ಮಿನಿ ಕಥೆ –  ಡಾ. ದೀಪಾ ಹಿರೇಮಠ್

ಎರಡು ದಿನದಿಂದ ಮನೆಯಲ್ಲಿ ಸ್ಮಶಾನ ಮೌನ. ಆಫೀಸಿನಿಂದ ಬಂದ ಹರೀಶ್‌ ನಿರುತ್ಸಾಹದಿಂದ ಭಾರವಾದ ಕಾಲುಗಳನ್ನು ಎಳೆಯುತ್ತಾ ರೂಮಿಗೆ ಹೊರಟ.

ಮಧ್ಯೆ ಮಗನ ರೂಮಿನ ಕಡೆ ಇಣುಕಿದ. ಸದಾ ನಗು, ಮಾತು, ಹಾಡಿನ ಕಲರವ ಇರುವ ಆ ಕೋಣೆ ಇಂದು ತನ್ನ ನಗುವನ್ನು ಕಳೆದುಕೊಂಡು ಮೌನವಾಗಿ ರೋದಿಸುತ್ತಿತ್ತು.

ವಿಶಾಲ್ ‌ಮೂಲೆಯಲ್ಲಿ ಮೊಬೈಲ್ ‌ಹಿಡಿದು ಕುಳಿತಿದ್ದ. ಮುಖದಲ್ಲಿ ಮೊದಲಿನ ನಗು ಇರಲಿಲ್ಲ. ಮನಸ್ಸು ಹಿಂಡಿದಂತಾಯಿತು. ಬಟ್ಟೆ ಬದಲಿಸಿ, ಕಿಟಕಿ ಪಕ್ಕ ಬಂದು ನಿಂತ. ಮನೆಗೆ ಹೋಗುವ ಧಾವಂತದಲ್ಲಿದ್ದ ನೇಸರ, ನನ್ನ ಮನೆಯ ಬೆಳಕನ್ನು ತನ್ನೊಡನೆ ತೆಗೆದುಕೊಂಡು ಹೋಗಿಬಿಟ್ಟ ಹಾಗಾಯಿತು. ಕಣ್ಣಿನಿಂದ ನೀರು ಸುರಿಯಿತು.

ಆಫೀಸಿನಿಂದ ಬಂದ ತಕ್ಷಣ, `ಬಂದೇ ಮಗನೇ, ಕಾಫಿ ತರುವೆ….’ ಎನ್ನುತ್ತಾ  ನಿಷ್ಕಲ್ಮಶ ನಗುವಿನೊಂದಿಗೆ ಮಾತನಾಡುತ್ತಾ ಬರುತ್ತಿದ್ದರು ಚಿಕ್ಕಮ್ಮ. ನನ್ನನ್ನು ಕ್ಷಮಿಸು ಚಿಕ್ಕಮ್ಮ ಎನ್ನುತ್ತಾ ಎರಡು ಕೈಗಳನ್ನು ಮುಖಕ್ಕೆ ಹಿಡಿದು ಬಿಕ್ಕಿದ ಹರೀಶ್‌.

“ಡ್ಯಾಡಿ ಬಂದರಾ….” ಎನ್ನುತ್ತಾ ತನ್ನ ವ್ಯಾನಿಟಿ ಬ್ಯಾಗ್‌ ಬೀಸುತ್ತಾ ಬಂದ ತಾಯಿ ರಿಯಾಳನ್ನು ನೋಡಿ ಕಣ್ಣು ಒರೆಸಿಕೊಂಡು ಹೊರಬಂದ ವಿಶಾಲ್‌.

dooriya-story2

“ಯಾವಾಗ ಬಂದ್ರಿ ಹರೀಶ್‌, ನನ್ನ ಊಟವಾಗಿದೆ. ನಿಮಗೆ ವಿಶಾಲ್ ಗೆ ಅಂತ ನೂಡಲ್ಸ್ ತಂದಿದ್ದೇನೆ ನನಗೆ ತುಂಬಾ ಸುಸ್ತಾಗಿದೆ,” ಎನ್ನುತ್ತಾ ಒಂದೇ ಉಸಿರಿನಲ್ಲಿ ಬಟ್ಟೆ ಬದಲಿಸಿ ಮಲಗಿಬಿಟ್ಟಳು.

ಹರೀಶ್‌ ಉಸಿರನ್ನು ದಬ್ಬಿ ಮಗನನ್ನು ಅರಸಿ ಹೊರಟ.

