ವಾಣಿ, ಮೈಸೂರು 

ಮಹದೇಶ್ವರ ದೇವಸ್ಥಾನ  ಸುಂದರ ಮುಂಜಾನೆ ಹಕ್ಕಿಗಳ ಚಿಲಿಪಿಲಿ ತುಂತುರು ಹನಿಗಳು ಹಸಿರೇಲೆಗಳ ಮೇಲೆ ಜಾರುತಿದೆ. ಗಂಟೆಯ ನೀನಾದ ಮಹದೇವನ ಹೆಸರಲ್ಲಿ ಅರ್ಚನೆ ಪೂಜೆ ನಡೆಯುತ್ತಿದೆ.  ಹೂ ಕೊಳ್ಳಲು ಗಿರಾಕಿ ಬಂದು ವಿಚಾರ ಮಾಡುತ್ತಿದ್ದರು ಅವಳ ಲೋಕದಲ್ಲಿ ವಿಹರಿಸುತ್ತಿದ್ದಳು ಮಲ್ಲಿ.

ಹೂವು ಮಾರುವ ಮಲ್ಲಿ ಗೆ ಏಕೋ ಅಂದು ತುಂಬಾ ಬೇಸರವಾಗಿತ್ತು.  ಆವಳ ಮುಖದಲ್ಲಿ ನಗು ಇರ್ಲಿಲ್ಲ, ಬದಲಾಗಿ ಮುಖದಲ್ಲಿ ನೋವಿನ ಭಾವ ತಾಂಡವವಾಡುತ್ತಿತ್ತು  ಗಿರಾಕಿಗಳಿಗೆ ಸ್ಪಂದಿಸದೆ  ಪುಟ್ಟಿಯಲ್ಲಿ ಇರುವ ಹೂವು ತುಸು ಬಾಡಿ ಹೋಗುತ್ತಿತ್ತು.

ತುಂಬಾ ಚಾಲಕು ಚುರುಕಿನ ಮಲ್ಲಿ ಇಷ್ಟು ದಿವಸ ಕಿಲಕಿಲ ನಗುತ್ತಾ ಜನರನ್ನು ಖುಷಿಯಾಗಿ ಮಾತಾಡಿ  ಬೇಗ ಹೂ ಮಾರಿ ಮನೆ ಕಡೆ ಹೋಗಿಬಿಡುತ್ತಿದ್ದವಳು,  ಇಂದು ಹೂವು ಮಾರುವ ಆಸಕ್ತಿ ಕಳೆದುಕೊಂಡು ಮಂಕಾಗಿ ಕುಳಿತಳು.  ಮಲ್ಲಿಯ ಅವಸ್ಥೆಯ ಕಂಡು ವ್ಯಾಕುಲತೆಯಲ್ಲಿ ಪಕ್ಕದಲ್ಲಿ ಹೂ ಮಾರುತಿದ್ದ ರಂಗಿ

IMG-20250304-WA0094

“ಹೇ ಮಲ್ಲಿ ಏಕೆ ಇವತ್ತು ಇಷ್ಟು ಬೇಸರವಾಗಿದ್ದೀಯ….? ಪುಟ್ಟಿಯಲ್ಲಿ ಹೂ ಖಾಲಿಯಾಗಿಲ್ಲ ”

