ಎಂದಿನಂತೆ ಆಫೀಸಿನಿಂದ ಸಂಜೆ 6 ಗಂಟೆಗೆ ಹೊರಟು ವಂದನಾ ಆ ಶುಕ್ರವಾರ ಮಗನಿದ್ದ ಕ್ರೀಚ್‌ ತಲುಪಿದಳು. ಅವಳ ಮಗ ರಾಹುಲ್ ನ ಮೈ ಜ್ವರದಿಂದ ಸುಡುತ್ತಿರುವುದನ್ನು ಕಂಡು ಬಹು ಕಳವಳಕ್ಕೆ ಒಳಗಾದಳು.

ಮಗನನ್ನು ಕರೆದುಕೊಂಡು ನೇರ ಮಕ್ಕಳ ತಜ್ಞರಾದ ಡಾ. ನಮನ್‌ ರ ಕ್ಲಿನಿಕ್‌ ತಲುಪಿದಳು ಅಲ್ಲಿ ಬಹಳ ರಶ್‌ ಇದ್ದುದನ್ನು ಕಂಡು ಅವಳ ಎದೆ ಧಸಕ್‌ ಎಂದಿತು. 8 ಗಂಟೆಗೆ ಮೊದಲು ತಾನು ಮನೆ ತಲುಪಲು ಆಗುವುದೇ ಇಲ್ಲ ಎಂದು ಅವಳಿಗೆ ಗೊತ್ತಾಯಿತು. ಕೊರೋನಾ ಎಷ್ಟೋ ತಗ್ಗಿದ್ದರಿಂದ ಇದೀಗ ಎಲ್ಲಾ ಕ್ಲಿನಿಕ್‌ ಗಳೂ ಹಿಂದಿನಂತೆಯೇ ತುಂಬಿರುತ್ತಿದ್ದವು.

ಸ್ವಲ್ಪ ಹೊತ್ತಾದ ನಂತರ ಕೊಸರಾಡುತ್ತಿದ್ದ ರಾಹುಲ್ ಅವಳ ಎದೆ ಅಪ್ಪಿಕೊಂಡು ಹಾಕಿ ನಿದ್ರಿಸಿಬಿಟ್ಟ. ಅಮ್ಮನಿಗೆ ಫೋನ್‌ ಮಾಡಿ ಕ್ಲಿನಿಕ್‌ ಗೇ ಕರೆಸಿಕೊಳ್ಳಲೇ ಎಂದು ಯೋಚಿಸಿದಳು. ಆದರೆ ಅವಳು ಹಾಗೆ ಮಾಡಲು ಹೋಗಲಿಲ್ಲ ತಾಯಿ ಶಾರದಮ್ಮ ಬಂದರೆ ಕೊಡುವ ಉದ್ದುದ್ದ ಲೆಕ್ಚರ್‌ ಕೇಳುವ ಮೂಡ್‌ ನಲ್ಲಿ ಈಗ ಅವಳು ಇರಲಿಲ್ಲ.

ಟೋಕನ್‌ ಹಿಡಿದು ಕಾಯುತ್ತಿದ್ದ ಅವಳನ್ನು 7 ಗಂಟೆ ಹೊತ್ತಿಗೆ ಅಕ್ಕಾ ವಿನುತಾಳ ಫೋನ್‌ ಎಚ್ಚರಿಸಿತು. ರಾಹುಲನಿಗೆ ಜ್ವರ ಎಂದು ತಿಳಿದು ಅವಳೂ ವಿಹ್ವಲಳಾದಳು.

“ಮನೆಗೆ ಹೋಗಿ ರಾತ್ರಿ ಅಡುಗೆ ಬಗ್ಗೆ ಯೋಚಿಸಬೇಡ ವಂದನಾ. ನೀವು ಮನೆ ತಲುಪಿಸುವಷ್ಟರಲ್ಲಿ ನಾನು ನಿಮ್ಮಿಬ್ಬರಿಗೂ ಮನೆಗೆ ಊಟ ತಂದುಕೊಡ್ತೀನಿ,” ಎಂದು ಅಕ್ಕರೆಯಿಂದ ಹೇಳಿದಳು ವಿನುತಾ.

ವಿನುತಾಳ ಮಾತು ಕೇಳಿ ಅವಳಿಗೆಷ್ಟೋ ಸಮಾಧಾನವಾಯಿತು. ಮಗುವನ್ನು ಪರೀಕ್ಷಿಸಿದ ಡಾ. ನಮನ್‌, ಮಾಮೂಲಿ ನೇಸ್‌ ಫೀವರ್‌, ಆತಂಕ ಪಡಬೇಕಾಗಿಲ್ಲ ಎಂದರು.

“ಮಗುವಿಗೆ ಜ್ವರ ಬಿಡುವವರೆಗೂ ಹುಷರಾಗಿ ನೋಡಿಕೊಳ್ಳಿ. ಗಂಜಿ, ಇಡ್ಲಿ, ಮೊಸರನ್ನ ಮಾತ್ರ ಕೊಡಿ, ಖಾರದ್ದು ಏನೂ ಬೇಡ. ಅಗತ್ಯವೆನಿಸಿದರೆ ನನಗೆ ಫೋನ್‌ ಮಾಡಿ. ಯಾವುದಕ್ಕೂ ಒಂದು ಸಲ ಆರ್‌ಟಿಪಿಸಿ ಕೋವಿಡ್‌ ಟೆಸ್ಟ್ ಮಾಡಿಸಿಬಿಡಿ, ಆಗ ಟೆನ್ಷನ್ ಇರುವುದಿಲ್ಲ,” ಎಂದು ಸಲಹೆ ನೀಡಿದರು.

ಪಕ್ಕದಲ್ಲಿದ್ದ ಕೆಮಿಸ್ಟ್ ನಿಂದ ಮಾತ್ರೆ, ಟಾನಿಕ್‌ ಕೊಂಡು, ಆಟೋ ಹಿಡಿದು ಅವಳು ಮನೆ ತಲುಪುವಷ್ಟರಲ್ಲಿ 8 ದಾಟಿತ್ತು. ಬಂದವಳೇ ಪಕ್ಕದ ಹೋಟೆಲ್ ‌ನಿಂದ ಎರಡು ಬಿಸಿ ಇಡ್ಲಿ ತಂದು ರಾಹುಲನಿಗೆ ತಿನ್ನಿಸಿ, ಮಾತ್ರೆ ಕೊಟ್ಟು, ಟಾನಿಕ್‌ ಕುಡಿಸಿದಳು. ನಂತರ ಟೀ ಕುಡಿಯೋಣ ಎಂದು ನೀರು ಕುದಿಸಿ, ಪುಡಿ ಹಾಕಿದಳು. ಟೀ ಜೊತೆ ಅಗತ್ಯ ತಲೆ ನೋವಿನ ಮಾತ್ರೆ ಬೇಕೆನಿಸಿತು. ಮಾತ್ರೆ ನುಂಗಿದ ಅವಳು ಎರಡು ಗುಟುಕು ಟೀ ಕುಡಿಯುವಷ್ಟರಲ್ಲಿ ರಾಹುಲ್ ‌ಎದ್ದು ವ್ಯಾಕ್‌ ಎಂದು ವಾಂತಿ ಮಾಡಿಕೊಂಡಿದ್ದ. ಗಾಬರಿಯಲ್ಲಿ ಟೀ ಮರೆತು ಓಡಿಹೋಗಿ, ಅವನ ಬಾಯಿ ತೊಳೆಸಿ, ಕ್ಲೀನ್‌ ಮಾಡಿ, ಬಟ್ಟೆ ಬದಲಿಸಿ ಅವನನ್ನು ಮಲಗಿಸಿ ಬರುವಷ್ಟರಲ್ಲಿ ಅವಳ ಟೀ ಆರಿ ತಣ್ಣಗಾಗಿತ್ತು.

