ಕನ್ನಡಿಗರ ವಿವಿಧ ಜನಾಂಗದ ಮದುವೆಗಳಲ್ಲಿ ಕೊಡವರ ಮದುವೆ ಸಂಪ್ರದಾಯ, ಉಡುಗೆ ತೊಡುಗೆ ಮತ್ತು ಒಡವೆಗಳು ತಮ್ಮದೇ ಆದ ವಿಶೇಷ ಪ್ರತ್ಯೇಕತೆಯನ್ನು ಹೊಂದಿವೆ. ಕೊಡವರ ವಧುವಿನ ಒಡವೆಗಳ ವಿನ್ಯಾಸ, ವೈವಿಧ್ಯತೆ ಮತ್ತು ಆ ಕುರಿತು ಹೆಚ್ಚಿನ ವಿವರಗಳನ್ನು ಸಂಪೂರ್ಣವಾಗಿ ತಿಳಿಯೋಣವೇ……..?
ಆಭರಣ ಜನಾಂಗವೊಂದರ ಪ್ರತಿನಿಧಿ ಎಂದರೆ ಅತಿಶಯೋಕ್ತಿಯಲ್ಲ. ಉಡುಗೆ ತೊಡುಗೆ ಎನ್ನುವ ಪದವೇ ವಸ್ತ್ರಕ್ಕೆ ಪೂರಕವಾದ ಆಭರಣಗಳು ಎನ್ನುವುದನ್ನು ಸಂಕೇತಿಸುತ್ತದೆ. ಈ ಆಭರಣಗಳಿಗೆ ಮನಸೋಲದ ನೀರೆಯರೆ ಇಲ್ಲ. ಪ್ರಾಚೀನ ನಾಗರಿಕತೆಯಿಂದ ಮೊದಲುಗೊಂಡು ಇಲ್ಲಿಯವರೆಗೆ ಚಿನ್ನಬೆಳ್ಳಿ, ಪ್ಲಾಟಿನಂ ಇನ್ನಿತರ ಲೋಹಗಳು, ಮಣ್ಣು, ಕಪ್ಪೆ ಚಿಪ್ಪು ಮುಂತಾದವನ್ನು ಉಪಯೋಗಿಸಿಕೊಂಡು ಆಭರಣಗಳನ್ನು ಧರಿಸುವುದಿದೆ.
ಹೆಣ್ಣಿನ ಅಲಂಕಾರಕ್ಕೆ ಶೋಭೆಯನ್ನು ತರುವುದು ಆಭರಣಗಳು. ಪೌರಾಣಿಕ ಚಿತ್ರಪಟಗಳಲ್ಲಿ ರಾಜ, ಮಹಾರಾಜರ ಕಾಲದಿಂದ ಇಲ್ಲಿಯವರೆಗೂ ಆಭರಣಗಳದ್ದೇ ಕಾರುಬಾರು. ಅದರಲ್ಲಿಯೂ ಮುದ್ದು ಮಕ್ಕಳ ಆಭರಣಗಳೆಂದರೆ ಕೇಳಬೇಕೇ? ಮದ್ರಾಸಿ, ಬೆಂಗಾಲಿ, ಕೇರಳಿ, ಕೊಡವ ಆಭರಣಗಳ ವಿಶಿಷ್ಟ ವಿನ್ಯಾಸ ಮದುವೆಯ ಸಂಭ್ರಮಕ್ಕೊಂದು ಕಳೆ ತಂದುಕೊಡುತ್ತದೆ.
ದಕ್ಷಿಣ ಕಾಶ್ಮೀರವೆಂದು ಕರೆಸಿಕೊಂಡಿರುವ ಕೊಡಗು ಪ್ರಕೃತಿ ಸೊಬಗಿನ ಇನ್ನೊಂದು ಹೆಸರು. ಪ್ರಕೃತಿ, ಸೌಂದರ್ಯ, ಶೌರ್ಯವನ್ನು ಸಂಕೇತಿಸುವ ಅಷ್ಟೇ ಮನೋಲ್ಲಾಸವನ್ನು ನೀಡುವ ಕೊಡವರ ಆಭರಣಗಳ ವಿನ್ಯಾಸ ಅನನ್ಯವಾಗಿರುತ್ತದೆ. ಕೊಡವರು ವಿಶೇಷವಾಗಿ ಗುರುತಿಸಿಕೊಂಡಿರುವುದು ವಿಶೇಷ ವಿನ್ಯಾಸದ ಸೀರೆ, ಉಡುಗೆ ಮತ್ತು ಅನುರೂಪದ ಆಭರಣಗಳ ತೊಡುಗೆಯಿಂದ. ಇವರ ಪತ್ತಾಕ್, ಜೋಮಾಲೆ, ಕೊಕ್ಕೆತಾತಿ, ಹವಳದ ಸರ, ಕೈಪಡಚ, ಕಾಲ್ಪಿಲ್ಲಿ, ಜೋಡಿ ಕಡಗ, ಒಂಟಿ ಕಡಗ, ಪೀಚೆಕತ್ತಿ ಇವುಗಳು ಪ್ರಕೃತಿಯಿಂದ ಸ್ಛೂರ್ತಿ ಪಡೆದವು ಆಗಿವೆ.
ಪತ್ತಾಕ್
ಕೊಡವರು ದೇವಕನ್ಯೆಯರೆನ್ನು ಪ್ರತೀತಿ ಇರುವ ಕಾರಣ ಅವರು ಮನುಷ್ಯರನ್ನು ಮದುವೆ ಆಗುವಂತಿಲ್ಲ ಎನ್ನುವಾಗ ನಾಗದೇವ ಪ್ರತ್ಯಕ್ಷನಾಗಿ ನನ್ನ ಆಶೀರ್ವಾದವಿದೆ ಎಂದು ಮದುವೆಯಾಗಲು ಬೆಂಬಲ ಕೊಟ್ಟ ಅನ್ನುವ ಪ್ರತೀತಿ ಇದೆ. ಇವರು ದೇವಕನ್ಯೆಯರೆನ್ನುವ ಕಾರಣಕ್ಕೆ ಗಂಡನಾಗುವವನು ಮಾಂಗಲ್ಯ ಕಟ್ಟುವ ಪದ್ಧತಿ ಇಲ್ಲ ಎಂದು ಐತಿಹ್ಯ ಹೇಳುತ್ತದೆ. ಆದರೆ ಆ ಕಾರಣಕ್ಕೆ ಮದುವೆಯ ಹಿಂದಿನ ದಿನ ಮದುಮಗಳ ತಾಯಿ `ಪತ್ತಾಕ್’ ಎನ್ನುವ ಆಭರಣವನ್ನು ಮಗಳ ಕೊರಳಿಗೆ ಧಾರಣೆ ಮಾಡುತ್ತಾರೆ. ಪತ್ತಾಕ್ ಅಂದರೆ ತಾಯಿಯ ಹತ್ತು ಸೌಶೀಲ್ಯ ಗುಣಗಳು ಮಗಳಿಗೂ ಬರಲಿ ಎನ್ನುವ ಆಶಯ ಇದರ ಹಿಂದಿದೆ.
ಪತ್ತಾಕ್ ಮಂಗಳಸೂತ್ರಕ್ಕೆ ಸಮಾನವಾಗಿರುತ್ತದೆ. ಸುಮಂಗಲಿಯ ಸಂಕೇತವಾಗಿರುವ ಪತ್ತಾಕ್ ನ್ನು ಸರಿ ಸುಮಾರು ಅರ್ಧ ಸವರನ್ ಇಲ್ಲವೇ ಅದಕ್ಕೂ ಹೆಚ್ಚಿನ ತೂಕದ ಲಕ್ಷ್ಮಿಕಾಸಿನ ಸುತ್ತ ಮಾಣಿಕ್ಯದ ಹರಳುಗಳನ್ನು ಜೋಡಿಸಿ, ಅದರ ಮೇಲೆ ನಾಗರ ಹೆಡೆ, ಅದರ ಬಾಯಲ್ಲಿ ಮುತ್ತು ಜೋತಾಡುವಂತೆ ಕಲಾತ್ಮಕವಾಗಿ ಮಾಡಿರುತ್ತಾರೆ. ಈ ಪದಕವನ್ನು ಹವಳ ಮತ್ತು ಚಿನ್ನದ ಕಲಾತ್ಮಕ ಗುಂಡುಗಳೊಂದಿಗೆ ಬರೀ ಕರಿಮಣಿ ಸರಕ್ಕೆ ಅಳವಡಿಸುತ್ತಾರೆ. ಕಪ್ಪು ಮಣಿ ಋಣಾತ್ಮಕತೆಯನ್ನು ಹೊಡೆದೋಡಿಸುತ್ತದೆ ಎಂಬ ವಿಚಾರ ಇಲ್ಲಿದೆ.
ಪವಳ ಸರ/ಮಾಲೆ
ಹವಳ ಮತ್ತು ಚಿನ್ನದ ಸಾದಾ ಗುಂಡುಗಳಿಂದ ಮಾಡಿರುವ ಆಭರಣವಿದು. ಇದು ಕೊಡವರ ವಿಶೇಷ ಆಭರಣ. ಪದ್ಧತಿಯಂತೆ ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಇಬ್ಬರೂ ಧರಿಸುತ್ತಾರೆ. ಮದುವೆ ಕಾರ್ಯಗಳೆಲ್ಲ ಸಂಪನ್ನವಾದ ನಂತರ ತಲಕಾವೇರಿ ಭೇಟಿ. ಆಮೇಲೆ ಮದುಮಕ್ಕಳು ಈ ಆಭರಣ ತೆಗೆಯಬಹುದು. ಅಲ್ಲಿಯವರೆಗೂ ಇದನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಹವಳ ಸಂತೋಷ ಫಲವತ್ತತೆಯ ಸಂಕೇತ ಎಂಬಂತೆ ಸಮರ್ಥ ಸಂತಾನಪ್ರಾಪ್ತಿಯ ಆಶಯ ಇದರ ಹಿಂದಿದೆ. ಕಂಕಣ ಧಾರಣೆಯ ಸಂಕೇತವಾಗಿರುವ ಹವಳದ ಸರವನ್ನು ಮದುವೆಯ ಹಿಂದಿನ ದಿನ ಮದುಮಕ್ಕಳ ತಾಯಂದಿರು ಮದುಮಕ್ಕಳಿಗೆ ಧಾರಣೆ ಮಾಡುತ್ತಾರೆ.
ಜೋಮಾಲೆ
`ಜೋಮಾಲೆ’ ಕೊಡವರ ವಿಭಿನ್ನ ಆಭರಣಗಳಲ್ಲಿ ಒಂದು. ಹೆಸರೇ ಹೇಳುವಂತೆ ಇದು ಜೋಲು ಅಂದರೆ ತೂಗುವ ಉದ್ದದ ಮಾಲೆ. ಸಾಧಾರಣವಾಗಿ 71 ಸೆಂ.ಮೀ. ಉದ್ದವಿರುತ್ತದೆ. ಚಿನ್ನದ ಗುಂಡುಗಳನ್ನು ಕಪ್ಪು ದಾರದಲ್ಲಿ ಒಂದು, ಎರಡು, ಮೂರು ಎಳೆಗಳಲ್ಲಿ ಅಳವಡಿಸುತ್ತಾರೆ. ಸುಖ ಮತ್ತು ದುಃಖಗಳನ್ನು ಸಮಾನವಾಗಿ ಹೊಂದಿಸಿಕೊಂಡು ಹೋಗುವುದರ ಸಂಕೇತವಾಗಿ ಈ ಸರವನ್ನು ಧರಿಸುತ್ತಾರೆ. ಇತ್ತೀಚೆಗೆ ತರಹೇವಾರಿ ಮಣಿಗಳಿಂದ ಚಿನ್ನದ ಗುಂಡುಗಳನ್ನು ಅಳವಡಿಸಿ ಧರಿಸುವುದು ಈಗಿನ ಫ್ಯಾಷನ್ ಆಗಿದೆ.
ಕೊಕ್ಕೆತಾತಿ
ತಾತಿ ಹೆಸರೇ ಹೇಳುವಂತೆ ಕತ್ತಿಗೆ ಹಾಕುವ ಆಭರಣ. ಅರ್ಧಚಂದ್ರಾಕೃತಿಯಲ್ಲಿರುವ ಪದಕ. ಸಾಧಾರಣ 65 ಸೆಂ.ಮೀ. ಇರುತ್ತದೆ. ಈ ಪದಕದ ಮಧ್ಯಭಾಗದಲ್ಲಿ ಕುಳಿತಿರುವ ಲಕ್ಷ್ಮಿ ವಿನ್ಯಾಸವಿರುತ್ತದೆ. ಆದರೆ ಎರಡೂ ಕಡೆ ಹಂಸದ ಚಿತ್ರವಿದ್ದು, ಕಡೆಗೆ ಕಡು ಗುಲಾಬಿ ಬಣ್ಣದ ಹರಳುಗಳು ಹಾಗೂ ಮುತ್ತುಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಪದಕದ ಮೇಲ್ಭಾಗದಲ್ಲಿ ನಾಗನ ವಿನ್ಯಾಸವಿರುತ್ತದೆ. ಇದನ್ನು ವಿಶೇಷ ಬಿಂದಿಗೆಯಾಕಾರದ ಚಿನ್ನದ ಗುಂಡುಗಳು ಇಲ್ಲಿ ಸಾದಾ ಚಿನ್ನದ ಸರಕ್ಕೆ ಅಳವಡಿಸಿ ವಿನ್ಯಾಸಗೊಳಿಸಿರುತ್ತಾರೆ. ಆಧುನಿಕ ಎಂಬಂತೆ ರೂಬಿ ಹರಳಿನ ಬದಲಾಗಿ ಇತರೆ ಬಣ್ಣದ ಹರಳುಗಳನ್ನು ಎರಡು ಮೂರು ಸಾಲುಗಳಲ್ಲಿ ಮುತ್ತುಗಳನ್ನು ಅಳವಡಿಸುತ್ತಾರೆ.
ಅಡ್ಡಿಕೆ
ಕತ್ತನ್ನು ತುಸು ಬಿಗಿಯಾಗಿ ಸುತ್ತುವರೆಯುವ ಆಭರಣ ಸಂಪೂರ್ಣ ಚಿನ್ನದಿಂದ ಮಾಡಲಾಗಿರುತ್ತದೆ. ಇದು ಶ್ರೇಷ್ಠತೆ ಮತ್ತು ಪಾವಿತ್ರ್ಯತೆಯ ಸಂಕೇತವಾಗಿರುತ್ತದೆ. ಕೊಡವ ಶೈಲಿಯ ಸೀರೆ ವಿನ್ಯಾಸಕ್ಕೆ ಒಪ್ಪುವ ಈ ಆಭರಣ, ದಕ್ಷಿಣ ಭಾರತೀಯ ಶೈಲಿಯನ್ನು ಹೋಲುತ್ತದೆ. ಲಕ್ಷ್ಮಿ ಕಾಸುಗಳಿಂದ ಮಾಡಿರುವ ಕಾಸಿನ ಸರವನ್ನೂ ಹಾಕಿರುತ್ತಾರೆ.
ಇದು ಎರಡು ಎಳೆ ಚಿನ್ನದ ಸರ. ಇದರಲ್ಲಿ ಯಾವುದೇ ಪದಕಗಳು ಇರುವುದಿಲ್ಲ. ಕೊಡವರ ಸೀರೆಗೆ ಹೊಂದುವ ವಿಶೇಷ ಸಂದರ್ಭದಲ್ಲಿ ಬೇರೆ ಆಭರಣಗಳ ಜೊತೆಯಿಲ್ಲದೆ ಬಿಡಿಯಾಗಿಯೂ ತೊಡುವ ಆಭರಣ.
