ಸ್ಯಾಂಡಲ್ವುಡ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹವಾ ಮತ್ತೆ ಶುರುವಾಗ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ಮೊದಲ ಬಾರಿಗೆ ಅಭಿಮಾನಿಗಳಿಗೆ ಸಿಹಿ ಸಂದೇಶ ಕೊಟ್ಟಿರೋ ನಟ ದರ್ಶನ್ ಮತ್ತೆ ತೆರೆ ಮೇಲೆ ರಂಜಿಸೋಕೆ ರೆಡಿಯಾಗಿದ್ದಾರೆ.
ತಮ್ಮ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಜನ್ಮದಿನಾಚರಣೆಯನ್ನು ಸೆಲಬ್ರಿಟೀಸ್ ಜೊತೆ ಅರ್ಥಾತ್ ಅಭಿಮಾನಿಗಳ ಜೊತೆ ಆಚರಿಸೋಕೆ ಸಾಧ್ಯವಿಲ್ಲ ಅಂತಾ ನೋವಿನಿಂದಲೇ ಹೇಳಿಕೊಂಡ ನಟ ದರ್ಶನ್ ಮುಂದಿನ ವರ್ಷ ಅಥವಾ ಅದಕ್ಕೂಮುನ್ನ ಒಂದೆಡೆ ಒಂದು ದಿನ ಸಂಭ್ರಮ ಹಂಚಿಕೊಳ್ಳೋಣ ಅಂತಾ ಹೇಳಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಮಾಡಿ ಹಾಕಿದ ದರ್ಶನ್ ಅಭಿಮಾನಿಗಳಿಗೆ ಹಾಗೂ ತಮ್ಮ ನೆಚ್ಚಿನ ಸ್ನೇಹಿತರಾದ ನಟಿ ರಕ್ಷಿತಾ, ರಚಿತಾರಾಮ್, ಧನ್ವೀರ್ ಹಾಗೂ ಸಹೋದರ ದಿನಕರ್ಗೆ ಧನ್ಯವಾದ ಹೇಳಿದ್ದಾರೆ.
ಬೆನ್ನುನೋವಿನ ಕಾರಣ ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋದಿಲ್ಲ ಅಂತಾ ಹೇಳಿರೋದ್ರಿಂದ ಹುಟ್ಟುಹಬ್ಬದ ನೆಪದಲ್ಲಾದರೂ ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಶೆ ಮೂಡಿಸಿತ್ತು. ಆದ್ರೀಗ ಆ ನಿರಾಶೆ ಮರೆಸಲು ನಟ ದರ್ಶನ್ ಮತ್ತೊಂದು ಸರ್ಪ್ರೈಸ್ ಸುದ್ದಿ ಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ, ತಮ್ಮ ಮುಂದಿನ ಚಿತ್ರ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆ ಮೂಲಕ ಗಿಫ್ಟ್ ಕೊಡೋಕೆ ತೀರ್ಮಾನಿಸಿದ್ದಾರೆ.
ಹುಟ್ಟುಹಬ್ಬಕ್ಕೆ ಸಾವಿರಾರು ಅಭಿಮಾನಿಗಳಿಗೆ ಕೈ ಕುಲುಕುವ ಮೂಲಕ ವಿಶಸ್ ಪಡೀತಿದ್ದ ದರ್ಶನ್ ತಾವು ಹೆಚ್ಚು ಹೊತ್ತು ನಿಲ್ಲೋಕೆ ಆಗುತ್ತಿಲ್ಲವಾದ್ದರಿಂದ ಈ ಬಾರಿ ಆ ದಿನದಂದೇ ‘ಡೆವಿಲ್’ ಟೀಸರ್ನ ಉಡುಗೊರೆ ಕೊಡ್ತಿದ್ದಾರೆ. ಇದೇ ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬವಿದ್ದು, ಅಂದೇ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆ ಮಾಡೋದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಸಂಬಂಧ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ನಮ್ಮ ಹೊಸ ಪ್ರಯತ್ನ ಶೀಘ್ರದಲ್ಲೇ ನಿಮ್ಮ ಮುಂದೆ’ ಅಂತಾ ಟ್ವೀಟ್ ಮಾಡಿದ್ದಾರೆ.
ನಟ ದರ್ಶನ್ ಅಭಿನಯಿಸಿದ ಈ ಹಿಂದಿನ ಸಿನಿಮಾಗಳಿಗಿಂತ ‘ಡೆವಿಲ್’ ಸಿನಿಮಾ ವಿಭಿನ್ನವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ‘ಡೆವಿಲ್’ ಚಿತ್ರವನ್ನು ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದು, ಚಿತ್ರವನ್ನು ಜೆ. ಜಯಮ್ಮ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ‘ಡೆವಿಲ್’ ಚಿತ್ರದ ಗ್ಲಿಂಪ್ಸ್ ಸಖತ್ತಾಗೇ ಸೌಂಡ್ ಮಾಡಿದ್ದು ಈ ಸಿನಿಮಾ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ.