ಕಥೆ ಸುಮಾ ವೀಣಾ

ಅದೇ ತಾನೇ ಲಾಕ್‌ ಡೌನ್‌ ತೆರವಾಗಿತ್ತು. ವಿನುತಾ ಕಾಲೇಜಿನಲ್ಲಿ ಕರೆದಿದ್ದ ಮೀಟಿಂಗ್‌ ಅಟೆಂಡ್‌ ಮಾಡಲು ಬಲು ಖುಷಿಯಿಂದಲೇ ಹೊರಟಿದ್ದಳು. ಅಷಾಢದ ಮಳೆ ಜಿಟಿಜಿಟಿ ಜಿನುಗುತ್ತಿತ್ತು. ಎದುರುಗಿದ್ದ ವಾಹನಗಳು ಸರಿ ಕಾಣುತ್ತಿರಲಿಲ್ಲ. ಸಿಗ್ನಲ್ ಬಿದ್ದಿದೆಯಲ್ಲಾ ಎನ್ನುತ್ತಾ ಹೆಲ್ಮೆಟ್‌ ನ್ನು ತೆಗೆದು ಕೈಯಲ್ಲಿ ಒರೆಸಿ ತಲೆಗೆ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಆಕಸ್ಮಿಕವಾಗಿ ಪಕ್ಕಕ್ಕೆ ಹೊರಳಿದಳು.

ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ್ದ ಮಾರುತಿ ವ್ಯಾನ್‌ ನಿಂತಿತ್ತು. ಆ ಆ್ಯಂಬುಲೆನ್ಸ್ ಗೆ ಇನ್ನಿತರ ಆ್ಯಂಬುಲೆನ್ಸ್ ಗಳ ಹಾಗೆ ತರಾತುರಿಯಿಂದ ಹೋಗಬೇಕು ಎನ್ನುವ ಧಾವಂತವಿರಲಿಲ್ಲ. ಪ್ರಶಾಂತವಾಗಿಯೇ ನಿಂತ ಹಾಗಿತ್ತು. ಲೋಕದ ಗೊಡವೆ ಮರೆತು ತಾಯಿ ದೇಹವೊಂದು ಚಿರನಿದ್ರೆಯಲ್ಲಿತ್ತು. ಮೂಗಿಗೆ ಇಟ್ಟ ಹತ್ತಿ ಜೀವವೊಂದರ ಪ್ರಾಣಪಕ್ಷಿ ಹಾರಿಹೋಗಿ ಗಂಟೆಗಳೇ ಉರುಳಿವೆ ಎನ್ನುವಂತಿತ್ತು. ಗಾಳಿಗೆ ಆ ದೇಹದ ಮುಂದಲೆಯ ಪುಡಿ ಕೂದಲು ಹಾರಾಡುತ್ತಿತ್ತು. ಆ ಸತ್ತ ವ್ಯಕ್ತಿಯ ಮಗನೇ ಇರಬೇಕು, “ಅಮ್ಮಾ….. ಅಮ್ಮಾ…..,” ಎನ್ನುತ್ತಲೇ ಸೋತ ಧ್ವನಿಯಲ್ಲೇ ಹಾರಾಡುತ್ತಿದ್ದ ಕೂದಲನ್ನು ಸರಿ ಮಾಡುತ್ತಿದ್ದ.

ಅಷ್ಟರಲ್ಲಿ ಯುವತಿಯೊಬ್ಬಳು ಬಂದು, “ಶಶಿ ಡೋರ್‌ ಓಪನ್‌ ಮಾಡೋ….. ಅಮ್ಮಂಗೆ ಸಿಕ್ಬಿಡ್ತು ಹಾರ…..” ಎನ್ನುತ್ತಲೇ ತಕ್ಷಣ ತೆಗೆದ ಆ್ಯಂಬುಲೆನ್ಸ್ ಬಾಗಿಲನ್ನು ಸರಕ್ಕನೆ ಹಾಕಿಕೊಂಡಳು.

main-hari-story2

ಹೊಸ ಸುಗಂಧರಾಜ ಹೂವಿನ ಹಾರದ ಪರಿಮಳ ಪಸರಿಸುವುದರಲ್ಲಿತ್ತು. ತಕ್ಷಣ ಗ್ರೀನ್‌ ಸಿಗ್ನಲ್ ಬಿದ್ದಿದ್ದರಿಂದ ವಿನುತಾ ಸ್ಕೂಟಿಯನ್ನು ಸ್ಟಾರ್ಟ್‌ ಮಾಡಿಕೊಂಡು ಭರ್ರನೆ ಮುಂದೆ ಹೋದಳು.

ಮೀಟಿಂಗ್‌ ನಲ್ಲಿ ಕುಳಿತರೆ ಪ್ರಿನ್ಸಿಪಾಲ್‌, “ಆನ್‌ ಲೈನ್‌ ಕ್ಲಾಸ್‌ ಎಲ್ಲಾ ಮಾಡುತ್ತಿದ್ದೀರ. ಮಕ್ಕಳನ್ನು ಯಾವಾಗ ಆಫ್‌ ಲೈನ್‌ ಗೆ ಕರೆಯುತ್ತೀರೊ ಏನೋ?” ಎಂದರು.

ವಿನುತಾ ಹಾಗೆ ಸುಮ್ಮನೆ ಕುಳಿತಿದ್ದಳು. ಅಂತೂ ಮೀಟಿಂಗ್‌ ಮುಗಿಯಿತು. ಹೇಳಿಕೆ, ಕೇಳಿಕೆಗಳಾದವು. ಅವಳ ಪಕ್ಕದಲ್ಲೇ ಕುಳಿತಿದ್ದ ವಿನುತಾಳ ಸಹೋದ್ಯೋಗಿಯೂ ಗೆಳತಿಯೂ ಆಗಿದ್ದ ಭವ್ಯಾ, “ಏನೇ ಆಯ್ತು ಒಂಥರಾ ಇದ್ದೀಯಾ….. ಹೇಳೇ ಏನಾಯ್ತು….?” ಎಂದು ಕೇಳಿದಳು.

“ಏನೂ ಇಲ್ವೇ….. ಬರ್ತಾ ಏನಾಯ್ತು ಗೊತ್ತಾ…..” ಎಂದು ತಾನು ಸಿಗ್ನಲ್ ನಲ್ಲಿ ಕಂಡ ದೃಶ್ಯ ವಿವರಿಸಿದ ವಿನುತಾ, ಇನ್ನೂ ಎಳೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡವರಿಗಾಗಿ ಮರುಗಿದಳು.

“ಅಲ್ವೇ…. ನಿಂದೇ ಹಾಸಿ ಹೊದ್ದುಕೊಳ್ಳುವಷ್ಟು ಇದೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಂಡ್ರೆ ಆಗುತ್ತೇನೇ….? ಹೇಳು, ನಿಮ್ಮಮ್ಮ ಹೇಗಿದ್ದಾರೆ ಅಂತ….” ಭವ್ಯಾ ಪ್ರೀತಿಯಿಂದ ಕೇಳಿದಳು.

“ಅಯ್ಯೋ….. ಅಮ್ಮನಾ…. ಅಮ್ಮಿ ಹಾಗೆ ಇದ್ದಾರೆ. ನಾಲ್ಕು ವರ್ಷ ಮಗುವಿನ ಥರಾ ಕಣೆ ಅವರು….. ಹಸಿವು ಅನ್ನಲ್ಲ, ಬಾಯಾರಿಕೆ ಅನ್ನಲ್ಲ. ಏನು ಕೊಟ್ಟರೂ ಹಸಿವಿಲ್ಲ ಅಂತಾರೆ. ಒಂದು ಕ್ಷಣದಲ್ಲಿ ಆಗಿದ್ದು ಜೀವನ ಪರ್ಯಂತ ಗೋಳ್ಹಾಕೊಳ್ತಾ ಇದ್ಯಲ್ಲ ಭವ್ಯಾ…. ಎಲ್ಲಾ ನಮ್ಮ ಕರ್ಮ ಕಣೇ…..” ಎಂದು ದುಃಖಿತಳಾದಳು.

