ಚಿತ್ರ: ಅಜ್ಞಾತವಾಸಿ.
ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ.
ನಿರ್ಮಾಣ: ಹೇಮಂತ್ ಎಂ. ರಾವ್.
ತಾರಾಂಗಣ: ರಂಗಾಯಣ ರಘು, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ಪಾವನಾ ಗೌಡ, ರವಿಶಂಕರ್ ಗೌಡ ಇತರರು.
ರೇಟಿಂಗ್: 3.5/5

ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಮರ್ಡರ್ ಮಿಸ್ಟರಿ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗ ತೆರೆಗೆ ಬಂದಿರುವ ನಿರ್ಮಾಪಕ ಹೇಮಂತ್ ಎಂ ರಾವ್ ಅವರ ಅಜ್ಞಾತವಾಸಿ ಸಿನಿಮಾ ಕೂಡ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ. ಆದರೆ ಈ ಚಿತ್ರ ಬೇರೆಯದ್ದೇ ಕಂಟೆಂಟ್ ಹೊಂದಿದೆ. ಮಲೆನಾಡಿನಲ್ಲಿ ನಡೆಯುವ ಕಥೆ, ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ರಿಪೋರ್ಟ್ ಆಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ? ಎನ್ನುವುದು ಸಿನಿಮಾದ ಮುಖ್ಯ ಸಾರಾಂಶ.

ಈ ಸಿನಿಮಾ ಒಂದು ಶಾಂತ ಸಮುದ್ರದಂತೆ ಪ್ರಾರಂಭವಾಗಿ ಮುಂದೆ ಸಾಗುತ್ತಾ ನಿಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಹೆಚ್ಚಿನ ಒತ್ತಡ ಮತ್ತು ಹಿಡಿತದ ಕ್ಷಣಗಳೊಂದಿಗೆ ಸಮುದ್ರದಾಳದ ನೀರಿನತ್ತ ಸಾಗಿದ ಅನುಭವ ಕೊಡುತ್ತದೆ. . 1995ರಲ್ಲಿ ಬಂದ ಅನಂತ್ ನಾಗ್ ನಟನೆಯ ‘ಬೆಳದಿಂಗಳ ಬಾಲೆ’ ಚಿತ್ರದಲ್ಲಿ ಒಂದು ಪಾತ್ರದ ಧ್ವನಿ ಮಾತ್ರ ಕೇಳುತ್ತದೆ, ಆದರೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಇಲ್ಲಿಯೂ ನಿರ್ದೇಶಕರು ಅಂಥದ್ದೇ ಒಂದು ಪಾತ್ರ ಸೃಷ್ಟಿ ಮಾಡಿದ್ದಾರೆ. ಅದನ್ನು ಚಿತ್ರದಲ್ಲಿ ಕಟ್ಟಿಕೊಟ್ಟ ನಿರ್ದೇಶಕರ ಜಾಣತನಕ್ಕೆ ಮೆಚ್ಚಲೇ ಬೇಕು.

ಅಜ್ಞಾತವಾಸಿ ಚಿತ್ರ ಕೇವಲ ಒಂದು ಥ್ರಿಲ್ಲರ್ ಅಲ್ಲ, ಇದರಲ್ಲಿ ನಾಟಕೀಯತೆ ಇದೆ. ಸಾಮಾನ್ಯ ಒಗಟುಗಳು ಮತ್ತು ತಲ್ಲೀನಗೊಳಿಸುವ ಕಥಾಹಂದರಗಳೊಂದಿಗೆ , ಇದರಲ್ಲಿ ಹಲವು ಪದರಗಳಿವೆ. ರಂಗಾಯಣ ರಘು ಅವರ ನಟನೆ ತುಂಬಾ ಸೂಕ್ಷ್ಮವಾಗಿದೆ ಮತ್ತು ಪಾತ್ರಕ್ಕೆ ಸೂಕ್ತವಾಗಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಅದ್ವೈತ ಗುರಮೂರ್ತಿ ಅವರ ಛಾಯಾಗ್ರಹಣದಲ್ಲಿ ಒಂದೇ ದೃಶ್ಯಗಳು ಎರಡೆರಡು ಬಾರಿ ಬರುತ್ತದೆ, ಆ ಸಮಯದಲ್ಲಿ ಕ್ಯಾಮೆರಾ ಆಂಗಲ್ ಬದಲಿಸಿದ್ದರೂ ಇದೊಂದು ಬೇರೆ ದೃಶ್ಯವಾಗಿ ತೋರಿಸುವ ಸಾಧ್ಯತೆ ಇತ್ತು.

ಇದು ಒಂದು ಆಸಕ್ತಿಕರ ಕ್ರೈಂ ಡ್ರಾಮಾ. ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ನಿಧಾನಗತಿಯ ನಿರೂಪಣೆಯ ಹೊರತೂ ಆಸಕ್ತಿದಾಯಕವಾಗಿಡುವಲ್ಲಿ ಯಶಸ್ವಿಯಾಗಿದ್ದಾರೆ. ಶಾಖಾಹಾರಿ ನಂತರ ಮಲೆನಾಡಿನ ಕಥೆ ಹೊಂದಿದ ಮತ್ತೊಂದು ಚಿತ್ರವಿದು. ಪಾವನಾ ಗೌಡ ,ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.. ಇಲ್ಲಿನ ಪಾತ್ರಗಳು ಕೇವಲ ಕಥೆ ಹೇಳುವುದಿಲ್ಲಪರದೆಯ ಮೇಲೆ ತೆರೆದುಕೊಳ್ಳುವ ಜೀವನದ ಒಂದು ಪುಟವಾಗಿ ನಿಮಗೆ ಅದು ಗೋಚರಿಸುತ್ತದೆ.

ಮಲಯಾಳಂ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾಗಳು ಬಂದರೆ ಜನರು ಅದನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದರು ಮತ್ತು ಕನ್ನಡಿಗರೂ ಅದನ್ನು ನೋಡಿ ಹೋಗಳುತ್ತಿದ್ದರು. ಈಗ ಕನ್ನಡದಲ್ಲೂ ಅಂಥದ್ದೊಂದು ಪ್ರಯೋಗ ನಡೆದಿದೆ. ನಿಮಗೆ ಯಾವ ಒತ್ತಡವಿಲ್ಲದೆ ಶಾಂತರೀತಿಯಲ್ಲಿ ಕುಳಿತು ಒಂದು ಉತ್ತಮ ಕ್ರೈಂ ಸಸ್ಪೆನ್ಸ್ ಚಿತ್ರ ನೋಡಬೇಕೆಂದುಕೊಂಡಿದ್ದರೆ ನೀವು ಅಜ್ಞಾತವಾಸಿ ಚಿತ್ರ ವೀಕ್ಷಿಸಬಹುದು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