.
ಒಮೇಗಾ 3 ಮತ್ತು ವಿಟಮಿನ್ ಡಿ
ವಾಲ್ ನಟ್ಸ್ ನಂತಹ ಒಣಹಣ್ಣು, ಅಗಸೆಬೀಜ, ಸನ್ ಫ್ಲವರ್, ಸಾಸಿವೆ, ಸೋಯಾಬೀನ್ಸ್, ಸ್ಪ್ರೌಟ್ಸ್, ಎಲೆಕೋಸು, ಬ್ರೋಕಲಿ, ಹಸಿರು ಸೊಪ್ಪು, ಸ್ಟ್ರಾಬೆರಿಯಂತಹ ಹಣ್ಣುಗಳಲ್ಲಿ ಒಮೇಗಾ 3 ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ವಿಟಮಿನ್ ಡಿಯ ಮುಖ್ಯ ಮೂಲಗಳೆಂದರೆ ಮೊಟ್ಟೆಯ ಹಳದಿ ಭಾಗ, ಮೀನಿನ ಎಣ್ಣೆ, ವಿಟಮಿನ್ ಡಿ ಯುಕ್ತ ಹಾಲು, ಬೆಣ್ಣೆ ಮುಂತಾದವು. ಒಮೇಗಾ 3 ಹಾಗೂ ಒಮೇಗಾ 6 ಫ್ಯಾಟಿ ಆ್ಯಸಿಡ್ ನಿಂದ ಸಮೃದ್ಧವಾಗಿರುತ್ತದೆ. ಬಾದಾಮಿ ವಿಟಮಿನ್ ಇಯ ಸಮೃದ್ಧ ಮೂಲವಾಗಿರುತ್ತದೆ. ಹೊಳೆಯುವ ತ್ವಚೆಗಾಗಿ ನಿಮ್ಮ ದೈನಂದಿನ ಡಯೆಟ್ ನಲ್ಲಿ ಇವನ್ನು ಸೇರ್ಪಡೆ ಮಾಡಿಕೊಳ್ಳಿ.
ಇಮ್ಯುನಿಟಿ ಬೂಸ್ಟರ್ ಡಯೆಟ್
ಈ ಬೇಸಿಗೆಯಲ್ಲಿ ನೀವು ನಿಮ್ಮ ಡಯೆಟ್ ನಲ್ಲಿ ಬದಲಾವಣೆ ಮಾಡಿಕೊಂಡು ರೋಗಗಳೊಂದಿಗೆ ಹೋರಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಕೊರೋನಾ ಸೇರಿದಂತೆ ಬೇರೆ ಬೇರೆ ರೋಗಗಳೊಂದಿಗೆ ಹೋರಾಡುವ ಸಾಮರ್ಥ್ಯ ಪಡೆದುಕೊಳ್ಳಲು ಅತ್ಯುತ್ತಮ ರೋಗನಿರೋಧಕ ಶಕ್ತಿ ಬೇಕಾಗುತ್ತದೆ. ಆ ರೋಗ ನಿರೋಧಕ ಶಕ್ತಿಗಾಗಿ ಒಳ್ಳೆಯ ಡಯೆಟ್ ನ ಅವಶ್ಯಕತೆ ಇರುತ್ತದೆ. ಈ ಬೇಸಿಗೆಯಲ್ಲಿ ನಿಮ್ಮ ಡಯೆಟ್ ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಅಂದರೆ ನೀವು ಆರೋಗ್ಯದಿಂದಲೂ ಇರಬೇಕು ಹಾಗೂ ರೋಗಗಳೊಂದಿಗೆ ಹೋರಾಡುವ ಸಾಮರ್ಥ್ಯ ಕೂಡ ಪಡೆಯಬೇಕು.