“ಡ್ಯಾಡಿ, ನನಗೆ ನೂಡಲ್ಸ್ ಬೇಡ. ಮೂರು ದಿನದಿಂದ ನೂಡಲ್ಸ್ ತಿಂತಾ ಇದ್ದೀನಿ. ಅಜ್ಜಿ ಬೇಕು. ಅವರು ರುಚಿ ರುಚಿ ಅಡುಗೆ ಮಾಡುತ್ತಿದ್ದರು. ಪ್ಲೀಸ್‌ ಡ್ಯಾಡಿ ಅಜ್ಜೀನಾ ಕರೆದುಕೊಂಡು ಬಾ,” ಎನ್ನುತ್ತಾ ಅಳುತ್ತಲೇ ಮಗ ಮಲಗಿಕೊಂಡ.

ಹರೀಶ್‌ ಮೂಕನಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟ. `ಚಿಕ್ಕಮ್ಮಾ ಎಲ್ಲಿ ಹೋಗಿದ್ದೀರಾ….? ನೋಡಿ ನಿಮ್ಮ ಮೊಮ್ಮಗನ ಗಲಾಟೆ,’ ಮನ ಅರಚಿತು.

ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಘಂಟೆನಾದ, ಊದಬತ್ತಿಯ ಸುವಾಸನೆ, ಆ ಭಕ್ತಿ ಗಾನವಿಲ್ಲದೆ ಎಲ್ಲಾ ಬೋಳು ಬೋಳು. ಅಡುಗೆಮನೆ ತನ್ನ ಒಡತಿ ಇಲ್ಲದೆ ಅನಾಥವಾಗಿದೆ. ರಿಯಾ ಒಂದು ದಿನ ಅಡುಗೆಮನೆ ಕಡೆ ತಲೆ ಹಾಕಿಲ್ಲ. ಚಿಕ್ಕಮ್ಮ ಹಾಕಲೂ ಬಿಟ್ಟಿರಲಿಲ್ಲ. ನಾನಿರುವಾಗ ಅವಳೇಕೆ ಅಡುಗೆ ಮಾಡಿ ಕೈ ಸುಟ್ಟುಕೊಳ್ಳಬೇಕು? ನಿನಗೇನು ಬೇಕು ಹೇಳು, ನಾನೇ ಮಾಡಿಕೊಡುವೆ ಎನ್ನುತ್ತಿದ್ದರು. ರಿಯಾಳಿಗೆ ಮೋಮೋಸ್‌ ಇಷ್ಟ ಅಂತ ಅದನ್ನು ಮಾಡುವುದನ್ನೂ ಕಲಿತರು.

ಕೂಡು ಕುಟುಂಬದಲ್ಲಿ ಬೆಳೆದ ನಾನು, ಅಪ್ಪ ಅಮ್ಮ ಅಪಘಾತದಲ್ಲಿ ನಿಧನರಾದಾಗ ಹತ್ತು ವರ್ಷದವನು. ಚಿಕ್ಕಮ್ಮ ಚಿಕ್ಕಪ್ಪರಿಗೆ ಮೊದಲಿನಿಂದಲೂ ನಾನೆಂದರೆ ತುಂಬಾ ಪ್ರೀತಿ. ಜ್ಯೋತಿ ಹಾಗೂ ನನಗೆ ಎಂದೂ ಭೇದಭಾವ ಮಾಡದೆ ಬೆಳೆಸಿದರು. ಕೃಷ್ಣನ ಯಶೋಧೆಯ ಹಾಗೆ ನನ್ನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಿ ದೊಡ್ಡವನನ್ನಾಗಿ ಮಾಡಿದಳು ನನ್ನ ಚಿಕ್ಕಮ್ಮ.

ಚಿಕ್ಕಪ್ಪ ಕಾಯಿಲೆಯಿಂದ ಅಸುನೀಗಿದಾಗ ನಾನು ಡಿಗ್ರಿ ಸೆಕೆಂಡ್‌ ಇಯರ್‌ ಪರೀಕ್ಷೆ ಬರೆಯುತ್ತಿದ್ದೆ. ನನ್ನ ಜೀವನ, ಮುಂದಿನ ಭವಿಷ್ಯ ಉಜ್ವಲವಾಗಲು ಹಗಲಿರುಳು ಶ್ರಮಿಸಿದರು ಚಿಕ್ಕಮ್ಮ. ನನ್ನ ಇಂದಿನ ಈ ಜೀವನ ಚಿಕ್ಕಮ್ಮನ ತ್ಯಾಗ ಹಾಗೂ ಪರಿಶ್ರಮದ ಫಲ. ನನ್ನ ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲಿಯೂ ನೆರಳಾಗಿ ನಿಂತು ಮುನ್ನಡೆಸಿದರು.

