ತಾರೆಯರ ಗುಂಪಲ್ಲಿ ಕಳೆದುಹೋಗಲಾರೆ
`ಅಂಗ್ರೇಝಿ ಮೀಡಿಯಂ’ ಚಿತ್ರದಲ್ಲಿ ಇರ್ಫಾನ್ ಖಾನ್ ರಂಥ ದಿಗ್ಗಜರೊಂದಿಗೆ ನಟಿಸಿಯೂ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿದ ನಟಿ ರಾಧಿಕಾ ಮದನ್ ಳ ಧೈರ್ಯ ಮೆಚ್ಚತಕ್ಕದ್ದು. ಇದಾದ ಮೇಲೆ ಇವಳಿಗೆ ದೊಡ್ಡ ಪ್ರಾಜೆಕ್ಟ್ ಸಿಗಲೇ ಇಲ್ಲ ಎಂಬುದು ಬೇರೆ ವಿಷಯ. ಆದರೆ ಈಕೆ ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸಿದ್ದಳು. ಮುಂದೆ ತಾನು ಕೇವಲ ನಾಯಕಿಪ್ರಧಾನ ಚಿತ್ರಗಳಲ್ಲಷ್ಟೇ ನಟಿಸುವುದಾಗಿ ರಾಧಿಕಾ ಹೇಳುತ್ತಾಳೆ. ಕೇವಲ ನಾಯಕನನ್ನು ಓಲೈಸುತ್ತಾ, ಅವನ ಜೊತೆ ಗಿರಕಿ ಹೊಡೆದು ಹಾಡಿನಲ್ಲಿ ಕುಣಿಯುವ ಪಾತ್ರ ಬೇಡ ಅಂತಾಳೆ.
ಈ ಫಿಲ್ಮ್ ಇಂಡಸ್ಟ್ರಿಯೇ ವಿಚಿತ್ರ
ಕರಣ್ ಡಿಯೋಲ್ ಜೊತೆ `ಪಲ್ ಪಲ್ ದಿಲ್ ಕೆ ಪಾಸ್’ ಚಿತ್ರದಲ್ಲಿ ನಟಿಸಿದ್ದ ಹುಡುಗಿ ಸಿಹರ್ ನೆನಪಿದ್ದಾಳಾ? ನೆನಪಿನಲ್ಲಿ ಉಳಿಯುವುದು ಕಷ್ಟ ಬಿಡಿ, ಏಕೆಂದರೆ ಅತ್ತ ಆ ಚಿತ್ರ ಓಡಲಿಲ್ಲ ಅಥವಾ ಅದರಲ್ಲಿ ನಟಿಸಿದವರಿಗೆ ಬೇರೆ ಚಿತ್ರಗಳೂ ಸಿಗಲಿಲ್ಲ. ಪಾಪ, ಇದಕ್ಕೆ ಸಿಹರ್ ಏನು ಮಾಡಿಯಾಳು? ಈ ಚಿತ್ರದ ನಂತರ ಅವಳು ಅನೇಕ ಕಡೆ ಆಡಿಶನ್ಸ್ ನೀಡಿದಳು, ಆದರೆ ಎಲ್ಲೂ ಬೇಳೆಕಾಳು ಬೇಯಲಿಲ್ಲ. ಒಂದು ಸಲವಂತೂ ಒಂದು ಚಿತ್ರಕ್ಕೆ ಇವಳನ್ನು ಸ್ಟಾರ್ ಕಾಸ್ಟ್ ಮಾಡಿದ್ದೂ ಆಯ್ತು, ಆ ಚಿತ್ರ ಶುರುವಾಯ್ತು. ಇವಳು ತವರಿನಿಂದ ಮುಂಬೈಗೆ ಬಂದು ಇನ್ನೇನು ಚಿತ್ರದ ಸೆಟ್ ಗೆ ದೌಡಾಯಿಸಬೇಕು, ಇಳ ಜಾಗದಲ್ಲಿ ಬೇರೊಬ್ಬಳಿದ್ದಳು! ಹೀಗಾಗಿ ಸಿಹರ್ ಈ ಫಿಲ್ಮಂ ಇಂಡಸ್ಟ್ರಿ ಭಲೇ ವಿಚಿತ್ರ ಅಂತಿದ್ದಾಳೆ!
ದುರ್ಬಲ ಎನಿಸಿದ ಅಜಯ್ ನ ಡಿಜಿಟಲ್ ಡೆಬ್ಯು
ತಡವಾಗಿ ಅವಕಾಶ ಒದಗಿ ಬಂದರೂ ಏಳಿಗೆ ಕಾಣಲಿಲ್ಲ. ಅರೆ, ನಮ್ಮ ಸಿಂಘಂಗೆ ಏನಾಯ್ತು? ಡಿಜಿಟಲ್ ಡೆಬ್ಯುಗಾಗಿ ಈತನಿಗೆ `ರುದ್ರಂ’ನಂಥ ದುರ್ಬಲ ಸ್ಕ್ರಿಪ್ಟ್ ಚಿತ್ರ ಸಿಗಬೇಕೇ? ಇದನ್ನು ಸೀರೀಸ್ ಎನ್ನುವುದು ತಪ್ಪಾದೀತು, ಏಕೆಂದರೆ ಇದನ್ನು ಕಚಡಾ ಕ್ರೈಂ ಶೋ ತರಹ ಚಿತ್ರಿಸಲಾಗಿದೆ, ಪ್ರತಿ ಎಪಿಸೋಡ್ ನಲ್ಲೂ ಅಲ್ಲಿ ಹೊಸ ಖಳರೇ ಇರುತ್ತಾರೆ. ಈಶಾ ಡಿಯೋಲ್ ಳನ್ನು ಇದರಲ್ಲಿ ಬಲವಂತವಾಗಿ ತುರುಕಾಗಿದೆ, ಇವಳು ಈ ಕಥೆಯಲ್ಲಿ ಇಲ್ಲದಿದ್ದರೂ ದೊಡ್ಡ ವ್ಯತ್ಯಸವೇನೂ ಆಗುತ್ತಿರಲಿಲ್ಲ. ಈಶಾ ಇದಕ್ಕೆ ಮುಂಚೆ ಎಂದೋ ಲಿಪ್ ಫಿಲರ್ಸ್ ನ ಕೆಲಸ ಮಾಡಿರಬೇಕು, ಇಲ್ಲಿ ಇವಳ ಕ್ಲೋಸ್ ಅಪ್ ಶಾಟ್ಸ್ ಬಂದಾಗಂತೂ ಇನ್ನೂ ಕೆಟ್ಟದಾಗಿ ಕಾಣುತ್ತಾಳೆ. ಇವಳನ್ನು ಈ ಚಿತ್ರದಲ್ಲಿ ನೋಡಬಯಸಿದರೆ, ಅಗತ್ಯವಾಗಿ ಜೊತೆಗೆ ಒಂದು ತಲೆನೋವಿನ ಮಾತ್ರೆ ಇರಲಿ.
ಕಾಂಟ್ರೋವರ್ಸಿ ಅಂಡ್ ಕಪಿಲ್
ಅರೆ, ವಿವಾದಗಳಿದ್ದರೇನೇ ಜನರಿಗೆ ಟಿವಿಯ ಕಪಿಲ್ ಶರ್ಮ ನೆನಪಾಗುವುದು, ಇಲ್ಲದಿದ್ದರೆ ಈತನ ಶೋ ಅಂತೂ ಈಗಾಗಲೇ ಡಬ್ಬಾ ಎನಿಸಿಬಿಟ್ಟಿದೆ. ಈತ ಮೊದಲು ಅಕ್ಷಯ್ ಕುಮಾರ್ ನಂತರ `ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ರಂಜನ್ ಜೊತೆ ಗುದ್ದಾಡಿದ್ದಾಯಿತು. ಸುದ್ದಿ ಪ್ರಮೋಟ್ ಮಾಡಲು ಒಪ್ಪಲಿಲ್ಲ. ಅಕ್ಷಯ್ ಸಹ ಮುನಿದ ಪತ್ನಿಯಂತೆ ಮುಖ ತಿರುಗಿಸಿದಾಗ, ಏನೋ ಮಾಡಿ ಈತ ಓಲೈಸಿದ. ಆದರೆ ವಿವೇಕ್ ಕಪಿಲ್ ರ ಜಗಳ ಅತ್ತೆಸೊಸೆ, ಜಗಳದ ಹಾಗಾಯ್ತು. ಕಪಿಲ್ ತನ್ನ ಶೋನಲ್ಲಿ ಮುದ್ದು ಸೊಸೆ. ಆದರೆ, ಮನೆಯ ಮಾಲೀಕಳ ಹಾಗೆಯೂ ಮೆರೆಯುತ್ತಿದ್ದಾನೆ. ವಿವೇಕ್ ಇದರಲ್ಲಿ ಬಲವಂತವಾಗಿ ಅತ್ತೆಯಂತೆ ನುಗ್ಗಲು ಯತ್ನಿಸಿದರೆ ಬಿಟ್ಟಾನಾ? ಈ ಕಾರಣದಿಂದಲೇ ಇಬ್ಬರ ನಡುವೆ ರಷ್ಯಾ ಯೂಕ್ರೇನ್ ವಾರ್ ತರಹ ಬಾಂಬುಗಳಾಗಿ ಸ್ಛೋಟಿಸುತ್ತಲೇ ಇದೆ.
