ರಾಜಾಸ್ಥಾನ್ ರಾಜ್ಯದ ಅಧಿಕಾರ ಇದೀಗ ವಸುಂಧರಾ ರಾಜೆ ಕೈಯಿಂದ ಜಾರಿಹೋಗಿದೆ, ಹೀಗಾಗಿ ಸದ್ಯದಲ್ಲಿ ಇಡೀ ದೇಶದಲ್ಲಿ ಏಕೈಕ ಮಹಿಳಾ ಮುಖ್ಯಮಂತ್ರಿ ಎಂದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ. ಕೆಲವು ವರ್ಷಗಳ ಹಿಂದ ಅಂದ್ರೆ 2011-14ರವರೆಗೂ ಭಾರತದಲ್ಲಿ 4 ರಾಜ್ಯಗಳ ಜವಾಬ್ದಾರಿ ಮಹಿಳಾ ಮುಖ್ಯಮಂತ್ರಿಗಳದ್ದೇ ಆಗಿತ್ತು.
ಜಮ್ಮು-ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ, ಗುಜರಾತ್ ನಲ್ಲಿ ಆನಂದಿ ಬೇನ್ ಪಟೇಲ್, ರಾಜಾಸ್ಥಾನದಲ್ಲಿ ವಸುಂಧರಾ ರಾಜೆ ಹಾಗೂ ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ. ಇದಕ್ಕೆ ಮೊದಲು ತಮಿಳುನಾಡಿನಲ್ಲಿ ಜಯಲಲಿತಾ ಸಹ ಇದ್ದರು. ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ಭಾರತದಲ್ಲಿ ಒಟ್ಟು 16 ಮಂದಿ ಮಹಿಳಾ ಮುಖ್ಯಮಂತ್ರಿಗಳು ಆರಿಸಿ ಬಂದಿದ್ದಾರೆ. ಇವರಲ್ಲಿ ಉಮಾಭಾರತಿ, ರಾಬ್ಡೀದೇವಿ, ಶೀಲಾ ದೀಕ್ಷಿತ್, ಮಾಯಾವತಿ ಸಹ ಪ್ರಮುಖರು.
ನಮ್ಮ ದೇಶದಲ್ಲಿ ಮಹಿಳಾ ಮುಖ್ಯಮಂತ್ರಿಗಳ ಸಂಖ್ಯೆ ಬಹು ಕಡಿಮೆ ಆಗಿರಬಹುದು, ಆದರೆ ಇಂದಂತೂ ಅಲ್ಲಗಳೆಯಲಾಗದ ಸತ್ಯ, ಏನೆಂದರೆ, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿಯಂಥವರು ಭಾರತದ ಅತಿ ಶಕ್ತಿಶಾಲಿ ಮುಖ್ಯಮಂತ್ರಿಗಳಲ್ಲಿ ಅಗ್ರಗಣ್ಯರೆನಿಸುತ್ತಾರೆ. ಇವರ ಅಧಿಕಾರಾವಧಿ ಸಾಕಷ್ಟು ಪ್ರಭಾವಶಾಲಿ ಆಗಿತ್ತು. ಅದು ತಮಿಳುನಾಡಿನಲ್ಲಿ ಜಯಲಲಿತಾರ ಜನಹಿತದ ಯೋಜನೆಗಳಿರಲಿ, ಉ.ಪ್ರದೇಶದಲ್ಲಿ ಮಾಯಾವತಿಯವರ ಕಾನೂನು ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುವುದಾಗಲಿ ಅಥವಾ ಮಮತಾ ಎಲ್ಲರ ಮನಸ್ಸನ್ನು ಗೆಲ್ಲುವುದಾಗಲಿ, ಇವರು ತಮ್ಮದೇ ವಿಧಾನಗಳಿಂದ ಖ್ಯಾತರಾದರು.
ಆದರೆ ಇದೇ ಮಹಿಳೆಯರು ಸಾಮಾನ್ಯ ಹೆಂಗಸರ ಹಿತಕ್ಕಾಗಿ ಏನೇನು ಕಾರ್ಯ ಕೈಗೊಂಡರೆಂದು ಲೆಕ್ಕ ಹಾಕಿದಾಗ ಬಹಳ ಯೋಚಿಸಬೇಕಾಗುತ್ತದೆ. ಅಸಲಿಗೆ ಈ ಕ್ಷೇತ್ರದಲ್ಲಿ ಇವರುಗಳು ನೆನಪಿಡತಕ್ಕಂಥ ಕೆಲಸ ಮಾಡಿಯೇ ಇಲ್ಲ! ಇದು ಕೇವಲ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯ ಅತಿ ಉನ್ನತ ಹುದ್ದೆ ಅಲಂಕರಿಸಿದ ಮಹಿಳೆಯರಿಗಷ್ಟೇ ಅನ್ವಯ ಅಂತಲ್ಲ, ಆದರೆ ರಾಜಕೀಯದಲ್ಲಿ ಉನ್ನತ ಅಧಿಕಾರ ಹೊಂದಿದ ಪ್ರತಿಯೊಬ್ಬ ಮಹಿಳಾ ನಾಯಕಿಯರಿಗೂ ಅನ್ವಯಿಸುತ್ತದೆ, ತಮ್ಮದೇ ಅಧಿಕಾರ ಹೊಂದಿದ್ದಾಗ್ಯೂ ಸಹ, ಹೆಂಗಸರ ಹಿತಕ್ಕಾಗಿ ಇವರುಗಳು ಹೆಚ್ಚಿಗೇನೂ ಮಾಡಲೇ ಇಲ್ಲ ಎಂಬುದು.
