ತನ್ನ ಭಾವಿ ಪತಿ ರವಿಯ ಸ್ನೇಹಿತ ಮಹೇಶನ ನಿಶ್ಚಿತಾರ್ಥದ ಸಂದರ್ಭದಲ್ಲಿ ಸೌಮ್ಯಾ ಮೊದಲ ಬಾರಿ ಶಿಲ್ಪಾಗೆ ಮುಖಾಮುಖಿಯಾಗಿದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಸೌಮ್ಯಾಳ ಬಾಯಿಂದ ಅವಳು ಎಂತೆಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಯಿತೆಂದರೆ,  ಅದರಿಂದ ಅವಳಿಗೆ ತನ್ನನ್ನು ಕಂಡು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ಸ್ಪಷ್ಟವಾಯಿತು.

ಶಿಲ್ಪಾಗೆ ತಾನು ಒಳ್ಳೆಯ ಡ್ಯಾನ್ಸರ್‌ ಅಲ್ಲ ಎನ್ನುವುದು ಗೊತ್ತಿತ್ತು. ಆದರೆ ಅವಳಿಗೆ ಡ್ಯಾನ್ಸ್ ಮಾಡಲು ಬಹಳ ಇಷ್ಟವಾಗುತ್ತಿತ್ತು. ರವಿಯ ಜೊತೆ ಅವಳು ಸ್ವಲ್ಪ ಹೊತ್ತು ಡ್ಯಾನ್ಸ್ ಮಾಡಿದ ಬಳಿಕ ತನ್ನ ಪರಿಚಯದ ಮಹಿಳೆಯರೊಂದಿಗೆ ಹರಟೆ ಹೊಡೆಯಲು ಅವಳು ಕೆಳಗಿಳಿದು ಬಂದಳು. ಆಗ ಸೌಮ್ಯಾ ಮುಖ ಸಿಂಡರಿಸುತ್ತಾ ಕಮೆಂಟ್‌ ಮಾಡಿದಳು, “ಡ್ಯಾನ್ಸ್ ನಲ್ಲಿ ಉತ್ಸಾಹದ ಜೊತೆದೆ ಗ್ರೇಸ್‌ ಕೂಡ ಕಂಡುಬರಬೇಕು. ಇಲ್ಲದಿದ್ದರೆ ವ್ಯಕ್ತಿ ಕಾಡಿನವರ ಹಾಗೆ ಕಾಣುತ್ತಾನೆ.”

ಸ್ವಲ್ಪ ಹೊತ್ತಿನ ಬಳಿಕ ಶಿಲ್ಪಾಳ ಫಿಗರ್‌ ಬಗ್ಗೆ ಗಮನಸೆಳೆಯುತ್ತಾ, “ಶಿಲ್ಪಾ, ನೀನು ನನ್ನ ಮಾತಿನ ಬಗ್ಗೆ ಕೆಟ್ಟದಾಗಿ ಭಾವಿಸಬೇಡ. ಆದರೆ ಇತ್ತೀಚೆಗೆ ಝೀರೋ ಸೈಜ್‌ ನ ಫ್ಯಾಷನ್‌ ಚಾಲ್ತಿಯಲ್ಲಿದೆ. ಅದು ನನ್ನ ತಿಳಿವಳಿಕೆಗೆ ಹೊರತಾದದ್ದು, ಫ್ಯಾಷನ್‌ ಫ್ಯಾಷನ್ನೇ. ಆದರೆ ಪ್ರಿಯಕರ ಅಥವಾ ಗಂಡನ ಪ್ರೀತಿಯಲ್ಲಿ ಕೇವಲ ಮೂಳೆಗಳ ಪಂಜರ ಮಾತ್ರ ಇದ್ದರೆ, ಅದು ಅವನ ದೃಷ್ಟಿಯಲ್ಲಿ ಅನ್ಯಾಯವೇ ಅಲ್ವೇ?”

ಸೌಮ್ಯಾಳ ಆ ಮಾತುಗಳನ್ನು ಕೇಳಿಸಿಕೊಂಡು ಇತರೆ ಮಹಿಳೆಯರು ಜೋರಾಗಿ ನಕ್ಕರು. ಅದಕ್ಕೆ ಪ್ರತಿಯಾಗಿ ಶಿಲ್ಪಾ ಖಾರವಾಗಿ ಉತ್ತರಿಸಬೇಕೆಂದುಕೊಂಡಳು ತನ್ನನ್ನು ತಾನು ತಡೆದಳು. ತನ್ನ ಮನಸ್ಸಿಗೆ ಎಷ್ಟು ಹೆಚ್ಚು ಒತ್ತುಕೊಟ್ಟರೂ, ಸೌಮ್ಯಾ ತನ್ನೊಂದಿಗೆ ಅಷ್ಟೊಂದು ಕಠೋರವಾಗಿ ಏಕೆ ನಡೆದುಕೊಳ್ಳುತ್ತಿದ್ದಾಳೆಂದು ಅವಳ ಅರಿವಿಗೆ ಬರಲಿಲ್ಲ.

