ಗರ್ಭಾವಸ್ಥೆ ಎಂತಹ ಒಂದು ಸಮಯವೆಂದರೆ, ಆ ಅವಧಿಯಲ್ಲಿ ಅವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಚೆನ್ನಾಗಿ ಆರೈಕೆ ಮಾಡಬೇಕಿರುತ್ತದೆ. ಗರ್ಭಿಣಿಯೊಬ್ಬಳು ಏನನ್ನು ಸೇವಿಸುತ್ತಾಳೆ, ಅವಳ ಜೀವನಶೈಲಿ ಹೇಗಿದೆ ಎನ್ನುವುದು ಆಕೆಯ ಗರ್ಭಾವಸ್ಥೆ ಹಾಗೂ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಕೋವಿಡ್ ಪ್ರತಿಯೊಬ್ಬ ವ್ಯಕ್ತಿಯ ಜೀವನದ ದಿಕ್ಕು ದೆಸೆಯನ್ನು ಬದಲಿಸಿಬಿಟ್ಟಿದೆ. ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಾ ಹೊರಟಿದೆ. ಗರ್ಭಿಣಿಯರಿಗೆ ಇದರ ಅಪಾಯದ ಸಾಧ್ಯತೆ ಹೆಚ್ಚು. ಅಂದಹಾಗೆ ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕಾದ ಅಗತ್ಯ ಇರುತ್ತದೆ. ಆದರೆ ಕೊರೋನಾದ ಇಂದಿನ ದಿನಗಳಲ್ಲಿ ಅವರು ಹೊರಗೆ ಹೋಗುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ, ಗರ್ಭಿಣಿಯರು ಮನೆಯಿಂದ ಹೊರಗೆ ಹೋಗದಿರಲು ಸ್ತ್ರೀ ರೋಗ ತಜ್ಞರು ಅವರಿಗೆ ಆನ್ ಲೈನ್ ವೀಡಿಯೋ ಕನ್ಸ್ಟೀಶನ್ ಮುಖಾಂತರ ಸಲಹೆ ನೀಡಲಿದ್ದಾರೆ.
ಒಂದು ಒಳ್ಳೆಯ ಸುದ್ದಿಯೆಂದರೆ, ಕೊರೋನಾ ವೈರಸ್ ಪ್ಲಾಸೆಂಟಾ ತಲುಪುವುದಿಲ್ಲ. ಇದರರ್ಥ ಗರ್ಭ ಬೆಳೆಯುತ್ತಿರುವ ಭ್ರೂಣದ ಮೇಲೆ ವೈರಸ್ ನಿಂದ ಯಾವುದೇ ಅಪಾಯವಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಕೊರೋನಾ ಪಾಸಿಟಿವ್ ಮಹಿಳೊಬ್ಬಳು ಅತ್ಯಂತ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಇದರರ್ಥ ನೀವು ನಿಮ್ಮ ಆರೋಗ್ಯ ಹಾಗೂ ಗರ್ಭಾವಸ್ಥೆಯ ಕುರಿತಂತೆ ನಿರ್ಲಕ್ಷ್ಯ ತೋರಬಾರದು. ಹೀಗೆ ಮಾಡುವುದು ನಿಮಗೆ ಹಾಗೂ ನಿಮ್ಮ ಹುಟ್ಟು ಮಗುವಿಗೆ ಸರಿಯಾದುದಲ್ಲ.
