ಕನ್ನಡದ ಬಹು ಬೇಡಿಕೆಯ ನಟಿ ರಚಿತಾ ರಾಮ್. ಗುಳಿಕೆನ್ನೆ, ದೊಡ್ಡ ಕಂಗಳು, ಮುಖದ ತುಂಬಾ ನಗು, ಲಕ್ಷಣವಾದ ಮುಖದಿಂದಲೇ ಕಣ್ಸೆಳೆಯುವ ರಚ್ಚು ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ರಚಿತಾ ರಾಮ್ ಸಿನಿಮಾಗಳ ಜೊತೆಗೆ ಅವರ ಮದುವೆ ಬಗ್ಗೆಯೂ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಅಭಿಮಾನಿಗಳಂತೂ ರಚ್ಚು ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಅದಕ್ಕೀಗ ಉತ್ತರ ಸಿಕ್ಕಿದೆ.
ಹಿರಿತೆರೆ ಹಾಗೂ ಕಿರುತೆರೆಯಲ್ಲೂ ರಚಿತಾ ರಾಮ್ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. 32 ವರ್ಷದ ರಚ್ಚು ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬುದು ಅನೇಕರ ಪ್ರಶ್ನೆ. ಅವರು ಲವ್ ವಿಚಾರದಲ್ಲಿ ಯಾರ ಜೊತೆಯೂ ಸುದ್ದಿ ಆದವರಲ್ಲ. ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಸದಾ ಎದುರಾಗುತ್ತಲೇ ಇರುತ್ತದೆ. ಆದರೆ, ಇದಕ್ಕೆ ಅವರು ಉತ್ತರ ಕೊಡುವ ಗೋಜಿಗೆ ಎಂದಿಗೂ ಹೋದವರಲ್ಲ. ಈಗ ಅವರ ಮದುವೆ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಹಿತಿ ನೀಡಿದ್ದಾರೆ.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಈ ಬಗ್ಗೆ ಚರ್ಚೆ ಆಗಿದೆ. ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ, ಧನಂಜಯ್, ಮಲೈಕಾ ವಸುಪಾಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಈ ತಂಡ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಆಗಮಿಸಿದೆ. ಈ ವೇಳೆ ಬ್ಯಾಚುಲರ್ಸ್ ಜೀವನ ಹಾಗೂ ಮದುವೆ ಬಳಿಕದ ಜೀವನದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಒಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ.
‘ಮದುವೆ ಮೊದಲ ಜೀವನ, ಮದುವೆ ಬಳಿಕದ ಜೀವನ ಹೇಗಿದೆ’ ಎಂದು ಧನಂಜಯ್ ಅವರಿಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಡಾಲಿ, ‘ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು’ ಎಂದರು ಧನಂಜಯ್. ‘ಇಲ್ಲೇನೋ ಸಮಸ್ಯೆ ಇದೆ’ ಎಂದರು ಆ್ಯಂಕರ್ ನಿರಂಜನ್.
‘ಬ್ಯಾಚುಲರ್ ಜೀವನ ಒಂದು ಚಾಪ್ಟರ್, ಮದುವೆ ಬಳಿಕದ ಜೀವನ ಒಂದು ಚಾಪ್ಟರ್. ಮಗು ಆದಮೇಲೆ ಒಂದು ಚಾಪ್ಟರ್’ ಎಂದರು ರವಿಚಂದ್ರನ್.
‘ರಚಿತಾ ರಾಮ್ ಅವರು ಇನ್ನೂ ಬ್ಯಾಚುಲರ್ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದು ಡಾಲಿ ಧನಂಜಯ್ ಹೇಳಿದರು. ಆಗ ರವಿಚಂದ್ರನ್, ‘ಈ ವರ್ಷ ಅವರು ಮದುವೆ ಆಗುತ್ತಿದ್ದಾರೆ’ ಎಂದು ರವಿಚಂದ್ರನ್ ಘೋಷಣೆ ಮಾಡಿಯೇ ಬಿಟ್ಟರು. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಯಿತು.
ಇದನ್ನು ರವಿಚಂದ್ರನ್ ಅವರು ಹಾಸ್ಯಕ್ಕೆ ಹೇಳಿದ್ದಾರೋ ಅಥವಾ ನಿಜವನ್ನು ಹಾಸ್ಯದ ರೂಪದಲ್ಲಿ ಹೇಳಿದ್ದಾರೋ ಎಂಬ ಪ್ರಶ್ನೆ ಮೂಡಿರುವುದಂತೂ ದಿಟ. ನಿಜವೇ ಆಗಲೀ ಸುಳ್ಳೇ ಆಗಲಿ ರಚ್ಚು ಮದುವೆಯಾಗ್ತಿರೋದು ಅಭಿಮಾನಿಗಳಿಗೂ ಖುಷಿ ನೀಡಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ.