ಮನೆಯಸುತ್ತ ಕಾಂಪೌಂಡು,

ಗೇಟು ಭದ್ರ..

ಒಳಗಿರುವ ಮನಸುಗಳೇ

ಏಕೋ ಛಿದ್ರ ಛಿದ್ರ...!

ಬಂಧುಗಳೇ ಬಾರದ,

ಸ್ನೇಹಿತರೂ ಸೇರದ

ಮನೆಗಳ ಮುಂದೆ

ಸದಾ ಕಾವಲುಗಾರ...!

ಇಂದು ಮನೆಯಲ್ಲಿ

ಅನ್ನವೇ ಬೇಯುತ್ತಿಲ್ಲ,

ಮನಸುಗಳು ಮಾತ್ರ

ಕುದಿಯುತ್ತಿವೆಯಲ್ಲ...!

ಅಡುಗೆ ಮನೆ,

ಸದಾ ಖಾಲಿ ಖಾಲಿ ಇರುತ್ತೆ.

ಫೋನಿಂದ ಕೂತಲ್ಲಿಗೆ

ಊಟ ತಿಂಡಿ ಬರುತ್ತೆ...!

haveli 1

ಮನೆಗಳಾಗುತ್ತಿವೆ

ಮಹಡಿಗಳಿಂದ ಎತ್ತರ , ಎತ್ತರ...

ಮನಸ್ಸುಗಳೇ ಆಗುತ್ತಿಲ್ಲ

ಹತ್ತಿರ , ಹತ್ತಿರ...!

ಸಂತೋಷ ಏನೆಂಬುದಕ್ಕೆ

ಸಿಗುತ್ತಿಲ್ಲ ಉತ್ತರ...!

ಅಂದು...ಬಿಸಿಲು, ಮಳೆ,

ಚಳಿಗೆ ಮೈ ಒಗ್ಗಿತ್ತು,

ಮನೆ ತಣ್ಣಗಿತ್ತು ,

ಒಲೆ ಹೊಗೆಯಾಡುತ್ತಿತ್ತು ,

ಬಿಸಿನೀರ ಹಂಡೆ

ಹಬೆಯಾಡುತ್ತಿತ್ತು...!

ಕಣಜದ ತುಂಬಾ

ದವಸ ಧಾನ್ಯ ತುಂಬಿತ್ತು,

ಬಂಧು ಬಳಗದ

ನಡುವೆ ಅನುಬಂಧವಿತ್ತು..

ಎಲ್ಲರೊಟ್ಟಿಗೆ ಮನೆಯೂ

ನಗೆಯಾಡುತಿತ್ತು...!

ಮನೆ ಚಿಕ್ಕದಾದ್ರೂ,

ಮನಸು ಚೊಕ್ಕವಾಗಿತ್ತು...!

ಅಂದು ನನ್ನಜ್ಜ ಕಟ್ಟಿದ

ಮನೆಯಲ್ಲಿ ನಲಿವಿತ್ತು,

ಒಲವಿತ್ತು, ಸಂತಸದ ಸೆಲೆಯಿತ್ತು...!

luxurious villa with swimming pool at dusk

ಮುಖ್ಯ ಬಾಗಿಲು

ಚಿಕ್ಕದಿತ್ತು,

ತಲೆಬಾಗಬೇಕಿತ್ತು...

ಮಣ್ಣಿನ ಗೋಡೆ,

ಸಾರಿಸಿದ ನೆಲವಿತ್ತು

ಮಾಡು ಚಿಕ್ಕದಿತ್ತು,

ಬದುಕು ದೊಡ್ಡದಿತ್ತು,

ನೋವುಗಳಿದ್ದರೂ

ಬದುಕಿಗೆ ಬೆಲೆಯಿತ್ತು,

ಚಾಪೆಯಲಿ ಕಣ್ಣಿಗೆ

ಚೆಂದದ ನಿದ್ರೆಯಿತ್ತು...

ಅಂದು ಆಸ್ಪತ್ರೆಯ

ಹಂಗೇ ಇರಲಿಲ್ಲ

ಎಲ್ಲ ಸಮಸ್ಯೆಗಳಿಗೂ

ಮನೆಯಲ್ಲೇ ಮದ್ದಿತ್ತು

ಮಗುವೂ ಕೂಡ

ಮನೆಯಲ್ಲೇ ಹುಟ್ಟುತ್ತಿತ್ತು...

ಮದುವೆ ಕೂಡ

ಮನೆಯಲ್ಲೇ ನೆಡೆಯುತ್ತಿತ್ತು...

ಚಿತ್ರ ವಿಚಿತ್ರದ

ಛತ್ರವೇ ಬೇಕಿರಲಿಲ್ಲ...

ಕೆಲಸಕ್ಕೆ ಶ್ರದ್ಧೆ,

ದೇವರ ಮೇಲೆ

ನಂಬಿಕೆಯಿತ್ತು...

ಸಾವಿಗೂ ಸಹ

ಮನೆಯೇ

ಸಾಕ್ಷಿಯಾಗುತ್ತಿತ್ತು...

ಹಲವು ಮಕ್ಕಳು

ಹುಟ್ಟಿದ ಸಂತಸವಿತ್ತು

ಅವರ ಬಾಲ್ಯದ,

ಬದುಕಿನ ಸಂಭ್ರಮವಿತ್ತು....

ನೆಂಟರು ಬಂದರೆ,

ಹಬ್ಬದ ಸಡಗರವಿತ್ತು

ಕೆಲವು ಸಾವುಗಳ

ಸೂತಕವೂ ಇತ್ತು

ಸತ್ತ ಹಿರಿಯರ ನೆನಪು

ಅಚ್ಚಳಿಯದೇ ಉಳಿದಿತ್ತು...!

haveli

ಕಷ್ಟಗಳ ಗೆದ್ದ ಗೆಲುವಿನ

ಧ್ಯೋತಕವೂ ಇತ್ತು...

ಬದುಕಿನ ಸಾಧಕ

ಭಾದಕಗಳೆಲ್ಲವೂ ಇತ್ತು...

ಇಂದು ,ಮನೆ ರಾಜನಿಲ್ಲದ

ಅರಮನೆಯಂತೆ,

ಸಕಲ ಸವಲತ್ತು ಗಳಿರುವ

ದರ್ಬಾರಿನಂತೆ,

ನೆರೆ ಮನೆಯ ಹಂಗಿಲ್ಲದ

ಸೆರೆಮನೆಯಂತೆ

ಆದ್ರೂ ಎಲ್ಲರಿಗೂ

ಬರೀ  ದುಡ್ಡಿನದೇ

ಚಿಂತೆ ಚಿಂತೆ...

ಶುಭ ಕಾರ್ಯಗಳು,

ಸಂತೋಷ ಕೂಟಗಳು,

ಮನೆಬಿಟ್ಟು, ಹೋಟೆಲ್ಲುಗಳ

ಸೇರಿಕೊಂಡಿವೆ..

ಬಂಧುತ್ವ ಮಿತೃತ್ವಗಳು

ಬಂಧನದಲ್ಲಿವೆ...

ನೆಂಟರಿಷ್ಟರು ಮನೆಗೆ

ಬಂದರೆ, ಬರೀ ನಕ್ಕೂ

ನಗದೇ  ಕೋಣೆ

ಸೇರಿಕೊಳ್ಳುತ್ತಿದ್ದಾರೆ

ಮನೆ ಮಕ್ಕಳು....

ಸ್ನೇಹ, ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...!

ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...!

ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...!

ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯವಂತಿಕೆ ಮೇಲು...!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