ನಾಟಕದ ವೇದಿಕೆಯಿಂದ ಅಭಿನಯ ಆರಂಭಿಸಿದ ನಟಿ ರೂಪಾಲಿ ಸೂರಿ, ಬಾಲಿವುಡ್‌ ಗೆ ಬಂದಿದ್ದು `ಡ್ಯಾಡ್‌ ಹೋಲ್ಡ್ ಮೈ ಹ್ಯಾಂಡ್‌’ ಚಿತ್ರದಿಂದ. ಈ ಚಿತ್ರದಲ್ಲಿ ಇವಳಿಗೆ ರತ್ನಾ ಪಾಠಕ್‌ ಶಾರಂಥ ನುರಿತ ನಟಿಯ ಮಗಳ ಪಾತ್ರ ಸಿಕ್ಕಿತ್ತು. ಚಿತ್ರ ನಿರ್ದೇಶಿಸುವುದರ ಜೊತೆ ವಿಕ್ರಂ ಗೋಖಲೆ ಈ ಚಿತ್ರದ ಸಂಕಲನ, ಕಂಪೋಝಿಂಗ್‌ ಹೊಣೆಯನ್ನೂ ಹೊತ್ತಿದ್ದರು. ಲಾಕ್‌ ಡೌನಿನಲ್ಲಿ ನಡೆಯುವ ಕೌಟುಂಬಿಕ ಕಥೆಯನ್ನು ಇದರಲ್ಲಿ ತೋರಿಸಲಾಗಿತ್ತು. ಇದೀಗ ಈಕೆ ಹಲವಾರು ವೆಬ್‌ ಸೀರೀಸ್‌ ಮತ್ತು ಚಿತ್ರಗಳಲ್ಲಿ ಬಿಝಿ ಆಗಿದ್ದಾಳೆ.

ನಿನಗೆ ನಟನೆಯ ಪ್ರೇರಣೆ ಸಿಕ್ಕಿದ್ದು ಎಲ್ಲಿಂದ?

ನನ್ನ ಕುಟುಂಬದವರು ಯಾರೂ ಈ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದವರಲ್ಲ. ಚಿಕ್ಕವಳಿದ್ದಾಗಿನಿಂದಲೇ ಮಾಡೆಲಿಂಗ್‌ ನಲ್ಲಿ ಅಪಾರ ಆಸಕ್ತಿ, ಹೀಗಾಗಿ ಹಲವು ಫ್ಯಾಷನ್‌ ಶೋಗಳಲ್ಲಿ ಪಾಲ್ಗೊಂಡಿದ್ದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಕೈಗೆ ಸಿಕ್ಕಿದ ಪ್ರಾಜೆಕ್ಟ್ ಹಿಡಿದು ವೆಬ್‌ ಸೀರೀಸ್‌ ಚಿತ್ರಗಳಲ್ಲಿ ನಟಿಸತೊಡಗಿದೆ. ಒಂದರ ನಂತರ ಮತ್ತೊಂದು ಸಣ್ಣಪುಟ್ಟ ಪಾತ್ರ ದೊರಕಿತ್ತು. ಅದೇ ಸಮಯದಲ್ಲಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಏನೇ ಆಗಲಿ, ನಟಿ ಆಗುವುದೇ ನನ್ನ ಕೆರಿಯರ್‌ ಎಂದು ನಿರ್ಧರಿಸಿದ್ದೆ.