ಪ್ರಭಾವಶಾಲಿ ಸಮಾನತೆಯ ಹಕ್ಕು ಒಂದು ಸಾಮಾನ್ಯ ಯೋಚನೆ ಎಂದರೆ, ಹೆಂಗಸರು ಇಂಥ ಉನ್ನತ ಹುದ್ದೆಗೆ ಬಂದಾಗ, ಹೆಂಗಸರ ಹಿತದ ಕುರಿತಾಗಿ ಖಂಡಿತಾ ಏನಾದರೂ ಉತ್ತಮ ಕೆಲಸ ಮಾಡಿಯೇ ತೀರುತ್ತಾರೆ ಎಂದು. ಆದರೆ ಅಂಥ ಮಹತ್ವದ ಚಟುವಟಿಕೆಗಳೇನೂ ಜರುಗಲೇ ಇಲ್ಲ. ಇಂದಿರಾಗಾಂಧಿ ದೇಶದ ಪ್ರಧಾನ ಮಂತ್ರಿ ಆಗಿದ್ದಾಗ, ಯಾವ ದೊಡ್ಡ ಮಹಿಳಾ ಕ್ರಾಂತಿಯೂ ಆಗಲಿಲ್ಲ ಅಥವಾ ಯಾವ ರಾಜ್ಯಗಳಲ್ಲಿ ಮಹಿಳೆಯರು ಮುಖ್ಯಮಂತ್ರಿಗಳಾಗಿದ್ದರೋ ಅಲ್ಲಿ ಸಾಮಾನ್ಯ ಹೆಂಗಸರ ಸ್ಥಿತಿ ಉನ್ನತ ಮಟ್ಟಕ್ಕೇರಿತು ಎಂದೇನೂ ಇಲ್ಲವೇ ಇಲ್ಲ. ನಾವು ಅಲ್ಲಗಳೆಯಲಾಗದ ಮತ್ತೊಂದು ಸಂಗತಿ ಎಂದರೆ, ಗಂಡಸರಾದ ರಾಜಕೀಯ ಧುರೀಣರು ಹೆಂಗಸರ ಕುರಿತಾಗಿ ಉತ್ತಮ ನಿರ್ಣಯ ಕೈಗೊಳ್ಳಲು ಆಗುವುದೇ ಇಲ್ಲ ಎಂಬುದು. ಆದರೆ ಹೆಂಗಸರಿಗೆ ಸಂಬಂಧಿಸಿದ ಸಂವೇದನಾಶೀಲ ವಿಷಯಗಳನ್ನು ಮಹಿಳಾ ನಾಯಕಿಯರೇ ಖುದ್ದಾಗಿ ಹೆಚ್ಚಿನ ಕಾಳಜಿ ವಹಿಸಿ ಪರಿಶೀಲನೆ ನಡೆಸುವುದು, ಹೆಚ್ಚು ಪ್ರಭಾವಶಾಲಿ ಮತ್ತು ಸಮಾನತೆಯ ಹಕ್ಕಿನಿಂದ ಕೂಡಿದ್ದಾಗಿರುತ್ತದೆ ಎಂಬುದೂ ಅಷ್ಟೇ ಸತ್ಯ. ಹೆಂಗಸರು ಗಂಡಸರು ತಮ್ಮದೇ ದೃಷ್ಟಿಕೋನದಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾರೆ ಎಂಬುದು ನಿಶ್ಚಯ ಸಂಗತಿ. ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಸರೋಗೆಸಿ ಬಿಲ್ ಪಾಸ್ ಆಯ್ತು. ಸಂಸತ್ತಿನಲ್ಲಿ 90% ಸಾಂಸದರು ಗಂಡಸರೇ ಆಗಿದ್ದರು, ಹೀಗಾಗಿ ಅವರಂತೂ ಗರ್ಭ ಧರಿಸುವವರಲ್ಲ… ಆದರೂ ಈ ಗಂಡಸರು ಆ ಬಿಲ್ ಪಾಸ್ ಮಾಡಿಸಿದರು. ನಮ್ಮ ನೀತಿಗಳು ದೇಶದ 50% ಜನಸಂಖ್ಯಾ ಪ್ರತಿನಿಧಿಗಳಾದ ಹೆಂಗಸರ ಅಗತ್ಯಗಳಿಗೆ ಪೂರಕವಾದುದಲ್ಲ. ಹೀಗಾಗಿ ಹೆಂಗಸರಿಗೆ ಸಂಬಂಧಿಸಿದ ವಿಷಯಗಳನ್ನು ಸಂವೇದನಾಶೀಲವಾಗಿ ಪರಿಶೀಲಿಸ ತಕ್ಕಂಥ ಮಹಿಳಾ ನಾಯಕಿಯರ ಅಗತ್ಯ ಖಂಡಿತಾ ಇದೆ.
