ಆರತಿ ರಾತ್ರಿ 8 ಗಂಟೆಗೆ ಆಫೀಸಿನಿಂದ ಹೊರಡುವ ಮುನ್ನ ಜಗದೀಶ್‌ ಗೆ ಫೋನ್‌ ಮಾಡಿದ್ದಳು, “ನಾನು ಈಗ ಹೊರಡ್ತಿರುವೆ. ನೀನು ಮನೆಗೆ ಹೊರಟಾಯ್ತಾ?”

“ಹೌದು ನಾನು ಬೇಗ ಫ್ರೀಯಾದೆ. ನೇರವಾಗಿ ಮನೆಗೆ ಬಂದುಬಿಟ್ಟೆ.”

“ಡಿನ್ನರ್‌ ಗೆ ಏನು ಮಾಡುವುದು? ಏನಾದ್ರೂ ಮಾಡೋಕೆ ಆಗುತ್ತಾ ಅಥವಾ ಆರ್ಡರ್‌ ಮಾಡಬೇಕಾ? ನಾನಿನ್ನೂ ಮನೆ ತಲುಪೋಕೆ 1 ಗಂಟೆಯಾದ್ರೂ ಆಗುತ್ತೆ.”

“ಆರ್ಡರ್‌ ಮಾಡಿಬಿಡು. ನನಗೂ ಏನನ್ನೂ ಮಾಡು ಮೂಡ್‌ ಇಲ್ಲ. ಮತ್ತು ಐಸ್‌ ಕ್ರೀಮ್ ಕೂಡ ಮುಗಿದಿದೆ. ಅದನ್ನು ಆರ್ಡರ್ ಮಾಡು.”

ಆರತಿ ಫೋನ್‌ ಕಟ್‌ ಮಾಡಿದಳು. ಅವತ್ತಿನ ದಿನ ಬಹಳ ಬಿಜಿಯಾಗಿತ್ತು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ದಣಿದಿದ್ದಳು. ಈಗಲೂ ಅವಳ ಮನಸ್ಸಿನಲ್ಲಿ ಏನೇನೋ ಸಂಚಲನ ನಡೆಯುತ್ತಿತ್ತು.

ಜಗದೀಶ್‌ ಹಾಗೂ ಆರತಿ ಒಂದೇ ಆಫೀಸಿನಲ್ಲಿ ಬೇರೆ ಬೇರೆ ಡಿವಿಜನ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಆರತಿ ಮೈಸೂರಿನವಳು. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಜಗದೀಶ್‌ ಗಿಂತ ಉನ್ನತ ಹುದ್ದೆಯಲ್ಲಿದ್ದಾಳೆ. ಜೊತೆಗೆ ಒಳ್ಳೆಯ ರೀತಿಯಲ್ಲಿ ಜೀವನವನ್ನು ಲೀಡ್‌ ಮಾಡುತ್ತಿದ್ದಾಳೆ. ಅವಳು ಕಳೆದ ಒಂದು ವರ್ಷದಿಂದ ಜಗದೀಶ್‌ ನೊಂದಿಗೆ ಲಿವ್ ‌ಇನ್ ರಿಲೇಶನ್‌ ಶಿಪ್‌ ನಲ್ಲಿ ಇದ್ದಾಳೆ. ಇಬ್ಬರೂ ಒಂದು ಮೀಟಿಂಗ್‌ ನಲ್ಲಿ ಭೇಟಿ ಆಗಿದ್ದರು. ಜಗದೀಶ್‌ ರಾಯಚೂರು ಕಡೆಯವನು. ಇಬ್ಬರೂ ಮನಸಾರೆ ಫ್ಲಾಟ್‌ ಶೇರ್‌ ಮಾಡುತ್ತಿದ್ದಾರೆ ಮತ್ತು ಕೆಲಸಗಳನ್ನು ಹಂಚಿಕೊಂಡು ಮಾಡುತ್ತಾರೆ.

ಎರಡೂ ಕುಟುಂಬದವರಿಗೆ ಇವರಿಬ್ಬರು ಲಿನ್ ‌ಇನ್‌ ನಲ್ಲಿರುವ ಸಂಗತಿ ತಿಳಿದಿಲ್ಲ. ಆರತಿಗೆ ಜಗದೀಶನ ಮುಕ್ತ ಸ್ವಭಾವ ಇಷ್ಟವಾಗುತ್ತಿತ್ತು. ಜಗದೀಶ್‌ ಗೆ ಆರತಿಯ ಹೊಣೆಗಾರಿಕೆಯ ಸ್ವಭಾವ ಬಹಳ ಇಷ್ಟವಾಗುತ್ತಿತ್ತು. ಇಬ್ಬರೂ ಭಿನ್ನ ಸ್ವಭಾವದವರು. ಆದರೆ ಒಬ್ಬರು ಇನ್ನೊಬ್ಬರನ್ನು ಇಷ್ಟಪಡುತ್ತಾರೆ. ಆದರೆ ಇತ್ತಿಚೆಗೆ ಅವಳು ಜಗದೀಶ್‌ ನ ಬಗ್ಗೆ ಎಷ್ಟು ಆಳವಾಗಿ ಯೋಚಿಸಲು ಶುರು ಮಾಡಿದ್ದಾಳೆಂದರೆ, ಅದರ ಬಗ್ಗೆ ಅವಳಿಗೆ ಬಹಳ ಖೇದವಾಗುತ್ತಿತ್ತು. ಈ ಮುಂಚೆ ಅವಳಿಗೆ ಇದರ ಬಗ್ಗೆ ಗಮನವೇ ಇರಲಿಲ್ಲ.

ಅಷ್ಟರಲ್ಲಿಯೇ ಆಕೆಗೆ ತಾಯಿ ವಿಶಾಲಮ್ಮನ ಫೋನ್‌ ಬಂತು. ದಿನಕ್ಕೆ ಒಂದು ಸಲವಾದರೂ ಅಮ್ಮನ ಫೋನ್‌ ಬರುತ್ತಿತ್ತು. ಮಾತು ಮುಗಿಸಿ ಆರತಿ ಡಿನ್ನರ್‌ ಗೆ ಆರ್ಡರ್‌ ಮಾಡಿದಳು. ಅವಳು ಮನೆ ತಲುಪಿದಾಗ ಜಗದೀಶ್‌ ಯಾವುದೋ ಸಿನಿಮಾ ನೋಡುವುದರಲ್ಲಿ ಮಗ್ನನಾಗಿದ್ದ. ಅವಳು ಫ್ರೆಶ್‌ ಆಗಿ ಹಾಸಿಗೆಯ ಮೇಲೆ ಹಾಗೆಯೇ ಒರಗಿದಳು. ಅಷ್ಟರಲ್ಲಿ ಆರ್ಡರ್‌ ಮಾಡಿದ ಊಟ ಬಂದಿತು.

“ಜಗದೀಶ್‌, ನೀನೇ ಊಟ ಬಡಿಸು. ತಟ್ಟೆ, ಚಮಚ ತೆಗೆದುಕೊಂಡು ಬಾ,” ಎಂದಳು ಆರತಿ.

“ಪ್ಲೀಸ್‌ ಇವತ್ತು ನೀನೇ ಊಟ ಬಡಿಸು. ಸಿನಿಮಾ ಬಿಟ್ಟು ಬರುವ ಮನಸ್ಸಾಗುತ್ತಿಲ್ಲ,” ಎಂದು ಹೇಳುತ್ತಾ ಆರತಿಯತ್ತ ಒಂದು ಫ್ಲೈಯಿಂಗ್‌ ಕಿಸ್‌ ಕಳಿಸಿದ.

ಅರತಿ ಮುಗುಳ್ನಕ್ಕಳು. ಇಬ್ಬರೂ ಸೇರಿ ಡಿನ್ನರ್‌ ಮುಗಿಸಿದರು. ಸಿನಿಮಾ ಮುಗಿಯುತ್ತಿದ್ದಂತೆ ಜಗದೀಶ್‌ ಮಲಗಲು ಬಂದ. ಆರತಿ ಮಲಗಿಕೊಂಡೇ ಮೊಬೈಲ್ ‌ನಲ್ಲಿ ಏನನ್ನೋ ನೋಡುತ್ತಿದ್ದಳು. ಜಗದೀಶ್‌ ಅವಳ ಸಮೀಪವೇ ಮಲಗಿಕೊಂಡು ಅವಳನ್ನು ತನ್ನ ಬಾಹುಗಳಲ್ಲಿ  ಬಳಸಿದ.

ಆರತಿ ಅವನನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡು, “ಹೇಗಿತ್ತು ಈ ದಿನ….?” ಎಂದು ಕೇಳಿದಳು.

“ಬೋರ್‌……”

“ಏಕೆ….?” ಆರತಿ ಚಕಿತಳಾಗಿ ಕೇಳಿದಳು.

“ಇವತ್ತು ಬಹಳಷ್ಟು ಕೆಲಸ ಮಾಡಬೇಕಾಗಿ ಬಂತು.”

“ಅದರಲ್ಲಿ ತಪ್ಪೇನಿದೆ?”

“ಆರತಿ, ನನಗೆ ಕೆಲಸ ಮಾಡಲು ಮನಸ್ಸೇ ಇರಲ್ಲ. ಬರೀ ವಿಶ್ರಾಂತಿ ಪಡೆಯಬೇಕೆಂದು ಅನಿಸುತ್ತಿರುತ್ತದೆ. ಮನೆಯಲ್ಲೂ ಕೂಡ ನನಗೆ ಎಲ್ಲರೂ ಮೈಗಳ್ಳ ಎನ್ನುತ್ತಿರುತ್ತಾರೆ,” ಎಂದ ಜಗದೀಶ್‌ ನಗುತ್ತಾ, “ನನ್ನ ಮನಸ್ಸು ಯಾವಾಗಲು ಆರಾಮವಾಗಿ ಇರಲು ಬಯಸುತ್ತೆ, ಇಲ್ಲ ನಿನ್ನನ್ನು ಪ್ರೀತಿಸಬೇಕು ಎಂದು ಯೋಚಿಸುತ್ತಿರುತ್ತದೆ,” ಎಂದು ಕೀಟಲೆ ದನಿಯಲ್ಲಿ ಹೇಳಿದ.

“ಆದರೆ ಡಿಯರ್‌, ಬರೀ ಆರಾಮವಾಗಿ ವಿಶ್ರಾಂತಿ ಪಡೆಯುವುದರಿಂದ ಅಥವಾ ನನ್ನನ್ನು ಪ್ರೀತಿಸುವುದರಿಂದ ಜೀವನ ನಡೆಯವುದು.”

“ಹಾಗೆಯೇ ನಡೆಯುತ್ತಿರುತ್ತೆ ಬಿಡು. ಹಾಗೆ ನೋಡಿದರೆ, ನಿನ್ನ ಸಂಬಳ ನನಗಿಂತ ಹೆಚ್ಚು. ಅದರಿಂದ ನಮ್ಮ ಮನೆ ಸುಸೂತ್ರವಾಗಿ ನಡೆಯುತ್ತೆ. ಅದರಲ್ಲೂ ನೀನು ನಿಮ್ಮ ಅಮ್ಮ ಅಪ್ಪನ ಏಕೈಕ ಪುತ್ರಿ ಅಲ್ಲಿರುವುದೆಲ್ಲಾ ನಿನ್ನದೇ ತಾನೇ….. ನಾವು ಮದುವೆಯಾಗೋಣ ಬಹಳ ಖುಷಿಯಿಂದಿರಬಹುದು,” ಎಂದು ಹೇಳುತ್ತಾ ಜಗದೀಶ್‌ ಅವಳಿಗೆ ಇನ್ನಷ್ಟು ನಿಕಟನಾದ.