2ನೇ ಕ್ಲಾಸಿನಲ್ಲಿದ್ದಾಗಲೇ ಬಾಲನಟಿಯಾಗಿ ಮಾಡೆಲಿಂಗ್‌ ಮಾಡುತ್ತಾ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. ಮುಂದೆ ಶಾಲೆಯಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದರೂ, ಕಾಲೇಜಿಗೆ ಸೇರಿದ ಮೇಲೆ ಹೆಚ್ಚಿನ ಅವಕಾಶ ದೊರಕತೊಡಗಿತು. ಹಾಗೆಯೇ ಟಿವಿ ಧಾರಾವಾಹಿಗಳಲ್ಲೂ ಅಲ್ಲಿ ಇಲ್ಲಿ ಕಾಣಿಸತೊಡಗಿದೆ. ಕ್ರಮೇಣ ನನಗೆ ವೆಬ್‌ ಸೀರೀಸ್‌, ಬಾಲಿವುಡ್‌ ಚಿತ್ರಗಳಲ್ಲಿ ಅವಕಾಶಗಳು ಸಿಗತೊಡಗಿದವು. ನಟನೆಯಲ್ಲಿ ಹೆಚ್ಚಿನ ತರಬೇತಿ ಹೊಂದಲು ಶಾಲೆ ಸೇರಿದೆ. ಅಲ್ಲಿ ಅನೇಕ ಶೋಗಳಲ್ಲಿ ಕಾಣಿಸಿಕೊಂಡೆ. ಇದು ನನ್ನ ಆರಂಭದ ದಿನಗಳು. ಇಲ್ಲಿ ನಟನೆ, ಕಲೆ ಜೊತೆ ಬಾಲಿವುಡ್‌ ನ ಅನೇಕ ಮರ್ಮಗಳನ್ನು ಅರಿತೆ!

ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟು ಆಳವಾಗಿ, ಎಂಥ ಪಾತ್ರ ನಿರ್ವಹಿಸಬಲ್ಲೆ ಎಂಬುದು ಸವಾಲಾಗಿತ್ತು. ಹೀಗಾಗಿ ವೇದಿಕೆಗಳಲ್ಲಿ ಹಲವಾರು ಪ್ರಯೋಗ ನಡೆಸಿದೆ. ಅಲ್ಲಿ ಪ್ರೇಕ್ಷಕರ ಜವಾಬು, ಮೆಚ್ಚುಗೆ, ಚಪ್ಪಾಳೆ, ಸೀಟಿ ತಕ್ಷಣ ಸಿಗುತ್ತಿತ್ತು. ಈಗಲೂ ನಾನು ರಂಗಪ್ರಯೋಗ ಪೂರ್ತಿ ಬಿಟ್ಟಿಲ್ಲ, ಆಗಾಗ ನಟಿಸುತ್ತಿರುತ್ತೇನೆ. ಬಾಲಿವುಡ್‌ ತಾನೇ ನನ್ನನ್ನು ಆವರಿಸಿದೆ, ಇದನ್ನು ನಾನು ಅರಸಿ ಬಂದಿಲ್ಲ!

ನೀನು ಏನೆಲ್ಲ ಸಂಘರ್ಷ ಎದುರಿಸ ಬೇಕಾಯಿತು?

ಇದರ ಮಟ್ಟ ಇಷ್ಟೇ ಎಂದು ಹೇಳುವಂತಿಲ್ಲ. ಹಣಕಾಸಿನ ಕೊರತೆ ನಟನೆಗೆ ನನ್ನನ್ನು ದೂಡಿತು, ಸಿಕ್ಕಿದ ಅವಕಾಶ ಒಪ್ಪಲೇ ಬೇಕಾಯಿತು. ಶೂಟಿಂಗ್‌ ಗೆ ಬರುವುದಕ್ಕೆ ನನ್ನ ಬಳಿ ಆಟೋ, ಓಲಾ, ಊಬರ್‌ ಗಳಿಗೂ ಹಣ ಇರುತ್ತಿರಲಿಲ್ಲ. ಬಸ್ಸನ್ನೇ ನಂಬಿ ಎಲ್ಲಿಂದ ಎಲ್ಲಿಗೋ ಪ್ರಯಾಣಿಸುತ್ತಿದ್ದೆ. ಫ್ಯಾಷನ್‌ ಶೋಗಳಲ್ಲಿ ಮೇಲೇರಲು ನನ್ನ ಬಳಿ ಬಗೆಬಗೆಯ ಕಾಸ್ಟ್ಯೂಮ್ಸ್, ಆ್ಯಕ್ಸೆರೀಸ್ ಏನೇನೂ ಇರಲಿಲ್ಲ, ಇದ್ದುದರಲ್ಲಿ ಮ್ಯಾನೇಜ್‌ ಮಾಡಬೇಕಾಯಿತು.