ಒತ್ತಡದ ಪ್ರಮಾಣ ಹೆಚ್ಚಳ
ಹಾರ್ಮೋನ್ ಬದಲಾಣೆಯ ಕಾರಣದಿಂದ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಇಂತಹ ಸ್ಥಿತಿಯಲ್ಲಿ ಒತ್ತಡ, ಚಿಂತೆ, ಖಿನ್ನತೆ, ಕೋಪ, ಮೂಡ್ ಸ್ವಿಂಗ್ಸ್ ನಂತಹ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂತಹ ಸ್ಥಿತಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕಾದ ಅಗತ್ಯ ಇರುತ್ತದೆ. ಕೊರೋನಾದ ಅಪಾಯ ಜಾಸ್ತಿ ಎಂದು ತಿಳಿದು ಒತ್ತಡಕ್ಕೊಳಗಾಗುವುದು ಸಹಜ. ಆದರೆ ಗರ್ಭಿಣಿಯ ಮೇಲೆ ಈ ಒತ್ತಡ ಬಹಳ ದುಷ್ಪರಿಣಾಮ ಉಂಟು ಮಾಡಬಹುದು.
ಕೊರೋನಾ ವೈರಸ್ ನ ಸಂದರ್ಭದಲ್ಲಿ ಗರ್ಭಿಣಿಯು ಯಾವ ಯಾವ ಸಂಗತಿಗಳ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.
ಆರೋಗ್ಯ ಹೀಗಿರಲಿ
ಒಂದು ಒಳ್ಳೆ ರೊಟೀನ್ ಮಾಡಿಕೊಳ್ಳಿ : ನೀವು ಒಂದು ಒಳ್ಳೆಯ ರೊಟೀನ್ ಮಾಡಿಕೊಂಡು ಅದನ್ನು ತಪ್ಪದೇ ಪಾಲಿಸಿ. `ತಾಯಿ ಮಗು`ವಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಕಂದನ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬ ಬಗ್ಗೆ ತಿಳಿದುಕೊಳ್ಳಬಹುದು. ದಿನವಿಡೀ ಸಕ್ರಿಯರಾಗಿರುವುದರ ಮೂಲಕ ಆರೋಗ್ಯದಿಂದಿರಿ.
ಅಷ್ಟಿಷ್ಟು ವ್ಯಾಯಾಮ ಮಾಡಿ : ವ್ಯಾಯಾಮ ನಿಮ್ಮನ್ನು ಕೇವಲ ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಆರೋಗ್ಯದಿಂದಿಡುತ್ತದೆ. ಹೀಗಾಗಿ ಪ್ರತಿದಿನ ಮುಂಜಾನೆ ಬೇಗನೇ ಎದ್ದು ಒಂದಿಷ್ಟು ಹಗುರ ವ್ಯಾಯಾಮ ಮಾಡಿ. ಇದರಿಂದ ಮೆದುಳಿನಲ್ಲಿ ರಕ್ತ ಪ್ರವಾಹ ಸಮರ್ಪಕವಾಗಿರುತ್ತದೆ. ಹ್ಯಾಪಿ ಹಾರ್ಮೋನ್ಸ್ ಸ್ರಾವವಾಗಿ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ಒಂದಿಷ್ಟು ನಡಿಗೆ ಅಥವಾ ವ್ಯಾಯಾಮ ಸ್ತ್ರೀ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಆರೋಗ್ಯಕರ ಆಹಾರ : ನೀವು ಪೌಷ್ಟಿಕ ಆಹಾರದ ಜೊತೆಗೆ ದೈಹಿಕ ಸಕ್ರಿಯತೆಯ ಬಗೆಗೂ ಪೂರ್ತಿ ಗಮನಹರಿಸಬೇಕು. ನೀವು ಎಂತಹ ಆಹಾರ ಸೇವಿಸಬೇಕೆಂದರೆ, ಅದರಿಂದ ನಿಮ್ಮ ರೋಗನಿರೋಧಕ ಶಕ್ತಿ ಪ್ರಬಲವಾಗಬೇಕು. ಹಾರ್ಮೋನ್ ಮಟ್ಟದಲ್ಲಿ ಏರುಪೇರಿನ ಕಾರಣದಿಂದಾಗಿ ಒಮ್ಮೊಮ್ಮೆ ಅತಿಯಾಗಿ ಹಸಿವಾಗುತ್ತದೆ, ಮತ್ತೆ ಕೆಲವೊಮ್ಮೆ ಏನನ್ನೂ ತಿನ್ನುವ ಮನಸ್ಸಾಗುವುದಿಲ್ಲ. ವಾಸ್ತವ ಸಮಸ್ಯೆಯ ಬಗ್ಗೆ ಗಮನ ಕೊಡಿ.