ಎರಡು ಯುವ ಹೃದಯಗಳ ಮಿಡಿತ ಜೋರಾಗಿ ಬಡಿದುಕೊಳ್ಳತೊಡಗಿದಾಗ ಉಳಿದ ಸಂಗತಿಗಳಿಗೆ ಜಾಗವಾದರೂ ಎಲ್ಲಿರುತ್ತದೆ? ಎಲ್ಲವನ್ನೂ ಮರೆತು ಇಬ್ಬರೂ ಒಬ್ಬರಲ್ಲೊಬ್ಬರು ಕಳೆದುಹೋದರು. ಮುಂದಿನ ಕೆಲವು ದಿನಗಳು ಹೀಗೆಯೇ ಕಳೆದುಹೋದವು. ಇಬ್ಬರೂ ಗಂಡಹೆಂಡತಿ ಆಗಿರಲಿಲ್ಲ. ಆದರೆ  ಲಿವ್ ‌ಇನ್‌ ನಲ್ಲಿ ಇರುವವರು ಗಂಡಹೆಂಡತಿಯರ ಹಾಗೆಯೇ ಇರುತ್ತಾರೆ. ಅವರ ಸಂಬಂಧದ ಮೇಲೆ ಯಾವುದೇ ಮುದ್ರೆ ಹಾಕಿರುವುದಿಲ್ಲ. ಆದರೆ ಸಂಬಂಧವಂತೂ ಇದ್ದೇ ಇರುತ್ತದೆ.

ಒಂದಿಷ್ಟು ಮನಸ್ತಾಪ, ಬಳಿಕ ಒಬ್ಬರನ್ನೊಬ್ಬರು ರಮಿಸುವುದು, ಮತ್ತೆ ಹೀಗಾಗುವುದಿಲ್ಲ ಎಂದು ಹೇಳುವುದು ನಡೆದೇ ಇರುತ್ತದೆ. ಆದರೆ ಆರತಿಗೆ ಇತ್ತೀಚೆಗೆ ಕೆಲವು ವಿಷಯಗಳು ಅವಳನ್ನು ಯೋಚನೆಗೀಡು ಮಾಡಿದ್ದವು. ವಿಷಯ ಅಷ್ಟೇನೂ ಗಂಭೀರವಾಗಿರಲಿಲ್ಲ. ಆದರೆ ಆ ಕಡೆ ಗಮನಹೋಗದೇ ಇರಲಿಲ್ಲ. ಎಲ್ಲ ಖರ್ಚುಗಳು ಆರತಿಯ ಜವಾಬ್ದಾರಿಯಾಗಿದ್ದವು. ಎಲ್ಲ ಬಿಲ್ ಗಳು, ಆಹಾರ ಪದಾರ್ಥಗಳ ಖರ್ಚು, ಫ್ಲ್ಯಾಟ್‌ ನ ಬಾಡಿಗೆಯನ್ನು ಜಗದೀಶ್‌ ಕಳೆದ ಕೆಲವು ತಿಂಗಳುಗಳಿಂದ ಕಟ್ಟಿರಲಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಿದಾಗೆಲ್ಲ ಅವನು ಸಹಜವಾಗಿಯೇ ಹೇಳುತ್ತಿದ್ದ, “ನೀನಂತೂ ನನಗಿಂತ ಹೆಚ್ಚು ಗಳಿಸುತ್ತಿರುವೆ. ನನ್ನ ಬಳಿ ಪ್ರೀತಿಯೊಂದೇ ಇರುವುದು.”

ಜಗದೀಶ್‌ ನ ಸಂಬಳ ಬಹಳ ಕಡಿಮೆ ಇದೆ ಎಂದೇನಿರಲಿಲ್ಲ. ಆ ಬಗ್ಗೆ ಆರತಿ ಅವನಿಗೆ ಏನೇನೊ ಹೇಳಬೇಕು ಅಂದುಕೊಂಡಿದ್ದಳು. ಆದರೆ ಹೇಳಲು ಆಗುತ್ತಿರಲಿಲ್ಲ. ಏಕೆಂದರೆ ಅವಳು ಅವನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಹಾಗಾಗಿ ಹಣದ ಬಗ್ಗೆ  ಕೇಳಲು ಸಂಕೋಚ. ಒಂದು ದಿನ ಮದುವೆ ಆಗುವುದೇ ಇದೆ. ಆಗ ಏನು ವ್ಯತ್ಯಾಸವಾಗುತ್ತದೆ ಎಂದು ಅವಳು ಯೋಚಿಸುತ್ತಿದ್ದಳು. ಅವಳು ಮನಸ್ಸಿನಲ್ಲಿ ಒಂದಿಷ್ಟು ಅಲರ್ಟ್‌ ಆಗುತ್ತಿದ್ದಳು.

ಹೀಗೆಯೇ 6 ತಿಂಗಳು ಕಳೆದವು. ಈ ಅವಧಿಯಲ್ಲಿ ಅವಳು ಗಮನಿಸಿದ್ದೇನೆಂದರೆ, ಜಗದೀಶ್‌ ತನ್ನೂರಿಗೆ ಹೋದಾಗೆಲ್ಲ ಅಲ್ಲಿಂದ ಒಂದೇ ಒಂದು ಕಾಲ್‌ ಕೂಡ ಮಾಡುತ್ತಿರಲಿಲ್ಲ. ತನಗೆ ಯಾವುದೇ ಸಂಬಂಧ ಇಲ್ಲವೆಂಬಂತೆ ಇರುತ್ತಿದ್ದ. ಅದೊಂದು ದಿನ ಆರತಿ  ಸಹೋದ್ಯೋಗಿ ರವಿ ಅವಳಿಗೆ ಒಂದು ವಿಷಯ ತಿಳಿಸಿದ. ಜಗದೀಶ್‌ ತನ್ನ ತಾಯಿ ತಂದೆಯರ ಇಷ್ಟದ ಒಬ್ಬ ಹುಡುಗಿಯನ್ನು ಮದುವೆಯಾಗಲು ತಯಾರಾಗಿದ್ದಾನೆಂಬುದೇ ಆ ಆಘಾತಕಾರಿ ವಿಷಯಾಗಿತ್ತು. ಆ ಕಾರಣದಿಂದ ಇತ್ತೀಚೆಗೆ ಅವನು ತನ್ನೂರಿಗೆ ಹೆಚ್ಚೆಚ್ಚು ಹೋಗುತ್ತಿದ್ದಾನೆ ಎಂಬುದು ಖಾತ್ರಿಯಾಯಿತು.

ಆರತಿಗೆ ಇದು ಆಘಾತಕಾರಿ ವಿಷಯವೇ ಆಗಿತ್ತು. ಅವಳು ಒಬ್ಬಳೇ ಕುಳಿತು ಸಾಕಷ್ಟು ಹೊತ್ತು ರೋದಿಸಿದಳು. ಜಗದೀಶ್‌ ನನ್ನು ಅವಳು ತನ್ನ ಸಂಗಾತಿಯೆಂದೇ ಭಾವಿಸಿದ್ದಳು. ಅವಳಿಗೆ ಬಹಳ ದುಃಖವಾಗಿತ್ತು. ಆದರೆ ಅವಳು ಇಂದಿನ ಕಾಲದ ಧೈರ್ಯಶಾಲಿ, ಸ್ವಾವಲಂಬಿ, ಇಂಟಲಿಜೆಂಟ್‌ ಹುಡುಗಿಯಾಗಿದ್ದಳು. ಸಾಕಷ್ಟು ಅತ್ತು ಮನಸ್ಸು ಹಗುರ ಮಾಡಿಕೊಂಡ ಬಳಿಕ, ಅವಳು ಯೋಚಿಸತೊಡಗಿದಳು.  ಜಗದೀಶ್‌ ನ ಸತ್ಯಾಸತ್ಯತೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು. ತಾನೇ ಎಲ್ಲ ಖರ್ಚು ನಿಭಾಯಿಸುತ್ತಿದ್ದಳು. ಸರಿ, ಈಗ ಹೇಗೂ ಬ್ರೇಕ್‌ ಅಪ್‌ ಆಗುತ್ತದೆ, ಆದದ್ದು ಒಳ್ಳೆಯದೇ ಆಯ್ತು. ಜಗತ್ತಿನಲ್ಲಿ ಅದೆಷ್ಟೊ ಹುಡುಗಿಯರಿಗೆ ಹೀಗಾಗುತ್ತಿರಬಹುದು. ಇಂಥ ಒಬ್ಬ ಚಾಲಾಕಿ ಹುಡುಗನಿಗಾಗಿ ತಾನು ಮತ್ತೆ ಅಳುವುದಿಲ್ಲ. ಮತ್ತೊಮ್ಮೆ ತನ್ನ ಲೈಫ್‌ ನ್ನು ಶುರು ಮಾಡ್ತೀನಿ ಎಂದುಕೊಂಡಳು.

ಜಗದೀಶ್‌ ಬೆಂಗಳೂರಿಗೆ ವಾಪಸ್‌ ಬಂದಾಗ, ಮಧ್ಯಾಹ್ನ ಊಟದ ಸಮಯದಲ್ಲಿ ಅವನನ್ನು ಕ್ಯಾಂಟೀನ್‌ ಗೆ ಬರಲು ಹೇಳಿ, ನೇರವಾಗಿಯೇ ಮಾತು ಆರಂಭಿಸಿದಳು, “ನೋಡು ಜಗದೀಶ್‌, ನನಗೆ ಸುತ್ತಿ ಬಳಸಿ ಮಾತನಾಡುವುದು ಇಷ್ಟವಿಲ್ಲ. ನೇರವಾಗಿಯೇ ವಿಷಯಕ್ಕೆ ಬರ್ತೀನಿ. ಇನ್ಮುಂದೆ ನಾನು ನಿನ್ನ ಜೊತೆಗೆ ಇರುವುದಿಲ್ಲ,” ಎಂದಳು.

ಜಗದೀಶ್‌ ಆಶ್ಚರ್ಯದಿಂದ, “ಏನಾಯಿತು?” ಎಂದು ಕೇಳಿದ.

“ನಾನು ಇನ್ನಷ್ಟು ಮೂರ್ಖಳಾಗಲು ಇಷ್ಟಪಡುವುದಿಲ್ಲ. ನೀನು ನಿನ್ನ ತಾಯಿ ತಂದೆ ಹೇಳಿದ ಹುಡುಗಿಯ ಜೊತೆ ಮದುವೆಯಾಗಿ ನೆಮ್ಮದಿಯಿಂದ ಇರು. ನನಗೆ ಏನೂ ಸಮಸ್ಯೆಯಿಲ್ಲ. ನಾನು ನಿನ್ನ ಜೊತೆಗೆ ಇದ್ದು ಸಾಕಷ್ಟು ಆರ್ಥಿಕ ಹಾನಿ ಅನುಭವಿಸಿರುವೆ. ನಾನು ಇನ್ಮುಂದೆಯೂ ನಿನ್ನನ್ನು ಪೋಷಿಸುವಷ್ಟು ಮೂರ್ಖಳೇನೂ ಅಲ್ಲ. ನಿನ್ನ ಮದುವೆ ಆಗುವತನಕ ನಾನು ನಿನ್ನ ಅವಶ್ಯಕತೆ ನೀಗಿಸುವ ವಸ್ತುವಾಗುವುದಿಲ್ಲ. ಈಗ ಹೇಳು, ನಾನೇ  ಹೊಸ ಫ್ಲ್ಯಾಟ್‌ ಹುಡುಕಿಕೊಳ್ಳಬೇಕಾ ಅಥಾ ನೀನೇ ಹುಡುಕಿಕೊಳ್ಳುತ್ತೀಯಾ?”