ಇಂದು ನಾನು ಹಿಂತಿರುಗಿ ನೋಡಿದಾಗ, ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿದ್ದರಿಂದಲೇ ಇಂದು ಇಷ್ಟು ಆತ್ಮವಿಶ್ವಾಸ ಗಳಿಸಿದ್ದೇನೆ ಎನಿಸಿತು. ಚಿತ್ರರಂಗದಲ್ಲಿ ನನ್ನ ಒಂದು ಸಣ್ಣ ಯಶಸ್ವೀ ವಲಯ ಹರಡಿರುವುದೇ ಈ ಆಧಾರದಿಂದ. ನನ್ನ ಅಕ್ಕಾ ಸಹ ನಟನೆಗೆ ಅಂಟಿದವಳೇ, ಇಬ್ಬರ ದಾರಿ ಒಂದೇ ಆದರೂ, ಅಪ್ರೋಚ್‌ ಮಾತ್ರ ಬೇರೆ ಬೇರೆ!

ಅಕ್ಕಾ ನಿನಗೆ ಸಹಕಾರ ನೀಡುತ್ತಾಳಾ?

ಸಹಾಯಕ್ಕಿಂತ ಹೆಚ್ಚಾಗಿ ಅವಳಿಂದಲೇ ಈ ಉದ್ಯಮಕ್ಕೆ ಬರಲು ಪ್ರೇರಣೆ ಪಡೆದಿದ್ದು. ಬಹಳ ಕಷ್ಟಪಟ್ಟು ಅವಳು ಈ ರಂಗದಲ್ಲಿ ತನ್ನದೇ ಆದ ಐಡೆಂಟಿಟಿ ಪಡೆದಿದ್ದಾಳೆ. ಅವಳ ಸರಿ, ತಪ್ಪು ಹೆಜ್ಜೆಗಳಿಂದಾಗಿ ನಾನು ಬಹಳಷ್ಟು ಕಲಿತೆ. ನಾನು ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ತಂದೆ ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದಾರೆ. ಈಗ ನಿವೃತ್ತರು, ಅಮ್ಮ ಕೊರೋನಾದಲ್ಲಿ ತೀರಿಕೊಂಡರು. ಅಕ್ಕ ತಂಗಿಯರಾದ ನಮ್ಮಲ್ಲಿ ಮೊದಲಿನಿಂದಲೂ ಹೆಚ್ಚಿನ ಅನ್ಯೋನ್ಯತೆ ಇದೆ.

ಬಾಲಿವುಡ್ನಂಥ ಬಿಗ್ಇಂಡಸ್ಟ್ರಿಯಲ್ಲಿ ಗಾಡ್ಫಾದರ್ಇಲ್ಲದೆ ಮುನ್ನೇರುವುದು ಕಷ್ಟ. ನಿನ್ನ ಕಥೆ ಏನು?

ಇದಂತೂ ಅಪ್ಪಟ ಸತ್ಯ. ಪೇರೆಂಟ್ಸ್ ಕಾರಣ ಅವರ ಮಕ್ಕಳು ಇಲ್ಲಿ ಸುಲಭದ ಕೆರಿಯರ್‌ ರೂಪಿಸಿಕೊಳ್ತಾರೆ. ಇದು ಇಲ್ಲಿ ಮಾತ್ರವಲ್ಲ, ಎಲ್ಲಾ ಕಡೆಯೂ ಉಂಟು. ಅವಕಾಶ ಸಿಕ್ಕಿದರೆ ಸಾಲದು, ಪ್ರತಿಭೆ ಇದ್ದರೆ ಮಾತ್ರ ಇಲ್ಲಿ ಮುಂದುವರಿಯಲು ಸಾಧ್ಯ. ಯಾರ ನೆರವೂ ಇಲ್ಲದೆ ಇತರರು ಬೆಳೆದಂತೆ ನಾನೂ ಬೆಳೆದಿದ್ದೇನೆ.

ಬಹಳ ಸ್ಟ್ರೆಸ್ ಆದಾಗ ಹೇಗೆ ರಿಲೀಫ್ಕಾಣ್ತೀಯಾ?