ದಿನವಿಡೀ ದುಡಿತದ ಹೋರಾಟದಿಂದ ಹೈರಾಣಾಗಿದ್ದ ಅವಳಿಗೆ ಅಳು ಉಕ್ಕಿ ಬಂತು. ಅಷ್ಟರಲ್ಲಿ ಕರೆಗಂಟೆ ಬಾರಿಸಿದ ವಿನುತಾ, ಪತಿ ಸೌರವ್ ನೊಡನೆ ಒಳಬಂದಳು.

“ವಂದನಾ, ನೀನು ಮಗು ಹತ್ತಿರವೇ ಇರು. ನಾನು ಇದನ್ನೆಲ್ಲಾ ತುಸು ಬಿಸಿ ಮಾಡ್ತೀನಿ.”

ಮಹಾ ಚುರುಕಿನ ಸ್ವಭಾವದ ವಿನುತಾ, ತಕ್ಷಣ ಗ್ರೇವಿ ಬಿಸಿ ಮಾಡಿ, ಅನ್ನವನ್ನು ಮೈಕ್ರೋವೇವ್ ‌ನಲ್ಲಿಟ್ಟು, ಚಪಾತಿ ಬಿಸಿಯಾಗಲು ತವಾ ಇರಿಸಿದಳು. ಸೌರವ್ ವಂದನಾಳನ್ನು ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ.

ಅದಾದ 10 ನಿಮಿಷಗಳಲ್ಲಿ ಇವಳ ತಾಯಿ ಶಾರದಮ್ಮ ಮಗ, ಸೊಸೆ ಜೊತೆ ಅಲ್ಲಿಗೆ ಬಂದು ಸೇರಿದರು. ಎಲ್ಲರೂ ಆತಂಕದಿಂದ ರಾಹುಲನ ಆರೋಗ್ಯದ ಬಗ್ಗೆ ವಿಚಾರಿಸಿದರು.

ಎಚ್ಚರಗೊಂಡ ಮೊಮ್ಮಗನನ್ನು ಮಡಿಲಿಗೆ ಹಾಕಿಕೊಂಡು ಅಜ್ಜಿ ತಟ್ಟತೊಡಗಿದಾಗ, ರಾಹುಲನಿಗೆ ಬಹಳ ಖುಷಿ ಎನಿಸಿತು.

“ಅಜ್ಜಿ, ಇವತ್ತು ನೀನು ಇಲ್ಲೇ ಇರಬೇಕು. ನಿನ್ನ ಕೈಯಲ್ಲೇ ನಾನು ಊಟ ಮಾಡೋದು…. ಮತ್ತೆ ರಾಧಮ್ಮ ಅಜ್ಜಿ ತರಹ ನೀನೂ ನನಗೆ ಒಳ್ಳೊಳ್ಳೆ ಕಥೆ ಹೇಳಬೇಕು,” ಎಂದು ರಾಹುಲ್ ‌ಅಜ್ಜಿಯ ಸೆರಗಿನಲ್ಲಿ ಮುಖ ತೂರಿಸಿಕೊಂಡ.

ಅವನಿಗೆ ಬಿಸಿ ಅನ್ನಕ್ಕೆ ಮೊಸರು ಹಾಕಿ ಕಲಸಿ, ಅಮ್ಮನ ಕೈಗೆ ತಿನ್ನಿಸಲು ಕೊಟ್ಟಳು. ಅಜ್ಜಿಯ ಕೈ ತುತ್ತು ಆದ್ದರಿಂದ ರಾಹುಲ್ ‌ಗಲಾಟೆ ಒಲ್ಲದೆ ಊಟ ಮಾಡಿ, ಅಜ್ಜಿ ಪಕ್ಕ ಮಲಗಿಬಿಟ್ಟ. ಎಲ್ಲರೂ ಹಾಲ್ ‌ನಲ್ಲಿ ಬಂದು ಕುಳಿತರು.

ಏನೇ ಆಗಲಿ, ವಂದನಾ ಅತ್ತೆ ಮನೆ ಬಿಟ್ಟು ಹೀಗೆ ಒಂಟಿಯಾಗಿ ಬಂದು ಇರಬಾರದು ಎಂದು ಅವಳ ತಮ್ಮ ವಿಕಾಸ್‌, ಅವನ ಪತ್ನಿ ಅಂಜಲಿ ಹೇಳಿದರು. ವಂದನಾ ಮಾಡಿದ್ದು ಸರಿಯಾಗೇ ಇದೆ ಎಂದು ಅವಳ ಅಕ್ಕ ವಿನುತಾ, ಭಾವ ಸೌರವ್ ಸಮರ್ಥಿಸಿದರು. ಎಲ್ಲರೂ ಭೇಟಿ ಆದಾಗ ಈ ವಾದ ವಿವಾದ ನಡೆಯುತ್ತಲೇ ಇರುತ್ತಿತ್ತು.

ಮೊದಲೇ ತಲೆನೋವಿನಿಂದ ಕಂಗೆಟ್ಟಿದ್ದ ವಂದನಾ, ಇವರುಗಳು ಈ ವಾದ ನಿಲ್ಲಿಸಿದರೆ ಸಾಕು ಎಂದು ಕಾದಳು. ಆದರೆ ಮನೆಗೆ ಬಂದವರಿಗೆ ಜೋರು ಜೋರಾಗಿ ವಾದ ಮಾಡಬೇಡಿ ಎಂದು ಹೇಳುವುದು ಹೇಗೆ?

“ಏನೇ ತಕರಾರಿರಲಿ, ಅದನ್ನು ಅಗತ್ಯಕ್ಕಿಂತ ಹೆಚ್ಚಿಗೆ ಎಳೆದಾಡಬಾರದು. ಅತ್ತೆ ಮನೆ ಬಿಟ್ಟು ಬಂದು ನೀನು ಮಗುವಿನ ಜೊತೆ ಈ ಸಿಂಗಲ್ ಬೆಡ್‌ ರೂಂ ಫ್ಲಾಟ್‌ ನಲ್ಲಿ ಯಾವ ಹಠ ಸಾಧನೆಗಾಗಿ ಹೀಗೆ ಕಷ್ಟಪಡಬೇಕು? ಅರುಣ್‌ ಅಂತೂ ಅದೆಷ್ಟು ಸಲ ನಿನ್ನನ್ನು ವಾಪಸ್‌ ಕರೆಯಲು ಬಂದಿದ್ದಾರೆ. ನೀನು ಹೀಗೆ ಒಂಟಿ ಬಡುಕಿಯಾಗಿ ಬಾಳುವುದು ಏನೇನೂ ಚೆನ್ನಾಗಿಲ್ಲ……” ಅವಳ ತಮ್ಮ ವಿಕಾಸ್‌ ಹೇಳಿದ ತಕ್ಷಣ ಅಕ್ಕ ವಿನುತಾ ಸುಮ್ಮನಿದ್ದಾಳಾ?