ಜಗದೀಶನ ಮುಖ ಅವಮಾನದಿಂದ ಕಪ್ಪಗಾಯಿತು. ಆದರೂ ಅವನು ಸುಧಾರಿಸಿಕೊಂಡು ಹೇಳಿದ, “ನಾನೇ ಹೊರಟು ಹೋಗ್ತೀನಿ.”

“ಸರಿ. ನಾಳೆ ಶನಿವಾರವೇ ಸಾಧ್ಯವಾದರೆ ನೀನು ಬೇರೆ ಕಡೆ ಶಿಫ್ಟ್ ಆಗು. ನಾನು ವೀಕೆಂಡ್‌ ಗೆ ಮೈಸೂರಿಗೆ ಹೋಗ್ತಿರುವೆ. ನಾನು ಅಲ್ಲಿಂದ ವಾಪಸ್ಸಾಗುವ ತನಕ ನಿನ್ನೆಲ್ಲಾ ಸಾಮಾನುಗಳನ್ನು ವಾಪಸ್‌ ತೆಗೆದುಕೊಂಡು ಹೋಗು,” ಎಂದಳು.

ಆರತಿ ಸಂಜೆ ಆಫೀಸ್‌ ಕೆಲಸ ಮುಗಿಸಿ ನೇರ ಮೈಸೂರಿನ ಬಸ್‌ ಹತ್ತಿದಳು. ರಾಜಹಂಸ ಆರಾಮದಾಯಕ ಸೀಟಿಗೆ ಒರಗಿ ಕಳೆದುಹೋದ ದಿನಗಳನ್ನು ನೆನಪಿಸಿಕೊಂಡು ಉದಾಸಳಾಗುತ್ತಿದ್ದಳು. ಅದರ ಜೊತೆ ಜೊತೆಗೆ ಅವಳು ಜೀವನದಲ್ಲಿ ಮುಂದೆ ಸಾಗಲು ತನ್ನನ್ನು ತಾನು ಸಂಭಾಳಿಸಿಕೊಳ್ಳತೊಡಗಿದಳು.

ಅವಳ ಕಣ್ಣುಗಳು ಅದೆಷ್ಟೋ ಸಲ ತುಂಬಿಬಂದವು. ಮನಸ್ಸು ಗಲಿಬಿಲಿಗೊಂಡಿತು. ಆದರೆ ಜಗದೀಶ್‌ ನ ಚಾಣಾಕ್ಷ ಬುದ್ಧಿಯನ್ನು ಅವಳು ಅದೆಷ್ಟೋ ದಿನಗಳಿಂದ ನೋಡುತ್ತಾ ಬಂದಿದ್ದಳು. ಮನಸ್ಸಿಗೆ ಬಹಳ ಕಸಿವಿಸಿಯಾಗುತ್ತಿತ್ತು. ಆದರೆ ಅವಳ ಒಳಮನಸ್ಸು ಮಾತ್ರ ಏನಾಗುತ್ತಿದೋ ಅದು ಒಳ್ಳೆಯದಕ್ಕೆ ಆಗುತ್ತಿದೆ ಎಂದು ಸಮಾಧಾನ ಹೇಳುತ್ತಿತ್ತು.

ಮದ್ದೂರು, ಮಂಡ್ಯ ದಾಟುವ ಹೊತ್ತಿಗೆ ಅವಳ ಹೃದಯ ಕೂಡ ಅವಳ ಮೆದುಳಿಗೆ ಜೊತೆ ಕೊಡಲು ಶುರು ಮಾಡಿತ್ತು. ಒಬ್ಬ ದುರಾಸೆಯ ಮೈಗಳ್ಳ ವ್ಯಕ್ತಿಯ ಸಂಗ ತೊರೆದದ್ದು ಒಳ್ಳೆಯದೇ ಆಯಿತು ಎಂದು ಅವಳ ಒಳಮನಸ್ಸು ಮೆದುಳಿಗೆ ಸ್ಪಷ್ಟಪಡಿಸುತ್ತಿತ್ತು. ಮೈಸೂರು ತಲುಪಿ ಆತ್ಮವಿಶ್ವಾಸದ ನಡಿಗೆಯೊಂದಿಗೆ ಮನೆ ತಲುಪಿ ತಾಯಿಯ ಬಾಹುಗಳಲ್ಲಿ ತನ್ನನ್ನು ಒಪ್ಪಿಸಿಕೊಂಡಳು. ಅಮ್ಮ ಎಂದೆಂದೂ ಅಮ್ಮನೇ. ಮಗಳ ಉದಾಸ ಮುಖ ನೋಡಿ ಅವರಿಗೆ ಅರ್ಥವಾಯಿತು. ಪ್ರತಿಸಲ ಬೆಳಗ್ಗೆ ಬರುವಾಗ ಪ್ರಸನ್ನಮುಖದಿಂದ ಬರುತ್ತಿದ್ದಳು ಇಂದು ರಾತ್ರಿಯೇ ಉದಾಸ ಮುಖ ಹೊತ್ತು ಬಂದಿದ್ದಳು. ಆದರೂ ಅವರು ಅವಳ ಬಳಿ ಏನನ್ನೂ ಕೇಳಲು ಹೋಗಲಿಲ್ಲ. ಅಪ್ಪ ಮಾತ್ರ ಮಗಳನ್ನು ಸ್ವಾಗತಿಸುತ್ತಾ, “ನಿನ್ನ ಪ್ರಯಾಣ ಸುಖಕರಾಗಿತ್ತೇನಮ್ಮ,?” ಎಂದು ಕೇಳಿದರು.

ಊಟ ಮಾಡಿದ ಬಳಿಕ ಆರತಿ, “ಅಮ್ಮಾ, ತುಂಬಾ ದಣಿವಾಗಿದೆ, ನಾನು ಮಲಗಿಕೊಳ್ತೀನಿ,” ಎಂದು ಹೇಳಿ ಮಲಗಲು ಹೋದಳು.

ಶನಿವಾರ ಭಾನುವಾರದಂದು ಅವಳು ಎಂದಿನಂತೆ ತನ್ನ ಅಮ್ಮ ಅಪ್ಪನ ಜೊತೆ ಕಳೆದಳು. ಮೂವರು ಸೇರಿ ಹೊರಗಡೆ ಸುತ್ತಾಡಿದರು. ಅಲ್ಲಿಯೇ ಊಟ, ತಿಂಡಿ ಮಾಡಿದರು.

ಅಮ್ಮ ಆರತಿಗಾಗಿ ವಿಶೇಷ ತಿಂಡಿಗಳನ್ನು ಮಾಡಿದರು. ಮಗಳ ಕುಂದಿದ ಮುಖ ಕಂಡು ಅಮ್ಮ ಒಂದೆರಡು ಬಾರಿ ಕೇಳಿಯೇಬಿಟ್ಟರು, “ಆರತಿ, ಎಲ್ಲ ಸರಿಯಿದೆ ತಾನೇ? ಆಫೀಸಿನಲ್ಲಿ ಕೆಲಸದ ಒತ್ತಡ ಇದೆಯಾ?”

“ಇಲ್ಲ ಅಮ್ಮ, ಎಲ್ಲ ಸರಿಯಿದೆ,” ಎಂದಳು.

ಅಮ್ಮ ತಿಳಿವಳಿಕೆಯುಳ್ಳವರು. ಅವರಿಗೆ ಅರ್ಥವಾಯಿತು. ಅವಳು ಈಗ ತನ್ನ ಮನಸ್ಸಿನ ಮಾತನ್ನು ಹೇಳುವ ಮೂಡ್‌ ನಲ್ಲಿಲ್ಲ. ಅವಳಿಗೆ ಯಾವಾಗ ಸರಿಯೆನಿಸುತ್ತೋ ಆಗ ಹೇಳುತ್ತಾಳೆ ಎಂದು ಭಾವಿಸಿದರು. ಅವರ ಅನ್ಯೋನ್ಯತೆ ಬಹಳ ಗಾಢವಾಗಿತ್ತು. ಭಾನುವಾರ ಸಂಜೆಯೇ ಅವಳು ಬೆಂಗಳೂರಿಗೆ ಹೊರಡಲು ಪ್ಯಾಕಿಂಗ್‌ ಮಾಡಿಕೊಳ್ಳಲು ಆರಂಭಿಸಿದಳು.

ಹೊರಡುವುದಕ್ಕಿಂತ ಸ್ವಲ್ಪ ಮೊದಲು ತಂದೆ ಸಂಜೀವಯ್ಯ, “ಆರತಿ, ನನ್ನ ಸ್ನೇಹಿತರೊಬ್ಬರ ಮಗ ಸುಮಂತ್‌ ಗಾಗಿ ನಿನ್ನನ್ನು ಕೇಳ್ತಿದ್ದಾರೆ. ನಿನಗೆ ಯಾವಾಗ ಸರಿಯೆನಿಸುತ್ತೋ ಆಗ ಅವರೊಂದಿಗೆ ಮಾತನಾಡುವಿಯಂತೆ.”

ಬ್ಯಾಗ್‌ ಪ್ಯಾಕ್‌ ಮಾಡುತ್ತಿದ್ದ ಆರತಿಯ ಕೈಗಳು ಸ್ವಲ್ಪ ಹೊತ್ತು ಹಾಗೆಯೇ ನಿಂತವು. ಬಳಿಕ ಅವಳು ಅಮ್ಮನತ್ತ ನೋಡುತ್ತಾ, “ಅಮ್ಮಾ, ನನಗೆ ಸ್ವಲ್ಪ ಸಮಯ ಬೇಕು.”

“ಆರತಿ, ನಿನಗೀಗ 30 ವರ್ಷ ಆಯ್ತು. ವೆಲ್ ‌ಸೆಟಲ್ಡ್ ಕೂಡ. ಆ ಕುಟುಂಬದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ನೀನೊಂದು ಸಲ ಭೇಟಿಯಾಗು. ನೀನು ಓಕೆ ಅಂದ ಬಳಿಕವೇ ಮುಂದುವರಿಯಬಹುದು.”

“ನನಗೀಗೀ ಏನೂ ಹೇಳಲು ಆಗುದಿಲ್ಲ. ಆದಷ್ಟು ಬೇಗ ನಾನು ನಿಮಗೆ ಈ ಬಗ್ಗೆ ಹೇಳ್ತೀನಿ,” ಎಂದಳು ಆರತಿ.