`ಚಿಕ್ಕಮ್ಮಾ, ನಾನು ರಿಯಾಳನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆಯಾಗುವುದು!’ ಎಂದಿದ್ದಕ್ಕೆ ಮೊದಲು ಅವರ ಮನೆಗೆ ಹೋಗಿ ಹೆಣ್ಣು ಕೇಳುವ ಶಾಸ್ತ್ರ ಮಾಡೋಣ ಎಂದು ಸಂಭ್ರಮಿಸಿದ್ದರು.

“ರಿಯಾ ನನ್ನ ಮಗಳು ಜ್ಯೋತಿಯ ಹಾಗೆ. ಅವಳಿಗೆ ತನ್ನ ತವರಿನ ನೆನಪಾಗದ ಹಾಗೆ ನೋಡಿಕೊಳ್ಳುವುದು ನಮ್ಮಿಬ್ಬರ ಜವಾಬ್ದಾರಿ,” ಎನ್ನುತ್ತಾ ಅವಳನ್ನು ಅಪ್ಪಿಕೊಂಡಿದ್ದರು.

ರಿಯಾಳ ಆಸೆ ಬೇಡಿಕೆ, ಇಷ್ಟ ಕಷ್ಟಗಳನ್ನು ನನಗಿಂತ ಮೊದಲೇ ತಿಳಿದುಕೊಂಡು ಚಿಕ್ಕಮ್ಮ ನನಗೆ ಹೇಳುತ್ತಿದ್ದರು. ವಿಶಾಲ್ ‌ಬರುವ ದಿನಗಳಲ್ಲಿ ರಿಯಾಳನ್ನು ತಮ್ಮ ಅಂಗೈಯಲ್ಲಿ ಇಟ್ಟುಕೊಂಡು ನೋಡಿಕೊಂಡರು.

ರಿಯಾ ಮನೆಯ ಯಾವ ಜವಾಬ್ದಾರಿ ತೆಗೆದುಕೊಳ್ಳದೆ ಶಾಪಿಂಗ್‌, ಕಿಟಿ ಪಾರ್ಟಿ,  ಗೆಳತಿಯರು ಎನ್ನುತ್ತಾ ಕಾಲ ಕಳೆಯುತ್ತಿದ್ದಳು. ವಿಶಾಲ್ ‌ನನ್ನು ಹೆತ್ತು ಚಿಕ್ಕಮ್ಮನ ಮಡಿಲಿಗೆ ಹಾಕಿದಳು ಅಷ್ಟೇ. ಜವಾಬ್ದಾರಿಯೆಲ್ಲಾ ಚಿಕ್ಕಮ್ಮನದೇ.

ಮನ ಹಿಂದಕ್ಕೆ ಓಡುತ್ತಿತ್ತು. ಹರೀಶನ ಕಣ್ಮುಂದೆ ಆ ಕರಾಳ ದಿನ ನೆನಪಿಗೆ ಬಂದಿತು. ಬೆಳಗ್ಗೆ ಘಂಟೆ ಶಬ್ದವಿಲ್ಲ. ಮನೆ ಶಾಂತವಾಗಿ ಮಲಗಿದೆ.

`ಚಿಕ್ಕಮ್ಮಾ, ಚಿಕ್ಕಮ್ಮಾ……’ ಕರೆದರೂ ಉತ್ತರವಿಲ್ಲ.

ಚಿಕ್ಕಮ್ಮನ ರೂಮಿನಲ್ಲಿ ಅವರ ಹಳೆ ಸೂಟ್‌ ಕೇಸ್‌ ಕಾಣಲಿಲ್ಲ. ಎದೆ ಧಸಕ್‌ ಎಂದಿತು. ಟೇಬಲ್ ಮೇಲೆ ಬಿಳಿ ಹಾಳೆ ಪುಸ್ತಕದ ಕೆಳಗೆ ಹಾರಾಡುತ್ತಿತ್ತು. ತೆಗೆದುಕೊಂಡು ಓದಲು…. ನಿಂತ ನೆಲ ಅಲುಗಾಡಿದ ಹಾಗಾಯಿತು.