“ಪೂನಾಕ್ಕೆ ಕರ್ಕೊಂಡು ಹೋಗ್ತೀವಿ. ಫೇಮಸ್‌ ನ್ಯೂರಾಲಜಿಸ್ಟ್ ಆಪಾಯಿಂಟ್‌ ಮೆಂಟ್‌ ಕೊಟ್ಟಿದ್ದಾರೆ ಅಂದಿದ್ಯಲ್ಲಾ….. ಏನಾಯ್ತು?” ಎಂದು ಭವ್ಯಾ ಮಾತು ಮುಂದುವರಿಸಿದಳು.

ವಿನುತಾ ಸಾವರಿಸಿಕೊಂಡು, “ಅಷ್ಟರಲ್ಲಿ ಎರಡನೆ ಅಲೆ ಅಂತ ಲಾಕ್‌ ಡೌನ್‌ ಆಯ್ತು! ಈಗ ಹೇಗೆ ಹೋಗೋದು…? ಆಲ್ಛ, ಬೀಟ, ಗಾಮ ಅಂತೆಲ್ಲಾ ಏನೇನೋ ಹೊಸ ವೈರಸ್‌ ಗಳು ಬಂದಿದೆಯಲ್ಲಾ ಏನ್ಮಾಡೋದು….” ಎಂದಳು ವಿನುತಾ.

“ನೀನು ಹೇಳೋದೂ ಸರಿ ಬಿಡು. ಮತ್ತೀಗ ಟ್ರೀಟ್‌ ಮೆಂಟ್‌ ಹೇಗೆ….?” ಎಂದು ಭವ್ಯಾ ಕಾಳಜಿಯಿಂದ ವಿಚಾರಿಸತೊಡಗಿದಳು.

“ಅದೇ ಕಣೆ, ಆನ್‌ ಲೈನ್‌ ಕನ್ಸ್ಟೀಶನ್‌ ತಗೊಂಡು ಅವರು ಹೇಳಿದಷ್ಟು ಫೋನ್‌ ಪೇ ಮಾಡಿದ್ರೆ ಅವರೇ ಮೆಡಿಸಿನ್ಸ್ ಕಳಿಸುತ್ತಾರೆ. ಎಲ್ಲಾ ಎಷ್ಟು ಸರಾಗ ನೋಡು! ಆದರೆ ತನ್ನನ್ನೇ ಮರೆತಿರೋ, ಮಗಳನ್ನೇ ಮರೆತಿರೋ ನಮ್ಮಮ್ಮನ್ನ ನೋಡ್ಕೊಳ್ಳೋದು ಮಾತ್ರ ಸರಾಗ ಅಲ್ಲ ಕಣೇ. ಅವರು ತುಂಬಾ ಸೆನ್ಸಿಟಿವ್. ಒಂದು ಹೊತ್ತು ಸ್ವಲ್ಪ ಹೆಚ್ಚು ಕಡಿಮೆ ಆದರೂ ಹೊಟ್ಟೆಗೆ ಸರಿಹೋಗಲ್ಲ. ಈಗಲೂ ಎಲ್ಲಾ ಮಾಡಿಟ್ಟು ಪಕ್ಕದ ಮನೆಯವರಿಗೆ ಹೇಳಿ ಬಂದಿದ್ದೀನಿ. ಹೊಟ್ಟೇಲಿ ಸಂಕಟ ಆಗುತ್ತೆ ಕಣೆ. ಕೆಲಸ ಬಿಟ್ಟು ಮನೆಯಲ್ಲಿ ಇರೋ ಹಾಗೂ ಇಲ್ಲ. ಎಲ್ಲವನ್ನೂ ಅಮ್ಮಂಗೇ ಕಳೆದಿದ್ದೀವಿ ಗೊತ್ತಾ. ಆದ್ರೂ ಅಮ್ಮ ಅಮ್ಮನಾಗಿಲ್ಲ ಮಗು ಆಗಿದ್ದಾರೆ, ನಾನು ಅಮ್ಮ ಆಗಿದೀನಿ ನೋಡು….. ಹೀಗಾಗೋದು ವೆರಿ ವೆರಿ ರೇರ್‌ ಅಲ್ವಾ….” ಎಂದು ಅಡಗಿದ್ದ ದುಃಖದ ಹೊದಿಕೆಯನ್ನು ಬಿಚ್ಚಿದಳು ವಿನುತಾ.

“ಬಿಡೆ ಹುಷಾರಾಗ್ತಾರೆ….. ಬೇಜಾರು ಮಾಡ್ಕೊಬೇಡ. ನಡೀ ಹೋಗೋಣ,” ಎಂದು ಸಮಾಧಾನಿಸಿದಳು, “ಹಾಗೆ ನನಗೂ ಡ್ರಾಪ್‌ ಕೊಡ್ತೀಯಾ?” ಎಂದು ಕೇಳಿದಳು.

ಇಬ್ಬರೂ ಸ್ಕೂಟಿ ಏರಿದರು. ದಾರಿಯಲ್ಲಿ ಇಬ್ಬರೂ ಮೌನವಾಗಿದ್ದರು. ತಾವಿಬ್ಬರೂ ಮೊದಲು ಮಾತಾಡಲ್ಲ ಎನ್ನುವಂತೆ ಅವರಿಬ್ಬರೂ ನಿಶ್ಚಯ ಮಾಡಿದ ಹಾಗಿತ್ತು. ಹೀಗೆ ಸಾಗುತ್ತಿರುವಾಗ ಮಾರ್ಕೆಟ್‌ ಬಳಿ ಫ್ರೆಶ್‌ ತರಕಾರಿ ನೋಡಿದ ಭವ್ಯಾ, “ವಿನುತಾ, ಗಾಡಿ ನಿಲ್ಲಿಸು ತರಕಾರಿ ನೋಡೋಣ,” ಎಂದಳು.

“ನಾನೂ ತಗೋಬೇಕು ಕಣೆ…..” ಎಂದ ವಿನುತಾ, ಸುತ್ತಮುತ್ತ ಎಲ್ಲೂ ಪೊಲೀಸ್‌ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಸ್ಕೂಟಿ ಸೈಡ್‌ ಗೆ ಹಾಕಿ ಮಾರ್ಕೆಟ್‌ ಗೆ ಬಂದರು. ಸಬ್ಬಸ್ಸಿಗೆ, ಕೊತ್ತಂಬರಿ, ನಿಂಬೆಹಣ್ಣಿನ ಹೊಸ ಹಸಿ ವಾಸನೆ ಬರುತ್ತಿತ್ತು. ಕಟ್ಟು ಎಷ್ಟು ಎಂದು ಕೊಳ್ಳುತ್ತಿರುವಾಗಲೇ ಒಂದೆರಡು ಮೀಟರುಗಳ ಅಂತರದಲ್ಲಿ ವ್ಯಕ್ತಿಯೊಬ್ಬ, “ನೀನೆಂಥ ಅವ್ವ! ಒಂದ್‌ ಕಣ್ಣಿಗೆ ಸುಣ್ಣ, ಇನ್ನೊಂದ್‌ ಕಣ್ಣಿಗೆ ಬೆಣ್ಣೆ ಮಾಡ್ತೀಯ. ಮಗಳ ಮನೆಗೇ ಎಲ್ಲಾ ಸಾಗಿಸ್ತೀಯಾ. ಕೊಡಿಲ್ಲಿ ಹಿಂಡಿ ಬೂಸಾಗೆ ಆರುನೂರು, ಖರ್ಚಿಗೆ ಇನ್ನೂರು,” ಎನ್ನುತ್ತಾ ಏರು ಧ್ವನಿಯಲ್ಲಿ ಕೇಳುತ್ತಿದ್ದ.

