ಹವಾಮಾನ ಬದಲಾಗುತ್ತಿದ್ದಂತೆ ಕೆಲವರು ಋತುಮಾನದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಶೀತನೆಗಡಿ, ಜ್ವರ ಅವರನ್ನು ಬಹುಬೇಗ ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳುತ್ತವೆ. ಇಂತಹ ಸ್ಥಿತಿಯಲ್ಲಿ ಅವರು ನಮಗೇ ಏಕೆ ಹೀಗಾಗುತ್ತಿದೆ ಎಂದು ಯೋಚಿಸುತ್ತಾರೆ. ನಮ್ಮ ಡಯೆಟ್‌ ಚೆನ್ನಾಗಿದ್ದರೂ ಹೀಗೇಕಾಗುತ್ತಿದೆ ಎನ್ನುವುದು ಅವರ ಪ್ರಶ್ನೆ. ಕೇವಲ ತಿಂದರಷ್ಟೇ ಸಾಲದು, ಆರೋಗ್ಯಕರ ಪದಾರ್ಥಗಳನ್ನು ನಿಮ್ಮ ಡಯೆಟ್‌ ನಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಏಕೆಂದರೆ ನಿಮ್ಮ ರೋಗ ನಿರೋಧಕ ಶಕ್ತಿ ವರ್ಧಿಸಬೇಕು.

ನಿಮ್ಮ ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ, ನೀವು ರೋಗಗಳೊಂದಿಗೆ ಹೋರಾಡಲು ಸಮರ್ಥರಾಗುವಿರಿ. ಅದಕ್ಕಾಗಿ ನೀವು ನಿಮ್ಮ ಡಯೆಟ್‌ ನಲ್ಲಿ ಜೂಸ್‌ ಸೇರ್ಪಡೆ ಮಾಡಿಕೊಳ್ಳಿ. ಅದು ನಿಮ್ಮನ್ನು ಫಿಟ್‌ ಆಗಿಡುವುದರ ಜೊತೆ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನೂ ಇನ್ನಷ್ಟು ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೂಸ್‌ ಗಳ ಬಗ್ಗೆ ತಿಳಿದುಕೊಳ್ಳಿ.

ವೆಜಿಟೆಬಲ್/ ಫ್ರೂಟ್ಜೂಸ್

`ನನಗೆ ಹಣ್ಣು ಹಾಗೂ ತರಕಾರಿಗಳು ಇಷ್ಟವಿಲ್ಲ,’ ಎಂದು ಹೇಳುವುದನ್ನು ನೀವು ಅನೇಕ ಮನೆಗಳಲ್ಲಿ ಕೇಳಿರಬಹುದು. `ನನಗೆ ಹೊರಗಿನ ಅದರಲ್ಲೂ ಫಾಸ್ಟ್ ಫುಡ್‌ ತಿನ್ನುವುದೆಂದರೆ ಬಹಳ ಇಷ್ಟ,’ ಎನ್ನುವುದನ್ನು ಸಹ ಕೇಳಿರಬಹುದು. ಇಂತಹ ಸ್ಥಿತಿಯಲ್ಲಿ ಅಂಥವರಿಗೆ ವೆಜಿಟೆಬಲ್ ಹಾಗೂ ಫ್ರೂಟ್‌ ಜೂಸ್‌ ಉತ್ತಮ ಆಯ್ಕೆ. ಏಕೆಂದರೆ ಅವರಿಗೆ ಜೂಸ್‌ ನ ಮುಖಾಂತರ ಹಣ್ಣುಗಳು ಹಾಗೂ ತರಕಾರಿಗಳು ಕೂಡ ದೊರಕುತ್ತವೆ. ಅದರಿಂದಾಗಿ ಅವರಿಗೆ ಅತ್ಯವಶ್ಯ ಪೋಷಕಾಂಶಗಳು ದೊರಕುವುದರ ಜೊತೆ ಜೊತೆಗೆ ಅವರ ರೋಗ ನಿರೋಧಕ ಶಕ್ತಿಯೂ ವರ್ಧಿಸುತ್ತದೆ.