“ಅವಳು ಎಷ್ಟೋ ಕಷ್ಟಪಟ್ಟು ಈ ಮನೆ ಮಾಡಿಕೊಂಡು ಸ್ವತಂತ್ರವಾಗಿ ನೆಮ್ಮದಿಯಾಗಿದ್ದಾಳೆ. ಇದಕ್ಕೆ ಅಡ್ಡಿಪಡಿಸೋ ಮಾತು ಬೇಡ ವಿಕಾಸ್‌,” ತಮ್ಮನ ಮಾತು ವಿನುತಾಳಿಗೆ ರುಚಿಸಲಿಲ್ಲ.

“ಅವಳೇನು ಬೇಕು ಅಂತ ಆ ಮನೆ ಬಿಟ್ಟು ಬಂದಳೇ….? ಅತ್ತೆ ಮನೆಯ ನರಕ 7 ವರ್ಷ ಅನುಭವಿಸಿದ್ದಾಳೆ. ಮಾತು ಮಾತಿಗೆ ತಿರಸ್ಕಾರ, ಅಪಮಾನ, ಬೇಸರದ ನುಡಿಗಳು….. ಎಷ್ಟು  ಅಂತ ಸಹಿಸುತ್ತಾಳೆ? ಅವಳೂ ಸ್ವಾಭಿಮಾನಿ ತಾನೇ? ಒಳಗೂ ಹೊರಗೂ ಎರಡೂ ಕಡೆ ದುಡಿಯುತ್ತಿದ್ದಳು ತಾನೇ? ಇಷ್ಟಕ್ಕೂ ಅರುಣನಿಗೆ ಹೆಂಡತಿ ಮಗನ ಮೇಲೆ ಅಕ್ಕರೆ ಇದ್ದರೆ, ಆ ಜಾಯಿಂಟ್ ಫ್ಯಾಮಿಲಿ ಬಿಟ್ಟು ಬೇರೆಯಾಗಿ ಬಂದಿರಬಾರದೇ? ಏನೇ ಆಗಲಿ, ವಂದನಾ ಇನ್ನು ಆ ಮನೆಗೆ ವಾಪಸ್ಸು ಹೋಗೋದಿಲ್ಲ!”

“ಸುಮ್ನೆ ಇರಕ್ಕಾ ನೀನು….. ಮೊದಲಿನಿಂದಲೇ ನೀನು ಅವಳ ತಲೆ ಕೆಡಿಸಿ ಇಲ್ಲದ ವಿಚಾರ ಅವಳ ತಲೆ ತುಂಬಿಸಿದ್ದೀಯಾ…. ಇಲ್ಲದಿದ್ದರೆ ಅವಳು ಹಾಯಾಗಿ ಗಂಡನ ಜೊತೆ ಸಂಸಾರ ಮಾಡಿಕೊಂಡು ಆ ಮನೆಯಲ್ಲೇ ಇರುತ್ತಿದ್ದಳು…..” ಹಿರಿಯಕ್ಕನಿಂದಲೇ ಕಿರಿಯಕ್ಕನ ಸಂಸಾರ ಹೀಗಾಗಿದ್ದು ಎಂದು ಅವನಿಗೆ ಬಹಳ ಬೇಸರವಿತ್ತು.

“ಹಾಗಲ್ಲ ವಿಕಾಸ್‌, ಅನಗತ್ಯವಾಗಿ ವಿನುತಾಳ ಮೇಲೆ ಆರೋಪ ಹೊರಿಸಬೇಡ,” ಸೌರವ್ ಹೆಂಡತಿಯ ಪಕ್ಷ ವಹಿಸುತ್ತಾ ಹೇಳಿದ.

“ನಾವಿಬ್ಬರೂ ವಂದನಾಳಿಗೆ ಸಪೋರ್ಟ್‌ ಆಗಿದ್ದೇವೆ. ಬೇರೆ ಫ್ಲಾಟ್‌ ನಲ್ಲಿ ಬಂದು ವಾಸಿಸಬೇಕೆಂಬುದು ವಂದನಾಳ ನಿರ್ಧಾರ ಆಗಿತ್ತು. ಮುಂದೆ ಅವಳು ಖಂಡಿತಾ ತನ್ನ ಗುರಿ ಮುಟ್ಟುತ್ತಾಳೆ, ನೋಡ್ತಿರು…..” ಎಂದ ಸೌರವ್.

“ಇಂಥ ಪ್ರೆಶರ್‌ ನಿಂದ ತಲೆ ಕೆಡಿಸಿಕೊಂಡು ಅರುಣ್‌ ತನ್ನ ಸ್ವಂತ ಮನೆ ಇಟ್ಟು ಬರ್ತಾನೆ ಅಂತೀಯಾ?” ವಿನುತಾಳ ಕಡೆ ನೋಡುತ್ತಾ, ವಿಕಾಸ್‌ ಕೇಳಿದ.

“ಇನ್ನೇನು ಮತ್ತೆ? ತನ್ನ ಹೆಂಡತಿ, ಮಗುವನ್ನು ಪ್ರೀತಿಸುವ ಯಾವ ಗಂಡ ತಾನೇ ಅವರನ್ನು ಬಿಟ್ಟು ಇಷ್ಟು ದಿನ ದೂರ ಇರಬಲ್ಲ?” ಸವಾಲು ಒಡ್ಡಿದಳು ವಿನುತಾ.

“ಹಾಗೇನೂ ಆಗಲ್ಲ ಬಿಡಿ ಅಕ್ಕಾ…..” ಅಂಜಲಿ ಇದೀಗ ಗಂಡನನ್ನು ಸಮರ್ಥಿಸುತ್ತಾ ನುಡಿದಳು,

“ಅರುಣ್‌ ಭಾವ ತಮ್ಮ ಮನೆಯವರ ಜೊತೆ ಮೊದಲಿನಿಂದ ಬಹಳ ಸೆಂಟಿಮೆಂಟ್‌ ಆಗಿ ಬೆರೆತುಹೋಗಿದ್ದಾರೆ. ಅವರ ತಂಗಿ ದಿವ್ಯಾ ಮದುವೆಯಾಗದೆ ಇನ್ನೂ ಮನೆಯಲ್ಲೇ ಉಳಿದಿದ್ದಾಳೆ. ಅವಳ ಜವಾಬ್ದಾರಿ ಕಳೆಯುವವರೆಗೂ ಇವರು ಬೇರೆ ಮನೆ ಮಾಡುವುದು ಕನಸಿನ ಮಾತು!”

“ಅದು ಸರಿ ಕಣಮ್ಮ, ತಾನು ಬೇರೆ ಸಂಸಾರ ಹೂಡಿದ ಮಾತ್ರಕ್ಕೆ ಅರುಣ್‌ ತಂಗಿಯ ಮದುವೆ ಜವಾಬ್ದಾರಿ ಹೊರಬಾರದು ಎಂದು ಯಾರು ಹೇಳಿದರು?” ವಿನುತಾ ಮಾತು ಮುಂದುವರಿಸಿದಳು.

“ನಮ್ಮ ವಂದನಾಳನ್ನು ಸದಾ ಸುಖಿಯಾಗಿ ಇರಿಸಿಕೊಳ್ಳುವುದು ಮದುವೆಯಾಗಿ ಕೈ ಹಿಡಿದ ಅವನ ಜವಾಬ್ದಾರಿ ಅಲ್ಲವೇ?”