ಉದಾ: ರಾಜಾಸ್ಥಾನದ ಹಳ್ಳಿಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹೆಂಗಸರೇ ನೀರಿನ ಕೊರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮಹಿಳೆಯರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಎಂದೂ ಯಾವ ಮಹತ್ವಪೂರ್ಣ ನಿರ್ಧಾರ ಕೈಗೊಳ್ಳಲೇ ಇಲ್ಲ. ಏಕೆಂದರೆ ಸರ್ಕಾರದಲ್ಲಿ ಯಾರೂ ಮಹಿಳಾ ಮುಖ್ಯಮಂತ್ರಿ ಇರಲೇ ಇಲ್ಲ. ಸತ್ಯದ ವಿಚಾರ ಎಂದರೆ ಮಹಿಳಾ ಮಂತ್ರಿ ಮಾತ್ರವೇ, ಸಾಧಾರಣ ಹೆಂಗಸರ ಸ್ಥಿತಿಯಲ್ಲಿ ಏನಾದರೂ ಬದಲಾವಣೆ ತರಲು ಸಾಧ್ಯ, ಏಕೆಂದರೆ ಹೆಣ್ಣಾದ ಕಾರಣ ಆ ಮಂತ್ರಿ, ಸಾಮಾನ್ಯ ಹೆಣ್ಣಿನ ಕಷ್ಟಗಳನ್ನು ಸುಲಭವಾಗಿ ಗ್ರಹಿಸಬಲ್ಲಳು.
ಗಂಭೀರ ವಿಷಯಗಳತ್ತ ಗಮನವಿಲ್ಲ
ಸಾಮಾನ್ಯ ಹೆಂಗಸರಿಗೆ ಅನಿಸುವುದೆಂದರೆ, ತಾವು ಮಹಿಳಾ ಮಂತ್ರಿಯನ್ನು ಆರಿಸುವ ಉದ್ದೇಶ ಎಂದರೆ, ಹೆಣ್ಣಾದ ಕಾರಣ ಆಕೆ ಸಾಮಾನ್ಯ ಹೆಣ್ಣಿನ ನೋವನ್ನು ಚೆನ್ನಾಗಿ ಗುರುತಿಸಬಲ್ಲಳು ಅಥವಾ ಈಕೆ ಭ್ರಷ್ಟಾಚಾರಿಯಲ್ಲ ಅಥವಾ ಹೆಚ್ಚು ನೈತಿಕತೆ ಹೊಂದಿದ್ದಾಳೆ…. ಆದರೆ ವಾಸ್ತವದಲ್ಲಿ ಇಂಥ ಅಖಂಡ ಆದರ್ಶಗಳೇನೂ ಇರುವುದಿಲ್ಲ.
ಇತ್ತೀಚೆಗೆ ಉತ್ತರಾಖಂಡದ ಮಂತ್ರಿ ತೀರಥ್ ಸಿಂಗ್ ರಾವತ್ ಹೆಂಗಸರ ರಿಪ್ಪಡ್ ಜೀನ್ಸ್ ಕುರಿತಾಗಿ ಒಂದು ವಿವಾದಾತ್ಮಕ ಹೇಳಿಕೆ ನೀಡಿದಾಗ, ಮಹಿಳಾ ರಾಜಕಾರಣಿಗಳು ಆತನನ್ನು ತೀವ್ರವಾಗಿ ಖಂಡಿಸಿದರು. ಸಾಂಸದೆ ಜಯಾ ಬಚ್ಚನ್ ರಿಂದ ಹಿಡಿದು ತೃಣಮೂಲ ಕಾಂಗ್ರೆಸ್ ನ ಮಹುಲಾ ಮೊಯಿತ್ರಾ, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ನ ಗರಿಮಾ ದಸೌನಿ, ತೀರಥ್ ಸಿಂಗ್ ರಿಗೆ ಏಳು ಕೆರೆ ನೀರು ಕುಡಿಸಿದರು. ನಿಮ್ಮ ಯೋಚಿಸುವ ಧಾಟಿ ಬದಲಾಯಿಸಿ, ಅವರ ಹೇಳಿಕೆ ಬಲು ಮರ್ಯಾದೆಗೇಡಿನದು ಎಂದು ಹುಯಿಲೆಬ್ಬಿಸಿದರು.
ಇಲ್ಲಿನ ಪ್ರಧಾನ ಸಾಲು ಎಂದರೆ, ಕೇವಲ ಈ ತರಹದ ಸಣ್ಣಪುಟ್ಟ ವಿಷಯಗಳ ಕುರಿತಾಗಿ ವಿಶ್ಲೇಷಿಸುವುದರಲ್ಲಿ ಮಂತ್ರಿಯ ಕರ್ತವ್ಯಗಳ ಇತಿಶ್ರೀ ಆಗಿಹೋಗುತ್ತದೆಯೇ? ಸಾಮಾನ್ಯ ಹೆಣ್ಣಿನ ಗಂಭೀರ ಸಮಸ್ಯೆಗಳತ್ತ ಆಕೆ ಗಮನ ಹರಿಸುವುದೇ ಬೇಡವೇ?
ಹೆಂಗಸರಲ್ಲಿ ವಿಶ್ವಾಸ ಮೂಡಿಸಲಿ
ಮಹಿಳಾ ರಾಜಕಾರಣಿಗಳಿಂದ ಮಹಿಳಾ ಸುರಕ್ಷತೆ, ಆದರ ಸನ್ಮಾನ ಇತ್ಯಾದಿಗಳ ಬಗ್ಗೆ ಉದ್ದುದ್ದ ಭಾಷಣ ಕೇಳಿ ಬರುತ್ತಿರುತ್ತದೆ. ಇದು ಅಗತ್ಯವೇ ಸರಿ, ಆದರೆ ಸಾಮಾನ್ಯ ಹೆಣ್ಣಿಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳನ್ನು ಬದಿಗೊತ್ತಿ ನಿರ್ಲಕ್ಷಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಸಾಮಾನ್ಯ ಹೆಣ್ಣಿನ ಹಕ್ಕುಗಳ ಕುರಿತು ಪ್ರಸ್ತಾವನೆ ಆಗಲೇಬೇಕು, ಆಗ ಮಾತ್ರವೇ ಸಾಮಾನ್ಯ ಹೆಣ್ಣು, ತನ್ನ ಬಗ್ಗೆ ಸಹ ಕಾಳಜಿ ವಹಿಸುವವರಿದ್ದಾರೆ, ತಮ್ಮ ಸಮಸ್ಯೆ ಬಗ್ಗೆ ಚಿಂತಿಸುತ್ತಾರೆ ಎಂದು ಗ್ರಹಿಸುತ್ತಾಳೆ. ಇದರಿಂದಾಗಿ ಮತದಾನದ ಬಗ್ಗೆ ಸಾಮಾನ್ಯ ಹೆಣ್ಣು ಹೆಚ್ಚು ಜಾಗರೂಕಳಾಗುತ್ತಾಳೆ. ಸರ್ಕಾರದ ರಚನೆಯಾಗಲು ತನ್ನ ಪಾತ್ರ ಹಿರಿದು ಎಂಬುದು ಆಗ ಮಾತ್ರ ಆಕೆಗೆ ತಿಳಿಯುತ್ತದೆ, ಹೀಗಾಗಿ ತನ್ನ ನೆಚ್ಚಿನ ನಾಯಕಿಯನ್ನೇ ಮುಂದೆ ಆರಿಸುತ್ತಾಳೆ.
ಇವರೇಕೆ ನಿರ್ಧಾರ ಕೈಗೊಳ್ಳುವುದಿಲ್ಲ?
ಅಸಲಿಗೆ ಯಾವ ಮಹಿಳಾ ನಾಯಕಿಯೇ ಆಗಲಿ, ತಾನು ರಾಜಕೀಯಕ್ಕಿಳಿದು ಆ ಮಟ್ಟದ ಹುದ್ದೆಗೇರಿದಳೆಂದರೆ, ತನ್ನೆದುರು ನಿಂತಿರುವ, ಈಗಾಗಲೇ ಅಧಿಕಾರದ ಚುಕ್ಕಾಣಿ ಕಂಡಿರುವ ಎಲ್ಲಾ ಗಂಡಸರ ಜೊತೆ ಪೈಪೋಟಿಗೆ ಇಳಿಯಬೇಕಾಗ್ತುದೆ. ಯಾವ ಮಟ್ಟಕ್ಕೆ ಇಳಿದಾದರೂ ಸರಿ, ತಮ್ಮ ಹೆಸರನ್ನು ಉಳಿಸಿಕೊಳ್ಳಲು ಸಿದ್ಧರಿರುವ ಇಂಥ ಗಂಡಸರ ಜೊತೆ ನೇರ ಪೈಪೋಟಿ ಉಂಟಾಗುತ್ತದೆ. ಹೀಗಾಗಿ ಈ ಮಹಿಳೆಯರೂ ಸಹ ಗಂಡಸರು ಮಾಡಿದಂಥ ಎಲ್ಲಾ ಪ್ರಯತ್ನಗಳನ್ನೂ ಮಾಡಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಂತ ತಲುಪುತ್ತಾರೆ. ಹೀಗಾಗಿ ತನ್ನ ಹುದ್ದೆಯನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಆಕೆ ಸಾಮಾನ್ಯ ಹೆಣ್ಣಿನ ಬವಣೆಗಳನ್ನು ಮರೆತೇಬಿಡುತ್ತಾಳೆ.
ಅಸಲಿ ವ್ಯತ್ಯಾಸ ಬರುವುದೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ರಾಜಕಾರಣಿಗಳು ಅಧಿಕಾರ ಸ್ವೀಕರಿಸಿದಾಗ. ಗಂಡಸರು ತಮ್ಮ ಮಾತು ಒಲಿಸಿಕೊಳ್ಳುವಲ್ಲಿ ಏಕೆ ಯಶಸ್ವಿಯಾಗುತ್ತಾರೆಂದರೆ, ಪುರುಷ ರಾಜಕಾರಣಿಗಳ ಸಂಖ್ಯೆ ಮಹಿಳೆಯರಿಗಿಂತ ಸದಾ ಹೆಚ್ಚಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಂಗಸರು ರಾಜಕಾರಣಿಗಳಾದಾಗ ಮಾತ್ರ ಅವರು ಸಾಮಾನ್ಯ ಹೆಣ್ಣಿನ ಸಮಸ್ಯೆಗಳ ಪರಿಹಾರದತ್ತ ಒಂದು ನಿರ್ದಿಷ್ಟ ಕೋನದಿಂದ ವೀಕ್ಷಿಸಬಹುದು. ಆಗ ಮಾತ್ರ ಅವರಿಗೆ ತಮ್ಮ ಅಧಿಕಾರ ಕಳೆದುಹೋದೀತು ಎಂಬ ಆತಂಕ ತಪ್ಪುತ್ತದೆ.
ರಾಜಕೀಯದಲ್ಲಿ ಹೆಂಗಸರೇಕೆ ಕಡಿಮೆ?