“ಹೋಗ್ಲಾ…. ಅದೇನ್‌ ಕೇಮೆ ನೋಡ್‌ ಹೋಗು…. ದಿನದ ಯಾಪಾರ ಮಾಡಿ ಸಾಕಾಗೈತೆ. ಚೀಟಿ ಕಟ್ಬೇಕು, ಶೆಟ್ರ ಅಂಗಡೀಲಿ  ಅಡ ಇಟ್ಟಿರೊ ವಾಲೆ ಬುಡುಸ್ಕೋಬೇಕು. ನಿಮ್ಮಪ್ಪ ನಿನ್ನಂಗೆ ಕುಡ್ದು ಕುಡ್ದು ಸತ್ತ. ನಿಮ್ಮಕ್ಕನ್ಗೂ ಅಂತ್ನಿ ಬಹಾದ್ದೂರ್‌ ಗಂಡ್‌ ಸಿಕ್ನಿದ್ನಾ. ನಿಮ್ಮಪ್ಪನ್‌ ಸಾವ್ ನಿನ್ಗೂ ಬಂದೈತೆ ಹೋಗ್‌ ಹೋಗ್ಲಾ……” ಎಂದು ಗದರಿದಳು.

ಮಗನೂ ಎತ್ತರದ ಧ್ವನಿಯಲ್ಲಿ, “ನಮ್ಮಪ್ಪನ್‌ ಇಲ್ಯಾಕ್‌ ಕರಿತೀಯಾ? ಕೊಡು ಕಾಸು. ಬೇಗ ತೆಗೀ ಚೀಲ….. ಇಲ್ಲಾಂದ್ರೆ ನಾನೇ ತಗೋತೀನಿ ನೋಡ್ತಿರು. ಸುಮ್ಕೆ ಕೊಡು ಮಂತೆ ನಂಗಲ್ದೆ ಇನ್ಯಾರಿಗೆ ಕೊಡ್ತೀಯಾ…..?” ಎಂದು ದಬಾಯಿಸಿದ.

“ಚೀಲಕ್ಕೆ ಕೈ ಹಾಕ್ತೀಯಾ….. ಆಂ ಬಾರ್ಲಾ…. ನಾನೂ ನೋಡೇ ಬುಡ್ತೀನಿ ಬಾರ್ಲಾ….” ಎನ್ನುತ್ತಾ ಒಂದು ಕಡೆ ಕಿವಿಯಿಂದ ಜಾರುತ್ತಿದ್ದ ಮಾಸ್ಕನ್ನು ಕೈಗೆ ತೆಗೆದುಕೊಳ್ಳುತ್ತಾ, “ಅಲ್ವಾ ಮತ್ತೆ ನಾನು ಯಾಪಾರ ಮಾಡ್ತಾ ಇದ್ರೆ, ನೀನು ಕಾಸ್‌ ಕೇಳೋದೇಯ ಬುಡು,” ಎಂದು ಆಕೆ ಜೋರಾಗಿ ಗದರಿದಳು.

“ಅಲ್ಲ ಕಣ್ವವ್ವ….. ಹಸಿಗೆ ಹಿಂಡಿ ಬೂಸಾ ತಗಂಡು ಹೋಗ್ಬೇಕು. ಆ ಆಡೋ ಹುಡ್ಗಿ ಇಷ್ಟ್ ಬಿರ್ನೆ ನೀರ್‌ ಹಾಕಂಡದೆ…. ಮೆಂತ್ಯ ಪಂತ್ಯ  ಕೊಬ್ರಿ ಬೆಲ್ಲ ತಕ್ಕಂಡ್‌ ಹೋಗ್ಬಾರ್ದಾ?” ಎನ್ನುತ್ತಾ ಮಗಳು ಮೈನೆರೆದ ಸುದ್ದಿಯನ್ನು ತಾಯಿಗೆ ಹೇಳಿದ.

“ಊಂ ಕಣ್ಲಾ ತಕ್ಕಹೋಗ್ಬೇಕು…. ನನ್ನೇನು ಕೇಳೀಯಾ….. ಅಷ್ಟು ದೊಡ್ಡ ಡೈರಿಗೆ ಹಾಲ್ ‌ಉಯ್ತೀರಾ…. ಕೂಡ್ಸಿ ಇಟ್ಕಬೇಕು. ಬಂದ ಬಂದಿದ್ನೆಲ್ಲಾ ಸೀರೆ ಬಟ್ಟೆ ಅಂದ್ರೆ ಇಂಗೆಯೇ ಆಗದು…..” ಎನ್ನುತ್ತಾ ಅಲ್ಲೇ ತರಕಾರಿ ಮುಟ್ಟಿ ನೋಡುತ್ತಿದ್ದವರಿಗೆ, “ತಕಳಿ ಮೇಡಮ್ಮೋರೆ ಕ್ಯಾರೆಟ್ಟು ಕಾಲು ಕೆಜಿಗೆ 15 ರೂ. ಅರ್ಧ ತಕ್ಕಳಿ 25 ರೂಪಾಯಿ ಹಾಕ್ಕೊಡ್ತೀನಿ,” ಎಂದು ವ್ಯಾಪಾರಕ್ಕೆ ಮುಂದಾದಳು.

ಹಾಗೆ ಓರೆ ಕಣ್ಣಲ್ಲಿ ಮಗನನ್ನು ನೋಡಿದರೆ, ಅವನು ಗೋಣಿಚೀಲದ ದಾರ ಬಿಚ್ತಾ ಏನೋ ಯೋಚನೆ ಮಾಡುತ್ತಿದ್ದ. ಮತ್ತೆ ಬಂದು, “ಅಲ್ವಾ…. ಕಾಸ್ಕೊಡ್ತಿಯೋ ಇಲ್ವೋ…..?” ಎಂದ.

“ಕೊಡಕ್ಕಿಲ್ಲ ಕಣ್ಲಾ……! ಅದ್ಯಾವನೋ ಕಾಣೇ ಹಳೆ ಮಾಲ್ ಹಾಕ್ನಿ ಮಾರಕ್ಕಾಗಕ್ಕಿಲ್ಲ. ಕೊನೆ ಚೀಲ್ದಲ್ಲಿ ಕರಗಿರೋ ತರಕಾರಿ ಎತ್ಮಡ್ಗಿವ್ನಿ ಹಸಿಗೆ ತಕಂಡು ಹೋಗ್‌ ಹಾಕು. ಒಳ್ಳೆ ಹಾಲು ಕೊಟ್ರೆ ನಿನ್‌ ಹೆಡ್ತಿ ಮಕ್ಕಳು ಕುಡೀತಾರೆ,” ಎಂದು ತನ್ನನ್ನು ಮಗ ನೋಡಿಕೊಳ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದಳು.

“ಮತ್ತೆ ಅದೇ ಸುದ್ದಿ ಎತ್ಬೇಡ ಬಾ….. ನಮ್ ಜೂತ್ಗೆ ಇರು ಅಂದ್ರೆ ಬ್ಯಾರೆ ಬೇಸ್ಕಂಡು ತಿಂತೀಯಾ……ಅದೆಲ್ಲ ಬುಟ್ಟು ಹಾಕಿ ಕಾಸ್‌ ಕೊಡು. ಮನ್ತಾನಂತೆ ಮಾತಾಡುವಂತೆ ಆ ಹುಡ್ಗಿ ಆರೈಕೆ ಮಾಡ್ಬೇಕು,” ಎಂದ.

