ಬಾಲಿವುಡ್​ನ ಖ್ಯಾತ ನಟಿ ಜಾನ್ಹವಿ ಕಪೂರ್ ಗೆ ಉದ್ಯಮಿಯೊಬ್ಬರು ಅಪರೂಪದ ಪರ್ಪಲ್ ಬಣ್ಣದ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟಕ್ಕೂ ಜಾನ್ಹವಿ ಕಪೂರ್​ಗೆ ಲ್ಯಾಂಬೊರ್ಗಿನಿ ಕಾರು ಉಡುಗೊರೆಯಾಗಿ ಕೊಟ್ಟ ಉದ್ಯಮಿ ಯಾರು? ಉಡುಗೊರೆ ಕೊಡಲು ಕಾರಣ ಏನು?

ಸಿನಿಮಾ ನಟ, ನಟಿಯರು ಮತ್ತು ರಾಜಕಾರಣಿಗಳಿಗೆ ಬಲು ದುಬಾರಿ ಉಡುಗೊರೆಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಸಿನಿಮಾ ನಟ-ನಟಿಯರು ಮತ್ತು ರಾಜಕಾರಣಿಗಳಿಗೆ ಹತ್ತಿರವಾಗಿರಲೆಂದು ಉದ್ಯಮಿಗಳು ದೊಡ್ಡ ದೊಡ್ಡ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. ಇದೀಗ ಖ್ಯಾತ ನಟಿ ಜಾನ್ಹವಿ ಕಪೂರ್ ಅವರಿಗೆ ಐದು ಕೋಟಿ ರೂಪಾಯಿ ಮೌಲ್ಯದ ಭಾರಿ ಐಶಾರಾಮಿ ಕಾರೊಂದು ಉಡುಗೊರೆಯಾಗಿ ಬಂದಿದೆ. ಈ ಉಡುಗೊರೆ ನೀಡಿರುವುದು ಅವರ ಬಾಯ್​ಫ್ರೆಂಡ್ ಅಂತೂ ಅಲ್ಲವೇ ಅಲ್ಲ. ಬದಲಿಗೆ ಒಬ್ಬ ಉದ್ಯಮಿ.

ಇತ್ತೀಚೆಗೆ ನೇರಳೆ ಬಣ್ಣದ ಲ್ಯಾಂಬೊರ್ಗಿನಿ ಕಾರೊಂದು ಜಾನ್ಹವಿ ಕಪೂರ್ ಮನೆಯ ಮುಂದೆ ನಿಂತಿತ್ತು. ಕಾರಿಗೆ ಗಿಫ್ಟ್​ಗಳಿಗೆ ರ್ಯಾಪ್ ಮಾಡಲಾಗಿತ್ತು. ಕಾರಿನ ಒಳಗೂ ಸಹ ದೊಡ್ಡ ಗಿಫ್ಟ್ ಬಾಕ್ಸ್ ಇಡಲಾಗಿತ್ತು. ಭಿನ್ನ ರೀತಿಯ ಬಣ್ಣದ ಐಶಾರಾಮಿ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಮೊದಲಿಗೆ ಜಾನ್ಹವಿ ಹೊಸ ಕಾರು ಖರೀದಿಸಿದ್ದಾರೆ ಎನ್ನಲಾಗಿತ್ತು. ಆದರೆ ಇದು ನಟಿ ಖರೀದಿಸಿದ್ದಲ್ಲ ಬದಲಿಗೆ ಅವರಿಗೆ ಉಡುಗೊರೆಯಾಗಿ ಬಂದ ಕಾರು ಎಂಬುದು ಗೊತ್ತಾಗಿದೆ.

ಜಾನ್ಹವಿಗೆ ಲ್ಯಾಂಬೊರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ ಸುಮಾರು ಐದು ಕೋಟಿ ರೂಪಾಯಿ. ಕಾರು ಉಡುಗೊರೆ ನೀಡಿರುವುದು ಅನನ್ಯಾ ಬಿರ್ಲಾ. ಆದಿತ್ಯ ಬಿರ್ಲಾ ಗ್ರೂಪ್​ನ ಚೇರ್​ಮನ್ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ ಈ ಅನನ್ಯಾ ಬಿರ್ಲಾ. ಅನನ್ಯಾ ಬಿರ್ಲಾ ಉದ್ಯಮಿ ಆಗಿರುವ ಜೊತೆಗೆ ಸಂಗೀತಗಾರ್ತಿಯೂ ಹೌದು. ಈಗಾಗಲೇ ಅವರು ತಮ್ಮ ಆಲ್ಬಂ ಒಂದನ್ನು ಸಹ ಬಿಡುಗಡೆ ಮಾಡಿದ್ದಾರೆ.

ಅನನ್ಯಾ ಮತ್ತು ಜಾನ್ಹವಿ ಕಪೂರ್ ಅವರು ಬಹಳ ವರ್ಷಗಳಿಂದಲೂ ಆತ್ಮೀಯ ಗೆಳೆತಿಯರು. ಇದೇ ಕಾರಣಕ್ಕೆ ಗೆಳತಿಗೆ ಭಾರಿ ದುಬಾರಿ ಉಡುಗೊರೆಯನ್ನು ಅನನ್ಯಾ ಬಿರ್ಲಾ ನೀಡಿದ್ದಾರೆ. ಅಂದಹಾಗೆ ಅನನ್ಯಾ ಬಿರ್ಲಾ ಉದ್ಯಮಿ ಆಗಿರುವುದರ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಸ್ವತಂತ್ರ್ಯ ಫೈನ್ಯಾನ್ಸ್’ ಹೆಸರಿನ ಕಾರ್ಯಕ್ರಮವೊಂದನ್ನು ನಡೆಸುತ್ತಿದ್ದು, ಇದರ ಮೂಲಕ ಅಗತ್ಯವಿರುವ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಇದರ ಜೊತೆಗೆ ಮಹಿಳೆಯರ ಪರವಾಗಿ ಇನ್ನೂ ಹಲವು ಕಾರ್ಯಗಳನ್ನು ಅನನ್ಯಾ ಬಿರ್ಲಾ ಮಾಡುತ್ತಾರೆ.

ಜಾನ್ಹವಿ ಕಪೂರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೂನಿಯರ್ ಎನ್​ಟಿಆರ್ ಜೊತೆಗೆ ‘ದೇವರ 2’ ನಲ್ಲಿ ನಟಿಸಲಿದ್ದಾರೆ. ಹಿಂದಿ ಸಿನಿಮಾಗಳಾದ ‘ಸನ್ನಿ ಸಂಸ್ಕಾರಿ ಕಿ ತುಳ್ಸಿ ಕುಮಾರಿ’, ‘ಪರಮ ಸುಂದರಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