ಆಹಾ! ಹೆಸರು ಹೇಳ್ತಿದ್ದ ಹಾಗೇ ಅದೆಷ್ಟೋ ಆನಂದ, ಅದೇನೋ ಖುಷಿ! ಅಡುಗೆ ಏನೇ ಆಗಿರಲಿ, ಉಪ್ಪು, ಹುಳಿ, ಖಾರಾ ಹೆಚ್ಚು ಕಮ್ಮಿ ಆಗಿದ್ರೂ ಪರವಾಗಿಲ್ಲ ಈ ಒಗ್ಗರಣೆ ಅನ್ನೋದು ಅಚ್ಚುಕಟ್ಟಾಗಿದ್ದರೆ ಎಲ್ಲವನ್ನೂ ಮುಚ್ಚಿಹಾಕ್ಬಿಡುತ್ತೆ. ಹದವಾದ ಪರಿಮಳ ಭರಿತ ಒಗ್ಗರಣೆಗಳಲ್ಲಿ ತರಹೇವಾರಿ ವಿಧಾನಗಳು. ಬರೀ ಬೇಳೆ ಸಾರಿಗೆ ಮನೆಯಲ್ಲಿ ಕಾಯಿಸಿದ ತುಪ್ಪದಲ್ಲಿ ಹಾಕೋ ಇಂಗಿನ ಒಗ್ಗರಣೆ, ಪಲ್ಯಕ್ಕೆ ಸಾಸುವೆ ಕಡಲೆಬೇಳೆ, ಉದ್ದಿನ ಬೇಳೆಯೊಟ್ಟಿಗೆ ಒಣ ಮೆಣಸಿನಕಾಯಿ ಒಗ್ಗರಣೆ, ಕೋಸಂಬರಿಗೆ ಸಾಸುವೆ, ಹಸಿ ಮೆಣಸಿನಕಾಯಿ ಆಗತಾನೇ ಕಿತ್ತು ಹಾಕೋ ಕರಿಬೇವಿನ ಜೊತೆಗೆ ಘಮಗುಟ್ಟೋ ಇಂಗಿನ ಒಗ್ಗರಣೆ, ತರಕಾರಿ ಹುಳಿಗೆ ಚುರ್ ಎನಿಸೋ ಸಾಸುವೆ ಒಗ್ಗರಣೆ. ಇನ್ನು ಮಜ್ಜಿಗೆಗೆ ಬಂದರೆ ಹದವಾಗಿ ಕಡೆದು ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಅಲಂಕರಿಸಿ, ಸಾಸುವೆ, ಕರಿಬೇವು, ಚಿಟಕಿ ಇಂಗಿನೊಟ್ಟಿಗೆ ಕುಡಿದರೆ ಊಟ ಪರಿಪೂರ್ಣ. ರುಚಿಕಟ್ಟಾದ ಊಟಕ್ಕೆ ಅದ್ಭುತ ಫಿನಿಶಿಂಗ್ ಕೊಡೋ ಒಗ್ಗರಣೆಯ ಮಹತ್ವದ ರುಚಿ ಬಲ್ಲವನೇ ಬಲ್ಲ. ತಿಂದವನೇ ಭಂಟ!
ಸಿಮ್ ಮೋಡ್ ನಲ್ಲಿ ಒಲೆಯ ಉರಿಯನ್ನು ಇಟ್ಟುಕ್ಕೊಂಡು ಒಗ್ಗರಣೆ ಹಾಕೋದೂ ಒಂದು ಕಲೆಯೇ. ಅಡುಗೆ ಎಲ್ಲಾ ಚಂದ ಮಾಡಿ ಒಗ್ಗರಣೆಯನ್ನು ಹಾಳು ಮಾಡಿಬಿಟ್ಟರೆ, ಅಡುಗೆಯ ಗಮ್ಮತ್ತೇ ಹಾಳಾಗಿ ಹೋಗುತ್ತೆ. ದಪ್ಪ ತಳದ ಪುಟ್ಟ ಕಬ್ಬಿಣದ ಬಾಣಲೆ ಉತ್ತಮ. ಇಲ್ಲಾ ತಾಮ್ರ ತಳದ ಸ್ಟೀಲ್ ಬಾಣಲೆಯಾದರೂ ಓ.ಕೆ. ಸ್ವಲ್ಪ ದಶಕಗಳ ಹಿಂದೆಕ್ಕೆ ಸರಿದರೆ ಸಾರಿನ ಸೌಟಲ್ಲೇ ಒಗ್ಗರಣೆ ಹಾಕುವವರನ್ನೂ ಕಂಡಿದ್ದೇವೆ. ಪರಿಕರಣೆಗಳು ಹಲವಾದರೂ ಘಮಲು ಮಾತ್ರ ಒಂದೇ! ಇಂಥ ಒಗ್ಗರಣೆಗೆ ಒಗ್ಗಿಹೋಗಿರುವ ಬಾಯಿಗೆ, ನಾಗರಪಂಚಮಿ ಬಂತೆಂದರೆ ಬೇಸರ! ಒಗ್ಗರಣೆಯಿಲ್ಲದ ಕೋಸಂಬರಿ, ಸಾರು, ಪಲ್ಯ ತಿನ್ನೋವಾಗ ಬಾಯಿಗೇನೋ ಕಳೆದುಕೊಂಡ ಭಾವ.