ಇದುವೇ ಬೆಸ್ಟ್ ಫಿಲ್ಮಿ ಎರಾ
ಬೋಲ್ಡ್ ಬ್ಯೂಟಿಫುಲ್ ವಾಣಿ ಕಪೂರ್ ಳ `ಚಂಡೀಗಡ್ ಕರೇ ಆಶಿಕಿ’ಯ ಹ್ಯಾಂಗ್ ಓವರ್ ಅವಳ ಅಭಿಮಾನಿಗಳ ತಲೆಯಿಂದ ಇನ್ನೂ ಇಳಿದಿಲ್ಲ. ಇದರಲ್ಲಿ ವಾಣಿಯ ಚಕ್ಕಾ ಪಾತ್ರ ಈ ಚಿತ್ರದ ಹೈಲೈಟ್ ಎನಿಸಿತು. ವಾಣಿಯಂತೂ ಖುಷಿಯಿಂದ, ತಾನು ಇಲ್ಲಿಯರೆಗಿನ ಬೆಸ್ಟ್ ಫಿಲ್ಮಿ ಯುಗದಲ್ಲಿ ನಟಿಸುತ್ತಿರುವುದಾಗಿ ಹೇಳುತ್ತಾಳೆ. ಏಕೆಂದರೆ ಹೊಸ ಹೊಸ ಬಗೆಯ ಸಿನಿಮಾ ಬರುತ್ತಿವೆ. ಹೊಸ ಚಿತ್ರದಲ್ಲಿ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ವಾಣಿ, ನಿನ್ನ ಒಂದು ಚಿತ್ರವೇನೋ ಗೆದ್ದಿತಮ್ಮ, ಅಂದ ಮಾತ್ರಕ್ಕೆ ಇದು ಬೆಸ್ಟ್ ಫಿಲ್ಮೀ ಎರಾ ಅಲ್ಲ ಅಂತಿದ್ದಾರೆ, ಹಿತೈಷಿಗಳು. ಉತ್ತಮ ಕಥೆಗಾರರು ನಾಸಕ್ಕೆ ಹೋಗಿಬಿಟ್ಟಿದ್ದಾರೆ ಎಂಬಂತೆ ನಿರ್ಮಾಪಕರು ಕೇವಲ ದಕ್ಷಿಣದ ಯಶಸ್ವೀ ಚಿತ್ರಗಳ ರೀಮೇಕಿಗೆ ಮೊರೆಹೋಗುತ್ತಿದ್ದಾರೆ.
