ಗಸಗಸೆ ಸ್ಮೂದಿ
ಸಾಮಗ್ರಿ : ಅರ್ಧ ಕಪ್ ಗಸಗಸೆ ಪೇಸ್ಟ್, 1 ಹೋಳು ನಿಂಬೆಹಣ್ಣು, 1 ಕಪ್ ಮ್ಯಾಂಗೋ ಜೂಸ್, 1 ಬಾಟಲ್ ಸೋಡಾ, ತುಸು ಕ್ರಶ್ಡ್ ಐಸ್, ತುಸು ಸಕ್ಕರೆ.
ವಿಧಾನ : ಮೊದಲು ಮಿಕ್ಸಿಗೆ ಗಸಗಸೆ ಪೇಸ್ಟ್, ಮ್ಯಾಂಗೋ ಜೂಸ್, ಸಕ್ಕರೆ ಸೇರಿಸಿ ನುಣ್ಣಗೆ ಮಾಡಿ ಗ್ಲಾಸ್ ಗಳಿಗೆ ಸುರಿಯಿರಿ. ಇದರ ಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಸೋಡ ಬೆರೆಸಿ, ಪುಡಿ ಐಸ್ ತೇಲಿಬಿಟ್ಟು ಚಿತ್ರದಲ್ಲಿರುವಂತೆ ಅಲಂಕರಿಸಿ ತಕ್ಷಣ ಸವಿಯಿರಿ.
ಪನೀರ್ ಮ್ಯಾಂಗೋ ರೋಲ್ಸ್
ಸಾಮಗ್ರಿ : 1 ಮಾಗಿದ ಮಾವು, 100 ಗ್ರಾಂ ಪನೀರ್, ಅಗತ್ಯವಿದ್ದಷ್ಟು ಪುಡಿಸಕ್ಕರೆ, ಬಾದಾಮಿ ಫ್ಲೇಕ್ಸ್, ಏಲಕ್ಕಿಪುಡಿ, ತುಸು ಉದ್ದಕ್ಕೆ ಹೆಚ್ಚಿದ ಸ್ಟ್ರಾಬೆರಿ, ಪಿಸ್ತಾ.
ವಿಧಾನ : ಮಾವಿನ ಸಿಪ್ಪೆ ಹೆರೆದು ಉದ್ದನೆಯ ತುಂಡುಗಳಾಗಿಸಿ. ಪನೀರ್ ನ್ನು ಚೆನ್ನಾಗಿ ಮಸೆದು ಅದಕ್ಕೆ ಸಕ್ಕರೆ, ಏಲಕ್ಕಿ, ಬಾದಾಮಿ ಬೆರೆಸಿರಿ. ಮಾವಿನ ಪ್ರತಿ ತುಂಡಿನ ಉದ್ದಕ್ಕೂ ಈ ಪನೀರ್ ಮಿಶ್ರಣ ಹರಡಿ ನೀಟಾಗಿ ರೋಲ್ ಮಾಡಿ. ಇದರ ಮೇಲೆ ಪಿಸ್ತಾ, ಸ್ಟ್ರಾಬೆರಿ ಉದುರಿಸಿ, 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ ಸವಿಯಲು ಕೊಡಿ.
ಫ್ರೂಟ್ ಐಸ್ ಕ್ರೀಂ
ಸಾಮಗ್ರಿ : 1 ಮಾಗಿದ ಮಾವು, 2 ಕಿವೀ ಫ್ರೂಟ್ಸ್, ಅರ್ಧ ಕಪ್ ಸೀಡ್ಲೆಸ್ ದಾಳಿಂಬೆ, 1 ಸೇಬು, 1 ಕಳಿತ ಬಾಳೆಹಣ್ಣು, 150 ಗ್ರಾಂ ವೆನಿಲಾ ಐಸ್ ಕ್ರೀಂ, ತುಸು ಹೆಚ್ಚಿದ ಬಾದಾಮಿ, ಪಿಸ್ತಾ.
ವಿಧಾನ : ಎಲ್ಲಾ ಹಣ್ಣುಗಳನ್ನೂ ಸಣ್ಣದಾಗಿ ಹೆಚ್ಚಿಡಿ. ಒಂದು ಗಾಜಿನ ಬಟ್ಟಲಿಗೆ ವೆನಿಲಾ ಐಸ್ ಕ್ರೀಂ ಹಾಕಿ ಗೊಟಾಯಿಸಿ. ಅದಕ್ಕೆ ಈ ಹಣ್ಣಿನ ಮಿಶ್ರಣ ಹಾಕಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಸರ್ವಿಂಗ್ ಕಪ್ ಗೆ ಹಾಕಿ, ಮೇಲೆ ಬಾದಾಮಿ, ಪಿಸ್ತಾ ಉದುರಿಸಿ ಸವಿಯಲು ಕೊಡಿ.