ಶೂಟಿಂಗ್‌ ಇರುವಾಗ ಅರ್ಧ ರಾತ್ರಿಯಾದರೂ ಸೆಟ್‌ ನಲ್ಲೇ ಇರಬೇಕಾಗುತ್ತೆ, ಮ್ಯಾನೇಜರ್‌ ಜೊತೆ ಮಾತನಾಡುತ್ತಿರುತ್ತೇನೆ. ಅವರು ಎಷ್ಟೋ ವಿಷಯ ತಿಳಿಸುತ್ತಾರೆ. ಅದಿಲ್ಲದಿದ್ದರೆ ಕಥಕ್‌ ನೃತ್ಯಾಭ್ಯಾಸ ಮಾಡುತ್ತೇನೆ. ಅದರಿಂದ ಎಷ್ಟೋ ಪಟ್ಟಿನ ಸ್ಟ್ರೆಸ್ ತೊಲಗುತ್ತದೆ. ನಾನೊಬ್ಬ ಅಪ್ಪಟ ಕಲಾವಿದೆ, ಅತಿ ಭಾವುಕಳು. ಯಾವುದೇ ಪಾತ್ರ ಮಾಡಿದರೂ ಅದರಲ್ಲಿ ಲೀನವಾಗ್ತೀನಿ, ಆ ಚಿತ್ರ ಮುಗಿದಾಗ ಎಂದಿನಂತೆ ರೂಪಾಲಿ ಆಗಿರ್ತೀನಿ.

ಯಾವ ಶೋ ನಿನಗೆ ಟರ್ನಿಂಗ್ಪಾಯಿಂಟ್ಆಯ್ತು?

ಟಿವಿ ನನ್ನ ಕೆರಿಯರ್‌ ಗೆ ಬಲು ಸಹಾಯ ಮಾಡಿತು. ನನ್ನ ಶೋಗಳಿಂದ ಈಗಲೂ ಜನ ನನ್ನನ್ನು ಗುರುತಿಸುತ್ತಾರೆ. ವೆಬ್‌ ಸೀರೀಸ್ ನಿಂದ, ಕಿರುತೆರೆಯಿಂದ ನನಗೆ ಬೇರೆ ಬೇರೆ ಐಡೆಂಟಿಟಿಗಳಿವೆ. `ಶಕಲಕ ಬೂಂಬೂಂ’ ಶೋನಿಂದ ನನ್ನ ಪಾತ್ರ, ಜಾಹೀರಾತುಗಳು, ಡೈಲಾಗ್ಸ್ ನಿಂದ ಜನ ಈಗಲೂ ನನ್ನನ್ನು ಗುರುತಿಸುತ್ತಾರೆ. ಈ ರೀತಿ ಅನೇಕ ಟಿವಿ ಶೋಗಳಿಂದ ಎಲ್ಲರ ಮನೆಮನಗಳಲ್ಲಿ ಜಾಗ ಪಡೆದಿದ್ದೇನೆ.

ಇಂದು OTT ಬಹಳ ವೀಕ್ಷಕರನ್ನು ತಲುಪುತ್ತಾ ಜನಪ್ರಿಯಾಗಿದೆ. ನಿನ್ನಂಥ ಹೊಸಬರಿಗೆ ಇದರಿಂದ ಎಷ್ಟು ಲಾಭವಾಗಿದೆ?

OTT ಬಂದಾಗಿನಿಂದ ಇಂಡಸ್ಟ್ರಿಯಲ್ಲಿ ಬಹಳಷ್ಟು ಜನರಿಗೆ ಕೆಲಸ ಹಾಗೂ ಸಂಬಳ ಹೆಚ್ಚಾಗಿದೆ. ಯಾವ ರೀತಿ ಕಿರು ತೆರೆಯಿಂದ ಕಲಾವಿದರಿಗೆ ಧಾರಾವಾಹಿ ಮೂಲಕ ಹೆಚ್ಚಿನ ಅವಕಾಶಗಳು ದೊರಕಿದವೋ, ಹಾಗೆಯೇ OTT ಬಂದಾಗಿನಿಂದ ಎಲ್ಲರಿಗೂ ಹೆಚ್ಚಿನ ಕೆಲಸ ಸಿಗುತ್ತಿದೆ. ಕೆಲಸ ಮತ್ತು ಸಂಭಾವನೆ ಹೆಚ್ಚಿದಾಗ ಮಾತ್ರ ಇಂಡಸ್ಟ್ರಿಯ ಜನ ನಿಶ್ಚಿತ ರೂಪದಲ್ಲಿ ಏಳಿಗೆ ಕಾಣಲು ಸಾಧ್ಯ. ಹೀಗಾಗಿ ಬೆಳ್ಳಿತೆರೆ ಒಂದೇ ಆಧಾರವಲ್ಲ, OTT ಮೂಲಕ ಜನಮನ ತಲುಪಿ ಪಾಪ್ಯುಲರ್‌ ಹೆಸರು, ಹಣ ಗಿಟ್ಟಿಸಬಹುದು ಎಂದಾಗಿದೆ.