`ಮಗ ಹರೀಶ್‌, ನಾನು ಮನೆ ಬಿಟ್ಟು ಹೊರಟಿದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡ. ಜ್ಯೋತಿಗೂ ಪತ್ರ ಬರೆದಿದ್ದೇನೆ. ನಿಮ್ಮಿಬ್ಬರಿಗೂ ನನ್ನ ಆಶೀರ್ವಾದ ಸದಾ ಇರುತ್ತದೆ. ವಿಶಾಲನಿಗೆ ಥಂಡಿ ಗಾಳಿ ಆಗಿ ಬರೋಲ್ಲ. ಬೈಕ್‌ ಮೇಲೆ ಕರೆದುಕೊಂಡು ಹೋಗಬೇಕಾದರೆ ತಲೆಗೆ ಟೊಪ್ಪಿ ಹಾಕಿ ಕರೆದುಕೊಂಡು ಓಡಾಡು. ದೇವರು ಒಳ್ಳೆಯದು ಮಾಡಲಿ.’

ಕಣ್ಣೀರಿನ ಹನಿಗಳು ಹಾಳೆಯ ಮೇಲೆ ಬಿದ್ದು ಗುರುತು ಮಾಡಿತು. ಚಿಕ್ಕಮ್ಮನ ಮನ ಎಷ್ಟು ನೊಂದಿರಬೇಕು…….?

“ಡ್ಯಾಡಿ, ಅಜ್ಜಿಯನ್ನು ಕರೆದುಕೊಂಡು ಬಾ…..” ವಿಶಾಲ್ ‌ನ ಧ್ವನಿ ಹರೀಶನನ್ನು ವಾಸ್ತವಕ್ಕೆ ತಂದಿತು.

“ಅಜ್ಜಿ ಈ ಕಥೆ ಹೇಳಿ, ಆ ಕಥೆ ಹೇಳಿ, ಅಜ್ಜಿ ಬೇಗ ಬಾ…..” ನಿದ್ದೆಯಲ್ಲಿ ಕನವರಿಸುತ್ತಿದ್ದ ವಿಶಾಲ್ ನನ್ನು ನೋಡಿ ಕರುಳು ಕಿತ್ತು ಬರುವ ವೇದನೆಯಿಂದ ಮೇಲೆದ್ದ. ದಡ ದಡ ರೂಮಿಗೆ ಹೋದ. ಯಾವ ಪರಿವೆ ಇಲ್ಲದೆ ಆರಾಮಾಗಿ ನಿದ್ದೆ ಮಾಡುತ್ತಿದ್ದಳು ರಿಯಾ.

`ತಪ್ಪು ಮಾಡಿದೆ ರಿಯಾ, ಗಿಡ ನೆರಳನ್ನು ಕೊಡುತ್ತದೆ, ಹಣ್ಣುಗಳನ್ನು ಕೊಡುತ್ತದೆ. ಆದರೆ ಹಣ್ಣುಗಳನ್ನು ತಾನೇ ಎಂದೂ ತಿನ್ನುವುದಿಲ್ಲ. ನಿನ್ನ ಸರ ಕಳುವಾದ ಆಪಾದನೆಯನ್ನು ಚಿಕ್ಕಮ್ಮನ ಮೇಲೆ ಹಾಕಲು ನಿನಗೆ ಮನಸ್ಸಾದರೂ ಹೇಗೆ ಬಂತು? ಅವಳು ನಮ್ಮನ್ನು ಹೆತ್ತಿಲ್ಲ. ಆದರೆ ಅದಕ್ಕಿಂತ ಮಿಗಿಲಾದ ತಾಯಿ. ಆ ತಾಯಿಯ ಮನ ನೋಯಿಸಿ ದೊಡ್ಡ ತಪ್ಪು ಮಾಡಿದೆ. ಒಣಗಿದ ಮರದ ಮೇಲೆ ಯಾವ ಪಕ್ಷಿಗಳೂ ವಾಸಿಸುವುದಿಲ್ಲ. ನೆರಳು ಕೊಡದ ಮರ ಇದ್ದೂ ಇಲ್ಲದಂತೆ. ಹಾಗಾಗಿದೆ ನಮ್ಮ ಬಾಳು….. ಎಲ್ಲಾ ಇದ್ದೂ ಶೂನ್ಯವಾಗಿದೆ,’ ಹರೀಶನ ತಲೆ ಸಿಡಿಯುತ್ತಿತ್ತು.