ಎಷ್ಟೋ ಕಡೆ ನಾವುಗಳು ಹೇಳಿರ್ತೀವಿ, ಬೇರೆಯವರು ಹೇಳೋದೂ ಕೇಳಿರ್ತೀವಿ. ಅಡುಗೆ ಸೂಪರ್ ಎಂದಾಗ ಒಗ್ಗರಣೆ ನಾನೇ ಹಾಕಿದ್ದಪ್ಪಾ ಎಂಬ ಹಾಸ್ಯದ ಹೊನಲೂ ಹೊರ ಬಂದಿರುತ್ತದೆ. ತರಹೇವಾರಿ ಒಗ್ಗರಣೆಯ ರೀತಿ ಜೀವನ ಹಾಸ್ಯ, ಕಷ್ಟ, ಸುಖ, ನೋವು, ನಲಿವುಗಳ ಸಮ್ಮಿಶ್ರಣ. ಸಂಘಜೀವಿ ಮಾನವ ಅನುಬಂಧಗಳಿಗೆ ಮಣಿಯುತ್ತಾನೆ. ಸಂಬಂಧಗಳ ಗಟ್ಟಿತನಕ್ಕೆ ಬೆಸೆಯುವಿಕೆಗೆ ಮಾನಸಿಕ ಒಗ್ಗರಣೆ ಹಾಕುತ್ತಾನೆ. ಹೋಲಿಕೆಗಳಿಗೆ ಮನಸು ವಾಲುತಿದೆ. ಇಂಥದೇ ಪರಿಕರಣೆಯಲ್ಲಿ ಒಗ್ಗರಣೆ ಹಾಕಿದರೆ ಹೇಗೆ ಅದರ ಗಮ್ಮತ್ತು ಹೆಚ್ಚುತ್ತದೋ ಹಾಗೆ ಸಂಸ್ಕಾರ ಎಂಬ ಪರಿಕರಣೆಯಲ್ಲಿ ಬೆಳೆದ ಮಕ್ಕಳ ಗಮ್ಮತ್ತು ಅಷ್ಟೇ ಉತ್ತಮವಾಗಿರುತ್ತದೆ. ಇಂತಹ ಮಕ್ಕಳು ಕುಟುಂಬದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಯಶಸ್ವಿಗಳಾಗಿರುತ್ತಾರೆ.
ತಮ್ಮ ಗುಣ ನಡತೆಗಳಿಂದ ಸಂಸಾರದ ಹಿಡಿತವನ್ನು ಇತರರ ಬಗೆಗಿನ ಕಾಳಜಿಯನ್ನು ಹಲವಾರು ರೀತಿಗಳಲ್ಲಿ ಹೊಂದಿರುತ್ತಾರೆ. ಸಾಸುವೆ, ಜೀರಿಗೆ ಹಾಕಿದರೂ ಒಗ್ಗರಣೆಯೇ. ಒಂದೊಂದು ಅಡುಗೆಗೂ ಒಂದೊಂದು ರೀತಿಯ ಒಗ್ಗರಣೆಯಿದ್ದ ಹಾಗೆ ವ್ಯಕ್ತಿ ವ್ಯಕ್ತಿಗಳಿಗೂ ಇದು ಭಿನ್ನವಾಗಿರುತ್ತದೆ. ಒಬ್ಬರದು ಸಾಸುವೆ, ಜೀರಿಗೆ ಹಾಕಿದ ಒಗ್ಗರಣೆಯಂತೆ ಸೌಮ್ಯ ಸ್ವಭಾವವಾದರೆ, ಮತ್ತೊಬ್ಬರದು ಮೆಣಸಿನಕಾಯಿ ಮಸಾಲಭರಿತ ಒಗ್ಗರಣೆಯಂತಹ ತಾಮಸಗುಣ, ಇನ್ನೊಬ್ಬರದು ಸಾತ್ವಿಕ ಗುಣ, ಮತ್ತೊಬ್ಬರದು ರಾಜಸ ಗುಣ. ಒಂದೊಂದಕ್ಕೂ ಒಂದೊಂದು ರೀತಿಯ ಫಿನಿಶಿಂಗ್ ಬೇಕು! ತಾನು ಬೆಳೆದು ಬಂದು ರೀತಿ, ನೋಡಿದ ಪರಿಸರ ಅದರೊಟ್ಟಿಗೆ ತನ್ನದೇ ಸ್ವಭಾವಗಳು