ಹರ್ಷ ಪ್ರೀತಿಯಿಂದ ತ್ರಿನೇತ್ರಾಳ ಕೂದಲನ್ನು ತನ್ನ ಬೆರಳುಗಳಿಂದ ಸವರುತ್ತಿದ್ದ. ಅವಳು ಅವನ ಮಡಿಲಲ್ಲಿ ತಲೆಯಿಟ್ಟು ಕಣ್ಮುಚ್ಚಿ ಮುಗುಳ್ನಗುತ್ತಿದ್ದಳು.

ಪಾರ್ಕ್‌ ನ ಒಂದು ಮೂಲೆಯ ಬೆಂಚ್‌ ಮೇಲೆ ಕುಳಿತಿದ್ದ ಇಬ್ಬರೂ ಜಗತ್ತಿನ ಪರಿವೆಯೇ ಇಲ್ಲದಂತೆ ಇದ್ದರು.

“ಹರ್ಷ ಮುಂದಿನದರ ಬಗ್ಗೆ ಏನು ಯೋಚನೆ ಮಾಡಿದಿಯಾ?” ಅವಳು ಕಣ್ಮುಚ್ಚಿಕೊಂಡೇ ಅವನ ಕೈಗೊಂದು ಸಿಹಿ ಮುತ್ತನಿಟ್ಟು ಆತುರದಿಂದ ಕೇಳಿದಳು, “ನಿನಗೆ ಸ್ಕಾಲರ್‌ ಶಿಪ್‌ ಸಿಕ್ಕುಬಿಟ್ರೆ ನೀನು ವಿದೇಶಕ್ಕೆ ಹೊರಟು ಹೋಗ್ತೀಯಾ…. ನೀನಿಲ್ಲದೇ ನಾನಿಲ್ಲಿ ಏಕಾಂಗಿಯಾಗಿ ಹೇಗಿರಲು ಸಾಧ್ಯ ಎಂದು ನೀನೇನಾದರೂ ಯೋಚಿಸಿದ್ದೀಯಾ?” ತ್ರಿನೇತ್ರಾ ಕೇಳಿದಳು.

“ನಾನು ಅದರ ಬಗ್ಗೆ ಯೋಚಿಸಿಯೇ ಇಲ್ಲ,” ಹರ್ಷ ಗಂಭೀರ ಸ್ವರದಲ್ಲಿ ಹೇಳಿದ, “ನೀನು ಮದುವೆ ಮಾಡಿಕೊ, ಜೀವನದಲ್ಲಿ ವ್ಯಸ್ತವಾಗಿ ಬಿಡ್ತೀಯಾ. ನಾನಿಲ್ಲಿ ವಾಪಸ್‌ ಬರುವ ಹೊತ್ತಿಗೆ ನಿನಗೆ 1-2 ಮಕ್ಕಳು ಆಗಿಯೇ ಆಗುತ್ತವೆ. ಇದಕ್ಕೇನು ಹೇಳ್ತೀಯಾ?” ಅವನು ಹೇಗೋ ತನ್ನ ನಗುವನ್ನು ತಡೆದುಕೊಂಡು ಹೇಳಿದ, “ನಾನು ನಿನ್ನ ಮಕ್ಕಳಿಗಾಗಿ ವಿದೇಶಿ ಬೊಂಬೆಗಳನ್ನು ತೆಗೆದುಕೊಂಡು ಬರ್ತೀನಿ.”

ಹರ್ಷನ ಮಾತು ಕೇಳಿ ತ್ರಿನೇತ್ರಾ ಒಮ್ಮೆಲೇ ಎದ್ದು ನಿಂತು, “ನಾನು ಬೇರೆಯವರನ್ನು ಮದುವೆಯಾಗಬೇಕೆಂದೇ ನೀನು ಬಯಸುತ್ತೀಯಾ? ಹಾಗಾದರೆ ಸರಿ, ನನ್ನನ್ನು ನೋಡಲು ಅನೇಕರು ಬರ್ತಿದ್ದಾರೆ. ಅವರಲ್ಲಿ ಒಬ್ಬರಿಗೆ ನಾನು `ಹ್ಞೂಂ’ ಎಂದು ಹೇಳಿಬಿಡ್ತೀನಿ,” ಎಂದು ಹೇಳುತ್ತಾ ಅವಳು ಅಲ್ಲಿಂದ ಹೆಜ್ಜೆ ಹಾಕತೊಡಗಿದಳು.

ಹರ್ಷ ಅವಳ ಕೈಹಿಡಿದು ಹೇಳಿದ, “ಅದೇನೊ ಸರಿ, ಆದರೆ ನೀನು ಒಂದು ವಿಷಯ ಸ್ಪಷ್ಟಪಡಿಸಿ ಹೋಗು, ನೀನು ನಿನ್ನ ಮದುವೆಗೆ ನನ್ನನ್ನು ಕರೀತಿಯಾ ಅಥವಾ ಇಲ್ವಾ? ನಿನಗೆ ಮದುವೆಯ ಶುಭ ಹಾರೈಕೆಗಳನ್ನು ಈಗಲೇ ಕೊಡ್ತೀನಿ,” ಎಂದು ಹೇಳುತ್ತಾ ಹರ್ಷ ತನ್ನ ನಗುವನ್ನು ತಡೆದುಕೊಂಡ.

“ಥ್ಯಾಂಕ್ಯು ಯೂ ಸೋಮಚ್‌,” ಎಂದು  ಹೇಳುತ್ತಾ ತ್ರಿನೇತ್ರಾ ಮುಖ ಸಿಂಡರಿಸುತ್ತಾ, “ಬಿಡು ನನ್ನ ಕೈ. ನಿಲ್ಲಿಸು ನಿನ್ನ ಮೂರ್ಖತನ,” ಎಂದು ಹೇಳಿದಳು.

“ಅದ್ಹೇಗೆ ನಿನ್ನ ಕೈ ಬಿಡಬೇಕು? ಜೀವನವಿಡೀ ಜೊತೆಗಿರಬೇಕೆಂದು ನಿನಗೆ ಮಾತು ಕೊಟ್ಟಿದ್ದೇನಲ್ಲ,” ಹರ್ಷನ ಬಾಹುಗಳು ಅವಳನ್ನು ತಡೆದಾಗ ಅವಳು ನಿಂತಳು. ಆ ಬಳಿಕ ಹರ್ಷನ ತುಟಿಗಳು ಅವಳ ತುಟಿಯನ್ನು ಸ್ಪರ್ಶಿಸಿದಾಗ ನಾಚಿಕೆಯಿಂದ ಅವಳ ದೃಷ್ಟಿ ನೆಲವನ್ನು ನೋಡತೊಡಗಿತು.

ಹರ್ಷ ತನ್ನ ಕೈಯಿಂದ ಅವಳ ಮುಖವನ್ನು ಎತ್ತುತ್ತಾ, “ಸಮುದ್ರ ಮಂಥನದ ಪ್ರಯತ್ನ ವ್ಯರ್ಥವಾಯಿತು. ಏಕೆಂದರೆ 14 ರತ್ನಗಳು ನಿನ್ನ ಕಣ್ಣುಗಳಲ್ಲಿಯೇ ಇದೆ. ಮತ್ತೊಂದು ಸತ್ಯ ಹೇಳಾ, ಕೋಪದಲ್ಲಿ ನೀನು ಬಹಳ ಮುದ್ದಾಗಿ ಕಾಣ್ತೀಯಾ…..?”

“ಸರಿ, ಸರಿ, ಉಳಿದ ಸಮಯದಲ್ಲಿ ನಾನು ಕುರೂಪಿಯಾಗಿ ಕಂಡುಬರ್ತೀನಿ ಎಂದಲ್ಲವೇ ನಿನ್ನ ಮಾತಿನ ಅರ್ಥ,” ತನ್ನನ್ನು ಹರ್ಷನ ಬಾಹುಗಳಿಂದ ಬಿಡಿಸಿಕೊಳ್ಳುತ್ತಾ ತ್ರಿನೇತ್ರಾ ಹೇಳಿದಳು, “ಇಂತಹ ಮಾತುಗಳನ್ನು ಆಡಬೇಡ ಅಂತಾ ನಾನು ನಿನಗೆ ಎಷ್ಟು ಸಲ ಹೇಳಿದ್ದೇನೆ. ನನಗೆ ಆ ಮಾತುಗಳು ಇಷ್ಟವಾಗುವುದಿಲ್ಲ. ಆದರೂ ನೀನು ಅಂತಹ ಮಾತುಗಳನ್ನು ಏಕೆ ಆಡ್ತೀಯಾ?”

