“ನಾಳೆ ರಾತ್ರಿ ಅಡುಗೆ ಸ್ವಲ್ಪ ಹೆಚ್ಚಿಗೆ ಮಾಡು,” ಎಂದು ಆನಂದ್ ಹೇಳಿದಾಗ, ಅಮೃತಾಗೆ ಎಷ್ಟು ಜನ ಸ್ನೇಹಿತರು ಬರಲಿದ್ದಾರೆ ಎಂದು ಕೇಳಬೇಕೆನಿಸಿತು. ಆದರೆ ಆನಂದ್ ನ ಮೂಡ್ ಬಗ್ಗೆ ಹೇಳೋಕೆ ಆಗದು. `ಮನಸ್ಸಿದ್ದರೆ ಉತ್ತರ ಕೊಡುತ್ತಾನೆ. ಇಲ್ಲದಿದ್ದರೆ, ನಿನಗೇನಾಗಬೇಕು? ಎಷ್ಟು ಹೇಳ್ತಿನೋ ಅಷ್ಟು ಕೇಳು,’ ಎಂದು ಹೇಳಿ ತನ್ನ ಬಾಯಿ ಮುಚ್ಚಿಸುತ್ತಾನೆ, ಅವಮಾನಿಸುತ್ತಾನೆ.
ಆನಂದ್ ಮೇಲಿಂದ ಮೇಲೆ ತನ್ನ ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸುತ್ತಿರುತ್ತಾನೆ. ಆ ಊಟದ ಪಾರ್ಟಿಯಲ್ಲಿ ಮದ್ಯ ಸೇರಿರುತ್ತದೆ. ಅವರ ನಗು, ಹಾಸ್ಯ ಚಟಾಕಿಗಳಲ್ಲಿ ಅವರವರ ಹೆಂಡತಿಯರ ಬಗ್ಗೆ ಅವಹೇಳನಗಳು ಕೂಡ ಕೇಳಬರುತ್ತಿರುತ್ತವೆ. ಅಂದಹಾಗೆ ಆನಂದ್ ನಿಗೆ ಅಮೃತಾ ಎಲ್ಲಿಯಾದರೂ ಏಕಾಂಗಿಯಾಗಿ ಹೋಗುವುದು, ಯಾರಾದರೂ ಪುರುಷರ ಜೊತೆ ಮಾತಾಡುವುದು ಇಷ್ಟವಿರಲಿಲ್ಲ. ಆದರೆ ತನ್ನ ಸ್ನೇಹಿತರಿಗಾಗಿ ಗಂಟೆಗಟ್ಟಲೆ ಅಡುಗೆ ತಯಾರಿಸುವುದು ಅವನ ಅಹಂನ್ನು ತೃಪ್ತಗೊಳಿಸುತ್ತಿತ್ತು.
ಅಮೃತಾ ತನ್ನ ಮನೆಗೆ ಬಂದ ಗಂಡನ ಸ್ನೇಹಿತರ ನಗು ಕೀಟಲೆ ಅಪಹಾಸ್ಯದ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದವಳಂತೆ ಇದ್ದು ತಲೆ ತಗ್ಗಿಸಿ ಆಹಾರ ಬಡಿಸುವುದು, ತಡರಾತ್ರಿಯತನಕ ಅವರು ಹೋಗುವವರೆಗೆ ಎಚ್ಚರದಿಂದಿರುವುದು ಆನಂದ್ ನ ಎದೆ ಅಹಂಕಾರದಿಂದ ಇನ್ನಷ್ಟು ವಾಲುವಂತೆ ಮಾಡುತ್ತಿತ್ತು.
`ಎಂದಾದರೂ ತನ್ನ ಹೆಂಡತಿಯ ದುಃಖ ಅರ್ಥ ಮಾಡಿಕೊಳ್ಳುತ್ತಾನೆಯೇ? ತನ್ನನ್ನು ಸ್ನೇಹಿತರ ಹಾಗೆ ಇಷ್ಟಪಡುತ್ತಾನೆಯೇ?’ ಎಂದು ಅಮೃತಾ ಯೋಚಿಸುತ್ತಾ ಅವನ ಹಿಟ್ಲರ್ ಗಿರಿಯನ್ನು ಸಹಿಸಿಕೊಳ್ಳುತ್ತಿದ್ದಳು. ಎಂದಿನಂತೆ ಇಂದೂ ಕೂಡ ಮಲಗುವ ಸಮಯದಲ್ಲಿ ಕೆಲವು ನಿಮಿಷಗಳ ಮಟ್ಟಿಗೆ ಖುಷಿಯಿಂದಿರುವ ಪಟ್ಟಿಯಂತಾದಾಗ, ಅಮೃತಾ ಕೇಳಿಯೇಬಿಟ್ಟಳು, “ನಾಳೆ ಸಂಜೆ ಎಷ್ಟು ಜನರಿಗಾಗಿ ಅಡುಗೆ ಸಿದ್ಧಪಡಿಸಬೇಕು?”
“ನಾಳೆ ಪರಮ್ ಅಣ್ಣ ಸ್ವಿಡ್ಜರ್ಲೆಂಡ್ ನಿಂದ ವಾಪಸ್ಸಾಗುತ್ತಿದ್ದಾರೆ. ನಾಳೆಯ ಡಿನ್ನರ್ ನಮ್ಮ ಮನೆಯಲ್ಲಿಯೇ ಆಗಬೇಕು,” ಆನಂದ್ ಹೇಳಿದ.
ಪರಮ್ ನ ಹೆಸರು ಅಮೃತಾಳ ಮನಸ್ಸಿನಲ್ಲಿ ಖುಷಿಯ ಸಿಂಚನವನ್ನುಂಟು ಮಾಡಿತು. ಆನಂದನ ಮಿತ್ರ ಚಂದುವಿಗಿಂತ 5 ವರ್ಷ ದೊಡ್ಡವನಾದ ಪರಮ್ ಅಮೃತಾಳಿಗೆ ಏನೂ ಆಗಿರಲಿಲ್ಲ. ಆದರೂ ಅವನು ಒಂದಿಷ್ಟು ತನ್ನವರಂತೆ ಭಾಸವಾಗುತ್ತಿದ್ದ.
ಪರಮ್ ಹೆಸರು ಉಲ್ಲೇಖ ಆಗುತ್ತಿದ್ದಂತೆ 3 ವರ್ಷದ ಹಿಂದಿನ ನೆನಪಲ್ಲಿ ಅವಳು ಕಳೆದುಹೋದಳು. ಆಗಷ್ಟೇ ಅಮೃತಾಳಿಗೆ ಆನಂದ್ ಜೊತೆಗೆ ವಿವಾಹವಾಗಿತ್ತು. ವಿವಾಹದ ಬಳಿಕ ಪರಮ್ ಗಾಗಿ ಅಮೃತಾಳ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ನಿರ್ಮಾಣವಾಗಿತ್ತು. ಆಗ ಪರಮ್ ಅಮೃತಾಳನ್ನು ಹೇಗೆ ಸ್ವಾಗತಿಸಿದ್ದನೆಂದರೆ, ಈಗ ನನಗೆ ಆನಂದ್ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ. ನಿನ್ನಂತಹ ಸುಂದರ, ತಿಳಿವಳಿಕೆಯುಳ್ಳ ಹೆಂಡತಿ ದೊರಕಿದ್ದಾಳಲ್ಲ ಅದಕ್ಕೆ.
ಅಂದಹಾಗೆ ಪರಮ್ ಸಹೃದಯಿಯಾಗಿದ್ದ. ಎಲ್ಲರಲ್ಲೂ ಬೆರೆಯುವ ವ್ಯಕ್ತಿಯಾಗಿರುವ ಜೊತೆ ಜೊತೆಗೆ ಪ್ರತಿಭಾವಂತ ಕೂಡ ಆಗಿದ್ದ. ತನ್ನ ತಮ್ಮ ಚಂದ್ರು ಬಿಎಸ್ಸಿ ಓದುತ್ತಿದ್ದಾಗ, ಅಪಘಾತವೊಂದರಲ್ಲಿ ಅವನ ತಾಯಿ ತಂದೆಯರು ಅಸುನೀಗಿದ್ದರು. ಆ ಸಮಯದಲ್ಲಿ ಪರಮ್ ಒಂದು ರಿಸರ್ಚ್ ಇನ್ ಸ್ಟಿಟ್ಯೂಟ್ ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಯಲ್ಲಿ ನೇಮಕವಾಗಿದ್ದ. ಚಂದ್ರುವಿಗೆ ತಾಯಿ ತಂದೆಯರ ಪ್ರೀತಿ ಧಾರೆಯೆರೆಯುತ್ತ ಚೆನ್ನಾಗಿ ಓದಿಸಿ ಎಂಜಿನಿಯರ್ ಮಾಡಿದ ಹಾಗೂ ಬಹುರಾಷ್ಟ್ರೀಯ ಕಂಪನಿಯೊಂದರ ಪ್ಲೇಸ್ ಮೆಂಟ್ ಗಳು ಬಂದಾಗ ಹಲವು ಹುಡುಗಿಯರನ್ನು ನೋಡಿ, ಚಂದ್ರುವಿನ ಒಪ್ಪಿಗೆಯ ಮೇರೆಗೆ ಅವನ ವಿವಾಹ ಕೂಡ ಮಾಡಿದ್ದ. ಪರಮ್ ಆನಂದ್ ಗೂ ಕೂಡ ಅನೇಕ ಉಪಕಾರಗಳನ್ನು ಮಾಡಿದ್ದ. ಅವನ ಓದಿಗಾಗಿಯೂ ಬಹಳಷ್ಟು ನೆರವು ನೀಡಿದ್ದ. ಅಷ್ಟೇ ಅಲ್ಲ ಅಮೃತಾಳ ವಿವಾಹಕ್ಕೂ ಹಲವು ವರ್ಷ ಮುಂಚೆ ಆನಂದ್ ನ ವಿಧವಾ ತಾಯಿ ಕ್ಯಾನ್ಸರ್‌ಪೀಡಿತರಾಗಿ ಅಂತಿಮ ದಿನಗಳನ್ನು ಎಣಿಸುತ್ತಿದ್ದಾಗ, ಪರಮ್ ಪ್ರತಿದಿನ ಅವರ ಹತ್ತಿರ ಬಂದು ಕುಳಿತುಕೊಳ್ಳುತ್ತಿದ್ದ. ಕೆಲವೊಮ್ಮೆ ರಾತ್ರಿ ಹೊತ್ತು ಅಲ್ಲಿಯೇ ಉಳಿದುಕೊಳ್ಳುತ್ತಿದ್ದ.
ಆನಂದ್ ನ ತಾಯಿ ನಿಧನರಾದಾಗ, ಆನಂದ್ ನ ತಂಗಿಯ ಮದುವೆ ಮಾಡುವುದು ಕಷ್ಟಕರ ಆಗಿತ್ತು. ಆಗ ತನ್ನ ಸ್ನೇಹಿತನ ಜೊತೆ ಅವಳ ಮದುವೆ ನಿಶ್ಚಯಿಸಿ, ಆನಂದ್ ನ ಅರ್ಧ ಭಾರ ಇಳಿಸಿದ್ದ. ಬೇರೆಯವರ ಮದುವೆ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಿದ್ದ, ಆನಂದ್ ತನ್ನ ಮದುವೆಯ ಬಗ್ಗೆ ಯೋಚನೆ ಮಾಡಿರಲಿಲ್ಲ.
ಆನಂದ್ ನ ವಿವಾಹವಾದ ಬಳಿಕ ಅವನ ಮಿತ್ರ ಚಂದ್ರು ತನ್ನ ಹೆಂಡತಿಯೊಂದಿಗೆ ಆಸ್ಟ್ರೇಲಿಯಾಗೆ ಹೋಗಿಬಿಟ್ಟ. ಆದರೆ ಪರಮ್ ಮಾತ್ರ ಆನಂದನ ಮನೆಗೆ ಹೋಗಿ ಬರುವುದನ್ನು ಮುಂದುವರಿಸಿದ್ದ. ಅವರ ಮನೆಗೆ ಬಂದಾಗೆಲ್ಲ ಅಮೃತಾಗೂ ಅವರಿಬ್ಬರ ಜೊತೆ ಕುಳಿತು ಮಾತನಾಡುತ್ತಿರಬೇಕು ಎಂದು ಎನಿಸುತ್ತಿತ್ತು.
ಪರಮ್ ಅವರ ಮಾತುಗಳಿಂದ ಬಹಳಷ್ಟು ಕಲಿಯಲು ಸಿಗುತ್ತಿತ್ತು. ಮಾತು ಮಾತಿನಲ್ಲಿಯೇ ಪರಮ್ ಅವರ ಸಮಸ್ಯೆ ಅರಿತು, ಅದಕ್ಕೆ ಪರಿಹಾರ ಸೂಚಿಸಲು ಪ್ರಯತ್ನಿಸುತ್ತಿದ್ದ. ಅಮೃತಾ ಆ ದಿನಗಳಲ್ಲಿ ಆನಂದ್ ರಾತ್ರಿ ಬಹಳ ಹೊತ್ತಾದ ಬಳಿಕ ವಾಪಸ್ಸಾಗುತ್ತಿದ್ದುದರಿಂದ ಬಹಳ ಆತಂಕಗೊಳ್ಳುತ್ತಿದ್ದಳು. ರಜೆಯ ದಿನಗಳಂದೂ ಆತ ಸ್ನೇಹಿತರು ಅಂತ ಹೊರಗೆ ಹೋಗಬಿಡುತ್ತಿದ್ದ. ಇಲ್ಲದಿದ್ದರೆ ಮನೆಯಲ್ಲಿಯೇ ಎಲ್ಲರನ್ನೂ ಸೇರಿಸಿ ಪಾರ್ಟಿ ಮಾಡುತ್ತಿದ್ದ. ಅಮೃತಾ ಆನಂದ್ ಜೊತೆಗೆ ಸಮಯ ಕಳೆಯಲು ಸದಾ ಕಾತುರದಿಂದಿರುತ್ತಿದ್ದಳು.
