ವಿಶ್ವವಿಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರಿಗೆ ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಲಭ್ಯವಾಗಿದ್ದು, ಈ ಪ್ರಶಸ್ತಿ ಪಡೆದ ಮೊಟ್ಟಮೊದಲ ಭಾರತೀಯ ಕಲಾವಿದ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ಬ್ರಿಟನ್ ನಲ್ಲಿ ದಿ ಫ್ರೆಡ್ ಡ್ಯಾರಿಂಗ್ಟನ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದಿದ್ದಾರೆ.

ದಕ್ಷಿಣ ಇಂಗ್ಲೆಂಡ್‌ನ ಡಾರ್ಸೆಟ್ ಕೌಂಟಿಯ ವೇಮೌತ್‌ನಲ್ಲಿ ಶನಿವಾರ ಪ್ರಾರಂಭವಾದ ಸ್ಯಾಂಡ್‌ವರ್ಲ್ಡ್ 2025 ಅಂತರರಾಷ್ಟ್ರೀಯ ಮರಳು ಕಲಾ ಉತ್ಸವದಲ್ಲಿ, ಮರಳು ಶಿಲ್ಪ ಕಲೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಟ್ನಾಯಕ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಕಟಿಸಲಾಗಿದೆ.

ಉತ್ಸವದಲ್ಲಿ ವೇಮೌತ್‌ನ ಮೇಯರ್ ಜಾನ್ ಒರೆಲ್ ಅವರು ಪಟ್ನಾಯಕ್ ಅವರಿಗೆ ಪ್ರಶಸ್ತಿ ಮತ್ತು ಪದಕವನ್ನು ಪ್ರದಾನ ಮಾಡಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ಇದೇ ಉತ್ಸವದಲ್ಲಿ ವಿಶ್ವ ಶಾಂತಿ ಸಂದೇಶದೊಂದಿಗೆ 10 ಅಡಿ ಎತ್ತರದ ಗಣೇಶನ ಮರಳು ಶಿಲ್ಪವನ್ನು ರಚಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ಪ್ರತಿಷ್ಠಿತ ಅಂತರರಾಷ್ಟ್ರೀಯ ಮರಳು ಕಲಾ ಉತ್ಸವ ಸ್ಯಾಂಡ್‌ವರ್ಲ್ಡ್ 2025 ರಲ್ಲಿ ಫ್ರೆಡ್ ಡ್ಯಾರಿಂಗ್ಟನ್ ಅವರ ಬ್ರಿಟಿಷ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದುದ್ದಕ್ಕೆ ಹಾಗೂ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ ಪಾತ್ರನಾಗಿರುವುದು ಅತಿ ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