ವಿನುತಾಳ ಇಂಥ ನೇರ ಪ್ರಶ್ನೆಗೆ ವಿಕಾಸ್‌ ಅಂಜಲಿ ಏನು ತಾನೇ ಉತ್ತರಿಸಲು ಸಾಧ್ಯ? ಅರುಣ್‌ ವಂದನಾರ ನಡುವೆ ಉಂಟಾದ ವೈಮನಸ್ಯಕ್ಕೆ ಪರವಿರೋಧವಾಗಿ ಆ ನಾಲ್ವರಲ್ಲಿ ಚರ್ಚೆ ಮುಂದುವರಿದೇ ಇತ್ತು. ಈ ಮಧ್ಯೆ ವಿನುತಾ ಒತ್ತಾಯಿಸಿದ್ದರಿಂದ ವಂದನಾ ಎರಡೇ ಚಪಾತಿ ತಿಂದು, ಮೊಸರನ್ನ ಬೇಡ ಎಂದು ತಟ್ಟೆ ತೊಳೆದಿಟ್ಟು ಬಂದಳು. ತಲೆ ಸಿಡಿಯುತ್ತಿದ್ದರೂ ಬಂದವರು ಹೊರಡುವ ತನಕ ಅವಳು ಮಲಗುವ ಹಾಗಿರಲಿಲ್ಲ.

ಆಗ ಅವಳಿಗೆ ಬೇಡವೆಂದರೂ ಪತಿಯ ಜೊತೆ ಕಳೆದ ಆ ದಿನಗಳು ನೆನಪಾಗ ತೊಡಗಿದವು. ಇವರೆಲ್ಲರ ವಾದಕ್ಕೆ ಅವಳೇನೂ ಉತ್ತರ ಕೊಡಲು ಹೋಗಲಿಲ್ಲ, ಅವಳಿಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಇವರುಗಳ ಇಂಥದೇ ವಾದ ವಿವಾದವಿಲ್ಲದ ಅವರ ಚರ್ಚೆ ಕೇಳಿ ಸಾಕಾದ ಅವಳು, “ನಾನು ಅತ್ತೆ ಮನೆ ಬಿಟ್ಟು ಬಂದುದು ಸರಿಯೋ ತಪ್ಪೋ ಎಂದು ಈಗ ಚರ್ಚೆ ಮಾಡುವುದರಿಂದ ಏನು ಲಾಭ? ನೀವು ಯಾರೂ ಏನೂ ಯೋಚನೆ ಮಾಡಬೇಕಾದ ಅಗತ್ಯವಿಲ್ಲ. ಮುಂದೆ ಇದರಿಂದ ಏನೇ ಪರಿಣಾಮ ಆಗಲಿ, ಅದಕ್ಕೆ ನಾನೇ ಜವಾಬ್ದಾರಿ ಹೊರತು ಬೇರೆ ಯಾರೂ ಅಲ್ಲ!”

“ನೀನು ಒಬ್ಬಂಟಿ ಅಂದುಕೊಳ್ಳಬೇಡ….. ನಾವೆಲ್ಲ ನಿನ್ನ ಜೊತೆಗಿದ್ದೇವೆ!” ಎಂದು ಅವಳಿಗೆ ಭರವಸೆ ನೀಡುವವಳಂತೆ ಭುಜ ತಟ್ಟಿ ಹೇಳಿದ ವಿನುತಾ, ಮನೆಗೆ ಹೊರಡಲು ಸಿದ್ಧಳಾದಳು.

“ಅರುಣ್‌ ಗೆ ಮಗುವಿಗೆ ಹುಷಾರಿಲ್ಲ ಅಂತ ಖಂಡಿತಾ ವಿಷಯ ತಿಳಿಸು,” ಎನ್ನುತ್ತಾ ವಿಕಾಸ್‌ ಸಹ ಹೊರಡಲು ಎದ್ದ.

“ವಿಕಾಸ್‌, ಅಮ್ಮನ್ನ ನಾಳೆ ಬೆಳಗ್ಗೆ ಇಲ್ಲಿ ಬಿಟ್ಟು ಹೋಗು. ನಾಳೆ ನಾಡಿದ್ದು 2 ದಿನ ನಮ್ಮ ಆಫೀಸಲ್ಲಿ ಆಡಿಟಿಂಗ್‌ ಇದೆ, ನಾನು ಲೀವ್ ಹಾಕುವಂತಿಲ್ಲ. ರಾಹುಲ್ ‌ಜೊತೆ ಅಮ್ಮ ಇರಲಿ ಅಂತ….” ವಂದನಾ ಹೇಳಿದಳು.

“ಅಯ್ಯೋ….. ನಾಳೆ ನಮ್ಮ ಅತ್ತೆ ಮಾವನ ವೆಡ್ಡಿಂಗ್‌ ಆ್ಯನಿವರ್ಸರಿ….. ನಾವೆಲ್ಲ ಅಲ್ಲಿಗೆ ಫಂಕ್ಷನ್‌ ಗೆ ಬರಬೇಕು ಅಂತ ಕಳೆದ ವಾರವೇ ತಿಳಿಸಿದ್ದರು…. ಅಮ್ಮ ಸಹ ಬರ್ತಿದ್ದಾರೆ……” ವಿಕಾಸ್‌ ಹೇಳಿದಾಗ, ಅಂಜಲಿ ಸಹ ಅದನ್ನು ತಪ್ಪಿಸಲಾಗದು ಎಂಬಂತೆ ಮಾತನಾಡಿದಳು.

“ಹಾಗಿದ್ದರೆ ರಾಹುಲ್ ‌ನ ನಮ್ಮ ಮನೆಯಲ್ಲೇ  ಬಿಟ್ಟುಹೋಗು.” ಎಂದಳು ವಿನುತಾ.

“ಬೇಡ…. ಅದು ಸರಿ ಹೋಗೋಲ್ಲ! ಅಕಸ್ಮಾತ್‌ ರಾಹುಲ್ ‌ದು ಕೋವಿಡ್‌ ಅಂತ ಆಗಿಹೋದರೆ ನಮ್ಮ ಅಮಿತ್‌, ಸುಮಿತ್‌ ಗೆ ತಗುಲಿದರೆ ಕಷ್ಟ…… ಶಾಲೆಗೂ ಹೋಗದೆ ಆನ್‌ ಲೈನ್‌ ಕ್ಲಾಸ್‌ ಅಟೆಂಡ್‌ ಮಾಡ್ತಿದ್ದಾರೆ ಅವರು. ಇದರ ಬದಲು ಅಮ್ಮ ನಾಳೆ ಒಂದು ದಿನ ಫಂಕ್ಷನ್‌ ಕ್ಯಾನ್ಸಲ್ ಮಾಡಿ ಇಲ್ಲಿಗೆ ಬರುವುದೇ ಸರಿ,” ಎಂದು ಸೌರವ್ ಖಂಡಿತವಾದಿಯ ದನಿಯಲ್ಲಿ ನುಡಿದಾಗ, ವಿನುತಾ ಗಂಡನನ್ನು ಎದುರಿಸಲಿಲ್ಲ.

