ಖ್ಯಾತ ನಿರೂಪಕಿ ಕೋಪಗೊಂಡಿದ್ದೇಕೆ?
ಕರ್ನಾಟಕ ಮೂಲದ ನಟಿ, ನಿರೂಪಕಿ ಸೌಮ್ಯಾ ರಾವ್ ಅವರು ತೆಲುಗು ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಅವರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡ ಉದ್ಯಮದಲ್ಲಿನ ಕೆಲವು ನಕಾರಾತ್ಮಕ ಅಂಶಗಳನ್ನು ಅವರು ಟೀಕಿಸಿದ್ದಾರೆ.
ನಟಿಯಾಗಿ, ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಸೌಮ್ಯಾ ರಾವ್, ಕನ್ನಡದವರಾದರೂ ತೆಲುಗು ಚಿತ್ರರಂಗದಲ್ಲಿ ಆ್ಯಂಕರಿಂಗ್ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾ ಕೆಟ್ಟ ಕಮೆಂಟ್ಗಳು ಬಂದಿದ್ದವು. ಈ ಕುರಿತು ತೆಲುಗಿನ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
“ನನ್ನನ್ನು ಕನ್ನಡ ಚಿತ್ರರಂಗ ಬೆಳೆಸಿಲ್ಲ. ಹೀಗಾಗಿ ನನಗೆ ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ಇಲ್ಲ. ಕೆಜಿಎಫ್ ಮತ್ತು ಕಾಂತಾರ ಸಿನಿಮಾ ಆದ ನಂತರ ಅಲ್ಲಿ ಯಾವುದೇ ಒಳ್ಳೆಯ ಸಿನಿಮಾಗಳು ಬಂದಿಲ್ಲ. ಅಲ್ಲಿ ಪ್ರತಿಭೆಗಳನ್ನು ಬೆಳೆಸೋದಿಲ್ಲ,” ಎಂದು ಸೌಮ್ಯಾ ರಾವ್ ಹೇಳಿದ್ದರು.
ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದಿರುವ ಬಗ್ಗೆ ಸೌಮ್ಯಾ ರಾವ್ ಅವರು ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿ, ಕನ್ನಡದಲ್ಲಿ ಎಷ್ಟು ಸಿನಿಮಾಗಳನ್ನು ಮಾಡಿದ್ದಾರೆ? ಕನ್ನಡದಲ್ಲಿ ಇವರು ಏನು ಮಾಡಿದ್ದಾರೆ? ತೆಲುಗು ನಾಡಿನಲ್ಲಿ ಕನ್ನಡದ ಬಗ್ಗೆ ಹೀಗೆ ಮಾತಾಡುತ್ತಿದ್ದಾರೆ ಎಂದು ಕೋಪವನ್ನು ಹೊರಹಾಕಿದ್ದರು. ಮತ್ತೆ ಕೆಲವರು ಸತ್ಯ ಹೇಳಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದರು. ಈ ಬಗ್ಗೆ ಸೌಮ್ಯಾ ರಾವ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
“ನಾನು ಕನ್ನಡದ ಬಗ್ಗೆ ಮಾತಾಡಲಿಲ್ಲ. ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿದ್ದೆ. ಈ ಹಿಂದಿನ ಕನ್ನಡ ಚಿತ್ರರಂಗದ ಬಗ್ಗೆಯಲ್ಲ. ಪ್ರಸ್ತುತ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದೆ. ನನ್ನ ಬೇಸರವನ್ನು ಹೊರಹಾಕಿದ್ದೆ ಅಷ್ಟೇ… ನನಗೆ ತೆಲುಗಿನಲ್ಲಿ ಎಲ್ಲ ಪದಗಳು ಗೊತ್ತಿಲ್ಲ. ಕನ್ನಡ ಚಿತ್ರರಂಗ ಚಿಕ್ಕದು ಎಂದಿಲ್ಲ. ಸಂಕುಚಿತ ಮನಸ್ಸು ಇದೆ ಎಂಬರ್ಥದಲ್ಲಿ ಹೇಳಿದ್ದೆ.” ಎಂದಿದ್ದಾರೆ.