ಈ ಜೂಸ್‌ ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತಿನ ತನಕ ತುಂಬಿಡುವಂತಿರುತ್ತದೆ. ಇದರಿಂದಾಗಿ ಹೊಟ್ಟೆಯ ಆರೋಗ್ಯದ ಜೊತೆ ಜೊತೆಗೆ ನಿಮ್ಮ ಸಂಪೂರ್ಣ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಇದು ಪ್ರತಿಯೊಂದು ವಯಸ್ಸಿನವರಿಗೂ ಪರ್ಫೆಕ್ಟ್ ಆಗಿರುತ್ತದೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗಂತೂ ತುಂಬಾ ಒಳ್ಳೆಯದು. ಏಕೆಂದರೆ ಪೋಷಕರು, ತಮ್ಮ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸುವುದು ಬಹಳ ಕಷ್ಟಕರವಾಗಿ ಪರಿಣಮಿಸಿದೆ. ಇಂಥದರಲ್ಲಿ ಜೂಸ್‌ ರುಚಿಕರ ಆಗಿರುವ ಕಾರಣದಿಂದ ಅವರು, ವಿಟಮಿನ್‌ ಹಾಗೂ ಮಿನರಲ್ ಗಳ ಕೊರತೆಯನ್ನು ನೀಗಿಸಿ ಅವರನ್ನು ಆರೋಗ್ಯದಿಂದಿಡುವ ಕೆಲಸ ಮಾಡುತ್ತದೆ. ಇವು ಆ್ಯಂಟಿ ಆಕ್ಸಿಡೆಂಟ್‌ ಗಳಿಂದ ಸಮೃದ್ಧವಾಗಿರುವ ಕಾರಣದಿಂದ ಅವರಲ್ಲಿ ಇಡೀ ದಿನ ಶಕ್ತಿ ಸ್ಛೂರ್ತಿ ತುಂಬುತ್ತವೆ.

ಅವುಗಳಿಂದ ಕರುಳು ಸ್ವಚ್ಛವಾಗುವುದರ ಜೊತೆಗೆ ದೇಹವನ್ನು ಡೀಟಾಕ್ಸ್ ಮಾಡುವ ಕೆಲಸ ಮಾಡುತ್ತವೆ. ಅದರಿಂದ ದೇಹ ಆಂತರಿಕವಾಗಿ ಆರೋಗ್ಯದಿಂದ ಇರುವುದರ ಮೂಲಕ ನಿಮ್ಮನ್ನು ರೋಗಗಳಿಂದ ಕಾಪಾಡುತ್ತದೆ. ಇವು ನಿಮ್ಮ ಅನಾರೋಗ್ಯಕರ ಸ್ನ್ಯಾಕ್ಸ್ ಚಟವನ್ನು ಬಿಡಿಸಿ, ನಿಮಗೆ ಇಡೀ ದಿನ ಹಗುರವಾಗಿರುವ ಅನುಭವ ದೊರಕಿಸಿಕೊಡುತ್ತವೆ.

ಇಮ್ಯುನಿಟಿ ಬೂಸ್ಟರ್ಜೂಸ್ಬಗ್ಗೆ ಅರಿಯಿರಿ :

ಟೊಮೇಟೊ ಜೂಸ್

Tomato

ಟೊಮೇಟೊ ಲೈಕೊಪಿನ್‌ ಎಂಬ ಆ್ಯಂಟಿ ಆಕ್ಸಿಡೆಂಟ್‌ ನಿಂದ ಸಮೃದ್ಧವಾಗಿರುವ ಕಾರಣದಿಂದ ರೋಗ ನಿರೋಧಕ ಶಕ್ತಿಯನ್ನು ಬೂಸ್ಟ್ ಮಾಡುವುದರ ಜೊತೆಗೆ, ನಿಮ್ಮ ಆರೋಗ್ಯಕ್ಕೂ ಚಮತ್ಕಾರಿ ರೀತಿಯಲ್ಲಿ ಕೆಲಸ ಮಾಡುತ್ತದೆ.