ಮೈಗೂಡಿಸಿಕೊಂಡಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಎಲ್ಲ ತಾಯಿ ತಂದೆಯರಿಗೂ ಮುಂದೆ ಈ ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದೇ ಒಳ್ಳೇ ತುಪ್ಪದಲ್ಲಿ ಹುರಿದ ಬಾದಾಮಿ, ದ್ರಾಕ್ಷಿ, ಗೋಡಂಬಿಗಳ ಒಗ್ಗರಣೆಯಾಗಲೆಂದೇ ಉತ್ತಮ ನಡವಳಿಕೆಯನ್ನು ಆ ಮಗುವಿನಲ್ಲಿ ತುಂಬಿ ಬೆಳೆಸುತ್ತಾರೆ. ಅದರಂತೆ ಮಗು ಕೂಡ ಬೆಳೆಯುತ್ತದೆ. ಸರಿಹೋದರೆ ಎಲ್ಲ ಸರಿ. ಅದೇ ಹಣೆಬರಹ ಸರಿಯಿಲ್ಲದೆ ಹೋದರೆ ಇದರ ತದ್ವಿರುದ್ಧ ನಡೆಯೋ ಮಕ್ಕಳು ಸೃಷ್ಟಿಯಾಗಿ ಬಿಡುತ್ತಾರೆ. ಸಮಯದ್ದೋ, ಸಹವಾಸದ್ದೋ ವ್ಯತ್ಯಯಗಳಿಂದ ಖಾರ ಅತಿಯಾದ ಮಸಾಲೆ ಒಗ್ಗರಣೆಯಂತೆ ಜೀವನ ಮಾಡಿಕೊಂಡು ಬಿಡುತ್ತಾರೆ. ಹೊಟ್ಟೆ ಹಾಳು ಮಾಡಿಕೊಂಡು ಆರೋಗ್ಯ ಹದಗೆಡಿಸಿಕೊಳ್ಳೋ ಎಷ್ಟೋ ಉದಾಹರಣೆಗಳನ್ನೂ ನೋಡುತ್ತಿರುತ್ತೇವೆ. ಇಂತಹ ಸ್ಪೈಸಿ ಬದುಕು ತಮ್ಮನ್ನು ಹಾಳು ಮಾಡಿಕೊಳ್ಳೋದಲ್ಲದೇ ಸಮಾಜದ ಸ್ವಾಸ್ಥ್ಯವನ್ನೂ ಹದಗೆಡಿಸುತ್ತದೆ. ಹಾಗೆಯೇ ಒಗ್ಗರಣೆ ಹಾಕೋ ಜನರಿಗೂ ಏನೂ ಕಮ್ಮಿಯಿಲ್ಲ!
ಒಂದೆರಡು ಘಟನೆಗಳು ಹೀಗಿವೆ……
ಘಟನೆ 1 : ಅಣ್ಣ ತಮ್ಮ ಜಗಳವಾಡುತ್ತಾ ಇರುತ್ತಾರೆ. ಗಮನಿಸಿದ ತಾಯಿ ಬಂದು ಹಿರಿಯವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇಷ್ಟು ದೊಡ್ಡವನಾಗಿ ತಮ್ಮನೊಂದಿಗೆ ಜಗಳವಾಡ್ತೀಯ ಎಂದು ಹೊಡೆಯುತ್ತಾಳೆ. ಚೋಟುದ್ದ ತಮ್ಮ ಛಾನ್ಸ್ ಗೆ ಕಾಯುತ್ತಿದ್ದು ಹೌದಮ್ಮ ಅಣ್ಣ ಹೀಗೆ ಮಾಡಿದ, ಹಾಗೆ ಮಾಡಿದ ಎಂದು ತಾಯಿಯ ಕೋಪವನ್ನು ಮತ್ತಷ್ಟು ಹೆಚ್ಚು ಮಾಡುತ್ತಾನೆ. ತಾಯಿಯ ಕೋಪಕ್ಕೆ ಒಗ್ಗರಣೆ ಹಾಕೋ ಕೆಲಸ ಮಾಡುತ್ತಾನೆ.