ಮೊಸರು
ಮೊಸರು ಎಂತಹ ಒಂದು ಪದಾರ್ಥವೆಂದರೆ, ಅದು ಎಲ್ಲರಿಗೂ ಉಪಯುಕ್ತ. ಬೇಸಿಗೆಯ ದಿನಗಳಲ್ಲಿ ಮೊಸರು, ಮಜ್ಜಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕು. ಇದು ರುಚಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದಲ್ಲದೆ, ಇದರ ಸೇವನೆಯಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ.
ಬೀಜಗಳು
ಒಂದು ದೊಡ್ಡ ಚಮಚ ವಿವಿಧ ಬೀಜಗಳ ಮಿಶ್ರಣ ತೆಗೆದುಕೊಳ್ಳಿ. ಅದರಲ್ಲಿ ಸೂರ್ಯಕಾಂತಿ, ಅಗಸೆ, ಚಿಯಾ ಸೀಡ್ಸ್ ಮುಂತಾದವನ್ನು ಸೇರಿಸಿ. ಅಗಸೆ ಬೀಜದಲ್ಲಿ ಒಮೇಗಾ 3 ಹಾಗೂ ಫ್ಯಾಟಿ ಆ್ಯಸಿಡ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಸಸ್ಯಾಹಾರಿಗಳಿಗೆ ಸೀಡ್ಸ್, ಒಮೇಗಾ 3 ಹಾಗೂ ಫ್ಯಾಟಿ ಆ್ಯಸಿಡ್ ಎಲ್ಲಕ್ಕೂ ಒಳ್ಳೆಯ ಮೂಲವಾಗಿದೆ. ಇವುಗಳ ಬಳಕೆಯಿಂದ ರೋಗದೊಂದಿಗೆ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ.
ವಿಟಮಿನ್ `ಸಿ‘
ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆದುಕೊಳ್ಳಲು ವಿಟಮಿನ್ `ಸಿ’ ಎಲ್ಲಕ್ಕೂ ಉತ್ತಮ ಪರ್ಯಾಯವಾಗಿದೆ. ಇದು ಪ್ರಬಲ ಆ್ಯಂಟಿ ಆಕ್ಸಿಡೆಂಟ್ ಆಗಿದೆ. ಇದನ್ನು ನಿಮ್ಮ ಆಹಾರದಲ್ಲಿ ಪ್ರತಿದಿನ 40-60 ಮಿಲಿಗ್ರಾಂನಷ್ಟು ಸೇರಿಸಿಕೊಳ್ಳಿರಿ. ನಿಂಬೆ, ನೆಲ್ಲಿ, ಸೀಬೆ, ಕಿತ್ತಳೆಯ ಹೊರತಾಗಿ ಹಸಿರು ಸೊಪ್ಛುಗಳಾದ ಕೊತ್ತಂಬರಿ, ಪುದೀನಾ ಮುಂತಾದವುಗಳನ್ನು ಯಾವುದಾದರೊಂದು ರೀತಿಯಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಇವೆರಡೂ ರೋಗ ನಿರೋಧಕ ಸಾಮರ್ಥ್ಯವನ್ನು ಕಾಯ್ದುಕೊಂಡು ಹೋಗಲು ನೆರವಾಗುತ್ತವೆ.
ಕ್ಯಾರೆಟ್
ಇದು ದೇಹದಲ್ಲಿ ರಕ್ತ ಹೆಚ್ಚಿಸುವ ಕೆಲಸ ಮಾಡುತ್ತದಲ್ಲದೆ, ಹಲವು ಹಾನಿಕಾರಕ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ. ಇದು ವಿಟಮಿನ್ `ಎ’, ಕೆರೊಟೆನೈಡ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ನ ಮುಖ್ಯ ಸಂಗ್ರಹಾಗಾರವಾಗಿದೆ.