ಶಿಲ್ಪಾ ಏಕಾಂತದಲ್ಲಿ ರವಿಯನ್ನು ಈ ಬಗ್ಗೆ ಕೇಳಿಯೇ ಬಿಟ್ಟಳು, “ನಿಮಗೂ ಸೌಮ್ಯಾಗೂ ಈ ಹಿಂದೆ ಪರಿಚಯ, ಸ್ನೇಹ ಇತ್ತಾ?”

“ಸರಿ, ಸರಿ….. ನೀನು ಈ ಪ್ರಶ್ನೆಯನ್ನು ಏಕೆ ಕೇಳುತ್ತಿರುವೆ?” ಅವನು ಶಿಲ್ಪಾಳ ಮುಖದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿದ್ದ.

“ಏಕೆಂದರೆ ಸೌಮ್ಯಾ ನನ್ನೊಂದಿಗೆ ಉದ್ದೇಶಪೂರ್ವಕವಾಗಿಯೇ ಈ ರೀತಿ ವರ್ತಿಸುತ್ತಿದ್ದಾಳೆ ಅನಿಸುತ್ತಿದೆ. ಏಕೆಂದರೆ ಇವತ್ತು ನಾವು ಮೊದಲ ಬಾರಿ ಭೇಟಿಯಾಗಿದ್ದೇವೆ. ಹೀಗಾಗಿ ನನ್ನ ಯಾವುದಾದರೂ ತಪ್ಪಿಗೆ ಅವಳು ಬೇಸರಗೊಂಡು ಹೀಗೆ ವರ್ತಿಸುತ್ತಾಳೆಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವಳು ನಿಮ್ಮ ಜೊತೆಗಿನ ಯಾವುದಾದರೂ ಹಳೆಯ ಜಗಳಕ್ಕೆ ಬೇಸರಗೊಂಡು ಹೀಗೆ ವರ್ತಿಸುತ್ತಿರಬಹುದೆ?” ಕೇಳಿದಳು ಶಿಲ್ಪಾ

“ಇಲ್ಲ… ಇಲ್ಲ…. ನನ್ನೊಂದಿಗೆ ಅವಳು ಎಂದೂ ಜಗಳವಾಡಿಲ್ಲ.”

“ಹಾಗಿದ್ದರೆ ಮತ್ತೇನೂ ಕಾರಣವಿರಬಹುದು. ನನ್ನ ವಿರುದ್ಧ ಇಷ್ಟೊಂದು ಹಲ್ಲು ಮಸೆಯಲು?”

“ವ್ಯಕ್ತಿಯೊಬ್ಬನ ಮೂಡ್‌ ಯಾವ ಕಾರಣಗಳಿಂದ ಹದಗೆಡಬಹುದು? ನೀನು ವ್ಯರ್ಥವಾಗಿ ಟೆನ್ಶನ್‌ ಮಾಡಿಕೊಳ್ತಿರುವೆ. ಬಾ ನಿನಗೆ ಗೋಬಿ ಮಂಚೂರಿ ತಿನ್ನಿಸ್ತೀನಿ.”

“ಅವಳು ನನ್ನೆಲ್ಲ ಪಾರ್ಟಿಯ ಮಜಾವನ್ನು ಹಾಳುಗೆಡಹಿಬಿಟ್ಟಳು.”

“ಹಾಗಾದರೆ ಅವಳೊಂದಿಗೆ ಜಗಳ ಮಾಡೋಣ ಬಾ,” ರವಿ ಸ್ವಲ್ಪ ಸಿಡಿಮಿಡಿಗೊಂಡು ಹೇಳಿದ.

“ನೀವು ಬೇಜಾರಾಗಬೇಡಿ. ನಾನು ಅವಳ ಮಾತುಗಳ ಬಗ್ಗೆ ಗಮನ ಕೊಡುವುದನ್ನು ನಿಲ್ಲಿಸ್ತೀನಿ,” ಎಂದು ಹೇಳುತ್ತಾ ಅವನ ಮೂಡ್‌ ಸರಿಪಡಿಸಲು ಶಿಲ್ಪಾ ತಕ್ಷಣ ನಕ್ಕುಬಿಟ್ಟಳು.

“ಇದು ತಿಳಿವಳಿಕೆಯ ಮಾತು,” ರವಿ ಪ್ರೀತಿಯಿಂದ ಅವಳ ಕೆನ್ನೆಯನ್ನು ನೇವರಿಸಿದ. ಬಳಿಕ ಅವಳ ಕೈ ಹಿಡಿದು ಗೋಬಿ ಮಂಚೂರಿ ಸ್ಟಾಲ್ ನತ್ತ ಕರೆದುಕೊಂಡು ಹೊರಟ.

ಶಿಲ್ಪಾ ಸೌಮ್ಯಾಳ ತಪ್ಪು ವರ್ತನೆಯನ್ನು ಬಹುಶಃ ಮರೆತುಬಿಡುತ್ತಿದ್ದಳೋ ಏನೋ? ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಹೊರಗೆ ಗಾರ್ಡನ್‌ ನಲ್ಲಿ ಸೌಮ್ಯಾ ಮತ್ತು ರವಿ ಗಾಬರಿ ಆತಂಕ ಬೆರತ ಸ್ಥಿತಿಯಲ್ಲಿ ಸಂಭಾಷಣೆ ನಡೆಸುತ್ತಿರುವುದು ಕಿಟಕಿಯಿಂದ ಅವಳ ಕಣ್ಣಿಗೆ ಬಿತ್ತು.