ಪರಮ್ ಕೂಡ ಅವಳ ಮನಸ್ಸನ್ನು ಹೇಗೆ ಅರಿತಿದ್ದನೊ ಏನೋ? ಆತ ಆನಂದ್ ಗೆ ತಿಳಿಸಿ ಹೇಳಿದ್ದ, ನೀನಿನ್ನು ತಡರಾತ್ರಿ ಮನೆಗೆ ಬರುವುದನ್ನು ನಿಲ್ಲಿಸು. ಎಷ್ಟೋ ಸಲ ಅವಳು ನಿನಗಾಗಿ ಕಾಯ್ತಾ ಕಾಯ್ತಾ ಊಟ ಮಾಡೋದು ಮರೆತುಬಿಡ್ತಾಳೆ. ನೀನು ಭಾನುವಾರ ಇಡೀ ದಿನ ಅಡುಗೆ ಮನೆಯಲ್ಲಿ ತೊಡಗಿಸಿಬಿಡ್ತಿಯಾ. ಗಂಡ ಹೆಂಡತಿಗೆ ಇದೇ ಅಮೂಲ್ಯ ಸಮಯವಾಗಿರುತ್ತದೆ. ಆ ಬಳಿಕ ಮಕ್ಕಳು, ಜವಾಬ್ದಾರಿಗಳಲ್ಲಿ ಸಮಯ ಸಿಗುತ್ತಾ ಹೇಳು. ನೀನು ಎಷ್ಟೊಂದು ಒಳ್ಳೆಯ ಹೆಂಡತಿಯನ್ನು ಪಡೆದಿರುವೆ, ಅವಳಿಗಾಗಿ ಒಂದಿಷ್ಟು ಸಮಯ ಕೊಡು, ಎಂದು ಹೇಳುತ್ತಿದ್ದುದು ಅಮೃತಾಳ ಕಿವಿಗೆ ಬಿದ್ದಿತ್ತು. ಆದರೆ ಪರಮ್ ಇಷ್ಟೊಂದು ತಿಳಿವಳಿಕೆ ಹೇಳಿದಾಗ್ಯೂ ಆನಂದ್ ನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ತನ್ನ ಸಂಸ್ಥೆಯಲ್ಲಿ ಒಂದು ಪ್ರಾಜೆಕ್ಟ್ ಗಾಗಿ ಹಗಲಿರುಳು ಪರಿಶ್ರಮ ಪಟ್ಟಿದ್ದಕ್ಕಾಗಿ ಪರಮ್ ಬಹಳ ಒಳ್ಳೆಯ ಪ್ರಶಂಸೆ ಸಿಕ್ಕಿತು. ಆ ಬಳಿಕ ಅವನಿಗೆ ನಿರ್ದೇಶಕ ಹುದ್ದೆಗೆ ಪ್ರಮೋಶನ್ ಕೂಡ ದೊರಕಿತು. ಆ ಬಳಿಕ 2 ವರ್ಷಗಳ ಕಾಲ ಸ್ವಿಡ್ಜರ್ಲೆಂಡ್ ಗೆ ಹೋಗಲು ಅವಕಾಶ ಕೂಡ ದೊರಕಿತ್ತು. ಇವತ್ತು ಆತ ಸ್ವದೇಶಕ್ಕೆ ವಾಪಸ್ಸಾಗುವ ಸುದ್ದಿ ಕೇಳಿ ಅಮೃತಾಳಿಗೆ ಬಹಳ ಖುಷಿಯಾಗಿತ್ತು.
ಪರಮ್ ನ ವಿಮಾನ ಮಧ್ಯಾಹ್ನ 2 ಗಂಟೆಗೆ ಬರಲಿತ್ತು. ಅವನ ಮನೆ ಆನಂದ್ ನ ಮನೆಯಿಂದ ಸ್ವಲ್ಪವೇ ದೂರದಲ್ಲಿತ್ತು. ಅಮೃತಾ ತಮ್ಮ ಮನೆಯಲ್ಲಿದ್ದ ಡೂಪ್ಲಿಕೇಟ್ ಬೀಗ ಕೀ ತೆಗೆದುಕೊಂಡು ಹೋಗಿ ಆ ಮನೆಯ ಸ್ವಚ್ಛತೆ ಕೆಲಸ ಮುಗಿಸಿದಳು. ಟೇಬಲ್ ಮೇಲಿದ್ದ ಬೊಕೆ ಸ್ಟಾಂಡ್ ನಲ್ಲಿ ಹೂಗುಚ್ಛ ಹಾಕಿದಳು.
ಪರಮ್ ಮನೆಗೆ ಬಂದು ನೋಡಿದಾಗ, ಎಲ್ಲವೂ ಅಚ್ಚುಕಟ್ಟಾಗಿ ಎಲ್ಲ ಇರಬೇಕಾದ ಸ್ಥಳದಲ್ಲಿ ಇರುವುದನ್ನು ಕಂಡು ಅವನು ಅಮೃತಾಳನ್ನು ಮನಸಾರೆ ಹೊಗಳಿದ. ಸಂಜೆ ಆನಂದ್ ನ ಮನೆಗೆ ಬಂದಾಗ 2 ವರ್ಷಗಳಿಂದ ಆ ಮನೆಯಲ್ಲಿ ಯಾವುದೇ ಬದಲಾವಣೆ ಆಗದಿರುವುದನ್ನು ಗಮನಿಸಿದ. ಸ್ವಲ್ಪ ಹೊತ್ತು ಪರಮ್ ಇಬ್ಬರ ಜೊತೆಗೆ ಮಾತುಕತೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದ. ಆ ಬಳಿಕ ಅಮೃತಾ ಅವನಿಗಾಗಿ ಚಹಾ ತೆಗೆದುಕೊಂಡ ಬಂದಳು.
ಚಹಾದ ಕಪ್ ನ್ನು ಟೇಬಲ್ ಮೇಲಿಟ್ಟು ಆನಂದ್ ಅಮೃತಾಳನ್ನು ತರಾಟೆಗೆ ತೆಗೆದುಕೊಂಡ, “ಪರಮ್ ಅಣ್ಣ ಇಷ್ಟು ವರ್ಷ ಸ್ವಿಡ್ಜರ್ಲೆಂಡ್ ನಲ್ಲಿ ಇದ್ದು ಬಂದಿದ್ದಾರೆ. ಅವರಿಗೆ ಜೂಸ್, ಸಾಫ್ಟ್ ಡ್ರಿಂಕ್ಸ್ ಅಥವಾ ಕಾಫಿ ತೆಗೆದುಕೊಂಡು ಬರಬೇಕು ಅನ್ನೋದು ನಿನಗೆ ಗೊತ್ತಾಗುವುದಿಲ್ಲವೇ? ಎಲ್ಲವನ್ನೂ ನಾನೇ ನಿನಗೆ ಅರ್ಥ ಮಾಡಿಸಿ ಹೇಳಬೇಕಾ….?”
“ನನಗೆ ನೆನಪಿದೆ, ಇವರು ಮೊದಲು ಬರುತ್ತಿದ್ದಾಗ ಪುದೀನಾ, ಶುಂಠಿ ಚಹಾ ಮಾಡಲು ಹೇಳುತ್ತಿದ್ದರು. ಹಾಗಾಗಿ ಇವತ್ತು ಕೂಡಾ…. ” ಅಮೃತಾ ಮೆಲ್ಲನೆಯ ಧ್ವನಿಯಲ್ಲಿ ಹೇಳಿದಳು.
“ಅಮೃತಾ, ನಿನಗೆ ಇದೆಲ್ಲ ನೆನಪಿದೆಯಾ?” ಮುಗುಳ್ನಗುತ್ತಾ ಪರಮ್ ಕೇಳಿದ.
“ಆನಂದ್, ನಾನು ಸ್ವಿಡ್ಜರ್ಲೆಂಡ್ ನಲ್ಲಿ ಇದ್ದಾಗ ಒಂದು ದಿನ ಕೂಡಾ ಪುದೀನಾ ಶುಂಠಿ ಚಹಾ ನೆನಪು ಮಾಡಿಕೊಳ್ಳದೆ ಇರುತ್ತಿರಲಿಲ್ಲ. ನಾನಿನ್ನು ಒಂದು ವಾರ ಸತತ ಚಹಾ ಕುಡಿಯಲು ಬಂದಾಗಲೇ ನನ್ನ ಈ ಚಟ ಶಾಂತ ಆಗಬಹುದೇನೋ? ಥ್ಯಾಂಕ್ಯೂ ಅಮೃತಾ,” ಎಂದು ಹೇಳಿದ.
ಆನಂದ್ ಜೋರಾಗಿ ನಕ್ಕು ತನ್ನ ಖುಷಿಯನ್ನು ತೋರಿಸಿದ. ಬಹಳ ದಿನಗಳ ಬಳಿಕ ಅಮೃತಾಳ ಮನಸ್ಸಿನ ಬಳ್ಳಿ ಇಂದು ತಂಪಾದ ಅನುಭವ ಪಡೆದುಕೊಂಡಿತ್ತು. ಅವಳ ಹೃದಯ ಸ್ಪಂದನೆಯ ರೇಖೆಗಳು `ಪರಮ್…. ಪರಮ್…..’ ಎಂದು ಮತ್ತೆ ಮತ್ತೆ ಗೀಚುತ್ತಿದ್ದವು.
ಆನಂದ್ ನ ಕುಡಿಯುವ, ಕುಡಿಸುವ ಮತ್ತು ಸ್ನೇಹಿತರ ಜೊತೆ ಸಮಯ ಕಳೆಯುವ ಬಗ್ಗೆ ಪರಮ್ ಗೆ ಬೇಸರವಿತ್ತು. ಆದರೆ ತನ್ನ ಹೆಂಡತಿಯ ಬಗ್ಗೆ ಅವನ ವರ್ತನೆ ಇಷ್ಟು ಶುಷ್ಕ ಹಾಗೂ ಕಠೋರ ಆಗಿರಬಹುದು ಎಂದು ಅವನು ಎಂದೂ ಯೋಚಿಸಿರಲಿಲ್ಲ. ತನ್ನ ಮನೆಗೆ ಹೋದ ಬಳಿಕ ಅವನ ಕಣ್ಮುಂದೆ ಅದೇ ಅದೇ ದೃಶ್ಯ ಬರುತ್ತಿತ್ತು. `ಅದೆಂತಹ ದುರ್ವರ್ತನೆ ಆನಂದನದು. ನಾನಂತೂ ಅವಳು ಸದಾ ನಗ್ತಾ ನಗ್ತಾ ಇರೋದನ್ನೇ ನೋಡಿದ್ದೆ. ಅವನನ್ನು ಮದುವೆಯಾಗಿ ಅವಳು ದೊಡ್ಡ ತಪ್ಪು ಮಾಡಿದಳು ಅನಿಸುತ್ತೆ,’ ಎಂದು ಯೋಚಿಸುತ್ತಾ ಅವನಿಗೆ ನಿದ್ರೆ ಬಂದುಬಿಟ್ಟಿತು.
ಆ ದಿನದ ಬಳಿಕ ಅಮೃತಾಳ ಬಗ್ಗೆ ಸಹಾನುಭೂತಿಭರಿತ ಸ್ನೇಹ ಅವನಲ್ಲಿ ಜಾಗೃತವಾಯಿತು. ಹೊಸದಾಗಿ ಮದುವೆಯಾದಾಗ ಅಮೃತಾ ಆನಂದ್ ಬಗ್ಗೆ ಎಷ್ಟು ಸಮರ್ಥಳಾಗಿದ್ದಳು ಎನ್ನುವುದು ಪರಮ್ ಗೆ ಚೆನ್ನಾಗಿ ಗೊತ್ತು. ಇತ್ತೀಚೆಗೆ 2-3 ದಿನ ಆನಂದ್ ನ ಮನೆಗೆ ಭೇಟಿ ಕೊಟ್ಟಾಗ ಪರಮ್ ನಿಂದ ಅಮೃತಾಳ ದುಃಖವನ್ನು ಗುರುತಿಸದೇ ಇರಲಾಗಲಿಲ್ಲ. ಒಂದು ವೇಳೆ ಅಮೃತಾ ಇಷ್ಟಪಟ್ಟರೆ ಅವಳಿಗೆ ಯಾವುದಾದರೂ ಉದ್ಯೋಗ ಕೊಡಿಸಿಕೊಡಬೇಕೆಂದು ಪರಮ್ ಯೋಚಿಸಿದ. ಪರಮ್ ಗೆ ತನ್ನದೇ ಇನ್ ಸ್ಟಿಟ್ಯೂಟ್ ನಲ್ಲಿ ಡಾಕ್ಯುಮೆಂಟೇಶನ್ ಉಸ್ತುವಾರಿ ವಹಿಸಿಕೊಳ್ಳುವ ಒಂದು ಪೋಸ್ಟ್ ಸೃಷ್ಟಿಯಾದಾಗ ಅದಕ್ಕೆ ಅಮೃತಾಳ ಬಯೋಡೇಟಾ ಬಹಳ ಹೊಂದಾಣಿಕೆ ಆಗುತ್ತಿತ್ತು.
ಲೈಬ್ರರಿ ಸೈನ್ಸ್ ನಲ್ಲಿ ಮಾಸ್ಟರ್ ಡಿಗ್ರಿಯ ಜೊತೆಗೆ ನೆಟ್ ಪರೀಕ್ಷೆಯಲ್ಲಿ ಕ್ವಾಲಿಫೈ ಆಗಿದ್ದ ಅಮೃತಾಳಂಥ ಸ್ಟಾಫ್ ನ ಅವಶ್ಯಕತೆ ಅಲ್ಲಿತ್ತು. ಅವಳು ಒಪ್ಪಿಕೊಂಡು ಅರ್ಜಿ ಸಲ್ಲಿಸಿದಳು. ಸಂದರ್ಶನ ನಡೆದು ಅಮೃತಾಳೇ ಆ ಪೋಸ್ಟ್ ಗೆ ಆಯ್ಕೆಯಾದಳು.
