ಕ್ರಿಕೆಟ್‌ ವೀಕ್ಷಕ ವಿವರಣೆಯ ನಿರೂಪಕಿ ರೀನಾ ಡಿಸೋಜಾ ಕ್ರಿಕೆಟ್‌ ಕ್ಷೇತ್ರದ ಹೆಸರಾಂತ ನಿರೂಪಕಿ. 2016ರ ಮಿಸೆಸ್‌ ಇಂಡಿಯಾ ಅರ್ಥ್‌ ಟ್ಯಾಲೆಂಟೆಡ್‌ ಬ್ಯೂಟಿ ಪೇಜೆಂಟ್‌ ಆಗಿದ್ದ ಇವರು ಈವರೆಗೆ 1000+ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ……

ರೀನಾ ಡಿಸೋಜಾ…. ಪ್ರತಿಯೊಬ್ಬ ಕ್ರಿಕೆಟ್‌ ಪ್ರೇಮಿಗೂ ಈ ಹೆಸರು ಚಿರಪರಿಚಿತ. ವರ್ಲ್ಡ್ ಕಪ್‌ ಇರಬಹುದು, ಐಪಿಎಲ್ ಇರಬಹುದು, ಇದರಲ್ಲಿ ತಮ್ಮ ಮಾತಿನ ವೈಖರಿಯ ಮೂಲಕ ಕನ್ನಡದ ಸೊಗಡನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ತಲುಪಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.

ಕ್ರಿಕೆಟ್‌ ವೀಕ್ಷಕ ವಿವರಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ಅಪರೂಪ. ಕೆಲವು ಮಹಿಳಾ ಕ್ರಿಕೆಟ್‌ ಆಟಗಾರರು ಆಗೊಮ್ಮೆ, ಈಗೊಮ್ಮೆ  ಕ್ರಿಕೆಟ್‌ ವೀಕ್ಷಕ ವಿವರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಕ್ರಿಕೆಟ್‌ ಆಟಗಾರ್ತಿಯಲ್ಲದ ರೀನಾ ಡಿಸೋಜಾ ಕ್ರಿಕೆಟ್ ಆಟಗಾರರೇ ಹುಬ್ಬೇರಿಸುವಂತೆ ವೀಕ್ಷಕ ವಿವರಣೆ ನೀಡುತ್ತಾರೆ. ಹೀಗಾಗಿ ಕನ್ನಡ ವೀಕ್ಷಕ ವಿವರಣೆ ಪ್ರಪಂಚಕ್ಕೆ ರೀನಾ ಅಪರೂಪದ ಕೊಡುಗೆ ಎನ್ನಬಹುದು.

ಮೂಡಬಿದರೆ ಹುಡುಗಿ ರೀನಾ ಡಿಸೋಜಾ ಓದಿದ್ದು, ಬೆಳೆದದ್ದು ದಕ್ಷಿಣ ಕನ್ನಡದ ಮೂಡಬಿದರೆಯಲ್ಲಿ. ಅಲ್ಲಿನ ಆಳ್ವಾಸ್‌ ನಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ ಮಾಡಿದ್ದಾರೆ. ಎಂಜಿನಿಯರಿಂಗ್‌ ನ ಎರಡನೇ ವರ್ಷದಲ್ಲಿದ್ದಾಗಲೇ ಅವರ ವಾಕ್ಚಾತುರ್ಯ ಕಾಲೇಜಿನ ಉಪನ್ಯಾಸಕರೊಬ್ಬರ ಗಮನಕ್ಕೆ ಬಂದಿತು. `ಮಂಗಳೂರಿನ ನಮ್ಮ ಟಿವಿ ಚಾನೆಲ್ ‌ನ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸ್ತೀಯಾ?’ ಎಂದವರು ಆಕೆಯನ್ನು ಕೇಳಿದಾಗ, ಖುಷಿಯಿಂದ ಒಪ್ಪಿಕೊಂಡು ಅದನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಉದ್ಯೋಗಕ್ಕಾಗಿ ಬೆಂಗಳೂರಿಗೆ