“ಸರಿ ಸರಿ ಆಯ್ತು. ಇನ್ಮುಂದೆ ನಾನು ಅಂತಹ ಮಾತುಗಳನ್ನು ಆಡುವುದಿಲ್ಲ,” ಎಂದು ಹೇಳುತ್ತಾ ಕಿವಿಗಳನ್ನು ಹಿಡಿದುಕೊಂಡು ಬೈಟಕ್‌ ಹೊಡೆಯತೊಡಗಿದ.

“ಸಾಕು ಸಾಕು ನಿಲ್ಲಿಸು ಈಗ. ನಿನ್ನ ನಾಟಕ ಅತಿಯಾಯ್ತು. ಮೊದಲು ಕೋಪ ತರಿಸ್ತೀಯಾ, ಆಮೇವೆ ಹೀಗೆ ನಾಟಕ ಆಡ್ತೀಯಾ,” ಮುಗುಳ್ನಗುತ್ತಲೇ ತ್ರೀನೇತ್ರಾ, “ನಾನು ನಿನ್ನನ್ನು ನನ್ನ ಅಮ್ಮ ಅಪ್ಪನಿಗೆ ಭೇಟಿ ಮಾಡಿಸ್ತೀನಿ. ಅವರು ನಿನ್ನನ್ನು ಭೇಟಿಯಾಗಿ ಬಹಳ ಖುಷಿಪಡ್ತಾರೆ. ನಾನು ಎಂತಹ ಹ್ಯಾಂಡ್‌ ಸಮ್ ಹಾಗೂ ಬುದ್ಧಿವಂತ ಅಳಿಯನನ್ನು ಹುಡುಕ್ತಿದ್ದೇನೆ ಎನ್ನುವುದು ಅವರಿಗೂ ಗೊತ್ತಾಗಬೇಕು,” ಎಂದು ಹೇಳಿದಳು.

ತ್ರಿನೇತ್ರಾಳ ಮಾತಿಗೆ ಹರ್ಷ ಮುಗುಳ್ನಕ್ಕ. ಆದರೆ ಅವಳ ಅಪ್ಪ ಅಮ್ಮನನ್ನು ಭೇಟಿಯಾಗಲು ಅವನಿಗೆ ಸಂಕೋಚ ಆಗುತ್ತಿತ್ತು. ಅವರನ್ನು ಭೇಟಿಯಾಗಿ ತಾನು ಏನು ಪ್ರತಿಕ್ರಿಯೆ ಕೊಡಬಲ್ಲೆ ಎಂದು ಅವನಿಗೆ ಅನಿಸುತ್ತಿತ್ತು. ಏಕೆಂದರೆ ತನ್ನ ಕುಟುಂಬವೆಲ್ಲಿ, ಅವರ ಕುಟುಂಬವೆಲ್ಲಿ? ಆಕಾಶ ಭೂಮಿಯ ವ್ಯತ್ಯಾಸ. ಅವನು ತ್ರಿನೇತ್ರಾಳ ಮುಂದೆ ಈ ಮಾತನ್ನು ಪ್ರಸ್ತಾಪಿಸುವ ಹಾಗಿರಲಿಲ್ಲ. ಅವನೇನಾದರೂ ಹೇಳಿದರೆ ಅವಳಿಗೆ ಕೋಪ ಬರುತ್ತಿತ್ತು.

ಒಂದು ಸಲವಂತೂ ಹರ್ಷ, “ನಿನ್ನ ಅಮ್ಮ ಅಪ್ಪ ನಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಳ್ಳುತ್ತಾರೆಯೇ?” ಎಂದು ಕೇಳಿದ್ದ. ಆಗ ಅವಳು ಮೂಗು ಉಬ್ಬಿಸಿಕೊಂಡು, “ಯಾಕೆ ಸ್ವೀಕರಿಸುವುದಿಲ್ಲ? ಒಬ್ಬ ವ್ಯಕ್ತಿಗೆ ಇರುವಂತೆ 2 ಕಣ್ಣು, 2 ಕಿವಿ, ಮೂಗು, ಕೈಕಾಲು, ಮೆದುಳು ಎಲ್ಲವೂ ನಿನ್ನಲ್ಲಿವೆ. ನೀನು ಸ್ಮಾರ್ಟ್‌ ಕೂಡ ಆಗಿರುವೆ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಅವರ ಏಕೈಕ ಪುತ್ರಿ ನಿನ್ನನ್ನು ಇಷ್ಟಪಡುತ್ತಾಳೆ. ಹಾಗಿದ್ದಾಗ ಅವರು ಯಾಕೆ ನಮ್ಮ ಸಂಬಂಧ ಒಪ್ಪುವುದಿಲ್ಲ ಹೇಳು? ನನ್ನ ಅಪ್ಪ ಅಮ್ಮ ನನಗಾಗಿ ಏನೆಲ್ಲ ಮಾಡಲು ಸಿದ್ಧರಾಗಿದ್ದಾರೆ,” ತ್ರಿನೇತ್ರಾ ಹೆಮ್ಮೆಯಿಂದ ಹೇಳಿದಳು.

ಅವನು ಏನು ಹೇಳಲು ಇಚ್ಛಿಸುತ್ತಿದ್ದಾನೆ ಎಂದು ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು. ಹಾಗಾಗಿ ಅವಳು, “ನಾನು ಶ್ರೀಮಂತನ ಮಗಳು, ನೀನು ಸಾಧಾರಣ ಮನೆತನದವನು. ಆ ಕಾರಣದಿಂದ ನಮ್ಮಿಬ್ಬರ ಮಿಲನ ಸಾಧ್ಯವಾಗುವುದಿಲ್ಲ ಎನ್ನುವುದು ನಿನ್ನ ಅನಿಸಿಕೆಯೇ? ನೀನು ನಾನು ಸ್ನೇಹಿತರಾದಾಗ, ನಾನು ಶ್ರೀಮಂತ, ನೀನು ಬಡವ ಎನ್ನುವುದು ಪರಸ್ಪರರಿಗೆ ತಿಳಿದಿತ್ತಾ? ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದರೆ ಅದೇ ಎಲ್ಲಕ್ಕೂ ದೊಡ್ಡ ವಾಸ್ತವ. ನಮ್ಮಿಬ್ಬರ ಪ್ರೀತಿ ಹಣವಾಗಲಿ, ಧರ್ಮವಾಗಲಿ, ಜಾತೀಯ ಗೋಡೆಯಾಗಲಿ ಅಡ್ಡ ಬರುವುದಿಲ್ಲ ಎನ್ನುವುದರ ಬಗ್ಗೆ ನಾನು ನಿನಗೆ ಮಾತು ಕೊಡ್ತೀನಿ,” ತ್ರಿನೇತ್ರಾ ದೃಢ ಸ್ವರದಲ್ಲಿ ಹೇಳುತ್ತಾ ಹರ್ಷನನ್ನು ಚುಂಬಿಸಿದಳು.

ತ್ರಿನೇತ್ರಾಳ ಚುಂಬನ ಅವನ ತುಟಿಗಷ್ಟೇ ಅಲ್ಲ, ಅವನ ಮನಸ್ಸಿನ ಒಳಗೂ ಸಂಚಲನ ಉಂಟು ಮಾಡಿತು. ಆ ಬಳಿಕ ಇಬ್ಬರೂ ಗಂಟೆಗಟ್ಟಲೆ ಪರಸ್ಪರರಲ್ಲಿ ಕಳೆದುಹೋಗಿದ್ದರು.

“ಎಲ್ಲಿ ಕಳೆದು ಹೋಗಿರುವೆ?” ತ್ರಿನೇತ್ರಾ ಅವನನ್ನು ಕೇಳಿದಾಗ ಅವನು ಭೂತಕಾಲದಿಂದ ವರ್ತಮಾನಕ್ಕೆ ಮರಳಿದ.

“ನಾನು ನಿನ್ನನ್ನು ಕರೆತರಲು ನಿಮ್ಮ ಮನೆಗೆ ಬರ್ತೀನಿ. ನೀನು ಡ್ರೆಸ್‌ ಮಾಡಿಕೊಂಡು ಸಿದ್ಧನಾಗಿರಬೇಕು. ಅಂದಹಾಗೆ ನಾನು ನಿನಗೆ ಬರ್ತ್‌ ಡೇಗೆ ಗಿಫ್ಟ್ ಕೊಟ್ಟ ವೈಟ್‌ ಗ್ರೀನ್‌ ಶರ್ಟ್‌ ನ್ನೇ ಧರಿಸಬೇಕು. ಅದರಲ್ಲಿ ನೀನು ಬಹಳ ಚೆಂದ ಕಾಣ್ತೀಯಾ,” ತ್ರಿನೇತ್ರಾ ಬಹಳ ಖುಷಿಗೊಂಡಿದ್ದಳು. ಅವಳು ಮೊದಲ ಬಾರಿ ಹರ್ಷನನ್ನು ತನ್ನ ತಾಯಿ ತಂದೆಯ ಜೊತೆ ಭೇಟಿಯಾಗಲು ಕರೆದುಕೊಂಡು ಹೋಗಲಿದ್ದಳು. ಹರ್ಷ ಅವರಿಗೆ ಇಷ್ಟವಾಗಿಯೇ ಆಗುತ್ತಾನೆಂದು ಅವಳಿಗೆ ನಂಬಿಕೆಯಿತ್ತು. ತನ್ನ ತಂದೆ ಅಮರ್ ಹರ್ಷನನ್ನು ಭೇಟಿಯಾಗಿ ಬಹಳ ಖುಷಿಗೊಳ್ಳುತ್ತಾರೆ. ಏಕೆಂದರೆ ಹರ್ಷ ಹಾಗೂ ಅಪ್ಪನ ವಿಚಾರಗಳು ಹೆಚ್ಚು ಕಡಿಮೆ ಒಂದೇ ಆಗಿದ್ದವು.

