ಇಮ್ಯುನಿಟಿ ಅಂದರೆ ರೋಗ ನಿರೋಧಕ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರಬೇಕಾದುದು ಅಗತ್ಯ. ಕೊರೋನಾದ ಮೊದಲನೇ, ಎರಡನೇ ಅಲೆಗಳು ಬಂದು ಹೋದ ನಂತರವೇ ನಮಗೆ ರೋಗ ನಿರೋಧಕ ಶಕ್ತಿಯ ಮಹತ್ವ ಗೊತ್ತಾದುದು. ಯಾವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಗೆ ಇರುತ್ತದೋ ಅವರು ಕೊರೋನಾ ಅಥವಾ ಯಾವುದೇ ರೋಗವನ್ನು ಎದುರಿಸುವಲ್ಲಿ ಸಮರ್ಥರಾಗಿರುತ್ತಾರೆ. ಯಾವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅವರು ಯಾವುದೇ ತೆರನಾದ ರೋಗಗಳ ಕಪಿಮುಷ್ಟಿಗೆ ಬೇಗ ಸಿಲುಕುತ್ತಾರೆ.

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಲೈಫ್‌ ಸ್ಟೈಲ್‌, ಎಕ್ಸರ್‌ ಸೈಜ್‌ ಮತ್ತು ಡಯೆಟ್‌ ಬಗ್ಗೆ ಗಮನ ಕೊಡಬೇಕಾದುದು ಅತ್ಯಗತ್ಯ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅದರಿಂದ ದೇಹ ರೋಗದೊಂದಿಗೆ ಹೋರಾಡಲು ಸಮರ್ಥವಾಗುತ್ತದೆ.

ಪರಿಪೂರ್ಣ ನಿದ್ರೆ ಅತ್ಯವಶ್ಯ

ರೋಗ ನಿರೋಧಕ ಶಕ್ತಿ ಹೆಚ್ಚಲು ಪರಿಪೂರ್ಣ ನಿದ್ರೆ ಅತ್ಯವಶ್ಯಕ. 7-8 ಗಂಟೆಗಳಷ್ಟು ಕಾಲ ನಿದ್ರೆ ಅವಶ್ಯ ಪಡೆಯಿರಿ. ರಾತ್ರಿ ಸಕಾಲಕ್ಕೆ ಮಲಗುವುದು ಹಾಗೂ ಬೆಳಗ್ಗೆ ಬೇಗ ಏಳುವುದರ ಅರ್ಥ ನೀವು ಅರೆಬರೆ ನಿದ್ರೆ ಪಡೆಯಬೇಕೆಂದಲ್ಲ. ರಾತ್ರಿ ಬಹುಬೇಗ ಮಲಗುವುದು, ಬೇಗ ಎದ್ದೇಳುವುದರಿಂದ ನಿಮ್ಮ ದಿನಚರಿ ಸರಿಯಾಗಿರುತ್ತದೆ.

ಕಡಿಮೆ ನಿದ್ರೆ ಪಡೆಯುವುದರಿಂದ ದೇಹದಲ್ಲಿ ಕಾರ್ಟಿಸೋಲ್ ‌ಎಂಬ ಹಾರ್ಮೋನಿನ ಮಟ್ಟ ಹೆಚ್ಚುತ್ತದೆ. ಅದು ಹೆಚ್ಚುವುದರಿಂದ ಒತ್ತಡ ಹೆಚ್ಚುತ್ತದೆ. ಅದರ ಹೆಚ್ಚಳದಿಂದ ಇಮ್ಯುನಿಟಿ ಸಿಸ್ಟಮ್ ಅಸ್ತವ್ಯಸ್ತಗೊಳ್ಳುತ್ತದೆ.

ಒಳ್ಳೆಯ ನಿದ್ರೆಗೆ ವ್ಯಾಯಾಮ

ಬಹಳಷ್ಟು ಜನರು ರಾತ್ರಿ ತಮಗೆ ನಿದ್ರೆ ಬರುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ದೇಹಕ್ಕೆ ದಣಿವಾಗದೇ ಇರುವುದು ಹಾಗೂ ದೇಹದಲ್ಲಿ ಆಲಸ್ಯತನ ಮನೆ ಮಾಡಿಕೊಂಡಿರುವುದು. ನೀವು ಬೆಳಗ್ಗೆ ಸಕಾಲಕ್ಕೆ ಎದ್ದರೆ, ವ್ಯಾಯಾಮ ಚಟುವಟಿಕೆ ಅನುಸರಿಸಿದ್ದರೆ, ದೇಹ ಬಹುಬೇಗ ನಿದ್ರಿಸುವ ಅಪೇಕ್ಷೆ ಮೂಡಿಸುತ್ತದೆ. ಇಂತಹದರಲ್ಲಿ ಬಹುಬೇಗ ಏಳುವುದರ ಜೊತೆಗೆ ನಿಯಮಿತವಾಗಿ ನಡಿಗೆ ಮತ್ತು ವ್ಯಾಯಾಮ ಮಾಡುವ ಅಗತ್ಯ ಇರುತ್ತದೆ. ನಿಧಾನವಾಗಿ ದೇಹದ ಮಸಾಜ್ ಮಾಡಿಕೊಳ್ಳುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಬೆಳಗ್ಗೆ ನಡಿಗೆ, ಮಸಾಜ್‌ ಹಾಗೂ ವ್ಯಾಯಾಮದಿಂದ ದೇಹದಲ್ಲಿ ಎಂಜೈಮ್ಸ್ ಮತ್ತು ಹಾರ್ಮೋನ್‌ ಗಳು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ನಮ್ಮನ್ನು ರೋಗಗಳಿಂದ ರಕ್ಷಿಸುತ್ತವೆ.

ಬೆಳಗ್ಗೆ ನಡಿಗೆ ಹಾಗೂ ವ್ಯಾಯಾಮದ ಸಮಯ ಹೇಗಿರಬೇಕೆಂದರೆ, ದೇಹಕ್ಕೆ ಬೆಳಗ್ಗೆ 20-30 ನಿಮಿಷ ಸೂರ್ಯನ ಬಿಸಿಲು ಕೂಡ ತಾಗಬೇಕು. ಬೆಳಗಿನ ಬಿಸಿಲು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ.

ಒಳ್ಳೆಯ ಡಯೆಟ್ಅತ್ಯವಶ್ಯ

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಲು ಮೆಟಬಾಲಿಸಂನ ಅಗತ್ಯ ಇರುತ್ತದೆ. ನಮ್ಮ ಮೆಟಬಾಲಿಸಂ ಎಷ್ಟು ಚೆನ್ನಾಗಿರುತ್ತದೋ ನಮ್ಮ ರೋಗ ಸಾಮರ್ಥ್ಯ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಮೆಟಬಾಲಿಸಂ ಹೆಚ್ಚಲು ಬೆಳಗ್ಗೆ ಆರೋಗ್ಯಕರ ಆಹಾರ ಸೇವನೆಯಷ್ಟೇ ಅಲ್ಲ, ನಾಲ್ಕು ಗಂಟೆಗಳ ಅಂತರದಲ್ಲಿ ಆರೋಗ್ಯಕರ ಆಹಾರ ಸೇವನೆ ಮುಖ್ಯ. ನಿಮ್ಮ ಡಯೆಟ್‌ ನಲ್ಲಿ ಪ್ರತಿದಿನ ಮೊಸರು ಹಾಗೂ ಮಜ್ಜಿಗೆ ಕೂಡ ಸೇರಿಸಿಕೊಳ್ಳಿ. ಪನೀರ್‌ ನಂತಹ ಪದಾರ್ಥಗಳನ್ನು ಯಾವಾಗಲಾದರು ಒಮ್ಮೆ ಸೇರಿಸುವುದು ಅಗತ್ಯ. ಅವುಗಳಲ್ಲಿನ ಗುಡ್‌ ಬ್ಯಾಕ್ಟೀರಿಯಾ ನಿಮ್ಮನ್ನು ರೋಗ ಪೀಡಿತರಾಗುವುದರಿಂದ ರಕ್ಷಿಸುತ್ತದೆ.

ಬೆಳ್ಳುಳ್ಳಿ, ಅಶ್ವಗಂಧ ಮತ್ತು ಹಸಿಶುಂಠಿಯಂತಹ ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಲು ನೆರವಾಗುತ್ತದೆ. ಅದರಿಂದ ದೇಹಕ್ಕೆ ರೋಗಗಳೊಂದಿಗೆ ಹೋರಾಡುವ ಶಕ್ತಿ ದೊರಕುತ್ತದೆ. ಅದರ ಜೊತೆಗೆ ದೈನಂದಿನ ಆಹಾರದಲ್ಲಿ ಕೆಲವು ಹುಳಿ ಹಣ್ಣುಗಳನ್ನು ಕೂಡ ಸೇರಿಸಿಕೊಳ್ಳಿ. ನಿಂಬೆ, ಕಿತ್ತಳೆ, ಮೂಸಂಬಿ ಯಾವುದೇ ಹಣ್ಣುಗಳಾಗಿರಬಹುದು. ದಿನನಿತ್ಯ ಕನಿಷ್ಠ ಒಂದು ನೆಲ್ಲಿಕಾಯಿ ತಿನ್ನುವುದು ಒಳ್ಳೆಯದು. ಹುಳಿ ಹಣ್ಣುಗಳು ವಿಟಮಿನ್‌ `ಸಿ’ಯ ಸಮೃದ್ಧ ಮೂಲಗಳಾಗಿವೆ. ಅವು ಫ್ರೀ ರಾಡಿಕಲ್ಸ್ ಪ್ರಭಾವವನ್ನು ಕಡಿಮೆಗೊಳಿಸಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಕಾಲಮೇಘದ ಉಪಯೋಗ

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಲು ಕಾಲಮೇಘ ಕೂಡ ಉಪಯುಕ್ತವಾಗಿದೆ. ಇದರ ಸೇವನೆಯಿಂದ ದೇಹದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಇದರ ಜೊತೆ ಜೊತೆಗೆ ಕುಡಿಯಲು ಶುದ್ಧ ನೀರನ್ನು ಬಳಸುವ ಅಗತ್ಯ ಇದೆ. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ನೀವು ಎಷ್ಟು ಹೆಚ್ಚು ನೀರು ಕುಡಿಯುತ್ತೀರೊ, ನಿಮ್ಮ ದೇಹದಲ್ಲಿನ ಟಾಕ್ಸಿನ್ಸ್ ಅಷ್ಟೇ ಸಹಜವಾಗಿ ಹೊರಹೋಗುತ್ತವೆ ಹಾಗೂ ದೇಹ ಸೋಂಕುಗಳಿಂದ ಮುಕ್ತವಾಗಿರುತ್ತದೆ. ನೀವು ದಿನಕ್ಕೆ 1 ಅಥವಾ 2 ಸಲ ಜೇನುತುಪ್ಪ ಹಾಗೂ ತುಳಸಿ ನೀರು ಸೇವನೆಯ ಅಭ್ಯಾಸ ಮಾಡಿಕೊಂಡರೆ ಇನ್ನೂ ಒಳ್ಳೆಯದು. ಗ್ರೀನ್‌ ಟೀ ಕೂಡ ಸೇವಿಸಬಹುದು. ಈ ತೆರನಾದ ಪ್ರಯೋಗಗಳಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ.

ಶೈಲಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