ಘಟನೆ 2 : ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹೆಸರುಬೇಳೆ ಅಕ್ಕಿಯಿಂದ ತಯಾರಿಸಿದ ಪೊಂಗಲ್, ತುಪ್ಪದಲ್ಲಿ ಹೊಂಬಣ್ಣ ಬರುವವರೆಗೂ ಹುರಿದು ಹಾಕಿದ ಗೋಡಂಬಿ ಅದರ ಅಂದವನ್ನು ಹೆಚ್ಚಿಸಿರುತ್ತದೆ. ಸಾಸುವೆ, ಜೀರಿಗೆ, ಒಣಮೆಣಸು, ಕರಿಬೇವು ತುಪ್ಪದಲ್ಲಿ ಚುರ್ ಎನಿಸಿ ಹಾಕಿರುತ್ತದೆ. ರುಚಿಗೆ ಒಣಕೊಬ್ಬರಿ ಮೇಲೆ ಉದುರಿಸಿ ಅಲಂಕಾರಕ್ಕೆ ಕೊತ್ತಂಬರಿ ಸಿಂಗರಿಸಿದರೆ ರುಚಿಯಾದ ಆರೋಗ್ಯಕ್ಕೆ ಉತ್ತಮವಾದ ಖಾದ್ಯ ತಿನ್ನಲು ಹಿತ. ಮನೆಮಂದಿಯೆಲ್ಲಾ ಒಟ್ಟಾಗಿ ಕೂತು ಪೊಂಗಲ್ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇಗೇಣು! ಇದನ್ನು ಒಂದು ಸುಂದರ ಸಂಸಾರಕ್ಕೆ ಹೋಲಿಸಿಕೊಳ್ಳೋಣ! ಸೌಮ್ಯ, ಶಾಂತ ಸ್ವಭಾವಿರುವ ಈ ಕುಟುಂಬಕ್ಕೆ ರೌದ್ರ ರೂಪದ ಸೊಸೆ ಮುದ್ದು ಬಂದುಬಿಟ್ಟರೆ ದೇವರೇ ಗತಿ! ಸಂಸಾರದ ಅಂದಚೆಂದ ನಾಶವಾಗಿ ದಿನ ಗಲಾಟೆ ಕೂಗಾಟ ಹಾರಾಟ! ಶಾಂತಿ ನೆಮ್ಮದಿಗಳಿಂದ ದೂರ!
ಎಷ್ಟೋ ಕಡೆ ಪೋಷಕರು ಮಕ್ಕಳ ನಡುವೆಯೇ ಸಾಮರಸ್ಯ ಅನ್ನೋದು ಇರೋಲ್ಲ. ಅಪ್ಪ ಅಮ್ಮರದು ಒಂದಾದರೆ ಮಕ್ಕಳದೇ ಬೇರೆ ರೀತಿ. ಏತಿ ಅಂದ್ರೆ ಪ್ರೇತಿ ಅನ್ನೋ ಜಾಯಮಾನದವರು. ಇವರು ಉತ್ತರ ಅಂದರೆ ಅವರು ದಕ್ಷಿಣ. ಎಷ್ಟೋ ಕಡೆ ನೋಡಿರ್ತೀವಿ, ತಾಯಿ ತಂದೆ ಉತ್ತಮ ಸುಸಂಸ್ಕೃತರಾಗಿರುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದಿರುತ್ತಾರೆ. ಆದರೆ ಅವರ ಮಕ್ಕಳು ಮಾಡಬಾರದ ಕೆಲಸಗಳನ್ನು ಮಾಡಿ ಕುಟುಂಬಕ್ಕೆ ಕಳಂಕ ತರುವವರಾಗಿರುತ್ತಾರೆ. ಆಧ್ಯಾತ್ಮ, ಸಂಗೀತ, ಸಾಹಿತ್ಯ ಎನ್ನುವ ಎಷ್ಟೋ ತಾಯಿ ತಂದೆಯ ಮಕ್ಕಳು ಏನೇನೋ ಕೆಲಸ ಮಾಡಿ ಸಮಾಜದಲ್ಲಿ ಕೆಟ್ಟ ಮಕ್ಕಳು ಎನಿಸಿಕೊಂಡಿರುತ್ತಾರೆ. ಇಂತಹ ಮಕ್ಕಳಿಂದ ತಾಯಿ ತಂದೆ ಪಡುವ ಅವಮಾನ ಅಷ್ಟಿಷ್ಟಲ್ಲ. ಸಮಾಜದಲ್ಲಿ ಅವರು ಪಡೆದ ಗೌರವ ಘನತೆ ಇಂಥ ಮಕ್ಕಳಿಂದ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಆಗೆಲ್ಲ ಜನ ಹಾಕೋ ಒಗ್ಗರಣೆಯ ಮಾತಿನಿಂದ ಮಗದಷ್ಟು ನೋವು ವ್ಯಥೆ.