ತ್ರಿನೇತ್ರಾಳ ಅಮ್ಮ ಸ್ವಲ್ಪ ವಿಭಿನ್ನ ಸ್ವಭಾವದವರಾಗಿದ್ದರು. ಆದರೆ ಅವರೂ ಕೂಡ `ಇಲ್ಲ’ ಎಂದು ಹೇಳಲಾರರು ಎಂಬ ನಂಬಿಕೆ ಅವಳಿಗಿತ್ತು.

ಹರ್ಷ ಹಾಗೂ ತ್ರಿನೇತ್ರಾರ ಭೇಟಿ ಯಾವುದೇ ಕಾಲೇಜಿನಲ್ಲಾಗಲಿ, ಸ್ನೇಹಿತರ ಪಾರ್ಟಿಯಲ್ಲಾಗಲಿ ಆಗಿರಲಿಲ್ಲ. ಇಬ್ಬರ ಭೇಟಿ ಯೋಗಾಯೋಗ ಎಂಬಂತೆ ಆಗಿತ್ತು.

ಕೆಲವು ತಿಂಗಳ ಹಿಂದೆ, ಅದೊಂದು ದಿನ ತ್ರಿನೇತ್ರಾಳ ದ್ವಿಚಕ್ರ ವಾಹನ ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಂತಿತ್ತು. ಅಕ್ಕಪಕ್ಕದಲ್ಲಿ ಯಾರೊಬ್ಬರೂ ಮೆಕ್ಯಾನಿಕ್‌ ಇರಲಿಲ್ಲ.

ಇಂತಹ ನಿರ್ಜನ ಪ್ರದೇಶದಲ್ಲಿ ಸ್ವಲ್ಪ ಹೆಚ್ಚು ಹೊತ್ತು ನಿಂತುಕೊಳ್ಳುವುದು ಅಪಾಯಕರ ಎಂದು ಅವಳಿಗೆ ಅನಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಇಂತಹ ಘಟನೆಗಳು ನಡೆದು ಅವಳು ಕಂಗೆಡುವಂತೆ ಮಾಡಿದ್ದವು.

ತ್ರಿನೇತ್ರಾ ತನ್ನ ಮಮ್ಮಿ ಡ್ಯಾಡಿಗೆ ಫೋನ್‌ ಮಾಡುತ್ತಿದ್ದಳು. ಆದರೆ ಅವಳಿದ್ದ ಜಾಗ ಹೇಗಿತ್ತೆಂದರೆ ಅದು ನೆಟ್‌ ವರ್ಕ್‌ ಕ್ಷೇತ್ರದಿಂದ ಹೊರಗಿತ್ತು.

ಯಾರೊಬ್ಬರ ಫೋನ್‌ ಕೂಡ ಕನೆಕ್ಟ್ ಆಗುತ್ತಿರಲಿಲ್ಲ. ಈಗ ನಾನೇನು ಮಾಡಲಿ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾ ಅತ್ತಿತ್ತ ನೋಡುತ್ತಿದ್ದಳು. ತನ್ನ ನೆರವಿಗೆ ಯಾರಾದರೂ ಬರಬಹುದು ಎಂದು ಅವಳು ನಿರೀಕ್ಷಿಸುತ್ತಿದ್ದಳು. ಆದರೆ ಯಾವೊಬ್ಬ ವ್ಯಕ್ತಿಯೂ ಅವಳ ಕಣ್ಣಿಗೆ ಬೀಳುತ್ತಿರಲಿಲ್ಲ.

ನೀಲಿ ಬಣ್ಣದ ಡ್ರೆಸ್‌ ಹಾಗೂ ಕೂದಲನ್ನು ಒಗ್ಗೂಡಿಸಿ ಕಟ್ಟಿದ ಆಧುನಿಕ ಮನೋಭಾವದ ಯುವತಿ ರಸ್ತೆ ಬದಿ ನಿಂತಿರುವುದನ್ನು ಕಂಡು ಹರ್ಷನಿಗೆ ಆ ಯುವತಿ ತೊಂದರೆಯಲ್ಲಿ ಸಿಲುಕಿರಬಹುದು ಎಂದು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ.

“ಯಾವುದಾದರೂ ಸಮಸ್ಯೆಯಾ?” ಆಕಸ್ಮಿಕವಾಗಿ ಹಿಂದಿನಿಂದ ಬಂದ ಧ್ವನಿ ಕೇಳಿ ತ್ರಿನೇತ್ರಾ ಅಚ್ಚರಿಗೊಳಗಾದಳು. ಹಿಂತಿರುಗಿ ನೋಡಿದಾಗ ಒಬ್ಬ ಯುವಕನ್ನು ಕಂಡು ಅವಳು ಒಮ್ಮೆಲೆ ಗಾಬರಿಗೊಳಗಾದಳು.

“ಬಹುಶಃ ನಿಮ್ಮ ಗಾಡಿ ಕೆಟ್ಟು ಹೋದಂತೆ ಕಾಣ್ತಿದೆ. ನಾನು ನಿಮಗೆ ಸಹಾಯ ಮಾಡಬಹುದಾ?” ಬೈಕ್‌ ನ್ನು ಒಂದು ಬದಿಗೆ ನಿಲ್ಲಿಸುತ್ತಾ ಹರ್ಷ ಕೇಳಿದಾಗ, ಅವಳಿಗೆ ಹೆದರಿಕೆಯಿಂದ ಮೈಮೇಲಿನ ರೋಮಗಳು ಎದ್ದು ನಿಂತವು. ಆ ಹುಡುಗ ತನ್ನ ಜೊತೆಗೆ ಏನು ಮಾಡಬಹುದು ಎಂದು ಅವಳಿಗೆ ಅನಿಸುತ್ತಿತ್ತು.

ಈ ನಿರ್ಜನ ಪ್ರದೇಶದಲ್ಲಿ ಏಕಾಂಗಿ ಹುಡುಗಿಯನ್ನು ಕಂಡು ನನ್ನ ರೇಪ್‌ ಮಾಡಿ ನನ್ನನ್ನು ಸಾಯಿಸಿಬಿಡಬಹುದೇ? ಕೆಲವು ತಿಂಗಳ ಹಿಂದಷ್ಟೇ ಕೆಲವು ಹುಡುಗರು ಒಬ್ಬಳು ಹುಡುಗಿಗೆ ಸಹಾಯ ಮಾಡುವ ನೆಪದಲ್ಲಿ ರೇಪ್‌ ಮಾಡಿ ಹೊಡೆದು ಸಾಯಿಸಿದ್ದರು. ನನ್ನ ಜೊತೆಗೂ ಹೀಗೆಯೇ ಆದರೆ ನಾನೇನು ಮಾಡಲು ಸಾಧ್ಯ ಎಂದು ಅವಳು ಯೋಚಿಸುತ್ತಿದ್ದಳು.

“ಹಲೋ ಮೇಡಂ, ನೀವೆಲ್ಲಿ ಕಳೆದುಹೋದಿರಿ?” ಹರ್ಷ ತ್ರಿನೇತ್ರಾಳ ಮುಖದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿದ್ದ, “ನಿಮಗೆ ನನ್ನಿಂದ ಏನಾದರೂ ಸಹಾಯ ಬೇಕಾ ಅಥವಾ ನಾನು ಹೊರಡಲಾ…?”

“ಬೇಡ ಬೇಡ ನನಗೆ ಯಾವ ಸಹಾಯ ಮಾಡೋದು ಬೇಡ. ನೀವು ಹೊರಡಿ,” ಎಂದು ಅವಳು ಗಾಬರಿ ಬೆರೆತ ಧ್ವನಿಯಲ್ಲಿ ಹೇಳುತ್ತ ತನ್ನ ಮನೆಯವರಿಗೆ ಫೋನ್‌ ಮಾಡಲು ಪ್ರಯತ್ನ ಮಾಡತೊಡಗಿದಳು. ಫೋನ್‌ ನೆಟ್‌ ವರ್ಕ್‌ ಸಿಕ್ಕು, ಮನೆಯವರು ಬೇಗ ಬಂದರೆ ಸಾಕು ಎಂದು ಅವಳು ಯೋಚಿಸುತ್ತಿದ್ದಳು. ಆದರೆ ಫೋನ್‌ ಮಾತ್ರ ಕನೆಕ್ಟ್ ಆಗಲಿಲ್ಲ.