ಗ್ರೀನ್ ಟೀ & ಬ್ಲ್ಯಾಕ್ ಟೀ
ಗ್ರೀನ್ ಟೀ ಹಾಗೂ ಬ್ಲ್ಯಾಕ್ ಟೀ ಇವೆರಡೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಆದರೆ ಬೇಸಿಗೆಯ ದಿನಗಳಲ್ಲಿ ಇವೆರಡರಲ್ಲಿ ಒಂದನ್ನು ಒಂದೆರಡು ಸಲ ಮಾತ್ರ ಕುಡಿಯಿರಿ. ಹೆಚ್ಚು ಸೇವನೆಯಿಂದ ಹಲವು ಬಗೆಯ ಸಮಸ್ಯೆಗಳು ಎದುರಾಗುತ್ತವೆ.
ಹಸಿ ಬೆಳ್ಳುಳ್ಳಿ
ಹಸಿ ಬೆಳ್ಳುಳ್ಳಿ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಲಿಸಿನ್, ಸತು, ಸಲ್ಛರ್ ಹಾಗೂ ವಿಟಮಿನ್ `ಎ’ ಮತ್ತು `ಇ’ ಕಂಡುಬರುತ್ತದೆ. ಬೇಸಿಗೆಯ ದಿನಗಳಲ್ಲಿ ಬೇರೆ ಬೇರೆ ತರಕಾರಿಗಳೊಂದಿಗೆ ಇದನ್ನು ಉಪಯೋಗಿಸಿ.
ಸಾಕಷ್ಟು ನೀರು
ಬೇಸಿಗೆಯ ದಿನಗಳಲ್ಲಿ ಡೀಹೈಡ್ರೇಶನ್ ನಿಂದ ಪಾರಾಗಲು 10-12 ಗ್ಲಾಸ್ ನೀರನ್ನು ಅವಶ್ಯವಾಗಿ ಕುಡಿಯಿರಿ. ಮಜ್ಜಿಗೆ, ಎಳನೀರು, ನಿಂಬೆ ಪಾನಕ ಸಹ ಸೇವಿಸಬಹುದು.
ಅರಿಶನ ಬೆರೆತ ಹಾಲು
ಬೇಸಿಗೆ ಅಥವಾ ಬೇರೆ ಯಾವುದೇ ಹವಾಮಾನದಲ್ಲಿ ಪ್ರತಿದಿನ ಒಂದು ಗ್ಲಾಸ್ ಹಾಲಿಗೆ ಒಂದಿಷ್ಟು ಅರಿಶಿನ ಪುಡಿ ಮಿಶ್ರಣ ಮಾಡಿ ಕುಡಿಯಬೇಕು. ಅರಿಶಿನದಲ್ಲಿರುವ ಕರ್ಕ್ಯುಮಿನ್ ರೋಗದೊಂದಿಗೆ ಹೋರಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ.
ಸಾಕಷ್ಟು ಪ್ರಮಾಣದ ಪ್ರೋಟೀನ್
ದೇಹದ ಮಾಂಸಖಂಡಗಳು ಮತ್ತು ಜೀವಕೋಶಗಳ ದುರಸ್ತಿ ಹಾಗೂ ಮೆಟಬಾಲಿಸಂನ್ನು ಉತ್ತಮ ಪಡಿಸಲು ಪ್ರೋಟೀನ್ ಅತ್ಯವಶ್ಯವಾಗಿ ಬೇಕು. ದಿನ 1-2 ಬಟ್ಟಲಿನಷ್ಟು ಬೇಳೆ ಅಥವಾ ಮೊಳಕೆಕಾಳು, ಮೊಸರು, ಪನೀರ್, ಬೇಯಿಸಿದ ಮೊಟ್ಟೆ ಸೇವಿಸಬಹುದು. ಇವುಗಳಿಂದ ಅಮೀನೊ ಆಸಿಡ್ಸ್ ದೊರಕುತ್ತವೆ. ಇದು ದೇಹಕ್ಕೆ ಅತ್ಯವಶ್ಯವಾಗಿ ಬೇಕು.
– ಗೌರಿ