ನೊಂದ ಆ ತಾಯಿ, “ಇಂಥವ್ನ ಹೊಟ್ಟೇಲಿ ಹುಟ್ಟಿ ಆ ಮಗ ಏನ್‌ ಕರ್ಮ ಮಾಡಿತ್ತೋ….. ಏನೋ…..?” ಎನ್ನುತ್ತಾ, “ನನ್ನ ಹತ್ರ ಇನ್ನೂರೆಯ ಇರದು ಬೇಕಾದ್ರೆ ತಗ…. ಇಲ್ದಿದ್ರೆ ಬುಡು….” ಎಂದು ಇನ್ನೂರರ ಒಂದು ನೋಟನ್ನು ಕೊಟ್ಟರೆ ಮಗ ಅದನ್ನು ನೋಡಿ, “ನೋಡ್ದ ಮತ್ತೆ ಇಷ್ಟು ಕಮ್ಮಿ ಕೊಟ್ಟಲ್ಲ,” ಎನ್ನುತ್ತಾ, ಕೊಸರುತ್ತಾ, “ಸಂಜಿಕ್‌ ಬತ್ತೀನಿ ಜೊತೆ ಮಾಡ್ಕ,” ಎಂದು ಹಾಳಾದ ತರಕಾರಿ ಚೀಲದ ಜೊತೆಗೆ ಬಿರುಸಾಗಿ ನಡೆದ.

ಪಕ್ಕದಲ್ಲಿ ಮೊಳಕೆಕಾಳು ಮಾಡುವ ಹೆಂಗಸು, “ಮೊಮ್ಮಗಳು ಮೈನೆರೆದವ್ಳಂತೆ,” ಎಂದಳು.

“ಊಂ…. ನನ್ಗೆ ಹೇಳೇ ಇಲ್ಲ, ನೋಡು ಮತ್ತೆ, ನನ್ಗೇನು ಗೊತ್ತಾಗಕ್ಕಿಲ್ಲಾ….? ಇವ್ನ ಕೈಗೆ ಕೊಟ್ಟು ನನ್ನ ಮಗ ಆರೈಕೆ ಮಾಡ್ಸ್ ಬೇಕಾ….? ಸಂಜಿಕೆ ನಾನೇಯ ತಕಂಡ್‌ ವೋಗ್‌ ಕೊಡ್ತೀನಿ. ಚಂದಾಗ್‌ ಆರೈಕೆ ಮಾಡನ ಅಂದ್ರೆ ಅವರ್ದೋದೊಂದು ವಗ್ರಣೆ. ಮಗಳ್‌ ಮಕ್ಳಿಗ್‌ ಎಲ್ಲಾ ಕೊಡ್ತಿದೀನಿ ಅಂತ. ಕರಾನ ಬಂದು ಮನ್ತ ಇದ್ದಿದ್ದುಕ್ಕೂ ಮಾತ್‌ ಕೇಳ್ಸ್ಕಂಡು ಕೇಳ್ಸ್ಕಂಡು ಸಾಕಾಗೈತೆ. ಅಲ್ಲಾ…..! ಹಸ ಅಷ್ಟು ಹಾಲ್ ‌ಕೊಟ್ರೂವೆ ತಗ ಒಂದ್ಪಾವ್ ಹಾಲ ಕಾಸ್ಕೊಂಡ್‌ ಕುಡಿ ಅಂತ ಕೊಡ್ನಿಲ್ಲ…… ಈಗ್‌ ಕಾಸ್‌ ಕೊಡು ಅಂತ ಬಂದವ್ನೆ. ಎಂಗಾದ್ರೂ ಆಗ್ಲಿ ಮೊಮ್ಮಗಳು ನಮ್ಮ ಸ್ವಂದ್‌ ಅಲ್ವಾ…. ಚೂರು ಪಾರು ಮಾಡ್ದೆ ಇದ್ರೆ ಆಯ್ತದ,” ಎನ್ನುತ್ತಲೇ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ನುಂಗಿಕೊಂಡು ವ್ಯಾಪಾರಕ್ಕೆ ಬಂದರ ಕಡೆ ಗಮನ ಹರಿಸಿದಳು.

ದೂರದಲ್ಲೇ ಇದನ್ನೆಲ್ಲಾ ನಿಂತು ಕೇಳುತ್ತಿದ್ದ ವಿನುತಾ, “ನೋಡಿದ್ಯಾ ಭವ್ಯಾ, ವಯಸ್ಸಾದವರು ಪಾಪ, ಮೊಮ್ಮಗಳಿಗೆ ಆರೈಕೆ ಮಾಡೋದು ಜವಾಬ್ದಾರಿ ಅಂತ ಹೇಗೆ ಹೇಳ್ತಾರೆ. ನಾನೂ ಇದ್ದೀನಿ ಅನಾಥಳ ತರ ನನ್ನ ಬಗ್ಗೆ ಯಾರೂ ಯೋಚ್ನೆ ಮಾಡಲ್ಲ. ಅಮ್ಮ ಆರೋಗ್ಯವಾಗಿದ್ದಿದ್ದರೆ ಛೇ…..” ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಬೇಗ ಬೇಗ ತರಕಾರಿ ಕೊಂಡು ಭವ್ಯಾಳ ಜೊತೆ ಸ್ಕೂಟಿ ಹತ್ತಿ ಹೊರಟಳು.

ದಾರಿಯಲ್ಲಿ ಭವ್ಯಾ, “ಬಾರೆ ವಿನು, ನಮ್ಮನೆಗೆ ತುಂಬಾ ದಿನ ಆಯ್ತು. ಜೊತೆಗೆ ಕೂತು ಮಾತಾಡೋಣ  ಬಾ,” ಎಂದು ಕರೆದಳು.

“ಇಲ್ಲ ಕಣೇ, ಬೇಗ ಹೋಗ್ಬೇಕು ನಾಳೆ ಸಿಗೋಣ,” ಎಂದು ಅವಳನ್ನಿಳಿಸಿ ಹೊರಟಳು ವಿನುತಾ.

ಇಳಿಸುವಾಗ ಬ್ರೇಕ್‌ ಜೋರಾಗಿ ಹಾಕಿದ್ದರಿಂದ ಭವ್ಯಾ, “ಮೆಲ್ಲಗೆ ಕಣೆ ಕುಕ್ಕರಿಸ್ಬೇಡ. ಅಪ್ಲಯನ್ಸ್ ಕ್ಲಾಸ್‌ ಶುರು ಆಗುತ್ತೆ. ಸ್ಟೂಡೆಂಟ್ಸ್ ಎದುರು ಕುಂಟ್ಕೊಂಡು ಹೋಗೋದಾ…. ಮೊದಲೆ ತಲೆ ಪ್ರತಿಷ್ಠೆಗಳು ಒಂದು ಒಂದೂವರೆ ವರ್ಷದಿಂದ ಸೋಮಾರಿ ಮುದ್ದೆ ಆಗಿದಾವೆ,” ಎಂದಳು.

“ಅಯ್ಯೋ ತಾಯಿ! ಕುಂಟ್ಕೊಂಡು, ಕೆಮ್ಮ್ ಕೂಂಡು ಹೋಗೋಣ ಸರಿ. ಕಾಲೇಜು ಶುರು ಮಾಡೋಕೆ ಗರ್ಮೆಂಟ್‌ ಒಪ್ಪಬೇಕಲ್ಲ,” ಎಂದಳು ವಿನುತಾ. ನಂತರ ಇಬ್ಬರೂ ನಗುತ್ತಾ ಅವರವರ ಮನೆ ಸೇರಿಕೊಂಡರು.