ತ್ರಿನೇತ್ರಾಳಿಗೆ ಏಕಾಂಗಿಯಾಗಿ ಲಾಂಗ್‌ ಡ್ರೈವ್ ‌ಹೋಗುವುದು ಬಹಳ ಇಷ್ಟವಾಗುತ್ತಿತ್ತು. ನಗರದ ಜನದಟ್ಟಣೆಯಿಂದ ದೂರ ಬಹುದೂರ ಕಾಡಿನ ದಾರಿಗುಂಟ ಸಾಗುವ ಹೊಲಗದ್ದೆಗಳ ಹಸಿರನ್ನು ಕಣ್ತುಂಬಿಸಿಕೊಳ್ಳುತ್ತಾ ಹೋಗುವುದು ಅವಳಿಗೆ ಬಹಳ ಇಷ್ಟವಾಗುತ್ತಿತ್ತು.

ಅದೆಷ್ಟೋ ಸಲ ಅವಳ ತಂದೆ ಅವಳಿಗೆ ತಿಳಿಹೇಳುತ್ತಿದ್ದರು.“ನೀನು ಒಬ್ಬಳೇ ಅಷ್ಟೊಂದು ದೂರ, ಹೋಗುವುದು ಸರಿಯಲ್ಲ. ಹೋಗುವುದೇ ಆದರೆ ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋಗು. ನೀನೊಬ್ಬಳೇ ಸ್ಕೂಟಿಯಲ್ಲಿ ಹೋದಾಗ ಗಾಡಿ ನಡು ದಾರಿಯಲ್ಲಿಯೇ ಕೆಟ್ಟು ಹೋದರೆ ಏನು ಗತಿ?” ಎಂದು ಕೇಳುತ್ತಿದ್ದರು. ಆದರೆ ತ್ರಿನೇತ್ರಾ ಅದಾವುದನ್ನು  ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಏಕಾಂಗಿಯಾಗಿ ಓಡಾಡುವಾಗಿನ ಖುಷಿ ಬೇರೆಯವರ ಜೊತೆ ಎಲ್ಲಿ ಸಿಗುತ್ತದೆ? ಎಂದು ಯೋಚಿಸಿ ಅವಳು ತನಗಿಷ್ಟವಾದ ಕಡೆ ಬಿಂದಾಸ್‌ ಆಗಿ ಹೋಗುತ್ತಿದ್ದಳು.

“ಏನೂ ಆಗುವುದಿಲ್ಲ ಡ್ಯಾಡ್‌, ನೀವು ನನ್ನ ಬಗ್ಗೆ ವೃಥಾ ಚಿಂತೆ ಮಾಡುತ್ತಿದ್ದೀರಿ,” ಎಂದು ಹೇಳಿ ಅವರ ಬಾಯಿ ಮುಚ್ಚಿಸುತ್ತಿದ್ದಳು. ಆದರೆ ಇವತ್ತು ಮಾತ್ರ ಅಪ್ಪ ಹೇಳಿದ್ದು, ಎಷ್ಟು ಸರಿ ಎಂದು ಅವಳಿಗೆ ಅನಿಸತೊಡಗಿತ್ತು. ಯಾರಾದರೂ ಜೊತೆಗಿದ್ದರೆ ಒಂದಷ್ಟು ಧೈರ್ಯವಾದರೂ ಇರುತ್ತಿತ್ತು ಎಂದು ಅವಳಿಗೆ ಅನಿಸತೊಡಗಿತ್ತು.

`ತಾನು ಅಪ್ಪನ ಮಾತು ಒಪ್ಪಿದ್ರೆ ಎಷ್ಟು ಚೆನ್ನಾಗಿರ್ತಿತ್ತು,’ ಎಂದು ಅವಳು ಯೋಚಿಸುತ್ತಿರುವಾಗಲೇ ಒಂದು ದೊಡ್ಡ ಗಾಡಿ ಅವಳ ಪಕ್ಕದಿಂದ ಹಾಯ್ದು ಹೋಯಿತು. ಅವಳು ನೆರವಿಗಾಗಿ ಕೈ ಅಲ್ಲಾಡಿಸಿದಳು. ಆದರೆ ಆ ವಾಹನ ವೇಗದಲ್ಲಿ ಮುಂದೆ ಹೋಯಿತು. ಆದರೆ ಮುಂದೆ ಹೋದ ಆ ಗಾಡಿ ಅದೇ ವೇಗದಲ್ಲಿ ಹಿಂದೆ ಬಂದಿತು. ತ್ರಿನೇತ್ರಾ ನೆಮ್ಮದಿಯ ನಿಟ್ಟುಸಿರುಬಿಟ್ಟಳು. ತನ್ನೆದುರು ಗಾಡಿ ಬಂದು ನಿಂತಾಗ ಅವಳು,  “ನನ್ನ ಗಾಡಿ ಕೆಟ್ಟುಹೋಗಿದೆ ದಯವಿಟ್ಟು ನನಗೆ ಸಹಾಯದ ಅವಶ್ಯಕತೆ ಇತ್ತು ಪ್ಲೀಸ್‌,” ತ್ರಿನೇತ್ರಾಳಿಗೆ ಹೆದರಿಕೆ ಆಗುತ್ತಿತ್ತು. ಆದರೆ ಇಡೀ ರಾತ್ರಿ ಅಲ್ಲಿಯೇ ಇರುವ ಹಾಗೆಯೂ ಇರಲಿಲ್ಲವಲ್ಲ.

ಕಾರಿನಲ್ಲಿ ಕುಳಿತಿದ್ದ ಆ ಹುಡುಗರು ಅವಳನ್ನು ಮೇಲಿನಿಂದ ಕೆಳಗಿನ ತನಕ ನೋಡಿದರು. ಬಳಿಕ ಅವರವರೇ ಕಣ್ಣಲ್ಲಿ ಏನೋ ಮಾತಾಡಿಕೊಂಡರು. ಬಳಿಕ ಒಬ್ಬಾತ ಹೇಳಿದ, “ನಿಮ್ಮ ಗಾಡಿ ಕೆಟ್ಟು ಹೋಗಿದೆಯೇನು? ಆದರೆ ಇಲ್ಲಿ ಯಾರೂ ಮೆಕ್ಯಾನಿಕ್‌ಸಿಗೋದಿಲ್ಲ. ಅದಕ್ಕಾಗಿ ನೀವು ನಗರಕ್ಕೆ ಹೋಗಬೇಕಾಗುತ್ತದೆ. ಅಂದಹಾಗೆ ನೀವು ಎಲ್ಲಿಗೆ ಹೋಗಬೇಕಾಗಿದೆ?” ಎಂದು ಬಹಳ ವಿನಯತೆಯಿಂದ ಕೇಳಿದ.

“ನಾನು ಆದರ್ಶನಗರ ಗ್ರೀನ್‌ ಪಾರ್ಕ್‌ ಗೆ ಹೋಗಬೇಕಿದೆ,” ಅವಳಿಗೆ ಗಾಬರಿಯಿಂದ ಅಷ್ಟಕ್ಕಷ್ಟೇ ಧ್ವನಿ ಹೊರಟಿತು.

“ಹೌದಾ…. ಗ್ರೀನ್‌ ಪಾರ್ಕ್‌ ಕಡೆ ಹೋಗಬೇಕಾ? ನಾವು ಅತ್ತ ಕಡೆಯಿಂದಲೇ ಹೊರಟಿದ್ದೇವೆ. ನೀವು ಇಷ್ಟಪಟ್ಟರೆ ನಮ್ಮ ಗಾಡಿಯಲ್ಲಿ ಬರಬಹುದು. ನೀವು ಆ ಬಳಿಕ ಫೋನ್‌ ಮಾಡಿ ಮೆಕ್ಯಾನಿಕ್‌ ನನ್ನು ಇಲ್ಲಿಗೆ ಕಳಿಸಿಕೊಟ್ಟರೆ ಅವರೇ ನಿಮ್ಮ ಗಾಡಿಯನ್ನು ಮನೆಗೆ ಕಳಿಸಿಕೊಡುತ್ತಾನೆ,” ಎಂದು ಹುಡುಗರು ಹೇಳಿದಾಗ, ತ್ರಿನೇತ್ರಾ ಒಂದು ನಿಮಿಷದ ಮಟ್ಟಿಗೆ ಸ್ತಬ್ಧಳಾಗಿ ನಿಂತುಬಿಟ್ಟಳು. ಏಕೆಂದರೆ ಯಾರ ಮೇಲೂ ಅಷ್ಟು ಸುಲಭವಾಗಿ ನಂಬಿಕೆ ಇಡುವುದು ಸರಿಯಾದುದಲ್ಲ. ಆದರೂ ಈ ಹುಡುಗರು ಒಳ್ಳೆಯವರೆನಿಸುತ್ತಿದ್ದಾರೆ.