ಅವಳು ಅವರಿಬ್ಬರ ಧ್ವನಿಯನ್ನು ಕೇಳಿಸಿಕೊಳ್ಳಲಾಗುತ್ತಿರಲಿಲ್ಲ. ಆದರೆ ಅವರ ಹಾವಭಾವಗಳಿಂದ ರವಿ ಸೌಮ್ಯಾಳಿಗೆ ಏನನ್ನೋ ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದಾನೆಂದು ಸ್ಪಷ್ಟವಾಗುತ್ತಿತ್ತು. ಬಹಳ ಉತ್ತೇಜಿತಳಾದಳಂತೆ ಸೌಮ್ಯಾ ರವಿಯನ್ನು ತನ್ನ ಕೈಬೆರಳ ಮೇಲೆ ಕುಣಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದಳು. ಆ ವಿಷಯ ಶಿಲ್ಪಾಳ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು.

ಅವಳು ತನ್ನ ಮನಸ್ಸಿನ ಚಿಂತೆಯನ್ನು ಬದಿಗಿಟ್ಟು ಮಹೇಶ್‌ ಬಳಿ ಹೋಗಿ ಗಂಭೀರ ಸ್ವರದಲ್ಲಿ, “ಮಹೇಶ್‌ ಅಣ್ಣಾ, ನೀವು ನನಗೆ ಒಂದು ವಿಷಯ ಸ್ಪಷ್ಟವಾಗಿ ಹೇಳ್ತೀರಾ?” ಎಂದು ಕೇಳಿದಳು.

“ಖಂಡಿತವಾಗಿ ತಿಳಿಸ್ತೀನಿ,” ಮಹೇಶ್‌ ಮುಗುಳ್ನಗುತ್ತಾ ಹೇಳಿದ.

“ನಾನು ರವಿಯನ್ನು ಅದೆಷ್ಟು ಗಾಢವಾಗಿ ಪ್ರೀತಿಸ್ತೀನಿ ಎನ್ನುವುದು ನಿಮಗೆ ಗೊತ್ತೇ ಇದೆಯಲ್ಲ?”

“ಹೌದು, ಅದು ನನಗೆ ಗೊತ್ತು.”

“ಸೌಮ್ಯಾಳನ್ನು ನಾನು ಇವತ್ತು ಮೊದಲ ಬಾರಿಗೆ ಭೇಟಿ ಆಗುತ್ತಿರುವೆ. ಅವಳು ಕಾರಣವಿಲ್ಲದೆಯೇ ನನ್ನ ಮೇಲೆ ಏಕೆ ಸಿಡಿಮಿಡಿಗೊಂಡಿದ್ದಾಳೆ? ಮಾತು ಮಾತಿಗೂ ಎಲ್ಲರೆದುರು ನನ್ನನ್ನು ಅಪಮಾನಿಸಲು ಏಕೆ ಪ್ರಯತ್ನಿಸುತ್ತಿದ್ದಾಳೆ? ನನ್ನ ಈ ಪ್ರಶ್ನೆಗಳಿಗೆ ನೀವೇ ಉತ್ತರ ಕೊಡಬೇಕು. ಪ್ಲೀಸ್‌.”

ಶಿಲ್ಪಾ ಬಹಳ ಗಂಭೀರಳಾಗಿರುವುದನ್ನು ಕಂಡು ಏನೋ ನೆಪ ಹೇಳಬೇಕೆಂಬ ನಿರ್ಧಾರವನ್ನು ಕೈಬಿಟ್ಟ. ಅವಳು ಶಾಂತವಾಗಿ ಕುಳಿತುಕೊಂಡು ಅವನು ಏನು ಹೇಳಬಹುದು ಎನ್ನುವುದನ್ನು ಕಾತುರದಿಂದ ಕಾಯತೊಡಗಿದಳು.

ಸ್ವಲ್ಪ ಹೊತ್ತಿನ ಬಳಿಕ ಅವನು ಮೆಲ್ಲನೆಯ ಧ್ವನಿಯಲ್ಲಿ ಶಿಲ್ಪಾಳಿಗೆ, “ಸೌಮ್ಯಾ, ಕಾಲೇಜಿನಲ್ಲಿ ನಮ್ಮೊಂದಿಗೆ ಓದುತ್ತಿದ್ದಳು. ರವಿ ಹಾಗೂ ಅಳು ಪರಸ್ಪರ ಇಷ್ಟಪಡುತ್ತಿದ್ದರು. ಆದರೆ ಅಳ ತಾಯಿ ತಂದೆ ಒಪ್ಪದೇ ಇರು ಕಾರಣದಿಂದ ಅವರ ವಿವಾಹ ಸಾಧ್ಯವಾಗಲಿಲ್ಲ,” ಎಂದು ಹೇಳಿದ ಮಹೇಶ್‌.