ಇದರಲ್ಲಿ `ಲೈಕೋಪಿನ್‌’ ಎಂಬ ಅಂಶ ಹೊಂದಿದ್ದು, ನಿಮ್ಮ ಜೀವಕೋಶಗಳನ್ನು ಫ್ರೀ ರಾಡಿಕಲ್ಸ್ ನಿಂದ ರಕ್ಷಿಸಿ, ಊತ ಉಂಟಾಗುವಿಕೆಯನ್ನು ಕಡಿಮೆಗೊಳಿಸುತ್ತದೆ. ಇದು ಕ್ಯಾನ್ಸರ್‌ ನಿಂದ ರಕ್ಷಿಸುವುದರ ಜೊತೆಗೆ ಹೃದಯದ ಬಗೆಗೂ ಕಾಳಜಿ ವಹಿಸುತ್ತದೆ. ಏಕೆಂದರೆ ಇದರಲ್ಲಿ ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ, ಮಿನರಲ್ಸ್, ಹೃದಯಕ್ಕೆ ಒಳ್ಳೆಯದೆಂದು ಹೇಳಲಾಗುತ್ತದೆ. ಇದರಲ್ಲಿ ವಿಟಮಿನ್‌ `ಬಿ’ ಹಾಗೂ ಫಾಲೆಟ್‌ ಇರುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿಡುವ ಕೆಲಸ ಮಾಡುತ್ತದೆ.

ಹೇಗೆ ತಯಾರಿಸುವುದು?

ಸಾಮಗ್ರಿ : 3-4 ಟೊಮೇಟೊ, ಸ್ವಲ್ಪ ಹುರಿದ ಜೀರಿಗೆ, ಒಂದೆರಡು ಎಸಳು ಜಜ್ಜಿದ ಬೆಳ್ಳುಳ್ಳಿ.

ವಿಧಾನ : ಎಲ್ಲಕ್ಕೂ ಮುಂಚೆ ಟೊಮೇಟೊಗಳನ್ನು ಕುದಿಸಿ ತಂಪು ಮಾಡಿಟ್ಟುಕೊಳ್ಳಿ. ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡು ಬಸಿದಿಟ್ಟುಕೊಳ್ಳಿ. ಜೊತೆಗೆ ಅದರಲ್ಲಿ ಒಂದಿಷ್ಟು ನೀರು ಸೇರಿಸಿ. ಇದಾದ ಬಳಿಕ ಒಂದು ಪಾತ್ರೆಯಲ್ಲಿ ಜಜ್ಜಿದ ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಬಳಿಕ ಅದರಲ್ಲಿ ಟೊಮೇಟೊ ಸೂಪ್‌ ಹಾಕಿ ಸ್ವಲ್ಪ ಹೊತ್ತು ಚಮಚದಿಂದ ಅಲ್ಲಾಡಿಸುತ್ತಾ ಇರಿ. ರುಚಿ ಹೆಚ್ಚಿಸಲು ಅದಕ್ಕೆ ಜೀರಿಗೆ ಪುಡಿ ಸೇರಿಸಿ.

ನೀವು ಇಷ್ಟಪಟ್ಟರೆ ಇದನ್ನು ಬಿಸಿ ಬಿಸಿಯಾಗಿಯೂ ಕುಡಿಯಬಹುದು. ಇಲ್ಲದಿದ್ದರೆ ತಣ್ಣಗೆ ಮಾಡಿಯೂ ಕುಡಿಯಬಹುದು. ಇದರಿಂದ ನಿಮಗೆ ವಿಟಮಿನ್‌ `ಎ, ಬಿ, ಸಿ.’ ಪೊಟ್ಯಾಶಿಯಂ, ಮೆಗ್ನೀಷಿಯಂ ಲಭಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಇನ್ ಫ್ಲೇಮೆಟರಿ ಪ್ರಾಪರ್ಟೀಸ್‌ ಇರುವ ಕಾರಣದಿಂದ ಈ ಜೂಸ್‌ ನಿಮಗೆ ಸಾಕಷ್ಟು ಉಪಯುಕ್ತವಾಗಿ ಪರಿಣಮಿಸುತ್ತದೆ.