ಜೀವನದ ಹಾದಿಯಲ್ಲಿ ಸಾಗುವಾಗ ಬಂಧು ಬಳಗ ಸ್ನೇಹಿತರು ಕೆಲವೊಮ್ಮೆ ಪ್ರಯಾಣಿಸುವಾಗ ಸಿಗುವ ಕ್ಷಣಿಕ ಸ್ನೇಹ, ಪ್ರೀತಿ, ವಾತ್ಸಲ್ಯ, ನಂಬಿಕೆಗಳು ನಮ್ಮ ನೆನಪಿನಾಳದಲ್ಲಿ ಅಚ್ಚಳಿಯದೇ ಉಳಿದುಬಿಡುತ್ತದೆ. ನನ್ನ ಅಮ್ಮ ಅಪ್ಪನ ಜೊತೆ 1-2 ದಿನಗಳ ಕೋಲ್ಕತಾ ಪ್ರವಾಸಕ್ಕೆ ನಾನು ನನ್ನ ಮಗಳೂ ಜೊತೆಯಾಗಿದ್ದೆವು. ಕೆಲವಾರು ಜಾಗಗಳನ್ನು ನೋಡಿ ಕೋಲ್ಕತಾಗೆ ಎಂಟ್ರಿ ಕೊಡ್ತಿದ್ದ ಹಾಗೆ ನಮ್ಮ ಗೈಡ್ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದರು. ವೇಶ್ಯಾವಾಟಿಕೆಗೆ ಬಾಂಬೆಗಿಂತ ಕೋಲ್ಕತಾ ಮೊದಲ ಸ್ಥಾನ ಪಡೆದಿದೆ. ನಿಮ್ಮ ಮಕ್ಕಳು ನಿಮ್ಮ ಜೋಪಾನ. ಒಂದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ನಾವು ಗಮನಿಸುತ್ತಿರುತ್ತೇವೆ. ಆದರೂ ನಿಮ್ಮ ಹುಷಾರಲ್ಲಿ ನೀವಿರಿ ಎಂದಾಗಲಂತೂ ಎದೆ ಝಲ್ ಎಂದಿತು. ಆಗಿನ್ನೂ ನನ್ನ ಮಗಳು 8ನೇ ತರಗತಿ. ಇಂತಹ ವಿಷಯಗಳನ್ನು ಅವಳಿಗೆ ಹೇಳಲಾಗದು. ಅತಿಯಾದ ಜೋಪಾನದಿಂದಾಗಿ ಅವಳಿಗೋ ಇರಿಸುಮುರಿಸು, ಜೊತೆಗೆ ಕೋಪ! ಏನಮ್ಮಾ ನೀನು ನನ್ನ ಕೈಯ್ಯೇ ಬಿಡ್ತಿಲ್ಲ ನಾನೇನು ಓಡಿಹೋಗ್ತೀನಾ? ಎಂದು ತನ್ನ ಮುಗ್ಧತನ ತೋರುತ್ತಿದ್ದರೆ ನನಗೆ, ಅಜ್ಜಿ, ತಾತನಿಗೆ ಗಾಬರಿ. ದೇವಸ್ಥಾನದ ಬಳಿಯಂತೂ ಇಂತಹ ಜನರು ತುಂಬಾ ಇರುತ್ತಾರೆ. ಜೋಪಾನ ಜೋಪಾನ ಎಂದು ಪದೇ ಪದೇ ಹೇಳುತ್ತಿದ್ದ ಗೈಡ್. ಪುರಿ ಜಗನ್ನಾಥನ ದರ್ಶನವೇನೋ ಬಹಳ ಅದ್ಭುತವಾಗೇ ಆಯಿತು. ಭಗವಂತನ ಕೃಪಾಕಟಾಕ್ಷ ಪಡೆದು ಹೊರಬಂದೆವು. ಮೊಬೈಲ್ ಗಳನ್ನು ನಮ್ಮ ಗಾಡಿಯಲ್ಲೇ ಇಟ್ಟು ಖಾಲಿ ಕೈಯಲ್ಲಿ ಬಂದಿದ್ದೆವು. ಆ ರಶ್ ನಲ್ಲಿ ಅಮ್ಮ ಅಪ್ಪ ಒಂದೆಡೆಯಾದರೆ, ನಾನು ನನ್ನ ಮಗಳು ಮಗದೊಂದೆಡೆಯಾಗಿಬಿಟ್ಟೆವು. ನನಗೋ ಗಾಬರಿಯಾದರೆ ಮೈಯೆಲ್ಲಾ ಬೆವರಿ ಸುಸ್ತಾಗಿಬಿಟ್ಟೆ.