ಪೀನಾ ಕೊಲಾಡಾ
ಸಾಮಗ್ರಿ : 2 ಕಪ್ ಅನಾನಸ್ ಜೂಸ್, ಅರ್ಧ ಕಪ್ ತೆಂಗಿನ ಹಾಲು, 1 ಕಪ್ ವೆನಿಲಾ ಐಸ್ ಕ್ರೀಂ, ಅಗತ್ಯವಿದ್ದಷ್ಟು ಲಿಮ್ಕಾ, ಪುಡಿ ಐಸ್, ಅಲಂಕರಿಸಲು ಅನಾನಸ್ ತುಂಡು.
ವಿಧಾನ : ಮಿಕ್ಸಿಗೆ ಅನಾನಸ್ ಜೂಸ್, ತೆಂಗಿನ ಹಾಲು, ಐಸ್ ಕ್ರೀಂ, ಪುಡಿ ಐಸ್ ಬೆರೆಸಿ ಚೆನ್ನಾಗಿ ಬೆರೆತುಕೊಳ್ಳು
ವಂತೆ ಚಲಾಯಿಸಿ. ಕೊನೆಯಲ್ಲಿ ಲಿಮ್ಕಾ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ನಂತರ ಚಿತ್ರದಲ್ಲಿರುವಂತೆ ಗ್ಲಾಸುಗಳಿಗೆ ಬಗ್ಗಿಸಿ, ಅನಾನಸ್ ತುಂಡಿನಿಂದ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಬ್ರೆಡ್ ಟ್ರೀಟ್
ಸಾಮಗ್ರಿ : 1 ಕಪ್ ಗಟ್ಟಿ ಹಾಲಿನ ಕೆನೆ ಯಾ ಫ್ರೆಶ್ ಕ್ರೀಂ, ಅರ್ಧ ಕಪ್ ಸಣ್ಣ ರವೆ, 4-5 ಬ್ರೆಡ್ ಸ್ಲೈಸ್, 2-3 ಹೆಚ್ಚಿದ ಈರುಳ್ಳಿ, ಅರ್ಧರ್ಧ ಕಪ್ 3 ಬಗೆಯ ಹೆಚ್ಚಿದ ಕ್ಯಾಪ್ಸಿಕಂ, 2-3 ಹಸಿ ಮೆಣಸು, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ಮೊದಲು ರವೆಯನ್ನು ತುಪ್ಪದಲ್ಲಿ ಹುರಿದಿಡಿ. ಹೆಚ್ಚಿದ ಎಲ್ಲಾ ತರಕಾರಿ ಸೇರಿಸಿ ತುಪ್ಪದಲ್ಲಿ ತುಸು ಬಾಡಿಸಿ. ಇದನ್ನು ಒಂದು ಬಟ್ಟಲಿಗೆ ಹಾಕಿ ರವೆ, ಹಾಲಿನ ಕೆನೆ, ಉಪ್ಪು, ಮೆಣಸು ಹಾಕಿ ಬೆರೆಸಿಕೊಳ್ಳಿ. ಬ್ರೆಡ್ ಅಂಚು ಕತ್ತರಿಸಿ, ಎರಡೂ ಬದಿ ಬೆಣ್ಣೆ ಸರಿ, ಈ ಮಿಶ್ರಣವನ್ನು ಸಮನವಾಗಿ ಹರಡಿರಿ. ನಾನ್ ಸ್ಟಿಕ್ ಪ್ಯಾನಿನಲ್ಲಿ ಈ ಬ್ರೆಡ್ ಸ್ಲೈಸ್ ಗಳನ್ನು ತುಪ್ಪ ಹಾಕಿ ಎರಡೂ ಬದಿ ಬೇಯಿಸಿ, ಮೇಲೆ ಕೆಚಪ್ ಹರಡಿ, ಸಂಜೆ ಕಾಫಿ/ಟೀ ಜೊತೆ ಸವಿಯಲು ಕೊಡಿ.