`ಒಂದು ವೇಳೆ ನಾನು ಅವರ ಜೊತೆ ಹೋಗದಿದ್ದರೆ, ಆಮೇಲೆ ಯಾರೂ ನನ್ನ ಸಹಾಯಕ್ಕೆ ಬರದಿದ್ದರೆ ಏನು ಮಾಡುವುದು? ರಾತ್ರಿ ಆಗುತ್ತಿದೆ ಅದರಲ್ಲೂ ಈ ಜಾಗ ನಿರ್ಜನ ಅನಿಸುತ್ತಿದೆ. ಇವರ ಜೊತೆ ಹೋಗುವುದೇ ಉತ್ತಮ,’ ಎಂದು ಯೋಚಿಸಿ ಅವಳು ಗಾಡಿಯಲ್ಲಿ ಕುಳಿತುಕೊಂಡಿದ್ದಳು. ಅಷ್ಟರಲ್ಲಿ ಒಬ್ಬ ಹುಡುಗ ಅವಳ ಕೈಯನ್ನು ಜೋರಾಗಿ ಹಿಡಿದೆಳೆದ. ಇನ್ನೊಬ್ಬ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ತ್ರಿನೇತ್ರಾ, “ಬಿಡು ನನ್ನ ಕೈ ನಾನು ನಿಮ್ಮ ಜೊತೆ ಬರುವುದಿಲ್ಲ!” ಎಂದು ಹೇಳಿ ಜೋರಾಗಿ ಚೀರತೊಡಗಿದಳು.

ಆದರೆ ಆ ಇಬ್ಬರೂ ಹುಡುಗರು ಅವಳನ್ನು ಬಲವಂತವಾಗಿ ಹಿಡಿದುಕೊಂಡು ಗಾಡಿಯಲ್ಲಿ ಕೂರಿಸತೊಡಗಿದರು. ಅದರಲ್ಲಿ ಒಬ್ಬಾತ ಅವಳ ಮೇಲೆ ಗದರುತ್ತಾ ಹೇಳಿದ, “ಸುಮ್ನೆ ಕುಳಿತುಕೊ ಹುಡುಗಿ. ಇಲ್ಲದಿದ್ದರೆ ನಿನ್ನನ್ನು ಸಾಯಿಸಿ ಇಲ್ಲಿಯೇ ಎಸೆದು ಹೋಗ್ತೀವಿ ಅದು ಯಾರಿಗೂ ಗೊತ್ತಾಗುವುದಿಲ್ಲ.”

ಅವರ ಮಾತು ಕೇಳಿ ತ್ರಿನೇತ್ರಾ ಗಾಬರಿಗೊಳಗಾದಳು. ತಾನು ಇವರಿಂದ ಬಚಾವಾಗುವುದಿಲ್ಲ ಎನ್ನುವುದು ಅವಳಿಗೆ ಗೊತ್ತಾಯಿತು. ಏಕೆಂದರೆ ಇಂತಹ ನಿರ್ಜನ ಪ್ರದೇಶದಲ್ಲಿ ತನ್ನನ್ನು ಕಾಪಾಡಲು ಯಾರೂ ಬರುವುದಿಲ್ಲ ಎಂದು ಅವಳಿಗೆ ಅನಿಸಿತು. ನಗರದಲ್ಲಾದರೆ ಜನರು ಮಧ್ಯರಾತ್ರಿವರೆಗೆ ಓಡಾಡುತ್ತಿರುತ್ತಾರೆ. ಹಳ್ಳಿಗಳಲ್ಲಿ ರಾತ್ರಿ 8ಕ್ಕೆ ತಮ್ಮ ಮನೆ ಹೊಕ್ಕರೆ ಹೊರಗೇ ಬರುವುದಿಲ್ಲ.

ಇಂದು ತ್ರಿನೇತ್ರಾಳಿಗೆ ಸಾವು ಅತ್ಯಂತ ನಿಕಟವಾಗಿದೆ ಎನಿಸುತ್ತಿತ್ತು. ಜೀವನದಲ್ಲಿ ಮೊದಲ ಬಾರಿಗೆ ಅವಳಿಗೆ ತಾನು ಹುಡುಗಿಯಾಗಿದ್ದಕ್ಕೆ ದುಃಖವಾಗುತ್ತಿತ್ತು. ತಾನು ರಾಕ್ಷಸ ಗುಣದ ಈ ಹುಡುಗರನ್ನು ಹೇಗೆ ನಂಬಿ ಗಾಡಿ ಹತ್ತಿದೆ ಎಂದು ಖೇದ ಆಗುತ್ತಿತ್ತು. ತನ್ನ ದುಸ್ಥಿತಿಯ ಬಗ್ಗೆ ಅವಳಿಗೆ ದುಃಖ ಆಗುತ್ತಿತ್ತು. ಏನೋ ಹೇಳಬೇಕು ಅನಿಸುತ್ತಿತ್ತು. ಆದರೆ ಅವಳ ಬಾಯಿಂದ ಮಾತುಗಳೇ ಹೊರಡುತ್ತಿರಲಿಲ್ಲ.

ಏನಾಗುತ್ತೋ ಅದು ಆಗಿಯೇ ಆಗುತ್ತದೆ. ತಾನು ಏನನ್ನು ಮಾಡಲು ಆಗುವುದಿಲ್ಲ ಎಂದು ಅಳು ಯೋಚಿಸುತ್ತಿದ್ದಳು. ಅವರ ಕಾರು ವೇಗ ಪಡೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಯಾರೋ ಒಬ್ಬ ವ್ಯಕ್ತಿ ಅವರ ಕಾರಿಗೆ ಅಡ್ಡವಾಗಿ ಬಂದು ನಿಂತ. ಚಾಲಕ ಒಮ್ಮೆಲೇ ಜೋರಾಗಿ ಬ್ರೇಕ್‌ ಹಾಕಿದ.

ಇವನು ಹೊರಗೆ ಹೋಗಿ ಅವನನ್ನು ವಿಚಾರಿಸುತ್ತಿರುವಷ್ಟರಲ್ಲಿ ಕೋಲಿನಿಂದ ಅವನ ತಲೆಗೆ 2-3 ಸಲ ಬಾರಿಸಿದ. ಹೊಡೆದ ಏಟಿಗೆ ಕಾರು ನಡೆಸುತ್ತಿದ್ದ ಹುಡುಗ ಅಲ್ಲಿಯೇ ನೆಲಕ್ಕೊರಗಿದ. ಎರಡನೇ ಹುಡುಗ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡತೊಡಗಿದ. ಆದರೂ ಅವನು ಕೋಲಿನ ಏಟಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.

ತ್ರಿನೇತ್ರಾ ಈಗ ಧೈರ್ಯದಿಂದ ಕಾರಿನಿಂದ ಕೆಳಗಿಳಿದಳು. ಅವಳು ತನ್ನನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೊರಟಿದ್ದ ಯುವಕರನ್ನು ಹೊಡೆದು ನೆಲಕ್ಕುರುಳಿಸಿದ ವ್ಯಕ್ತಿ ಯಾರು ಎಂದು ನೋಡಿದಾಗ, ಕೆಲವು ನಿಮಿಷಗಳ ಹಿಂದಷ್ಟೇ ತನ್ನೊಂದಿಗೆ ಮಾತನಾಡಿ ಹೋಗಿದ್ದ ಯುವಕ ಎಂದು ಗೊತ್ತಾಯಿತು. ಅವನು ಸಹಾಯ ಮಾಡಲು ಮುಂದೆ ಬಂದಿದ್ದ. ಆದರೆ ತ್ರಿನೇತ್ರಾಳೇ ಅವನನ್ನು ವಾಪಸ್‌ ಕಳಿಸಿದ್ದಳು.

“ಇತ್ತೀಚೆಗೆ ಹುಡುಗಿಯರ ಜೊತೆ ಏನೇನಾಗುತ್ತಿದೆ ಎಂಬುದು ನಿಮಗೆ ಗೊತ್ತಿದೆಯಲ್ವೆ? ಆದರೂ ನೀವು ಆ ಹುಡುಗರ ಜೊತೆ ಗಾಡಿಯಲ್ಲಿ ಕುಳಿತುಕೊಳ್ಳಲು ಹೇಗೆ ತಯಾರಾದಿರಿ? ನೀವೇಕೆ ಸ್ವಲ್ಪವೂ ಯೋಚಿಸಲಿಲ್ಲ,” ಎಂದು ಹರ್ಷ ತ್ರಿನೇತಾಳನ್ನು ಕೇಳಿದಾಗ ಅವಳು ತಲೆತಗ್ಗಿಸಿ ನಿಂತಳು.