ಸಂಜೀವಯ್ಯ ಹಾಗೂ ವಿಶಾಲಮ್ಮ ಇಂದಿನ ಕಾಲದ ಪಾಲಕರು. ಅವರಂತೂ ತಮ್ಮ ಇಚ್ಛೆಯನ್ನು ಮಗಳ ಮೇಲೆ ಹೇರುತ್ತಿರಲಿಲ್ಲ. ಅವಳಿಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ಕೊಡುತ್ತಿದ್ದರು. ಮಗಳು ಸ್ಟ್ರಾಂಗ್‌, ಬೋಲ್ಡ್  ಇಂಟೆಲಿಜೆಂಟ್‌ ಆಗಿದ್ದಳು. ಅವಳು ತನ್ನದೇ ಆದ ರೀತಿಯಲ್ಲಿ ಜೀವಿಸುವ ದಿಟ್ಟ ಹುಡುಗಿಯಾಗಿದ್ದಳು. ಆದರೂ ಅವಳು ತನ್ನ ಪೋಷಕರಿಗೆ ಗೌರವ ಕೊಡುವ ಮನೋಭಾವದವಳಾಗಿದ್ದಳು.

ತಾಯಿ ವಿಶಾಲಮ್ಮ ಮನಸ್ಸಿನಲ್ಲೇ ಅಂದಾಜಿಸಿದರು, `ಏನೋ ವಿಷಯ ಇದೆ. ಆದರೆ ಅವಳು ಮನಸ್ಸು ಬಿಚ್ಚಿ ಹೇಳುತ್ತಿಲ್ಲ. ಸದಾ ನಳನಳಿಸುವ ಮುಖದಲ್ಲಿ ಏನೋ ಮೋಡಕವಿದ ವಾತಾವರಣವಿದೆ.’ ಮಗಳನ್ನು ನೋಡುತ್ತಾ, “ಸರಿ ಸರಿ…. ನೀನು ಆರಾಮವಾಗಿ ಹೊರಡು. ಆ ವಿಷಯವನ್ನು ಫೋನ್‌ ನಲ್ಲೂ ಮಾತನಾಡಬಹುದು,” ಎಂದರು.

ಬೆಂಗಳೂರಿನ ತನ್ನ ಫ್ಲಾಟಿಗೆ ಹಿಂದಿರುಗಿದ ಆರತಿ ಎಲ್ಲಕ್ಕೂ ಮೊದಲು ಗಮನಿಸಿದ ಸಂಗತಿಯೆಂದರೆ ಜಗದೀಶ್‌ ತನ್ನ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದ. ಏನೋ ಖಾಲಿ ಖಾಲಿಯಾಗಿರುವಂತೆ ಭಾಸವಾಯಿತು. ಆದರೆ ಅವಳು ಇಷ್ಟರಲ್ಲಾಗಲೇ ತನ್ನನ್ನು ತಾನು ಸಂಭಾಳಿಸಿಕೊಂಡಿದ್ದಳು. ಆ ವಿಷಯವನ್ನು ಅವಳು ಸ್ವಾಭಾವಿಕವಾಗಿಯೇ ತೆಗೆದುಕೊಂಡಿದ್ದಳು. ಇಷ್ಟು ದಿನ ಜೊತೆಗಿದ್ದವನು ಈಗ ಇಲ್ಲ. ಅದೇನು ದೊಡ್ಡ ವಿಷಯವಲ್ಲ, ಮರೆತುಬಿಡುವುದು ಕಷ್ಟಕರವಲ್ಲ. ಇಂತಹ ಪೊಳ್ಳು ಸಂಬಂಧಗಳಿಗಾಗಿ ಅವಳು ತನ್ನ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳಲು ಕಿಂಚಿತ್ತೂ ಇಚ್ಛಿಸಲಿಲ್ಲ. ಇನ್ನು ತಾನು ಬಹಳಷ್ಟು ಸಾಧಿಸಬೇಕಿದೆ. ಅದಕ್ಕಾಗಿ ಖುಷಿಯಿಂದಿರಬೇಕಿದೆ, ಜೀವನ ಜೀವಿಸಬೇಕಿದೆ. ಜಗದೀಶ್‌ ನಂತಹ ವ್ಯಕ್ತಿಗಳ ಜೊತೆ ಜೀವನ ಅಂತ್ಯಗೊಳ್ಳುವುದಿಲ್ಲ ಎಂದು ಯೋಚಿಸಿ ತನ್ನ ಮನಸ್ಸನ್ನು ಕಠೋರ ಮಾಡಿಕೊಂಡಳು.

ಆ ವಿಚಾರಗಳನ್ನೆಲ್ಲ ಮನಸ್ಸಿನಿಂದ ತೆಗೆದುಹಾಕಿ ಆರತಿ ಎಂದಿನಂತೆ ಆಫೀಸಿಗೆ ಹೋದಳು. ಅವಳನ್ನು ನೋಡುತ್ತಿದ್ದಂತೆ ರವಿ ಹತ್ತಿರ ಬಂದು, “ಜಗದೀಶ್‌ ತನ್ನ ಗೆಳೆಯನೊಬ್ಬನ ರೂಮಿನಲ್ಲಿ ಇರಲು ಹೋಗಿದ್ದಾನೆ. ನೀನು ಏನು ಮಾಡಿದೆಯೋ ಅದು ಒಳ್ಳೆಯದೇ ಆಯಿತು,” ಎಂದು ಹೇಳಿದ.

ಮಧ್ಯಾಹ್ನದ ಸಮಯದಲ್ಲಿ ಆಫೀಸಿನ ಎದುರು ಜಗದೀಶ್‌ ಮುಖಾಮುಖಿಯಾದ. ಆರತಿಯ ಭಾವನಾರಹಿತ ಮುಖ ನೋಡಿ ಅವನಿಗೆ ಅವಳನ್ನು ಮಾತನಾಡಿಸುವ ಧೈರ್ಯ ಬರಲಿಲ್ಲ.

ಕೆಲವು ದಿನಗಳ ಬಳಿಕ ಆರತಿ ತನ್ನ ತಾಯಿ ತಂದೆಯರು ಹೇಳಿದಂತೆ ಸುಮಂತ್‌ ನನ್ನು ಭೇಟಿಯಾಗಲು ನಿರ್ಧರಿಸಿದಳು. ಸುಮಂತ್‌ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದ. ಇಬ್ಬರೂ ಗೆಳೆಯರ ಜೊತೆಗೆ ಫ್ಲಾಟ್‌ ಶೇರ್‌ ಮಾಡಿಕೊಂಡಿದ್ದ.

ಮುಂದಿನ ಶನಿವಾರವೇ ಸುಮಂತ್‌ ತನ್ನ ಅಮ್ಮ, ಅಪ್ಪ, ತಂಗಿಯೊಂದಿಗೆ ಮೈಸೂರಿನಲ್ಲಿನ ಆರತಿ ಮನೆಗೆ ಬಂದ. ಮೊದಲ ಭೇಟಿಯಲ್ಲೇ ಬಹಳ ಖುಷಿಗೊಂಡರು.

ಬೆಂಗಳೂರಿನಲ್ಲಿಯೇ ಉದ್ಯೋಗದಲ್ಲಿದ್ದ ಸುಮಂತ್‌, ಅಲ್ಲಿಯೇ ಜಾಬ್‌ ಮಾಡುವ ಹುಡುಗಿಯ ಜೊತೆ ಮದುವೆ ಮಾಡಿಕೊಳ್ಳಲು ಇಚ್ಛಿಸಿದ್ದ. ಇಬ್ಬರೂ ಮೈಸೂರಿನವರು, ಆಗಾಗ ಇಬ್ಬರೂ ಸೇರಿಯೇ ಮೈಸೂರಿಗೆ ಹೋಗಿಬರಬಹುದು ಎಂದೆಲ್ಲ ಯೋಚಿಸಿದ್ದ. ಆರತಿ ತನ್ನ ಪೋಷಕರ ಮಾತಿಗೆ ಒಪ್ಪಿಗೆ ಸೂಚಿಸಿದಳು. ಸುಮಂತ್‌ ಅವಳಿಗೆ ಹಿಡಿಸಿದ್ದ.

ತಾನು ಈ ಸಂಬಂಧವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಆರಂಭಿಸಬೇಕೆಂದು ಆರತಿ ಯೋಚಿಸಿದ್ದಳು. ತಾನು ಜಗದೀಶ್ ಜೊತೆಗೆ ಲಿವ್ ‌ಇನ್‌ ನಲ್ಲಿದ್ದ ವಿಚಾರವನ್ನು ಸುಮಂತ್‌ ಗೆ ತಿಳಿಸಬೇಕೆಂದು ಅವಳು ಬಯಸಿದ್ದಳು. ಈ ಕುರಿತಂತೆ ಅವಳು ತನ್ನ ಆತ್ಮೀಯ ಸ್ನೇಹಿತ ರವಿಯ ಮುಂದೆ ಪ್ರಸ್ತಾಪಿಸಿದಾಗ, “ಅದರ ಅವಶ್ಯಕತೆ ಏನಿದೆ? ನೀನು ಹೇಳುವುದು ಬೇಡ. ಯಾವುದೇ ಹುಡುಗ ಎಷ್ಟೇ ಮಾಡರ್ನ್‌ ಆಗ್ದಿದರೂ ಅವನು ಇದನ್ನು ಸಹಿಸಿಕೊಳ್ಳಲಾರ,” ಎಂದು ತಿಳಿಸಿದ.

“ಏಕೆ? ಒಂದು ವೇಳೆ ಅವನೂ ಯಾವುದಾದರೂ ಹುಡುಗಿ ಜೊತೆ ಲಿವ್ ‌ಇನ್‌ ನಲ್ಲಿ ಇದ್ದಿದ್ದರೆ, ನಾನು ಅವನಿಗೆ ಏನನ್ನೂ  ಹೇಳುವುದಿಲ್ಲ. ಅವನು ಪ್ರಾಮಾಣಿಕತೆಯಿಂದ ತನ್ನ ಸತ್ಯ ಬಹಿರಂಗ ಮಾಡಿದ್ದಾನೆ ಎಂದು ಖುಷಿಪಡುತ್ತೇನೆ,” ಎಂದಳು ಆರತಿ.

“ಅರೆ ಆರತಿ, ನೀನು ಎಲ್ಲರಿಗಿಂತ ಭಿನ್ನ. ಎಲ್ಲರಿಗೂ ಅಚ್ಚುಮೆಚ್ಚು,

“ ಎಂದು ಆರತಿಯ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡುತ್ತಾ,

“ನನ್ನ ಹೆಂಡತಿ ಈಗಲೂ ನನ್ನ ಕಾೀಜು ಗರ್ಲ್ ಫ್ರೆಂಡ್‌ ಬಗ್ಗೆ ಹಂಗಿಸುತ್ತಿರುತ್ತಾಳೆ. ಹಾಗಾದರೆ ಈಗ ಹೇಳು,” ಎಂದ ರವಿ.

ಆರತಿ ನಕ್ಕಳು, “ಬೊಗಳೆ ಹೊಡೆಯಬೇಡ. ನನಗೆ ನಿನ್ನ ಹೆಂಡತಿ ಬಗ್ಗೆ ಚೆನ್ನಾಗಿ ಗೊತ್ತು. ಅವಳು ತುಂಬಾ ಒಳ್ಳೆಯವಳು.”

“ಹೌದು ಅದಂತೂ ಸತ್ಯ. ಆದರೆ ಹುಡುಗರು ಈ ವಿಷಯವನ್ನು ಅರಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಿನ್ನ ಹೃದಯ ಶ್ರೀಮಂತಿಕೆ ಅವರಿಗೆ ಅರ್ಥ ಆಗಬೇಕಲ್ಲ….?”