ಆ ಹುದ್ದೆಗೆ ನೇಮಕಗೊಂಡ ಬಳಿಕ ಅಮೃತಾಳಿಗೆ ಒಂದಷ್ಟು ತೊಂದರೆಯಾದದ್ದು ನಿಜ. ಬೆಳಗ್ಗೆ ಮನೆಗೆಲಸ, ಬಸ್ ಹಿಡಿಯುವ ಕಸರತ್ತು, ಕೆಲವು ವರ್ಷಗಳಿಂದ ತನ್ನ ವಿಷಯದ ಬಗೆಗಿನ ಟಚ್ ತಪ್ಪಿ ಹೋಗಿರುವುದು ಹೀಗೆ ಅನೇಕ ಸಮಸ್ಯೆಗಳಿದ್ದವು. ಆಫೀಸಿನ ಕೆಲಸದ ಸಮಸ್ಯೆ ಪರಮ್ ನಿಂದಾಗಿ ಬಗೆಹರಿಯಿತು. ಅವನು ಅವಳ ಹೆಸರಿಗೆ ಆಫೀಸ್ ವತಿಯಿಂದ ಒಂದು ವ್ಯಾಪ್ ಟಾಪ್ ಕೂಡ ಕೊಡಿಸಿದ. ಈಗ ಅವಳು ಏನೇ ಸಮಸ್ಯೆ ಬಂದರೂ ಇಂಟರ್ ನೆಟ್ ಸಹಾಯದಿಂದ ಬಗೆಹರಿಸಿಕೊಳ್ಳಬಹುದಿತ್ತು. ತನ್ನ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಅವಳು ಆಸಕ್ತಿಯಿಂದ ಗಮನಿಸುತ್ತಿದ್ದಳು. ಕೆಲಸದವಳೊಬ್ಬಳ ಸಹಾಯದಿಂದ ಮನೆಯ ಕೆಲವು ಕೆಲಸಗಳನ್ನು ಮಾಡಿಸುತ್ತಿದ್ದುದರಿಂದ ಒಂದಿಷ್ಟು ಹಗುರ ಎನಿಸತೊಡಗಿತು. ಮೂರನೇ ಸಮಸ್ಯೆಯನ್ನು ಪರಮ್ ನೇ ಬಗೆಹರಿಸಿದ. ತನ್ನ ಹಳೆಯ ತುಕ್ಕು ಹಿಡಿದ ಕಾರನ್ನು ಮಾರಿ, ಹೊಸದೊಂದು ಕಾರನ್ನು ಖರೀದಿಸಿದ. ಅಮೃತಾಳಿಗೆ ಬಸ್ ನಲ್ಲಿ ಹೋಗುವ ತಾಪತ್ರಯ ತಪ್ಪಿತ್ತು. ಅವಳು ಆ ಬಳಿಕ ಪ್ರತಿದಿನ ಪರಮ್ ಜೊತೆಗೆ ಹೋಗುವುದು ಬರುವುದು ಮಾಡತೊಡಗಿದಳು.
ಆಫೀಸಿನಲ್ಲಿ ಅಮೃತಾ ಪರಿಪೂರ್ಣ ಗಮನಕೊಟ್ಟು ಕೆಲಸ ಮಾಡುತ್ತಿದ್ದಳು. ಅಮೃತಾಳ ಬಗ್ಗೆ ಶಿಫಾರಸು ಮಾಡಿ ತಾನು ತಪ್ಪು ಮಾಡಲಿಲ್ಲ ಎಂಬ ಬಗ್ಗೆ ಪರಮ್ ಗೆ ಹೆಮ್ಮೆ ಆಗುತ್ತಿತ್ತು. ಅವಳ ಲಾವಣ್ಯ ಅನಪೇಕ್ಷಿತವಾಗಿ ಅವನ ಮನಸ್ಸನ್ನು ತಟ್ಟುತ್ತಿತ್ತು.
ಇನ್ನೊಂದು ಕಡೆ ಆನಂದ್ ನ ದೈನಂದಿನ ದುರ್ವರ್ತನೆಯಿಂದ ರೋಸಿಹೋದ ಅಮೃತಾಳ ಒಳಮನಸ್ಸಿನಲ್ಲಿ ಕಿಶೋರಿಯೊಬ್ಬಳು ಜಾಗೃತಳಾಗಿದ್ದಳು. ಯಾರದ್ದಾದರೂ ಹೆಗಲ ಮೇಲೆ ತನ್ನ ತಲೆ ಇಟ್ಟು ದುಃಖ ಮರೆಯಲು ಇಷ್ಟಪಡುತ್ತಿದ್ದಳು. ಸಂಬಂಧಗಳ ಬಂಧನಗಳನ್ನು ನಿರಾಕರಿಸಲು ಇಚ್ಛಿಸುತ್ತಿದ್ದಳು. ಆದರೆ ಅವಳ ಅಂತರ್ಮನಸ್ಸಿನಲ್ಲಿ ಕುಳಿತ ಒಬ್ಬ ಪರಿಪಕ್ವ ಸ್ತ್ರೀ, ವಿವಾಹಿತ ಮಹಿಳೆ ಈ ರೀತಿ ಯೋಚಿಸುವುದು ತಪ್ಪು ಎಂದು ಒತ್ತಿ ಒತ್ತಿ ಹೇಳುತ್ತಿದ್ದಳು.
ಪರಮ್ ಗೆ ಕ್ರಮೇಣ ಆದ ಅನುಭವ ಏನೆಂದರೆ, ಅವಳು ಕೇವಲ ಸ್ನಿಗ್ಧ ಸುಂದರಿ ಅಷ್ಟೇ ಅಲ್ಲ, ಅವಳು ತೀಕ್ಷ್ಣಮತಿಯವಳು, ವಿಚಾರವಂತಳು ಎನ್ನುವುದು ತಿಳಿಯಿತು. ಪರಮ್ ನಂತಹ ದಾರ್ಶನಿಕ ಪ್ರವೃತ್ತಿಯ ವ್ಯಕ್ತಿಗೆ, ಅವಳ ಜೊತೆ ಇಷ್ಟವಾಗುತ್ತಿತ್ತು. ಇಬ್ಬರಲ್ಲೂ ಮಾನವೀಯ ಸಂವೇದನೆಗಳು ಹಾಗೂ ಮೌಲ್ಯಗಳ ಬಗ್ಗೆ ಚರ್ಚೆ ಆಗುತ್ತಿತ್ತು.
“ಅಂದಹಾಗೆ ಅಮೃತಾ, ಪ್ಲೆಟಾನಿಕ್ ಲವ್ ನಂಥದು ಇರುತ್ತದೆ ಎಂದು ನಿನಗೆ ಅನಿಸುತ್ತದೆಯೇ?”
“ಇದ್ದರೂ ಇರಬಹುದು. ಆದರೆ ಅದರ ಆಯುಷ್ಯ ಬಹಳ ಕಡಿಮೆ. ಏಕೆ?”
ಪರಮ್ ಗೆ `ಏಕೆ’ ಎಂಬ ಅಮೃತಾಳ ಪ್ರಶ್ನೆಗೆ ಒಮ್ಮತದ ಭಾವನೆ ಇರಲಿಲ್ಲ. ಅಷ್ಟರಲ್ಲಿ ಅಮೃತಾ, “ನಿಮಗೆ ಹೇಗೆ ಗೊತ್ತು ಆ ವಿಷಯ? ನೀವಂತೂ ಅಂತಹ ಸಂಬಂಧಗಳಿಂದ ದೂರ ಇರ್ತೀರಿ ಅಲ್ವಾ? ಹಾಗೆಂದೇ ನೀವು ಮದುವೆ ಮಾಡಿಕೊಂಡಿಲ್ಲ ಅಲ್ವಾ…..?” ಎಂದು ಕೇಳಿದಳು.
“ಅಂದ್ರೆ ಮದುವೆಯಾದರೆ ಈ ವಿಷಯ ವ್ಯಕ್ತಿಗೆ ಅರ್ಥವಾಗುತ್ತದೆ ಎನ್ನುವುದು ನಿನ್ನ ಭಾವನೆಯೇ?” ಅಮೃತಾಳತ್ತ ನೋಡುತ್ತಾ ಪರಮ್ ಪ್ರಶ್ನಿಸಿದ. ಅಮೃತಾ ತನ್ನದೇ ಪ್ರಶ್ನೆಯಲ್ಲಿ ಸಿಲುಕಿಕೊಂಡಳು.
ಪರಮ್ ಮುಗುಳನಗುತ್ತಾ ಹೇಳಿದ, “ಏನು ಯೋಚನೆ ಮಾಡ್ತಿರುವೆ? ನಾವೀಗ ಬೇರೆ ವಿಷಯ ಮಾತಾಡೋಣ. ಅಂದಹಾಗೆ ನಾನು ನಿನ್ನನ್ನು ಮೊದಲ ಬಾರಿ ನೋಡಿದಾಗ ಏನು ಯೋಚನೆ ಮಾಡಿದ್ದೆ ಗೊತ್ತಾ?”
“ಏನು?” ಅಮೃತಾಳ ಕಣ್ಣುಗಳಲ್ಲಿ ವಿಚಿತ್ರ ಎನ್ನಬಹುದಾದ ಜಿಜ್ಞಾಸೆ ಇತ್ತು.
“ಆಗ ನನಗೇ ನಾನೇ ಹೇಳಿಕೊಳ್ಳುತ್ತಿದ್ದೆ. ನನ್ನ ಸೋದರ ಚಂದ್ರುವಿಗೆ ಹುಡುಗಿ ಹುಡುಕುತ್ತಿದ್ದಾಗ, ನನ್ನ ದೃಷ್ಟಿಯಲ್ಲಿದ್ದ ಹುಡುಗಿ ಥೇಟ್ ಅಮೃತಾಳನ್ನೇ ಹೋಲುತ್ತಿತ್ತು. ನಾನು ತಪ್ಪಾಗಿ ಯೋಚಿಸಿರಲಿಲ್ಲ. ನಿನ್ನಲ್ಲಿ ಯಾವ ಒಳ್ಳೆಯ ಗುಣಗಳು ಇದ್ದವೋ ಅವು ಯಾವುದೇ ಹುಡುಗ ಅಂದ್ರೆ ಅದರರ್ಥ ಒಳ್ಳೆಯ ಪತ್ನಿಯೊಬ್ಬಳಲ್ಲಿ ಇರಬೇಕು.”
ಪರಮ್ ಹೀಗೆ ಕೇಳಬಹುದೆಂದು ಅಮೃತಾ ಎಂದೂ ಅಂದುಕೊಂಡಿರಲಿಲ್ಲ. ಅವನು ಅವಳಿಗಾಗಿ ಮತ್ತೇನಾದರೂ ಹೇಳಬೇಕು ಎಂದು ಅವಳು ಬಯಸತೊಡಗಿದಳು. ತನ್ನನ್ನು ಇನ್ನಷ್ಟು ಪ್ರಶಂಸೆ ಮಾಡಬೇಕು. ಸ್ವಲ್ಪ ಹೊತ್ತಿನ ಬಳಿಕ ಅವಳೇ, “ನೀವು ಹುಡುಗಿಯರ ಬಗ್ಗೆ ಇಷ್ಟೊಂದೆಲ್ಲ ತಿಳಿದುಕೊಂಡಿದ್ದೀರಿ. ಆದರೆ ನೀವೇಕೆ ಈವರೆಗೆ ಯಾವೊಬ್ಬ ಹುಡುಗಿಯನ್ನು ಆಯ್ಕೆ ಮಾಡಲಿಲ್ಲ? ಈವರೆಗೂ ಏಕೆ ಮದುವೆಯಾಗಲಿಲ್ಲ…..?” ಎಂದು ಕೇಳಿದಳು.
“ನಾನೊಬ್ಬ ಭಾವನಾತ್ಮಕ ಜೀವಿ. ಪ್ರೀತಿಯ ಬಗ್ಗೆ ಕಾಳಜಿ ವಹಿಸ್ತೀನಿ. ಆದರೆ ವಿಧಿ ವಿಧಾನಗಳ ಹೆಸರಿನಲ್ಲಿ ಪಂಜರದಲ್ಲಿ ಕೈದಿಯಾಗಲು ಇಷ್ಟಪಡುವುದಿಲ್ಲ. ಸಂಬಂಧಗಳ ಹೊರೆ ನನಗಿಷ್ಟವಾಗುವುದಿಲ್ಲ,” ಎಂದು ಹೇಳುತ್ತಾ ಪರಮ್ ಸುಮ್ಮನಾದ. ಆದರೆ ಅವನು ಇನ್ನೂ ಏನೇನೊ ಹೇಳಬಹುದು ಎಂದೆನಿಸುತ್ತಿತ್ತು.
“ಪುರುಷ ಯಾಕೆ ಪಂಜರದಲ್ಲಿ ಕೈದಿಯಾಗುತ್ತಾನೆ? ಆ ಪಂಜರ ಇರುವುದೇ ಹೆಣ್ಣುಮಕ್ಕಳಿಗೆ. ಅಲ್ಲಿ ಸಿಲುಕಿಕೊಂಡು ಅವಳು ಇಡೀ ಜೀವನ ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸುತ್ತಿರುತ್ತಾಳೆ. ಅವಳು ಆವಕಾಶವನ್ನು ನೋಡಬಹುದು. ಆದರೆ ಹಾರಲು ಸಾಧ್ಯವಿಲ್ಲ,” ಅಮೃತಾ ತಣ್ಣನೆಯ ಸ್ವರದಲ್ಲಿ ಹೇಳಿದಳು.
“ನಾನು ಯಾರನ್ನೂ ಕೈದಿಯಾಗಿಸುವುದಿಲ್ಲ….” ಎಂದು ಹೇಳುತ್ತಾ ಪರಮ್ ಮೌನಕ್ಕೆ ಶರಣಾದ.
ಅಮೃತಾಳ ಮನಸ್ಸಿನಲ್ಲಿ ವಿಚಾರಗಳು ಮತ್ತು ಪ್ರಶ್ನೆಗಳ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಅವಳು, “ಪ್ರೀತಿ, ಪ್ರೇಮ, ಪ್ರಣಯ ಈ ಪದಗಳು ಏನೇ ಆಗಿರಬಹುದು. ಆದರೆ ಎಲ್ಲವೂ ಅರ್ಥಹೀನ. ಮದುವೆಗೂ ಮೊದಲು ಈ ಪದಗಳಲ್ಲಿ ಅದೇನೊ ಹೊಳಪು ಇದೆ ಅನಿಸುತ್ತೆ. ಕಣ್ಣಿಗೆ ತೀವ್ರ ಬೆಳಕಿನಂಥ ಜಾದೂ ಕಂಡುಬರುತ್ತದೆ. ಮದುವೆಯಾದ ಬಳಿಕ ಪ್ರೀತಿಯ ವ್ಯಾಖ್ಯೆಯಲ್ಲಿ ಕತ್ತಲೆಯನ್ನು ಹುಡುಕಲಾಗುತ್ತದೆ. ರಾತ್ರಿಯ ಸಂಬಂಧವೇ ಪ್ರೀತಿಯೆಂದು ಕರೆಯಲ್ಪಡುತ್ತದೆ,” ಎಂದಳು.