ಸ್ವಾತಂತ್ರ ಸಂಗ್ರಾಮದಿಂದ ಹಿಡಿದು, ಸ್ವತಂತ್ರ ಭಾರತದಲ್ಲಿ ಅಧಿಕಾರ ನಡೆಸುವವರೆಗೂ ಹೆಂಗಸರು ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇಷ್ಟಿದ್ದಾಗಿಯೂ, ರಾಜಕೀಯದಲ್ಲಿ ಹೆಣ್ಣು ಎಷ್ಟು ಸಕ್ರಿಯಳು ಎಂಬ ವಿಷಯ ಬಂದಾಗ, ಲೆಕ್ಕಾಚಾರ ಬಹಳ ನಿರಾಶಾದಾಯಕ ವಿವರ ಒದಗಿಸುತ್ತದೆ. ವಿಷಯ ಸಕ್ರಿಯ ರಾಜಕಾರಣ ಇರಲಿ ಅಥವಾ ಮತ ಚಲಾಯಿಸುವಿಕೆ, ಎರಡೂ ಕಡೆ ಹೆಂಗಸರ ಪಾಲ್ಗೊಳ್ಳುವಿಕೆ ಬಹಳ ಕಡಿಮೆ. ಹಾಗೆ ನೋಡಿದರೆ ಮಹಿಳಾ ಮತದಾರರ ಸಂಖ್ಯೆ ಹಿಂದಿಗಿಂತಲೂ ಈಗ ತುಸು ಉತ್ತಮ ಎನ್ನಬಹುದು. ಆದರೆ ವಿಶ್ವ ಮಟ್ಟದಲ್ಲಿ ನೋಡಿದಾಗ ಭಾರತದ ಸ್ಥಿತಿ, ಇಲ್ಲಿನ ರಾಜಕೀಯ ಗಮನಿಸಿದರೆ, ಸಕ್ರಿಯ ಮಹಿಳಾ ರಾಜಕಾರಣಿಗಳ 193 ದೇಶಗಳಲ್ಲಿ ಭಾರತ 141ನೇ ಸ್ಥಾನದಲ್ಲಿದೆ.
ಸ್ವಾತಂತ್ರ್ಯದ ನಂತರ ಭಾರತದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರದಲ್ಲಿ 20 ಮಂದಿಯ ಕ್ಯಾಬಿನೆಟ್ ಮಿನಿಸ್ಟ್ರಿಯಲ್ಲಿ ಕೇವಲ ಒಬ್ಬ ಮಹಿಳೆ ರಾಜಕುಮಾರಿ ಅಮೃತಾ ಕೌರ್ ಮಾತ್ರ ಇದ್ದರು. ಆಕೆ ಆರೋಗ್ಯ ಮಂತ್ರಿ ಆಗ್ದಿದರು. ಲಾಲ್ ಬಹದ್ದೂರ್ ಶಾಸ್ತ್ರೀಯವರ ಮಂತ್ರಿ ಮಂಡಲದಲ್ಲಿ ಹೆಂಗಸರೇ ಇರಲಿಲ್ಲ! ಅದೇ ತರಹ ಇಂದಿರಾಗಾಂಧಿ ಮಂತ್ರಿ ಮಂಡಲದಲ್ಲೂ ಸಹ ಅವರನ್ನು ಬಿಟ್ಟರೆ ಬೇರೆ ಮಾನಿನಿಯರೇ ಇರಲಿಲ್ಲ. ಮುಂದೆ ರಾಜೀವ್ ಗಾಂಧಿ ದರ್ಬಾರ್ ನಲ್ಲಿ ಕೇವಲ ಮೊಹಸಿನಾ ಕಿದ್ವಾಯಿ ಒಬ್ಬರೇ ಮಹಿಳೆ ಮಂತ್ರಿ ಆಗಿದ್ದರು. ಮೋದಿಯವರ ಸರ್ಕಾರದಲ್ಲಿ ಈ ಸ್ಥಿತಿ ಸುಧಾರಿಸಿತು ಎಂದೇ ಹೇಳಬೇಕು. ಸಂಖ್ಯೆ ಬಿಟ್ಟರೆ ಸ್ಥಿತಿ ಬಹಳ ಉತ್ತಮ ಎಂದೇನೂ ಹೇಳುವಂತಿಲ್ಲ. ಮಹಿಳಾ ಮತದಾರರಿರಲಿ ಅಥವಾ ರಾಜಕಾರಣಿ, ಈಗಲೂ ಗಂಡಸರೇ ಅವರ ನಿರ್ಧಾರಗಳನ್ನು ಕಂಟ್ರೋಲ್ ಮಾಡುತ್ತಿದ್ದಾರೆ.
ಭಾರತದ ರಾಜಕೀಯದಲ್ಲಿ ಸಕ್ರಿಯ ಮಹಿಳೆಯರನ್ನು ಗಮನಿಸಿದರೆ, ಅವರಲ್ಲಿ ಹೆಚ್ಚು ಮಂದಿ ಸಶಕ್ತ ರಾಜಕೀಯ ಪರಿವಾರದಿಂದ ಬಂದವರೇ ಆಗಿದ್ದಾರೆ. ಅದು ಇಂದಿರಾಗಾಂಧಿ ಅಥವಾ ವಸುಂಧರ ರಾಜೆ ಆಗಿರಬಹುದು. ಹೆಣ್ಣು ರಾಜಕೀಯಕ್ಕೆ ಬರಬಾರದು ಎಂದು ತಡೆಯಲು ನಮ್ಮಲ್ಲಿ ನೂರಾರು ಕಾರಣಗಳಿವೆ. ಅಂದ್ರೆ ನಮ್ಮ ದೇಶದಲ್ಲಿ ರಾಜಕಾರಣಿ ಆಗಲು ಸಾಕಷ್ಟು ಹಣ ಇರಲೇಬೇಕು. ಜೊತೆಗೆ ಅಗತ್ಯ ಬಿದ್ದಾಗ, ಹಿಂಸಾ ಮಾರ್ಗ ಅನುಸರಿಸಲಿಕ್ಕೂ ಸಿದ್ಧರಿರಬೇಕು.