ಮಗಳನ್ನೋ ಅರೆಗಳಿಗೆ ಬಿಡೋ ಧೈರ್ಯ ಮನಸ್ಸೂ ಎರಡೂ ಇರಲಿಲ್ಲ. ನಮ್ಮ ಗ್ರೂಪ್ ನಲ್ಲಿ ಇದ್ದ ಒಬ್ಬ ಆಂಟಿಗೆ ವಿಧಿಯಿಲ್ಲದೆ ಭಯದಲ್ಲೇ, `ಆಂಟಿ ಒಂದು ನಿಮಿಷ ಇವಳನ್ನು ನೋಡ್ತಿರಿ. ವಾಶ್ ರೂಮ್ ಗೆ ಹೋಗಿ ಬರ್ತೀನಿ,’ ಎಂದೆ. ಜೀವ ಕೈಯಲ್ಲಿಟ್ಟುಕೊಂಡೇ ಸರಸರನೆ ಒಳಹೋಗಿ ಅವರಿದ್ದ ಜಾಗಕ್ಕೆ ಬಂದರೆ ಅವರು ಅಲ್ಲಿ ಇರಲೇ ಇಲ್ಲ! ಒಂದು ಕ್ಷಣ ಕುಸಿದು ಹೋದೆ. ಸಂಪರ್ಕಿಸಲು ಮೊಬೈಲ್ ಇಲ್ಲ. ಅಪ್ಪ ಅಮ್ಮ ಸಿಗ್ತಿಲ್ಲ. ಆಂಟಿ ಎಲ್ಲಿ ಹೋದರೆಂದು ತಿಳೀತಿಲ್ಲ. ಜಗನ್ನಾಥ ಕಾಪಾಡೆಂದು ಹುಚ್ಚಳಂತೆ ಅಲ್ಲೆಲ್ಲ ಹುಡುಕಾಡಿಬಿಟ್ಟೆ, ನಡುಗುತ್ತಿರುವ ಕಾಲುಗಳಲ್ಲಿ. ಯಾರನ್ನಾದರೂ ಕೇಳೋಣವೆಂದರೆ ಭಾಷೆಯ ತೊಂದರೆ, ಗಾಬರಿಯಲ್ಲಿ ಮಾತೂ ಹೊರಡುತ್ತಿಲ್ಲ. ಬರುವ ಅಲ್ಪಸ್ವಲ್ಪ ಮಾತುಗಳೂ ಬಾರದೆ ಪೀಕಲಾಟಕ್ಕೀಡಾಗುವಂತೆ ಮಾಡಿತು. ನೋಡೋಣವೆಂದು ಗೈಡ್ ನಿಗದಿಪಡಿಸಿದ ಜಾಗದಲ್ಲಿ ಹೋಗಿ ನೋಡಿದೆ ಅಲ್ಲೂ ಮಗಳು ಇರಲಿಲ್ಲ. ಹೃದಯವೇ ಬಾಯಿಗೆ ಬಂದಂತಾಯ್ತು. ಕಣ್ಣರಳಿಸಿ ನೋಡಿದರೆ ಆಂಟಿ ಇದ್ದರು, ಸ್ವಲ್ಪ ಉಸಿರು ಬಂದಿತು. ನಡುಗುವ ದನಿಯಲ್ಲೇ ಕೇಳಿದೆ ಮಗಳು? `ಅಯ್ಯೋ. ಯಾಕಿಷ್ಟು ಬೆವರಿರುವೆಯಮ್ಮ. ನಿನ್ನ ಅಮ್ಮ ಆಗ್ಲೇ ಕರ್ಕೊಂಡು ಹೋದ್ರಲ್ಲಾ….’ ಎಂದರು. ಅರ್ಧ ಜೀವ ಬಂದಿತು. ಈಗ ಅವರನ್ನು ಹುಡುಕುವ ಸರದಿ… ಸ್ವಲ್ಪ ಸಮಯದಲ್ಲೇ ಅವರೂ ಬಂದರು. ಮಗಳನ್ನು ಬಾಚಿ ತಬ್ಬಿದ್ದೆ, ನನ್ನ ನಾನೇ ಮರೆತಿದ್ದೆ.
ಮಗಳು ಸರ, ಬಳೆ ಕೇಳಿದಳು ಕೊಡಿಸಲು ಕರೆದುಕೊಂಡು ಹೋಗಿದ್ದೆ, ಎಂದಾಗ ಮನಸ್ಸು ನಿರಾಳವಾಯಿತು. ನಡೆದ ಸಂಗತಿ ತಿಳಿದು ಎಲ್ಲರೂ ನನ್ನ ಆತಂಕಕ್ಕೆ ಸ್ಪಂದಿಸಿ ಸಮಾಧಾನಿಸಿದರು. ಆ ಕ್ಷಣಕಾಲ ನೋಡಿಕೊಂಡ ಆಂಟಿ ಆದಮೇಲೆ ಅವರ್ಯಾರೋ ನಾವ್ಯಾರೋ ತಿಳಿಯೊಲ್ಲದು. ಆದರೆ ಆ ಹೊತ್ತಲ್ಲಿ ಆ ಕ್ಷಣದಲ್ಲಿ ನನ್ನ ಮಗಳನ್ನು ಜವಾಬ್ದಾರಿಯುತವಾಗಿ ನೋಡಿಕೊಂಡದ್ದು ಮಾತ್ರ ನನ್ನ ಮನಃಪಟಲದಲ್ಲಿ ಚಿರಸ್ಥಾಯಿ! ಆ ಕ್ಷಣದಲ್ಲಿ ನನ್ನ ಆತಂಕಕ್ಕೆ ಒಗ್ಗರಣೆ ಹಾಕಿ ಮತ್ತಷ್ಟು ಟೆನ್ಶನ್ ಕೊಟ್ಟ ಮತ್ತೊಬ್ಬ ಆಂಟಿಯನ್ನು ನಾನು ಈ ಕ್ಷಣಕ್ಕೂ ಎಂದಿಗೂ ಮರೆಯಲಾರೆ.