ಸಮೃದ್ಧ ನಿದ್ರೆ : ಗರ್ಭಿಣಿಗೆ ಪ್ರತಿದಿನ 6-7 ಗಂಟೆಗಳ ಸಮೃದ್ಧ ನಿದ್ರೆ ಅತ್ಯವಶ್ಯ. ನಿದ್ರೆ ಪೂರ್ತಿ ಆಗುವುದರಿಂದ ನೀವು ಯಾವಾಗಲೂ ಆರೋಗ್ಯವಂತ ಹಾಗೂ ಸಕ್ರಿಯ ಎಂದು ಅನುಭವ ಪಡೆಯುವಿರಿ.
ವಿಶ್ರಾಂತಿ ಅವಶ್ಯ : ಗರ್ಭಿಣಿಯರು ಹೆಚ್ಚು ಕೆಲಸ ಮಾಡಬಾರದು. ಅದರಲ್ಲೂ ಹೆಚ್ಚು ಭಾರ ಎತ್ತಬಾರದು. ವ್ಯಾಯಾಮ ಕೂಡ ಹಿತಮಿತವಾಗಿರಲಿ. ಅದರಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಬಾರದು. ಯಾವ ಮಹಿಳೆಯರು ಅತಿಯಾಗಿ ಕೆಲಸ ಮಾಡುತ್ತಾರೊ ಹಾಗೂ ಹೆಚ್ಚು ಭಾರ ಎತ್ತುತ್ತಾರೊ, ಅವರಿಗೆ ಗರ್ಭಪಾತದ ಅಪಾಯ ಹೆಚ್ಚುತ್ತದೆ. ಹೀಗಾಗಿ ಯಾವುದೇ ನಿಟ್ಟಿನಲ್ಲೂ ನಿರ್ಲಕ್ಷ್ಯ ತೋರಬೇಡಿ. ಅಗತ್ಯವಿದ್ದಷ್ಟೇ ಕೆಲಸ ಮಾಡಿ.
ಸ್ವಚ್ಛತೆ ಅತ್ಯವಶ್ಯ : ಗರ್ಭಿಣಿಯರು ಸ್ವಚ್ಛತೆಯ ಬಗ್ಗೆ ಗಮನ ಕೊಡುವುದು ಅತ್ಯಂತ ಅವಶ್ಯ. ಕೊರೋನಾದ ಬಾಬತ್ತಿನಲ್ಲೂ ಇದು ಇನ್ನಷ್ಟು ಅಗತ್ಯವಾಗುತ್ತದೆ. ಹೀಗಾಗಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಕೊಡಿ.
ಗರ್ಭಿಣಿಯರು ಸಕಾರಾತ್ಮಕ ಯೋಚನೆಯನ್ನು ಹೊಂದಿರುವುದು ಮುಖ್ಯ. ಅದರಿಂದ ಅವರ ಭಾವನಾತ್ಮಕ ಸಮತೋಲನ ಕಾಯ್ದುಕೊಂಡು ಹೋಗಲು ಅನುಕೂಲವಾಗುತ್ತದೆ. ನಮ್ಮ ಮೂಡ್ ನಮ್ಮ ಆರೋಗ್ಯ ಮತ್ತು ಆಸುಪಾಸಿನ ವಾತಾವರಣವನ್ನು ಅವಲಂಬಿಸಿರುತ್ತದೆ. ಕೊರೋನಾ ಸಮಯದಲ್ಲಿ ನಿಮ್ಮ ಬಗ್ಗೆ ನೀವು ವಿಶೇಷ ಗಮನಕೊಡಿ. ಪೌಷ್ಟಿಕ ಆಹಾರದ ಸೇವನೆ ಹಾಗೂ ಸಕಾಲಕ್ಕೆ ಆಹಾರ ಸೇವನೆಯ ಅಭ್ಯಾಸ ನಿಮ್ಮನ್ನು ಆರೋಗ್ಯದಿಂದಿಡಲು ನೆರವಾಗುತ್ತದೆ. ಸ್ವಚ್ಛ ವಾತಾವರಣ ನಿಮ್ಮನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ಸಹಾಯವಾಗುತ್ತದೆ. ಸ್ತ್ರೀರೋಗ ತಜ್ಞರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸಿ.
