`ಡಾರ್ಕ್‌ ಫ್ಯಾಂಟಸಿ’ ಚಿತ್ರ ಮುಗಿಸಿರುವ ಸುಷ್ಮಿತಾ `ಆಡಿಸುವಾತ’ ಚಿತ್ರದಲ್ಲಿಯೂ ನಟನೆ ಮುಂದುವರಿಸಿದ್ದಾಳೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ನವ ನಟಿ ಈಕೆ.

ಮಾಡೆಲಿಂಗ್‌ ಕ್ಷೇತ್ರದಿಂದ ಬಂದ ಅದೆಷ್ಟೋ ನಟ ನಟಿಯರು ಚಂದನವನದಲ್ಲಿ ನೆಲೆ ಕಂಡುಕೊಂಡಿದ್ದಾಳೆ. ಇದೀಗ ಆ ಸಾಲಿಗೆ ಸೇರಲು ಕಾತರದಲ್ಲಿದ್ದಾಳೆ ನಟಿ ಸುಷ್ಮಿತಾ ದಾಮೋದರ್‌. ಎಂಬಿಎ ಮುಗಿಸಿ 2017ರಲ್ಲಿ ಮಾಡೆಲಿಂಗ್‌ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಸುಷ್ಮಿತಾ, ಅದೇ ವರ್ಷ ಮಿಸ್‌ ಬೆಂಗಳೂರು ಟೈಟಲ್ ಪಡೆದರೆ, 2018ರಲ್ಲಿ ಮಿಸ್‌ ಕರ್ನಾಟಕ ಸ್ಪರ್ಧೆಯಲ್ಲೂ ಮೊದಲ ರನ್ನರ್‌ಅಪ್‌ ಆಗಿದ್ದಳು. 2019ರಲ್ಲಿ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದಳು. ಇದೀಗ ಇದೇ ರೂಪದರ್ಶಿ ಅದೃಷ್ಟ ಪರೀಕ್ಷೆಗಿಳಿದಿದ್ದಾಳೆ. ಸಿನಿಮಾ ಕ್ಷೇತ್ರದಲ್ಲಿಯೇ ಗುರುತಿಸಿಕೊಳ್ಳಬೇಕೆಂಬ ತವಕದಲ್ಲಿದ್ದಾಳೆ.

ಸುಷ್ಮಿತಾಗೆ ಆರಂಭದಲ್ಲಿ ಕಿರುತೆರೆಯ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು. ಆದರೆ ಅದ್ಯಾವುದನ್ನೂ ಒಪ್ಪದೆ ಸಿನಿಮಕ್ಕಾಗಿ ಕಾಯುತ್ತಿದ್ದಳು. ರಂಗಭೂಮಿ ಮತ್ತು ಕಾಲೇಜು ದಿನಗಳಲ್ಲಿ ನಾಟಕದಲ್ಲಿ ಅಭಿನಯಿಸಿದ ಹಿನ್ನೆಲೆ ಇರುವ ಸುಷ್ಮಿತಾಗೆ ಆಗ ಸಿಕ್ಕ ಅವಕಾಶವೇ ಫಣಿವೇಶ್‌ ಭಾರದ್ವಾಜ್‌ ನಿರ್ದೇಶನದ `ಡಾರ್ಕ್‌ ಫ್ಯಾಂಟಸಿ’ ಸಿನಿಮಾ. ಇದೀಗ ಆ ಸಿನಿಮಾ ಮುಗಿಸಿರುವ ಸುಷ್ಮಿತಾ, ಅದರ ಬಿಡುಗಡೆಗೆ ಕಾಯುತ್ತಿದ್ದಾಳೆ. ಇತ್ತ ಅದೇ ನಿರ್ದೇಶಕರ ಮತ್ತೊಂದು ಸಿನಿಮಾ `ಆಡಿಸುವಾತ’ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಪುನೀತ್‌ ನಿಧನದ ಬಳಿಕ ಆ ಪ್ರಾಜೆಕ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಮತ್ತೆ `ಆಡಿಸುವಾತ’ ಸಿನಿಮಾ ಕೆಲಸ ಶುರುವಾಗಿದ್ದರಿಂದ ಶೀಘ್ರದಲ್ಲಿಯೇ ತಂಡದ ಜೊತೆ ಸೇರಿಕೊಳ್ಳಲಿದ್ದಾಳೆ. ಹೀಗೆ ಒಂದಾದ ಮೇಲೊಂದು ಸಿನಿಮಾ ಅವಕಾಶವನ್ನು ಪಡೆದುಕೊಳ್ಳುತ್ತಿರುವ ಸುಷ್ಮಿತಾ, ತೆಲುಗಿನ `ಚಾಯ್‌ ಕಹಾನಿ’ ಸಿನಿಮಾದಲ್ಲಿ ನಟಿಸುವುದಕ್ಕೆ ಸಹಿ ಮಾಡಿದ್ದಾಳೆ.  ಪಕ್ಕಾ ಕಮರ್ಷಿಯಲ್ ಕಥೆ ಇರುವ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲಿದ್ದಾಳೆ. ಇದಷ್ಟೇ ಅಲ್ಲ, ಶಾಲಾ ದಿನಗಳಿಂದಲೂ ನೃತ್ಯದ ಮೇಲೆ ಆಸಕ್ತಿ ಹೊಂದಿರುವ ಸುಷ್ಮಿತಾ, ಡ್ಯಾನ್ಸ್ ನಲ್ಲಿಯೂ ಅಷ್ಟೇ ಪರಿಣಿತಿ ಹೊಂದಿದ್ದಾಳೆ.