“ಅಮೃತಾ, ಅದು ಏಕೆ ಹೀಗಾಗುತ್ತದೆಂದರೆ ವಿವಾಹವನ್ನು ಸುಖೀ ಕುಟುಂಬದ ಜೊತೆಗೆ ಥಳುಕು ಹಾಕಲಾಗುತ್ತದೆ. ಮದುವೆಯಿಂದಾಗಿ ಇಬ್ಬರಲ್ಲಿ ಪ್ರೀತಿ ಉತ್ಪತ್ಪಿಯಾಗುತ್ತದೆ ಎಂದು ಯಾರೊಬ್ಬರೂ ಗಮನಿಸುವುದೇ ಇಲ್ಲ. ಒಂದೆಡೆ ಪುರುಷ ತನ್ನ ಪಾಲಿನ ಪ್ರೀತಿಯನ್ನು ಹೊರಗೆ ಹುಡುಕುತ್ತಿರುತ್ತಾನೆ. ಆದರೆ ಮನೆಯಲ್ಲೂ ತನ್ನ ಸಾಮ್ರಾಜ್ಯ ಸ್ಥಾಪಿಸಲು ಹಿಂದೇಟು ಹಾಕುವುದಿಲ್ಲ. ಕುಟುಂಬ ಹಾಗೂ ಮಕ್ಕಳೊಂದಿಗೆ ತನ್ನನ್ನು ಜೋಡಿಸಿಕೊಂಡು ಸ್ತ್ರೀ ಇಡೀ ಜೀವನ ದಾಸ್ಯತ್ವ ಸ್ವೀಕರಿಸುವುದು ಅನಿವಾರ್ಯವಾಗುತ್ತದೆ.”
“ಪುರುಷ ಏಕೆ ಅಧಿಪತ್ಯ ಸ್ಥಾಪಿಸಲು ಇಚ್ಛಿಸುತ್ತಾನೆ? ತನಗೆ ತೋಚಿದಂತೆ ಏಕೆ ವರ್ತಿಸುತ್ತಾನೆ? ಆನಂದ್ ಗೆ ನನ್ನ ಯಾವುದೇ ಮಾತು ಕೇಳಿಸಿಕೊಳ್ಳಲು ಆಸಕ್ತಿ ಇಲ್ಲ. ಆಫೀಸಿನಲ್ಲಿ ಕೆಲಸ ಮಾಡುವ ಮಹಿಳಾ ಸಹೋದ್ಯೋಗಿಗಳ ಜೊತೆ ಸಾಕಷ್ಟು ಸ್ನೇಹವಿದೆ. ಆದರೆ ನಾನು ಮಾತ್ರ ಯಾವೊಬ್ಬ ಪುರುಷನ ಜೊತೆಗೂ ನಗುಮುಖದಿಂದ ಮಾತನಾಡುವುದು ಅವರಿಗೆ ಇಷ್ಟವಾಗುದಿಲ್ಲ. ನಾವು ಅವರಿಗೆ ಹೇಳಿದ್ದರಿಂದ ನಾನು ಕೆಲಸಕ್ಕೆ ಬರಲು ಸಾಧ್ಯವಾಯಿತೋ ಅಥವಾ ಇಂದಿನ ಬೆಲೆ ಏರಿಕೆ, ದುಬಾರಿ ಜೀವನಕ್ಕೆ ಹೊಂದಿಕೊಳ್ಳಲು ನನ್ನನ್ನು ಹೊರಗೆ ಕಳಿಸಲು ನಿರ್ಧಾರ ಮಾಡಿದರೊ ಏನೋ? ಆದರೂ ನಾನು ಹೊರಗೆ ಹೋಗುವುದು ಅವರಿಗೆ ಉರಿ ಉರಿ ಅನಿಸುತ್ತೆ.”
“ನಿನ್ನ ಕೈ ನೋವು ಈಗ ಹೇಗಿದೆ?” ಪರಮ್ ಆಕಸ್ಮಿಕ ಎಂಬಂತೆ ಕೇಳಿದ ಪ್ರಶ್ನೆಯಿಂದ ಅಮೃತಾ ಗಲಿಬಿಲಿಗೊಂಡಳು, `ಪರಮ್ ಗೆ ತಾನು ಗಂಡನ ಬಗ್ಗೆ ಆಡಿದ ಮಾತು ಬೇಸರವಾಯಿತೋ ಆಥವಾ…..’ಅಮೃತಾ ಇನ್ನೂ ಯೋಚನೆಯಲ್ಲಿಯೇ ಇದ್ದಳು. ಅಷ್ಟರಲ್ಲಿ ಪರಮ್ ನ ಮತ್ತೊಂದು ಪ್ರಶ್ನೆ, “ನೀನು ನಿನ್ನೆ ನಿಜವಾಗಿಯೂ ಬಾಥ್ ರೂಮಿನಲ್ಲಿ ಜಾರಿ ಬಿದ್ದಿದ್ದಾ? ಜಾರಿ ಬಿದ್ದರೆ ಕೈ ಹೀಗೆ ತಿರುಚುವುದಿಲ್ಲ….”
ಅಮೃತಾ ದುಃಖದಿಂದಲೇ ಕಣ್ಣು ಒದ್ದೆ ಮಾಡಿಕೊಂಡು ತಲೆ ತಗ್ಗಿಸಿ ಕುಳಿತಳು. ಆ ಬಳಿಕ ತನ್ನನ್ನು ತಾನು ಸಂಭಾಳಿಸಿಕೊಂಡು ಹೇಳಿದಳು, “ಹೌದು, ನೀವು ಸರಿಯಾಗಿ ಹೇಳಿದ್ರಿ. ನಾನು ಬಾಥ್ ರೂಮಿನಲ್ಲಿ ಜಾರಿ ಬಿದ್ದಿರಲಿಲ್ಲ. ನಾನು ಸುಳ್ಳು ಹೇಳಿದ್ದೆ. ನಿಮಗೂ, ಆಫೀಸಿನ ಇತರರಿಗೂ….”
“ಇದರ ಹೆಸರೇ ಮದುವೆ ಅಲ್ವೇ? ಮೊನ್ನೆ ನಾನು ನಿನ್ನ ಮನೆಗೆ ಬಂದಿದ್ದೆ. ಇನ್ನೇನು ಒಳಗೆ ಬರಬೇಕು ಎನ್ನುವಷ್ಟರಲ್ಲಿ ಆನಂದ್ ನ ಧ್ವನಿ ಕೇಳಿ ಹಾಗೇ ನಿಂತೆ. ಆನಂದ್ ನಿನಗೆ ಯಾರ ಮೆಸೇಜ್ ಓದಿ ಹೀಗೆ ನಗ್ತಿರುವೆ? ನೀನು ಬಹುಶಃ ಉತ್ತರ ಕೊಡದೆ ಹಾಗೆಯೇ ಮೆಸೇಜ್ ಓದುವುದನ್ನು ಮುಂದುವರಿಸಿರಬಹುದು. ಆ ಬಳಿಕ ನೀನು ನನ್ನ ಕೈ ಮುರಿಯಿತು ಎಂದು ಜೋರಾಗಿ ಕಿರುಚಿದೆ. ಅವನು ನಿನ್ನ ಕೈಯಿಂದ ಮೊಬೈಲ್ ಕಿತ್ತುಕೊಂಡಿರಬೇಕು. ಇದು ನನ್ನ ಊಹೆ. ನಿಜ ಅಲ್ವಾ ಅಮೃತಾ….?”
ಅಮೃತಾಳ ಕೆನ್ನೆಯ ಮೇಲೆ ಹರಿಯುತ್ತಿದ್ದ ಕಣ್ಣೀರು ಎಲ್ಲ ಸತ್ಯವನ್ನೂ ಬಿಚ್ಚಿಟ್ಟಿತು.
“ಮದುವೆಯಾದ ಸಂಬಂಧಗಳಿಗೆ ಇಂತಹ ಸ್ಥಿತಿ ಇರಬೇಕೆಂದು ನಾನೇನು ಯೋಚಿಸುವುದಿಲ್ಲ. ಆದರೆ ಹೀಗೆ ಬಹಳ ಮುಂಚಿನಿಂದಲೇ ಆಗುತ್ತಾ ಬಂದಿದೆ. ಮಹಿಳೆಗೆ ತನ್ನ ಗಂಡನೇ ಎಲ್ಲ ಆಗಿರುತ್ತಾನೆ. ಆದರೆ ಗಂಡನಿಗೆ? ರಾಣಿಯಾಗಿದ್ದ ಸೀತಾ ಗಂಡನಿಂದ ದೂರ ಇರಬೇಕಾಯಿತು. ತನ್ನ ಸುಖ ಸೌಲಭ್ಯ ಬಿಟ್ಟುಕೊಟ್ಟು 14 ವರ್ಷ ಕಾಡಿನಲ್ಲಿ ಉಳಿಯಬೇಕಾಯಿತು. ಅದೂ ಕೂಡ ತನ್ನದೇ ಇಚ್ಛೆಯ ಮೇರೆಗೆ. ಲಕ್ಷ್ಮಣ ಕೂಡ ತನ್ನ ಸೋದರತ್ವದ ಜವಾಬ್ದಾರಿ ನಿಭಾಯಿಸಲು ಅವರೊಂದಿಗೆ ಹೋಗಿಬಿಟ್ಟ. ಗಂಡನೊಬ್ಬನ ಜವಾಬ್ದಾರಿ ಲಕ್ಷ್ಮಣನಿಗೇಕೆ ಅರಿವಾಗಲಿಲ್ಲ? ಊರ್ಮಿಳಾಳಂತೆ ವಿರಹ ಅನುಭವಿಸಿದವರು ಮತ್ತಾರು ಸಿಗುತ್ತಾರೆ? ಗಂಡನಿಲ್ಲದ ಅರಮನೆ ಅವಳಿಗೆ ಮುಳ್ಳಿನರಮನೆ ಅಂತ ಅನಿಸಿರಬೇಕು ಅಲ್ವೆ?”
ಪರವ್ ನಿರಂತರವಾಗಿ ಮಾತನಾಡುತ್ತಲೇ ಇದ್ದ. “ಬುದ್ಧ ಕೂಡ ಯಶೋಧೆಗೆ ಹೇಳದೆಯೇ ಹೊರಟುಬಿಟ್ಟ. ಅವರು ನನಗೆ ಹೇಳಿಹೋಗಿದ್ದಿದ್ದರೆ…. ಎಂದು ಅವಳು ವಿಲಾಪಿಸುತ್ತಾಳೆ…..”
ಮಾತುಕತೆಯಲ್ಲಿ ದಾರಿ ಸವೆದದ್ದು ಗೊತ್ತೇ ಆಗಲಿಲ್ಲ. ಅಮೃತಾ ಕಾರಿನಿಂದ ಇಳಿಯುತ್ತಿದ್ದಾಗ ಪರಮ್ ಹೇಳಿದ, “ನೀನು ಆ ದಿನ ನನ್ನನ್ನು ಕೇಳಿದ್ದೆಯಲ್ಲಾ, ಆನಂದ್ ನ ಹಾಗೆ ನಾನು ನಿಮ್ಮನ್ನು ಅಣ್ಣನೆಂದು ಕರೆಯಲಾ ಅಥವಾ ಆಫೀಸ್ ಸಿಬ್ಬಂದಿಯ ಹಾಗೆ ಸರ್‌ಎಂದು ಕರೆಯಲಾ? ಅಂತ ಅದಕ್ಕೆ ಉತ್ತರವನ್ನು ಈಗ ಕೇಳಿಸಿಕೊಂಡು ಇಳಿ.”
ಅಮೃತಾ ಕಾರಿನ ಬಾಗಿಲನ್ನು ಅರ್ಧ ತೆಗೆದು ಉತ್ತರದ ನಿರೀಕ್ಷೆಯಲ್ಲಿ, ಕಣ್ಣರಳಿಸಿಕೊಂಡು ಪರಮ್ ಕಡೆ ನೋಡುತ್ತಿದ್ದಳು.
“ನೀನು ನನಗೆ ಏನೂ ಸಂಬೋಧಿಸದೆಯೇ ಮಾತನಾಡು. ನಾನು ನಿನಗೆ ಏನೂ ಆಗದಿದ್ದರೂ ಬಹಳಷ್ಟು ಆಗುವುದು ನನಗೆ ಖುಷಿ ಕೊಡುತ್ತದೆ. ನನಗೆ ಜೊತೆ ಕೊಟ್ಟಿದ್ದಕ್ಕೆ ಧನ್ಯವಾದ.”
“ಥ್ಯಾಂಕ್ಸ್ ನಾನು ನಿಮಗೆ ಹೇಳಬೇಕು. ನನ್ನ ನೋವನ್ನು ಅರ್ಥ ಮಾಡಿಕೊಳ್ಳುವವರು ಒಬ್ಬರಾದರೂ ಇದ್ದಾರಲ್ಲ. ನಾಳೆ ಮತ್ತೆ ಭೇಟಿಯಾಗೋಣ,” ಎಂದು ಹೇಳುತ್ತಾ ಅವಳ ಕಾಲುಗಳೇನೋ ಮುಂದೆ ಸಾಗಿದ. ಆದರೆ ಅವಳಿಗೆ ಮಾತ್ರ ತಾನು ಕಾರಿನಲ್ಲಿಯೇ ಇದ್ದೇನೆ ಎಂದು ಭಾಸವಾಗುತ್ತಿತ್ತು. ಮನೆಗೆ ಹೋಗುತ್ತಿರುವವಳು ಒಬ್ಬ ಪತ್ನಿ ಮಾತ್ರ, ತಾನು ಕಟ್ಟಿಕೊಂಡ ಸಂಬಂಧ ನಿಭಾಯಿಸಲು.
ಪರಮ್ ಕಾರನ್ನು ಮುಂದೆ ಓಡಿಸಿದ. ಕಾರಿನ ಖಾಲಿ ಸೀಟಿನ ಮೇಲೆ ಅದೃಶ್ಯ ವ್ಯಕ್ತಿತ್ವವೆಂದು ಅವನಿಗೆ ಗೋಚರಿಸುತ್ತಿತ್ತು. ತನ್ನ ಆಕರ್ಷಣೆಯಲ್ಲಿ ಬಂಧಿಯಾದ ಅಮೃತಾಳಂತಹ ಪ್ರತಿರೂಪ. ಮನೆ ತಲುಪಿದಾಗ, ಅವನಿಗೆ ಅಲ್ಲಿ ಖಾಲಿ ಖಾಲಿ ಎಂಬ ಭಾವನೆ ಬರುತ್ತಿತ್ತು.
ಆಫೀಸಿನಲ್ಲಿ ಅವರಿಗೆ ಮನೆ ವಿಷಯಗಳ ಬಗ್ಗೆ ಮಾತನಾಡಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಬೆಳಗ್ಗೆ ಆಫೀಸಿಗೆ ಬರುವಾಗ ಆ ದಿನ ಮಾಡುವ ಕೆಲಸಗಳ ಬಗ್ಗೆಯೇ ಚರ್ಚೆ ಆಗುತ್ತಿತ್ತು. ಆಫೀಸಿನಿಂದ ಮನೆಗೆ ಹೋಗುವಾಗ ಮಾತ್ರ ಅವರು ತಮ್ಮ ವಿಚಾರಗಳನ್ನು ಪರಸ್ಪರರ ಮುಂದೆ ಇಡುತ್ತಿದ್ದರು.