“ನಾನು ಹೆಚ್ಚೇನೂ ದೂರ ಹೋಗಿರಲಿಲ್ಲ. ಹಾಗಾಗಿ ನೀವು ಚೀರಿದ ಧ್ವನಿ ನನಗೆ ಕೇಳಿಸಿತು. ಇಲ್ಲದಿದ್ದರೆ ನಿಮ್ಮ ಸ್ಥಿತಿ ಏನಾಗುತ್ತಿತ್ತೋ?”

ತ್ರಿನೇತ್ರಾಳ ಕಣ್ಣಲ್ಲಿ ನೀರು ಚಿಮ್ಮತೊಡಗಿದಾಗ ಹರ್ಷನಿಗೆ ತಾನು ಅವಳನ್ನು ಸ್ವಲ್ಪ ಹೆಚ್ಚಿಗೆ ಗದರಿಸಿದೆ ಎನಿಸತೊಡಗಿತು. ಅವಳು ಮೊದಲೇ ಹೆದರಿದ್ದಾಳೆ. ಮೇಲಾಗಿ ತನ್ನ ಗದರಿಕೆ ಅವಳಿಗೆ ಸಹಿಸಲು ಆಗಲಿಲ್ಲವೇನೋ? ಆ ಬಳಿಕ ಅವಳನ್ನು ಹೇಗೋ ಸಮಾಧಾನಪಡಿಸಿ, ಅವಳ ಗಾಡಿಗೆ ಏನಾಗಿದೆ ಎಂದು ನೋಡತೊಡಗಿದ. ಹರ್ಷನಿಗೆ ಗಾಡಿ ರಿಪೇರಿ ಮಾಡುವುದು ಅಷ್ಟಿಷ್ಟು ಗೊತ್ತಿತ್ತು.

“ಇದೋ ತೆಗೆದುಕೊಳ್ಳಿ. ನಿಮ್ಮ ಗಾಡಿ ಸರಿಹೋಯಿತು.”

`ತನಗೆ ಸಹಾಯ ಮಾಡಿದ ಹರ್ಷನಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದು ಅವಳಿಗೆ ಗೊತ್ತಾಗುತ್ತಿರಲಿಲ್ಲ. ಇಂದು ಮಾತ್ರ ನನ್ನ ಸಹಾಯಕ್ಕೆ ಅವನು ಬರದೇ ಹೋಗಿದ್ದರೆ ನನ್ನ ಗತಿ ಏನಾಗುತ್ತಿತ್ತು,’ ಎಂದು ಅವಳು ಯೋಚಿಸಿ ನಡುಗುತ್ತಿದ್ದಳು.

“ಬೇಡ ಬೇಡ… ನೀವು ಧನ್ಯವಾದ ಹೇಳುವ ಅಗತ್ಯವಿಲ್ಲ,” ಎಂದು ಹರ್ಷ ಹೇಳಿದಾಗ, ತ್ರಿನೇತ್ರಾಳಿಗೆ ಆಶ್ಚರ್ಯವಾಯಿತು. ತಾನು ಹೇಳಿದ್ದು ಅವನಿಗೆ ಹೇಗೆ ಗೊತ್ತಾಯಿತು ಎಂದು ಯೋಚಿಸುತ್ತಿರುವಾಗಲೇ, “ನಿಮ್ಮ ಮುಖದಲ್ಲಿನ ಭಾವನೆಗಳಿಂದ ನನಗೆ ಅದು ಗೊತ್ತಾಯಿತು,” ಎಂದು ಹೇಳಿ ಅವಳನ್ನು ನಗೆಗಡಲಲ್ಲಿ ತೇಲಿಸಿದ.

“ಗಾಡಿಯ ನೆಪದಲ್ಲಾದರೂ ಸರಿ, ನಿಮ್ಮನ್ನು ಇಂದು ಭೇಟಿಯಾಗಿ ಬಹಳ ಖುಷಿಯಾಯಿತು,” ಎಂದು ಅವಳನ್ನು ಮನಸಾರೆ ನೋಡುತ್ತಾ ಹರ್ಷ ಹೇಳಿದ.

“ನನಗೂ ಕೂಡ ನಿಮ್ಮನ್ನು ಭೇಟಿಯಾಗಿ ಬಹಳ ಖುಷಿಯಾಯಿತು,” ಎಂದು ಹೇಳುತ್ತಾ, ಕಣ್ಣುಗಳ ಮೇಲೆ ಓಲಾಡುತ್ತಿದ್ದ ಮುಂಗುರುಳನ್ನು ಕಿವಿಯ ಹಿಂದಕ್ಕೆ ಸರಿಸುತ್ತಾ ಮುಗುಳ್ನಕ್ಕಳು.

ತ್ರಿನೇತ್ರಾ  ಮನೆಗೆ ವಾಪಸ್‌ ಬಂದು ನಡೆದ ಘಟನೆಯನ್ನು ಹೇಳಲು ಹೋಗಲಿಲ್ಲ. ಏಕೆಂದರೆ ಅಮ್ಮ ಅಪ್ಪ ಟೆನ್ಷನ್ ಮಾಡಿಕೊಳ್ಳುತ್ತಾರೆ. ತನಗೆ ಗಾಡಿ ಓಡಿಸಲು ನಿರ್ಬಂಧ ಹೇರುತ್ತಾರೆ. ಆದರೆ ಅವಳು ಇನ್ಮುಂದೆ ಎಚ್ಚರಿಕೆಯಿಂದ ಇರಬೇಕೆಂದು ಮಾತ್ರ ನಿರ್ಧರಿಸಿದಳು. ಯಾರ ಮೇಲೂ ಸುಲಭವಾಗಿ ನಂಬಿಕೆ ಇಡಬಾರದೆಂದು ತನಗೆ ತಾನೇ ಹೇಳಿಕೊಂಡಳು.

ನಮ್ಮೆಲ್ಲರ ಜೀವನದಲ್ಲಿ ಒಂದು ವಿಶೇಷ ದಿನ ಬಂದೇ ಬರುತ್ತೆ. ಆ ದಿನ ನಮಗೆ ಬಹಳ ವಿಶೇಷವಾಗುತ್ತೆ. ತ್ರಿನೇತ್ರಾಳ ಜೀವನದಲ್ಲಿ ಅದು ವಿಶೇಷ ದಿನವಾಯಿತು. ಗಾಡಿ ಕೆಟ್ಟು ನಿಂತ ಕಾರಣದಿಂದ ಹರ್ಷನ ಭೇಟಿ ಆಯಿತು.

ಹರ್ಷನ ಹಸನ್ಮುಖಿ ಚಹರೆ ಅವಳ ಕಣ್ಮುಂದೆ ಬಂದಾಗ ಅವಳಿಗೆ ಅವನನ್ನು ಭೇಟಿಯಾಗಬೇಕು ಎಂಬ ಹಂಬಲ ಹೆಚ್ಚಾಗುತ್ತಿತ್ತು. ಆದರೆ ಭೇಟಿ ಆಗುವುದಾದರೂ ಹೇಗೆ? ಅವನ ವಿಳಾಸ ಗೊತ್ತಿರಲಿಲ್ಲ. ಫೋನ್‌ ನಂಬರ್‌ ಕೂಡ ತೆಗೆದುಕೊಂಡಿರಲಿಲ್ಲ.

ಅತ್ತ ಹರ್ಷನಿಗೂ ಕೂಡ ತ್ರಿನೇತ್ರಾಳ ಬಗ್ಗೆ ನೆನಪಾದಾಗ ಅವಳ ಯೋಚನೆಯಲ್ಲಿ ಕಳೆದುಹೋಗುತ್ತಿದ್ದ. ಬಳಿಕ ತನ್ನನ್ನೇ ತಾನು ಹಳಿದುಕೊಳ್ಳುತ್ತಿದ್ದ. ತಾನು ಅಂದು ಕನಿಷ್ಠ ಅವಳ ನಂಬರನ್ನಾದರೂ ಕೇಳಬೇಕಿತ್ತು ಅಲ್ವಾ?

ಇದೇ ರೀತಿ ಅವರ ಭೇಟಿಯಾಗಿ 2 ತಿಂಗಳಾಗುತ್ತಾ ಬಂದಿತ್ತು. ಆದರೂ ಒಬ್ಬರನ್ನು ಇನ್ನೊಬ್ಬರು ಮರೆತಿರಲಿಲ್ಲ. ಮತ್ತೊಮ್ಮೆ ತಮ್ಮ ಭೇಟಿಯಾಗಲಾರದ ಎಂದು ಅವರಿಬ್ಬರೂ ಯೋಚಿಸುತ್ತಿದ್ದರು.