ನಿಮ್ಮ ಮನೆಯವರ ಸಹಕಾರ ಹೇಗಿತ್ತು?

ಕುಟುಂಬದವರ ಸಹಾಯ ಸಿಗದೆ ನಾನು ಈ ಮಟ್ಟದ ಪ್ರಗತಿ ಕಾಣಲು ಸಾಧ್ಯವೇ ಇರಲಿಲ್ಲ. ಮೊದಲ ದಿನದಿಂದ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ, ಯಾವುದೇ ಅಡೆತಡೆ ಇಲ್ಲ. ನನಗೆ ಅಗತ್ಯವಾದ ಟ್ರಸ್ಟ್  ಕಾನ್ಛಿಡೆನ್ಸ್ ಕೊಟ್ಟಿದ್ದಾರೆ.

ನಿನ್ನ ಕನಸುಗಳೇನು?

ನನ್ನದೆಲ್ಲ ಬಹಳ ಸಣ್ಣ ಕನಸುಗಳು…. ನಾನು ಮಹಾ ಅಲ್ಪತೃಪ್ತಳು. ಸಣ್ಣಪುಟ್ಟದ್ದು ದಕ್ಕಿದ್ದರಲ್ಲೇ ನಾನು ಇಡೀ ದಿನ ಸಂತೋಷ ಕಾಣುತ್ತೇನೆ. ನಾನು ಸದಾ ಪ್ರೆಸೆಂಟ್‌ ನಲ್ಲಿ ಬದುಕಿರಲು ಇಷ್ಟಪಡ್ತೀನಿ. ಡ್ಯಾನ್ಸ್ ನನ್ನ ಪ್ಯಾಶನ್‌, ಆದರೆ ಯಾವಾಗ ಅದು ನನ್ನ ಅತ್ಯಗತ್ಯ ಆಯ್ತು ಎಂದು ತಿಳಿಯಲೇ ಇಲ್ಲ. ನಾನು ನನ್ನ ಅನುಕೂಲಕ್ಕಾಗಿ ಶೋ ಮಾಡ್ತೀನಿ, ಅಭ್ಯಾಸ ಮಾಡ್ತೀನಿ, ಇದು ಸದಾ ನನ್ನನ್ನು ಬ್ಯಾಲೆನ್ಸ್ಡ್ ಆಗಿ ಇರಿಸುತ್ತದೆ. ನನ್ನ ಕಥಕ್‌ ಗುರುಗಳೇ ನನ್ನ ಫಿಲಾಸಫರ್‌, ಗೈಡ್‌ ಎಲ್ಲಾ!

ನೀನು ಪ್ರಾಣಿಗಳನ್ನು ಸಾಕಿಕೊಂಡಿದ್ದೀಯಾ?

ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ! ಕಾಲೇಜು ಸೇರಿದಾಗಿನಿಂದ ಡಾಗಿ ಡಾನ್‌ ನನ್ನ ಜೀವವಾಗಿದ್ದ. 15 ವರ್ಷ ನನ್ನೊಡನೆ ಇದ್ದ ಅವನು ತೀರಿಕೊಂಡ. ಆ ನೆನಪಲ್ಲಿ ನಾನು ಅನೇಕ ಪ್ರಾಣಿ ದಯಾ ಸಂಘಗಳಿಗೆ ಸಹಾಯ ಮಾಡಲು ಧಾವಿಸುತ್ತೇನೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