ಡಾ. ಎಚ್. ಎಸ್. ಅನುಪಮಾ
*ಫೆಬ್ರುವರಿ 6 ಅನುಪಮಾ ಅವರ ಜನ್ಮದಿನ. ಅನುಪಮಾ ಶಿಕ್ಷಕ ವೃತ್ತಿಯ, ಸಾಂಪ್ರದಾಯಿಕ ಮನಃಸ್ಥಿತಿಯ ತಾಯ್ತಂದೆಯರ ಮಗಳಾಗಿ ಹುಟ್ಟಿದರು. ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲು. ತಾಯಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆಯವರು. ಅವರಿಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರಾಗಿ ಕೆಲಸ ಮಾಡುತ್ತ ವರ್ಗಾವಣೆಗೊಳಗಾಗುತ್ತ ಇದ್ದದರಿಂದ ಇವರ ವಿದ್ಯಾಭ್ಯಾಸ ಮೂರ್ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿ ಆಯಿತು. ಯಾವುದೋ ಒಂದು ಊರಿನ, ಒಂದು ಜಾತಿಯ ಕೇರಿಯಲ್ಲಿ ತಾನು ಬೆಳೆಯಲಿಲ್ಲ ಎನ್ನುವುದು ಬಾಲ್ಯಕಾಲ ತಮಗಿತ್ತ ಕೊಡುಗೆಯೆಂದೇ ಅನುಪಮಾ ಭಾವಿಸಿದ್ದಾರೆ.*
*ಅನುಪಮಾ ಮನೆಗೆ ತಂದೆಯವರು ತರುತ್ತಿದ್ದ ಪತ್ರಿಕೆ ನಿಯತಕಾಲಿಕಗಳನ್ನೆಲ್ಲ ಓದುತ್ತಿದ್ದರು. ಲಂಕೇಶ್ ಪತ್ರಿಕೆ ಓದುವಾಗ ಲಂಕೇಶರ ಬರಹದ ರೀತಿ ಬಹಳ ಮೆಚ್ಚುಗೆಯಾಗುತ್ತಿತ್ತು. ಏಳನೇ ತರಗತಿಯಲ್ಲಿರುವಾಗ ಇವರ ಮನೆಯ ಪ್ರೀತಿಯ ಮೊಲ ಶೆಲ್ಲಿಯು, ನಾಯಿ ಬಾಯಿಗೆ ತುತ್ತಾದಾಗ ದುಃಖದಿಂದ ಬರೆದ ಪದ್ಯ ‘ವನಿತಾ' ಪತ್ರಿಕೆಯಲ್ಲಿ ಪ್ರಕಟಗೊಂಡು ಐದು ರೂಪಾಯಿ ಬಹುಮಾನದ ಸಂಭಾವನೆ ಸಂದಿತ್ತು! ನಂತರ ಪದ್ಯ ಬರೆಬರೆದು ಯಾರಿಗೂ ತೋರಿಸದೇ ಬಚ್ಚಿಟ್ಟುಕೊಂಡು ಡೈರಿ ತುಂಬಿಸುತ್ತ ಹೋದರು. ಅಂದಿನ ದಿನಗಳಲ್ಲಿ ಊರಿನಲ್ಲಿ ಕಂಡ ಹೆಣ್ಣುಮಕ್ಕಳ ದಾರುಣ ಪರಿಸ್ಥಿತಿಯ ಬದುಕು ಇವರ ಮೇಲೆ ಅಪಾರ ಪ್ರಭಾವ ಬೀರಿತ್ತು.*
*ಪಿಯುಸಿಗೆ ಶಿವಮೊಗ್ಗದ ಡಿವಿಎಸ್ ಕಾಲೇಜು ಸೇರಿದರು. ಇವರು ವಿಜ್ಞಾನ ವಿದ್ಯಾರ್ಥಿಯಾದರೂ ಕಾಲೇಜಿನಲ್ಲಿ ಕನ್ನಡ ಬೋಧಿಸುತ್ತಿದ್ದ ಶಿವಮೊಗ್ಗ ಮುನೀರ್, ರಹಮತ್ ತರೀಕೆರೆ ಅವರ ಪ್ರೋತ್ಸಾಹದಿಂದ ಕವನಸ್ಪರ್ಧೆ, ಭಾಷಣ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮುಂದೆ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪ್ರವೇಶ ದೊರೆಯಿತು. ಓದಿನ ದಿನಗಳಲ್ಲೂ ಬರೆದರು. ಮುಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸಲು ತೊಡಗಿದರು. ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಬರೆಯಲು ಪುರಸೊತ್ತಿಲ್ಲದಿದ್ದರೂ ಕ್ರಮೇಣ ಬರಹಕ್ಕಿಳಿದರು. 'ಕೆಂಡಸಂಪಿಗೆ'ಯಲ್ಲಿ ಬರೆದರು. ಅನೇಕ ಪತ್ರಿಕೆಗಳಲ್ಲೂ ಬರೆದರು.*
