ನಿಮಗೆ ನಿಮ್ಮ ಮನೆಯಲ್ಲಿ ಸುಸ್ತು, ಸಂಕಟದ ವಾತಾವರಣದ ಬದಲು ಸಂತಸ ಖುಷಿಯ ವಾತಾವರಣ ಬೇಕೇ? ನಮ್ಮ ದೈನಂದಿನ ಜೀವನದಲ್ಲಿ ಲೈಟ್‌ಎಷ್ಟು ಮಹತ್ವಪೂರ್ಣ? ನಮ್ಮ ಮನೆಗಳಿಗೆ ಸೂಕ್ತ ಲೈಟಿಂಗ್ ವ್ಯವಸ್ಥೆ ನಿಜಕ್ಕೂ ಬೇಕೇ? ಹೌದು ಎಂದಾದರೆ ಏಕೆ?
ಇಂಟೀರಿಯರ್ ತಜ್ಞರು ಹಾಗೂ ವೈದ್ಯರು ಈ ಕುರಿತು ನೀಡುವ ಸಲಹೆ ಗಮನಿಸೋಣವೇ?
ಮನೆಯ ಯಾವ ಮೂಲೆಗೆ ಹೋದರೂ ನಿಮಗೆ ಧಾರಾಳ ಸಕಾರಾತ್ಮಕ ಶಕ್ತಿಯ ಅನುಭೂತಿ ದೊರೆತರೆ, ನಿಮ್ಮ ಮೂಡ್ ಸದಾ ಉತ್ತಮವಾಗಿದ್ದು, ನಿಮಗೆ ರಿಫ್ರೆಶಿಂಗ್ ಫೀಲಿಂಗ್ ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಆಗ ನಿಮಗೆ ಅನಿಸದೆ ಇರದು. ಯಾವಾಗ ಇದು ತುಸು ಗೊಂದಲಮಯ ಅನಿಸುತ್ತೋ, ಆಗ ನೀವು ಇದನ್ನು `ಸಕಾರಾತ್ಮಕ ಶಕ್ತಿ’ಯ ಮೂಲ ಅಂದುಕೊಳ್ಳುವಿರಿ. ಮುಂದಿನ ಸಲ ಹೀಗನಿಸಿದಾಗ, ಅಗತ್ಯವಾಗಿ ನಿಮ್ಮ ಮನೆಯ ಲೈಟಿಂಗ್ ವ್ಯವಸ್ಥೆ ಕಡೆ ಕಣ್ಣು ಹಾಯಿಸಿ.
ಕೋಣೆಗಳಲ್ಲಿ ಬೆಳಕಿನ ಪ್ರಭಾವ
ಮನೆಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರದಿದ್ದರೆ, ಆಗ ನಾವು ಬಲವಂತವಾಗಿ ಕಣ್ಣರಳಿಸಿಕೊಂಡು ಕೆಲಸ ಮಾಡುವುದರಿಂದ, ಕಣ್ಣಿಗೆ ಹೆಚ್ಚು ಒತ್ತಡ ಹೇರಿದಂತೆ, ಹಿಂಸಕಾರಕ ಎಂಬುದು ಗೊತ್ತಿರುವ ವಿಚಾರ. ಅದೇ ತರಹ ಕಣ್ಣು ಕೋರೈಸುವ ಬೆಳಕಿದ್ದರೆ ಅದರಿಂದಲೂ ಕಣ್ಣಿಗೆ ಹಾನಿ ತಪ್ಪಿದ್ದಲ್ಲ. ಈ 2 ಅತಿರೇಕದ ಸ್ಥಿತಿಗಳೂ ಕಣ್ಣಿಗೆ ಹಾನಿಕಾರಕ. ಈ ತರಹದ ದೋಷಪೂರಿತ ಲೈಟಿಂಗ್ ವ್ಯವಸ್ಥೆ ಡಿಸೈನರ್ ಮನೆಗಳಲ್ಲಿ ದೀರ್ಘಾವಧಿಗೆ ತುಂಬಿಕೊಂಡಿದ್ದರೆ, ನಮ್ಮ ಆರೋಗ್ಯಕ್ಕೆ ಇದರಿಂದ ಎಂದೂ ಲಾಭವಿಲ್ಲ. ಈ ಕಾರಣದಿಂದಲೇ ನಮ್ಮ ಮನೆ ಮತ್ತು ವರ್ಕಿಂಗ್ ಸ್ಪಾಟ್ ನಲ್ಲಿ ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ ಚೆನ್ನಾಗಿರಬೇಕು.