ರಾಜಕೀಯ ನಿಜಕ್ಕೂ ಕಠಿಣಕರ ಪ್ರೊಫೆಶನ್. ಇದರಲ್ಲಿ ಬಹಳಷ್ಟು ಅನಿಶ್ಚಿತತೆಗಳು ಇರುತ್ತವೆ. ಎಲ್ಲಿಯವರೆಗೆ ನಿಮ್ಮ ಬಳಿ ಅಪಾರ ಆದಾಯದ ಮೂಲ ಇಲ್ಲವೋ, ಇದು ಬಿಟ್ಟರೆ ಇನ್ನೊಂದಿಲ್ಲ ಎಂದು ಭಾವಿಸುವಿರೋ, ಅಲ್ಲಿಯವರೆಗೆ ನೀವು ರಾಜಕೀಯದಲ್ಲಿ ಸಕ್ರಿಯವಾಗಲು ಸಾಧ್ಯವೇ ಇಲ್ಲ. ಜಯಲಲಿತಾ ಅಥವಾ ಮಾಯಾವತಿಯವರ ಉದಾಹರಣೆ ಗಮನಿಸಿ, ಇವರುಗಳ ಬಳಿ ಕಾನ್ಶಿರಾವ್ ರಂಥ ಗಾಡ್ ಫಾದರ್ಸ್ ಇದ್ದರು. ಅವರುಗಳಿಂದಲೇ ಈ ಮಹಿಳೆಯರು ಮುನ್ನೇರಲು ಸಾಧ್ಯವಾಯಿತು.
ಸಕ್ರಿಯ ರಾಜಕಾರಣದಲ್ಲಿ ಮಹಿಳಾ ಸ್ಥಿತಿ
ಸಕ್ರಿಯ ರಾಜಕಾರಣದಲ್ಲಿ ಮಹಿಳೆಯರು ಸ್ಥಿರವಾಗಿ ನೆಲೆ ನಿಲ್ಲುವುದು ಸುಲಭವೇನಲ್ಲ, ಕಾಲೆಳೆಯುವವರ ಸಂಖ್ಯೆ ಅತ್ಯಧಿಕ, ಸ್ವಪಕ್ಷವಾದರೂ ಸರಿ. ಅವರ ಈ ದುಃಸ್ಥಿತಿಗೆ ಕಾರಣ, ಕೇವಲ ರಾಜಕೀಯ ಪಕ್ಷಗಳಲ್ಲ. ನಮ್ಮ ಸಮಾಜ ಹೌದು. ಭಾರತೀಯ ಸಮಾಜ ರಾಜಕೀಯದಲ್ಲಿ ಹೆಣ್ಣನ್ನು ಸ್ವೀಕರಿಸಲು ಎಂದೂ ಮುಂದಾಗದು. ಮಹಿಳಾ ನಾಯಕಿಯರ ಬಗ್ಗೆ ಜನರ ಅಭಿಪ್ರಾಯ ಇಂದಿಗೂ ಸಂಕೀರ್ಣವೇ ಆಗಿದೆ. ನಮ್ಮ ದೇಶದಲ್ಲಿ ಹೆಂಗಸರು ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ಡ್ರೆಸ್, ಮೇಕಪ್, ಲುಕ್ಸ್ ಕಡೆ ಗಮನಹರಿಸುತ್ತಾರೆಂಬ ನಂಬಿಕೆ ಇದೆ. ಸಹೋದ್ಯೋಗಿ ಗಂಡಸರು ಈ ಕುರಿತಾಗಿ ಆಗಾಗ ಟೀಕೆ ಟಿಪ್ಪಣಿ ಮಾಡುತ್ತಲೇ ಇರುತ್ತಾರೆ. ಪ್ರಿಯಾಂಕಾ ಗಾಂಧಿ ರಾಜಕೀಯದಲ್ಲಿ ಸಕ್ರಿಯಳಾದ ತಕ್ಷಣ, ಆಕೆಯ ಉಡುಗೆ ತೊಡುಗೆ, ಪರ್ಸನಾಲ್ಟಿ, ಮೇಕಪ್ ಇತ್ಯಾದಿಗಳ ಬಗ್ಗೆ ಟೀಕೆ ಟಿಪ್ಪಣಿ ಕೇಳಿಬರುತ್ತವೆ. ಇಂಥ ಅಂದದ ಬೆಡಗಿ ರಾಜಕೀಯದಲ್ಲಿ ಏನು ಸಾಧಿಸಲು ಸಾಧ್ಯ ಎಂದೂ ಮಾತುಗಳು ಬಂದಿವೆ.