ಕಿಯಾರಾಳಿಗೆ ದೊರೆತ ಬಯೋಪಿಕ್ ಆಸರೆ
ಕಬೀರ್ ಸಿಂಗ್ ರ ನಿರ್ದೇಶನದಲ್ಲಿ ಅವರ ಚಿತ್ರದ ತಾರೆಯರ ದಂಡು ಇಷ್ಟರಲ್ಲೇ ಈಜುಕೊಳದಲ್ಲಿ ಕಲೆಯ ಕೋನದಿಂದ ಈಜುತ್ತಾ ಕಂಡುಬರುತ್ತಾರೆ. ಸುದ್ದಿಗಾರರ ಪ್ರಕಾರ, ರಾಷ್ಟ್ರೀಯ ಖ್ಯಾತಿವೆತ್ತ ಈಜುಪಟು ಭಕ್ತಿ ಶರ್ಮಾಳ ಕುರಿತಾಗಿ ಬಯೋಪಿಕ್ ಚಿತ್ರ ಕಿಯಾರಾಳ ಪಾಲಿಗೆ ದಕ್ಕಿದೆಯಂತೆ. ಇದು ನಿಜವೇ ಆದಲ್ಲಿ ಕಿಯಾರಾ ಈ ಪಾತ್ರ ಒಪ್ಪಿದ್ದು ಒಳ್ಳೆಯದೇ ಆಯಿತು. ಇತ್ತೀಚೆಗೆ ಬಾಲಿವುಡ್ ಮಂದಿ ಬಳಿ ಉತ್ತಮ ಕಥೆಗಳ ಅಭಾವವಿದೆ. ಬಯೋಪಿಕ್ ನಲ್ಲಿ ಕನಿಷ್ಠ ಯಾರದಾದರೂ ಜೀವನ ಸಂಘರ್ಷಕ್ಕೆ ಒಂದಿಷ್ಟು ಉಪ್ಪು ಖಾರ ಸೇರಿಸಿ ಮಾರುವುದು ಇತ್ತೀಚೆಗೆ ಸುಲಭ ಅನಿಸುತ್ತಿದೆ. ಅಂದಹಾಗೆ ಈಗ ತಾನೇ ಇವಳು ಇಂಥದ್ದೇ `ಶೇರ್ ಶಾಹ್’ ಚಿತ್ರ ಮುಗಿಸಿದ್ದಳು.
ಹಾಲಿವುಡ್ ಗೆ ನಿಮಗೆ ಸುಸ್ವಾಗತ!
`ಹಾಲಿವುಡ್ ಗೆ ನಿಮಗೆ ಸ್ವಾಗತ’ ಎಂದು ಕೋರುತ್ತಿರುವವರು ನಾವಲ್ಲ, ಬದಲಿಗೆ ಹಾಲಿವುಡ್ ನ ಖ್ಯಾತ ನಟಿ ಗಹ್ಲಾ ಗ್ಲಾಡೋಟ್ ನಮ್ಮ ಆಲಿಯಾಳಿಗಾಗಿ ಹೇಳುತ್ತಿದ್ದಾಳೆ. ನಮ್ಮ ಈ ಗಂಗೂಬಾಯಿ ಹಾಲಿವುಡ್ ನ ಪ್ರಾಜೆಕ್ಟ್ `ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ತನ್ನ ಪ್ರತಿಭೆ ಮೆರೆಯಲಿದ್ದಾಳೆ. ಇದೊಂದು ಮೂವಿ ಆಗಿದ್ದು, ಆಲಿಯಾ ಇದರಲ್ಲಿ ಮಾಲಾಶ್ರೀ ತರಹ ಡಿಶುಂ ಡಿಶುಂ ಮಾಡಬಹುದು. ಈ ಸುದ್ದಿ ತಿಳಿದು ಕಂಗನಾ ಮೇಡಂಗೆ ಎಷ್ಟು ಉರಿ ಉರಿ ಆಯ್ತೋ ಏನೋ? ಕಂಗನಾ ಪ್ರಕಾರ ಆಲಿಯಾಗೆ ನಟನೆಯ ಅಆಇಈ ಸಹ ಗೊತ್ತಿಲ್ಲವಂತೆ. ಹಾಗಾದರೆ ಆಲಿಯಾಳ ಈ ಚಿತ್ರ ಕಂಗನಾಳ ಸವಾಲಿಗೆ ಜವಾಬೇ?