ಮನೆಯಲ್ಲಿ ಬೆಳಕಿನ ವ್ಯವಸ್ಥೆ
ಬೆಳಕಿನ ಪ್ರಮಾಣವನ್ನು `ಲಕ್ಸ್’ ಘಟಕದಲ್ಲಿ ಅಳೆಯುತ್ತಾರೆ. ಒಂದು ಮನೆಯಲ್ಲಿ ಪ್ರತಿ ಕೋಣೆಯಲ್ಲೂ ಇಂತಿಷ್ಟೇ ಲಕ್ಸ್ ನ ಬೆಳಕು ಇರಬೇಕು ಎಂಬ ನಿಯಮವಿದೆ. ಹಗಲು ರಾತ್ರಿಗಳ ವಿಭಿನ್ನ ಸಮಯಗಳಲ್ಲಿ ನಾವು ಮನೆಯಲ್ಲಿ ಮಾಡುವ ಕೆಲಸ ಆಧರಿಸಿ, ಅದಕ್ಕೆ ತಕ್ಕಂತೆ ಬೆಳಕಿನ ವ್ಯವಸ್ಥೆ ಮಾಡಿರಬೇಕು.
ಲೈಟಿಂಗ್ ಅರೇಂಜ್ ಮೆಂಟ್
ಇದರ ಬಗ್ಗೆ ಮಾತನಾಡುವಾಗ, ಇದರ ವಿಭಿನ್ನ ಘಟ್ಟಗಳು ನಮ್ಮ ಕಣ್ಣೆದುರು ಸುಳಿದಾಡುತ್ತವೆ. ಮನೆಯ ಮೂಲೆ ಮೂಲೆಯನ್ನೂ ಝಗಮಗಿಸುವಂಥ ಬೆಳಕಿನ ವ್ಯವಸ್ಥೆ ಇದ್ದರೆ ಮಾತ್ರ ಅದನ್ನು ಉತ್ತಮ ಲೈಟಿಂಗ್ ಅರೇಂಜ್ ಮೆಂಟ್ ಎಂದು ಜನ ಭಾವಿಸುತ್ತಾರೆ. ಪ್ರತಿ ಸಲ ಇದರಿಂದ ಉತ್ತಮ ಪರಿಣಾಮವೇ ದೊರಕುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ. ಸಾಮಾನ್ಯವಾಗಿ ನಾವು ಇದನ್ನು ಗಮನಿಸಲಿಕ್ಕೇ ಹೋಗುವುದಿಲ್ಲ ಅಥವಾ ನಮ್ಮ ಸುತ್ತಮುತ್ತಲಿನ ಲೈಟ್ ಅರೇಂಜ್ ಮೆಂಟ್ ಗೆ ನಾವು ಹೆಚ್ಚಿನ ಮಹತ್ವವನ್ನೂ ನೀಡುವುದಿಲ್ಲ. ಆದರೆ ಒಂದಂತೂ ನಿಜ, ಇದು ನಮ್ಮ ಮನಃಸ್ಥಿತಿ, ಆರೋಗ್ಯ, ದೃಷ್ಟಿ ಮತ್ತು ನಮ್ಮ ಸಾಮಾನ್ಯ ಜೀವನದ ಮೇಲೂ ಖಂಡಿತಾ ಗಾಢ ಪರಿಣಾಮ ಬೀರುತ್ತದೆ.
ಸಮರ್ಪಕ ಲೈಟ್ ಅರೇಂಜ್ ಮೆಂಟ್ ಖಾತ್ರಿ ಪಡಿಸುವುದೆಂದರೆ, ನೀವು ಮಾಡಬೇಕೆಂದಿರುವ ಯಾವುದೇ ಕೆಲಸಕ್ಕೆ ಅದನ್ನು ಸಲೀಸಾಗಿ, ಸುಸೂತ್ರವಾಗಿ ಮಾಡಲು ಉತ್ತಮ ಲೈಟಿಂಗ್ ಅರೇಂಜ್ ಮೆಂಟ್ ಬೇಕೇಬೇಕು.