“ನಾನು ಇವತ್ತು ರಾತ್ರಿ ಇಲ್ಲಿಯೇ ಉಳಿಯುತ್ತಿದ್ದೆ….. ಆದರೆ ನನ್ನ ಔಷಧಿ ಬಾಕ್ಸ್ ಬಿಟ್ಟು ಬಂದಿರುವೆ, ನನ್ನ ಸಿಂಗಲ್ ಕಾಟ್‌ ಇಲ್ಲದೆ ನನಗೆ ಬೇರೆ ಕಡೆ ನಿದ್ದೆ ಬರುವುದಿಲ್ಲ….. ಈಗಂತೂ ರಾಹುಲ್ ನೆಮ್ಮದಿಯಾಗಿ ನಿದ್ದೆ ಮಾಡ್ತಿದ್ದಾನೆ. ನಾಳೆ ಬೆಳಗ್ಗೆ ಕಾಫಿ ಮುಗಿಸಿ ಬೇಗ ಬಂದುಬಿಡ್ತೀನಿ,” ಶಾರದಮ್ಮ ಸಹ ಮಗ ಸೊಸೆ ಜೊತೆ ಹೊರಡುವ ತಯಾರಿ ನಡೆಸಿದರು.

ಆಗ ವಂದನಾಳಿಗೂ ಅವರನ್ನು ಅಲ್ಲೇ ಉಳಿಯುವಂತೆ ತಡೆಯಲು ಆಗಲಿಲ್ಲ. ಅವರೆಲ್ಲ ಹೊರಟ ನಂತರ ಅವಳು ರಾಹುಲ್ ‌ಬಳಿ ಅವನನ್ನು ತಟ್ಟುತ್ತಾ, ಸುಮ್ಮನೆ ಸೂರು ದಿಟ್ಟಿಸುತ್ತಾ ಇದ್ದುಬಿಟ್ಟಳು. ತಂತಮ್ಮ ಕಾರಣಕ್ಕೆ ಬಂಧುಗಳು ಅವರವರ ಮನೆಗೆ ಹೊರಟುಬಿಡುತ್ತಾರೆ. ನಮ್ಮ ಮನೆಯಲ್ಲಿ ಉಳಿಯುವರು ಮಾತ್ರವೇ ನಮ್ಮವರು ಎನಿಸಿ ದುಃಖ ಉಕ್ಕಿ ಬಂದು, ಬಿಕ್ಕಿ ಬಿಕ್ಕಿ ಅತ್ತಳು.

ದೀಪ ಆರಿಸದೆ ಹಾಗೆ ಮಗನ ಬಳಿ ಅವನನ್ನು ಹಿತವಾಗಿ ತಟ್ಟುತ್ತಾ ಮಲಗಿಬಿಟ್ಟಳು. ನಿದ್ದೆ ಮಾರು ದೂರ ಸರಿದಿತ್ತು. ಯೋಚಿಸಿದಷ್ಟೂ ಸಮಸ್ಯೆ ದಟ್ಟವಾಗುತ್ತದೆ ಎಂದು, ಎದ್ದುಹೋಗಿ ನೀರು ಕುಡಿದು, ದೀಪ ಆರಿಸಿ ಮಲಗಿಬಿಟ್ಟಳು.

ಬೆಳಗ್ಗೆ ಎದ್ದು ಅವಳು ದೈನಂದಿನ ಕೆಲಸಗಳಿಗೆ ತೊಡಗಿಕೊಂಡು, ಕಾಫಿ ಕುಡಿಯುವಷ್ಟರಲ್ಲಿ  ರಾಹುಲ್ ‌ನ ಕೋವಿಡ್‌ ರಿಪೋರ್ಟ್ ನೆಗೆಟಿವ್ ಎಂದು ಬಂದಾಗ, ನೆಮ್ಮದಿಯ ನಿಟ್ಟುಸಿರಿಟ್ಟಳು. ಮಗುವಿನ ಹಣೆ ಮುಟ್ಟಿ ನೋಡಿದಾಗ ಜ್ವರ ಬಿಟ್ಟಿದ್ದು ಅವಳ ಚಿಂತೆ ನಿವಾರಿಸಿತು.

ಆಫೀಸಿಗೆ ಹೊರಡುವುದಕ್ಕೆ ಬೇಕಾದ ತಯಾರಿ ನಡೆಸಿದಳು. 8 ಗಂಟೆ ದಾಟಿದರೂ ಅಮ್ಮನ ಸುಳಿವಿಲ್ಲ. 2 ಸಲ ಫೋನ್‌ ಮಾಡಿದ ನಂತರ, ಇವಳು ತಿಂಡಿ ರೆಡಿ ಮಾಡಿಕೊಳ್ಳುವಷ್ಟರಲ್ಲಿ 9 ಗಂಟೆಗೆ ತಮ್ಮ ಅಮ್ಮನನ್ನು ಇವಳ ಬಳಿ ಬಿಟ್ಟು ಹೊರಟುಬಿಟ್ಟ. ಯಾಕಮ್ಮ ಬರೋದು ತಡ ತುಸು ಸಲುಗೆಯಿಂದ ಅಮ್ಮನತ್ತ ರೇಗುತ್ತಲೇ ಬೇಗ ಬೇಗ ಲಂಚ್‌ ಬಾಕ್ಸ್ ಸಿದ್ಧಪಡಿಸಿ, ಹೊರಡಲು ತಯಾರಾದಳು. ಹಾಯಾಗಿ ಫಂಕ್ಷನ್‌ ಗೆ ಹೋಗಲಾಗದೆ ಇಲ್ಲಿ ಮೊಮ್ಮಗನ ಬಳಿ ಉಳಿಯ ಬೇಕಾಯಿತಲ್ಲ ಎಂದು ಶಾರದಮ್ಮನಿಗೆ ಸಿಟ್ಟು ಬಂದು ಗೊಣಗುತ್ತಾ ಸುಮ್ಮನಾದರು.

ಅಮ್ಮ ತಮ್ಮೊಂದಿಗೆ ಬರಲಿಲ್ಲ ಎಂಬ ಸಿಟ್ಟನ್ನು ಅಕ್ಕನ ಮೇಲೆ ಕಾರುತ್ತಾ ವಿಕಾಸ್‌ ಸಿಡಿದು ನುಡಿದ, “ಅಮ್ಮ ಮನೆಯಿಂದ ಹೊರಡೋದೇ ಅಪರೂಪ, ಇವತ್ತು ಇದಕ್ಕೂ ಕಲ್ಲು ಬಿತ್ತು. ನೀನು ಆಫೀಸಿಗೆ ಹೊರಡಲು ಇಷ್ಟೊಂದು ಅರ್ಜೆಂಟ್‌ ಏಕೆ? ರಜೆ ದಿನ ನಾನು ನೆಮ್ಮದಿಯಾಗಿ ನಿದ್ರಿಸಲಾಗದೆ ಬೆಳಗ್ಗೆ ಬೇಗ ಎದ್ದು, ಅಮ್ಮನನ್ನು ಹೊರಡಿಸಿ ಕರೆತರುವಷ್ಟರಲ್ಲಿ ಸಾಕಾಯಿತು.

“ಕೆಲಸಕ್ಕೆ ಹೋಗುವ ನಿನ್ನಂಥ ಹೆಂಗಸರು ಸದಾ ತಲೆ ಕೆಡಿಸಿಕೊಂಡು, ಬೇರೆಯವರ ನೆಮ್ಮದಿ ಹಾಳು ಮಾಡುವುದೇ ಆಗಿಹೋಗುತ್ತದೆ. ಎಲ್ಲರೂ ಬಂದು ಸದಾ ನಿನಗೆ ಹೆಲ್ಪ್ ಮಾಡುತ್ತಿರಲಿ ಅಂತಿಯಾ, ನಮಗೂ ನಮ್ಮದೇ ಸಂಸಾರ ತಾಪತ್ರಯ ಅನ್ನೋದಿರೋದಿಲ್ವೇ? ನೀನು ಕರೆದಾಗೆಲ್ಲ ಬಂದು ನಿನಗೆ ಸೇವೆ ಮಾಡೋದೊಂದೇ ನಮಗೆ ಕೆಲಸವೇ?” ವಿಕಾಸ್‌ ಅಕ್ಕನನ್ನು ತರಾಟೆಗೆ ತೆಗೆದುಕೊಂಡಿದ್ದ.