ಮಲ್ಲಿ ಅಳುತ್ತ ಅಳುತ್ತ, ನನ್ನ ಮಗಳು ಮನೆ ಬಿಟ್ಟು ಹೋಗಿದ್ದಾಳೆ ಯಾರೋ ಶ್ರೀಮಂತ ಹುಡುಗನನ್ನು ಮದುವೆ ಮಾಡಿಕೊಂಡು.  ನನ್ನ ಮುಖ ನೋಡೋಕೆ ಇಷ್ಟ ಇಲ್ವಂತೆ?  ನಾನು ರಸ್ತೆಯಲ್ಲಿ ಹೂ ಮಾರುವವಳಂತೆ, ಮನೆ ಕೆಲಸ ಮಾಡೋದು ಇಷ್ಟ ಇಲ್ವಂತೆ ನನ್ನಿಂದ ಅವಳಿಗೆ ಅವಮಾನ ಆಗುವುದಂತೆ ಯಾವತ್ತೂ ಬರ್ಬೇಡ ನನ್ನನ್ನು ಹುಡುಕಿಕೊಂಡು ನನ್ನ ಸಂತೋಷವನ್ನು ಹಾಳು ಮಾಡಬೇಡ ಎಂದು ಪತ್ರವನ್ನು ಬರೆದಿಟ್ಟು ಹೋಗಿದ್ದಾಳೆ ಪೂರ್ತಿ ಬಿಕ್ಕಳಿಸಿ ಹೇಳಿ ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಲೇ ಇದ್ದಳು ಮಲ್ಲಿ. ಅವಳಿಗೋಸ್ಕರ ಹೂ ಮಾರಿ 4 ಮನೆಯಲ್ಲಿ ಮುಸುರೆ ತಿಕ್ಕಿ ಒಳ್ಳೆ ಬಟ್ಟೆ, ಅವಳು ಹೇಳಿದ ಕಾಲೇಜಿನಲ್ಲಿ ಓದಿಸಿದ್ದಕ್ಕೆ ನನಗೆ ಸಿಕ್ಕ ಪ್ರತಿಫಲವಿದು.

ನನ್ನ ಸವೆದು ಹೋದ ಚಪ್ಪಲಿ ತೆಗೆದುಕೊಳ್ಳಲಾಗದೆ ಅವಳಿಗೆ ಬಣ್ಣದ ಶೂಗಳನ್ನು ಕೊಡಿಸಿದೆ.  ಮನೆ ಕೆಲಸ ಮಾಡುತ್ತ ಅವರು ಕೊಡುವ ಅನ್ನವನ್ನು ತಿಂದು ಬೆಳೆದೆ. ಇವಳಿಗೆ ಕ್ಯಾಂಟೀನ್ ನಲ್ಲಿ ತಿನ್ನಬೇಕು ಹೋಟೆಲ್ ಊಟ ವೇ ಬೇಕು ಅದಕ್ಕಾಗಿ ಹಣವನ್ನು ಕೊಟ್ಟೆ ಇದೆಲ್ಲ ಮಾಡಿದ್ದೂ ಅವಳ ಮೇಲೆ ಇದ್ದ ಮಮತೆಗಾಗಿ ಆ ಮಮತೆಯ ಒಡಲೇ ಬರಿದಾಯಿತೇ? ಪ್ರೀತಿಯ ಕಡಲು ಅಲೆ ಆಯಿತೇ? ತೊರೆದು ಹೋಗೆ ಬಿಟ್ಟಳು ಈ ಹೆತ್ತವಳ.

ಆಲಿಸಿಕೊಂಡ ರಂಗಿ ದುಃಖದಿಂದ ನುಡಿದಳು, ನೋಡ್ತಾ ಇರು ನೀನು ಪಟ್ಟಿರೋ ಕಷ್ಟಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ. ನಿನ್ನ ಮಗಳು ಶ್ರೀಮಂತಿಕೆಯ ವರ್ಣ ಲೋಕದಲ್ಲಿ ತೇಲಾಡುತ್ತಿದ್ದಾಳೆ…? ಒಂದಲ್ಲ ಒಂದು ದಿನ ಬರುತ್ತಾಳೆ ತನ್ನ ತಪ್ಪಿನ ಅರಿವಾಗಿ ಅಲ್ಲಿಯವರೆಗೂ

“ಬಿಟ್ಟು ಬಿಡು ಆವಳ ಪಾಡಿಗೆ ನೀನು.

“ಇನ್ನಾದರೂ ನಿನಗಾಗಿ ಬದುಕು ಇಲ್ಲಿ ಯಾರೂ ಯಾರಿಗೂ ಆಗುವುದಿಲ್ಲ….”

ಹೌದು ನಿಜ ಎಂದು ಕಣ್ಣೀರಿಡುತ್ತಾ ಹೂಗಳನ್ನು ದೇವರ ಪಾದಕ್ಕೆ ಅರ್ಪಿಸಿ ಮನೆ ಕಡೆ ಹೆಜ್ಜೆ ಇಟ್ಟಳು ಮಲ್ಲಿ.

ವಾಣಿ ಮೈಸೂರು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