ಕ್ಯಾರೆಟ್‌, ಸೇಬು, ಕಿತ್ತಳೆ ಜೂಸ್

Gajar-Seb-Santara

ಈ ಮೂರರ ಮಿಶ್ರಣ ನಿಮಗೆ ರೋಗಗಳೊಂದಿಗೆ ಹೋರಾಡಲು ಬಹಳ ಸಹಾಯಕಾರಿ ಆಗಿ ಪರಿಣಮಿಸುತ್ತದೆ. ಏಕೆಂದರೆ ಸೇಬು ಮತ್ತು ಕಿತ್ತಳೆ ವಿಟಮಿನ್‌ `ಸಿ’ಯ ಸಮೃದ್ಧ ಮೂಲಗಳಾಗಿವೆ. ಅದರ ಜೊತೆಗೆ ಕ್ಯಾರೆಟ್‌ ನಲ್ಲಿ ವಿಟಮಿನ್‌ `ಎ’ ಹಾಗೂ ವಿಟಮಿನ್‌ಬಿ6 ಇರುವ ಕಾರಣದಿಂದ ಇಮ್ಯೂನ್‌ ಸೆಲ್ಸ್ ರೂಪುಗೊಳ್ಳುವುದರ ಜೊತೆ ಜೊತೆಗೆ, ಆ್ಯಂಟಿಬಾಡೀಸ್‌ ನಿರ್ಮಾಣಗೊಳ್ಳಲು ನೆರವಾಗುತ್ತವೆ. ಹೀಗಾಗಿ ಇದನ್ನು `ಇಮ್ಯುನಿಟಿ ಬೂಸ್ಟರ್‌ ಡ್ರಿಂಕ್‌’ ಎಂದು ಕರೆದರೆ ತಪ್ಪಾಗುವುದಿಲ್ಲ.

ಹೇಗೆ ತಯಾರಿಸುವುದು?

ಬೇಕಾಗುವ ಸಾಮಾಗ್ರಿ : 2 ಕ್ಯಾರೆಟ್‌ ತುರಿದಿಟ್ಟುಕೊಂಡದ್ದು, 2 ಸೇಬು, 3 ಕಿತ್ತಳೆ ಸಿಪ್ಪೆ ಸುಲಿದದ್ದು.

ವಿಧಾನ : ಎಲ್ಲಾ ಸಾಮಗ್ರಿಗಳನ್ನು ಜೂಸರ್‌ ನಲ್ಲಿ ಹಾಕಿಟ್ಟುಕೊಂಡು ಜೂಸ್‌ ಮಾಡಿಕೊಳ್ಳಿ. ಬಳಿಕ ಅದರಲ್ಲಿ ರುಚಿ ಹೆಚ್ಚಿಸಲು ಚಾಟ್ ಮಸಾಲಾ, ಸೈಂಧವ ಲವಣ ಹಾಕಿ ಸರ್ವ್ ಮಾಡಿ. ಇದರಿಂದ ನಿಮಗೆ ವಿಟಮಿನ್‌ `ಸಿ, ಎ, ಬಿ6, ಬಿ12, ಪೊಟ್ಯಾಶಿಯಂ, ಫೈಬರ್ ಆ್ಯಂಟಿ ಆಕ್ಸಿಡೆಂಟ್ಸ್ ದೊರಕುತ್ತದೆ. ಅವು ನಿಮ್ಮನ್ನು ಆರೋಗ್ಯದಿಂದಿಡಲು ಸಹಾಯವಾಗುತ್ತವೆ.

ಕಲ್ಲಂಗಡಿ, ಪಡವಲ ಜೂಸ್

watermelon-lauki

ಇವುಗಳಲ್ಲಿ ಶೇ.90ರಷ್ಟು ನೀರಿನಂಶ ಇರುವುದರಿಂದ ಇವು ನಿಮ್ಮನ್ನು ತಾಜಾತನದಿಂದ ಇಡುವುದರ ಜೊತೆ ಜೊತೆಗೆ ಇದರಲ್ಲಿರುವ ಬಹಳಷ್ಟು ಪೋಷಕಾಂಶಗಳು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುವ ಕೆಲಸ ಮಾಡುತ್ತದೆ. ಜೊತೆಗೆ ಇದು ರುಚಿಯಾಗಿರುವುದರಿಂದ, ಅದನ್ನು ನಿಮ್ಮ ಡಯೆಟ್‌ ನಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು.

ನಿಮಗೆ ಮಲಬದ್ಧತೆ, ಡಯಾಬಿಟಿಸ್‌ ತೊಂದರೆ ಇದ್ದರೆ, ನೀವು ಈ ಜೂಸ್‌ ನ್ನು ನಿಮ್ಮ ಡಯೆಟ್‌ ನಲ್ಲಿ ಸೇರಿಸಿಕೊಳ್ಳಿ. ಪಡವಲ ಸ್ಯಾಚ್ಯುರೇಟೆಡ್‌ ಫ್ಯಾಟ್‌ ಹಾಗೂ ಕಡಿಮೆ ಕೊಲೆಸ್ಟ್ರಾಲ್ ಹೊಂದಿದೆಯಲ್ಲದೆ, ನಾರಿನಂಶ ಹೇರಳವಾಗಿದೆ. ಅದರಿಂದ ನಿಮಗೆ ಪೋಷಕಾಂಶಗಳು ದೊರಕುತ್ತವೆ ಹಾಗೂ ನಿಮ್ಮ ರೋಗ ನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ಇದರಲ್ಲಿ ಕಬ್ಬಿಣಾಂಶ, ಮಿನರಲ್, ವಿಟಮಿನ್‌ ಬಿ, ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಕಾರಣದಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ.

ಹೇಗೆ ತಯಾರಿಸುವುದು?

ಸಾಮಗ್ರಿ : 1 ಕಪ್‌ ಬೇಯಿಸಿ ರುಬ್ಬಿಟ್ಟುಕೊಂಡ ಪಡವಲ, 1 ಕಪ್‌ ತುಂಡುಗಳಾಗಿಸಿಕೊಂಡ ಕಲ್ಲಂಗಡಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಸೈಂಧವ ಲವಣ, ಸ್ವಲ್ಪ ಹುರಿದುಕೊಂಡ ಜೀರಿಗೆ ಪುಡಿ.

ವಿಧಾನ : ಎಲ್ಲ ಸಾಮಗ್ರಿಗಳನ್ನು ಜೂಸರ್‌ ನಲ್ಲಿ ಹಾಕಿಟ್ಟುಕೊಂಡು ಸ್ಮೂತ್‌ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಅದನ್ನು ಜೀರಿಗೆ ಪೌಡರ್ ನಿಂದ ಗಾರ್ನೀಶ್‌ ಮಾಡಿ ಸರ್ವ್ ಮಾಡಿ. ಇದರಿಂದ ನಿಮಗೆ ಮೆಗ್ನೀಷಿಯಂ, ಝಿಂಕ್‌, ಕಬ್ಬಿಣಾಂಶ, ಗುಡ್‌ ಫ್ಯಾಟ್‌, ವಿಟಮಿನ್‌ ಬಿ5, ಬಿ6 ದೊರಕುತ್ತದೆ. ಈ ಡ್ರಿಂಕ್‌ ನಿಮ್ಮ ಆಂತರಿಕ ದುರ್ಬಲತೆಯನ್ನು ನಿವಾರಿಸಿ ನಿಮ್ಮನ್ನು ಆರೋಗ್ಯದಿಂದಿಡಲು ನೆರವಾಗುತ್ತದೆ.

ಸೌತೆಕಾಯಿ/ಪೈನಾಪಲ್ ಜೂಸ್

ಪೈನಾಪಲ್ ನಲ್ಲಿ ಬ್ರೊಮೆಲೈನ್‌ ಎಂಜೈಮ್ಸ್ ಇರುತ್ತವೆ. ಅವು ನೋವು ಮತ್ತು ಊತದೊಂದಿಗೆ ಹೋರಾಡಲು ನೆರವಾಗುತ್ತವೆ. ಜೊತೆಗೆ ಇದು ವಿಟಮಿನ್‌ `ಸಿ’ಯ ಉತ್ತಮ ಮೂಲವಾಗಿರುವ ಕಾರಣದಿಂದ ನಿಮ್ಮ ಇಮ್ಯುನಿಟಿಯನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಅದೇ ಸೌತೆಕಾಯಿಯಲ್ಲಿ ಶೇ.95ರಷ್ಟು ಭಾಗ ನೀರು ಇರುವ ಕಾರಣದಿಂದ ಅದು ನಿಮ್ಮನ್ನು ಹೈಡ್ರೇಟ್‌ ಆಗಿಡಲು ಸಹಾಯ ಮಾಡುತ್ತದೆ.