“ಶ್ರೀಮಂತ ತಂದೆಯ ಮಗಳಾಗಿರುವ ಸೌಮ್ಯಾಳ ಮದುವೆ ಕೂಡ ಶ್ರೀಮಂತ ಮನೆತನದ ಹುಡುಗನ ಜೊತೆ ಆಗಿದೆ. ಆದರೆ ತನ್ನ ಗಂಡನ ಜೊತೆ ಅವಳಿಗೆ ಹೊಂದಾಣಿಕೆ ಆಗುತ್ತಿಲ್ಲ. ಆದರೆ ನೀನು ಯಾವುದೇ ವಿಷಯದ ಬಗ್ಗೆ ಚಿಂತಿಸಬೇಡ. ರವಿಯ ಮನಸ್ಸಿನಲ್ಲಿ ಅವಳ ಬಗ್ಗೆ ಈಗ ಯಾವುದೇ ಆಕರ್ಷಣೆ ಉಳಿದಿಲ್ಲ ಎನ್ನುವುದರ ಬಗ್ಗೆ ನಾನು ನಿನಗೆ ಖಾತ್ರಿ ಕೊಡ್ತೀನಿ.”

“ಆದರೆ ಸೌಮ್ಯಾಳ ಮನಸ್ಸಿನಲ್ಲಿ ರವಿಯ ಬಗ್ಗೆ ಈಗಲೂ ಆಕರ್ಷಣೆ ಇದೆ. ಇಲ್ಲದಿದ್ದರೆ ಅವಳ ಕಣ್ಣಿಗೆ ನಾನೇಕೆ ಚುಚ್ಚುವಂತಾಗುತ್ತಿದ್ದೆ?” ಶಿಲ್ಪಾಳ ಮನಸ್ಸಿನಲ್ಲಿ ಕೋಪ ಉಕ್ಕಿ ಬರುತ್ತಿತ್ತು.

“ನನಗೆ ಒಂದು ವಿಷಯ ಸ್ಪಷ್ಟಪಡಿಸು. ರವಿಯ ಪ್ರೀತಿಯ ಬಗ್ಗೆ ನಿನಗೆ ಸಂಪೂರ್ಣ ನಂಬಿಕೆ ಇದೆ ಅಲ್ವಾ?” ಮಹೇಶ್‌ಹೇಳಿದ.

“ನಾನು ನನಗಿಂತ ಹೆಚ್ಚು ಅವರ ಮೇಲೆ ನಂಬಿಕೆ ಇಡ್ತೀನಿ. ಆದರೆ…..”

“ಆದರೆ…. ಗೀದರೆ….. ಇದನ್ನೆಲ್ಲ ಹೇಳೋದನ್ನು ಬಿಟ್ಟು, ರವಿಯ ಪ್ರೀತಿಯ ಬಗ್ಗೆ ನಿನಗೆ ಸಂಪೂರ್ಣ ನಂಬಿಕೆ ಇದ್ದರೆ, ನಿನಗೆ ಮತ್ಯಾವುದರ ಬಗ್ಗೆ ಆತಂಕ ಇದೆ ಹೇಳು.”

“ಯಾವ ಬೀಜ ಭವಿಷ್ಯದಲ್ಲಿ ಬಹುದೊಡ್ಡ ತಲೆನೋವು ತರುವ ಮರವಾಗುವ ಸಾಧ್ಯತೆ ಇರುತ್ತೋ, ಅದನ್ನು ಆರಂಭದಲ್ಲಿಯೇ ನಾಶಗೊಳಿಸುವುದಕ್ಕೆ ಜಾಣತನ ಅನಿಸುವುದಿಲ್ಲವೇ?”

“ಅದಂತೂ ಸರಿ. ಆದರೆ ನೀನು ಏನು ಮಾಡಲು ಯೋಚಿಸುತ್ತಿರುವೆ?”

“ನಿಮ್ಮ ಪಾರ್ಟಿಯಲ್ಲಿ ನಾನು ಯಾವುದೇ ಗೊಂದಲ ಗಲಾಟೆ ಸೃಷ್ಟಿಸುವುದಿಲ್ಲ. ನಾನು ಸೌಮ್ಯಾಳಿಗೆ ಎಂತಹ ಪಾಠ ಕಲಿಸಲು ಯೋಚಿಸುತ್ತಿರುವೆ ಎಂದರೆ, ಅವಳು ಮುಂದೆಂದೂ ನನ್ನ ಬಗ್ಗೆ ಚಕಾರ ಎತ್ತುವ ಧೈರ್ಯ ತೋರಿಸಲಾರಳು. ನೀವು ನನಗೆ ಅವಳ ಪತಿಯನ್ನೊಮ್ಮೆ ಪರಿಚಯ ಮಾಡಿಕೊಡಿ ಸಾಕು. ಪ್ಲೀಸ್‌!” ಶಿಲ್ಪಾಳ ಮಾತುಗಳನ್ನು ಕೇಳಿಸಿಕೊಂಡ ಮಹೇಶನ ಮನಸ್ಸಿನಲ್ಲಿ ಚಿಂತೆಯೇನೂ ನಿವಾರಣೆ ಆಗಲಿಲ್ಲ. ಆದರೆ ಅವನು ಸೌಮ್ಯಾಳ ಪತಿಯನ್ನು ಅವಳಿಗೆ ಪರಿಚಯಿಸಲು ಅವಳನ್ನು ಕರೆದುಕೊಂಡು ಹೊರಟ.