ಶರದ್ ಯಾದವ್ ವಸುಂಧರಾ ರಾಜೆಯ ಸ್ಥೂಲತೆ ಬಗ್ಗೆ ಹೇಳುತ್ತಾ, ಇಂಥ ಸ್ಥೂಲತೆ ಉಳ್ಳವರು ರಾಜಕೀಯದಲ್ಲಿ ಸಕ್ರಿಯರಾಗಿ ಏನು ಮಾಡಬೇಕು, ವಿಶ್ರಾಂತಿ ಪಡೆಯಲಿ ಎಂದಿದ್ದಾರೆ. ಇಂಥ ಟಿಪ್ಪಣಿಗಳ ಔಚಿತ್ಯವೇನು? ಇದೇ ತರಹ ಮಮತಾ, ಜಯಾ, ಮಾಯಾ, ಸುಷ್ಮಾ ಎಲ್ಲರಿಗೂ ಒಂದಲ್ಲ ಒಂದು ಕಮೆಂಟ್ಸ್ ಕೇಳಬೇಕಾಗುತ್ತದೆ. ಆಕೆ ಒಂದು ಕೆಲಸದಲ್ಲಿ ವಿಫಲಳಾದರೂ ಹೆಣ್ಣಾದ್ದರಿಂದಲೇ ಹೀಗಾಯ್ತು ಎಂದು ಆಡಿಕೊಳ್ಳುತ್ತಾರೆ. ಗಂಡು ರಾಜಕಾರಣಿ ಮಾತ್ರ ವಿಫಲನಾಗುವುದೇ ಇಲ್ಲವೇ?
ನಿರಾಧಾರ ಮಾತುಗಳೇಕೆ?
ಜನರಿಗಂತೂ ಮಹಿಳಾ ಅಭ್ಯರ್ಥಿ ಚುನಾವಣಾ ಕಣಕ್ಕಿಳಿದರೆ ಗೆಲ್ಲುವುದೇ ಇಲ್ಲ ಎಂಬ ಮಾತಿದೆ. ಅವರ ಪ್ರಕಾರ, ತನ್ನ ಕೌಟುಂಬಿಕ, ವೈಯಕ್ತಿಕ ಕೆಲಸಗಳಲ್ಲಿ ಬಿಝಿ ಆಗುವ ಹೆಣ್ಣು ರಾಜಕೀಯದಲ್ಲಿ ಎಲ್ಲಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ. ಗಂಡಸರ ಪೈಪೋಟಿ ಆಕೆ ಎದುರಿಸಲಾರಳು ಎಂದು ಖಂಡಿಸುತ್ತಾರೆ. ಮೊಟ್ಟ ಮೊದಲಿಗೆ ಹೆಂಗಸರಿಗೆ ರಾಜಕೀಯದ ಜ್ಞಾನವೇ ಇರುವುದಿಲ್ಲ ಎಂಬ ಮಾತು ಏಳುತ್ತದೆ. ಆದ್ದರಿಂದ ಅವರು ಗೆದ್ದು ಬಂದರೂ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಆರೋಗ್ಯ ಸಚಿವೆ ಮುಂತಾದವಕ್ಕೆ ಸೀಮಿತಗೊಳಿಸುತ್ತಾರೆ. ಆದರೆ ನಿರ್ಮಲಾ ಸೀತಾರಾಮ್, ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ರಂಥ ಸಕ್ರಿಯ ಮಹಿಳೆಯರನ್ನು ಕಂಡಾಗ ಈ ಮಾತು ನಿರಾಧಾರ ಎಂದು ಸಾಬೀತಾಗುತ್ತದೆ.
ಹೆಣ್ಣಾದ ಕಾರಣ ರಾಜಕೀಯಕ್ಕೆ ಇಳಿದ ಮೇಲೆ ಆಕೆ ತನ್ನ ಸಾಟಿ ಗಂಡು ರಾಜಕಾರಣಿಗಿಂತ ಅತ್ಯಧಿಕ ಶ್ರಮಪಡಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಆಕೆ ತನ್ನ ಸಾಮರ್ಥ್ಯ ನಿರೂಪಿಸಲು, ಸಾಮಾನ್ಯ ಹೆಣ್ಣಿನ ಸಮಸ್ಯೆಗಳನ್ನು ಬದಿಗೊತ್ತಿ, ಸದಾ ಪೈಪೋಟಿಯಿಂದ ಕೆಣಕುವ ಗಂಡು ರಾಜಕಾರಣಿಗಳೊಂದಿಗೆ ಸ್ಪರ್ಧಿಸುತ್ತಾ, ಅವರಂತೆ ಸುಧಾರಣೆಗಳನ್ನು ತಾನೂ ಮಾಡಬಲ್ಲೆ ಎಂದು, ಹೆಣ್ಣಿನ ಮೂಲ ಸಮಸ್ಯೆಗಳನ್ನು ಮರೆತೇಬಿಡುತ್ತಾರೆ. ಹೀಗೆ ತನ್ನನ್ನು ತಾನು ಸುರಕ್ಷಿತಳನ್ನಾಗಿ ಮಾಡಿಕೊಳ್ಳುತ್ತಾಳೆ. ಈ ವಿಷಯದಲ್ಲಿ ಹೆಣ್ಣು ಗಂಡಿಗಿಂತ ಎಷ್ಟುಪಟ್ಟು ಜಾಗೃತಳಾಗಿದ್ದರೂ ಕಡಿಮೆಯೇ, ಕಾಲೆಳೆಯುವುದು ರಾಜಕೀಯದ ಮುಖ್ಯ ಲಕ್ಷಣವೇ ಆಗಿದೆ!