ರವಿ ಅವಳಿಗೆ ಬಹಳಷ್ಟು ತಿಳಿಹೇಳಿದ. ಆದರೆ ಆರತಿ ಸುಮಂತ್‌ ನ ಆಹ್ವಾನದ ಮೇರೆಗೆ ಡಿನ್ನರ್‌ ಗೆ ಹೋದಳು. ಆಗ ಆರತಿ ಜಗದೀಶ್‌ ಬಗ್ಗೆ ಎಲ್ಲ ವಿಷಯ ತಿಳಿಸಿದಳು.

ಅವಳ ಮಾತು ಕೇಳಿ ಸುಮಂತ್‌ ಮುಗುಳ್ನಕ್ಕು, “ಆರತಿ, ನನಗೆ ಈ ಯಾವ ಮಾತುಗಳು ವ್ಯತ್ಯಾಸವಾಗುವುದಿಲ್ಲ. ನನಗೂ 2 ಬ್ರೇಕಪ್‌ ಗಳಾಗಿವೆ. ಏನಾಗಿದೆಯೋ ಅದು ಲೈಫ್‌, ಹೀಗೆಯೇ ಆಗುತ್ತಿರುತ್ತದೆ. ಈಗ ನೀನು ಸಿಕ್ಕಿರುವೆ. ನಾನು ಖುಷಿಗೊಂಡಿರುವಲೆ.”

ಆರತಿಯ ಹೃದಯದ ಮೇಲಿನ ಹೊರೆ ಕಡಿಮೆಯಾಯಿತು. ಒಂದೆರಡು ಸಲ ಸುಮಂತ್‌ ನನ್ನು ಭೇಟಿಯಾದ ಬಳಿಕ ಅವಳು ತನ್ನ ತಾಯಿ ತಂದೆಗೆ ತನಗೆ ಮದುವೆಗೆ ಒಪ್ಪಿಗೆ ಇದೆ ಎಂದು ಹೇಳಿದಳು. ಅವಳ ಈ ಹೇಳಿಕೆಗೆ ತಾಯಿ ತಂದೆಗಾದ ಖುಷಿ ಅಷ್ಟಿಷ್ಟಲ್ಲ. 4 ತಿಂಗಳ ಬಳಿಕ ಮದುವೆಯ ದಿನಾಂಕ ಫಿಕ್ಸ್ ಆಯಿತು.

ಎರಡೂ ಕುಟುಂಬದವರು ಮದುವೆಯ ಸಿದ್ಧತೆಯಲ್ಲಿ ತೊಡಗಿದರು. ಆರತಿ ಹಾಗೂ ಸುಮಂತ್‌ ಆಗಾಗ ಭೇಟಿ ಆಗುತ್ತಿದ್ದರು. ಆಫೀಸಿನ ವ್ಯಸ್ತ ಕೆಲಸಗಳ ನಡುವೆಯೂ ಚಾಟಿಂಗ್‌ ಮಾಡುತ್ತಿದ್ದರು. ಪೋನ್‌ ನಲ್ಲಿ ಮಾತಾಡುತ್ತಿದ್ದರು. ಮದುವೆ ಮೈಸೂರಿನಲ್ಲಿಯೇ ವಿಜೃಂಭಣೆಯಿಂದ ನಡೆಯಿತು. ಇಬ್ಬರ ಕಡೆಯಿಂದ ಸಾಕಷ್ಟು ಸಹೋದ್ಯೋಗಿಗಳು ಮದುವೆಗೆ ಬಂದು ಶುಭ ಹಾರೈಸಿದರು.

ಬೆಂಗಳೂರಿಗೆ ವಾಪಸ್ಸಾದ ಬಳಿಕ ಸುಮಂತ್‌ ತನ್ನೆಲ್ಲ ಲಗೇಜ್‌ ನ್ನು ಆರತಿಯ ಫ್ಲ್ಯಾಟ್‌ ಗೆ ಶಿಫ್ಟ್ ಮಾಡಿದ. ಇಬ್ಬರಿಗೂ ಬಹಳ ಸಂತೋಷವಾಗಿತ್ತು. ಆರತಿ ಜಗದೀಶ್‌ ನನ್ನು ಸಂಪೂರ್ಣವಾಗಿ ತನ್ನ ಮನಸ್ಸಿನಿಂದ ತೆಗೆದುಹಾಕಿದ್ದಳು. ಒಂದೆರಡು ವರ್ಷ ಬಹಳ ಖುಷಿಯಿಂದ ಕಳೆಯಿತು.

ಆರತಿ ತನ್ನ ಲೈಫ್‌ ಬಗ್ಗೆ ಪರಿಪೂರ್ಣ ಸಂತೃಪ್ತಿ ಹಾಗೂ ಸುಖಿಯಾಗಿದ್ದಳು. ರಜೆಯಿದ್ದಾಗೆಲ್ಲ ಇಬ್ಬರೂ ಜೊತೆಯಾಗಿ ಮೈಸೂರಿಗೆ ಹೋಗುತ್ತಿದ್ದರು. ಇಬ್ಬರೂ ಪರಸ್ಪರರ ಮನೆಗೆ ಹೋಗುವುದು ಬರುವುದು ನಡೆದೇ ಇತ್ತು. ಈ ಮಧ್ಯೆ ಆರತಿಗೆ ಎರಡು ಪ್ರಮೋಶನ್‌ ಗಳು ಸಿಕ್ಕಿದವು. ಈಗ ಅವಳು ಒಳ್ಳೆಯ ಪ್ಯಾಕೇಜ್‌ ನಲ್ಲಿದ್ದಳು. ಆದಷ್ಟು ಬೇಗ ತಾನೇ ಸ್ವತಃ ಫ್ಲ್ಯಾಟ್‌ ತೆಗೆದುಕೊಳ್ಳುವ ಬಗ್ಗೆ ತನ್ನ ಇಚ್ಛೆ ಬಹಿರಂಗಪಡಿಸಿದಳು.

“ನೋಡು ಆರತಿ, ನಿನ್ನ ಸಂಬಂಳ ನನಗಿಂತ ಬಹಳ ಜಾಸ್ತಿ. ನಿನಗೆ ಬೇಕೆಂದರೆ ತೆಗೆದುಕೊ,” ಎಂದು ಹೇಳಿದ ಸುಮಂತ್‌.

 

ಆರತಿ ಚಕಿತಳಾಗಿ, “ಅರೆ, ಇದರಲ್ಲಿ ನನ್ನ ಹಣ, ನಿನ್ನ ಹಣ ಬೇರೆ ಬೇರೇನಾ? ನಮ್ಮದೇ ಆದ ಒಂದು ಪ್ರೀತಿಯ ಮನೆಯಿದ್ದರೆ ಒಳ್ಳೆಯದಲ್ಲವೇ? ಎಷ್ಟು ದಿನಾಂತ ಈ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ಕಟ್ಟುವುದು,” ಎಂದು ಕೇಳಿದಳು.

“ನೋಡು ನೀನೇ ಇದರ ಬಗ್ಗೆ ಯೇಚಿಸು. ನಾನಂತೂ ನನ್ನ ಸಂಬಳದಿಂದ ಇಎಂಐ ಕಟ್ಟಲು ಆಗುವುದಿಲ್ಲ. ನಾನು ಮನೆಗೂ ಕೂಡ ಒಂದಿಷ್ಟು ಹಣ ಕಳಿಸಬೇಕು,” ಎಂದ ನಿಷ್ಠುರವಾಗಿ.

ಆರತಿ ಸುಮಂತ್‌ ನ ಕೊರಳನ್ನು ತನ್ನೆರಡು ಕೈಗಳಲ್ಲಿ ಬಳಸಿ, “ಸರಿ, ನೀನು ನನ್ನ ಜೊತೆಗಿದ್ದು ಫ್ಲ್ಯಾಟ್‌ ಹೇಗೆ ತೆಗೆದುಕೊಳ್ಳುವುದು? ಏನು ಎಲ್ಲ ನೀನೇ ನೋಡಿ ಹೇಳಬೇಕು ಅಷ್ಟೇ, ಆಗ ಎಲ್ಲ ಸರಿ ಹೋಗುತ್ತದೆ,” ಎಂದಳು.

ಸುಮಂತ್‌ ನ ಸಂಬಳ ಆರತಿಗಿಂತ ಬಹಳ ಕಡಿಮೆಯಿತ್ತು ಎನ್ನುವುದು ನಿಜ. ಆರತಿಗೆ ಪ್ರಮೋಶನ್‌ ಸಿಕ್ಕಾಗಿನಿಂದ ಅವನ ಪುರುಷ ಅಹಂಗೆ ಪೆಟ್ಟು ಬಿದ್ದಿತ್ತು. ಅವನು ಯಾವಾಗಲೂ ಮುಖ ಉಬ್ಬಿಸಿಕೊಂಡೇ ಇರುತ್ತಿದ್ದ. ಆದರೆ ಆರತಿ ಮಾತ್ರ ಮೊದಲಿನ ಹಾಗೆಯೇ ಪ್ರೀತಿಯಿಂದ ಕಾಣುತ್ತಿದ್ದಳು. ಅವನ ಅವಶ್ಯಕತೆಗಳಿಗೆ ಸರಿಯಾಗಿ ಸ್ಪಂದಿಸುತ್ತಿದ್ದಳು.

ಅದೊಂದು ದಿನ ಅವಳು ಸುಮಂತ್‌ ಬಳಿ,  “ಸುಮಂತ್‌ ಆಫೀಸ್‌ ಗೆ ಹೋಗಲು ನಾನು ಒಂದು ಕಾರನ್ನೇಕೆ ತೆಗೆದುಕೊಳ್ಳಬಾರದು ಎಂದು ಯೋಚಿಸುತ್ತಿರುವೆ. ಬಸ್‌, ಆಟೋದಲ್ಲಿ ಹೋಗುವಾಗ ಬಹಳಷ್ಟು ಸಮಯ ತಗುಲುತ್ತದೆ. ನಮಗೆ ವೀಕೆಂಡ್‌ ನಲ್ಲಿ ಮೈಸೂರಿಗೆ ಹೋಗಲು ಕೂಡ ಕಾರು ಉಪಯೋಗವಾಗುತ್ತದೆ,” ಎಂದು ಹೇಳಿದಳು.

“ನಿನ್ನ ಹಣ, ನಿನಗೆ ಹೇಗೆ ಬೇಕೋ ಹಾಗೆ ಖರ್ಚು ಮಾಡು. ಬೇಕಿದ್ರೆ ಉಳಿತಾಯ ಮಾಡಿಕೋ ಅದರಿಂದ ನನಗೇನೂ ವ್ಯತ್ಯಾಸವಾಗದು,” ಎಂದು ಹೇಳುತ್ತಾ ಸುಮಂತ್‌ ಅಲ್ಲಿಂದ ಹೊರಟುಹೋದ.

ಸುಮಂತ್‌ ನ ಬದಲಾದ ನಡವಳಿಕೆ ಬಗ್ಗೆ ಆರತಿ ತಲೆಹಿಡಿದು ಕುಳಿತಳು. 2 ತಿಂಗಳಲ್ಲಿಯೇ ಆರತಿ ಫ್ಲ್ಯಾಟ್‌ ಹಾಗೂ ಕಾರು ತೆಗೆದುಕೊಂಡಳು. ಸುಮಂತ್‌ ಯಾಂತ್ರಿಕವಾಗಿ ಅವಳೊಂದಿಗಿದ್ದ.