ಆಕರ್ಷಕ ಯುವತಿಯರಿಗೆ ಪುರುಷರ ಮನಸ್ಸನ್ನು ಪ್ರಭಾವಿತಗೊಳಿಸುವುದು ಕಷ್ಟಕರ ಸಂಗತಿಯೇನಲ್ಲ. ಶಿಲ್ಪಾ ವಿವೇಕನ ಜೀವನದ ಬಗ್ಗೆ ತಿಳಿಯಲು ಅಷ್ಟಿಷ್ಟು ಆಸಕ್ತಿ ತೋರಿಸಿದಳು. ಹಾಗಾಗಿ ಅವಳು ಬಹುಬೇಗ ಒಳ್ಳೆಯ ಸ್ನೇಹಿತರಂತೆ ಮಾತನಾಡುತ್ತಾ, ನಗು ನಗುತ್ತಾ ಸಮಯ ಕಳೆಯುವಂತಾಯಿತು.

“ರವಿ ಎಲ್ಲೂ ಕಣ್ಣಿಗೆ ಬೀಳಲಿಲ್ಲ ಹಾಗೂ ನನಗೆ ಐಸ್‌ ಕ್ರೀಂ ತಿನ್ನಬೇಕೆಂಬ ಬಯಕೆ ತೀವ್ರವಾಗಿದೆ,” ಎಂದಳು ಶಿಲ್ಪಾ.

ಕೇವಲ 15 ನಿಮಿಷಗಳ ಗುರುತು ಪರಿಚಯ ಅಷ್ಟೇ. ಇಷ್ಟು ಕಡಿಮೆ ಅವಧಿಯಲ್ಲಿ  ಶಿಲ್ಪಾಳ ಬೇಡಿಕೆಗೆ ವಿವೇಕನ ಕಣ್ಣುಗಳಲ್ಲಿ ಅದೆಂಥ ಹೊಳಪು ಮೂಡಿತೆಂದರೆ, ಅವಳ ಜಾದೂ ವಿವೇಕನ ಮೇಲೆ ಸಂಪೂರ್ಣವಾಗಿ ಆಗಿದೆ ಎನ್ನುವುದು ಖಚಿತವಾಗಿತ್ತು.

“ಒಂದು ವೇಳೆ ನಿನಗೆ ಸರಿ ಎನ್ನಿಸಿದರೆ ನನ್ನೊಂದಿಗೆ ಐಸ್‌ ಕ್ರೀಂ ತಿನ್ನಲು ಬಾ,” ಅವನು ತಕ್ಷಣವೇ ತನ್ನೊಂದಿಗೆ ಬಾ ಎಂಬ ಪ್ರಸ್ತಾಪವನ್ನು ಅವಳ ಮುಂದಿಟ್ಟ.

“ನೀವು ನನ್ನೊಂದಿಗೆ ಬರ್ತೀರಾ?”

“ಬಹಳ ಖುಷಿಯಿಂದ.”

“ನೀವು ನನ್ನೊಂದಿಗೆ ಏಕಾಂಗಿಯಾಗಿ ಬರುವುದರಿಂದ ನಿಮ್ಮ ಹೆಂಡತಿಗೆ ಬೇಜಾರು ಆಗುವುದಿಲ್ಲವೇ?” ಎಂದು ಹೇಳುತ್ತಾ ಅವಳು ಮುಗುಳ್ನಕ್ಕಳು.

“ಇಷ್ಟೊಂದು ಸಣ್ಣ ವಿಷಯವನ್ನು ದೊಡ್ಡದು ಮಾಡಿ ಜಗಳ ಮಾಡಲು ಅವಳಿಗೆ ನಾನು ಅಷ್ಟು ಸಲಿಗೆ ಕೊಟ್ಟಿಲ್ಲ.”

“ಆದರೂ ನಾವು ಕಾರಣವಿಲ್ಲದೆಯೇ ಯಾರ ಹೃದಯವನ್ನೂ ನೋಯಿಸಬಾರದು. ನೀವು ಹೊರಗೆ ನನ್ನ ಕಾರ್‌ ನಂಬರ್‌ 4678 ಬಳಿ ನನಗಾಗಿ ಕಾಯುತ್ತಾ ಇರಿ. ನಾನು ಎರಡೇ ನಿಮಿಷದಲ್ಲಿ ಹೊರಗೆ ಬರ್ತೀನಿ,” ಎಂದಳು ಶಿಲ್ಪಾ.

“ಸರಿ ಹಾಗೇ ಮಾಡಿ,” ಎಂದು ಹೇಳುತ್ತಾ ಅವನು ಮೇನ್‌ ಡೋರ್‌ ಕಡೆ ಹೆಜ್ಜೆ ಹಾಕಿದ.

ವಿವೇಕ್‌ ಶಿಲ್ಪಾಳ ದೃಷ್ಟಿಯಿಂದ ಮರೆಯಾಗುತ್ತಿದ್ದಂತೆ ಅವಳು ವೇಗವಾಗಿ ಹೆಜ್ಜೆ ಹಾಕುತ್ತಾ ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತಿದ್ದ ಸೌಮ್ಯಾಳನ್ನು ಭೇಟಿ ಆಗಲು ಹೊರಟಳು.