– ಡಾ. ಸಾಗರಿಕಾ
ಏನನ್ನು ಮಾಡಬಾರದು?
ಎಲ್ಲಿಯವರೆಗೆ ಪರಿಸ್ಥಿತಿ ಸರಿಯಾಗಿ ಇರುವುದಿಲ್ಲವೋ, ಅಲ್ಲಿಯವರೆಗೆ ಮನೆಯಿಂದ ಹೊರಗೆ ಹೋಗಬಾರದು.
ಜಂಕ್ ಫುಡ್ ಹಾಗೂ ಹೆಚ್ಚು ಎಣ್ಣೆ ಇರುವ ಪದಾರ್ಥಗಳನ್ನು ಸೇವಿಸಬಾರದು.
ನಿಮಗೆ ಹಾಗೂ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಹಾನಿಯಾಗಬಹುದಾದ ಯಾವುದೇ ಆಹಾರ ಪದಾರ್ಥ ಸೇವಿಸಬೇಡಿ.
ತಲೆನೋವು, ಜ್ವರ, ಕೆಮ್ಮು ಅಥವಾ ಬೇರೆ ಯಾವುದೇ ಸಮಸ್ಯೆ ಇದ್ದಾಗ ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿ ಸೇವಿಸಬೇಡಿ.
ಜಿಗಿಯುವಂತಹ ಯಾವುದೇ ವ್ಯಾಯಾಮ ಮಾಡಬೇಡಿ.
ಜ್ವರ ಎಷ್ಟೇ ಪ್ರಮಾಣದಲ್ಲಿದ್ದರೂ ವೈದ್ಯರ ಸಂಪರ್ಕ ಮಾಡುವುದನ್ನು ಮರೆಯಬೇಡಿ.
ನಿಮ್ಮ ಸುತ್ತಮುತ್ತ ಕೊಳಕು ಹರಡದಂತೆ ನೋಡಿಕೊಳ್ಳಿ.
ಹೆಚ್ಚು ಹೊತ್ತು ನಿಲ್ಲುವುದು, ಮಲಗುವುದನ್ನು ಮಾಡಬೇಡಿ. ಇದರಿಂದ ಮಗುವಿನ ಬೆಳವಣಿಗೆ ಮೇಲೆ ತೊಂದರೆಯಾಗುತ್ತದೆ.
ಧೂಮಪಾನ, ಮದ್ಯಪಾನ ಮಾಡಬೇಡಿ.
ನಿಮ್ಮ ಗರ್ಭಾವಸ್ಥೆಯ ಬಗ್ಗೆ ಹೆಚ್ಚೆಚ್ಚು ಜನರ ಸಲಹೆ ಪಡೆಯಿರಿ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೈಯಕ್ತಿಕ ಅನುಭವದ ಮೇರೆಗೆ ಸಲಹೆ ಕೊಡಬಹುದು. ನೀವು ನಿಮ್ಮ ಪ್ರತಿಯೊಂದೂ ಸಮಸ್ಯೆಗೂ ವೈದ್ಯರನ್ನೇ ಸಂಪರ್ಕಿಸಿ.