“ನಿನ್ನ ಪರ್ಸನಲ್ ವಿಷಯದ ಬಗ್ಗೆ ಒಂದು ಪ್ರಶ್ನೆ ಕೇಳಬಹುದಾ ಅಮೃತಾ?” ಆ ದಿನ ಪರಮ್ ಅಮೃತಾಳನ್ನು ಕೇಳಿದಾಗ ಅವಳು ಮುಗುಳ್ನಗುತ್ತಲೇ,
“ಕೇಳಿ…” ಎಂದು ಉಸುರಿದಳು.
“ನಿಮ್ಮಿಬ್ಬರ ಜೀವನದಲ್ಲಿ ಪುಟ್ಟ ಜೀವವೊಂದು ಏಕೆ ಪ್ರವೇಶ ಮಾಡಲಿಲ್ಲ?”
“ಮದುವೆಯ ಹೊಸತರಲ್ಲಿ ಆನಂದ್ ನನಗೆ ನಾನೀಗಲೇ ಹೊಸದೊಂದು ಹೊರೆಯನ್ನು ಹೊರಲು ಆಗುವುದಿಲ್ಲ ಎಂದು ಹೇಳಿದ್ದರು. ಹಾಗಾಗಿ ನಾನು ಅವನ ಮಾತನ್ನು ಒಪ್ಪಿಕೊಂಡಿದ್ದೆ.”
“ಎರಡು ವರ್ಷಗಳ ಮುಂಚೆಯೇ, ನನಗೆ ನಿನ್ನಲ್ಲಿ ಸಮರ್ಪಣೆ ಭಾವ ಕಂಡುಬರುತ್ತಿತ್ತು.” ಪರಮ್ ನ ಮಾತು ಕೇಳಿ ಅಮೃತಾಳ ಮನಸ್ಸಿನ ಅಣೆಕಟ್ಟು ಒಡೆಯಿತು. ಅವಳಿಂದ ಮಾತುಗಳು ನೀರಿನ ಪ್ರವಾಹದಂತೆ ಹರಿಯತೊಡಗಿದವು.
“ನಾನಂತೂ ಆನಂದ್ ಗೆ ಇಷ್ಟದ ಪತ್ನಿ ಆಗಬೇಕು ಅಂದುಕೊಂಡಿದ್ದೆ. ನನ್ನ ಮನಸ್ಸು ಇಚ್ಛೆ, ಅಭಿಲಾಷೆಗಳನ್ನು ಬದಿಗೊತ್ತಿ, ಅವರು ಏನು ಮಾಡಿದರೂ ಸರಿ, ಅವರ ಹೃದಯದ ನಾಯಕಿ ಆಗಬೇಕೆಂದುಕೊಂಡಿದ್ದೆ.
“ಅದೊಂದು ದಿನ ಆನಂದ್ ತನ್ನ ಸ್ನೇಹಿತ ಹಾಗೂ ಅವರ ಹೆಂಡತಿಯೆದುರು ನನ್ನ ಬಗ್ಗೆ ಹೇಳುತ್ತಿದ್ದರು. ನನಗೆ ನನ್ನದೇ ಆದ ಬುದ್ಧಿ ಇಲ್ಲವೇ ಇಲ್ಲ. ಅವರು ಹೇಗೆ ಹೇಳುತ್ತಾರೋ ಹಾಗೆ ನಾನು ಮಾಡುತ್ತೇನಂತೆ. ನನ್ನ ಪ್ರೀತಿ, ತ್ಯಾಗ ಇವು ಆನಂದ್ ಗೆ ನನ್ನ ದೌರ್ಬಲ್ಯಗಳು ಎನಿಸುತ್ತವೆ. ಆ ವಿಷಯ ಕೇಳಿ ನಾನು ಥರಗುಟ್ಟಿ ಹೋಗಿದ್ದೆ. ಆ ಸಮಯದಲ್ಲಿ ನಾನು ಮನೆಗೆ ಬಂದವರಿಗಾಗಿ ಚಹಾ ಮಾಡುತ್ತಿದ್ದೆ. ಆನಂದ್ ಬಾಯಿಂದ ಈ ವಿಷಯ ಕೇಳಿ ನನ್ನ ಕೈಯಿಂದ ಚಹಾದ ಕಪ್ ಗಳು ಕೆಳಗೆ ಬಿದ್ದವು. ಆ ಕಪ್ ನ ಚೂರುಗಳನ್ನು ನಾನು ಆರಿಸಿದೆ. ಆಗ ನನಗೆ ನನ್ನ ಬಂಗಾರದಂಥ ಕನಸುಗಳು ಚೂರು ಚೂರಾದವು. ಅವನ್ನು ನಾನು ಆರಿಸಿ ಸಂಗ್ರಹಿಸಬಹುದು. ಆದರೆ ಅವನ್ನು ಪುನಃ ಜೋಡಿಸಲಾಗದು ಎನಿಸಿತು.
“ಆ ದಿನದ ಬಳಿಕ ನಮ್ಮಿಬ್ಬರ ನಡುವೆ ಒಂದು ರೀತಿಯ ಪ್ರತ್ಯೇಕತೆ ಉಂಟಾಯಿತು. ಈ ಒಂದು ನೋವಿನಿಂದ ಪಾರಾಗಲು ನಾನು ಮತ್ತೊಮ್ಮೆ ಆನಂದ್ ಎದುರು ತಾಯಿಯಾಗುವ ಬಗ್ಗೆ ಕೇಳಿದಾಗ, ಅವರಿಂದ ಬಂದ ಉತ್ತರ, `ಜೀವನದ ಆನಂದ ಪಡೆದು ಆ ಬಳಿಕ ಜವಾಬ್ದಾರಿ ತೆಗೆದುಕೊಳ್ಳೋಣ,’ ಎಂದಾಗಿತ್ತು. ಜೀವನದ ಆನಂದ ಯಾರೊಂದಿಗೆ ಪಡೆದುಕೊಳ್ಳುತ್ತಿರುವಿರಿ ಆನಂದ್? ಹೆಂಡತಿಗೆ 10 ನಿಮಿಷಗಳ ಕಾಲ ಹಿಂಸೆ ಕೊಡುವುದು ಯಾವ ಆನಂದ? ಪ್ರೀತಿ ಮತ್ತು ಮದುವೆಯಲ್ಲಿ ಯಾವುದೂ ಸಂಬಂಧವಿಲ್ಲವೇ? ಹೀಗೆ ಎಷ್ಟೋ ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತವೆ ಅವಕ್ಕೆ ಉತ್ತರ ಸಿಗಲಾರದೆ ಅವು ಹೆಚ್ಚುತ್ತಲೇ ಹೊರಟಿವೆ.”
“ಒಂದು ವೇಳೆ ಗಂಡ ಹೆಂಡತಿ ಪ್ರೇಯಸಿ ಪ್ರಿಯಕರನ ಹಾಗೆ ಪರಸ್ಪರರನ್ನು ತಮ್ಮದೇ ಎಲ್ಲ ಅಂದುಕೊಂಡು ನಡೆದಿದ್ದರೆ, ಪ್ರೀತಿಯಲ್ಲಿ ಅಂಧರಾಗಿ ದೃಷ್ಟಿ ಪರಸ್ಪರರ ಮೇಲೆ ನೆಟ್ಟಿದ್ದರೆ ವಿವಾಹದ ಮತ್ತೊಂದು ಹೆಸರು ಪ್ರೇಮ ಎಂದಾಗುತ್ತಿತ್ತು. ಆದರೆ ಅದಕ್ಕಾಗಿ ಗಂಡನ ಆಸೆ ಹಾಗೂ ಸಮರ್ಪಣೆ ಕೂಡ ಅವಶ್ಯಕ ಅಲ್ವಾ ಅಮೃತಾ….?”
“ಹಾಗಾದರೆ ನಾನೇನು ಮಾಡಬೇಕು? ಯಾರನ್ನು ಹೇಗೆ ಬದಲಿಸಬೇಕು?” ಅಮೃತಾ ನಿಟ್ಟಿಸಿರುಬಿಡುತ್ತಾ ಕೇಳಿದಳು.
“ನೀನು ಬದಲಾಗಬೇಕು ಅಮೃತಾ. ನಿನಗೆ ಸಂತೋಷ ಎಲ್ಲಿ ಸಿಗುತ್ತೋ ಅಲ್ಲಿ ಹುಡುಕು. ನಿನ್ನ ಪ್ರೀತಿಯನ್ನು ಹೀಗೆ ವ್ಯರ್ಥವಾಗಿ ಏಕೆ ಹರಿಸುತ್ತಿರುವೆ? ಯಾವುದಾದರೂ ಬಂಜರು ಭೂಮಿಯಲ್ಲಿ ಹಸಿರನ್ನೇಕೆ ಸೃಷ್ಟಿಸಬಾರದು? ಆಫೀಸ್ ನವರ ಜೊತೆ ನಗುನಗುತ್ತಾ ಮಾತಾಡಿ ನಿನ್ನ ಮನದ ದುಗುಡವನ್ನು ಕಳೆಯಲು ಪ್ರಯತ್ನಿಸು. ಆಫೀಸ್ ನ ಪುರುಷ ಸಿಬ್ಬಂದಿಯ ನಡುವೆ ನಿನ್ನ ಬಗ್ಗೆ ಚರ್ಚೆ ನಡೆಯುತ್ತಿರುತ್ತವೆ. ಅವರು ನಿನ್ನನ್ನು ಮದುವೆಯಾದಲಳು ಎಂದು ಭಾವಿಸುವುದೇ ಇಲ್ಲ. ನಿನ್ನ ಸೌಂದರ್ಯಕ್ಕೆ ನಾನೊಬ್ಬನೇ ಅಲ್ಲ, ಆಫೀಸಿನ ಇಡೀ ಸಿಬ್ಬಂದಿಯೇ ಮರುಳಾಗಿಬಿಟ್ಟಿದೆ.
ಪರಮ್ ನ ಮಾತುಗಳನ್ನು ಕೇಳಿ ಅಮೃತಾಳಲ್ಲಿ ಉದಾಸತನ ಹೊರಟುಹೋಗಿ ನಗು ಚಿಮ್ಮಿತು. ಅಲಳು ಪರನಿ ಗೆ, “ನೀವು ಕೂಡ ಹ್ಯಾಂಡ್ ಸಮ್ ಆಗಿದ್ದೀರಿ. ನಿಮ್ಮ ಬಗ್ಗೆಯೂ ಚರ್ಚೆ ಆಗುತ್ತಿರಬೇಕಲ್ಲ. ನೀವು ಮದುವೆ ಆಗುವುದಿಲ್ಲ ಎನ್ನುವುದೇನೋ ಸರಿ. ಆದರೆ ನಿಮಗೆ ಯಾರ ಬಗ್ಗೆಯೂ ಪ್ರೀತಿ ಆಗಲಿಲ್ಲವೇ?” ಅಮೃತಾ ತುಂಟತನದಿಂದ ಕೇಳಿದಳು.
ಪರಮ್ ಏನೋ ಯೋಚಿಸುತ್ತಾ ಗಂಭೀರನಾಗಿ, “ನಾನು ನಿನಗೆ ನನ್ನ ಬಗ್ಗೆ ಹಲವು ದಿನಗಳಿಂದ ಒಂದು ವಿಷಯ ಹೇಳಬೇಕು ಅಂದುಕೊಂಡಿದ್ದೆ,” ಎಂದು ಹೇಳುತ್ತಾ ಅವನು ಸ್ವಲ್ಪ ಹೊತ್ತು ಮೌನವಾದ. ತನ್ನ ಮಾತುಗಳನ್ನು ಮುಂದುವರಿಸಲು ಅವನು ಕೆಲವು ಪದಗಳನ್ನು ಹುಡುಕುತ್ತಿದ್ದಾನೇನೊ ಎಂದೆನಿಸತೊಡಗಿತು ಅಮೃತಾಗೆ.
ಆ ಬಳಿಕ ಹೇಳಿದ, “ಪ್ರೀತಿಯೇನೂ ಆಗಿತ್ತು. ಸ್ವಿಡ್ಜರ್ಲೆಂಡ್ ನಲ್ಲಿ ಒಬ್ಬ ಹುಡುಗಿಯ ಜೊತೆ. ಅವಳು ನನ್ನೊಂದಿಗೆ ಹಲವು ದಿನಗಳ ಕಾಲ ಇದ್ದಳು. ಅದೊಂದು ದಿನ ಮಧ್ಯಾಹ್ನ ನಾನು ಆಕಸ್ಮಿಕಾಗಿ ಮನೆಗೆ ಬಂದಾಗ ಮನೆ ಶಾಂತವಾಗಿತ್ತು. ಬಹುಶಃ ಅವಳು ನಿದ್ದೆ ಮಾಡುತ್ತಿರಬೇಕು ಅಂದುಕೊಂಡಿದ್ದೆ.
“ಡೂಪ್ಲಿಕೇಟ್ ಬೀಗದ ಕೈಯಿಂದ ಬಾಗಿಲು ತೆಗೆದು ಒಳಹೋದಾಗ ಅವಳು ತನ್ನ ಗೆಳೆಯನ ಜೊತೆ ಮಲಗಿದ್ದಳು. ನನ್ನ ಸಮರ್ಪಣಾ ಭಾವ ನರಳಿತು. ವಿಶ್ವಾಸ ಮಮ್ಮಲ ಮರುಗಿತು. ಆ ಸಂಬಂಧವನ್ನು ನಾನು ತುಂಡರಿಸಿಬಿಟ್ಟೆ. ಅದರಿಂದ ಹೊರಬರಲು ನನಗೆ ಅನೇಕ ತಿಂಗಳುಗಳೇ ಬೇಕಾದವು. ದೈಹಿಕ ಅವಶ್ಯಕತೆಯನ್ನಂತೂ ಪೂರೈಸಿಕೊಳ್ಳಲೇಬೇಕು ಎಂದು ನಿರ್ಧರಿಸಿ ಒಬ್ಬ ವಿವಾಹಿತ ಮಹಿಳೆಯ ಸಂಗ ಮಾಡಿದೆ.