ಮತ್ತೆ ಕೆಲವು ದಿನಗಳು ಕಳೆದಾಗ ಸುಮಂತ್‌ ನ ವರ್ತನೆ ವ್ಯವಹಾರ ಸಾಕಷ್ಟು ಬದಲಾಗಿರುವುದನ್ನು ಆರತಿ ಗಮನಿಸಿದಳು. “ಈ ವೀಕೆಂಡ್‌ ಊರಿಗೆ ಹೋಗೋಣ್ವಾ?” ಎಂದು ಆರತಿ ಕೇಳಿದಳು.

“ನೀನೇ ಹೋಗಿ  ಎಲ್ಲರನ್ನೂ ಭೇಟಿಯಾಗಿ ಬಾ,” ಎಂದ.

ಕೆಲವೊಮ್ಮೆ `ನಾನು ಟೂರ್‌ ಹೋಗ್ತಿರುವೆ. ಒಂದೆರಡು ದಿನಗಳ ಬಳಿಕ ಬರ್ತೀನಿ,’ ಎಂದು ಹೇಳಿ ಹೊರಟುಹೋಗುತ್ತಿದ್ದ.

ಸುಮಂತ್‌ ಹೊರಗೆ ಹೋದಾಗ ಆರತಿಯನ್ನು ಹೆಚ್ಚು ಕಡಿಮೆ ಮರೆತೇ ಬಿಡುತ್ತಿದ್ದ. ಅವಳಿಗೆ ಒಂದು ಸಲ ಕೂಡ ಫೋನ್ ಮಾಡುತ್ತಿರಲಿಲ್ಲ. ಆರತಿಯೇ ಫೋನ್‌ ಮಾಡಿದರೆ, `ನಾನು ಬಿಝಿಯಾಗಿರುವೆ, ಆಮೇಲೆ ಕಾಲ್ ‌ಮಾಡ್ತೀನಿ,’ ಎಂದು ಹೇಳಿ ಫೋನ್‌ ಕಟ್‌ ಮಾಡುತ್ತಿದ್ದ.

ಸುಮಂತ್‌ ಬಹಳಷ್ಟು ಬದಲಾಗುತ್ತಿದ್ದ. ಅದಕ್ಕೆ ಏನು ಕಾರಣ ಎಂದು ಅವಳಿಗೆ ತಿಳಿಯುವ ಹೊತ್ತಿಗೆ, ತಾನು ಮೋಸ ಹೋಗಿದ್ದೇನೆ ಎಂದು ಅವಳಿಗೆ ಭಾಸವಾಗತೊಡಗಿತು. ಅದೊಂದು ದಿನ ಬೆಳಗ್ಗೆ, ಸುಮಂತ್‌ ಇನ್ನೂ ಮಲಗಿದ್ದ. ಅವನ ಮೊಬೈಲ್ ‌ಸೈಲೆಂಟ್ ಮೋಡ್‌ ನಲ್ಲಿತ್ತು. ಆರತಿ ಫೋನ್‌ ಕೈಗೆತ್ತಿಕೊಂಡು ನೋಡಿದಾಗ ಕವಿತಾ ಹೆಸರು ಮೇಲಿಂದ ಮೇಲೆ ಸ್ಕ್ರೀನ್‌ ಮೇಲೆ ಪ್ರತ್ಯಕ್ಷವಾಗುತ್ತಿತ್ತು. ಆರತಿ ನಿಧಾನವಾಗಿ ಫೋನ್‌ ಎತ್ತಿಕೊಂಡು ಬೇರೆ ರೂಮಿಗೆ ಹೋಗಿ `ಹಲೋ’ ಎಂದಳು. ಫೋನ್‌ ಕಟ್ ಆಯಿತು. ಅವಳು ಹಾಗೆಯೇ ಅವರಿಬ್ಬರ ವಾಟ್ಸ್ ಆ್ಯಪ್‌ ಚಾಟ್‌ ಗಳನ್ನು ಓದುತ್ತಾ ಹೋದಳು. ಅವರಿಬ್ಬರದು ಭಾರಿ ಅಫೇರ್ ನಡೆಯುತ್ತಿದೆ ಎನ್ನುವುದು ಅವಳಿಗೆ ಸ್ಪಷ್ಟವಾಯಿತು. ಅವಳ ರಕ್ತ ಕೋಪದಿಂದ ಕುದ್ದುಹೋಯಿತು.

ಸುಮಂತ್‌ ನ ಈವರೆಗಿನ ಶುಷ್ಕ ವರ್ತನೆಗೆ ಏನು ಕಾರಣ ಎಂದು ಈಗ ಅವಳಿಗೆ ಅರ್ಥಾಯಿತು. ಅಳು ಸುಮ್ಮನೇ ಸೋಫಾಕ್ಕೊರಗಿ ಕಣ್ಣೀರು ಹಾಕಿದಳು. ಮತ್ತೊಮ್ಮೆ ತನಗೆ ತಾನೇ ಸಮಾಧಾನ ಮಾಡಿಕೊಂಡಳು. ಸುಮಂತ್‌ ಏಳುವುದನ್ನೇ ಕಾಯುತ್ತಿದ್ದಳು. ಆರತಿ ಕೈಯಲ್ಲಿ ತನ್ನ ಫೋನ್‌ ಕಂಡು ಬೆಚ್ಚಿಬಿದ್ದ. ಆರತಿಯ ಮುಖವನ್ನು ನೋಡಿ, ಅವನಿಗೆ ಎಲ್ಲ ವಿಷಯ ಅರ್ಥವಾಯಿತು. ತನಗೇನೂ ಗೊತ್ತಿಲ್ಲವೆಂಬಂತೆ, “ಏನಾಯ್ತು?” ಎಂದು ಕೇಳಿದ.

“ನೀನೇ ಹೇಳು, ಇದೆಲ್ಲ ಏನು ನಡೀತಿದೆ?” ಎಂದು ಕೇಳಿದಳು.

“ನೀನೂ ಕೂಡ ಮದುವೆಗೆ ವೊದಲು ಲಿವ್ ಇನ್‌ವನಲ್ಲಿ ಇದ್ದೆ ಅಲ್ವಾ?” ಎಂದು ಕೇಳಿದ.

“ಅದಂತೂ ಮದುವೆಗೂ ಮೊದಲಿನ ವಿಷಯ. ನಿನಗೆ ನಾನು ಅದನ್ನು ಮೊದಲೇ ತಿಳಿಸಿದ್ದೆ. ಮದುವೆಯ ಬಳಿಕ ನಾನು ನಿನಗೆ ಮೋಸ ಮಾಡಿಲ್ಲವಲ್ಲ. ಈಗ ನೀನು ನನಗೆ ಮೋಸ ಮಾಡುತ್ತಿರುವೆ,” ಎಂದಳು.

“ವಾಸ್ತವದಲ್ಲಿ ನಾನು ನಿನ್ನಿಂದ ಬೇರೆ ಆಗಲು ಯೋಚಿಸುತ್ತಿರುವೆ. ಕವಿತಾಳ ಜೊತೆಗೆ ಮದುವೆ ಆಗಲು ಇಚ್ಛಿಸಿರುವೆ,” ಎಂದು ನಿಷ್ಠುರವಾಗಿ ಹೇಳಿದ.

“ನಿನಗೆ ಸ್ವಲ್ಪವೂ ನಾಚಿಕೆ ಆಗುವುದಿಲ್ಲವೇ….?” ಎಂದು ಆರತಿ ಕೋಪದಿಂದ ಕೇಳಿದಳು.

“ನಿನಗೆ ಲಿವ್ ‌ಇನ್‌ ನಲ್ಲಿದ್ದಾಗ ನಾಚಿಕೆ ಆಗಲಿಲ್ವಾ?” ಎಂದು ಅವನು ಕೇಳಿದ.

“ಹಳೆಯ ವಿಷಯವನ್ನು ಈಗ ನೆನಪಿಸಿಕೊಳ್ಳುವ ಉದ್ದೇಶವಾದರೂ ಏನು? ಈಗ ನೀನು ನಿನ್ನ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ಕಡೆ ಬೆರಳು ಮಾಡಿ ತೋರಿಸುತ್ತಿರುವೆಯಾ?”

“ನಾನು ಹೈದರಾಬಾದ್‌ ಗೆ ಟ್ರಾನ್ಸ್ ಫರ್‌ ಮಾಡಿಸಿಕೊಂಡಿದ್ದೇನೆ. ಈಗ ನಾನು  ಮೈಸೂರಿಗೆ ಹೋಗುತ್ತಿರುವೆ,” ಎನ್ನುತ್ತಾ ಆರತಿಯನ್ನು ದುರುಗುಟ್ಟಿ ನೋಡುತ್ತಾ ವಾಶ್‌ ರೂಮಿಗೆ ಹೋದ.

ಆರತಿಗೆ ಇದೆಲ್ಲ ಏನಾಯ್ತು ಎಂದು ಯೋಚನೆ ಮಾಡುವಂತಾಯಿತು. ತಾನೇ ಒಳಗೊಳಗೆ ಅಫೇರ್‌ ನಲ್ಲಿದ್ದಾನೆ. ನನ್ನ ಮೇಲೆ ಗೂಬೆ ಕೂರಿಸುವಂತೆ ಮಾತಾಡುತ್ತಿದ್ದಾನೆ. ಮನೆಗೆಲಸದವಳು ಬಂದ ಬಳಿಕ ಅವಳು ಸುಮಂತ್‌ವಗೆ ಹೇಳದೆಯೇ ಆಫೀಸಿಗೆ ಹೊರಟುಬಿಟ್ಟಳು. ಆಫೀಸ್‌ ನಲ್ಲಿ ರವಿ ಅವಳ ಮುಖದಲ್ಲಾದ ಬದಲಾವಣೆ ಕಂಡು ಅವಳನ್ನು ಕ್ಯಾಂಟೀನ್‌ ಗೆ ಕರೆದುಕೊಂಡು ಹೋಗಿ ನಿನ್ನ ಈ ಸ್ಥಿತಿಗೆ ಏನು ಕಾರಣ ಎಂದು ಕೇಳಿದ. ಬಹಳ ಹೊತ್ತಿನಿಂದ ತಡೆಹಿಡಿದಿದ್ದ ಕಣ್ಣೀರು ಗೆಳೆಯನ ಆಪ್ತ ಧ್ವನಿ ಕೇಳಿ ಒಮ್ಮೆಲೆ ಕಟ್ಟೆಯೊಡೆದು ಹೊರಬಂದಿತು. ಅಷ್ಟರಲ್ಲಿ ಅವರ ಇನ್ನೊಬ್ಬ ಗೆಳತಿ ಸಂಧ್ಯಾ ಅಲ್ಲಿಗೆ ಬಂದಳು. ಆರತಿಯ ವಿಷಯ ಕೇಳಿ ಅವಳು ದಿಗ್ಮೂಢಳಾದಳು. ಸ್ವಲ್ಪ ಹೊತ್ತಿನ ಬಳಿಕ ಮೂವರು ತಮ್ಮ ಕ್ಯಾಬಿನ್‌ಗಳಿಗೆ ಬಂದು ಕೆಲಸದಲ್ಲಿ ಮಗ್ನರಾದರು.