ಲೈಟ್ ಅರೇಂಜ್ ಮೆಂಟ್ ಡಿಸೈನಿಂಗ್
ಮನೆಗಳ ಒಳಾಲಂಕಾರಕ್ಕೆ ತಕ್ಕಂತೆ ಬೆಳಕಿನ ವ್ಯವಸ್ಥೆ ವಿನ್ಯಾಸಗೊಳಿಸುವುದು ಒಂದು ಉತ್ತಮ ಕಲೆಯೇ ಸರಿ. ಇದು ಕೇವಲ ಮನೆಯ ಪ್ರತಿ ಕೋಣೆಗೂ ಬೆಳಕನ್ನು ಒದಗಿಸುವುದಷ್ಟೇ ಅಲ್ಲ, ಬದಲಿಗೆ ಶೇಡ್‌ಲೈಟಿನ ಒಂದು ಕ್ರಿಯಾತ್ಮಕ ಆಟ! ಇದಕ್ಕಾಗಿ ಮನೆಯ ಲೈಟಿಂಗ್ ನ ಲೇಯರಿಂಗ್ ಬಲು ರಚನಾತ್ಮಕ ಎನಿಸುತ್ತದೆ.
ಮೊದಲ ಪದರ ಆ್ಯಂಬಿಯೆಂಟ್ ಲೈಟ್ ಎನಿಸುತ್ತದೆ. ಇದನ್ನು ಸಾಮಾನ್ಯ ಅಥವಾ ನಮ್ಮ ಸುತ್ತಮುತ್ತಲೂ ಹರಡಿರುವ ಲೈಟ್ ಎಂದೂ ಹೇಳುತ್ತಾರೆ. ಇದನ್ನೇ ಡೌನ್ ಲೈಟ್ಸ್, ಲೀನಿಯರ್ ಲೈಟ್ಸ್, ಕೋಲ್ ಲೈಟ್ಸ್ ಅಳವಡಿಸಿ ಉತ್ತಮ ಬೆಳಕಿನ ವ್ಯವಸ್ಥೆ ಪಡೆಯಬಹುದು. ಅಡುಗೆ ತಯಾರಿ, ಕ್ಲೀನಿಂಗ್ ನಂಥ ನಮ್ಮ ದೈನಂದಿನ ಕೆಲಸಗಳಿಗೆ ಅಚ್ಚುಕಟ್ಟಾದ ಸಾಮಾನ್ಯ ವಿಸ್ತಾರಿತ ಬೆಳಕಿನ ವ್ಯವಸ್ಥೆಯ ಅಗತ್ಯವಿದೆ. ಇದನ್ನು ನಾವು ಟೇಬಲ್ ಟಾಪ್, ಗೋಡೆ, ಛಾವಣಿ, ನೆಲ ಮುಂತಾದ ಕಡೆ ಲೈಟ್ ವ್ಯವಸ್ಥೆ ಸಮರ್ಪಕವಾಗಿ ಹರಡುವಂತೆ ಮಾಡಬೇಕು.
ಎರಡನೇ ಪದರ ಆ್ಯಕ್ಸೆಂಟ್ ಲೈಟಿನದು. ಇದನ್ನು ಕಲಾಕೃತಿ, ಗೋಡೆಗಳ ವಿಶೇಷ ರಚನೆಗಳನ್ನು ಹೆಚ್ಚು ಪ್ರಕಾಶಮಾನವಾಗಿಸಲು ಬಳಸುತ್ತಾರೆ.
ಟಾಸ್ಕ್ ಲೈಟಿಂಗ್
ಅಧಿಕ ಫೋಕಸ್ಡ್ ಅರೇಂಜ್ ಮೆಂಟ್ ಆಗಿದ್ದು ಓದಿ ಬರೆಯಲು, ಇತರ ಕೆಲಸ ಕಾರ್ಯಗಳಿಗೆ ಸುಲಭವಾಗಲು ಅನುಕೂಲ ಮಾಡಿಕೊಡುತ್ತದೆ. ನಮ್ಮಲ್ಲಿ ಬಹುತೇಕರಿಗೆ ಇಷ್ಟವಾಗುವಂಥ ಜಾಗಗಳಲ್ಲಿ ಓದಿಬರೆಯುವ ಅಭ್ಯಾಸ ರೂಢಿಯಾಗಿರುತ್ತದೆ. ವಯಸ್ಕರಿಗೆ ಇದು ಒಂದು ಸ್ಟಡಿ ಕಾರ್ನರ್ ಅಥವಾ ಬೆಡ್ ಹರಡಲು ಜಾಗ ಮಾಡಿಕೊಂಡು, ಮಲಗುವ ಮುನ್ನ ಇಲ್ಲೇ ಓದುತ್ತಾರೆ. ಮಕ್ಕಳಿಗಂತೂ ಇದು ಉತ್ತಮ ಸ್ಟಡಿ ಡೆಸ್ಕ್ ಆಗಿದೆ. ನಮ್ಮ ಸ್ವಸ್ಥ ದೃಷ್ಟಿಗಾಗಿ, ಸರಿಯಾದ ಉತ್ತಮ ಹಾಗೂ ಸಮರ್ಪಕ ಪ್ರಮಾಣದ ಲೈಟಿಂಗ್ ವ್ಯವಸ್ಥೆ ಇರಬೇಕು. ಓದಿ ಬರೆದು ಮಾಡಲು ಲೈಟಿಂಗ್ ಅರೇಂಜ್ ಮೆಂಟ್ ನ ಅಗತ್ಯವಿರುತ್ತದೆ. ಇದಕ್ಕಾಗಿ ಕಂಗಳಿಗೆ ಹೆಚ್ಚು ಟ್ಯಾಕ್ಸ್ ಆಗದೆ, ಒತ್ತಡ ಬೀಳದೆ, ವ್ಯಕ್ತಿಗೆ ಗ್ಲೇರ್ ಫ್ರೀ ಲೈಟಿಂಗ್ ವ್ಯವಸ್ಥೆ ಸಿಗುವಂತೆ ಇರಬೇಕು.