– ಗಿರಿಜಾ ಶಂಕರ್
ಮಹಿಳೆಯರ ಸಕ್ರಿಯ ರಾಜಕೀಯ
ಪ್ಯೂರಿಸರ್ಚ್ ಸೆಂಟರ್ ನ ಒಂದು ಸರ್ವೆ ಪ್ರಕಾರ ವಿಶ್ವ ಮಟ್ಟದಲ್ಲಿ ಗಮನಿಸಿದಾಗ ಕೇವಲ 15 ಮಹಿಳೆಯರು ಮಾತ್ರವೇ ತಮ್ಮ ದೇಶದ ಸರ್ಕಾರದ ಅಸಲಿ ತಾಕತ್ತಾಗಿದ್ದಾರೆ. ಇವರಲ್ಲಿ 8 ದೇಶಗಳ ಮೊದಲ ಮಹಿಳೆಯರಾಗಿ ಇವರು ಆಯ್ಕೆಯಾಗಿದ್ದಾರೆ. ಇದರ ಅರ್ಥ ಸಂಯುಕ್ತ ರಾಷ್ಟ್ರಗಳ 193 ಸದಸ್ಯ ದೇಶಗಳ ಮಹಿಳಾ ನಾಯಕಿಯರ ಪಾಲುಗಾರಿಕೆ ಕೇವಲ 10%ಗಿಂತ ಕಡಿಮೆ.
ಮತ್ತೊಂದು ಪ್ರಶ್ನೆ ಎಂದರೆ ಈ ಮಹಿಳಾ ನಾಯಕಿಯರು ಎಲ್ಲಾ ಸಮಸ್ಯೆಗಳನ್ನೂ ಎದುರಿಸುವಲ್ಲಿ ಸಮರ್ಥರೇ? ಇತರ ಮಹಿಳೆಯರಿಗೆ ಆದರ್ಶವಾಗಿ ನಿಂತು ಅವರನ್ನು ಮುಂದೆ ತರುತ್ತಿರುವವರೇ? ಸಾಮಾನ್ಯ ಹೆಣ್ಣಿನ ಹಿತಾಸಕ್ತಿಯ ಮಾತುಗಳನ್ನು ಜನರ ಮುಂದಿಡುತ್ತಿದ್ದಾರಾ? ಒಂದಂತೂ ನಿಜ, ಇವರುಗಳು ಪ್ರೇರಣಾ ಶಕ್ತಿಯಾಗಿ ದುಡಿಯುತ್ತಿದ್ದಾರೆ!
ಅಸಲಿಗೆ ಮಹಿಳಾ ನಾಯಕಿಯರ ಬಳಿ, ರಾಜಕೀಯ ನೀತಿಗಳಿಂದಾಗಿ ಹೆಣ್ಣಿನ ಸಮಸ್ಯೆಗಳ ಆಳಕ್ಕಿಳಿದು ಅವುಗಳನ್ನು ಮೂಲಭೂತವಾಗಿ ನಿವಾರಿಸಲು ಹೆಚ್ಚಿನ ಕಾಲಾವಕಾಶ ಇರುವುದೇ ಇಲ್ಲ. ಆದರೆ ಇವರ ಉಪಸ್ಥಿತಿ ಯುವತಿಯರನ್ನು ರಾಜಕೀಯದೆಡೆಗೆ ಸೆಳೆದು ತರುತ್ತಿದೆ. 2012ರ ಒಂದು ಸ್ವಿಸ್ ಅಧ್ಯಯನ ಇದನ್ನೇ ನಿರೂಪಿಸುತ್ತದೆ. 4 ಸಮೂಹಗಳಲ್ಲಿ ವರ್ಚುವಲ್ ರಿಯಾಲಿಟಿ ವಾತಾವರಣದಲ್ಲಿ ಗಂಡು, ಹೆಣ್ಣು ವಿದ್ಯಾರ್ಥಿಗಳನ್ನು ಭಾಷಣಕ್ಕಾಗಿ ಕರೆಸಲಾಯಿತು. ಇವರಲ್ಲಿ ಒಂದು ಸಮೂಹಕ್ಕೆ ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ರ ಫೋಟೋ, ಇನ್ನೊಬ್ಬರಿಗೆ ಹಿಲೆರಿ ಕ್ಲಿಂಟನ್, ಮತ್ತೊಬ್ಬರಿಗೆ ಬಿಲ್ ಕ್ಲಿಂಟನ್ ಹಾಗೂ ಕೊನೆಯವರಿಗೆ ಯಾವ ಫೋಟೋವನ್ನೂ ತೋರಿಸಿರಲಿಲ್ಲ. ಮಹಿಳಾ ರಾಜಕಾರಣಿಗಳ ಫೋಟೋ ಕಂಡವರು ತಮ್ಮ ಭಾಷಣದಲ್ಲಿ ಯಶಸ್ವಿ ಎನಿಸಿದರೆ, ಪುರುಷ ರಾಜಕಾರಣಿ ಅಥವಾ ಯಾವ ಫೋಟೋವನ್ನೂ ನೋಡದವರು, ಯಶಸ್ವಿಯಾಗಿ ಭಾಷಣ ಮಾಡಲಿಲ್ಲ. ಇದರಿಂದ ಸ್ಪಷ್ಟ ಆಗುವುದೆಂದರೆ, ಮಹಿಳಾ ನಾಯಕಿಯರು ನಮ್ಮ ಯುವನಜನತೆಗೆ ಸದಾ ಸರ್ವದಾ ಪ್ರೇರಣಾ ಶಕ್ತಿ ಆಗಿ ಮಾರ್ಗದರ್ಶಕರಾಗುತ್ತಾರೆ.