ಆರತಿಯ ಹೃದಯಕ್ಕೆ ನೆಮ್ಮದಿಯೇ ಇರಲಿಲ್ಲ. ಒಂದಾದ ಬಳಿಕ ಮತ್ತೊಂದು ಆಘಾತ. ಈಗ ನಾನೇನು ಮಾಡಬೇಕು? ಈ ಸಂಬಂಧವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕಾ? ಒಬ್ಬರನ್ನು ನಾವು ಬಲವಂತವಾಗಿ ಹೇಗೆತಾನೇ ಒಂದೆಡೆ ಕಟ್ಟಿಹಾಕಲು ಸಾಧ್ಯ? ಇದು ಪ್ರೀತಿ, ನಂಬಿಕೆಯ ಸಂಬಂಧ. ಈಗ ಅದಾವುದೂ ಉಳಿದಿಲ್ಲ. ಅವಳು ತನ್ನ ಸ್ವಾಭಿಮಾನವನ್ನು ಪಣಕ್ಕಿಟ್ಟು ಬಲಂವಂತವಾಗಿ ಈ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ. ಮುಂದೇನಾಗುತ್ತದೊ ಆಗಲಿ, ಈ ಸಂಬಂಧ ಕಡಿದುಕೊಳ್ಳುವುದೇ ಸರಿ.

ರಾತ್ರಿ ಅವಳು ಮನೆಗೆ ಬಂದಾಗ ಸುಮಂತ್‌ ಅಲ್ಲಿಂದ ತನ್ನೆಲ್ಲ ಸಾಮಾನುಗಳನ್ನು ಚೆನ್ನಾಗಿ ಪ್ಯಾಕ್‌ ಮಾಡಿಕೊಂಡು ಹೊರಟುಹೋಗಿದ್ದ. ಕೆಲವು ದಿನಗಳ ಬಳಿಕ ಅವಳ ಕೈಗೆ ಡೈವೋರ್ಸ್‌ ಪೇಪರ್‌ ಬಂದಾಗ ಅವಳಿಗೆ ಅಳು ಒತ್ತರಿಸಿ ಬಂದಿತು. ಇದೆಲ್ಲ ಏನು? ಎಲ್ಲ ಛಿದ್ರ ಛಿದ್ರವಾಗಿ ಹೋಯಿತಲ್ಲ. ಇದರಲ್ಲಿ ತನ್ನದೇನು ತಪ್ಪಿತ್ತು? ಎಂದು ಅವಳು ಯೋಚಿಸಿದಳು.

ಸುಮಂತ್‌ ಅವಳಿಗೆ ಫೋನ್ ಮಾಡಿ, “ಬೇಗ ಸಹಿ ಹಾಕಿ ಕಳಿಸು. ನಾನು ಕೋರ್ಟ್‌ ನಲ್ಲಿ ನೀನೊಬ್ಬ ಚಾರಿತ್ರ್ಯಹೀನ ಹೆಂಗಸು. ನೀನು ಲಿವ್ ‌ಇನ್‌ ನಲ್ಲಿ ಸಾಕಷ್ಟು ಸಮಯ ಇದ್ದೆ. ಅದರ ಬಗ್ಗೆ ನನಗೆ ತಿಳಿಸಿಲ್ಲ ಎಂದು ಹೇಳಿರುವೆ.”

“ಆದರೆ ನಾನು ನಿನಗೆ ಮೊದಲೇ ಈ ವಿಷಯ ತಿಳಿಸಿದ್ದೆನಲ್ಲಾ. ಆಗ ನಿನಗೆ ಅದರ ಬಗ್ಗೆ ಯಾವುದೇ ಆಕ್ಷೇಪಗಳಿರಲಿಲ್ಲ ಅಲ್ವಾ?”

“ಆದರೆ ನಿನ್ನ ಬಳಿ ಹಾಗೆ ಹೇಳಿದೆ ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.”

ಆರತಿ ಮುಂದೇನೂ ಮಾತಾಡಲಿಲ್ಲ. ಮರುದಿನ ಅವಳು ಈ ವಿಷಯವನ್ನು ರವಿ ಹಾಗೂ ಸಂಧ್ಯಾರ ಮುಂದೆ ಹೇಳಿ ತಲೆಹಿಡಿದುಕೊಂಡು ಕುಳಿತಳು. ಬಳಿಕ ಸಂಧ್ಯಾ ಕೇಳಿದಳು, “ನೀನು ಸುಮಂತ್‌ಗೆ ಜಗದೀಶ್‌ ಜೊತೆಗಿನ ಸಂಬಂಧದ ಬಗ್ಗೆ ಹೇಗೆ ತಿಳಿಸಿದ್ದೆ?”“ಭೇಟಿಯಾದಾಗ ಹೇಳಿದ್ದೆ, ಮತ್ತೆ ಚಾಟಿಂಗ್‌ ಮೂಲಕ ಈ ಬಗ್ಗೆ ವಿಷಯ ಹಂಚಿಕೊಂಡಿದ್ದೆ,” ಎಂದು ಹೇಳಿದಳು.

“ಚಾಟ್‌ ಡೀಟೇಲ್ಸ್ ಎಲ್ಲಿದೆ?”

“ಅವನ್ನು ನಾನು ಡೆಲೀಟ್‌ ಮಾಡ್ತಾ ಇರ್ತೀನಿ. ಚಾಟ್‌ ಗಳನ್ನು ಡಿಲೀಟ್‌ ಮಾಡುನ ಅಭ್ಯಾಸದ ಬಗ್ಗೆ ಸುಮಂತ್‌ ಗೂ  ಗೊತ್ತಿತ್ತು.”

“ಈಗ ರಾಜಕೀಯದಲ್ಲೂ, ಡ್ರಗ್‌ ಕೇಸ್‌ ಗಳಲ್ಲಿಯೂ ಹಳೆಯ ಚಾಟ್‌ ಗಳನ್ನೆಲ್ಲಾ ಜಾಲಾಡುತ್ತಾರೆಂದರೆ, ನಿನ್ನ ಹಳೆಯ ಚಾಟ್‌ಮೆಸೇಜ್‌ಗಳನ್ನು ಪುನಃ ಪಡೆಯಲು ಕಷ್ಟವಿಲ್ಲ.”

“ನನ್ನ ಬಳಿ ಕವಿತಾ ಹಾಗೂ ಸುಮಂತ್‌ ಅಫೇರ್‌ ನ ಪುರಾವೆ ಇವೆ. ಅವರಿಬ್ಬರ ಚಾಟ್‌ ಓದಿದಾಗ ಅವುಗಳ ಸ್ಕ್ರೀನ್‌ ಶಾಟ್‌ತೆಗೆದುಕೊಂಡಿರುವೆ.”

“ಹಾಗೆ ಮಾಡಿ ನೀನು ಒಳ್ಳೆಯ ಕೆಲಸ ಮಾಡಿದೆ. ಕೋಪದಲ್ಲಿ ಪ್ರಜ್ಞೆ ಕಳೆದುಕೊಳ್ಳಲಿಲ್ಲ. ಒಂದೊಳ್ಳೆ ಕೆಲಸ ಮಾಡಿದೆ. ಚಾಮರಾಜಪೇಟೆಯಲ್ಲಿ ನನ್ನ ಕಸಿನ್‌ ಸುನೀಲ್ ‌ಪೊಲೀಸ್‌ ಇನ್ಸ್ ಪೆಕ್ಟರ್‌ ಇದ್ದಾರೆ. ನಾನು ಅವರ ಜೊತೆ ಮಾತಾಡ್ತೀನಿ.

ನಿನ್ನ ಹಳೆಯ ಚಾಟ್‌ ಗಳನ್ನು ಪುನಃ ತೆಗೆದುಕೊಡಲು ನೆರವಾಗುತ್ತಾರೆ. ಇದರಿಂದ ವಿಚ್ಛೇದನಕ್ಕೆ ಹೊಸ ತಿರುವು ಸಿಗುತ್ತದೆ. ಅವನು ಖಾಯಂ ಆಗಿ ನೆನಪಿಟ್ಟುಕೊಳ್ಳುತ್ತಾನೆ.”

ಸಂಧ್ಯಾ ಆ ದಿನ ಸುನೀಲ್ ‌ಗೆ ವಿಷಯ ತಿಳಿಸಿದಳು. ನಿನಗೆ ಸಾಧ್ಯವಾದ ನೆರವು ಕೊಡುವೆ ಎಂದು ಇನ್‌ ಸ್ಪೆಕ್ಟರ್‌ ಸುನೀಲ್ ಭರವಸೆ ಕೊಟ್ಟರು. ರವಿ ಹಾಗೂ ಸಂಧ್ಯಾ ಆರತಿಯ ನೆರವಿಗೆ ನಿಂತರು. ಈ ವೀಕೆಂಡ್‌ ನಲ್ಲಿ ಮೈಸೂರಿಗೆ ಹೋದಾಗ ಆರತಿ ತನ್ನ ತಾಯಿ ತಂದೆಗೆ ವಿಷಯ ತಿಳಿಸುವ ಬಗ್ಗೆ ನಿರ್ಧಾರ ಮಾಡಿದಳು.

ಈವರೆಗೂ ಆರತಿ ತನ್ನ ಅಪ್ಪ ಅಮ್ಮನಿಗೆ ಈ ಬಗ್ಗೆ ಒಂದು ಸಣ್ಣ ಸುಳಿವೂ ಕೂಡ ಕೊಟ್ಟಿರಲಿಲ್ಲ. ಈಗ ಸುಮಂತ್‌ ಹೆಚ್ಚು ಕಡಿಮೆ ಸಂಪರ್ಕರಹಿತ ಆಗಿಬಿಟ್ಟಿದ್ದ.  ಯಾವಾಗಲಾದರೊಮ್ಮೆ ವಿಚ್ಛೇದನದ ಬಗ್ಗೆ ಮೆಸೇಜ್‌ ಮಾಡುತ್ತಿದ್ದ.

ಸಂಜೀವಯ್ಯ ಮತ್ತು ವಿಶಾಲಮ್ಮ ಮಗಳಿಂದ ವಿಷಯ ತಿಳಿದು ತಲೆಹಿಡಿದು ಕುಳಿತುಕೊಂಡರು. ಏನು ಮಾತಾಡಬೇಕೆಂದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಇಬ್ಬರಿಗೂ ಜಗದೀಶ್‌ ಬಗ್ಗೆ ಗೊತ್ತಾಗಿದ್ದು ಆಗಲೇ. ಅದರ ಬಗ್ಗೆ ಅವರು ಏನು ತಾನೇ ಹೇಳಲು ಸಾಧ್ಯವಿತ್ತು? ಮಕ್ಕಳು ಸ್ವಾವಲಂಬಿಗಳಾಗಿ ತಮ್ಮ ನಿರ್ಧಾರ ತಾವೇ ಕೈಗೊಂಡಾಗ, ತಿಳಿವಳಿಕೆಯುಳ್ಳ ಪೋಷಕರು ಏನು ಹೇಳಿದರೂ ಅದರಿಂದ ಏನೂ ಪ್ರಯೋಜನವಾಗದು. ಜಗದೀಶ್‌ ಮತ್ತು ಸುಮಂತ್‌ ರಿಂದ ಮಗಳಿಗೆ ಕಹಿ ಅನುಭವ ಆಗಿದೆ. ಪ್ರೀತಿಯ ಮಗಳು, ತಿಳಿವಳಿಕೆಯುಳ್ಳವಳು. ಅವಳೀಗ ದುಃಖಿತಳಾಗಿದ್ದಾಳೆ. ಬುದ್ಧಿ ಹೇಳುವ ಸಮಯ ಇದಲ್ಲ ಎಂದು ಅವರಿಗೆ ಅನಿಸಿತು.