ಇದರಲ್ಲಿ ವಿಟಮಿನ್‌ `ಎ’ಯ ಉಪಸ್ಥಿತಿ ನಿಮ್ಮ ರೋಗ ನಿರೋಧಕ ಶಕ್ತಿ ಸಾಮರ್ಥ್ಯವನ್ನು ಬಲಪಡಿಸುವುದರ ಜೊತೆಗೆ, ನಿಮ್ಮ ಕಿಡ್ನಿ, ಶ್ವಾಸಕೋಶ, ಹೃದಯದ ಕೆಲಸಗಳು ಸಮರ್ಪಕವಾಗಿ ನಡೆಯಲು ನೆರವಾಗುತ್ತದೆ.

ಹೇಗೆ ತಯಾರಿಸುವುದು?

ಸಾಮಗ್ರಿ : 1 ಚಿಕ್ಕ ಸೌತೆಕಾಯಿ, 2 ದೊಡ್ಡ ತುಂಡು ಪೈನಾಪಲ್, ಒಂದೆರಡು ಎಲೆ ಪುದೀನಾ, ಅರ್ಧ ನಿಂಬೆಹಣ್ಣಿನ ರಸ, ಸೈಂಧವ ಲವಣ.

ವಿಧಾನ : ಎಲ್ಲ ಸಾಮಗ್ರಿಗಳನ್ನು ಬ್ಲೆಂಡ್‌ ಮಾಡಿ ಹಾಗೂ ಅದರಲ್ಲಿ ಸ್ವಲ್ಪ ನೀರು ಬೆರೆಸಿ ತಕ್ಷಣವೇ ಸರ್ವ್ ಮಾಡಿ. ಇದರಿಂದ ನಿಮಗೆ ವಿಟಮಿನ್‌, `ಎ, ಕೆ, ಬಿ, ಸಿ,’ ಝಿಂಕ್‌, ಕ್ಯಾಲ್ಶಿಯಂ ದೊರಕುತ್ತದೆ. ಈ ಜೂಸ್‌ ನಿಮ್ಮ ರೋಗ ನಿರೋಧಕ ಶಕ್ತಿಯ ಜೊತೆಗೆ, ನಿಮ್ಮ ತ್ವಚೆಯ ಆರೋಗ್ಯಕ್ಕೂ ಉತ್ತಮ.

ಬೀಟ್ರೂಟ್ಜೂಸ್

Beetroot

ಬೀಟ್‌ ರೂಟ್‌ ಗುಡ್‌ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಹೆಚ್ಚಿಸುವ ಜೊತೆ ಜೊತೆಗೆ, ನಿಮ್ಮ ಹೊಟ್ಟೆಯ ಆರೋಗ್ಯವನ್ನೂ ಸಮರ್ಪಕವಾಗಿಡುತ್ತದೆ. ಇದು ವಿಟಮಿನ್‌ `ಸಿ’ ಯಿಂದ ಸಮೃದ್ಧವಾಗಿರುವ ಕಾರಣದಿಂದ ಇದು ನಿಮ್ಮ ಬಲವಾದ ರೋಗ ನಿರೋಧಕ ಶಕ್ತಿಗೆ ಉತ್ತಮ ಎಂದು ಹೇಳಲಾಗುತ್ತದೆ. ಇವಗಳಲ್ಲಿರುವ ಮಿನರಲ್ಸ್ ನಿಮ್ಮ ಹಲ್ಲುಗಳನ್ನು ಆರೋಗ್ಯದಿಂದಿಡಲು ನೆರವಾಗುತ್ತದೆ.