ಮರುದಿನ ಸರ್ಕಾರದ ಆದೇಶದನ್ವಯ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಗೆ, ಉಪನ್ಯಾಸಕರುಗಳಿಗೆ ವ್ಯಾಕ್ಸಿನ್‌ ಸ್ಲಾಟ್‌ ಅಲಾಟ್‌ ಆಗಿತ್ತು. `ವ್ಯಾಕ್ಸಿನ್‌ ಗೋಸ್ಕರ ಆನ್‌ ಲೈನ್‌ ನಲ್ಲಿ ಬುಕ್‌ ಮಾಡೋಕೆ ಆಗಿರಲಿಲ್ಲ. ಥ್ಯಾಂಕ್‌ ಗಾಡ್‌ ಇಲ್ಲೇ ವ್ಯವಸ್ಥೆ ಆಯ್ತು,’ ಎಂದುಕೊಳ್ಳುತ್ತಾ ವಿನುತಾ ಬೆಳಗ್ಗೆ ಬೇಗ ಎದ್ದು ಮಧ್ಯಾಹ್ನಕ್ಕೆ ಮೂಲಂಗಿ ಹುಳಿ ಮಾಡಿಟ್ಟು, ಬೆಳಗ್ಗೆ ಅಕ್ಕಿ ತರಿ ಉಪ್ಪಿಟ್ಟು ಮಾಡಿ ಅಮ್ಮ ಅಪ್ಪಂಗೆ ಕೊಟ್ಟು, ರಾತ್ರಿಗೆ ನೀರ್‌ ದೋಸೆಗೆ ನೆನೆಸಿ ಕಾಲೇಜಿಗೆ ಹೋದಳು.

ಆತುರದಲ್ಲೇ ಬಂದ ವಿನುತಾಳನ್ನು ಕಂಡ ಭವ್ಯಾ, “ಮೆಲ್ಲಗೆ ಬಾರೇ, ವ್ಯಾಕ್ಸಿನ್‌ ಏನೂ ಮುಗಿದು ಹೋಗಲ್ಲ ನಿನ್ನ ಪಾಲಿಂದು ಇದ್ದೇ ಇರುತ್ತದೆ,” ಎಂದು ತಮಾಷೆ ಮಾಡುತ್ತಲೇ ವ್ಯಾಕ್ಸಿನ್‌ ಹಾಕುವ ಕೋಣೆಗೆ ಹೋದರು.

ಅಲ್ಲಿದ್ದ ನರ್ಸ್‌, “ಕ್ಯೂನಲ್ಲಿ ಬನ್ರಮ್ಮ……” ಎಂದು ನಸುನಗುತ್ತಲೇ ಹೇಳಿದರು.

ಅಷ್ಟರಲ್ಲಿ ಅಲ್ಲಿದ್ದ ಹಿರಿಯ ಉಪನ್ಯಾಸಕರು, “ಮೇಡಂ, ಇವರು ನಮ್ಮ ಯಂಗ್‌ ಸ್ಟಾಫ್‌ ಇವರಿಗೆ ಫಸ್ಟ್ ಆಗಲಿ,” ಎಂದು ಮುಗುಳ್ನಕ್ಕರು.

ಅಲ್ಲಿದ್ದ ಸಿಸ್ಟರ್‌, “ಸಾರಿ ನನಗೆ ಗೊತ್ತೇ ಆಗಲಿಲ್ಲ. ಇನ್ನೂ ಸ್ಟೂಡೆಂಟ್ಸ್ ತರಾ ಬಟ್ಟೆ ಹಾಕ್ಕೊಂಡು ಬಂದ್ರೆ ಏನು ಗೊತ್ತಾಗುತ್ತೆ. ಮುಖ ಕಾಣಲ್ಲ ಅರ್ಧ ಮಾಸ್ಕ್ ಕವರ್‌ ಆಗಿರುತ್ತೆ,” ಎನ್ನುತ್ತಾ ವಿನುತಾಳನ್ನು ಬಲಗೈಯಲ್ಲಿ ಸನ್ನೆ ಮಾಡಿ ಅಲ್ಲೇ ಹಾಕಿದ್ದ ಸ್ಟೂಲ್ ಮೇಲೆ ಕೂರುವಂತೆ ಹೇಳಿದರು.

ವಿನುತಾ ಹೆದರಿಕೆಯಿಂದಲೇ ಸ್ಟೂಲ್ ‌ಮೇಲೆ ಕುಳಿತುಕೊಂಡು ಮೆಲ್ಲಗೆ ಮಾಸ್ಕ್ ಸರಿಸಿ ಭವ್ಯಾಗೆ ಫೋಟೋ ತೆಗೆಯಲು ಸೂಚನೆ ನೀಡಿದಳು.

“ನೀವು ಇಷ್ಟು ಯಂಗ್‌! ಯಾವ ಸಬ್ಜೆಕ್ಟ್ ಹ್ಯಾಂಡಲ್ ಮಾಡ್ತೀರಾ? ಎಷ್ಟು ವರ್ಷ ಆಯಿತು? ಫುಲ್ ಟೈಮೋ, ಪಾರ್ಟ್‌ ಟೈಮೋ? ಬೇರೆ ಯಾವ ಕಾಲೇಜ್‌ ನಲ್ಲಿ ವರ್ಕ್‌ ಮಾಡ್ತೀರಾ? ವಾರದಲ್ಲಿ ಎಷ್ಟು ಅವರ್ಸ್‌ ಇರುತ್ತೆ?” ಎಂದು ಸಿಸ್ಟರ್‌ ಪ್ರಶ್ನೆಗಳ ಸುರಿಮಳೆ ಹಾಕಿದರು.

ವಿನುತಾಗೆ ಉತ್ತರ ಕೊಡುವುದಕ್ಕೆ ತಡವರಿಕೆ ಆಗುತ್ತಿತ್ತು. ಕಡೆಗೆ ಒಂದು ದೊಡ್ಡ ಪೂರ್ಣ ವಿರಾಮ ಇಟ್ಟಂತೆ, “ಆಯ್ತು ಮೇಡಂ. ಸಂಜೆ ಅಷ್ಟರಲ್ಲಿ ಜ್ವರ ಬಂದರೆ ಡೋಲೋ ತಗೊಳ್ಳಿ,” ಎಂದು ಮೇಲೇಳಲು ಸೂಚನೆ ಕೊಟ್ಟರು.

ವಿನುತಾಗೆ ವ್ಯಾಕ್ಸಿನ್‌ ಹಾಕಿದ್ದೆ ಗೊತ್ತಾಗಲಿಲ್ಲ, `ಅಯ್ಯೋ ಆಗೇ ಹೋಯ್ತಾ…..?’ ಎನ್ನುತ್ತಾ ಹೊರಬರುವಾಗಲೇ ತಲೆ ದಿಮ್ ಎನ್ನತೊಡಗಿತ್ತು. ಕಾಲೇಜಿನವರು ಮೊದಲೇ ತಯಾರಿ ಮಾಡಿದ್ದ ವಿಶ್ರಾಂತಿ ಕೊಠಡಿಯಲ್ಲಿ ಹೋಗದೆ ತನ್ನದೇ ಛೇಂಬರ್‌ ಗೆ ಹೋಗಿ ವಿಶ್ರಾಂತಿ ತೆಗೆದುಕೊಂಡು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ವಿನುತಾಗೆ ಅಲ್ಲಿದ್ದ ಹಿರಿಯ ಉಪನ್ಯಾಸಕರು, “ವಿನುತಾ ಹುಷಾರ್‌. ಸಂಜೆ ಅಷ್ಟರಲ್ಲಿ ಜ್ವರ ಬರುತ್ತೆ, ಹುಷಾರು ಗಾಬರಿಯಾಗಬೇಡ. ಸುಸ್ತಾಗುತ್ತೆ ಸುಧಾರಿಸಿಕೋಬೇಕು,” ಎಂದರು.

“ಸರಿ!” ಎನ್ನುತ್ತಾ ವಿನುತಾ ಮನೆಗೆ ಬಂದಳು. ಜ್ವರ ಏನೂ ಬಂದ ಹಾಗೆ ಅನ್ನಿಸಲಿಲ್ಲ. ಸಂಜೆಗೆ ಎಲ್ಲರಿಗೂ ತಿಂಡಿ ಮಾಡಿಕೊಡುವಾಗಲೇ ಎಡಗೈ ಎತ್ತಲು ಸಾಧ್ಯವಾಗದಷ್ಟು ಅಸಾಧ್ಯ ನೋವು ಕಾಣಿಸುತ್ತಿತ್ತು. ಸರಿ ಜ್ವರ ಬರಲಿಲ್ಲ ಅಂದುಕೊಂಡರೆ ಮೈಯೆಲ್ಲಾ ಚಳುಕು ಚಳುಕು ಅನಿಸುತ್ತಿತ್ತು.

