ಬರಗೂರು ರಾಮಚಂದ್ರಪ್ಪ ಚಿತ್ರಕ್ಕೆ ಸಚಿವ ಎಚ್ ಕೆ ಪಾಟೀಲ್, ಗುರುಕಿರಣ್ ಶುಭಹಾರೈಕೆ
ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಕಾದಂಬರಿ ಆಧಾರಿತ "ಸ್ವಪ್ನ ಮಂಟಪ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ ಪಾಟೀಲ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರು ವಿಜಯ್ ರಾಘವೇಂದ್ರ ಮತ್ತು ನಟಿ ರಂಜನಿ ರಾಘವನ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಶಮಿತಾ ಮಲ್ನಾಡ್ "ಸ್ವಪ್ನ ಮಂಟಪ" ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ನಾನು ಇಷ್ಟು ದಿನ ಚಿತ್ರ ಬಿಡುಗಡೆಯಾಗಿ ಜನಪ್ರಿಯವಾದ ಚಿತ್ರಗೀತೆಗಳನ್ನು ಮಾತ್ರ ಕೇಳುತ್ತಿದ್ದೆ. ಇದೇ ಮೊದಲು ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳನ್ನು ಕೇಳಿದ್ದೇನೆ ಹಾಗೂ ನೋಡಿದ್ದೇನೆ. "ಸ್ವಪ್ನ ಮಂಟಪ"ದ ಹಾಡುಗಳು ಹಾಗೂ ಕಥೆ ಚೆನ್ನಾಗಿದೆ. ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವವರು ಮತ್ತು ನೋಡುವವರು ಸಂಖ್ಯೆ ಕಡಿಮೆ ಇದೆ. ಇಂತಹ ಸಮಯದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಈ ಸಿನಿಮಾ ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಸಚಿವ ಹೆಚ್ ಕೆ ಪಾಟೀಲ್ ಶುಭ ಕೋರಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಸಹ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, 25 ವರ್ಷಗಳ ಹಿಂದೆ ವಾರಪತ್ರಿಕೆಯಲ್ಲಿ ಪ್ರಕಟವಾದ ಕಾದಂಬರಿ "ಸ್ವಪ್ನ ಮಂಟಪ" ಇದೀಗ ಅದನ್ನು ಚಿತ್ರ ರೂಪದಲ್ಲಿ ಕಟ್ಟಿಕೊಡಲಾಗಿದೆ. ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಪರಂಪರೆ ಉಳಿಸಬೇಕು ಎನ್ನುವ ಆಶಯವನ್ನು ಅಭಿವ್ಯಕ್ತಿ ಪಡಿಸುವ ಚಿತ್ರ ಇದು. ನಾಯಕ ಚರಿತ್ರೆಯ ಬಗೆಗೆ ಆಸಕ್ತಿ ಇರುವವನು, ನಾಯಕಿ ಸಮಾಜ ವಿಜ್ಞಾನದ ಕುರಿತು ಕುತೂಹಲ ಉಳ್ಳವಳು. ಚಾರಿತ್ರಿಕ ಮತ್ತು ಸಾಮಾಜಿಕ ಪ್ರಜ್ಞೆ ಎರಡೂ ಸೇರಿ ಸಮಾಜಮುಖಿ , ಇತಿಹಾಸ ಪ್ರಜ್ಞೆ ಇರಬೇಕು ಎನ್ನುವ ಜೊತೆ ಜೊತೆಗೆ ಸ್ಮಾರಕ ರಕ್ಷಣೆ ಮಾಡಬೇಕು ಎನ್ನುವ ಆದರ್ಶ ಮತ್ತು ಆಶಯ ಹೊಂದಿರುವ ಚಿತ್ರವಿದು. "ಸ್ವಪ್ನ ಮಂಟಪ"ದಲ್ಲಿ ಪ್ರವೇಶ ಮಾಡಿದರೆ ಸಾಕು. ಕನಸುಗಳು ಅನಾವರಣವಾಗುತ್ತದೆ. ಇಂತಹ ವಾತಾವರಣವಿರುವ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾದಾಗ ನಾಯಕ, ನಾಯಕಿ ಜನರಲ್ಲಿ ಜಾಗೃತಿ ಮೂಡಿಸಿ ಸ್ಮಾರಕ ರಕ್ಷಣೆ ಮಾಡುವ ತಿರುಳನ್ನು ಚಿತ್ರದ ಕಥಾವಸ್ತು ಹೊಂದಿದೆ. "ಸ್ವಪ್ನ ಮಂಟಪ" ನನ್ನ ನಿರ್ದೇಶನದ 24ನೇ ಚಿತ್ರ. ಮೈಸೂರಿನ ಎ.ಎಂ.ಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇಂದು ಹಾಡುಗಳನ್ನು ಸನ್ಮಾನ್ಯ ಸಚಿವರು ಹಾಗೂ ಗುರುಕಿರಣ್ ಅವರು ಬಿಡುಗಡೆ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಎಂದರು.
ನಾಯಕಿ ರಂಜನಿ ರಾಘವನ್ ಮಾತನಾಡಿ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡಿದ್ದೇನೆ. ಒಂದು ರಾಣಿಯ ಪಾತ್ರ ಮತ್ತೊಂದು ಶಿಕ್ಷಕಿ ಪಾತ್ರ. ಚಿತ್ರದಲ್ಲಿ ನಟಿಸಿದ್ದು, ಅದರಲ್ಲಿಯೂ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದು ಕಲಿಕೆಗೆ ಸಿಕ್ಕ ಅವಕಾಶ ಎಂದು ಹೇಳಿದರು.