ಈ ಸಮಯದಲ್ಲಿ ಅವಳಿಗೆ ಪೋಷಕರ ಬೆಂಬಲ ಬೇಕು. ಅಂದಹಾಗೆ ಸುಮಂತ್‌ ತಪ್ಪು ಮಾಡ್ತಿದ್ದಾನೆ. ಜಗದೀಶ್‌ ನ ವಿಷಯ ಅವರಿಗೆ ವಿಚಿತ್ರವೆನಿಸಿತು. ಆದರೆ ಅವರೀಗ ಮಗಳ ಬೆಂಬಲಕ್ಕೆ ನಿಂತಿದ್ದರು.

“ನಾನು ಇವತ್ತೇ ವಕೀಲರ ಜೊತೆ ಮಾತಾಡ್ತೀನಿ,” ಎಂದು ತಂದೆ ಸಂಜೀವಯ್ಯ ಹೇಳಿದರು.

ವಿಶಾಲಮ್ಮ ಸುಮಂತ್‌ ನ ತಾಯಿ ತಂದೆ ಜೊತೆ ಮಾತನಾಡಿ, ಭೇಟಿಯಾಗಲು ತಿಳಿಸಿದರು. ಆದರೆ ಅವರು ಆರತಿಯನ್ನೇ ಚಾರಿತ್ರ್ಯಹೀನ ಹುಡುಗಿ ಎಂದು ಹೇಳುತ್ತಾ ಸಾಕಷ್ಟು ಅವಮಾನ ಆಗುವಂತೆ ಮಾತನಾಡಿದರು. ಆಗಲೇ ಈ ಸಂಬಂಧ ಉಳಿಯಲಾರದು ಎಂಬುದು ತಾಯಿಗೆ ಖಾತ್ರಿಯಾಯಿತು.

ರವಿ ಹಾಗೂ ಸಂಧ್ಯಾ ಆರತಿಯ ಜೊತೆ ಸತತ ಸಂಪರ್ಕದಲ್ಲಿದ್ದರು. ಇನ್ ಸ್ಪೆಕ್ಟರ್‌ ಸುನೀಲ್ ಅವಳಿಗೆ ಧೈರ್ಯದಿಂದಿರುವಂತೆ ಸಲಹೆ ನೀಡಿದರು. ಆರತಿ ಬಹಳಷ್ಟು ಯೋಚನೆ ಮಾಡಿ ಸುಮಂತ್‌ ಗೆ ಫೋನ್‌ ಮಾಡಿ, “ಸುಮಂತ್‌, ನಾನೀಗ ಮೈಸೂರಿನಲ್ಲಿಯೇ ಇದ್ದೇನೆ. ನಾಳೆ ಬೆಳಗ್ಗೆ ಹೊರಡಬೇಕು. ನಾನಿವತ್ತು ನಿನ್ನ ಜೊತೆ ಸ್ವಲ್ಪ ಮಾತಾಡಬೇಕು. ಕೆಫೆ ಕಾಫಿ ಡೇಯಲ್ಲಿ ಸಂಜೆ 5 ಗಂಟೆಗೆ ಭೇಟಿಯಾಗಲು ಬರ್ತೀಯಾ?” ಎಂದು ಕೇಳಿದಳು.

“ಸರಿ ಬರ್ತೀನಿ,” ಸುಮಂತ್‌ ಏನು ಯೋಚಿಸಿ ಬರಲು ಒಪ್ಪಿದನೋ ಗೊತ್ತಿಲ್ಲ.

ಆರತಿ ತನ್ನ ತಾಯಿ ತಂದೆಗೆ ತಿಳಿಸದೆಯೇ ಅವನನ್ನು ಭೇಟಿಯಾಗಲು ಹೋದಳು. ಅವಳ ಹೃದಯದಲ್ಲಿ ಅವಮಾನ ಹಾಗೂ ಕ್ರೋಧ ಮಡುಗಟ್ಟಿ ನಿಂತಿತ್ತು. ಅದನ್ನು ಹೊರಹಾಕಲು ಇಂದು ಅವಳಿಗೆ ಅವಕಾಶ ಸಿಕ್ಕಿತ್ತು. ಟೇಬಲೊಂದರ ಮುಂದೆ ಕುಳಿತು ಸುಮಂತ್‌ ಗೆಲುವಿನ ಹಾಗೂ ನಾಚಿಕೆಗೆಟ್ಟ ಭಾವದಿಂದ ಮುಗುಳ್ನಕ್ಕ. ಅವಳು ಕುಳಿತುಕೊಳ್ಳುತ್ತಲೇ, “ನೋಡು, ಇಲ್ಲಿ ಗೋಳಾಡುವುದು ಬೇಡ. ನನಗೆ ದೀನ ಹುಡುಗಿಯರೆಂದರೆ ಆಗುವುದಿಲ್ಲ,” ಎಂದು ಹೇಳಿದ.

ಅವನ ಮಾತು ಕೇಳುತ್ತಿದ್ದಂತೆ ಅವಳ ಹೃದಯದಲ್ಲಿ ಮಡುಗಟ್ಟಿದ್ದ ರೋಷ ಕ್ಷಣಾರ್ಧದಲ್ಲಿ ಜ್ವಾಲಾಮುಖಿಯಂತೆ ಹೊರಹೊಮ್ಮಿತು. ಅವಳು ಗಡುಸಾಗಿ, “ನನಗೂ ಮೋಸ ಮಾಡುವ ಜನರೆಂದರೆ ಇಷ್ಟವಾಗುವುದಿಲ್ಲ. ನಾನು ನಿನಗೆ ಹೇಳಲು ಬಂದಿರುವುದು ಇಷ್ಟೇ. ವಿಚ್ಛೇದನದ ಪೇಪರ್‌ ಗಳಿಗೆ ಸಹಿ ಹಾಕ್ತೀನಿ…. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿರುವೆ,” ಎಂದಳು.

ಅವಳ ಧ್ವನಿಯಲ್ಲಿದ್ದ ಧೈರ್ಯ ಮತ್ತು ತಿರಸ್ಕಾರಕ್ಕೆ ಅವನು ಬೆಚ್ಚಿ ಬಿದ್ದು, “ಎಂಥ ಸಿದ್ಧತೆ….?” ಎಂದು ಕೇಳಿದ.

“ಕೋರ್ಟ್‌ ನಲ್ಲಿ ನೀನು ನನ್ನನ್ನು ಚಾರಿತ್ರ್ಯಹೀನಳು ಎಂದು ಹೇಳಲಿದ್ದೆ ಅಲ್ವಾ? ನಾನೂ ನಿನ್ನ ಹಾಗೂ ಕವಿತಾಳ ನಡುವಿನ ಚಾಟ್‌ ಮತ್ತು ಫೋಟೋಗಳನ್ನು ತೆಗೆದಿರಿಸಿದ್ದೇನೆ. ಜೊತೆಗೆ ನಿನ್ನ ಹಾಗೂ ನನ್ನ ನಡುವಿನ ಚಾಟ್‌ ಗಳನ್ನು ಇನ್‌ ಸ್ಪೆಕ್ಟರ್‌ ಸುನೀಲ್ ‌ತೆಗೆಸಿದ್ದಾರೆ. ಅದನ್ನು ನಾನು ಕೋರ್ಟ್‌ ನಲ್ಲಿ ಸಬ್ಮಿಟ್‌ ಮಾಡುತ್ತೇನೆ. ಇದರಿಂದ ಸ್ಪಷ್ಟವಾಗುವ ಸಂಗತಿ ಎಂದರೆ ಜಗದೀಶ್‌ ನ ಬಗ್ಗೆ ನಾನು ನಿನಗೆ ಮೊದಲೇ ಸ್ಪಷ್ಟಪಡಿಸಿದ್ದೆ. ಆದರೆ ಅದರ ಬಗ್ಗೆ ನಿನಗೆ ಆಗ ಯಾವುದೇ ಆಕ್ಷೇಪಗಳಿರಲಿಲ್ಲ. ನಿನ್ನ ಬಗ್ಗೆ ಕೋರ್ಟ್‌ ನಲ್ಲಿ ಎಂತೆಂಥ ವಿಷಯಗಳು ಪ್ರಸ್ತಾಪ ಆಗುತ್ತದೆಂದರೆ ಮುಂದಿನ ದಿನಗಳಲ್ಲಿ ನೀನು ಯಾವುದೇ ಹುಡುಗಿಗೆ ಮೋಸ ಮಾಡಲು ಆಗುವುದೇ ಇಲ್ಲ.

“ನಾನು ದುರ್ಬಲ ಹುಡುಗಿಯಲ್ಲ. ನೀನು ನನ್ನಿಂದ ಬೇರ್ಪಡುವುದರಿಂದ ನನಗೆ ಯಾವುದೇ ಖೇದವಿಲ್ಲ. ನಿನ್ನಂಥವನಿಂದ ಬೇರ್ಪಟ್ಟು ನಾನು ಸದಾ ಸುಖಿ ಎಂದು ಭಾವಿಸುವೆ. ಜೀವನದ ಓಟದಲ್ಲಿ ಪುನಃ ನಾನು ಓಡಲು ಸನ್ನದ್ಧಳಾಗಿದ್ದೇನೆ. ಕೋರ್ಟ್‌ ನಲ್ಲಿ ನಮ್ಮ ವಕೀಲರ ಜೊತೆ ಭೇಟಿ ಆಗೋಣ,” ಎಂದು ಮುಗುಳ್ನಗುತ್ತಾ ಎದ್ದು ನಿಂತಳು ಆರತಿ.

ಮತ್ತೆ ಏನೋ ನೆನಪಾಗಿ ವೇಟರ್‌ ಕಡೆ ಸನ್ನೆ ಮಾಡುತ್ತಾ ಬಿಲ್ ‌ಕೇಳಿ, ಸುಮಂತ್‌ ನತ್ತ ತಿರುಗಿ, “ಕಾಫಿ ಸಾಕಷ್ಟು ತಣ್ಣಗಾಗಿತ್ತು. ಮೇಲಾಗಿ ಅದನ್ನು ಕುಡಿಯಲೂ ಇಲ್ಲ. ಆದರೆ ಇವತ್ತು ಪುನಃ ನನ್ನ ಆತ್ಮವಿಶ್ವಾಸ ಕಂಡು ನಿನ್ನಂಥ, ಜಗದೀಶ್‌ ನಂತಹ ಪುರುಷರ ಕಂಗೆಟ್ಟ ಮುಖ ನೋಡಲು ಬಹಳ ಖುಷಿಯಾಗುತ್ತದೆ,” ಎಂದು ಹೇಳುತ್ತಾ ಕಾಫಿ ಬಿಲ್ ‌ಕೊಟ್ಟು ಅಲ್ಲಿಂದ ಹೊರಟುಹೋದಳು.

ಸುಮಂತ್‌ ಮುಂಬರುವ ಬಿರುಗಾಳಿ ನೆನೆಸಿ ತತ್ತರಿಸಿ ಹೋಗಿ ಹಾಗೇ ಕುಳಿತಿದ್ದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