ಪೊಟೇಟೊ ಪಂಚ್
ಸಾಮಗ್ರಿ : 3-4 ಬೆಂದ ಆಲೂ, 2-3 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 1-2 ಕ್ಯಾಪ್ಸಿಕಂ, ಹೆಚ್ಚಿದ ಒಂದಿಷ್ಟು ಬೀನ್ಸ್, ಟೊಮೇಟೊ, ತುರಿದ ಕ್ಯಾರೆಟ್, ಅರ್ಧರ್ಧ ಕಪ್ ಮಿಕ್ಸ್ಡ್ ಸ್ಪ್ರೌಟ್ಸ್, ಬೆಣ್ಣೆ, ತುರಿದ ಚೀಸ್, ರುಚಿಗೆ ಉಪ್ಪು, ನಿಂಬೆರಸ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ. ಹೆಚ್ಚಿದ ಹಸಿ ಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಸ್ಪ್ರೌಟ್ಸ್, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ ಹಾಕಿ ಬಾಡಿಸಿ. ಇದರ ಮೇಲೆ ತುಸು ಉಪ್ಪು ಉದುರಿಸಿ ಚೆನ್ನಾಗಿ ಬೇಯಿಸಿ. ಬೆಂದ ಆಲೂ (ಸಿಪ್ಪೆ ಬಿಡಿಸದೆ) ಉದ್ದಕ್ಕೆ ಕತ್ತರಿಸಿ. ಇದರ ನಡುಭಾಗ ಹೆರೆದು ಚೀಸ್, ಬೆಣ್ಣೆ, ಉಪ್ಪು, ಮೆಣಸು ಹಾಕಿ ಮಿಶ್ರಣ ಕಲಸಿಡಿ. ಬೇಯುತ್ತಿರುವ ಮಿಶ್ರಣಕ್ಕೆ ತುಸು ಮೆಣಸು ಹಾಕಿ ಕೆದಕಿ ಕೆಳಗಿಳಿಸಿ. ಅದನ್ನು ಆಲೂ ಬಟ್ಟಲುಗಳಿಗೆ ತುಂಬಿಸಿ, ಇದರ ಮೇಲೆ ನಿಂಬೆ ಹಣ್ಣು ಹಿಂಡಿಕೊಳ್ಳಿ. ಆಲೂ ಮಿಶ್ರಣವನ್ನು ಚಕ್ಕುಲಿ ಒರಳಿಗೆ ಹಾಕಿ, ಚಿತ್ರದಲ್ಲಿರುವಂತೆ ಆಲೂ ಮೇಲೆ ಚಕ್ಕುಲಿ ಒತ್ತಿಕೊಳ್ಳಿ. ಇದನ್ನು 8-10 ನಿಮಿಷ ಬೇಕ್ ಮಾಡಿ ಸವಿಯಲು ಕೊಡಿ.
ಕಾಲಿಫ್ಲವರ್ ಸ್ಪೆಷಲ್
ಸಾಮಗ್ರಿ : 100 ಗ್ರಾಂ ಹೂಕೋಸು, ತುಸು ಹಸಿ ಮೆಣಸಿನ ಪೇಸ್ಟ್, ಬೆಳ್ಳುಳ್ಳಿ, ಶುಂಠಿ ಪೇಸ್ಟ್, 2 ಚಮಚ ಹುರಿದ ಎಳ್ಳು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತುಸು ಎಣ್ಣೆ, ರುಚಿಗೆ ಉಪ್ಪು, ನಿಂಬೆರಸ.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಚಿಗೊಳಿಸಿದ ಹೂಕೋಸು ಹಾಕಿ ಬಾಡಿಸಿ. ಇದಕ್ಕೆ ಉಳಿದ ಸಾಮಗ್ರಿ ಸೇರಿಸಿ ಕೆದಕಬೇಕು. ನಂತರ ಮಿಕ್ಸಿಗೆ ಈ ಮಿಶ್ರಣ, ಉಪ್ಪು, ಕೊ.ಸೊಪ್ಪು, ನಿಂಬೆರಸ ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ಮತ್ತೆ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಈ ಮಿಶ್ರಣ ಹಾಕಿ ಬಾಡಿಸಿ. ಇದರ ಮೇಲೆ ಹುರಿದ ಎಳ್ಳು ಉದುರಿಸಿ ಇಡ್ಲಿ, ದೋಸೆಗೆ ಚಟ್ನಿಯಾಗಿ ಕೊಡಿ.
ಎಳ್ಳು ಪನೀರ್
ಸಾಮಗ್ರಿ : 300 ಗ್ರಾಂ ಪನೀರ್ ತುಂಡು, 4 ಚಮಚ ಟೊಮೇಟೊ ಸಾಸ್, 2 ಚಮಚ ರೆಡ್ ಚಿಲೀ ಸಾಸ್, 4-5 ಚಮಚ ಎಳ್ಳು, 2-3 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ತುಸು ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಿರಿ. ನಂತರ ಟೊಮೇಟೊ, ರೆಡ್ ಚಿಲೀ ಸಾಸ್ ಹಾಕಿ, ಪನೀರ್ ತುಂಡುಗಳ ಜೊತೆ ಹದನಾಗಿ ಬಾಡಿಸಿ. ಇದಕ್ಕೆ ಉಪ್ಪು, ಮೆಣಸು ಹಾಕಿ ಕೆದಕಬೇಕು. ಪನೀರ್ ತುಂಡುಗಳಿಗೆ ಈ ಮಿಶ್ರಣ ಚೆನ್ನಾಗಿ ಮೆತ್ತಿಕೊಂಡ ನಂತರ, ಮೊದಲೇ ಹುರಿದ ಎಳ್ಳು ಹಾಕಿ ಕೈಯಾಡಿಸಿ. ಇದನ್ನು ಕೆಳಗಿಳಿಸಿ ಮೇಲಿನ ಕಾಲಿಫ್ಲವರ್ ಚಟ್ನಿ ಜೊತೆ ಸವಿಯಲು ಕೊಡಿ.