ಅಳಿಯ ಮನೆ ತೊಳೆಯಾ! ಎಷ್ಟು ಕಡೆ ಈ ರೀತಿಯಾಗಿ ಕೇಳಿರುತ್ತೀವಿ. ದುಡ್ಡಿನ ಆಸೆಗೆ, ಹೆಸರಿನ ಆಸೆಗೆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಮನೆಯ ಶಾಂತಿ ನೆಮ್ಮದಿಗಳನ್ನು ನಾಶ ಮಾಡೋ ಹುಡುಗರಿಗೇನೂ ಬರವಿಲ್ಲ. ಹುಡುಗಿಯ ಬಳಿ ಒಂದಿಷ್ಟು ದುಡ್ಡಿದೆ. ನನಗಂತೂ ಕೆಲಸ ಕಾರ್ಯವಿಲ್ಲ. ಅವಳ ದುಡ್ಡಲ್ಲೇ ಮಜಾ ಉಡಾಯಿಸಬಹುದೆಂದು ಉದ್ದೇಶದಿಂದ ಮದುವೆಯಾಗಿ ಮೊದಲ ರಾತ್ರಿಯೇ ಹುಡುಗಿಯ ಬಳಿ, `ಮನೆ ಯಾರ ಹೆಸರಲ್ಲಿದೆ? ಅದು ನಿನಗಾ ನಿನ್ನ ತಮ್ಮನಿಗಾ? ನಿನ್ನಪ್ಪ ಎಷ್ಟು ಹಾಟ್ ಕ್ಯಾಶ್ ಇಟ್ಟಿದ್ದಾರೆ? ಬ್ಯಾಂಕ್‌ನಲ್ಲಿ ಎಷ್ಟಿದೆ?’ ಎಂದೆಲ್ಲಾ ಕೇಳಿದಾಗ ಹುಡುಗಿಗೆ ಶಾಕ್. ಅಲ್ಲಿಯವರೆವಿಗೂ ಗೋಮುಖನಾಗಿದ್ದ ಅವನ ವ್ಯಾಘ್ರ ಮುಖ ಗೋಚರಿಸಿತು. ಅತಿಯಾಸೆಯ ಅವನೊಡನೆ ಬಾಳಲಾರೆನೆಂಬ ನಿಶ್ಚಯಕ್ಕೆ ಬಂದೇಬಿಟ್ಟಳು. ಜೀವನ ನರಕವಾಯಿತು. ತಾಯಿ ತಂದೆ ತಲೆ ಮೇಲೆ ಕೈಹೊತ್ತು ಕೂತರು. ಇಂಥ ಪರಿಸಿತ್ಥಿಗೆ ತಂದ ಆ ಮದುವೆ ದಲ್ಲಾಳಿ ಎರಡೂ ಕಡೆ ಅದೆಷ್ಟು ಒಗ್ಗರಣೆ ಹಾಕಿದ್ದನೋ ತಿಳಿಯಲಿಲ್ಲ. ಗಂಡಸು ಹೇಗೋ ಬದುಕ್ಕೋತ್ತಾನೆ, ಹೆಣ್ಣು ಮಗಳ ಬಾಳು ಸೌಂದರ್ಯಕ್ಕೆ ಮಾರುಹೋದ ಹುಡುಗಿ, ಅವನ ಬಡಾಯಿಯ ಮಾತುಗಳಿಗೆ ಸೋತು ಹೋಗಿದ್ದಳು. ಮನೆಯವರೆಲ್ಲರ ಮಾತನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆಯಾಗೇ ಬಿಟ್ಟಳು. ಎಷ್ಟು ದಿನ ಮುಖವಾಡ ಹಾಕಿ ಬದುಕಲು ಸಾಧ್ಯ? ಒಂದಿನ ಅದು ಕಳಚಲೇ ಬೇಕು. ಅವನ ಜೊತೆ ಏಗಿ ಏಗಿ ಆ ಹೆಣ್ಣುಮಗಳು ಸೋತು ಸೊರಗಿ ಹೋಗಿದ್ದಳು. ತಾಯಿ ತಂದೆ ಮನೆಗೆ ಸೋತ ಮುಖ ಹೊತ್ತು ಬರಲಾಗದೇ ಹಿಂಸೆ ಅನುಭವಿಸುತ್ತಿದ್ದಳು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ ಅವಳಿಗೆ ಕಷ್ಟ ಕಾರ್ಪಣ್ಯಗಳೇ ಬೆಟ್ಟವಾಯಿತು. ಯಾರ ಬಳಿಯೂ ತನ್ನ ದುಃಖವನ್ನು ಹೇಳಿಕೊಳ್ಳಲಾಗದೆ ಕೊರಗಿದಳು. ಅತ್ತೆ ಮನೆಯವರ ಹಿಂಸೆ ತಾಳಲಾಗದೆ ಸಾವಿಗೆ ಶರಣಾದಳು. ಸ್ನೇಹಿತರು ಹಾಕುತ್ತಿದ್ದ ಆ ಒಗ್ಗರಣೆಯ ಮಾತುಗಳಿಂದ ಅಂಥವನನ್ನು ಪ್ರೀತಿಸಿ ಮದುವೆಯಾಗಿ ಜೀವವನ್ನೇ ನರಕವನ್ನಾಗಿಸಿಕೊಂಡ ಇಂಥ ಹೆಣ್ಣುಮಕ್ಕಳು ನಮ್ಮ ನಿಮ್ಮ ನಡುವೆ ಎಷ್ಟಿಲ್ಲ?