ಅಷ್ಟೇ ಅಲ್ಲ, ರಕ್ತ ಸಂಚಲನೆಯನ್ನು ಇನ್ನಷ್ಟು ವೇಗಗೊಳಿಸುವುದರ ಜೊತೆಗೆ ಹಿಮೊಗ್ಲೋಬಿನ್‌ ನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅದರಿಂದ ನಿಮಗೆ ದಣಿವು ಹಾಗೂ ನಿಶ್ಶಕ್ತಿ ಉಂಟಾಗುವುದಿಲ್ಲ ಮತ್ತು ನಿಮ್ಮ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ.

ಹೇಗೆ ತಯಾರಿಸುವುದು?

ಸಾಮಗ್ರಿ : 1-2 ಮಧ್ಯಮ ಗಾತ್ರದ ಬೀಟ್‌ ರೂಟ್‌, ಹಸಿಶುಂಠಿಯ ತುಂಡು, ಕೆಲವು ಹನಿ ನಿಂಬೆರಸ ಮತ್ತು ಸೈಂಧವ ಲವಣ.

ವಿಧಾನ : ಎಲ್ಲಕ್ಕೂ ಮೊದಲು ಬೀಟ್‌ ರೂಟ್‌ ಮತ್ತು ಹಸಿಶುಂಠಿಯ ಸಿಪ್ಪೆ ಹೆರೆದುಕೊಂಡು, ಜೂಸರ್‌ ನಲ್ಲಿ ಹಾಕಿಕೊಂಡು, ಜೂಸ್ ತಯಾರಿಸಿಕೊಳ್ಳಿ. ಬಳಿಕ ಅದರಲ್ಲಿ ನಿಂಬೆರಸ ಮತ್ತು ಸೈಂಧವ ಲವಣ ಹಾಕಿಕೊಂಡು ಸರ್ವ್ ಮಾಡಿ. ಈ ಜೂಸ್‌ ನಿಂದ ನಿಮಗೆ ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್‌ `ಎ, ಸಿ,’ ಫಾಲಿಕ್‌ ಆ್ಯಸಿಡ್‌, ಮೆಗ್ನೀಷಿಯಂ, ಪೊಟ್ಯಾಶಿಯಂ ಸಿಗುತ್ತದೆ. ಇದು ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಕ್ಯಾನ್ಸರ್‌ ನಿಂದ ರಕ್ಷಿಸುತ್ತದೆ. ಇದು ಹೃದಯಕ್ಕೂ ಒಳ್ಳೆಯದು. ಪ್ರತಿದಿನ ಈ ಜೂಸ್ ಕುಡಿಯುವುದರಿಂದ ನಿಮಗೆ ತಕ್ಷಣವೇ ಬದಲಾವಣೆ ಆಗಿರುವುದು ಅರಿವಿಗೆ ಬರುತ್ತದೆ.

ದಿನಕ್ಕೆಷ್ಟು ಜೂಸ್ಕುಡಿಯಬೇಕು?

ನೀವು ನಿಮ್ಮ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಬಯಸುವಿರಾದರೆ, 1 ಗ್ಲಾಸ್‌ ಜೂಸ್‌ ಉತ್ತಮ. ಅದು ನಿಮ್ಮನ್ನು ಹೈಡ್ರೇಟ್‌ ಆಗಿಡುತ್ತದೆ. ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸುತ್ತದೆ. ಜೊತೆಗೆ ಪೋಷಕಾಂಶಗಳ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.

ಈ ಜೂಸ್‌ ನ ಹೆಚ್ಚು ಲಾಭ ಪಡೆದುಕೊಳ್ಳಲು ನೀವು ಯಾವಾಗಲೂ ತಾಜಾ ಹಣ್ಣು ಹಾಗೂ ತರಕಾರಿಗಳನ್ನೇ ಬಳಸಿ. ಅತಿಯಾಗಿ ಜೂಸ್‌ ಸಹ ಕುಡಿಯುವುದು ಒಳ್ಳೆಯದಲ್ಲ. ರೊಟ್ಟಿ, ಪಲ್ಯ, ಬೇಳೆಗಳ ಬದಲಿಗೆ ಜೂಸ್‌ ನ್ನು ಅವಲಂಬಿಸಬಹುದು ಎಂದು ಯೋಚಿಸಿದರೆ, ಅದು ನಿಮ್ಮ ದೇಹಕ್ಕೆ ಹಾನಿಯಂಟು ಮಾಡಬಹುದು.