ತಮ್ಮನ ಮಾತು ಅವಳ ಕೋಪ ಕೆರಳಿಸಿತು. ನಂತರ ಇಬ್ಬರ ನಡುವೆ ದೊಡ್ಡ ವಾಗ್ಯುದ್ಧವೇ ನಡೆಯಿತು.

ಅರ್ಧ ಗಂಟೆ ತಡವಾಗಿ ಆಫೀಸ್‌ ತಲುಪಿದ ವಂದನಾ, ಅಷ್ಟರಲ್ಲಿ ಆಡಿಟಿಂಗ್‌ ನವರು ಬಂದುಬಿಟ್ಟಿದ್ದರಿಂದ ಬೇಗ ಬೇಗ ಅವರು ಕೇಳಿದ ಫೈಲ್ ‌ಕೊಡಬೇಕಾಯಿತು. ತಡವಾಗಿದ್ದಕ್ಕೆ ಬಾಸ್‌ ರಿಂದ ಬೈಗುಳ ಕೇಳಬೇಕಾಯಿತು.

ಎಷ್ಟೋ ಜನರಿಗೆ ಇನ್ನೂ ವರ್ಕ್‌ ಫ್ರಂ ಹೋಂ ಮುಂದುವರಿದಿತ್ತು. ಅವರೇ ಪುಣ್ಯವಂತರು, ಇಂತಹ ಎಷ್ಟೋ ಖಾಸಗಿ ಕಂಪನಿಗಳಲ್ಲಿ ಆಫೀಸಿಗೆ ಹೋಗಿ, ತಡ ಆಗಿ, ಬೈಗುಳ ಕೇಳುವ ಗೋಜಿರಲಿಲ್ಲ. ಬಂದದ್ದನ್ನು ಎದುರಿಸಲೇಬೇಕೆಂದು ಹಲ್ಲು ಕಚ್ಚಿ ಕೆಲಸ ಮುಂದುವರಿಸಿದಳು.

ಲಂಚ್‌ ಟೈಂ ಮತ್ತು ಸಂಜೆ 4 ಗಂಟೆ ಹೊತ್ತಿಗೆ ಮಾತ್ರ ಅಮ್ಮನಿಗೆ ಫೋನ್‌ ಮಾಡಿ ರಾಹುಲ್ ‌ನ ಆರೋಗ್ಯ ವಿಚಾರಿಸಲು ಸಾಧ್ಯವಾಗಿತ್ತು. ಔಷಧಿಯ ಪ್ರಭಾವದಿಂದ ಅವನ ಜ್ವರ ಎಷ್ಟೋ ತಗ್ಗಿತ್ತು. ನಿಶ್ಶಕ್ತಿ, ಸುಸ್ತಿನಿಂದ ಹಿಂದಿನ ಗೆಲುವು

ಇರಲಿಲ್ಲವಷ್ಟೆ.

ಈ ಮಧ್ಯೆ ಅರುಣನಿಂದ ಒಮ್ಮೆ ಕಾಲ್ ‌ಬಂದಿತ್ತು. ಪತಿ ಪತ್ನಿ ನಡುವೆ ಆತ್ಮೀಯತೆಯ ಮಾತುಗಳು ನಡೆದು ಎಷ್ಟು ಕಾಲವಾಗಿತ್ತೋ ಏನೋ? ಇವಳು ಬೇರೆ ಫ್ಲಾಟ್‌ ಗೆ ಬಂದಾಗಿನಿಂದ ವಾರಕ್ಕೊಮ್ಮೆ ಔಪಚಾರಿಕತೆಯ ಮಾತುಕಥೆ ನಡೆಯುತ್ತಿತ್ತಷ್ಟೆ.

ಮಗನಿಗೆ ಜ್ವರ ಎಂದು ತಿಳಿದು ಅರುಣ್‌ಆತಂಕ ವ್ಯಕ್ತಪಡಿಸಿದ. “ಅದಕ್ಕಾಗಿ ನೀವೇನೂ ಚಿಂತಿಸಬೇಕಾಗಿಲ್ಲ. ಹೆತ್ತವಳು ನಾನಿದ್ದೀನಿ, ಹೇಗೋ ನೋಡಿಕೊಳ್ತೀನಿ. ಅಮ್ಮ ಮನೆಗೆ ಬಂದಿದ್ದಾರೆ. 2 ದಿನ ಮೊಮ್ಮಗನ್ನ ಸುಧಾರಿಸಿಯೇ ಹೋಗ್ತಾರೆ,” ಎಂದು ಹೆಚ್ಚಿಗೆ ಮಾತನಾಡಲು ಅವಕಾಶ ಕೊಡದೆ ಲೈನ್‌ ಕಟ್‌ ಮಾಡಿದಳು.

ಅಂತೂ ಅವಳು ಕೆಲಸ ಮುಗಿಸಿ ಮನೆ ತಲುಪುವಷ್ಟರಲ್ಲಿ 7 ಗಂಟೆ ಆಗಿತ್ತು. ರಾಹುಲ್ ‌ತಂದೆ ಜೊತೆ ಆಡುತ್ತಾ  ಹಾಲ್ ‌ನಲ್ಲಿದ್ದ. ಇದನ್ನು ನೋಡಿ ಅವಳಿಗೆ ಶಾಕ್‌ ಆಯ್ತು. ಇವಳ ಈ ಮನೆಗೆ ಕಾಲಿಡುವುದಿಲ್ಲ ಅಂತ ಅವನು ಪ್ರಮಾಣ ಮಾಡಿದ್ದ. ಬೇರೆ ಮನೆ ಹೂಡೋಣ ಎಂಬ ಅವಳ ಸಲಹೆಗೆ ಅವನು ಬಹಳ ವಿರೋಧಿಸಿದ್ದ.

ಅಮ್ಮ ಬಂದ ತಕ್ಷಣ ಓಡಿಬಂದು ಅವಳನ್ನು ಅಪ್ಪಿಕೊಂಡ ರಾಹುಲ್‌, ಉತ್ಸಾಹದಿಂದ ಅಪ್ಪ ಕೊಡಿಸಿದ ಆಟಿಕೆಗಳನ್ನು ತೋರಿಸಿದ. ಶಾರದಮ್ಮ ಅಳಿಯನೊಂದಿಗೆ ಹಾರ್ದಿಕವಾಗಿ ಮಾತನಾಡುತ್ತಿದ್ದರು, ಮಗಳು ಬಂದ ನಂತರ ಒಳಗೆ ಹೋಗಿ 3 ಕಪ್‌ ಟೀ ಮಾಡಿ ತಂದರು. ಮೂವರೂ ರಾಹುಲ್ ‌ಮುಖಾಂತರವೇ ಮಾತನಾಡಿಕೊಳ್ಳುತ್ತಿದ್ದರು. ತನ್ನವರನ್ನೆಲ್ಲ ಒಟ್ಟಿಗೆ ಕಂಡು ಉತ್ಸಾಹಿತನಾಗಿದ್ದ ರಾಹುಲ್‌, ಹಿಂದಿನ ಅದೇ ಚಟುವಟಿಕೆ ಗಳಿಸಿ ಮಿಂಚುತ್ತಿದ್ದ.