ನಾವು ಚಿಕ್ಕವರಿರುವಾಗ ನನ್ನಜ್ಜಿ ನಮಗೆಲ್ಲಾ ತಮಾಷೆಯ ಕಥೆಯೊಂದನ್ನು ಹೇಳ್ತಿದ್ರು. ನಮಗೆ ಅದನ್ನು ಕೇಳೋದು ಅಂದ್ರೇನೆ ಖುಷಿ. ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಮಾವ ಪ್ರೀತಿಯಿಂದ ಹತ್ತಿರ ಕರೆದು ಹೇಳ್ತಾರಂತೆ…. `ಮಗೂ ನನಗೆ ಊಟ ಆದ್ಮೇಲೇ ಬಾಯಿ ಒಗ್ಗರಣೆ ಅಭ್ಯಾಸ. ನಾಲ್ಕು ಗಂಟೆ ಹೊತ್ತಿಗೆ ಮರೆಯದೇ ನನಗೆ ದಿನ ಕೊಡಮ್ಮಾ,’ ಎಂದದ್ದೇ ತಡ ಸೊಸೆ ಮುದ್ದು ಅಣಿಯಾದಳು. ಊಟವೆಲ್ಲ ಮುಗಿದು ಮಾವ ಶಯನಾವಸ್ಥೆಗೆ ಹೋಗಿದ್ದರು. ಗಡಿಯಾರವನ್ನೇ ನೋಡುತ್ತಿದ್ದು 4 ಗಂಟೆ ಹೊಡೀತಿದ್ದ ಹಾಗೆ ಅಡುಗೆ ಮನೆಗೆ ಹೋಗಿ ತನಗೆ ತೋಚಿದ ಒಗ್ಗರಣೆಯನ್ನು ಹಾಕಿ ತಂದಳು. ಬಾಯಿ ಬಿಟ್ಟುಕೊಂಡು ಗಾಢ ನಿದ್ದೆಯಲ್ಲಿದ್ದ ಮಾವನ ಬಾಯಿಗೆ ಹಾಕಬೇಕೆನ್ನುಷ್ಟರಲ್ಲಿ ಅತ್ತೆ ಬಂದರು…. ಸಧ್ಯ! ಮುಂದಿನದು ಸೆನ್ಸಾರ್!
ಜೀವನದಲ್ಲಿ ಒಗ್ಗರಣೆ ರುಚಿ ಅಂದ ಹೆಚ್ಚಿಸುವ ಫಿನಿಶಿಂಗ್ ಆಗಿರಲಿ. ಅಡುಗೆಗೆ ಹೊಂದುವಂಥಹದ್ದಾಗಿರಲಿ. ಪರಿಕರಣೆ ಸರಿಯಾದದ್ದೇ ಸಿಗಲಿ. ಮಸಾಲಭರಿತ ಒಗ್ಗರಣೆಗಳು ಕಡಿಮೆಯಾಗಲಿ. ಸಿಹಿ ಖಾರಗಳು ಸಮನವಾಗಿರಲಿ. ಉತ್ತಮ ಒಗ್ಗರಣೆ ಹಾಕಿ ಬೆಳೆಸುವ ಮಕ್ಕಳು ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿಗಳ ಹಾಗೆ ಬೆಳೆಯಲಿ. ನಮ್ಮ ಮನೆಯ ಹೆಣ್ಣು ಮಗು ಮಗದೊಂದು ಮನೆಯ ಬೆಳಗಲು ಹೋದಾಗ ಸನ್ನಡತೆಯ ಸುಸಂಸ್ಕೃತ ಮಗುವಾಗಿರಲಿ. ಮಗನಿದ್ದರೆ ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರೆಂದು ಭಾವಿಸುತ್ತಾ ಆ ಮನೆಗೂ ಮಗನಾಗಿರಲಿ. ಸದಾಶಯ ನಮ್ಮದಾಗಿದ್ದರೆ ಎಲ್ಲ ಒಳ್ಳೆಯದೇ ಆಗಿರುತ್ತದೆ. ಒಗ್ಗರಣೆ ಹಾಕುವ ಜನರೂ ರುಚಿಕರವಾದ ಅಚ್ಚುಕಟ್ಟಾದ ಒಗ್ಗರಣೆಯನ್ನೇ ಹಾಕಲಿ. ಗಬ್ಬು ಗಲೀಜು ಮಾಡುವ ಒಗ್ಗರಣೆ ಹಾಕದೆ ಒಳ್ಳೆಯ ಒಗ್ಗರಣೆ ಹಾಕುತ್ತಾ ಉತ್ತಮರಾಗಿರಲಿ!