ಹಿಜಾಬ್ ನ ಹೊಸ ಚಾಲೆಂಜ್
ಧರ್ಮದ ಅಸಹಾಯಕತೆಯ ನೆಪವೊಡ್ಡಿ, ಉತ್ತುಂಗಕ್ಕೆ ಬರುತ್ತಿರುವ ತನ್ನ ಕೆರಿಯರ್ ನ್ನು ಗಮನಿಸದೆ, ಜಾಯ್ರಾ ಸೀಂ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಸಮರ್ಥನೆಗೆ ಇಳಿದಿದ್ದಾಳೆ. ಧರ್ಮ ಯಾವುದೇ ಇರಲಿ, ಯುವಜನತೆ ಹಿಜಾಬ್, ಸೆರಗಿನಂಥ ಬಂಧನಗಳನ್ನು ಒಪ್ಪಿಕೊಳ್ಳುತ್ತಾ ಮುನ್ನಡೆದರೆ ದೇಶದ ಭವಿಷ್ಯದ ಚಿಂತೆ ಕಾಡುತ್ತದೆ. ಧರ್ಮ ಮತ್ತು ಜಾತಿ ನಮ್ಮ ರಕ್ತದಲ್ಲಿ ಬೆರೆತುಹೋಗಿದೆ. ಹೀಗಾಗಿ ನಮ್ಮ ವ್ಯಕ್ತಿತ್ವ, ವ್ಯವಹಾರ, ಆಹಾರ ವಿಹಾರ ಉಡುಗೆ ತೊಡುಗೆಗಳಲ್ಲಿ ಇದರ ವರ್ಚಸ್ಸು ಕಾಣಲು ಯತ್ನಿಸುತ್ತೇವೆ. ಯುವಜನತೆ ಇಂಥ ಧರ್ಮಾಂಧ ಸಮಾಜಕ್ಕೆ ಸೊಪ್ಪು ಹಾಕಬಾರದು. ನಾವು ಸದಾ ಬಾವಿ ಕಪ್ಪೆಗಳಾಗಿರಬೇಕೆಂಬುದೇ ಅದರ ಬಯಕೆ. ಅದರಿಂದ ಧರ್ಮದ ದಂಧೆ ನಡೆಯುತ್ತದೆ. ದೇಶ ಮುಂದುವರಿಯಬೇಕಾದರೆ ಈ ಬಾವಿಯಿಂದ ಹೊರಬರಲೇಬೇಕು.
ಗಟ್ ಫೀಲಿಂಗ್ ಗಾಗಿ ಕೆಲಸ ಮಾಡುತ್ತೇನೆ
ಮುನ್ನಾಬಾಯಿ ಸರ್ಕಿಟ್ ಇಷ್ಟವಿಲ್ಲದಿದ್ದರೂ ಟೈಪ್ ಕಾಸ್ಟ್ ಆಗಿಬಿಟ್ಟಿದ್ದಾನೆ. ಇಲ್ಲಿಯವರೆಗೆ ಆತನಿಗೆ ಕೇವಲ ಕಾಮಿಕ್ ರೋಲ್ಸ್ ಅಷ್ಟೇ ಸಿಗುತ್ತಿವೆ. ಸರ್ಕಿಟ್ ಅಂದ್ರೆ ಅರ್ಶದ್ ಗೆ ಈ ವಿಷಯದ ನೋವಿದೆ. ಈ ಕುರಿತಾಗಿ ತಾನೀಗ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತನ್ನ ಗಟ್ ಫೀಲಿಂಗ್ ಗುರುತಿಸಿ ಚಿತ್ರ ಸೈನ್ ಮಾಡ್ತೀನಿ ಅಂತಾನೆ. ತನ್ನ ಗಟ್ ಫೀಲಿಂಗ್ ನಿಂದಾಗಿ ಚಿತ್ರ ಗೆಲ್ಲುತ್ತದೋ ಇಲ್ಲವೋ ಗೊತ್ತಾಗುತ್ತಂತೆ. ಅಂದಹಾಗೆ ಅರ್ಶದ್ ಇತ್ತೀಚೆಗಷ್ಟೆ ಬಿಗ್ ಬಿ ಜೊತೆ ಗುದ್ದಾಡಿದ. ಬಚ್ಚನ್ ಇವನನ್ನು ಹೊಸ ಚಿತ್ರದಲ್ಲಿ ನಂಬಿಸಿ ಲಾಂಚ್ ಮಾಡಿದ್ದು ನಿಜವಾದರೂ, ಅನಾಥನಂತೆ ಕೈಬಿಟ್ಟಿದ್ದರು. ಬಿಗ್ ಬಿ ಕಂಪನಿಗಳೇ ಅನರನ್ನು ದಿವಾಳಿ ಆಗಿಸಿ, ಕೆಲಸ ಮಾಡಲು ಓಡಿಸಿರುವಾಗ, ನಿನಗೆ ಅವರೇನು ಸಹಾಯ ಮಾಡಬಹುದು? ಅಂತಾರೆ ಹಿತೈಷಿಗಳು.