ಡಾಕ್ಟರ್‌ ಆಗಿದ್ದ ತನ್ನ ದೊಡ್ಡಮ್ಮನ ಮಗಳು ಅಕ್ಷತಾಳಿಗೆ ಫೋನ್‌ ಮಾಡಿದಳು. ಅದಕ್ಕವಳು, “ಮೊದಲೇ ಮಾತ್ರೆ ತಗೋಬೇಕಾಗಿತ್ತು ಕಣೆ. ಇದು ಸ್ಟಾರ್ಟ್‌, ರಾತ್ರಿ ಆಗ್ತಾ ಆಗ್ತಾ ಮೂಳೆಯೆಲ್ಲಾ ಸೆಳೆಯೋ ಹಾಗೆ ಪೇನ್‌ ಇರುತ್ತೆ. ಚಳಿ ಕೂಡ ಬರುತ್ತೆ. ಹೆದರಬೇಡ ಇದು ಗುಡ್‌ ಸೈನ್‌. ವ್ಯಾಕ್ಸಿನ್‌ ನಿನ್ನ ಬಾಡಿಯಲ್ಲಿ ವರ್ಕ್‌ ಮಾಡ್ತಿದೆ ಎಂದರ್ಥ,” ಎಂದು ಹೇಳಿ ಫೋನ್‌ ಕಟ್ ಮಾಡಿದಳು.

ಸೂಕ್ಷ್ಮ ಶರೀರದವಳಾದ ವಿನುತಾಗೆ ಆ ನೋವನ್ನು ಸಹಿಸಕ್ಕಾಗಲಿಲ್ಲ. ಕೈ ಎತ್ತೋದಕ್ಕೂ ಆಗ್ತಿರಲಿಲ್ಲ. `ತನಗೂ ಅಮ್ಮ ಚೆನ್ನಾಗಿದ್ದಿದ್ದರೆ ನೋಡಿಕೊಂಡಿರೋಳು ಅಲ್ವಾ? ಯಾರ ಹತ್ರ ಹೇಳ್ಕೊಳ್ಳಲಿ ಈ ಪೇಯನ್ನನ್ನು,’ ಎಂದು ಸಂಕಟ ಪಟ್ಟುಕೊಂಡಳು.

ಅದೇ ಸಂಕಟದಲ್ಲಿ ನೆನಪು ಕಳೆದುಕೊಂಡ ತಾಯನ್ನು ಆರೈಕೆ ಮಾಡಿದಳು. ಆ ದೈಹಿಕ, ಮಾನಸಿಕ ನೋವು ವಿನುತಾಳನ್ನು ಮತ್ತೆ ಮತ್ತೆ ಬಾಧಿಸತೊಡಗಿತ್ತು. `ಅಮ್ಮನ್ನ ನೋಡೋಕೆ ನಾನು ಮಾತ್ರವೇ ಇರೋದು. ನನಗೆ ಏನಾದ್ರೂ ಆದ್ರೆ ಏನು,’ ಎಂದುಕೊಂಡು ಪರಿಚಯದ ಮತ್ತೊಬ್ಬ ಡಾಕ್ಟರ್‌ ಗೆ ಕರೆ ಮಾಡಿದಳು.

“ಇಮ್ಯುನಿಟಿ ಪವರ್‌ ಯಾರಲ್ಲಿ ಕಡಿಮೆ ಇರುತ್ತೋ ಅವರಿಗೆ, ತಾಯಿ ಹಾಲು ಯಾರು ಕಡಿಮೆ ಕುಡಿದಿರುತ್ತಾರೋ ಅವರಲ್ಲಿ ಹೀಗೆ ಆಗುತ್ತೆ,” ಎಂದರು.

ಡಾಕ್ಟರ್‌ ಮಾತು ಕೇಳುತ್ತಲೇ ವಿನುತಾಗೆ ಮತ್ತೆ ದುಃಖ ಉಮ್ಮಳಿಸಿತು. “ಹುಟ್ಟಿದ್ದಷ್ಟೆ. ಇನ್ನೂ ಆರು ತಿಂಗಳು ಇರೋವಾಗ್ಲೆ ರೋಡ್‌ ಆಕ್ಸಿಡೆಂಟ್‌ ನಲ್ಲಿ ಅಮ್ಮ ನೆನಪು ಕಳೆದುಕೊಂಡಳು. ಬಂಧುಗಳು ಸುಖಾಸುಮ್ಮನೆ ಕಷ್ಟ ಅಂತ ದೂರಕ್ಕೆ ದೂರವೇ ಉಳಿದರು. ಇನ್ನೆಲ್ಲಿ ಅಮ್ಮನಿಂದ ಆರೈಕೆ? ಎಲ್ಲರ ಹಾಗೆ ಅಮ್ಮ ಚೆನ್ನಾಗಿ ಇದ್ದಿದ್ರೆ,” ಎಂದು ಭವ್ಯಾಳ ಬಳಿ ಹೇಳಿಕೊಂಡು ಅತ್ತಳು.

ಭವ್ಯಾ ಫೋನ್‌ ನಲ್ಲೇ ಸಮಾಧಾನ ಮಾಡಿದರೂ ಸಮಾಧಾನವಾಗಲಿಲ್ಲ.

“ಯಾರೂ ತೆಗೆದುಕೊಳ್ದೆ ಇರೋ ವ್ಯಾಕ್ಸಿನ್‌ ನಿನಗೆ ಹಾಕಿಲ್ಲ ಕಣೇ. ಸುಮ್ನೆ ಮಲಗೆ ಎಲ್ಲಾ ಸರಿ ಹೋಗುತ್ತೆ,” ಎಂದು ಹುಸಿ ರೇಗು ರೇಗಿದಳು.

ಆದರೆ ವಿನುತಾ ಮಾತು ನಿಲ್ಲಿಸಲಿಲ್ಲ. ಹಿಂದಿನ ದಿನ ಮಾರುಕಟ್ಟೆಯಲ್ಲಿ ನಡೆದ ಘಟನೆ ನೆನಪಿಸಿಕೊಂಡು, “ಅಲ್ವೇ ಆ ತರಕಾರಿ ಮಾರೋ ಹೆಂಗಸಿಗೆ ಎಷ್ಟು ಕನವರಿಕೆ ಇತ್ತು ನೋಡು. ಮಗನಿಗೆ ಮದುವೆಯಾಗಿ ಸಂಸಾರ ಕಟ್ಕೊಂಡ ನಂತರ ತಾನು ಮಾಡೋ ವ್ಯಾಪಾರದಲ್ಲೇ ಮಗನಿಗೂ ಖರ್ಚಿಗೆ ಹಣ ಕೊಟ್ಟಳು. ಇನ್ನು ಮಗಳು ಅಂತ ತುಂಬಾ ಮಾಡ್ತಾರೆ ಅನ್ಸುತ್ತೆ ಅದನ್ನು ಹೇಳ್ತಿದ್ರಲ್ಲ. ಮೊಮ್ಮಗಳು ಮೆಚ್ಯೂರ್ಡ್‌ ಆಗಿದ್ದಾಳೆ ಎಂದ ಮೇಲೂ ಎಲ್ಲ ಮುನಿಸು ಮರೆತು ಸಂಜೆ ಹೋಗುವಾಗ ಎಲ್ಲಾ ಐಟಂ ತೆಗೆದುಕೊಂಡು ಹೋಗ್ತೇನೆ ಅಂದ್ರ್ಲಾ. ನಿಜಕ್ಕೂ ತಾಯಿ ಹೃದಯ ಅಂದರೆ ಹಾಗೆ ಅಲ್ವಾ…..! ಅಜ್ಜಿ ಮೊಮ್ಮಗಳಿಗೆ ಆರೈಕೆ ಮಾಡ್ತಾರಂತೆ. ಆದರೆ ನನಗೆ ಯಾರೂ ಇಲ್ವಲ್ಲಾ,” ಎಂದು ಅತ್ತಳು.