“ಅವಳೂ ಕೂಡ ನನ್ನ ಹಾಗೆ ದೈಹಿಕ ಸಂಬಂಧ ಬಯಸುತ್ತಿದ್ದಳು. ಆ ಸಂಬಂಧ ಕೂಡ ಬಹು ಬೇಗ ಅಂತ್ಯಗೊಂಡಿತು. ನಾನೇ ನನ್ನನ್ನು ಆ ಸಂಬಂಧದಿಂದ ಪ್ರತ್ಯೇಕಿಸಿಕೊಂಡೆ. ಆ ಬಳಿಕ ನಾನು ಇಂತಹ ಸಂಬಂಧಗಳನ್ನು ಮುಂದುವರಿಸಲಿಲ್ಲ.
“ಈ ಎರಡು ಘಟನೆಗಳು ನಾನು ಸ್ವಿಡ್ಜರ್ಲೆಂಡ್ ಗೆ ಹೋದ 6 ತಿಂಗಳಲ್ಲಿಯೇ ಘಟಿಸಿದವು. ದೇಹ ಭೋಗ ಬಯಸುತ್ತೆ. ಆದರೆ ಮನಸ್ಸು ಸಮರ್ಪಣೆ ಮತ್ತು ವಿಶ್ವಾಸ ಬಯಸುತ್ತಿದೆ ಎಂದೆನಿಸುತ್ತಿತ್ತು. ಇದಕ್ಕೂ ಮಿಗಿಲಾಗಿ ನನಗೆ ಒಂದು ಅನುಭವೆಂದರೆ, ಪ್ರೀತಿಯಿಲ್ಲದೆ ನಡೆಸಿದ ದೈಹಿಕ ಸಂಬಂಧ ಪ್ರಾಣಿಗಳಂತೆ.”
“ಈ ಎಲ್ಲ ಕಾರಣಗಳಿಂದಲೇ ನೀವು ಬಹುಶಃ ಮದುವೆ ಆಗಲು ಇಷ್ಟಪಡುತ್ತಿಲ್ಲವೇನೋ? ಇಬ್ಬರ ನಡುವೆ ಪ್ರೀತಿ ಉಂಟಾಗುತ್ತಾ ಇಲ್ಲವೋ ಎನ್ನುವ ಸಂದೇಹ ನಿಮಗಿದೆ. ನೀವು ಸಂಬಂಧಕ್ಕೆ ಬೆಲೆ ಕೊಡುತ್ತೀರಿ, ಭಾವನೆಗಳನ್ನು ಗೌರವಿಸುತ್ತೀರಿ, ಪ್ರೀತಿ ಧಾರೆ ಎರೆಯುತ್ತೀರೋ ಅಷ್ಟನ್ನು ಪಡೆದುಕೊಳ್ಳಬೇಕು ಎನ್ನುವುದು ನಿಮ್ಮ ಯೋಚನೆ, ಎನ್ನುವುದು ನನಗೆ ಗೊತ್ತು. ಹಾಗಿದ್ದರೆ ನೀವು ಮದುವೆಯಾಗಬೇಕು.”
ಪರಮ್ ಆಕಸ್ಮಿಕವಾಗಿ ಕಾರಿನ ಬ್ರೇಕ್ ಹಾಕಿದ. ಇಬ್ಬರಿಗೂ ಒಮ್ಮೆಲೇ ಆಘಾತವಾದಂತಾಯಿತು. ಆಗ ಪರಮ್ ಹೇಳಿದ, “ಈಗ ನೀನು ಹೇಳಿದ್ದು ಕೇಳಿ ನನಗೂ ಹೀಗೆಯೇ ಆಘಾತವಾಯಿತು. ನನಗೆ ನಿಜವಾಗಿಯೂ ಪ್ರೀತಿ ಕೊಡಲು ಮತ್ತು ಸ್ವೀಕರಿಸಲು ಗೊತ್ತೆ? ಅಮೃತಾ, ನೀನು ನನಗೆ ಮೊದಲೇ ಏಕೆ ಸಿಗಬಾರದಿತ್ತು?”
ಸ್ವಲ್ಪ ಹೊತ್ತು ಇಬ್ಬರೂ ಮೌನವಾಗಿಯೇ ಕುಳಿತುಕೊಂಡು ನೆಮ್ಮದಿಯಿಂದ ಕೂಡಿದ ಕ್ಷಣಗಳನ್ನು ಅನುಭವಿಸತೊಡಗಿದರು. ಅಮೃತಾಳ ಮನೆ ಬಂದಾಗ ಅವಳು ಮುಗುಳ್ನಗುತ್ತಲೇ ಬೈ ಎಂದು ಹೇಳುತ್ತಾ ಕಾರಿನಿಂದ ಇಳಿದಳು.
ಮನೆ ತಲುಪಿ ಎಂದಿನಂತೆ ಅಮೃತಾ ಚಹಾ ತಯಾರಿಸಿಕೊಂಡು ಬೆಡ್ ರೂಮಿಗೆ ಹೋದಳು. ಆನಂದ್ ಇವತ್ತು ಎಂದಿನಂತೆ ಟಿವಿ ನೋಡುವುದರಲ್ಲಿ ಮಗ್ನನಾಗಿರಲಿಲ್ಲ. ಚಹಾ ಗುಟುಕರಿಸುತ್ತಾ ಮಾತು ಶುರು ಮಾಡಿದ, “ನಿನಗೆ ಹೋಗಿ ಬರುವ ದಣಿವಾದರೂ ಕಡಿಮೆಯಾಯಿತು. ಪರಮ್ ಅಣ್ಣನ ಕಾರಿನ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿರುವೆ. ನನಗೆ ಲೋಕಲ್ ಮತ್ತು ಹೊರಗಿನ ಟೂರ್ ನಿಂದ ಪುರಸತ್ತು ಸಿಗುವುದೇ ಇಲ್ಲ. ಅನಿವಾರ್ಯ, ಏನೂ ಮಾಡಲು ಸಾಧ್ಯವಿಲ್ಲ.” ಎಂದ.
“ಆದರೆ ದಿನ ಸಂಜೆ ನಿಮ್ಮ ಆಫೀಸಿನಿಂದ ಬಂದಿದ್ದಾಗ, `ಆಫೀಸಿನ ಯಾರೇ ಆಗಲಿ ಹೊರಗೆ ಟೂರ್ ಹೋಗಲು ನಿರಾಕರಿಸಿದರೂ ನೀವು ಅವರ ಬದಲು ಹೋಗಲು ತಯಾರಾಗುತ್ತೀರಿ ಅಂತ,’ ನಿಮ್ಮ ಆಫೀಸಿನ ಶಂಕರ್ ಹೇಳ್ತಾ ಇದ್ರಲ್ಲ,” ಎಂದಳು ಅಮೃತಾ.
“ನಾನಂತೂ ಯಾವಾಗಲೂ ಸುಳ್ಳು ಹೇಳ್ತೀನಿ. ಬೇರೆಯವರು ಮಾತ್ರ ಸತ್ಯ ಹೇಳ್ತಾರಾ…..?” ಕಣ್ಣು ಕೆಂಪಗೆ ಮಾಡುತ್ತಾ ಹೇಳಿದ.
ಮೌನವಾಗಿರುವುದರಲ್ಲಿ ಜಾಣತವಿದೆ ಎಂದಕೊಂಡ ಅಮೃತಾ, ಬೇಗ ಬೇಗ ಚಹಾ ಕುಡಿದು ಅಡುಗೆಮನೆಗೆ ಹೋದಳು.
ಅಡುಗೆ ಮನೆಯಲ್ಲಿದ್ದ ಮೊಬೈಲ್ ನ ನೋಟಿಫಿಕೇಶನ್ ನ ಧ್ವನಿ ಕಿವಿಗೆ ಕೇಳಿಸಿ ಅದನ್ನು ತೆರೆದು ನೋಡಿದಾಗ ಅವಳಿಗೆ ದಿಗಿಲಾಯಿತು. ಅವಳ ಬ್ಯಾಂಕ್ ಖಾತೆಯಿಂದ ಯಾರೋ 1 ಲಕ್ಷ ತೆಗೆದಿದ್ದರು. ವವಳು ಓಡೋಡುತ್ತಾ ಹೊರಗೆ ಆನಂದ್ ಬಳಿ ಬಂದು ಗಾಬರಿಯಿಂದ, “ನನ್ನ ಅಕೌಂಟ್ ನಿಂದ ಯಾರೋ ಹಣ……”
“ಯಾರೋ ಏಕೆ, ನಾನೇ ನಿನ್ನ ಅಕೌಂಟ್ ನಿಂದ ನನ್ನ ಆಫೀಸ್ ಸೆಕ್ರೆಟರಿ ಚಂದ್ರಿಕಾಳ ಹೆಸರಿಗೆ ಟ್ರಾನ್ಸ್ ಫರ್ ಮಾಡಿದೆ. ಮುಂದಿನ ವಾರ ಮಲೇಷಿಯಾ ಟೂರ್ ಗೆ ನನ್ನೊಂದಿಗೆ ಬರಲಿದ್ದಾಳೆ. ಆಫೀಸ್ ನಿಂದ ಅವಳಿಗೆ ಟೂರ್ ಟಿಕೆಟ್ ಗೆ ಅಡ್ವಾನ್ಸ್ ಹಣ ದೊರೆಯಲಿಲ್ಲ ಎಂದು ಹೇಳ್ತಾ ಇದ್ದಳು. ಹಣ ದೊರೆತ ನಂತರ ವಾಪಸ್ ಕೊಡುವುದಾಗಿ ಹೇಳಿ ನನ್ನ ಬಳಿ ಕೇಳಿದಳು. ಅವಳಿಗೆ ಖರ್ಚು ಮಾಡಲೂ ಕೂಡ ಹಣ ಇಲ್ಲ. ಸಂಬಳದ ಹಣ ಅವಳ ಅನಾರೋಗ್ಯಪೀಡಿತ ಅತ್ತೆಯ ಚಿಕಿತ್ಸೆಗೆ ಸಾಲುವುದಿಲ್ಲ. ಅದಕ್ಕೆ ನಿನ್ನ ಅಕೌಂಟ್ ನಿಂದ ತೆಗೆದುಕೊಟ್ಟೆ,” ಎಂದ.
“ಆದರೆ ನೀವು ನನ್ನನ್ನು ಒಂದು ಮಾತಾದರೂ ಕೇಳಬಹುದಿತ್ತು ಅಲ್ವೇ? ಒಂದಿಷ್ಟು ಹಣ ಖಾತೆಯಲ್ಲಿ ಜಮಾ ಆಗಿತ್ತು. ಈಗ ಖಾತೆ ಪೂರ್ತಿ ಬರಿದಾಯಿತು,” ಎಂದು ಹೇಳುತ್ತಾ ಅವಳ ಕಣ್ಣುಗಳು ತುಂಬಿಬಂದವು.
“ಆ ಹಣ ನನ್ನದು, ನಿನ್ನದು ಎಂಬ ಮಾತು ಏಕೆ ಹೇಳ್ತಿರುವೆ. ಇಷ್ಟು ದಿನ ನಾನು ಗಳಿಸಿದ ಹಣದಲ್ಲಿಯೇ ತಾನೇ ಊಟ, ಬಟ್ಟೆಗೆಂದು, ಮೋಜು ಮಜಾಕ್ಕೆಂದು ಖರ್ಚು ಮಾಡ್ತಿದ್ದೆ. ಇವತ್ತು ನಾನು ಮೊದಲ ಬಾರಿ ನಿನ್ನ ಖಾತೆಯಿಂದ ಹಣ ತೆಗೆದುಕೊಂಡೆ ಎಂದು ನನ್ನ ಮೇಲೆಯೇ ಗೂಬೆ ಕೂರಿಸ್ತಿದಿಯಾ…?”
“ಈ ಹಣವನ್ನು ನೀವು ಚಂದ್ರಿಕಾಗೆ….”
“ಬಾಯಿ ಮುಚ್ಚಿಕೊಂಡು ಸುಮ್ನಿರು,” ಎಂದು ಅವಳ ಮಾತನ್ನು ತುಂಡರಿಸುತ್ತಾ ಅವಳ ಹತ್ತಿರ ಬಂದು ಅವಳನ್ನು ಜೋರಾಗಿ ತಳ್ಳುತ್ತಾ, “ಅಡುಗೆ ಮನೆಗೆ ಹೋಗಿ ನಿನ್ನ ಕೆಲಸ ನೋಡಿಕೊ. ನನಗೆ ಹಸಿವಾಗಿದೆ ಎನ್ನುವುದು ನಿನಗೆ ಸ್ವಲ್ಪವೂ ಚಿಂತೆಯಿಲ್ಲ. ನಿರ್ಲಜ್ಜ ಹೆಂಗಸಿನ ಹಾಗೆ ನನ್ನ ಮುಂದೆ ವಾದ ಮಾಡ್ತಿರುವೆಯಲ್ಲಾ…..” ಎಂದು ಹೇಳುತ್ತಾ ಮತ್ತೊಮ್ಮೆ ತಳ್ಳಿದ.
ಅಮೃತಾಳಿಗೆ ಆ ಕ್ಷಣವೇ ಅಲ್ಲಿಂದ ದೂರ ಓಡಿಹೋಗಬೇಕು ಎನಿಸುತ್ತಿತ್ತು. ಈ ಸಂಬಂಧದ ಆಟದಲ್ಲಿ ನಾನು ಸೋತುಹೋಗಿದ್ದೇನೆ. ಎಂದು ಕೂಗಿ ಕೂಗಿ ಹೇಳಬೇಕು ಎನಿಸುತ್ತಿತ್ತು. ಗಂಡ ಹೆಂಡತಿಯ ಛದ್ಮ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ ಎಂದು ಹೇಳಬೇಕು ಅನಿಸುತ್ತಿತ್ತು. ಆಗ ನನ್ನ ನೋವು ಕನಿಷ್ಠ ಎಲ್ಲರೆದುರಾದರೂ ಇರುತ್ತಿತ್ತು. ದಿನದಿನದ ಅಪಮಾನದ ಬೆಂಕಿಯಲ್ಲಿ, ಮೇಣದ ಬತ್ತಿಯ ಹಾಗೆ ಕರಗಿ ಹೋಗುತ್ತಿರುವೆ. ಅದರಿಂದ ನನಗೆ ಮುಕ್ತಿ ಬೇಕು ಅನಿಸುತ್ತಿತ್ತು. ರಾತ್ರಿ ಹಾಸಿಗೆಯಲ್ಲಿ ಆನಂದ್ ಅಮೃತಾಳ ಹತ್ತಿರ ಸರಿದ. ಅವಳ ಮನಸ್ಸು ಏನನ್ನೂ ಯೋಚಿಸುವ ಸ್ಥಿತಿಯಲ್ಲಿರಲಿಲ್ಲ, “ನಿದ್ದೆ ಬರ್ತಿದೆ,” ಎಂದು ಹೇಳುತ್ತಾ, ಅವಳು ಮಗ್ಗುಲು ಬದಲಿಸಿದಳು.