ಟೀ ಮುಗಿಸಿ ಡ್ರೆಸ್‌ ಚೇಂಜ್‌ ಮಾಡಲು ವಂದನಾ ಒಳಗಿನ ಕೋಣೆಗೆ ಹೋದಳು. ಅವಳು ಮುಖ ತೊಳೆದು ಹಾಲ್ ಗೆ ಬಂದಾಗ ಅರುಣ್‌ ಅಲ್ಲಿಂದ ಹೊರಡಲು ಎದ್ದಿದ್ದ.

“ಪಪ್ಪಾ…. ನೀವು ಹೋಗಬೇಡಿ ಪ್ಲೀಸ್‌. ಇವತ್ತು ನನ್ನ ಜೊತೆ ಮಲಕ್ಕೊಳ್ಳಿ,” ಮುದ್ದುಗರೆಯುತ್ತಾ, ತನ್ನನ್ನು ಎತ್ತಿಕೊಂಡಿದ್ದ ಅಪ್ಪನ ಕೊರಳನ್ನು ಅಪ್ಪಿಹಿಡಿದು ಹೇಳಿದ ರಾಹುಲ್.

“ನೀನೇನೂ ಹೆದರಬೇಡ ಮಗು, ನನ್ನ ಟೈಗರ್‌ ಸನ್‌ ಅಲ್ವಾ ನೀನು? ಧೈರ್ಯವಾಗಿರಬೇಕು. ಟೈಂ ಟೈಂಗೆ ಊಟ ಮಾಡಿ, ಮಾತ್ರೆ, ಔಷಧಿ ತಗೋಬೇಕು. ಅಮ್ಮ, ಅಜ್ಜಿಯರಿಗೆ ಒಂದು ಚೂರೂ ತೊಂದರೆ ಮಾಡಬಾರದು. ನಿನಗೆ ಪೂರ್ತಿ ವಾಸಿ ಆಗಲಿ, ಆಮೇಲೆ ಒಂದು ರೌಂಡ್‌ ಕಬ್ಬನ್‌ ಪಾರ್ಕಿಗೆ ಹೋಗಿ ಬರೋಣ,” ಮಗನ ಹಣೆ ಮುದ್ದಿಸುತ್ತಾ ಅವನನ್ನು ಮನಸ್ಸಿಲ್ಲದೆ ಕೆಳಗಿಳಿಸಿದ ಅರುಣ್‌.

“ನೀವು ಸ್ವಲ್ಪ ಹೊತ್ತು ಇಲ್ಲೇ ಇವನ ಜೊತೆ ಕಾರ್ಟೂನ್‌ ನೋಡುತ್ತಾ ಕುಳಿತಿರಿ. ನಾನು ರಾತ್ರಿ ಅಡುಗೆ ಗಮನಿಸಿ ಬರ್ತೀನಿ,” ಪತ್ನಿಯ ಮಾತು ಕೇಳಿ, ಮಗನ ಮೇಲಿನ ವ್ಯಾಮೋಹದಿಂದ ಅವನನ್ನು ಬಿಟ್ಟಿರಲಾಗದೆ ಅಲ್ಲೇ ಸೋಫಾದ ಮೇಲೆ ಕುಳಿತ ಅರುಣ್‌ಶಾರದಮ್ಮ ಮಗನ ಮನೆಯಿಂದ ಬರುವಾಗಲೇ ಏನಾದರೂ ಅಡುಗೆ ಮಾಡಿ ತರುತ್ತೇನೆ ಎಂದಿದ್ದರೂ ವಂದನಾ ಖಡಾಖಂಡಿತ ಅದನ್ನು ಬೇಡ ಎಂದು ನಿರಾಕರಿಸಿದ್ದಳು. ಇದೀಗ ಗಂಡನನ್ನು ಕೂರಿಸಿ ಅಡುಗೆ ಮಾಡಲು ಬಂದ ಮಗಳ ಸ್ವಭಾವ ಅವರಿಗೆ ಅರ್ಥ ಆಗಲಿಲ್ಲ. ಒಂದು ಹೊತ್ತಿಗಾಗುವಂತೆ ತಾಯಿ ಮಗಳು ಬೇಗ ಒಂದಿಷ್ಟು ಅಡುಗೆ ತಯಾರಿಸತೊಡಗಿದರು. ಅಳಿಯ ಹೋದ ಮೇಲೆ ಮಗಳ ಮನದಲ್ಲೇನಿದೆ ಎಂದು ಕೇಳಬೇಕು ಎಂದುಕೊಂಡರು.

“ಇವತ್ತು ಅರುಣ್‌ ಮೂಡ್‌ ಬಹಳ ಚೆನ್ನಾಗಿದೆ. ಈ ಅವಕಾಶ ಬಿಡಬೇಡ. ಹೇಗಾದರೂ ಮಾಡಿ ಅವರ ಬಳಿ ಮಾತನಾಡಿ, ಬೇರೆ ಮನೆ ಮಾಡಲೇಬೇಕು, ನಿಮ್ಮನ್ನು ಬಿಟ್ಟಿರಲಾಗದು ಎಂದು ಒತ್ತಾಯಿಸು. ಖಂಡಿತಾ ಇವತ್ತು ಬೇಡ ಎನ್ನಲಾರ,” ಎಂದು ಮಗಳನ್ನು ಪುಸಲಾಯಿಸಿದರು.

ನಂತರ ಆಟೋ ಸಿಗಲು ತಡ ಆದೀತೆಂದು 8 ಗಂಟೆ ಹೊತ್ತಿಗೆ, ಮನೆಗೆ ಹೊರಡಲು ಸಿದ್ಧರಾದರು ಶಾರದಮ್ಮ. ತಂದೆ ಬಂದ ಖುಷಿಯಲ್ಲಿ ಗಲಾಟೆ ಮಾಡದೆ, ಅಜ್ಜಿಗೆ ಟಾಟಾ ಹೇಳಿದ ರಾಹುಲ್ .

ದಿಢೀರ್‌ ಡ್ರೈ ಪಲಾವ್‌, ಒಂದಿಷ್ಟು ಸಜ್ಜಿಗೆ ಮಾಡಿ, ರಾಯ್ತಾ ಸಿದ್ಧಪಡಿಸಿದಳು ವಂದನಾ. ಅಮ್ಮನೂ ಸಹಾಯ ಮಾಡಿದ್ದರಿಂದ ಬೇಗ ಬೇಗ ಎಲ್ಲಾ ಮುಗಿಸಿ ಅರ್ಧ ಗಂಟೆಯಲ್ಲಿ ಡೈನಿಂಗ್‌ ಟೇಬಲ್ ಮೇಲೆ ಎಲ್ಲಾ ಅಣಿಗೊಳಿಸಿದಳು.

ಮಗನ ಜೊತೆ ಅಷ್ಟು ಹೊತ್ತು ಸಂತೃಪ್ತಿಯಿಂದ ಕಳೆದಿದ್ದರಿಂದ ಅರುಣನಿಗೆ ಹೃದಯ ತುಂಬಿ ಬಂದಿತ್ತು. 3 ತಿಂಗಳ ಸುದೀರ್ಘ ಅವಧಿಯ ಬಳಿಕ ಅಂದು ಮಗನ ಜೊತೆ ಸಮಯ ಕಳೆದಿದ್ದ.