ಜುಮುಕಿ
ದಕ್ಷಿಣ ಭಾರತೀಯ ಶೈಲಿಯಲ್ಲಿಯೇ ಇರುತ್ತದೆ. ಬರೀ ಚಿನ್ನ ಇಲ್ಲಿ ಮುತ್ತುಗಳಿಂದ ಅವುಗಳನ್ನು ವಿನ್ಯಾಸಗೊಳಿಸಿರುತ್ತಾರೆ. ಕೊಡವ ಸಂಪ್ರದಾಯದಂತೆ ತಲೆಗೆ ವಸ್ತ್ರ ಧರಿಸುವುದು ಇದೆ. ಇದು ಹೆಚ್ಚಾಗಿ ಕೆಂಪು ಬಣ್ಣದಲ್ಲಿ ಇರುತ್ತದೆ. ಜೊತೆಗೆ ಸೀರೆಗೆ ಒಪ್ಪುವ ಬಣ್ಣಗಳಲ್ಲಿಯೂ ಲಭ್ಯವಿವೆ. ಈ ವಸ್ತ್ರ ಧರಿಸಿದ ಮೇಲೆ ಕಿವಿಯ ಆಭರಣದಿಂದ ಕಿವಿಯ ಹಿಂಬದಿಯವರೆಗೂ ಎರಡು ಮೂರು ಎಳೆಗಳಲ್ಲಿ ಮಾಟಿಯನ್ನು ಧರಿಸುವುದಿದೆ.
ಕಡಗ
ಕೈ ಪಡಚ ಎಂಬ ಹೆಸರಿನಿಂದ ಕರೆಯಾಗುವ ಈ ಆಭರಣ ಕೊಡಗಿನಲ್ಲಿ ಸುಪ್ರಸಿದ್ಧ. ಕೂರ್ಗಿ ಕಡಗ ಎಂದೇ ಜನಜನಿತವಾಗಿರುವ ಈ ಕಡಗಗಳು ಒಂಟಿ ಜೋಡಿ ಅಲ್ಲದೆ ಮೂರು ನಾಲ್ಕು ಕಡಗಗಳನ್ನು ಒಂದೇ ಬಂಧದಲ್ಲಿ ಬರುವಂತೆ ಅಳವಡಿಸಿರುತ್ತಾರೆ. ಇದು ಬಳೆಯ ಆಕಾರದಲ್ಲಿ ಇರುವುದಿಲ್ಲ. ಹೆಣ್ಣುಮಕ್ಕಳ ಮುಂಗೈ ಅಳತೆಗೆ ಸರಿಯಾಗಿ ಇದನ್ನು ಮಾಡಿರುತ್ತಾರೆ. ಇದನ್ನು ಮುಂಗೈ ಮೂಲಕ ಧರಿಸಲು ಆಗುವುದಿಲ್ಲ. ಅರ್ಥಾತ್ ಬ್ರೇಸ್ಲೆಟ್‌ಎನ್ನಬಹುದು, ಧರಿಸಲೆಂದೇ ವಿಶೇಷ ತಿರುಪಿರುತ್ತದೆ. ಇದರಲ್ಲಿಯೂ ರೂಬಿ ಬಣ್ಣದ ಇಲ್ಲಿ ನಾರಿಯರ ಮನಕ್ಕೊಪ್ಪುವ ಹರಳುಗಳನ್ನು ವಿನ್ಯಾಸಗೊಳಿಸಿರುತ್ತಾರೆ. ಇದೇ ಮಾದರಿಯ ಕೈ ಉಂಗುರಗಳೂ ಇರುತ್ತವೆ.
ಪಂಚಿ
ಇದು ಬ್ರೇಸ್ಲೆಟ್ ಮಾದರಿಯ ಆಭರಣ. ಇದು ಹಲಸಿನ ಹಣ್ಣಿನ (ಕೊಡಗಿನ ವಿಶೇಷಗಳಲ್ಲಿ ಹಲಸೂ ಕೂಡ ಒಂದು. ಇದು ಆಭರಣಗಳ ವಿನ್ಯಾಸದಲ್ಲೂ ಒಡಮೂಡಿದೆ) ಮುಳ್ಳುಗಳ ರೀತಿ ಇರುವ ಚಿನ್ನದ ಮಣಿಗಳನ್ನು ಎರಡು ಮೂರು ಸಾಲುಗಳಲ್ಲಿ ವಿಶೇಷ ವಿನ್ಯಾಸ ಮಾಡಲಾಗಿರುತ್ತದೆ. ಇದನ್ನು ವಜ್ರಚೂಡಿ ಎನ್ನುವ ಹೆಸರಿನಿಂದಲೂ ಕರೆಯುವುದಿದೆ. ಪಿಂಬಳೆ, ಪೆರಿಯಬಳೆ ಇವುಗಳು ಸರಿಸುಮಾರು ಇದೇ ವಿನ್ಯಾಸ ಹೊಂದಿರುತ್ತವೆ. ಸಾಧಾರಣ ಬಳೆಗಳಂತೆ ಇವು ಕೈಯನ್ನು ಸುತ್ತುವರಿಯುತ್ತವೆ.