ರಿಯಾಳ ಜೊತೆ ಮಲಗಲು ಬೇಸರವಾಗಿ ಮಗನ ರೂಮಿಗೆ ಹೋದ, `ಚಿಕ್ಕಮ್ಮ ನಿಮ್ಮನ್ನು ಎಷ್ಟು ಹುಡುಕಿದೆ. ಎಲ್ಲಿದ್ದೀರಾ…..? ನಿಮ್ಮ ಮೊಮ್ಮಗನ ನೆನಪಾಗುತ್ತಿಲ್ಲವೇ? ಕನವರಿಸುತ್ತಲೇ ನಿದ್ರಾ ದೇವತೆಗೆ ಶರಣಾದ.

ಚಿಕ್ಕಮ್ಮ ಹೋದ ಎರಡೇ ದಿನಗಳಲ್ಲಿ ರಿಯಾಗೆ ತಾನು ಮಾಡಿದ್ದು ತಪ್ಪು ಎಂದು ಮನವರಿಕೆಯಾಯಿತು. ಮನೆಯ ಪ್ರತಿಯೊಂದು ಕೆಲಸ ಅವಳ ಮೇಲೆ ಬಿದ್ದಾಗ ರೋಸಿ ಹೋಗಿದ್ದಳು. ಆದರೆ ಮುಂದೊಂದು ದಿನ ರಿಯಾ ಕುಸಿದು ಕುಳಿತು….

“ಹರೀಶ್‌ ಬೇಗ ಬನ್ನಿ, ನೋಡಿ ಇಲ್ಲಿ…..” ಎಂದು ತಲೆ ಚಚ್ಚಿಕೊಳ್ಳುತ್ತಿದ್ದಳು.

ಅವಳ ಮುಂದೆ ಚಿನ್ನದ ಹಾರ ಹಿಡಿದು ನಿಂತಿದ್ದ ವಿಶಾಲ್‌, “ಡ್ಯಾಡಿ, ಅವತ್ತು ಮಮ್ಮಿ ಯಾವುದೋ ಫಂಕ್ಷನ್‌ ಗೆ ಹೋಗಿದ್ದರು. ನಾನು ಅಜ್ಜಿ ಸ್ವಿಮಿಂಗ್‌ ಪೂಲ್ ‌ಗೆ ಹೋಗಿದ್ದೆವು. ವಾಪಸ್‌ ಬರುವಾಗ ಮಮ್ಮಿ, ನಮ್ಮನ್ನು ಕಾರಿನಲ್ಲಿ ಕರೆದುಕೊಂಡು ಬಂದರು. ಆಗ ಮಮ್ಮಿಯ ಚಿಕ್ಕ ಬ್ಯಾಗ್‌ ನನ್ನ ಸ್ವಿಮಿಂಗ್‌ ಬ್ಯಾಗ್‌ ನಲ್ಲಿ ಸೇರಿಕೊಂಡಿತ್ತು. ಅದರಲ್ಲಿ ಈ ಹಾರ ಸಿಕ್ಕಿತು. ಪಾಪ ಅಜ್ಜಿ!”, ವಿಶಾಲ್‌ಕಣ್ಣೀರು ಸುರಿಸಿದ.

ರಿಯಾ ಹರೀಶ್‌ ನನ್ನು ನೋಡಿ, “ನಾನು ತಪ್ಪು ಮಾಡಿಲ್ಲ, ಮಹಾ ಅಪರಾಧ ಮಾಡಿದ್ದೇನೆ,” ಎಂದು ಅಳುತ್ತಿದ್ದಳು.

ಮಿಂಚಿ ಹೋದ ಅಮೂಲ್ಯ ವಸ್ತುವನ್ನು ಮತ್ತೆ ಪಡೆಯಲಾದೀತೆ? ಸ್ತಬ್ಧನಾಗಿ ನಿಂತುಬಿಟ್ಟಿದ್ದ ಹರೀಶ್‌. ಆ ಕಡೆ ಅನಾಥಾಶ್ರಮ ಒಂದರಲ್ಲಿ ಅಡುಗೆಯಳಾಗಿ ಆ ಮಕ್ಕಳಿಗೆ ಪ್ರೀತಿಯ ಚಿಕ್ಕಮ್ಮನಾಗಿ ಮತ್ತು ನೆರಳಾಗಿ ಜೀವನದ ಸಾರ್ಥಕತೆಯೆಡೆಗೆ ಪಯಣ ಬೆಳೆಸಿದ್ದರು ಚಿಕ್ಕಮ್ಮ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