ಉದ್ಯೋಗ ಅರಸಿ ಬೆಂಗಳೂರಿಗೆ ಬಂದಾಗ, ಇಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳೇನೂ ಸಿಗಲಿಲ್ಲ. ಮೊದಲು ಐಬಿಎಂನಲ್ಲಿ ಕೆಲಸ ಮಾಡಿದರು. ಅಲ್ಲಿಂದ ಅಮೆಝಾನ್‌ ಕಂಪನಿ ಸೇರಿಕೊಂಡರು. ಈ ಕಂಪನಿಯಲ್ಲಿದ್ದಾಗ ಅವರಿಗೆ ಹೊಸದೊಂದು ತಿರುವು ಸಿಕ್ಕಿತೆನ್ನಬಹುದು. ಕಂಪನಿಯ ಮುಖ್ಯಸ್ಥ ಬೆಂಗಳೂರಿಗೆ ಬಂದಿದ್ದರು. ಅವರ ಕಾರ್ಯಕ್ರಮವನ್ನು ನಡೆಸಿಕೊಡುವ ಜವಾಬ್ದಾರಿ ರೀನಾಗೆ ವಹಿಸಿಕೊಡಲಾಗಿತ್ತು. ಅದನ್ನು ರೀನಾ ಯಶಸ್ವಿಯಾಗಿ ನಿಭಾಯಿಸಿದರು.

ಆ ಕಾರ್ಯಕ್ರಮ ಪ್ರಸ್ತುತಿಯ ಬಳಿಕ ರೀನಾಗೆ ತಾನು ಇದನ್ನೇ ಏಕೆ ಉದ್ಯೋಗವಾಗಿಸಿಕೊಳ್ಳಬಾರದು ಎನಿಸಿತು. ಅದಕ್ಕೂ ಮೊದಲು ಆಕೆ ಬಿಡುವಿನ ವೇಳೆಯಲ್ಲಿ ಓಪ್ರಾ ವಿನ್‌ ಫ್ರೇ ಅವರ ಟಾಕ್‌ ಶೋಗಳನ್ನು ನೋಡಿ ಬಹಳ ಪ್ರೇರಿತರಾಗಿದ್ದರು. ಓಪ್ರಾ ಟಿವಿ ಶೋಗಳ ಲೋಕದಲ್ಲಿ ಭಾರಿ ಜನಪ್ರಿಯರು. ಅದೇ ರೀತಿ ಸಂದೀಪ್‌ ಮಹೇಶ್ವರಿ ಅವರ ವಿಡಿಯೋಗಳು, ಇತರೆ ಕೆಲವು ಪ್ರಸಿದ್ಧ ಮಾತುಗಾರರ ಪ್ರೇರಣಾತ್ಮಕ ಸ್ಪೀಚ್‌ ಗಳನ್ನು ಆಲಿಸಿದ್ದರು. ಇವೇ ರೀನಾ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಅದ್ಭುತ ಮಾತುಗಾರ್ತಿಯಾಗಲು ಪ್ರೇರಣೆ ನೀಡಿತೆನ್ನಬಹುದು.

ಬಹುಭಾಷಾ ಪ್ರವೀಣೆ

ರೀನಾ ಕನ್ನಡದ ಜೊತೆಗೆ ತುಳು, ಕೊಂಕಣಿ, ಇಂಗ್ಲಿಷ್‌, ಹಿಂದಿಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲರು. ಕಾರ್ಯಕ್ರಮ ನಡೆಸಿಕೊಡಬಲ್ಲರು. ಅವರ ಮಾತಿನ ಮೋಡಿಗೆ ಕಾರ್ಪೋರೇಟ್‌ ಜಗತ್ತು ಬೆರಗಾಗಿ ಹೋಗಿದೆ. ಅದೇ ರೀತಿ ಸಾಮಾಜಿಕ ವಲಯದಲ್ಲೂ ಅವರ ಖ್ಯಾತಿ ಪಸರಿಸಿದೆ. 2017ರ ಹೊತ್ತಿಗೆ ಅವರ ಖ್ಯಾತಿ ಕ್ರೀಡಾ ಜಗತ್ತಿಗೂ ತಲುಪಿತು.

ಸ್ಟಾರ್‌ ಸ್ಪೋರ್ಟ್ಸ್ ನವರು ಕನ್ನಡದಲ್ಲೂ ಒಂದು ಚಾನೆಲ್ ‌ಆರಂಭಿಸಿ, ಮಹಿಳಾ ವೀಕ್ಷಕ ವಿವರಣೆಗಾರರ ಹೊಸ ಮುಖಕ್ಕಾಗಿ ಹುಡುಕಾಟ ನಡೆಸಿದ್ದರು. ತಾನೂ ಏಕೆ ಅದಕ್ಕೆ  ಪ್ರಯತ್ನಿಸಬಾರದು ಎಂದು ಯೋಚಿಸಿ ರೀನಾ ಅದಕ್ಕೆ ಅಪ್ಲೈ ಮಾಡಿದರು. ರೀನಾ ಪ್ರಸ್ತುತಪಡಿಸುವ ರೀತಿಗೆ ಆಡಳಿತ ಮಂಡಳಿ ಅವರನ್ನು ಆಯ್ಕೆ ಮಾಡಿತು.