ಆನಂದ್ ಅವಳನ್ನು ತನ್ನತ್ತ ಎಳೆದುಕೊಳ್ಳುತ್ತಾ, “ದೇಹದ ಹಸಿವು ನೀಗಿಸಿಕೊಳ್ಳಲು ನಾನು ವೇಶ್ಯೆಯ ಬಳಿ ಹೋಗಬೇಕಾ…..?” ಎಂದು ಕೇಳಿದ.
ನಿರ್ಲಜ್ಜತೆಯಿಂದ ತನ್ನ ದೇಹದ ಹಸಿವು ನೀಗಿಸಿಕೊಂಡು ಆನಂದ್ ಮಲಗಿದ. ಅಮೃತಾ ಮಾತ್ರ ರಾತ್ರಿಯಿಡೀ ಮಗ್ಗುಲು ಬದಲಿಸುತ್ತಿದ್ದಳು. ಯಾರೋ ಒತ್ತಾಯಪೂರ್ವಕವಾಗಿ ತನ್ನ ದೇಹವನ್ನು ಹಿಂಡಿ ಹಿಪ್ಪೆ ಮಾಡಿದಂತೆ, ತಾನು ವಿವಶಳಂತೆ ಏನೂ ಮಾಡಲಾರದ ಸ್ಥಿತಿ ತಲುಪಿರುವೆ ಎಂದು ಅವಳಿಗೆ ಅನಿಸತೊಡಗಿತು.
ಮರುದಿನ ಅಮೃತಾ ಇಡೀ ದಿನ ಆಫೀಸಿನಲ್ಲಿ ಉದಾಸವಾಗಿ ಕುಳಿತಿದ್ದಳು. ಅವಳಿಗೆ ಮತ್ತೆ ಮತ್ತೆ ಅಳಬೇಕು ಎನಿಸುತ್ತಿತ್ತು. ಸಂಜೆ ಕಾರಿನಲ್ಲಿ ವಾಪಸ್ಸಾಗುವಾಗ ಪರಮ್, “ನಿನ್ನ ಮನಸ್ಸಿನಲ್ಲಿ ಏನಿದೆ, ಅದನ್ನು ಹೊರಹಾಕು. ಇವತ್ತು ಇಡೀ ದಿನ ನಿನ್ನನ್ನು ಆ ಸ್ಥಿತಿಯಲ್ಲಿ ನೋಡಿ ನನಗೂ ಬೇಸರವಾಯಿತು,” ಎಂದು ಹೇಳಿದ.
ಅಮೃತಾ ಹಿಂದಿನ ದಿನದ ಘಟನೆಯನ್ನು ಅವನು ಮುಂದೆ ಹೇಳಿದಳು.“ನೀನು ಒಪ್ಪಿಗೆ ಕೊಟ್ರೆ ಇವತ್ತೇ ಮನೆಗೆ ಬಂದು ಅವನನ್ನು ಸರಿಯಾಗಿ ವಿಚಾರಿಸಿಕೊಳ್ತೀನಿ,” ಪರಮ್ ಕ್ರೋಧದಿಂದ ಹೇಳಿದ.
“ಬೇಡ ಬೇಡ…. ಹಾಗೆ ಮಾಡಿದರೆ ನಿಮ್ಮ ಜೊತೆ ಮಾತನಾಡಲು ಕೂಡ ನಿರ್ಬಂದ ಹೇರಬಹುದು,” ಎಂದಳು.
“ಹಾಗೆ ಹೇಗೆ ತಾನೇ ಮಾಡುತ್ತಾನೆ ಅವನು? ಅವನದೇ ನಡೆಯಬೇಕಾ? ನಾನು ಯಾವಾಗ, ಹೇಗೆ ಅವನಿಗೆ ತಿಳಿಸಿ ಹೇಳಬೇಕು ಹೇಳು. ನಿನ್ನನ್ನು ನೀನು ಹಿಂಸಿಸಿಕೊಂಡು ಎಷ್ಟು ದಿನ ಹೀಗೆಯೇ ಇರ್ತೀಯಾ? ಕುಗ್ಗಿ ಕುಗ್ಗಿ ಸತ್ತು ಹೋಗ್ತೀಯಾ ಒಂದು ದಿನ,” ಎಂದ.
ಅಮೃತಾ ಬಿಕ್ಕಿ ಬಿಕ್ಕಿ ಅಳುತ್ತಾ, “ಈ ಸಂಬಂಧದಿಂದ ಅದೆಷ್ಟು ಖುಷಿ ಸಿಗಬಹುದು ಅಂದುಕೊಂಡಿದ್ದೆ. ಮದುವೆಗೂ ಮುಂಚೆ ಅದೆಷ್ಟೋ ಹವ್ಯಾಸಗಳನ್ನು ಈಡೇರಿಸಿಕೊಳ್ಳಬೇಕೆಂದು ಯೋಚಿಸಿದ್ದೆ. ಆದರೆ ನನಗೆ ಸಿಕ್ಕಿದ್ದೇನು? ನಿರಾಶೆ, ಅವಮಾನ ಮತ್ತು ಅದರಿಂದ ಎಂದೂ ದೂರ ಆಗಲಾರದ ರಿಕ್ತತೆ,” ಎಂದಳು ಬೇಸರದ ಸ್ವರದಲ್ಲಿ ಹೇಳಿದಳು.
“ಇಂದು ಎಲ್ಲಿಯಾದರೂ ಕಾಫಿ ಕುಡಿದುಕೊಂಡು ಹೋಗೋಣ. ಮನೆಗೆ ತಡವಾಗಿ ಹೋದರೆ ಆನಂದ್ ಜಗಳವಾಡಬಹುದು ಎಂದು ಮಾತ್ರ ನನಗೆ ಹೇಳಬೇಡ. ಅವನೇನಾದರೂ ಕೇಳಿದರೆ ನನಗೆ ಫೋನ್ ಮಾಡಲು ಹೇಳು. ಹೆದರಬೇಡ, ನಾನಿದ್ದೀನಲ್ಲ….” ಎಂದ.
ಅಮೃತಾಳ ಮುಖ ಮಗುವಿನಂತೆ ಅರಳಿತು. ಕಾಫಿ ಕುಡಿಯುತ್ತಾ ಇಬ್ಬರಲ್ಲೂ ಒಂದು ವಿಶಿಷ್ಟ ಶಾಂತಿ ತೇಲತೊಡಗಿತು. ಒಂದು ವಿಶೇಷ ಅನುಭವ ಇಬ್ಬರನ್ನೂ ಆವರಿಸಿಕೊಂಡಿತು. ಸಂಬಂಧಗಳಿಗೆ ಹೊರತಾದ ಸಂಬಂಧದಲ್ಲಿ ಅವರು ಜೋಡಿಸಲ್ಪಡುತ್ತಿದ್ದರು.
ಸ್ವಲ್ಪ ಹೊತ್ತಿನ ಬಳಿಕ ರಾತ್ರಿಯ ಘಟನೆಯಿಂದ ರೋಸಿಹೋದ ಪರಮ್, “ಯಾವುದೇ ಸಂಬಂಧವಿಲ್ಲದೆ, ಪ್ರೀತಿ ಮಾಡುತ್ತಾ ಇಬ್ಬರು ದೈಹಿಕ ಸಂಬಂಧ ಹೊಂದುವುದು ಸಮಾಜಕ್ಕೆ ಸ್ವೀಕೃತಿ ಇಲ್ಲ. ಆದರೆ ವಿವಾಹಿತ ಪುರುಷರು ಹೆಂಡತಿಯೊಂದಿಗೆ ಪ್ರೀತಿಸಲಿ ಅಥವಾ ತಿರಸ್ಕರಿಸಲಿ ಅವರಿಗೆ ಸಂಬಂದ ಹೊಂದುವುದಕ್ಕೆ ಸಂಪೂರ್ಣ ಹಕ್ಕು ಇರುತ್ತದೆ. ಸಮಾಜಕ್ಕೆ ಪ್ರೀತಿಯ ಬಗ್ಗೆ ಎಷ್ಟು ಅಸಡ್ಡೆ ಇದೆ ಎನ್ನುವ ಬಗ್ಗೆ ನನಗೆ ಖೇದವಿದೆ,” ಎಂದು ಹೇಳಿದ.
ಆನಂದ್ ನಿಗದಿಪಡಿಸಿದ ದಿನದಂದು ಟೂರ್ ಗೆ ಹೋದ. ಆ ದಿನ ಸಂಜೆ ಆಫೀಸಿನಿಂದ ಮನೆಗೆ ಹೋಗುವಾಗ ಇವತ್ತು ತನ್ನ ಮನೆಗೆ ಬರುವಂತೆ ಅಮೃತಾ ಪರಮ್ ಗೆ ಹೇಳಿದಳು. ಪ್ರತಿದಿನ ಅವರ ಚರ್ಚೆ ಅಪೂರ್ಣವಾಗಿಯೇ ಉಳಿಯುತ್ತಿತ್ತು. ಇವತ್ತು ನಿರಾಳವಾಗಿ ಕುಳಿತು ಅದನ್ನು ಪೂರ್ಣಗೊಳಿಸಲು ಇಬ್ಬರೂ ನಿರ್ಧರಿಸಿದರು.
ಅಮೃತಾಳ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸುತ್ತಾ ಪರಮ್ ಹೇಳಿದ, “ಮಾತು ಮಾತಿನಲ್ಲಿಯೇ ರಾತ್ರಿ ಬಹಳ ತಡವಾಗಿ ಬಿಟ್ಟರೆ ನಾನು ಅಲ್ಲಿಯೇ ಉಳಿಯಬೇಕಾಗುತ್ತದೆ,” ಎಂದ.
ಅಮೃತಾಳನ್ನು ಮನೆಗೆ ಬಿಟ್ಟು, ಬಳಿಕ ಪರಮ್ ತನ್ನ ಮನೆಗೆ ಬಂದು, ನೈಟ್ ಸೂಟ್ ತೆಗೆದುಕೊಂಡು ಪುನಃ ಅಮೃತಾಳ ಮನೆಗೆ ಹೊರಟ.
ಪುದೀನಾ ಶುಂಠಿ ಚಹಾ ಕುಡಿಯುತ್ತಾ ಇಬ್ಬರೂ ನಗು, ತಮಾಷೆ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅಮೃತಾ ಅಡುಗೆ ತಯಾರಿಸಲೆಂದು ಏಳಬೇಕೆನ್ನುತ್ತಿದ್ದಾಗ, ಪರಮ್ ಅವಳ ಕೈಹಿಡಿದು ಕೂರಿಸುತ್ತಾ, “ನಾವಿವತ್ತು ಊಟವನ್ನು ಹೊರಗಿನಿಂದ ಆರ್ಡರ್ ಮಾಡೋಣ. ನೀನು ಕುಳಿತುಕೋ. ನಿನ್ನೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಬಹಳ ಖುಷಿಯಾಗುತ್ತದೆ,” ಎಂದು ಹೇಳಿದ.
ಅಮೃತಾ ನಿಂತಳು. ಪರಮ್ ನ ಈ ರೀತಿಯ ಸ್ಪರ್ಶದಿಂದ ಅವಳ ಮನಸ್ಸಿನ ವೀಣೆಯನ್ನು ಮೀಟಿದಂತಾಯಿತು.
ಪರಮ್ ಅವಳನ್ನು ತಡೆದು ನಿಲ್ಲಿಸಿದರೆ ಸಾಕು ಎಂದಷ್ಟೇ ಅಂದುಕೊಂಡಿದ್ದ. ಆದರೆ ಅವಳ ಹೃದಯದ ತರಂಗಗಳು ಹೀಗೆ ಪ್ರೇಮ ಸಂಗೀತ ನುಡಿಸಬಹುದು ಎಂದು ಅವನು ಅಂದುಕೊಂಡಿರಲಿಲ್ಲ. ಶಾಂತವಾಗಿ ನಿಂತಿದ್ದ ನೀರಿನಲ್ಲಿ ಯಾರೋ ಸಣ್ಣದೊಂದು ಕಲ್ಲನ್ನು ಎಸೆದಂತಾಗಿತ್ತು. ಆವು ಅಲೆಗಳಿಂದ ಪರಮ್ ನ ಮನಸ್ಸಿನಲ್ಲಿ ಉಂಟಾದ ಅಲ್ಲೋಲ ಕಲ್ಲೋಲ ಸ್ಥಿತಿಯನ್ನು ಕೇವಲ ಅವನಷ್ಟೇ ಊಹೆ ಮಾಡಲು ಸಾಧ್ಯವಿತ್ತು. ಅವನ ಕೈಬೆರಳುಗಳು ಮೇಲಿಂದ ಮೇಲೆ ಸ್ಪರ್ಶಿಸಲು ಹಠ ಮಾಡತೊಡಗಿದ್ದವು.
ಊಟವಾದ ಬಳಿಕ ಅಮೃತಾ ನೈಟಿ ಧರಿಸಿ ಬಂದಳು. ನೆಟ್ ನ ಆ ಪೋಷಾಕಿನಲ್ಲಿ ಅವಳ ಗೌರವರ್ಣ ಗಾಜಿನಂತೆ ಹೊಳೆಯುತ್ತಿತ್ತು. ಅವಳನ್ನು ನೋಡುತ್ತಾ ಪರಮ್ ಹೇಳಿದ, “ಅಮೃತಾ, ನೀನು ಹೆಸರಿಗೆ ತಕ್ಕಂತೆ ಕೋಮಲ, ಶೀತಲ. ಎಲ್ಲಿಯೇ ಹೋದರೂ ನೀನು ಎಲ್ಲರಿಗೂ ಇಷ್ಟವಾಗುತ್ತೀಯಾ. ಆದರೆ ನಿನ್ನ ನಿಕಟತೆ ಇದ್ದವನು ಮಾತ್ರ ಆ ಅಮೃತವನ್ನು ವಿಷವೆಂದು ಭಾವಿಸಿದ್ದಾನಲ್ಲ. ಅವನು ನಿಜಕ್ಕೂ ಮೂರ್ಖನೇ ಸರಿ…” ಎಂದ.