ಭವ್ಯಾ ವಿನುತಾಳನ್ನು ಸಮಾಧಾನ ಮಾಡುತ್ತಾ ಕಾಲೇಜಿನಲ್ಲಿ ಇದ್ದ ಮೀಟಿಂಗ್‌ ನೆನೆಸುತ್ತಾ, “ಆ ದಿನ ನೀನು ಒಂದು ಘಟನೆ ಹೇಳ್ದೆ ನೆನಪಿದ್ಯಾ? ಪಾಪ ಆ ಹುಡುಗರಿಗೆ ಪರ್ಮನೆಂಟಾಗಿ ಅಮ್ಮನೇ ಇಲ್ವಲ್ಲ….? ನಿನಗೆ ಕಡೆ ಪಕ್ಷ ಅಮ್ಮ ಎದುರಿಗಿದ್ದಾರೆ ಸಮಾಧಾನ ಮಾಡ್ಕೊಳೆ,” ಎಂದಳು.

ಆದರೆ ವಿನುತಾ ಕನ್ವಿನ್ಸ್ ಆಗಲೇ ಇಲ್ಲ. ಅಕ್ಷತಾ ಮರುದಿನ ಕರೆ ಮಾಡಿ, “ವಿನುತಾ ಹೇಗಿದ್ದೀಯಾ…?” ಎಂದು ಕೇಳಿದಳು.

“ಸ್ವಲ್ಪ ವಾಸಿ ಕಣೇ…. ಸ್ವಲ್ಪ ಸುಸ್ತು,” ಎಂದಳು ವಿನುತಾ.

“ಯಾವ ಡಾಕ್ಟ್ರೂ ಏನೂ ಮಾಡಕ್ಕಾಗಲ್ಲ! ಆದರೆ ಮೂರು ದಿನಕ್ಕಿಂತ ಜ್ವರ ಹೆಚ್ಚಾದರೆ ತೊಂದರೆ,” ಎಂದಳು ಅಕ್ಷತಾ.

“ಅಮ್ಮಾ ಇದ್ದಿದ್ದರೆ… ನೋಡ್ಕೊಂಡಿರೋಳು ಅಲ್ವಾ….” ಎಂದು ಮರುಗಿದಳು.

ಭವ್ಯಾಳಿಗೆ ವಿನುತಾಳ ಆಸೆಯಂತೆ ಅವರಮ್ಮನನ್ನು ಗುಣ ಮಾಡಲು ತಾನೊಂದು ಕಡೆಯ ಪ್ರಯತ್ನ ಮಾಡಬಾರದೇಕೆ ಅನಿಸಿತು. ಕೊರೋನಾ ಆರ್ಭಟ ಕಳೆದ ಮೇಲೆ ಇಬ್ಬರೂ ಗೆಳತಿಯರು ಸೇರಿ ಪೂನಾದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ವಿನುತಾಳ ಆರೈಕೆಯಿಂದ ಅವರಮ್ಮ ಸ್ವಲ್ಪ ಮಟ್ಟಿಗೆ ಗುಣ ಕಂಡಿದ್ದರು. ವರ್ಷಾನುಗಟ್ಟಳೆ ಮಗುವಿನಂತೆ ತಾಯಿಯನ್ನು ನೋಡಿಕೊಂಡಿದ್ದ ವಿನುತಾಳ ಹಾರೈಕೆ, ಆರೈಕೆ ಫಲಿಸಿತ್ತು. ಡಾಕ್ಟರ್‌ ಕೊಟ್ಟ ಔಷಧ, ವಿನುತಾಳ ಮಮತೆಭರಿತ ಆರೈಕೆ  ಅವರಮ್ಮನನ್ನು ಪೂರ್ತಿ ಗುಣ ಮಾಡದೇ ಇದ್ದರೂ ಮಗಳನ್ನು ಗುರುತಿಸುವ ಮಟ್ಟಕ್ಕೆ ಗೆಲುವಾದರು. ಮಗಳಿಗಾಗಿ ಮಿಡಿಯುತ್ತಿದ್ದರು. ಇದನ್ನು ಕಂಡ ವಿನುತಾಗೆ ಸಂತೋಷವಾಯಿತು.

ಮುಂದೆ ವೃತ್ತಿ ಜೀವನದಲ್ಲೂ ಯಶಸ್ಸು ಕಂಡ ವಿನುತಾ, ದೊಡ್ಡ ಪ್ರೊಫೆಸರ್‌ ಆಗಿ ಹೈದರಬಾದ್‌ ನಲ್ಲಿ ಕೆಲಸಕ್ಕೆ ಸೇರಿ ಬದುಕು ಕಟ್ಟಿಕೊಂಡಳು. ಭವ್ಯಾಳನ್ನು ಬಿಟ್ಟು ಹೋಗುವಾಗ, “ಈಗ ದೊಡ್ಡ ಕೆಲಸ ಸಿಕ್ಕಿದೆ. ಇನ್ನೂ ದೊಡ್ಡ ಡಾಕ್ಟರ್‌ ಬಳಿ ನಿಮ್ಮಮ್ಮನ್ನ ತೋರಿಸು,” ಎಂದು ಭವ್ಯಾ ಹೇಳಿದಳು.

“ಖಂಡಿತಾ ಅಮ್ಮನ್ನ ತೋರಿಸುತ್ತೇನೆ,” ಎನ್ನುತ್ತಾ ಮುದ್ದು ಅಮ್ಮನನ್ನು ತಬ್ಬಿಕೊಂಡಳು.

ಸಾವಧಾನವಾಗಿ ಮಗಳ ಬೆಳವಣಿಗೆಯನ್ನು ತಡವರಿಸಿದ ಹಾಗೆ ಅವರಮ್ಮನಿಗೆ ಎಲ್ಲಾ ನೆನಪುಗಳು ಮಸುಕು ಮಸುಕಾಗಿ ಮರುಕಳಿಸಲು ಪ್ರಾರಂಭವಾಯಿತು. ಅಷ್ಟರಲ್ಲಿ ವಿನುತಾಗೆ ಮದುವೆ ವಯಸ್ಸು ಮೀರಿತ್ತು. ಎಂದಿಗೂ ಸಹಾಯಕ್ಕೆ ಬಾರದೇ ಇದ್ದ ಬಂಧುಗಳು, `ನಮ್ಮ ಕಡೆಯ ವರನನ್ನು ಕಳುಹಿಸುವುದು, ಜಾತಕ ಕಳುಹಿಸುವುದು,’ ಇತ್ಯಾದಿ ಪ್ರಶ್ನೆಗಳನ್ನು ಮುಂದಿಡುತ್ತಿದ್ದರು.

ಆದರೆ ವಿನುತಾ ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲಿಲ್ಲ. ಸದಾ ಮಗುವಾಗಿಯೇ ಕಂಡ ತನ್ನ ತಾಯಿಯನ್ನು ಅಮ್ಮನ ರೂಪದಲ್ಲಿ ಕಾಣಲು ತವಕಿಸುತ್ತಿದ್ದಳು. ಏನೂ ಇಲ್ಲ ಎಂದು ಭರವಸೆ ಕಳೆದುಕೊಂಡಿದ್ದ ವಿನುತಾಳಿಗೆ ಅವರಮ್ಮ ಮರಳಿ ಸಿಕ್ಕಿದರು.