ಅದೊಂದು ದಿನ ಆಕಸ್ಮಿಕವಾಗಿ ಇಬ್ಬರೂ ಮಾಲ್ ಒಂದರಲ್ಲಿ ಭೇಟಿಯಾದರು. ಒಬ್ಬರನ್ನೊಬ್ಬರು ನೋಡಿದಾಗ ಅವರ ಹೃದಯದಲ್ಲಾದ ಅನುಭವವನ್ನು ವಿವರಿಸಲು ಸಾಧ್ಯವಿರಲಿಲ್ಲ. ತ್ರಿನೇತ್ರಾಳಿಗೆ ಹರ್ಷನ ಸಾದಾಸೀದಾ, ಪ್ರಾಮಾಣಿಕ, ಹಸನ್ಮುಖಿ ಧೋರಣೆ ಬಹಳ ಇಷ್ಟವಾಯಿತು. ತ್ರಿನೇತ್ರಾಳ ತೆಳ್ಳನೆಯ ಕಾಯ. ಚಿನ್ನದಂಥ ಹೊಳೆಯುವ ಬಣ್ಣ, ಅಗಲವಾದ ಕಣ್ಣುಗಳು, ಕಪ್ಪು ದಟ್ಟ ಕೂದಲು, ಗುಲಾಬಿಯಂಥ ತುಟಿಯಲ್ಲರಳಿದ ಮೋಹಕ ನಗು ಹರ್ಷನಿಗೆ ಬಹಳ ಆಕರ್ಷಕವೆನಿಸಿತು.

ಆ ಬಳಿಕ ಇಬ್ಬರೂ ಅದೆಷ್ಟೋ ಸಲ ಭೇಟಿಯಾದರು. ಪರಸ್ಪರರ ಮುಂದೆ ತಮ್ಮದೆಲ್ಲವನ್ನು ಹೇಳಿಕೊಂಡರು. ಇಬ್ಬರ ಆಸಕ್ತಿ ಹಾಗೂ ಯೋಚನೆ ಸಾಕಷ್ಟು ಹೊಂದಾಣಿಕೆ ಆಗುತ್ತಿತ್ತು. ತ್ರಿನೇತ್ರಾಳ ಹಾಗೆ ಹರ್ಷನಿಗೂ ಕೂಡ ಅನ್ಯಾಯ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಯಾರನ್ನು ಅನಾವಶ್ಯಕವಾಗಿ ಹೊಗಳುವುದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಸಹಾಯ ಅಪೇಕ್ಷಿಸಿ ಬಂದವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಿದ್ದ. ಇಬ್ಬರ ಆಸಕ್ತಿ ಅನಾಸಕ್ತಿ ಎಷ್ಟು ಹೊಂದಾಣಿಕೆ ಆಗುತ್ತಿತ್ತೆಂದರೆ, ಇಬ್ಬರೂ ಪರಸ್ಪರರಿಗಾಗಿಯೇ ಸೃಷ್ಟಿಯಾಗಿದ್ದೇವೇನೋ ಎನಿಸುತ್ತಿತ್ತು.

ಒಂದು ದಿನ ಭೇಟಿಯಾಗದೆ ಇರಲು ಅವರಿಗೆ ಆಗುತ್ತಿರಲಿಲ್ಲ. ಇತ್ತೀಚಿನ ಭೇಟಿಗಳಿಂದ ತಾವು ಪರಸ್ಪರ ಆಕರ್ಷಿತರಾಗುತ್ತಿದ್ದೇವೆ ಎಂದು ಅನಿಸತೊಡಗಿತ್ತು. ಹರ್ಷನ ಯೋಚನೆ, ಅವನ ಮಾತನಾಡುವ ರೀತಿ ಅವಳಿಗೆ ಬಹಳ ಇಷ್ಟವಾಗುತ್ತಿತ್ತು.

“ನೀನ್ಹೇಗೆ ಇಷ್ಟು ಚೆನ್ನಾಗಿ ಮಾತನಾಡುತ್ತಿಯಾ?” ನಿನ್ನ ಬಳಿ ಅಂತಹ ಒಳ್ಳೆಯ ಶಬ್ದಗಳು ಹೇಗೆ ತಾನೇ ಬರುತ್ತವೆ ಎಂದು ಅವಳು ಕೇಳಿದಾಗ ಅವನು, “ಅನುಭವದಿಂದ ಅಂತಹ ಮಾತುಗಳು ಬರುತ್ತವೆ. ಜೀವನ ಮನುಷ್ಯನಿಗೆ ಎಲ್ಲವನ್ನೂ ಕಲಿಸುತ್ತದೆ. ಮಾತನಾಡುವುದನ್ನು ಕೂಡ……”

ತ್ರಿನೇತ್ರಾ ಅವನನ್ನು ತನ್ನ ಭಾವಿ ಸಂಗಾತಿ ಎಂಬಂತೆ ನೋಡಿದಳು. ಅಪ್ಪನನ್ನು ಒಪ್ಪಿಸುವುದು ಕಷ್ಟವಾಗಲಾರದು ಎಂಬುದು ಅವಳಿಗೆ ಗೊತ್ತಿತ್ತು. ಆದರೆ ಅಮ್ಮನನ್ನು ಒಪ್ಪಿಸುವುದು ಬಹಳ ಕಠಿಣ ಎಂಬುದು ಅವಳಿಗೆ ತಿಳಿದಿತ್ತು. ಹರ್ಷನ ಮಾತುಕತೆ, ಸ್ವಭಾವ ನೋಡಿ ಅವನನ್ನು ಖಂಡಿತವಾಗಿಯೂ ಒಪ್ಪಿಯೇ ಒಪ್ಪುತ್ತಾರೆ ಎನ್ನುವ ನಂಬಿಕೆ ಅವಳಿಗಿತ್ತು.

ಹರ್ಷನಿಗೆ ಮಾತ್ರ ಇದಾವುದರ ಭಯ ಇರಲಿಲ್ಲ. ಅವನ ಅಮ್ಮ ಅಪ್ಪ ಮಗನ ಖುಷಿಯನ್ನೇ ತಮ್ಮ ಖುಷಿಯೆಂದು ಭಾವಿಸುತ್ತಿದ್ದರು. ಆದರೆ ಹರ್ಷನಿಗೆ ತನ್ನ ಇಬ್ಬರು ತಂಗಿಯರ ಕಾಳಜಿ ಮಾತ್ರ ಇತ್ತು. ಮನೆಯಲ್ಲಿ ದುಡಿಯುವವರು ಅಪ್ಪ ಮಾತ್ರ. ಉಳಿದವರು ಕುಳಿತು ತಿನ್ನುವವರು. ಎಷ್ಟೋ ಸಲ ಅಮ್ಮನ ಮುಂದೆ, “ಅಮ್ಮ ನಾನೂ ಯಾವುದಾದರೂ ಕೆಲಸ ಮಾಡ್ತೀನಿ. ಅಪ್ಪನಿಗೆ ನೆರವಾಗ್ತೀನಿ. ಅವರೇ ಕುಟುಂಬದ ಜವಾಬ್ದಾರಿ ಎಷ್ಟು ದಿನ ಅಂತಾ ಹೊರುತ್ತಾರೆ?” ಎಂದು ಕೇಳುತ್ತಿದ್ದ.

ಹರ್ಷನ ಅಪ್ಪ, “ನೀನು ಈಗಲೇ ಕೆಲಸ ಮಾಡುವುದು ಬೇಡ. ನೀನೀಗ ಓದುವುದರ ಬಗ್ಗೆ ಗಮನಕೊಡು,” ಎಂದು ಹೇಳುತ್ತಿದ್ದರು. ಮಗ ವಿದೇಶದಲ್ಲಿ ವ್ಯಾಸಂಗ ಮಾಡಬೇಕು. ಒಳ್ಳೆಯ ಭವಿಷ್ಯ ಕಂಡುಕೊಳ್ಳಬೇಕು ಎಂದು ಅಪ್ಪ ಅವನ ಬಗ್ಗೆ ಕನಸು ಕಟ್ಟಿಕೊಂಡಿದ್ದರು.

ತ್ರಿನೇತ್ರಾ ತನ್ನ ಹಾಗೂ ಹರ್ಷನ ಬಗ್ಗೆ ಅಮ್ಮನ ಮುಂದೆ ಹೇಳಬೇಕೆಂದುಕೊಂಡಾಗಲೇ ಅವರು ಅವಳ ಮುಂದೆ ಒಂದು ಫೋಟೋ ಹಿಡಿದು ಹೇಳಿದರು, “ಇವನು ಅಮೆರಿಕಾದಲ್ಲಿರುವ ನನ್ನ ಗೆಳತಿಯ ಮಗ. ಇವನೊಂದಿಗೆ ನಿನ್ನ ಮದುವೆ ಮಾಡುವುದು ನನ್ನ ಅಪೇಕ್ಷೆ,” ಎಂದು ಹೇಳಿದರು.

