ಭಾರತೀಯ ಚಿತ್ರರಂಗದಲ್ಲಿ ಮಾಲಿವುಡ್ ಸಿನಿಮಾಗಳೇ ಒಂದು ರೀತಿಯ ವಿಶೇಷತೆ ಹೊಂದಿರುತ್ತವೆ. ಆ ಸಿನಿಮಾಗಳ ಪಾತ್ರಗಳು, ಸಂಭಾಷಣೆ, ಚಿತ್ರಕಥೆ, ಕ್ಯಾಮರಾ ವರ್ಕ್, ಸನ್ನಿವೇಶಕ್ಕೆ ತಕ್ಕಂತೆ ಇರುವ ದೃಶ್ಯಗಳು, ಪ್ರಕೃತಿಯ ಸೊಬಗು, ಧ್ವನಿ, ಮ್ಯೂಸಿಕ್, ಹೀಗೆ ಪ್ರತಿಯೊಂದು ಹಂತದಲ್ಲೂ ಅವುಗಳದ್ದೇ ಆದ ವಿಭಿನ್ನತೆ ಹೊಂದಿರುತ್ತವೆ. ಅದ್ರಲ್ಲೂ ನಟ, ನಟಿಯರ ನಟನೆಯಂತೂ ಮನೋಜ್ಞವಾಗಿರುತ್ತದೆ.
ಹಿರಿಯ ನಟರಾದ ಮೋಹನ್ಲಾಲ್, ಮುಮ್ಮುಟಿ, ಪೃಥ್ವಿರಾಜ್ ಸುಕುಮಾರನ್, ದುಲ್ಖರ್ ಸಲ್ಮಾನ್, ಜೋಸೆಫ್ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೇ ಬೆಳಯುತ್ತಾ ಹೋಗುತ್ತದೆ. ಅಂತಹ ಕಲಾವಿದರ ಸಾಲಿಗೆ ಮತ್ತೊಬ್ಬ ಸೇರ್ಪಡೆ ಅಂದ್ರೆ ಅವರೇ ಆಸಿಫ್ ಅಲಿ.
ಮಲೆಯಾಳಂ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಬೆಳೆಯುತ್ತಿರುವ ನಟ ಆಸಿಫ್ ಅಲಿಗೆ ಇವತ್ತು 38ನೆ ಜನ್ಮದಿನದ ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಕ್ರೈಂ ಆಧಾರಿತ ಸಿನಿಮಾಗಳೇ ಒಟಿಟಿಗಳಲ್ಲಿ ಹೆಚ್ಚಾಗಿ ಜನ ಮೆಚ್ಚುವಂತಹ ಸಿನಿಮಾಗಳಾಗಿವೆ.
ಅಂತಹ ಸಿನಿಮಾಗಳ ಪಾತ್ರಕ್ಕೆ ಹೇಳಿಮಾಡಿಸಿದ ಹಾಗೆ ಆಸಿಫ್ ಅಲಿ ಹೊಸ ಹೊಸ ಪಾತ್ರಗಳನ್ನು ಮಾಡುತ್ತಿರುತ್ತಾರೆ. ನಿರ್ಮಾಪಕರಾಗಿ ಸಿನಿರಂಗಕ್ಕೆ ಕಾಲಿಟ್ಟ ಆಸಿಫ್ ಅಲಿ 2009ರಲ್ಲಿ ‘ರಿತು’ ಅನ್ನೋ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಡ್ತಾರೆ. ಬಳಿಕ ಈವರೆಗೆ 88 ಸಿನಿಮಾಗಳಲ್ಲಿ ನಟಿಸಿರೋ ಆಸಿಫ್ ಅಲಿ ಚಿತ್ರಗಳು ಥಿಯೇಟರ್ಗಳಲ್ಲಿ ಗಳಿಕೆ ಕಂಡಿದ್ದು ಅಷ್ಟಕ್ಕಷ್ಟೇ. ಆದ್ರೆ, ಓಟಿಟಿಗಳಲ್ಲಿ ಮಾತ್ರ ಇವರ ನಟನೆಗೆ, ಇವರು ಮಾಡಿರುವ ಚಿತ್ರಗಳಿಗೆ ಅವರದ್ದೇ ಆದ ಫ್ಯಾನ್ಸ್ ಇದ್ದಾರೆ.
2022ರಲ್ಲಿ ರಿಲೀಸ್ ಆದ ‘ಕೂಮನ್’ ಥಿಯೇಟರ್ಗಳಲ್ಲಿ ಅಷ್ಟಾಗಿ ಹೆಸರು ಮಾಡದೇ ಇದ್ರೂ ಒಟಿಟಿಯಲ್ಲಿ ಮಾತ್ರ ಬ್ಲಾಕ್ಬಸ್ಟರ್ ಆಗಿತ್ತು. ಕಳೆದ ವರ್ಷದ ‘ಥಳವನ್’ನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮತ್ತು ತನಿಖೆಯ ಶೈಲಿಯನ್ನ ಎಲ್ಲರೂ ಇಷ್ಟಪಟ್ಟರು. ಅದರ ಜೊತೆಗೆ ಬಂದ ‘ಲೆವೆಲ್ ಕ್ರಾಸ್’ನಲ್ಲಿ ಇವರ ನಟನೆ ಮತ್ತೊಂದು ಲೆವೆಲ್ಗೆ ಇತ್ತು.
ಅಷ್ಟೇ ಅಲ್ಲ, ‘ಕಿಷ್ಕಿಂದಾ ಕಾಂಡಂ’ ಅನ್ನೋ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಮೂವಿ ಕೂಡ 50 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಗಮನ ಸೆಳೆಯಿತು. ಇನ್ನು ಈ ವರ್ಷ ರಿಲೀಸ್ ಆಗಿರೋ ‘ರೇಖಚಿತ್ರಂ’ ಥಿಯೇಟರ್ಗಳಲ್ಲಿ ಅತ್ಯಧಿಕ ಗಳಿಕೆ ಮಾಡಿದೆ. ಜನವರಿ 9 ರಂದು ಬಿಡುಗಡೆಯಾಗಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
75 ಕೋಟಿ ಕ್ಲಬ್ ಸೇರಿರುವ ಈ ಚಿತ್ರ ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ‘ಕಿಷ್ಕಿಂಧಾ ಕಾಂಡಂ’ದ ನಂತರ ಆಸಿಫ್ ಅಲಿ ಅವರ ವೃತ್ತಿಜೀವನದಲ್ಲಿ 50 ಕೋಟಿ ಗಳಿಸಿದ ಎರಡನೇ ಚಿತ್ರ ‘ರೇಖಚಿತ್ರಂ’ ಆಗಿದೆ. 38ನೇ ವರ್ಷದ ಹುಟ್ಟುಹಬ್ಬದ ಖುಷಿಯಲ್ಲಿರುವ ಆಸಿಫ್ ಅಲಿಗೆ ‘ರೇಖಚಿತ್ರಂ’ನ ದಾಖಲೆಯ ಕಲೆಕ್ಷನ್ ಬಹುದೊಡ್ಡ ಉಡುಗೊರೆ ಸಿಕ್ಕಂತಾಗಿದೆ.