ಪೂರ್ವ ಸಿದ್ಧತೆ ವೇಗವಾಗಿ, ನಿರರ್ಗಳವಾಗಿ, ಅಷ್ಟೇ ಸ್ಪಷ್ಟವಾಗಿ ಕೇಳುವಂತೆ ಮಾತನಾಡುವ ಕಲೆ ಸಿದ್ಧಿಸಿಕೊಂಡಿರುವ ರೀನಾ, ಅದಕ್ಕಾಗಿ ಮಾಡಿಕೊಳ್ಳುವ ಪೂರ್ವಸಿದ್ಧತೆ ಯಾವುದೇ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗಿಂತ ಕಡಿಮೆ ಏನಿಲ್ಲ.

ಪಂದ್ಯಗಳು ನಡೆಯುವ ಅವಧಿಯಲ್ಲಿ ಕ್ರಿಕೆಟ್‌ ಪಂದ್ಯಗಳ ಇತಿಹಾಸ, ಆಟಗಾರರ ಹಿನ್ನೆಲೆ, ಮೈದಾನದ ಮಾಹಿತಿ, ಕ್ರಿಕೆಟ್‌ ಶಬ್ದಾವಳಿ ಹೀಗೆ ಎಲ್ಲದರ ಬಗ್ಗೆಯೂ 3-4 ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ. ಪಂದ್ಯಗಳು ಇಲ್ಲದ ಸಮಯದಲ್ಲೂ ಅವರು ದಿನಕ್ಕೆ 1 ಗಂಟೆಯಾದರೂ  ಕ್ರಿಕೆಟ್‌ ಬಗೆಗಿನ ವರದಿಗಳು, ಲೇಖನಗಳನ್ನು ಗಮನಿಸುತ್ತಾರೆ. ಕನ್ನಡ ಪತ್ರಿಕೆಗಳಲ್ಲಿ ಬರುವ ವರದಿಗಳು, ಲೇಖನಗಳು ತಮ್ಮ ಜ್ಞಾನಾರ್ಜನೆಗೆ ಸಾಕಷ್ಟು ನೆರವಾಗುತ್ತವೆ ಎಂದು ರೀನಾ ಹೇಳುತ್ತಾರೆ.

ಕ್ರಿಕೆಟ್‌ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ತಮ್ಮೊಂದಿಗೆ ಪಾಲ್ಗೊಳ್ಳುವ ಕರ್ನಾಟಕದ ಹಿರಿಯ ಕ್ರಿಕೆಟ್‌ ಆಟಗಾರರ ಸಲಹೆ ಸೂಚನೆಗಳನ್ನು ಅವರು ತಪ್ಪದೇ ಪಾಲಿಸುತ್ತಾರೆ. ತಾವು ಬಳಸುವ ಕ್ರಿಕೆಟ್‌ ಪದಗಳ ಬಗ್ಗೆ ಅವರು ವಿಜಯ್‌ ಭಾರದ್ವಾಜ್‌ ಬಳಿ ಚರ್ಚಿಸಿ, ಅವರ ಮಾರ್ಗದರ್ಶನದಲ್ಲಿ ತಮ್ಮನ್ನು ತಾವು ತಿದ್ದಿಕೊಳ್ಳುತ್ತಿರುತ್ತಾರೆ.

ಕಬಡ್ಡಿ, ಫುಟ್ಬಾಲ್ ನಲ್ಲೂ ಆಸಕ್ತಿ

ರೀನಾ ಕೇವಲ ಕ್ರಿಕೆಟ್‌ ಆಟದ ವೀಕ್ಷಕ ವಿವರಣೆಯಲ್ಲಷ್ಟೇ ತೊಡಗಿಕೊಂಡಿಲ್ಲ. ಕಬಡ್ಡಿ, ಫುಟ್ಬಾಲ್ ‌ನಲ್ಲೂ ಅವರಿಗೆ ಆಸಕ್ತಿ ಇದೆ. ಆ ಕ್ರೀಡೆಗಳಿಗೂ ವೀಕ್ಷಕ ವಿವರಣೆ ಕೊಟ್ಟ ಖ್ಯಾತಿ ಅವರಿಗೆ ಸಲ್ಲುತ್ತದೆ.

ಯಾರ್ಯಾರು ಇಷ್ಟ?

ಕ್ರಿಕೆಟ್‌ ಆಟದ ವೀಕ್ಷಕ ವಿವರಣೆಯಲ್ಲಿ ತೊಡಗಿರುವ ನಿಮಗೆ ಯಾವ ಭಾರತೀಯ ಆಟಗಾರರು ಇಷ್ಟವಾಗುತ್ತಾರೆ ಎಂದು ಕೇಳಿದರೆ, ಅವರ ಉತ್ತರ ಮಹೇಂದ್ರ ದೋನಿ ಎಂದಾಗಿತ್ತು.

ಕನ್ನಡದ ಲೇಖಕರಲ್ಲಿ ಜೋಗಿ, ಎ.ಆರ್‌. ಮಣಿಕಾಂತ್‌ ಇಷ್ಟವಾಗುತ್ತಾರೆ. ಅವರ ಪುಸ್ತಕಗಳು ನನಗೆ ಮತ್ತೆ ಮತ್ತೆ ಓದುವಂತೆ ಮಾಡಿವೆ ಎನ್ನುತ್ತಾರೆ.

ಇಷ್ಟದ ಪ್ರವಾಸಿ ತಾಣ ಸಿಂಗಾಪೂರ್‌. ಅಲ್ಲಿನ ಶಿಸ್ತು ಅವರಿಗೆ ಹಿಡಿಸಿದೆ. ತನ್ನೂರು ಮೂಡಬಿದರೆ ಎಲ್ಲ ಕಾಲಕ್ಕೂ ಇಷ್ಟವಾಗುವ ಸ್ಥಳ ಎನ್ನುವುದು ಅವರ ಅಭಿಪ್ರಾಯ.

ಕನ್ನಡದ ನಿರೂಪಕರಲ್ಲಿ ಅಪರ್ಣಾರ ಕನ್ನಡ ಸ್ಪಷ್ಟ ಉಚ್ಚಾರ, ಅನುಶ್ರೀಯವರ ಎನರ್ಜಿ, ಅಕುಲ್ ‌ಬಾಲಾಜಿಯವರ ಸ್ಟೈಲ್ ‌ರೀನಾಗೆ ಇಷ್ಟವಾಗುತ್ತದೆ.

`ಕ್ರೀಡಾ ಕ್ಷೇತ್ರದ ಆ್ಯಂಕರಿಂಗ್‌ ಗೆ ಬರಬೇಕೆನ್ನುವ ಇಂದಿನ ಯುವತಿಯರಿಗೆ ನೀವೇನು ಹೇಳಬಯಸುವಿರಿ?’ ಎಂಬ ಪ್ರಶ್ನೆಗೆ ಕೊಟ್ಟ ಉತ್ತರ ಹೀಗಿತ್ತು, “ಕ್ರೀಡೆಗಳ ಬಗ್ಗೆ ಹೆಚ್ಚೆಚ್ಚು ಮಾಹಿತಿ ಕ್ರೋಢೀಕರಿಸಬೇಕು. ಪ್ರಸ್ತುತ ಪಡಿಸುವ ರೀತಿ ಸುಧಾರಣೆ ಮಾಡಿಕೊಳ್ಳುತ್ತಾ ಹೋಗಿ, ಯಾರದ್ದಾದರೂ ಸಹಾಯ ಪಡೆಯಬೇಕಿದ್ದರೆ, ಖಂಡಿತವಾಗಿ ಪಡೆದುಕೊಳ್ಳಿ. ಒಂದೇ ರಾತ್ರಿಯಲ್ಲಿ ಯಶಸ್ಸು ಸಿಗುತ್ತದೆಂಬ ಭ್ರಮೆಯಿಂದ ಹೊರಬನ್ನಿ. ನಿರೂಪಣೆಗೆ ತಾಳ್ಮೆ, ಶ್ರದ್ಧೆ, ಹಠ, ಛಲ ಇವೆಲ್ಲ ಇರಬೇಕು.”

ಅಶೋಕ ಚಿಕ್ಕಪರಪ್ಪಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