“ನನಗೆ ಕನ್ನಡದಲ್ಲಿ ನಟಿಸಲು ಇಷ್ಟವಿದ್ದರೂ ಅವಕಾಶ ಸಿಗಲಿಲ್ಲ. ಇಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಆಗಿದ್ದಕ್ಕೆ ನಾನು ಮಾತನಾಡಿದೆ. ತೆಲುಗಿನಲ್ಲಿ ಅನುಭವ ಆಗಿದ್ದರೆ ಅದನ್ನು ಮಾತಾಡ್ತಿದ್ದೆ. ನಾನು ಬಡತನದಲ್ಲಿ ಬೆಳೆದವಳು. ಕನ್ನಡದಲ್ಲಿ ಇಂದು ಹೀರೋಯಿನ್‌ಗಳು ಕಡಿಮೆ ಆಗಿದ್ದಾರೆ, ಇಲ್ಲಿಯವರಿಗೆ ಅವಕಾಶ ಸಿಗ್ತಿಲ್ಲ. ಹೀಗಾಗಿ ಒಳ್ಳೆಯ ಕಲಾವಿದರನ್ನು ಕಳೆದುಕೊಳ್ತಿದ್ದಾರೆ.”
“ಅಣ್ಣಾವ್ರ ಸಿನಿಮಾಗಳನ್ನು ನೋಡಿದ್ದೀರಾ ಎಂದೆಲ್ಲ ಜನರು ಕೇಳುತ್ತಾರೆ. ನಾನು ರಾಜ್‌ಕುಮಾರ್ ಸಿನಿಮಾ ನೋಡಿ ಬೆಳೆದವಳು. ಬೇಡರ ಕಣ್ಣಪ್ಪ ಸಿನಿಮಾದಿಂದ ಹಿಡಿದು ಶಬ್ದವೇದಿ ಸಿನಿಮಾವರೆಗೆ ಎಲ್ಲವನ್ನೂ ನೋಡಿದ್ದೇನೆ.” ತೆಲುಗಿನಲ್ಲೇ ಬಿದ್ದು ಸಾಯಿ, ಇಲ್ಲಿಗೆ ಬರಬೇಡ ಎಂದು ಅನೇಕರು ಕಮೆಂಟ್ ಹಾಕಿದ್ದರು. ನಾನು ಇಲ್ಲಿ ಮೈಮಾಟ ತೋರಿಸೋಕೆ ಬಂದಿಲ್ಲ. ಬಡತನದ ಬೇಗೆಯಿಂದ ಹೊರ ಬರೋಕೆ ಬಂದಿದ್ದು. 100ರಲ್ಲಿ 90 ಜನರು ಒಳ್ಳೆಯ ಮಾತನ್ನು ಆಡಿದ್ದಾರೆ. ಉಳಿದ ಶೇ.10 ಜನರ ಮಾತನ್ನು ಕೇಳೋಕೆ ಆಗಲ್ಲ’ ಎಂದಿದ್ದಾರೆ ಅವರು.
ನನಗೆ ಪುನೀತ್ ರಾಜ್‌ಕುಮಾರ್, ಉಪೇಂದ್ರ, ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಅಂದ್ರೆ ತುಂಬ ಇಷ್ಟ. ನಾನು ಕನ್ನಡದ ಸಾಕಷ್ಟು ಸುದ್ದಿಗೋಷ್ಠಿಗಳನ್ನು ನಿರೂಪಣೆ ಮಾಡಿದ್ದೇನೆ. ದುಡ್ಡು ಇಷ್ಟೇ ಕೊಡಿ ಅಂತ ನಾನು ಕೇಳಿಲ್ಲ, ಇಷ್ಟೆಲ್ಲ ಚೆನ್ನಾಗಿ ಕನ್ನಡ ಮಾತಾಡ್ತಿದ್ದರೂ ಕೂಡ ಅವಕಾಶ ಕೊಡಲಿಲ್ಲ,’ ಎಂದು ಸೌಮ್ಯಾ ರಾವ್ ಹೇಳಿದ್ದಾರೆ.
ನಾನು ಅಂತಹ ಕಲಾವಿದೆಯಲ್ಲ
‘ನನ್ನ ಬಗ್ಗೆ ಕೆಟ್ಟ ಶಬ್ದ ಬಳಕೆ ಮಾಡುತ್ತಾರೆ. ಕರ್ನಾಟಕ್ಕೆ ಬಂದ್ರೆ ಮೆಟ್ಟಲ್ಲಿ ಹೊಡಿತೀನಿ ಎನ್ನುತ್ತಾರೆ. ನನ್ನ ರಾಜ್ಯಕ್ಕೆ ಬರೋಕೆ ಅವರ ಒಪ್ಪಿಗೆ ಬೇಕಾ? ಈಗ ಬಟ್ಟೆ ಬಿಚ್ಚಿಕೊಂಡು ನಿಂತರವರಿಗೆ ಹೆಚ್ಚು ಫಾಲೋವರ್ಸ್. ಬಟ್ಟೆ ಬಿಚ್ಚಿಕೊಂಡು ನಿಂತವರು ಇವರಿಗೆ ದೇವರ ರೀತಿ ಕಾಣಿಸುತ್ತಾರೆ. ತೆಲುಗುನಲ್ಲಿ ಯಾರದ್ದೋ ಜೊತೆ ಮಲಗಿದ್ದಾಳೆ, ಅದಕ್ಕೆ ಅಲ್ಲಿ ಅವಕಾಶ ಸಿಕ್ಕಿತು ಎಂದು ಯಾರೋ ಕಮೆಂಟ್ ಮಾಡಿದ್ದರು. ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನನಗೆ ಆ ರೀತಿಯ ಕಲಾವಿದೆ ಅಲ್ಲ. ಕಲಾವಿದರ ಜೀವನ ತುಂಬಾನೇ ಕಷ್ಟ’ ಎಂದು ಕೋಪ ಹೊರಹಾಕಿದ್ದಾರೆ.