*"ಸಾಹಿತ್ಯ ಮತ್ತು ವೈದ್ಯಕೀಯ ಎರಡೂ ಬೇರೆ-ಬೇರೆ ಅಲ್ಲ. ಅವು ಒಂದಕ್ಕೊಂದು ಪೂರಕ. ಏಕೆಂದರೆ ವೈದ್ಯರಿಗೆ ಸಾಹಿತ್ಯಕೃಷಿಗೆ ಬಿತ್ತಲು ಬೇಕಾದ ಅತ್ಯಮೂಲ್ಯ ಬೀಜಗಳು ವಿಪುಲವಾಗಿ ದೊರೆಯುತ್ತವೆ. ಬದುಕಿನ ಎಲ್ಲ ಬಣ್ಣಗಳನ್ನು, ಮನುಷ್ಯ ಸ್ವಭಾವಗಳನ್ನು ನೇರವಾಗಿ ಹತ್ತಿರದಿಂದ ನೋಡಲು ವೈದ್ಯವೃತ್ತಿಯಲ್ಲಿ ಸಾಧ್ಯವಿದೆ. ಸಾಹಿತಿ ಅಥವಾ ಸಾಹಿತಿಯ ಮುಖ್ಯ ಉದ್ದೇಶ ಸಮಾಜದಲ್ಲಿ ಇರುವ ನೋವು, ದುಃಖಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಜನಸಮುದಾಯಕ್ಕೆ ಹೇಳುವುದು. ವೈದ್ಯರು ಮಾಡುವುದೂ ಅದನ್ನೇ. ಹಾಗಾಗಿ ವೃತ್ತಿನಿರತರಾಗಿಯೂ ಚಳವಳಿಕಾರಳಾಗಲು ಚಿಮ್ಮುಹಲಗೆಯಂತೆ ವೈದ್ಯಕೀಯವು ಒದಗಿಬರುತ್ತದೆ. ಹೀಗೆ ಪ್ರತಿನಿತ್ಯ ಹಳ್ಳಿಯ ಜನರ ಜೊತೆಗಿನ ಒಡನಾಟ ಓದುಗಳಾದ ನನ್ನನ್ನು ಬರಹಗಾರ್ತಿಯಾಗಿ, ಸಂಘಟಿತ ಚಟುವಟಿಕೆಯಲ್ಲಿ ವಿಶ್ವಾಸವುಳ್ಳವಳನ್ನಾಗಿ ನನ್ನ ವೃತ್ತಿಯೂ ರೂಪಿಸಿತು" ಎನ್ನುತ್ತಾರೆ ಅನುಪಮಾ.*
*ಅನುಪಮಾ ಅವರು ಸಮಾನಾಸಕ್ತರೊಡನೆ 2007-08ರ ವೇಳೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊನ್ನಾವರದಲ್ಲಿ ಸಂಘಟಿಸಲು ಆರಂಭಿಸಿದರು. ಸಂಪರ್ಕ ಜಾಲ ಬೆಳೆಯುತ್ತ ಹೋಯಿತು. ಸಾಹಿತಿಗಳ, ಹೋರಾಟಗಾರರ, ಸಂಘಟನೆಗಳ ನಂಟು ಬೆಳೆಯುತ್ತ ಹೋದಹಾಗೆ ವೈಚಾರಿಕವಾಗಿ ಬೆಳೆಯತೊಡಗಿದರು. ಅಂಬೇಡ್ಕರ್ ಗಾಢವಾಗಿ ಪ್ರಭಾವಿಸಿದರು. ಇನ್ನಿತರ ಬರಹಗಾರರ ಬರಹಗಳೂ ಪ್ರಭಾವಿಸುತ್ತ ಹೋದವು. ಈಗಲೂ ಅನುಪಮಾ ಅವರು ತಮ್ಮ ಸುತ್ತಮುತ್ತಲಿನ ಜನರ ಬಗ್ಗೆ, ವಿಶೇಷವಾಗಿ ಯುವ ಜನರ ಬಗ್ಗೆ ಮತ್ತು ಶಾಲಾ ಮಕ್ಕಳ ಬಗ್ಗೆ ಅಪಾರ ಕಾಳಜಿಯುಕ್ತ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತ ಬಂದಿದ್ದಾರೆ. ಕವಲಕ್ಕಿಯ ತಮ್ಮ ನೆಲೆಯಲ್ಲಿ 'ಪ್ರಜ್ಞಾ ಜಾಗೃತಿ ಯುವ ಶಿಬಿರ'ಗಳನ್ನು ತಮ್ಮದೇ ಖರ್ಚಿನಲ್ಲಿ ನಡೆಸುತ್ತಾರೆ.*