“ಆದರೆ ಮಮ್ಮಿ, ನಾನು ಅವನೊಂದಿಗೆ ಮದುವೆ ಮಾಡಿಕೊಳ್ಳಲು ಆಗದು. ಏಕೆಂದರೆ ನಾನು ಬೇರೊಬ್ಬನನ್ನು ಪ್ರೀತಿಸುತ್ತೇನೆ,”  ಎಂದು ಅವಳು ಅಮ್ಮನ ಮುಂದೆ ತನ್ನ ಹಾಗೂ ಹರ್ಷನ ಬಗೆಗೆ ಎಲ್ಲ ವಿಷಯ ತಿಳಿಸಿದಳು.

ತ್ರಿನೇತ್ರಾಳ ಮಾತಿಗೆ ಅಪ್ಪನಿಗೆ ಯಾವ ವಿರೋಧ ಇರಲಿಲ್ಲ. ಆದರೆ ಮಗಳ ಮಾತು ಅಮ್ಮನನ್ನು ಕೆರಳಿಸಿಬಿಟ್ಟಿತು.

“ಮೊದಲು ನೀನು ಹೇಳಿದ ಹುಡುಗನನ್ನು ನಾನು ಭೇಟಿಯಾಗ್ತೀನಿ. ಅವನು ನಿನಗೆ ಸೂಕ್ತ ವರನೊ ಅಲ್ಲವೋ ಎನ್ನುವುದನ್ನು ನಾನು ನಿರ್ಧರಿಸ್ತೀನಿ,” ಎಂದು ಹೇಳಿದರು.

ಹರ್ಷನ ಜೊತೆ ಭೇಟಿಯಾಗಿ ಮಾತಾಡಿ, ಅಮ್ಮ ಖಚಿತವಾಗಿಯೂ ಅವನನ್ನು ಒಪ್ಪಿಯೇ ಒಪ್ಪುತ್ತಾರೆ ಎಂಬ ನಂಬಿಕೆ ತ್ರಿನೇತ್ರಾಳಿಗೆ  ಇತ್ತು. ಏಕೆಂದರೆ ತಾನು ಪ್ರೀತಿಸುತ್ತಿರುವ ಹರ್ಷ ಬಹಳ ಒಳ್ಳೆಯ ಹುಡುಗ ಎಂಬ ನಂಬಿಕೆ ಅವಳಿಗಿತ್ತು. ತ್ರಿನೇತ್ರಾಳ ಅಮ್ಮ ಅಪ್ಪ ತನ್ನನ್ನು ಒಪ್ಪುತ್ತಾರೋ, ಇಲ್ಲವೋ ಎಂಬ ದ್ವಂದ್ವ ಹರ್ಷನಿಗೂ ಇತ್ತು. ಒಂದು ವೇಳೆ ತಾನು ಅವರಿಗೆ ಇಷ್ಟವಾಗದಿದ್ದರೆ? ಎಂದು ಯೋಚಿಸುತ್ತಿರುವಾಗಲೇ ತ್ರಿನೇತ್ರಾಳ ಹಠಕ್ಕೆ ಒಪ್ಪಿ ಅವಳ ಜೊತೆ ಅವಳ ಮನೆಗೆ  ಹೋಗಲೇಬೇಕಾಯ್ತು.

ದಾರಿಯುದ್ದಕ್ಕೂ ತ್ರಿನೇತ್ರಾ ಹರ್ಷನಿಗೆ ಅಮ್ಮ ಅಪ್ಪನ ಜೊತೆ ಹೇಗೆ ಮಾತನಾಡಬೇಕೆಂದು ತಿಳಿಸಿದಳು. ಅವರನ್ನು ಹೇಗೆ ಇಂಪ್ರೆಸ್‌ ಮಾಡಬೇಕೆಂದು ಹೇಳಿಕೊಟ್ಟಳು. ಆದಾಗ್ಯೂ ಹರ್ಷನ ಹೃದಯದಲ್ಲಿ ಅವರು ತನ್ನನ್ನು ಒಪ್ಪದಿದ್ದರೆ? ತಾನು ಅವರನ್ನು ಇಂಪ್ರೆಸ್‌ ಮಾಡುವಲ್ಲಿ ವಿಫಲನಾದರೆ ಏನು ಮಾಡುವುದು? ಎಂಬ ಚಿಂತೆ ಅವನನ್ನು ಕಾಡುತ್ತಿತ್ತು.

ಅವನು ಬಹಳಷ್ಟು ಗಾಬರಿಗೊಂಡಿದ್ದ. ಆದರೆ ತ್ರಿನೇತ್ರಾಳ ಅಪ್ಪನನ್ನು ಭೇಟಿಯಾದಾಗ ಅವರನ್ನು ತಾನು ಮೊದಲ ಸಲ ಭೇಟಿಯಾಗುತ್ತಿದ್ದೇನೆ ಎಂದು ಅವನಿಗೆ ಅನಿಸಲೇ ಇಲ್ಲ. ಹರ್ಷನಂತಹ ನಗುಮೊಗದ ವ್ಯಕ್ತಿಯನ್ನು ಭೇಟಿಯಾಗಿ ಅವಳ ಅಪ್ಪನಿಗೆ ಬಹಳ ಖುಷಿಯಾಗಿತ್ತು.

ಬಹಳ ದಿನಗಳ ನಂತರ ತನಗೆ ಬೇಕಾದ ಒಬ್ಬ ವ್ಯಕ್ತಿಯನ್ನು ಭೇಟಿಯಾದ ಖುಷಿ ಅವಳ ತಂದೆಗಿತ್ತು. ಆದರೆ ಅವಳ ಅಮ್ಮ ಹರ್ಷ ತನ್ನ ಮಗಳಿಗೆ ಸೂಕ್ತ ಆಗುತ್ತಾನೊ, ಇಲ್ಲವೋ ಎಂದು ತೂಗಿ ನೋಡುತ್ತಿದ್ದರು.

ಅವನ ಸಾಧಾರಣ ಉಡುಗೆ ತೊಡುಗೆ, ಮಾತುಕತೆಯ ರೀತಿ ತನ್ನ ಮಗಳಿಗೆ ಸೂಕ್ತ ಎಂಬಂತೆ ಅನಿಸುತ್ತಿರಲಿಲ್ಲ. ಆದರೆ ಅವರು ಈ ವಿಷಯವನ್ನೆಲ್ಲ ಮಾತಿನ ಮುಖಾಂತರ ಹೇಳಿರಲಿಲ್ಲ. ಏಕೆಂದರೆ ಮೊದಲು ಅವರು ಹರ್ಷ ಹಾಗೂ ಅವನ ಕುಟುಂಬದವರ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಿದ್ದರು. ಅವನ ಮನೆಯಲ್ಲಿ ಯಾರು ಯಾರಿದ್ದಾರೆ ಅಪ್ಪ ಏನು ಮಾಡುತ್ತಾರೆ? ಅಮ್ಮ ಏನು ಮಾಡುತ್ತಾರೆ? ಹುಡುಗನ ಚಾರಿತ್ರ್ಯ ಹೇಗಿದೆ? ಕುಟುಂಬದ ಯಾರ ವಿರುದ್ಧವಾದರೂ ಕ್ರಿಮಿನಲ್ ರೆಕಾರ್ಡ್‌ ಗಳು ಇವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತ್ರಿನೇತ್ರಾಳ ಅಮ್ಮ ಪ್ರೀ ಮ್ಯಾಟ್ರಿಮೋನಿಯಲ್ ಇನ್‌ ವೆಸ್ಟಿಗೇಶನ್‌ ಮಾಡಲು ಇಚ್ಛಿಸುತ್ತಿದ್ದರು. ಆಮೇಲೆ ಏನು ಮಾಡಬೇಕೋ ಅದನ್ನೇ ಮಾಡೋದು. ಸಾಮಾನ್ಯವಾಗಿ ಕೆಲವರು ಸಾದಾಸೀದಾ ಎಂದು ಹೇಳಿಕೊಳ್ಳುತ್ತಾ ಇತರರನ್ನು ತಮ್ಮ ಜಾಲದಲ್ಲಿ ಸಿಲುಕಿಸುತ್ತಾರೆ ಎನ್ನುವುದು ಅಮ್ಮನ ಅಭಿಪ್ರಾಯವಾಗಿತ್ತು. ಕೊನೆಗೊಮ್ಮೆ ಅವರು ಡಿಟೆಕ್ಟಿವ್ ಏಜೆನ್ಸಿಯೊಂದರ ಸಹಾಯ ಪಡೆದರು.

(ಮುಂದುರಿಯುವುದು)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