ಯಾವ ಸಮಯದಲ್ಲಿ ಸೇವಿಸಬೇಕು?

ಜೂಸ್‌ ಯಾವಾಗಲೂ ಬೆಳಗಿನ ಉಪಾಹಾರದ ಜೊತೆಗೆ ಕುಡಿಯುವುದು ಉತ್ತಮ. ಇದರಿಂದ ನಿಮಗೆ ಇಡೀ ದಿನ ಹೈಡ್ರೇಟ್ ಆಗಿರುವುದರ ಜೊತೆ ಜೊತೆಗೆ ಹೆಚ್ಚು ಚುರುಕಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಅದರಿಂದ ನೀವು ಯಾವುದೇ ಬಗೆಯ ಸೋಂಕು ಹಾಗೂ ರೋಗದಿಂದ ರಕ್ಷಿಸಿಕೊಳ್ಳಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಜೂಸ್‌ ಕುಡಿಯಬೇಡಿ. ಏಕೆಂದರೆ ಅದು ಅಸಿಡಿಟಿ ಹಾಗೂ ತಕ್ಷಣವೇ ಶುಗರ್‌ ಲೆವೆಲ್ ‌ಹೆಚ್ಚಿಸುವ ಕೆಲಸ ಮಾಡುತ್ತದೆ. ಅದು ಮಧುಮೇಹಿಗಳಿಗೆ ಸರಿಯಾಗಿರುವುದಿಲ್ಲ.

ಪ್ಯಾಕ್ಡ್ ಜೂಸ್/ ಫ್ರೆಶ್ಜೂಸ್

ನೀವು ಹೆಲ್ದೀ ಆಪ್ಶನ್‌ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ಫ್ರೆಶ್‌ ಜೂಸ್‌ ಉತ್ತಮವಾಗಿರುತ್ತದೆ. ಏಕೆಂದರೆ ಪ್ಯಾಕ್ಡ್ ಜೂಸ್‌ ಶುಗರ್ ಹಾಗೂ ಕ್ಯಾಲೋರಿಸ್‌ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ತೂಕ ನಿಯಂತ್ರಿಸುವುದು ಹಾಗೂ ಮಧುಮೇಹಿಗಳಿಗೆ ಸೂಕ್ತವಲ್ಲ.

ಇದರಲ್ಲಿ ನ್ಯೂಟ್ರಿಷನ್‌ ಕೂಡ ಕಡಿಮೆ ಇರುತ್ತವೆ. ಏಕೆಂದರೆ ಪ್ರೊಸೆಸಿಂಗ್‌ ಹಾಗೂ ಸ್ಟೋರೇಜ್‌ ನ ಕಾರಣದಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಕಡಿಮೆಯಾಗುತ್ತವೆ. ಅದರಿಂದ ನಿಮ್ಮ ಇಮ್ಯುನಿಟಿ ಬೂಸ್ಟ್ ಮಾಡಲು ಆಗುವುದಿಲ್ಲ. ಜೊತೆಗೆ ಬೊಜ್ಜಿನ ಅಪಾಯ ಕೂಡ ಹೆಚ್ಚುತ್ತದೆ. ಫ್ರೆಶ್‌ ಜೂಸ್‌ ನಿಂದ ನಿಮಗೆ ಇಡೀ ನ್ಯೂಟ್ರಿಶನ್‌ ನ ಲಾಭ ದೊರಕುತ್ತದೆ. ಜೊತೆಗೆ ನೀವು ಅದರಲ್ಲಿ ಅಗತ್ಯ ಉಂಟಾದರೆ, ಸಕ್ಕರೆ ಬೆರೆಸುತ್ತೀರಿ. ಅದರಿಂದ ನಿಮಗೆ ಕ್ಯಾಲೋರಿಸ್‌ ಮೇಲೆ ನಿಯಂತ್ರಣ ಇರುತ್ತದೆ.

ಪ್ರಮೀಳಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