ಕಾಲು ಪದಿಚೆ(FOOT RING)
ಕಾಲು ಪಿಲಿ ಎಂದೂ ಕರೆಯುವ ಬೆಳ್ಳಿ ಆಭರಣ. ಐದು ಕಾಲುಂಗುರಗಳನ್ನು ಒಂದು ಕಾಲು ಚೈನಿಗೆ ಜೋಡಿಸಲ್ಪಟ್ಟಿರುತ್ತದೆ.
ಕೈಪಿಲಿ
ಕೈ ಪದಿಚೆ ಬಿಡಿ ಉಂಗುರಗಳನ್ನು ಅಳವಡಿಸಿ ಮಾಡಿರುತ್ತಾರೆ.
ಪೀಚೆ ಕತ್ತಿ
ಕೊಡವರು ಕ್ಷತ್ರಿಯ ಕುಟುಂಬದವರು. ಅದರ ಸಂಕೇತವಾಗಿ ಸೊಂಟಕ್ಕೆ ಧರಿಸುವ ವಿಶೇಷ ಆಭರಣವನ್ನು ಕಡ್ಡಾಯವಾಗಿ ಧರಿಸುತ್ತಾರೆ. ಅದುವೆ ಪೀಚೆ ಕತ್ತಿ, ಗಂಡಸರ ಪ್ರತಿಷ್ಠೆಯ ಸಂಕೇತ. ಎಳೆಯ ಅಥವಾ ಚಿಕ್ಕ ಕತ್ತಿ. ಕುಪ್ಪು ಚೇಲೆಯ ಮಾಲೆ ಹಾಕುವುದು. ಚೇಲೆ ಎಂದರೆ ಕೆಂಪು ರೇಷಿಮೆಯ ಸೊಂಟಪಟ್ಟಿ. ದೇವಕನ್ಯೆಯನ್ನು ಮದುವೆ ಆಗುವ ಸಂದರ್ಭ. ಒಡವೆ ಕತ್ತಿ, ಕೊಡವ ವಾರ್ ನೈಫ್ ಎನ್ನಬಹುದು. ವಿಶೇಷ ಸಂದರ್ಭದಲ್ಲಿ ಇದನ್ನು ಧರಿಸುತ್ತಾರೆ. ಮುಹೂರ್ತಕ್ಕೆ ಮೊದಲು ಮದುಮಗ ಮಂಟಪವನ್ನು ಪ್ರವೇಶಿಸುವ ಮೊದಲು ಬಾಳೆಕಂದನ್ನು ಕತ್ತರಿಸಲು ಈ ಒಡವೆ ಕತ್ತಿಯನ್ನು ಉಪಯೋಗಿಸುತ್ತಾನೆ. ಇದನ್ನು ಬೆಳ್ಳಿಯ ಕುಚ್ಚುಗಳಲ್ಲಿ ವಿನ್ಯಾಸ ಮಾಡಿರುತ್ತಾರೆ. ಪೀಚೆ ಕತ್ತಿಯನ್ನು ಮದುಮಗಳು ಗಂಗಾ ಪೂಜೆಯ ಸಂದರ್ಭದಲ್ಲಿ ತೆಂಗಿನಕಾಯಿ ಒಡೆಯಲು ಬಳಸುವಳು. ಇದಲ್ಲದೆ ಶೌರ್ಯದ ಸಂಕೇತವಾಗಿರುವ ಬೆಳ್ಳಿ ಕಡಗನ್ನು ಪುರುಷರು ವಯೋಭೇದವಿಲ್ಲದೆ ಧರಿಸುತ್ತಾರೆ.