ವಾರ್ಮ್ ಕೂಲ್ ಕಲರ್ಸ್
ನಮ್ಮ ಮನೆಗಳಲ್ಲಿ ವಾರ್ಮ್ ಕೂಲ್ ಕಲರ್ಸ್ ನ ಸಂಯೋಜನೆ ಇರಬೇಕು. ನಾವು ನಮ್ಮ ಲಿವಿಂಗ್ ರೂಂ ಬೆಡ್ ರೂಮುಗಳಲ್ಲಿ ವಾರ್ಮರ್ ಕಲರ್ ಟೋನಿನ ಡೆಕೊರೇಟಿವ್ ಲೈಟಿಂಗ್ ಫೀಚರ್ಸ್ ಅಳವಡಿಸಿ ಒಂದು ಶಾಂತ ವಾತಾವರಣ ಕಲ್ಪಿಸಬಹುದಾಗಿದೆ. ಅಡುಗೆಮನೆಗೆ ಕೂಲರ್ ಬಣ್ಣದ ಬೆಳಕಿನ ವ್ಯವಸ್ಥೆ ಚೆನ್ನಾಗಿ ಒಪ್ಪುತ್ತದೆ. ಬಾತ್ ರೂಮಿಗೆ ನಮಗೆ ಮಿಕ್ಸ್ ಕಲರ್ ಟೋನ್ ಬೆಳಕು ಇರಬೇಕು. ಹಾಸಿಗೆಗೆ ಮಲಗಲು ಹೋಗುವ ಮುನ್ನ, ಕೂಲರ್ ಕಲರ್ ನ ಲೈಟಿಂಗ್ ಗೆ ಸ್ವಿಚ್ ಆನ್‌ಆಗಬೇಕು. ವಿಭಿನ್ನ ಅಧ್ಯಯನಗಳ ಪ್ರಕಾರ, ಕೂಲರ್ ಕಲರ್ ಲೈಟಿಂಗ್ ನಮ್ಮ ಮೆದುಳಿಗೆ ಮೆಲಾಟಿನಿನ್ ಹಾರ್ಮೋನ್ ಲೆವೆಲ್ ನ್ನು ಕಂಟ್ರೋಲ್ ಮಾಡಲು ಸಹಕಾರಿ, ಇದು ನಮ್ಮನ್ನು ಹೆಚ್ಚು ಸಕ್ರಿಯವಾಗಿಡುತ್ತದೆ. ಬೆಡ್ ಲೈಟ್ ಯಾವಾಗಲೂ ಮಂದ ನೀಲಿ ಬೆಳಕಿನದಾಗಿರಬೇಕು.
ಒಟ್ಟಾರೆ ಹೇಳಬೇಕೆಂದರೆ, ಉತ್ತಮ ಲೈಟಿಂಗ್ ವ್ಯವಸ್ಥೆ, ಪ್ರತ್ಯಕ್ಷ ಅಥವಾ ಪರೋಕ್ಷ ರೂಪದಲ್ಲಿ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವಲ್ಲಿ ನಿಜಕ್ಕೂ ಬಲು ಸಹಕಾರಿ.
– ಪ್ರತಿನಿಧಿ