ತೀರ ಅವಳ ಹತ್ತಿರಕ್ಕೆ ಹೋದ ಶಿಲ್ಪಾ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದು, ಅವಳ ಗೆಳತಿಯರಿಂದ ಬಹುದೂರ ಕರೆದೊಯ್ದಳು. ಆಗಲೇ ಸಾಕಷ್ಟು ಭಯಭೀತಳಾಗಿದ್ದ ಅವಳ ಕಿವಿಯ ಬಳಿ ನಿಂತು ಬೆದರಿಕೆಯ ಧ್ವನಿಯಲ್ಲಿ, “ನಿನ್ನ ಹಾಗೂ ರವಿಯ ಮಧ್ಯೆ ಕಾಲೇಜು ಸಮಯದ ಪ್ರೀತಿಯ ಬಗ್ಗೆ ಸಂಪೂರ್ಣವಾಗಿ ಗೊತ್ತಾಗಿದೆ. ನೀನು ಈಗಲೂ ಅದನ್ನು ಮುಂದುವರಿಸಿಕೊಂಡು ಹೋಗಲು ಯೋಚಿಸುತ್ತಿರುವೆ ಎನ್ನುವುದೂ ಕೂಡ ನನಗೆ ಗೊತ್ತಾಗಿದೆ. ನೀನು ಇಂದು ಎಲ್ಲರೆದುರು ನನ್ನನ್ನು ಮತ್ತೆ ಮತ್ತೆ ಅವಮಾನಿಸಲು ಪ್ರಯತ್ನಿಸಿದೆ. ಅದಕ್ಕಾಗಿ ನಾನು ನಿನಗೆ ಅವಶ್ಯವಾಗಿ ಶಿಕ್ಷೆ ಕೊಡಿಸ್ತೀನಿ,” ಎಂದಳು.

“ನಾನು ವಿವೇಕ್‌ ಜೊತೆ ಹೊರಗೆ ಸುತ್ತಾಡಲು ಹೊರಟಿರುವೆ. ದಾರಿಯಲ್ಲಿ ನಿನ್ನ ಚಾರಿತ್ರ್ಯಹೀನತೆಯ ಬಗ್ಗೆ ತಿಳಿಸಿ, ಅವರ ದೃಷ್ಟಿಯಲ್ಲಿ ನಿನ್ನನ್ನು ಅತ್ಯಂತ ಹೀನಾಯ ಆಗುವಂತೆ ಮಾಡುವೆ. ನನ್ನ ಹಾಗೂ ರವಿಯ ಮಧ್ಯೆ ನೀನು `ಕಬಾಬ್‌ ಮೇ ಹಡ್ಡಿ’ ಆಗಿರುವೆ. ನಾನು ನಿನ್ನ ವಿವಾಹ ಜೀವನದ ಸಂಪೂರ್ಣ ಖುಷಿಯನ್ನು ಹಾಳು ಮಾಡುವೆ,” ಎಂದು ಜೋರು ಧ್ವನಿಯಲ್ಲೇ ಬೆದರಿಕೆ ಹಾಕಿ, ಕೋಪದಲ್ಲಿ ನಡುಗುವಂತೆ ಅಭಿನಯ ಮಾಡುತ್ತಾ ಮೇನ್‌ ಡೋರ್‌ ನತ್ತ ಹೆಜ್ಜೆ ಹಾಕಿದಳು.

ಸೌಮ್ಯಾ ಗಾಬರಿ ಹಾಗೂ ಹೆದರಿಕೆಯಿಂದ ಕಂಪಿಸುವ ಧ್ವನಿಯಲ್ಲಿ ಶಿಲ್ಪಾಳನ್ನು ಕೂಗಿ ಕರೆಯುತ್ತಾ ಅವಳನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದಳು. ಆದರೆ ಅವಳು ಹಿಂತಿರುಗಿ ಕೂಡ ನೋಡಲಿಲ್ಲ.

ಹಾಲ್ ‌ನಿಂದ ಹೊರಗೆ ಬಂದ ಶಿಲ್ಪಾ ಎಡಬದಿಗೆ ಸ್ವಲ್ಪ ದೂರದಲ್ಲಿ ಹೂ ಗಿಡದ ಹಿಂದೆ ಬಚ್ಚಿಟ್ಟುಕೊಂಡು ಕುಳಿತುಕೊಂಡಳು. ಅಲ್ಲಿಂದ ಅವಳಿಗೆ ಮೇನ್‌ ಡೋರ್‌ ಸ್ಪಷ್ಟವಾಗಿ ಕಂಡುಬರುತ್ತಿತ್ತು.

ರವಿ ಹಾಗೂ ಸೌಮ್ಯಾ ಗಾಬರಿಬೆರೆತ ನಡಿಗೆಯಲ್ಲಿ ಹೊರಬಂದರು. ಆಗ ಅವರಿಗೆ ಶಿಲ್ಪಾ ಅಥವಾ ವಿವೇಕ್‌ ಯಾರೂ ಕಣ್ಣಿಗೆ ಬೀಳಲಿಲ್ಲ. ಹೀಗಾಗಿ ಅವರು ಪರಸ್ಪರ ಮಾತುಕತೆಯಲ್ಲಿ ನಿರತರಾದರು.

“ಶಿಲ್ಪಾ ಎಲ್ಲೂ ಕಾಣುತ್ತಿಲ್ಲ,” ರವಿ ಬಹಳ ಗೊಂದಲದಲ್ಲಿರುವಂತೆ ಕಂಡುಬರುತ್ತಿತ್ತು.

“ಅವಳು ಎಲ್ಲಿದ್ದಾಳೊ, ಈಗಲೇ ಹುಡುಕಿ ಹಾಗೂ ವಿವೇಕ್‌ ಜೊತೆ ಮಾತನಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅವಳು ನನ್ನನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ,” ಸೌಮ್ಯಾಳ ಧ್ವನಿ ಗಾಬರಿಯಿಂದ ಕಂಪಿಸುತ್ತಿತ್ತು.

“ಅವಳು ಎಲ್ಲೂ ಕಣ್ಣಿಗೆ ಬೀಳುತ್ತಿಲ್ಲ. ಹಾಗಿದ್ದಾಗ ಅವಳನ್ನು ನಾನು ಹೇಗೆ ತಡೆಯಲಿ?” ರವಿ ಸಿಡಿಮಿಡಿಗೊಂಡು ಹೇಳಿದ.

“ನೀನು ಅವಳಿಗೆ ನಮ್ಮಿಬ್ಬರ ಪ್ರೀತಿಯ ಬಗ್ಗೆ ತಿಳಿಸಿದ್ದಾದರೂ ಏಕೆ?”

“ನಮ್ಮಿಬ್ಬರ ಪ್ರೀತಿಯ ಬಗ್ಗೆ ತಿಳಿಸಲು ನಾನೇನು ಮೂರ್ಖನಾ?”

“ಹಾಗಾದರೆ ಅವಳು ನಮ್ಮಿಬ್ಬರ ಪ್ರೀತಿಯ ಬಗ್ಗೆ ಗೊತ್ತಾಗಿದೆ ಎಂದು ನನಗೆ ಸುಳ್ಳೇಕೆ ಹೇಳಿದಳು?”

“ಬಹುಶಃ ಅವಳಿಗೆ ಈ ವಿಷಯವನ್ನು ಬೇರೆ ಯಾರೊ ತಿಳಿಸಿರಬಹುದು. ಆದರೆ ನೀನು ಇವತ್ತು ಅವಳೊಂದಿಗೆ ಕಾರಣವಿಲ್ಲದೆಯೇ ಸಿಡಿಮಿಡಿ ಹಾಗೂ ಅತೃಪ್ತಿಯಿಂದ ಕೂಡಿದ ವರ್ತನೆ ತೋರಿಸಿದ್ದೇಕೆ?”

“ಏಕೆಂದರೆ ಈ ಗರ್ವಿಷ್ಠ ಹುಡುಗಿ ನಿನ್ನ ಭಾವಿ ಸಂಗಾತಿ ಆಗುವುದು ನನಗೆ ಒಂದಿಷ್ಟೂ ಇಷ್ಟವಾಗಲಿಲ್ಲ.”

“ನೀನು ನಿನ್ನ ಈ ಅಭಿಪ್ರಾಯವನ್ನು ನಿನ್ನಲ್ಲಿಯೇ ಇಟ್ಟುಕೊಳ್ಳಬೇಕು. ನನ್ನ ಹಾಗೂ ನಿನ್ನ ನಡುವೆ ಇದ್ದ ಪ್ರೀತಿ ಈಗ ಸಂಪೂರ್ಣವಾಗಿ ಮುಗಿದು ಹೋಗಿದೆ. ಅದರ ಆಧಾರದ ಮೇಲೆ ನೀನು ಬುದ್ಧಿಯಿಲ್ಲದ ಹೆಂಗಸಿನ ರೀತಿ ಶಿಲ್ಪಾಳ ಜೊತೆ ಸೇಡು ತೀರಿಸಿಕೊಳ್ಳಲು ಹೋಗಬಾರದಿತ್ತು,” ರವಿ ಅವಳಿಗೆ ತಕ್ಷಣವೇ ಗದರಿಸಿದಾಗ, ಅವನಿಗೆ ಸೌಮ್ಯಾಳಲ್ಲಿ ಯಾವುದೇ ಆಸಕ್ತಿ ಇಲ್ಲ ಎಂಬುದನ್ನು ಪುರಾವೆ ಎಂಬಂತೆ ಭಾವಿಸಿ ಶಿಲ್ಪಾಳ ಮನಸ್ಸು ನೆಮ್ಮದಿಯ ನಿಟ್ಟುಸಿರುಬಿಟ್ಟಿತು.

“ನೀನು ಅವಳನ್ನು ತಡೆಯುವ ಬದಲು ನನಗೆ ಉಪದೇಶ ಕೊಡಬೇಡ. ವೀವೇಕನ ಕೋಪ ಅದೆಷ್ಟು ಉಗ್ರ ಎನ್ನುವುದು ನಿನಗೆ ಗೊತ್ತಿಲ್ಲ. ಶಿಲ್ಪಾಳ ಮಾತುಗಳನ್ನು ಕೇಳಿಸಿಕೊಂಡು ವಿವೇಕ್‌ ನನಗೆ ಎಚ್ಚರಿಕೆ ಕೊಟ್ಟು ಮುಗಿಸಿಬಿಡುತ್ತಾನೆ. ಆ ಶಿಲ್ಪಾ ಅದೆಷ್ಟು ಮೂರ್ಖಳು, ಅವಳಿಗೆ ಇದು ಆಟದಂತೆ ಭಾಸವಾಗುತ್ತಿದೆ. ಆದರೆ ನನ್ನ ಜೀನ ಹಾಳಾಗಿ ಹೋಗುತ್ತದೆ.”