ದೂರದ ಹೈದರಾಬಾದ್‌ ನಲ್ಲಿ ನೆಲೆ ಕಂಡುಕೊಂಡ ವಿನುತಾ, ಭವ್ಯಾಳ ಹೊಸ ಮನೆ ಗೃಹಪ್ರವೇಶಕ್ಕೆ ವರ್ಷಗಳ ನಂತರ ಹಿಂದಿರುಗಿದ್ದಳು. ಸ್ನೇಹಿತರು, ಹಳೆಯ ಸಹೋದ್ಯೋಗಿಗಳು ಪರಸ್ಪರ ಭೇಟಿಯಾದರು. ವಿನುತಾ ತನ್ನಮ್ಮನನ್ನು ಕೆಲಸದವರ ಬಳಿ ನೋಡಿಕೊಳ್ಳಲು ಹೇಳಿ ಬಂದಿದ್ದ ಕಾರಣ ಅಮ್ಮ ಏನು ಮಾಡುತ್ತಿರುವರೆಂದು ವಿಚಾರಿಸಲು ಫೋನ್‌ ನಲ್ಲಿ ಬ್ಯುಸಿಯಾಗಿ ಬಾಲ್ಕನಿಯಲ್ಲಿದ್ದಳು. ಇತ್ತ ಅವಳ ಸ್ನೇಹಿತರೆಲ್ಲಾ ಸೇರಿ ವಿನುತಾಳ ಕುರಿತು ಮಾತನಾಡುತ್ತಿದ್ದರು.

“ವಿನುತಾ ಬಂದ ಕೂಡಲೇ, ನಿನ್ನ ಮದುವೆ ಯಾವಾಗ? ಎಂದು ರೇಗಿಸಬೇಕು. ಅವಳೇನಾದರೂ ವರನನ್ನು ಹುಡುಕಿ ಅಂದ್ರೆ ಆದಷ್ಟು ಬೇಗ ನಾವೇ ಹುಡುಕಿ ಮುಂದಿನ ಮಂಗಳ ಕಾರ್ಯ ಮಾಡಬೇಕು,” ಎಂದು ಚರ್ಚಿಸುತ್ತಿದ್ದರು.

ಭವ್ಯಾ ಅವರ ಮಾತುಗಳನ್ನು ತಡೆದು, “ಬೇಡ ಅಂದ್ರೆ ಬೇಡ! ರೇಗಿಸೋದು ಬೇಡವೇ ಬೇಡ. ಅದೊಂದು ನೊಂದ ಜೀವ. ಅವಳಿಗೆ ಯಾವುದು ಖುಷಿ ಅನ್ಸುತ್ತೋ ಅದನ್ನೇ ಮಾಡಲಿ,” ಎಂದಳು, ವಿನುತಾ ಅಲ್ಲಿಲ್ಲ ಎಂಬುದನ್ನು ಖಾತರಿ ಮಾಡಿಕೊಂಡು, “ಮಾತಿಗೆ ಹೇಳೋದಲ್ಲ. ಬೇರೆ ಯಾರೇ ಆಗಿದ್ರು ನೆನಪು ಹೋದ ಅಮ್ಮನ ಬಗ್ಗೆ, ವಯಸ್ಸಾದ ತಂದೆ ಬಗ್ಗೆ ಅಷ್ಟು ತಲ್ ಕೆಡಿಸಿಕೊಳ್ತಾ ಇರಲಿಲ್ಲ. ಅವಳು ಯಾವ ಸುಖಕ್ಕೂ ಆಸೆ ಪಟ್ಟವಳೇ ಅಲ್ಲ. ನನಗೆ ಗೊತ್ತಿದ್ದಂಗೆ ಅಮ್ಮ ಅಂದ್ರೆ ಅವಳಿಗೆ ಜೀವ. “ನಾವು ಕೆರಿಯರ್‌ ಸ್ಟಾರ್ಟ್‌ ಮಾಡಿದಾಗ ಕೊಲಿಗ್ಸ್ ಎಲ್ಲಾ ಹೇಳಿದ್ವಿ, ಇಷ್ಟು ದಿನ ಚೆನ್ನಾಗಿ ನೋಡಿಕೊಂಡಿದೀಯಾ… ಇನ್ನು ನಿಮ್ಮಮ್ಮನ್ನ ಯಾವುದಾದರೂ ಆಶ್ರಮಕ್ಕೆ ಸೇರಿಸು, ತಿಂಗಳಿಗೆ ಇಷ್ಟು ಹಣ ಅಂತ ಕೊಡು, ಆಗಾಗ ಹೋಗಿ ನೋಡು, ಎಂದೆಲ್ಲಾ ಹೇಳಕ್ಕಾಗಲ್ಲ. ಅವರೂ ಕೈಬಿಟ್ಟು ಹೊರಟರೆ ಇನ್ಯಾರು ದಿಕ್ಕು? ಇಷ್ಟು ದಿನ ಕಷ್ಟ ಪಟ್ಟಿದ್ದೀಯಾ ನಿನಗೇ ಅಂತ ಪರ್ಸನಲ್ ಲೈಫ್‌ಬೇಕಲ್ವಾ? ಯಾಕೆ ಇಷ್ಟ ಆಗಲ್ವಾ…. ಎಂದು ಕೇಳಿದೆ.

“ಅದಕ್ಕಳು ಎಲ್ಲವೂ ನಮ್ಮಮ್ಮನೇ. ನಾನಿರೋದೇ ನಮ್ಮ ಅಮ್ಮನಿಗೋಸ್ಕರ ಎಂದಳು. ಅವಳಿಗೆ ಇರೋ ಒಳ್ಳೆ ಪೊಸಿಶನ್‌, ಬ್ಯೂಟಿಗೆ ಬೇರೆ ಯಾರಾದ್ರೂ ಆಗಿದ್ರೆ ಇದೆಲ್ಲಾ ಫ್ಯಾಕ್ಟ್ ಅಂದ್ಕೊಂಡು ತಮಗೆ ಬೇಕಾದ ಹಾಗೆ ಇದ್ದು ಬಿಟ್ಟಿರೋರು. ಆದರೆ ವಿನುತಾ ಅಪರೂಪದಲ್ಲಿ ಅಪರೂಪ,” ಎನ್ನುತ್ತಾ ಹನಿಗಣ್ಣಾದಳು ಭವ್ಯಾ.

ಮತ್ತೆ ಮಾತು ಮುಂದುರಿಸುತ್ತಾ, “ನಿಮ್ಮ ಹಾಗೆ ನನಗೂ ವಿನುತಾ ಬಗ್ಗೆ ಚಿಂತೆ ಇದೆ. ಆದರೆ ಅವಳೆ ಮನಸ್ಸು ಸಡಿಲ ಮಾಡಬೇಕು,” ಎಂದು ತನಗನ್ನಿಸಿದ್ದನ್ನು ಹೇಳಿದಳು.

ಯಾರೂ ಕೇಳಿಸಿಕೊಳ್ಳಬಾರದು ಎಂದು ಭವ್ಯಾ ಅಂದುಕೊಂಡಿದ್ದಳೋ ಅದನ್ನೆಲ್ಲಾ ವಿನುತಾ ಅಚಾನಕ್‌ ಆಗಿ ಕೇಳಿಸಿಕೊಂಡಳು, `ಕಳೆದು ಹೋದ ಅಮ್ಮ ಸಿಕ್ಕಿದ್ದೆ ಸಾಕಲ್ವ, ಇನ್ನೇನು ಬೇಕು,’ ಎಂದು ತನಗೇ ತಾನೇ ಸಮಾಧಾನ ಮಾಡಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುವಂತಾದರೂ ತಾನೇ ಆರಿಸಿಕೊಂಡ ಜೀವನ ಮಾರ್ಗ ಅವಳಿಗೆ ನೆಮ್ಮದಿ ನೀಡಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