ಎಕ್ಕಡಕ್ಕೂ ಸಮವಲ್ಲ
“ನನ್ನ ಸಂದರ್ಶನದ ಪೂರ್ತಿ ವಿಡಿಯೋವನ್ನು ನೋಡದೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ. ಈ ರೀತಿ ಕಾಮೆಂಟ್ ಮಾಡೋರಿಗೆ ತಾಯಿ-ಅಕ್ಕ ಇರೋದಿಲ್ವಾ? ಬಿಟ್ಟಿ ಕರೆನ್ಸಿ ಹಾಕ್ತಾರೆ ಅಂತ ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡೋದು ಸರೀನಾ? ಈ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡೋರು ನನ್ನ ಕಾಲು ಎಕ್ಕಡಕ್ಕೂ ಸಮ ಇಲ್ಲ. ನಾನು ಪದೇ ಪದೇ ಹೇಳ್ತಿದೀನಿ ನನ್ನ ತಾಯಿಯಷ್ಟೇ ಕನ್ನಡ ಕೂಡ ತುಂಬ ಇಷ್ಟ,’ ಎಂದು ಎಚ್ಚರಿಸಿದ್ದಾರೆ.
ತೆಲುಗಿನವ್ರು ಕನ್ನಡ ಮಾತಾಡ್ತಾರಾ?
‘ಇತ್ತೀಚೆಗೆ ತೆಲುಗಿನ ಶೋವೊಂದರಲ್ಲಿ ಒಬ್ಬ ವ್ಯಕ್ತಿ ನಿನಗೆ ತೆಲುಗು ಸರಿಯಾಗಿ ಬರೋದಿಲ್ಲಾ ಅಂತ ಹೇಳ್ತಾರೆ. ನಾನು ತೆಲುಗಿಗೆ ಹೋಗಿ ಎರಡು-ಮೂರು ವರ್ಷ ಆಗಿದೆ, ಇಷ್ಟು ತೆಲುಗು ಮಾತಾಡ್ತೀನಿ, ಈ ಟೈಮ್‌ನಲ್ಲಿ ನೀನು ಕನ್ನಡ ಕಲಿತು ಮಾತಾಡ್ತೀಯಾ ಅಂತ ಕೇಳಿದೆ. ಅದು ವೈರಲ್ ಆಗೋಯ್ತು. ಆ ವ್ಯಕ್ತಿಗೆ ಎಲ್ಲರೂ ಬೈಯ್ದರು, ನನ್ನನ್ನ ಬೆಂಬಲಿಸಿದರು. ಆಮೇಲೆ ಆ ವ್ಯಕ್ತಿ ಜೊತೆ ಲೈವ್ ಬಂದು ಜೈ ಕರ್ನಾಟಕ ಅಂತ ಹೇಳಿಸಿದೆ,’ ಎಂದು ಸೌಮ್ಯಾ ರಾವ್ ಹೇಳಿದ್ದಾರೆ.
‘ನನ್ನ ರಾಜ್ಯದ ವೀರ ಮಹಿಳೆ ಕಿತ್ತೂರು ಚೆನ್ನಮ್ಮ ರಾಣಿ ಬಗ್ಗೆ ನಟಿಸೋಕೆ ಕನ್ನಡದಲ್ಲಿ ನನಗೆ ಅವಕಾಶ ಸಿಗಲಿಲ್ಲ, ತೆಲುಗಿನಲ್ಲಿ ಸಿಗ್ತು. ಇದು ನನ್ನ ದುರಾದೃಷ್ಟ,’ ಎಂದು ಹೇಳಿದ್ದಾರೆ ಸೌಮ್ಯಾ ರಾವ್.