Sushmitha-PF1-762-(5)

 

ಇತ್ತೀಚೆಗಷ್ಟೇ ಬಿಡುಗಡೆಯಾದ `ಪ್ರೇಮಂ ಪೂಜ್ಯಂ’ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ ಎಂ.ಎಸ್‌. ತ್ಯಾಗರಾಜ್‌ ರವರ `ಟ್ರೂಥ್‌ ಆರ್‌ ಡೇರ್‌’ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾಳೆ.

ಅನನ್ಯಾ ಭಟ್‌ ಹಾಡಿಗೆ ಧ್ವನಿ ನೀಡಿದ್ದು, ಇನ್ನೇನು ಶೀಘ್ರದಲ್ಲಿಯೇ ಈ ಹಾಡು ಬಿಡುಗಡೆ ಆಗಲಿದೆ. ಸಣ್ಣಪುಟ್ಟ ಪಾತ್ರಗಳು ಸಾಕಷ್ಟು ಬರುತ್ತಿವೆ. ಆದರೆ, ನಾನು ಒಂದೊಳ್ಳೆ ಪಾತ್ರದ ಹುಡುಕಾಟದಲ್ಲಿದ್ದೇನೆ. ಜನರನ್ನು ತಲುಪಲು ಅವರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಸಿಗಬೇಕಿದೆ. ಈಗಾಗಲೇ ನಟಿಸಿದ ಎರಡು ಸಿನಿಮಾಗಳಲ್ಲಿ ಅಂಥ ಅಂಶ ಇದೆ. ಕನ್ನಡ, ಹಿಂದಿ ಧಾರಾವಾಹಿಯಿಂದಲೂ ಅವಕಾಶಗಳಿವೆ. ಆದರೆ, ನನ್ನ ಆಸೆ ಸಿನಿಮಾ ಮಾತ್ರ. ಇದೆಲ್ಲದರ ಜೊತೆಗೆ ದೊಡ್ಡಮನೆಯ ಆಶೀರ್ವಾದ ಸಿಕ್ಕಿದೆ.

ಲಕ್ಷ್ಮಿ ಅಕ್ಕ ಮತ್ತು ಎಸ್‌.ಎ. ಗೋವಿಂದರಾಜು ಅವರು ಸಿನಿಮಾ ವಿಚಾರವಾಗಿ ಬೆನ್ನ ಹಿಂದಿದ್ದಾರೆ ಎಂಬುದು ಸುಷ್ಮಿತಾ ಮನದಾಳ ಮಾತು.

ಸರಸ್ವತಿ ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