ಅರುಣ್‌ ಜೊತೆ ವಾದಕ್ಕೆ ಅವಕಾಶ ಮಾಡಿಕೊಳ್ಳದಂತೆ ವಂದನಾ ಹಗುರವಾಗಿ ನಗುನಗುತ್ತಾ ಮಾತನಾಡತೊಡಗಿದಳು. ತಂಗಿಯ ಮದುವೆಗಾಗಿ ಸಂಬಂಧ ಬರತೊಡಗಿವೆ, ಆದಷ್ಟು ಬೇಗ ಸರಳ ಮದುವೆ ಮುಗಿಸಬೇಕು ಎಂದು ಅರುಣ್‌ ಹೇಳುತ್ತಿದ್ದ. ತಂತಮ್ಮ ಆಫೀಸಿನ ಕಷ್ಟಸುಖ ಮಾತನಾಡಿಕೊಂಡರು. ರಾಜಕೀಯ, ಸಿನಿಮಾ ಚರ್ಚೆಯೂ ಆಯಿತು.

ಸುಮಾರು 2 ಗಂಟೆಗಳ ಕಾಲ ಯಾವ ತಕರಾರು, ವಾದ ವಿವಾದ ಇಲ್ಲದೆ ಅವರ ಸಂಭಾಷಣೆ ನೆಮ್ಮದಿಯಾಗಿ ಮುಂದುವರಿದಿತ್ತು. ರಾಹುಲ್ ‌ಗಂತೂ ತಂದೆ ತಮ್ಮ ಜೊತೆ ಅಷ್ಟು ಹೊತ್ತು ಕಳೆದು, ಊಟ ಮಾಡಿಸಿದ್ದು ಬಹಳ ಇಷ್ಟವಾಯಿತು. ಅರುಣ್‌ ಮಗನನ್ನು ಮಲಗಿಸಲು ಹೋದಾಗ, ವಂದನಾ ಎಲ್ಲಾ ಪಾತ್ರೆ ಒಳಗಿರಿಸಿ, ಡೈನಿಂಗ್‌ ಟೇಬಲ್ ಶುಚಿ ಮಾಡಿದಳು.

ಮಗನನ್ನು ಮಲಗಿಸಿ ಬಂದ ಅರುಣ್‌ ಹೇಳಿದ, “ನಾನಿನ್ನು ಹೊರಡುತ್ತೇನೆ. 9 ಗಂಟೆ ಮೇಲೆ ಆಯ್ತು,” ಎಂದ.

ಏನೂ ಉತ್ತರಿಸದೆ ವಂದನಾ ಸುಮ್ಮನೆ ಒಳಗೆ ಹೋದಳು. ಅರುಣನ ಮುಖದಲ್ಲಿ ಗೊಂದಲ ಮೂಡಿತ್ತು. ಯಾವುದೋ ಮಾಯದಲ್ಲಿ ರಾಹುಲ್ ‌ಎದ್ದು ಬಂದು ಮತ್ತೆ ತಂದೆಯ ಕೈ ಹಿಡಿದಿದ್ದ. ವಂದನಾ ಒಳಗಿನಿಂದ 2 ಸೂಟ್‌ ಕೇಸ್‌ ಹಿಡಿದು ಬಂದಳು. ಅದರಲ್ಲಿ ಅವಳ ಮತ್ತು ಮಗನ ಅಗತ್ಯದ ಬಟ್ಟೆ ಬರೆಗಳಿದ್ದವು.

“ಈ ಸೂಟ್‌ ಕೇಸ್‌ ಹೊರಗಿಡಿ. ನಾನು ಬೀಗ ಹಾಕಿ ಊಬರ್‌ ಟ್ಯಾಕ್ಸಿ ಬುಕ್‌ ಮಾಡ್ತೀನಿ,” ಎಂದಳು.

“ಓಹ್‌…. ನೀನೂ ನನ್ನ ಜೊತೆ ಮನೆಗೆ ಬರ್ತೀಯಾ ತಾನೇ?” ಖುಷಿಯಿಂದ ಅವಳ ಕೈ ಹಿಡಿದುಕೊಳ್ಳುತ್ತಾ ಅರುಣ್‌ ಕೇಳಿದ. “ನೀನು ಮನಸ್ಸು ಬದಲಾಯಿಸುವ ಮೊದಲು ನಾನೇ ಆಟೋ ತರ್ತೀನಿ ಇರು…..” ಎಂದ.

ರಾಹು್ಲ ಓಡಿ ಬಂದು ಅಮ್ಮ ಅಪ್ಪ ಇಬ್ಬರ ಕುತ್ತಿಗೆಗೆ ಒಟ್ಟಿಗೆ ಕೈ ಹಾಕಿ ತನ್ನ ಖುಷಿ ಹಂಚಿಕೊಂಡ.

“ಹೌದು….. ಈ ಮನೆಯಿಂದ ಆ ಮನೆಗೆ ಬರುವುದರಿಂದ ನಮ್ಮ ಮೂವರ ಮನಸ್ಸು ಸರಿ ಹೋಗುವುದಾದರೆ ಇದೇ ಮನೆಯಲ್ಲಿ ಇರಬೇಕು ಅಂತ ನಾನೇಕೆ ಹಠ ಹಿಡಿಯಲಿ?

“ನಮ್ಮ ಅಭಿಪ್ರಾಯ ಬದಲಾಗಿತ್ತೇ ಹೊರತು ನಮ್ಮಿಬ್ಬರ ಮನಸ್ಸು ಮುರಿದಿರಲಿಲ್ಲ. ರಾಹುಲ್ ‌ನಂತೂ ನಿಮ್ಮೆಲ್ಲರನ್ನು ಬಿಟ್ಟಿರಲಾಗದೆ ಮಂಕಾಗಿ ಬಿಡುತ್ತಿದ್ದ. ಇವತ್ತು ಸಹ ನಮ್ಮಮ್ಮನ ಬಳಿ ನಿಮ್ಮಮ್ಮನ ಬಗ್ಗೆ ಹೇಳುತ್ತಾ, ಕಥೆ ಕೇಳಿಸಿಕೊಂಡ.

“ಎಲ್ಲರ ಮನಸ್ಸು ಬೆರೆತು ಒಂದಾಗಿರುವ ಕಡೆ ನೆಮ್ಮದಿಯಾಗಿ ಬಾಳುವುದೇ ನಮ್ಮ ಮನೆ ಅನ್ಸುತ್ತೆ. 4 ಗೋಡೆಗಳ ಆಸರೆ ಪಡೆದು ನಾನು ಬೇರೆ ಇರ್ತೀನಿ ಅಂತ ಹಠ ಹಿಡಿದು ನಾನೇನು ಸಾಧಿಸಲಿ?” ಎಂದು ಅವಳು ಪತಿಯ ತೋಳಿನ ಆಸರೆ ಪಡೆಯುತ್ತಾ ಬಿಕ್ಕಳಿಸಿದಾಗ, ಅರುಣ್‌ ಅವಳನ್ನು ಎದೆಗಾನಿಸಿಕೊಂಡ. ರಾಹುಲ್ ‌ಖುಷಿಯಿಂದ ಇಬ್ಬರನ್ನೂ ಒಟ್ಟಿಗೆ ತಬ್ಬಿಕೊಂಡ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