ಸೌಮ್ಯಾ ಒಮ್ಮೆಲೆ ರೋದಿಸತೊಡಗಿದಾಗ ಅವಳ ಮುಂದೆ ಬರಲು ಇದೇ ಒಳ್ಳೆಯ ಸಮಯ ಎಂದು ಶಿಲ್ಪಾಳಿಗೆ ಅನ್ನಿಸಿತು.

ಶಿಲ್ಪಾ ತನ್ನ ಅಡುಗುತಾಣದಿಂದ ಹೊರಬರುತ್ತಾ, ಸ್ನೇಹಾಳಿಗೆ ಖಡಕ್‌ ಆಗಿ ಎಚ್ಚರಿಕೆ ಕೊಡುತ್ತಾ, “ನಿನ್ನಲ್ಲಿ ಸ್ವಲ್ಪವಾದರೂ ಬುದ್ಧಿಯಿದ್ದರೆ, ಇಂದಿನ ಈ ಘಟನೆಯನ್ನು, ನಿನ್ನ ಮನಸ್ಸಿನ ಲಯವನ್ನು ಹಾಗೂ ನಿನ್ನ ಕಣ್ಣುಗಳಿಂದ ಸುರಿಯುತ್ತಿರುವ ಈ ಕಣ್ಣೀರನ್ನು ಎಂದೂ ಮರೆಯಬೇಡ. ರವಿಯ ಮಾತುಗಳಿಂದ ಸ್ಪಷ್ಟವಾದ ಸಂಗತಿಯೆಂದರೆ, ಅವನು ನಿನ್ನ ಜೊತೆಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ನೀನೂ ಕೂಡ ಅವನ ಜೊತೆಗೆ ಕೆಟ್ಟ ಬಯಕೆ ಇಟ್ಟುಕೊಂಡು ಮಾತುಕತೆ ನಡೆಸಲು ಪ್ರಯತ್ನಿಸಿದ್ದೇ ಆದರೆ ನಿನಗೆ ಕೆಡಕುಂಟು ಮಾಡಲು ನಾನು ಹೆಜ್ಜೆ ಇಡಬೇಕಾಗುತ್ತದೆ.

“ನೀನು ನನ್ನ ಮಾತುಗಳನ್ನು ಕಿವಿ ಅಗಲಿಸಿಕೊಂಡು ಕೇಳಿಸಿಕೊ. ಯಾವುದು ಘಟಿಸಿ ಹೋಗಿದೆಯೋ ಅದನ್ನು ಮರೆತುಬಿಡು ಹಾಗೂ ವರ್ತಮಾನದ ಹೋಲಿಕೆಯನ್ನು ಹಿಂದೆ ಘಟಿಸಿದುದರ ಜೊತೆ ಹೋಲಿಸಿಕೊಂಡು ನಿನ್ನ ಮನಸ್ಸನ್ನು ದುಃಖಕ್ಕೆ ದೂಡಬೇಡ. ರವಿ ಹಾಗೂ ನಾನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದೇವೆ. ನಿನ್ನ ವೈವಾಹಿಕ ಜೀವನದ ದುಃಖವನ್ನು ನಿವಾರಿಸಿಕೊಳ್ಳಲು ನೀನು ನನ್ನ ರವಿಯನ್ನು ಬಳಸಿಕೊಂಡು, ನಮ್ಮಿಬ್ಬರ ದಾರಿಯಲ್ಲಿ ಅಡೆತಡೆಯುಂಟು ಮಾಡಲು ಪ್ರಯತ್ನಿಸಿದರೆ, ನೀನು ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ.”

ಶಿಲ್ಪಾಳ ಎಚ್ಚರಿಕೆಯ ಪ್ರತ್ಯುತ್ತರಕ್ಕೆ ಗಾಬರಿಗೊಂಡ ಸೌಮ್ಯಾಳ ಬಾಯಿಂದ ಒಂದೇ ಒಂದು ಶಬ್ದ ಕೂಡ ಹೊರಬರಲಿಲ್ಲ. ಸ್ವಲ್ಪ ಹೊತ್ತಿನ  ಮುಂಚೆ ಅವಳಲ್ಲಿದ್ದ ಅಹಂಕಾರ ಈಗ ಹೊರಟುಹೋಗಿತ್ತು.

ಶಿಲ್ಪಾ ಅಧಿಕಾರಯುತವಾಗಿ ರವಿಯ ಕೈ ಹಿಡಿದು ಒಳಗೆ ಹಾಲ್ ‌ಕಡೆ ನಡೆದಳು. ಆಗ ಶಿಲ್ಪಾಳಿಗೆ ಸೌಮ್ಯಾ ಭವಿಷ್ಯದಲ್ಲಿ ಎಂದೂ ರವಿಯ ಜೊತೆ ಯಾವುದೇ ರೀತಿಯ ಸಂಪರ್ಕ ಹೊಂದುವ ಧೈರ್ಯ ತೋರಿಸುವುದಿಲ್ಲ ಎಂಬ ದೃಢ ವಿಶ್ವಾಸ ಮೂಡಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