ಚರ್ಚೆಯಲ್ಲಿ ಇದ್ದಾಳೆ ಶನಾಯಾ
ಯಾರೇ ಸ್ಟಾರ್ ಕಿಡ್ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಬೇಕಿದ್ದರೂ, ಇವರ ಪಿಆರ್ ಗಳು ಸುದ್ದಿ ಜಾಲದ ರೆಡ್ ಕಾರ್ಪೆಟ್ ಹಾಸಲು ಆರಂಭಿಸುತ್ತಾರೆ. ಶನಾಯಾಳನ್ನು ವೆಲ್ವೆಟ್ ನಲ್ಲಿ ಇರಿಸಬೇಕೆಂಬ ಹುನ್ನಾರ ಇಂಥದೇ ಸರ್ಕಸ್ ನದು. ಮುಂದಿನ ಕೆಲಸ ಗಮನಿಸಿಕೊಳ್ಳಲು ಕರಣ್ ಜೋಹರ್ ಇದ್ದೇ ಇದ್ದಾನೆ. ಕರಣ್ ಅಂತೂ ಮನೆಯ ಹಿರಿಯಜ್ಜಿ ಇದ್ದಂತೆ, ಮಗು ಹುಟ್ಟಿದ ನಂತರ ತಾಯಿ ಮಡಿಲಿನ ನಂತರ ಇವನ ಬಳಿ ಬರುತ್ತದೆ. ಹಾಗಾಗದಿದ್ದರೆ ಆಯುಸ್ಸು ಪೂರ್ತಿ ಮಾತು ಕೇಳಬೇಕಾಗುತ್ತದೆ. ಹೀಗಾಗಿ ಬಾಲಿವುಡ್ ನ ಈ ಅಜ್ಜಿಯಂಥ ಕರಣ್, ತನ್ನ ಮುಂದಿನ `ಬೇಧ ಡಕ್’ ಚಿತ್ರದಲ್ಲಿ ಶನಾಯಾ ಜೊತೆ ಮತ್ತಿಬ್ಬರು ಸ್ಟಾರ್ ಕಿಡ್ಸ್ ರನ್ನೂ ತೆಗೆದುಕೊಳ್ಳುತ್ತಿದ್ದಾನೆ. ಈತ ದತ್ತು ತೆಗೆದುಕೊಳ್ಳುವುದಷ್ಟೇ, ಮುಂದಿನ ಅವರ ಬೆಳವಣಿಗೆ ಈತನ ಜವಾಬ್ದಾರಿ ಅಲ್ಲ.
ಇವಳಿಗೆ ಫೇಮಸ್ ಆಗೋದು ಬೇಕಿಲ್ಲ
ಕೀರ್ತಿ ಕುಲ್ಹಾರಿ ಎಂಬ ಈ ಮಹಾನ್ ನಟಿಯನ್ನು `ದಡ ಕಂಡಳು’ ಎಂದೇ ಹೇಳಬಹುದು. ಏಕೆಂದರೆ ಮಹಾನ್ ತತ್ವಜ್ಞಾನಿಯಂತೆ ಈಕೆ ಉಪದೇಶ ನೀಡುತ್ತಿರುತ್ತಾಳೆ. ತನಗೆ ಒಂದು ಚೂರೂ ಕೀರ್ತಿಯ ಆಸೆ ಇಲ್ಲ ಅಂತಾಳೆ ಕೀರ್ತಿ! ತಾನು ಈ ಪ್ರಪಂಚದಲ್ಲಿ ಹುಟ್ಟಿದ್ದೇ ಆ್ಯಕ್ಟಿಂಗ್ ಮಾಡೋದಿಕ್ಕಂತೇ, ಹೀಗಾಗಿ ಬೇರೆಲ್ಲ ಗೌಣ ಅಂತಾಳೆ. ಸರೀಯಮ್ಮ ಕೀರ್ತಿ, ಆದರೆ ಈ ಪ್ರಪಂಚ ತುಸು ವಿಚಿತ್ರವಾದುದು, ಇಲ್ಲಿ ಯಾರಿಗೆ ಫೇಮ್ ಇಲ್ಲವೋ ಅವರಿಗೆ ನೇಮ್ ಇಲ್ಲ, ಯಾರಿಗೆ ನೇಮ್ ಇಲ್ಲವೋ ಅವರಿಗೆ ಕಾಮ್ ಸಹ ಇಲ್ಲ, ಅವರು ಕಾಮ್ ಆಗಿರಬೇಕಷ್ಟೆ, ಅಂತಾರೆ ಬಾಲಿವುಡ್ ಮಂದಿ!