ಮೋಯಿರ
ಮೋಯಿರ ಇಡು ಎನ್ನುವ ಪದ್ಧತಿ. ಇದು ಪಾಶ್ಚಿಮಾತ್ಯರಿಂದ ಎರಲು ಪಡೆದಿರುವುದು. ಅಂದರೆ ಮದುಮಕ್ಕಳು ಪರಸ್ಪರ ಉಂಗುರ ಬದಲಿಸಿಕೊಳ್ಳುವುದು. ಕಾಲು ಮೋಯಿರ ಅಂದರೆ ಕಾಲುಂಗುರ ಹೆಚ್ಚಾಗಿ ಒಂಟಿ ಸುತ್ತಿನ ಕಾಲುಂಗುರಗಳನ್ನು ಕಾಣಬಹುದು. ಸಂತಾನೋತ್ಪತ್ತಿಯ ಸಲುವಾಗಿ ಬಳಸುವುದು.
ಬ್ರೋಚ್
ಇದು ಸೀರೆಗೆ ಹಾಕುವ ಪಿನ್. ಕೊಡವರ ಪೀಚೆ ಕತ್ತಿಯ ವಿನ್ಯಾಸವನ್ನು ಹೊಂದಿರುತ್ತದೆ. ಇಲ್ಲದೆ ಶಕ್ತಿ, ಕೆಟ್ಟ ದೃಷ್ಟಿ ನಿವಾರಣೆಗೆ ಮಕ್ಕಳಿಗೆ ಪಾಲುಮಣಿಯನ್ನು ಹಾಕುತ್ತಾರೆ. ಇದರಲ್ಲಿ ಬಿಳಿ ಹಾಗೂ ಕಪ್ಪು ಮಣಿಗಳು ಇರುತ್ತವೆ.
ಪತ್ತಾಕ್, ಕೊಕ್ಕೆತಾತಿ, ಜೋಮಾಲೆ, ಪವಳ ಸರ, ಮೊದಲಾದ ಏಳು ರೀತಿಯ ಸರಗಳನ್ನು ಕೊಡ ಮದುಮಗಳು ಧರಿಸುತ್ತಾಳೆ. ಮದುಮಗನೂ ಹವಳದ ಸರ ಮತ್ತು ಕೊಕ್ಕೆತಾತಿಯನ್ನು ಧರಿಸುವುದು ರೂಢಿ. ಒಟ್ಟಾರೆಯಾಗಿ ಪ್ರಕೃತಿ ಸೊಬಗಿಗೆ ಹೆಸರಾಗಿರುವ ಕೊಡವ ಆಭರಣಗಳೂ ಅಷ್ಟೇ ಮನಮೋಹಕ ಹಾಗೆ ಪವಿತ್ರ ಕೂಡ. ಕೊಕ್ಕೆತಾತಿ, ಹವಳಸರ, ಕಾಸಿನ ಸರದ ವಿನ್ಯಾಸವನ್ನೇ ಬಳಸಿದ ಕಿವಿಯೋಲೆಗಳು ಬಹಳ ಪ್ರಸಿದ್ಧಿಯಾಗಿವೆ. ಇವರ ಆಭರಣಗಳು ಸಂಪೂರ್ಣ ಗಟ್ಟಿಯಾಗಿರದೆ ಒಳಗೆ ಅರಗನ್ನು ಸೇರಿಸಿರುತ್ತಾರೆ. ಇವರ ಆಭರಣಗಳಲ್ಲಿ ಸಾಮಾನ್ಯವಾಗಿ ನಾಗನ ವಿನ್ಯಾಸವಿದ್ದು, ಅದು ಪಾವಿತ್ರ್ಯತೆ ಮತ್ತು ಪ್ರಕೃತಿಯ ಆರಾಧನೆಯ ಸಂಕೇತ. ಹಾಗೆಯೇ ಮುತ್ತುಗಳು ಆರೋಗ್ಯ ಮತ್ತು ಸೌಂದರ್ಯವನ್ನು ಸಂಕೇತಿಸಿದರೆ, ಹವಳ ಸುಮಂಗಲಿತನ, ಸಂತೋಷ ಹಾಗೂ ಫಲತ್ತತೆಯ ಸಂಕೇತ. ಕಪ್ಪು ಮಣಿ ಸುಮಂಗಲಿತನ ಮತ್ತು ಕೆಟ್ಟ ದೃಷ್ಟಿಯನ್ನು ಹೊಡೆದೋಡಿಸುವುದಕ್ಕೆ ಸಂವಾದಿಯಾಗಿ ಬಳಸುತ್ತಾರೆ.
– ಸುಮಾ ವೀಣಾ