ಅಮೃತಾ ಪ್ರಜ್ಞಾಹೀನಳಂತೆ ತನ್ನಲ್ಲಿ ತಾನು ಕಳೆದುಹೋಗಿದ್ದಳು, “ನೀವು ನನ್ನನ್ನು ಇಷ್ಟೊಂದು ಹೊಗಳಬೇಡಿ. ನನ್ನ ಹೃದಯ ನನ್ನಿಂದ ಜಾರಿ ಹೋಗುತ್ತಿದೆ. ಮರ್ಯಾದೆ ನನ್ನನ್ನು ನಿರಂತರವಾಗಿ ಪ್ರಶ್ನಿಸುತ್ತಿದೆ. ನನ್ನನ್ನು ನಾನು ತಡೆಯಲು ಪ್ರಯತ್ನಿಸುತ್ತಿರುವೆ. ಆದರೆ ನನ್ನ ಹಿಡಿತದಲ್ಲಿ ಸಿಗಲಾರದೆ ನಿಮ್ಮತ್ತಾ ವಾಲುತ್ತಿದೆ,” ಎಂದಳು.
ಪರಮ್ ಅವಳ ಸಮೀಪ ಬಂದು ತನ್ನ ಅಂಗೈಯನ್ನು ಅವಳ ಕೆನ್ನೆಯ ಮೇಲೆ ಇರಿಸುತ್ತಾ, “ಇದು ಏಕೆ ಆಗುತ್ತಿದೆ ಎಂದರೆ, ನೀನೂ ನನ್ನನ್ನು ಪ್ರೀತಿಸುತ್ತಿರುವೆ,” ಎಂದ.
“ಯಾವ ಭಾವನೆಗಳನ್ನು ನಾನು ನನ್ನ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದೇನೋ ಆ ಭಾವನೆಗಳು ನನ್ನಲ್ಲಿ ಇರಲೇ ಇಲ್ಲ. ನಾನು ನಿಜಕ್ಕೂ ಪ್ರೀತಿಗೊಳಗಾಗಿದ್ದೇನೆ. ಆದರೆ ಈ ಪ್ರೀತಿ ತನ್ನೊಂದಿಗೆ ದೇಹವನ್ನು ಉನ್ಮಾದಗೊಳಿಸುತ್ತಿರುವುದೇಕೆ?” ಅರೆಬರೆ ತೆರೆದ ಕಣ್ಣುಗಳಿಂದ ಅಮೃತಾ ಪರಮ್ ನತ್ತ ನೋಡುತ್ತಾ ಕೇಳಿದಳು.
“ಏಕೆಂದರೆ ಪ್ರೀತಿ ಪ್ರೇಮದಲ್ಲಿ ಏಳುತ್ತಿರುವ ಈ ತರಂಗಗಳು ಸ್ಪರ್ಶವಿಲ್ಲದೆ ಶಾಂತವಾಗುವುದಿಲ್ಲ. ಪ್ರೀತಿಯ ಜೊತೆಗೆ ದೇಹದ ಸಂಬಂಧ ಕೂಡ ಇದೆ.
“ನನ್ನ ದೇಹದ ಒಂದೊಂದು ನರನಾಡಿಗಳು ಇಂದು ನಿನ್ನನ್ನು ಪಡೆಯಲು ತವಕಿಸುತ್ತಿವೆ,” ಪರಮ್ ತನ್ನ ತುಟಿಯನ್ನು ಅವಳ ಕಿವಿಗೆ ಇಡುತ್ತಾ ಹೇಳಿದ.
“ಆದರೆ ನನ್ನ ಪ್ರತಿರೂಪ ಮತ್ತೆ ಮತ್ತೆ ನನ್ನನ್ನು ತಡೆದು ನಿಲ್ಲಿಸುತ್ತಿದೆ. ನಾನು ವಿವಾಹಿತೆ ಎಂದು ಕೂಗಿ ಕೂಗಿ ಹೇಳುತ್ತಿದೆ.”
“ಆ ನಿಯಮ ಮಾಡಿದ್ದು ಸಮಾಜ, ಪ್ರೀತಿಯಲ್ಲ. ಸ್ತ್ರೀಯ ಮನಸ್ಸು ಯಾರನ್ನು ಕಂಡು ತನ್ನಿಚ್ಛೆಯ ಮೇರೆಗೆ ಸರ್ವಸ್ವವನ್ನು ಸಮರ್ಪಿಸಬೇಕೆಂದು ಹೇಳುತ್ತಿರುತ್ತದೋ, ಅವನು ಅವಳ ಪರ ಆಗಿರುತ್ತಾನೆ.”
ಪರಮ್ ನ ನಿಶ್ಚಲ, ನಿರ್ಮಲ ರೂಪವಂತೂ ಅವಳ ಮನಸ್ಸನ್ನು ಕಟ್ಟಹಾಕಿಬಿಟ್ಟಿತು. ಅವಳ ರೂಪವನ್ನು ಪ್ರಶಂಸಿಸುತ್ತಾ ಅವಳು ವಿವಾಹಿತಳಾಗಿರುವುದು ಎಂದೂ ಅಡ್ಡಿಯಾಗಲು ಅವನ ಪ್ರಾಮಾಣಿಕ ಪ್ರೇಮಿಯ ಸ್ವರೂಪ ಅಮೃತಾಳ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಆವರಿಸಿಕೊಳ್ಳುತ್ತಿತ್ತು. ಅವನಲ್ಲಿ ಅವಳು ಕಳೆದುಹೋಗಲು ಇಚ್ಛಿಸುತ್ತಿದ್ದಳು. ಆತ್ಮ ಮಂಥನದ ಮೂಲಕ ಈಗ ಅವಳು ನಿರ್ಧರಿಸಬೇಕಿತ್ತು. ಪರಮ್ ನ ಯಾವ ಸ್ವರೂಪದ ಬಗ್ಗೆ ನಂಟು ಹೊಂದಬೇಕು ಎಂದು.
ಪರಮ್ ನಲ್ಲಿ ಪ್ರೀತಿಯ ಅಮಲು ಹೆಚ್ಚುತ್ತಿತ್ತು. ಅವನು ಅವಳನ್ನು ಮೆಲ್ಲಗೆ ಹಿಡಿದುಕೊಳ್ಳುತ್ತಾ, “ಪಾರಿಜಾತ ಪುಷ್ಪದ ಬಗ್ಗೆ ನಿನಗೆ ಗೊತ್ತಲ್ಲ.. ಅದು ಶೀತ ಋತುವಿನಲ್ಲಿಯೇ ಅರಳುತ್ತದೆ. ಮತ್ತೆ ಇಬ್ಬನಿ ಕೂಡ ಚಳಿಗಾಲದಲ್ಲಿಯೇ ಬೀಳುತ್ತೆ. ಪರಮ್ ಎಂಬ ಪಾರಿಜಾತಕ್ಕೆ ಅಮೃತಾ ಎಂಬ ಇಬ್ಬನಿಯ ಅಪೇಕ್ಷೆ ಇದೆ. ಪಾರಿಜಾತದಲ್ಲಿ ಇಬ್ಬನಿ ಸೇರಿಕೊಳ್ಳುವ ಹಾಗೆ ನನ್ನಲ್ಲಿ ಒಂದಾಗು ಅಮೃತಾ…..”
“ಪಾರಿಜಾತ ಪುಷ್ಪದಲ್ಲಿ 2 ಬಣ್ಣಗಳು ಸೇರಿಕೊಂಡಿವೆ. ಬಿಳಿ ಎಸಳುಗಳು ಹಾಗೂ ಮಧ್ಯದಲ್ಲಿ ಕಿತ್ತಳೆ. ಎಲ್ಲಿ ಸೇರಬೇಕು ಈ ಇಬ್ಬನಿ?” ಅಮೃತಾಳ ಗುಲಾಬಿ ಎಸಳುಗಳಂಥ ಮೃದು ತುಟಿಯಿಂದ ಮಾತುಗಳು ಹೊರಬರುತ್ತಿದ್ದವು.
“ಇಬ್ಬನಿ ಪಾರಿಜಾತದ ಬಿಳಿ ಎಸಳುಗಳ ಮೇಲೆ ಬಿದ್ದರೆ ಅದು ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಕೆಳಗೆ ಬಿದ್ದು ಸಿಡಿಸುತ್ತದೆ. ನೀನೇ ಹೇಳಿದ್ದೀಯಲ್ಲ. ಪ್ಲೆಟಾನಿಕಲ್ ಲವ್ ನ ವಯಸ್ಸು ದೀರ್ಘವಾಗಿರುವುದಿಲ್ಲ ಎಂದು. ಪಾರಿಜಾತದ ಕಿತ್ತಳೆ ಬಣ್ಣಕ್ಕೆ ಇಬ್ಬನಿ ಬೀಳುತ್ತಿದ್ದಂತೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಆಗ ಎರಡಕ್ಕೂ ಅಸ್ತಿತ್ವ ಒಂದಾಗುತ್ತದೆ. ಆಗ ಆ ಎರಡನ್ನೂ ಯಾರೂ ವಿಂಗಡಿಸಲು ಆಗುವುದಿಲ್ಲ. ಪಾರಿಜಾತ ರೂಪಿ ಪರಮ್ ಇಂದು ನಿನಗೆ ಹೇಳುತ್ತಿದ್ದಾನೆ. ಇಬ್ಬನಿ ರೂಪಿ ಅಮೃತಾ ಇಂದು ನನ್ನಲ್ಲಿ ಒಂದಾಗು ಎಂದು,” ಎನ್ನುತ್ತಾ, ಪರಮ್ ಅವಳಲ್ಲಿ ಮುಳುಗೇಳುತ್ತಿದ್ದ.
“ಹಾಗಾದರೆ ನನ್ನನ್ನು ಬೀಳದಂತೆ ತಡೆಯಬೇಕು. ಜಗದ ದೃಷ್ಟಿಯಿಂದ ಹಾಗೂ ನನ್ನದೇ ಆದ ದೃಷ್ಟಿಯಿಂದಲೂ ಕೂಡ,” ಎಂದು ಹೇಳುತ್ತಾ ಅಮೃತಾ ಅವನ ಎದೆಗೊರಗಿದಳು.
ಆ ರಾತ್ರಿ ಇಬ್ಬರಲ್ಲೂ ಒಂದು ಹೊಸ ಸಂಬಂಧ ಜನ್ಮ ತಾಳಿತ್ತು. ಅದು ಸ್ನೇಹಕ್ಕಿಂತ ಮಿಗಿಲು. ಪ್ರಿಯತಮ ಪ್ರೇಯಸಿಗಿಂತ ನಿಗೂಢ, ಗಂಡ ಹೆಂಡತಿಯ ಸಪ್ತಪದಿಯ ಬಂಧನದಿಂದ ಮುಕ್ತ. ಕೇಳಿರದ ಕಂಡಿರದ ಒಂದು ಅಮೂಲ್ಯ ಸಂಬಂಧ.
ಆಕಾಶದಲ್ಲಿ ಮೂಡಿದ ಕೆಂಬಣ್ಣ ಸೂರ್ಯೋದಯದ ಸಂಕೇತವನ್ನು ನೀಡುತ್ತಿತ್ತು. ಇಬ್ಬರೂ ನಿದ್ದೆಗಣ್ಣಿನಲ್ಲಿ ರಾತ್ರಿಯ ಸುಸ್ತನ್ನು ನೀಗಿಸಿಕೊಂಡು ಪರಸ್ಪರರನ್ನು ಸ್ನೇಹದಿಂದ ದಿಟ್ಟಿಸಿ ನೋಡುತ್ತಿದ್ದರು.
“ದೈಹಿಕ ಹಸಿವು ನೀಗಿಸಲು ಅಲ್ಲ, ನಮ್ಮ ಪ್ರೀತಿಗಿಂತ ವಿಸ್ತಾರವಾಗಿರುತ್ತದೆ ಈ ಸಂಬಂಧ. ನಾನು ಮತ್ತೆ ಮತ್ತೆ ಜೀವಿಸಲು ಯತ್ನಿಸುವೆ, ನಿನ್ನ ಕೈ ಹಿಡಿದುಕೊಂಡು.”
“ಈ ಸಂಬಂಧದ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ನಿಮ್ಮ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಪ್ರೀತಿ ಹಾಗೂ ದೇಹದ ಈ ಸಂಬಂಧ ಅರಿತ ಬಳಿಕ ನನ್ನ ಈ ದೇಹದ ಮೇಲೆ ಆನಂದ್ ನಡೆಸುವ ಪ್ರಹಾರವನ್ನು ನಾನು ಸಹಿಸಿಕೊಳ್ಳುವುದಿಲ್ಲ,” ಇಂದು ಅಮೃತಾಳ ಅಂತರ್ಮನದಲ್ಲಿ ಹೊಸ ಸ್ತ್ರೀಯೋಬ್ಬಳು ಜನ್ಮ ತಳೆದಿದ್ದಳು.
“ನಿನ್ನ ಜೊತೆಗಿನ ಒಂದು ರಾತ್ರಿಯಲ್ಲಿ ಅನಾಮಧೇಯ ಸಂಬಂಧ ನಮ್ಮನ್ನು ಮರ್ಯಾದೆಯ ಸಂಕೋಲೆಗಳು ಕಟ್ಟಿಹಾಕಲಿಲ್ಲ, ಕಂದಾಚಾರಗಳು ನಮ್ಮನ್ನು ಒಂದಾಗುವುದರಿಂದ ತಡೆಯಲಾಗಲಿಲ್ಲ. ಈಗ ನೀನು ಈ ಸಂಬಂಧಕ್ಕೆ ಯಾವುದಾದರೂ ಹೆಸರು ಕೊಡಬೇಕೆಂದು ಇಚ್ಛಿಸಿದರೆ, ಅದನ್ನು ನಾನು ನಿನಗೆ ಬೆಂಬಲಿಸುತ್ತೇನೆ. ಆನಂದ್ ನಿಗೆ ನಾನು ಬಹಳಷ್ಟು ಹೇಳಿದೆ. ಆದರೆ ಅವನು ತನ್ನ ಅಹಂನಲ್ಲಿ ಮುಳುಗಿ ಏನನ್ನೂ ಕೇಳಿಸಿಕೊಳ್ಳುವುದಿಲ್ಲ. ನೀನು ಅವನೊಂದಿಗೆ ಸಂಬಂಧ ಮುರಿದುಕೊಳ್ಳಲು ಇಚ್ಛಿಸಿದರೆ, ನಾನು ನಿನ್ನನ್ನು ತಡೆಯುವುದಿಲ್ಲ.”
“ಹೌದು ನಾನು ಅವನಿಂದ ಕಾನೂನು ರೀತ್ಯಾ ಪ್ರತ್ಯೇಕವಾಗಿರಲು ಬಯಸುತ್ತೇನೆ. ಪರಮ್ ನಲ್ಲಿ ಒಂದಾಗಿ ನಾನು ಪರಮಾಮೃತ ಸವಿಯಲು ಸಿದ್ಧಳಾಗಿದ್ದೇನೆ.”