ಖ್ಯಾತ ನಿರೂಪಕಿ ಕೋಪಗೊಂಡಿದ್ದೇಕೆ?
ಕರ್ನಾಟಕ ಮೂಲದ ನಟಿ, ನಿರೂಪಕಿ ಸೌಮ್ಯಾ ರಾವ್ ಅವರು ತೆಲುಗು ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಅವರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಉದ್ಯಮದಲ್ಲಿನ ಕೆಲವು ನಕಾರಾತ್ಮಕ ಅಂಶಗಳನ್ನು ಅವರು ಟೀಕಿಸಿದ್ದಾರೆ.
ನಟಿಯಾಗಿ, ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಸೌಮ್ಯಾ ರಾವ್, ಕನ್ನಡದವರಾದರೂ ತೆಲುಗು ಚಿತ್ರರಂಗದಲ್ಲಿ ಆ್ಯಂಕರಿಂಗ್ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾ ಕೆಟ್ಟ ಕಮೆಂಟ್ಗಳು ಬಂದಿದ್ದವು. ಈ ಕುರಿತು ತೆಲುಗಿನ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
“ನನ್ನನ್ನು ಕನ್ನಡ ಚಿತ್ರರಂಗ ಬೆಳೆಸಿಲ್ಲ. ಹೀಗಾಗಿ ನನಗೆ ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ಇಲ್ಲ. ಕೆಜಿಎಫ್ ಮತ್ತು ಕಾಂತಾರ ಸಿನಿಮಾ ಆದ ನಂತರ ಅಲ್ಲಿ ಯಾವುದೇ ಒಳ್ಳೆಯ ಸಿನಿಮಾಗಳು ಬಂದಿಲ್ಲ. ಅಲ್ಲಿ ಪ್ರತಿಭೆಗಳನ್ನು ಬೆಳೆಸೋದಿಲ್ಲ,” ಎಂದು ಸೌಮ್ಯಾ ರಾವ್ ಹೇಳಿದ್ದರು.
ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದಿರುವ ಬಗ್ಗೆ ಸೌಮ್ಯಾ ರಾವ್ ಅವರು ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿ, ಕನ್ನಡದಲ್ಲಿ ಎಷ್ಟು ಸಿನಿಮಾಗಳನ್ನು ಮಾಡಿದ್ದಾರೆ? ಕನ್ನಡದಲ್ಲಿ ಇವರು ಏನು ಮಾಡಿದ್ದಾರೆ? ತೆಲುಗು ನಾಡಿನಲ್ಲಿ ಕನ್ನಡದ ಬಗ್ಗೆ ಹೀಗೆ ಮಾತಾಡುತ್ತಿದ್ದಾರೆ ಎಂದು ಕೋಪವನ್ನು ಹೊರಹಾಕಿದ್ದರು. ಮತ್ತೆ ಕೆಲವರು ಸತ್ಯ ಹೇಳಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದರು. ಈ ಬಗ್ಗೆ ಸೌಮ್ಯಾ ರಾವ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
“ನಾನು ಕನ್ನಡದ ಬಗ್ಗೆ ಮಾತಾಡಲಿಲ್ಲ. ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿದ್ದೆ. ಈ ಹಿಂದಿನ ಕನ್ನಡ ಚಿತ್ರರಂಗದ ಬಗ್ಗೆಯಲ್ಲ. ಪ್ರಸ್ತುತ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದೆ. ನನ್ನ ಬೇಸರವನ್ನು ಹೊರಹಾಕಿದ್ದೆ ಅಷ್ಟೇ… ನನಗೆ ತೆಲುಗಿನಲ್ಲಿ ಎಲ್ಲ ಪದಗಳು ಗೊತ್ತಿಲ್ಲ. ಕನ್ನಡ ಚಿತ್ರರಂಗ ಚಿಕ್ಕದು ಎಂದಿಲ್ಲ. ಸಂಕುಚಿತ ಮನಸ್ಸು ಇದೆ ಎಂಬರ್ಥದಲ್ಲಿ ಹೇಳಿದ್ದೆ.” ಎಂದಿದ್ದಾರೆ.
“ನನಗೆ ಕನ್ನಡದಲ್ಲಿ ನಟಿಸಲು ಇಷ್ಟವಿದ್ದರೂ ಅವಕಾಶ ಸಿಗಲಿಲ್ಲ. ಇಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಆಗಿದ್ದಕ್ಕೆ ನಾನು ಮಾತನಾಡಿದೆ. ತೆಲುಗಿನಲ್ಲಿ ಅನುಭವ ಆಗಿದ್ದರೆ ಅದನ್ನು ಮಾತಾಡ್ತಿದ್ದೆ. ನಾನು ಬಡತನದಲ್ಲಿ ಬೆಳೆದವಳು. ಕನ್ನಡದಲ್ಲಿ ಇಂದು ಹೀರೋಯಿನ್‌ಗಳು ಕಡಿಮೆ ಆಗಿದ್ದಾರೆ, ಇಲ್ಲಿಯವರಿಗೆ ಅವಕಾಶ ಸಿಗ್ತಿಲ್ಲ. ಹೀಗಾಗಿ ಒಳ್ಳೆಯ ಕಲಾವಿದರನ್ನು ಕಳೆದುಕೊಳ್ತಿದ್ದಾರೆ.”
“ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ದೀರಾ ಎಂದೆಲ್ಲ ಜನರು ಕೇಳುತ್ತಾರೆ. ನಾನು ರಾಜ್ಕುಮಾರ್ ಸಿನಿಮಾ ನೋಡಿ ಬೆಳೆದವಳು. ಬೇಡರ ಕಣ್ಣಪ್ಪ ಸಿನಿಮಾದಿಂದ ಹಿಡಿದು ಶಬ್ದವೇದಿ ಸಿನಿಮಾವರೆಗೆ ಎಲ್ಲವನ್ನೂ ನೋಡಿದ್ದೇನೆ.” ತೆಲುಗಿನಲ್ಲೇ ಬಿದ್ದು ಸಾಯಿ, ಇಲ್ಲಿಗೆ ಬರಬೇಡ ಎಂದು ಅನೇಕರು ಕಮೆಂಟ್ ಹಾಕಿದ್ದರು. ನಾನು ಇಲ್ಲಿ ಮೈಮಾಟ ತೋರಿಸೋಕೆ ಬಂದಿಲ್ಲ. ಬಡತನದ ಬೇಗೆಯಿಂದ ಹೊರ ಬರೋಕೆ ಬಂದಿದ್ದು. 100ರಲ್ಲಿ 90 ಜನರು ಒಳ್ಳೆಯ ಮಾತನ್ನು ಆಡಿದ್ದಾರೆ. ಉಳಿದ ಶೇ.10 ಜನರ ಮಾತನ್ನು ಕೇಳೋಕೆ ಆಗಲ್ಲ’ ಎಂದಿದ್ದಾರೆ ಅವರು.