ಕಥೆ ಶ್ರೀವಿಜಯಾ

ಜೀವನದಲ್ಲಿ ಬಹಳ ನೊಂದುಹೋಗಿದ್ದ ಮುನಿಯಮ್ಮ, ಗಂಡ ಬಿಟ್ಟುಹೋದ ನಂತರ ಬದುಕು ಬೇಡವೆಂದು ನಿರ್ಧರಿಸಿದ್ದಳು. ಆದರೆ ಮಗನ ಆಗಮನ ಅವಳ ಬಾಳಲ್ಲಿ ಹೊಸ ಆಶಾಕಿರಣವಾಗಿತ್ತು. ಆದರೆ ವೃದ್ಧಾಪ್ಯದಲ್ಲಿ ಅದೇ ಮಗ ಅವಳನ್ನು ಹೊರದೂಡಿದಾಗ ಮುಂದೆ ಅವಳ ಗತಿ ಏನಾಯಿತು….?

ನಗರದ ಕಲಾಭವನದಲ್ಲಿ ಪುರಸಭೆಯರು ದೊಡ್ಡ ಕಾರ್ಯಕ್ರಮ ಏರ್ಪಡಿಸಿದ್ದರು. ಜನರಿಂದ ಕಿಕ್ಕಿರಿದ ಸಭಾಂಗಣ, ವೇದಿಕೆ ಮೇಲೆ ಗಣ್ಯರ ಸಾಲು. ಅದು ನೂತನವಾಗಿ ಜಿಲ್ಲೆಗೆ ಬಂದಿದ್ದ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಅಭಿನಂದನಾ ಕಾರ್ಯಕ್ರಮವಾಗಿತ್ತು. ಗಣ್ಯರೆಲ್ಲಾ ಜಿಲ್ಲಾಧಿಕಾರಿಗಳನ್ನು ಪರಿಚಯಿಸಿ, ಅವರ ಕಾರ್ಯವೈಖರಿಯ ಗುಣಗಾನ ಮಾಡುತ್ತಿದ್ದರು. ಗಣ್ಯರ ಮಾತುಗಳೆಲ್ಲಾ ಮುಗಿದ ಮೇಲೆ ಜಿಲ್ಲಾಧಿಕಾರಿಗಳು ಭಾಷಣ ಮಾಡಲು ಎದ್ದುನಿಂತರು. ಸಾದಾ ಬಣ್ಣ, ದೃಢ ಶರೀರ ಮುಖದಲ್ಲಿ ಸರಸ್ವತಿ ಕಳೆ, ಮುಖದಲ್ಲಿ ಮಂದಹಾಸ ಎಲ್ಲರನ್ನು ಸೆಳೆಯುವ ಕಣ್ಣುಗಳು. ಆತನ ಮಾತಿನ ಮೋಡಿಗೆ ಎಲ್ಲರೂ ತಲೆದೂಗಿ ಚಪ್ಪಾಳೆ ಹೊಡೆಯುತ್ತಿದ್ದರು. ಕೊನೆಯಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುವಾಗ, “ಬಡತನದಲ್ಲಿ ಹುಟ್ಟಿ ಬೆಳೆದನು ನಾನು. ನಾನು ಐ.ಎ.ಎಸ್‌ಮಾಡಿ ಜಿಲ್ಲಾಧಿಕಾರಿಯಾಗಿ ನಿಮ್ಮ ಮುಂದೆ ನಿಂತಿರುವುದಕ್ಕೆ ಕಾರಣ ನನ್ನ ತಾಯಿ! ನನ್ನ ಬದುಕು ರೂಪಿಸಿದ ಆ ದೇವತೆ ಇದೇ ಪುರಸಭೆಯಲ್ಲಿ ಸಣ್ಣ ಕೆಲಸದಲ್ಲಿದ್ದು ಬೀದಿ ಬೀದಿ ಕಸಗುಡಿಸಿ, ಮಿಕ್ಕ ಸಮಯದಲ್ಲಿ ಹೂ ಕಟ್ಟಿ, ಕಂಡವರ ಮನೆಯಲ್ಲಿ ಕಸ ಮುಸುರೆ ತೊಳೆದು ಹಣ ಸಂಪಾದಿಸಿ ಕಷ್ಟಪಟ್ಟು ನನ್ನನ್ನು ಓದಿಸಿದರು.

“ನನ್ನ ತಾಯಿಯನ್ನು ನಿಮಗೆಲ್ಲಾ ಪರಿಚಯಿಸಲು ನನಗೆ ಹೆಮ್ಮೆಯಾಗುತ್ತದೆ,” ಎನ್ನುತ್ತಾ ಅವರು, `ಅಮ್ಮಾ, ವೇದಿಕೆ ಮೇಲೆ ಬಾ…..’ ಎಂದು ಕರೆದಾಗ ಕುಳಿತಿದ್ದ ಅವರ ತಾಯಿ ಸಂಕೋಚದಿಂದಲೇ ವೇದಿಕೆಗೆ ಬಂದರು.

“ಏಳೇಳು ಜನ್ಮಕ್ಕೆ ಈಕೆಯೇ ನನ್ನ ಜನ್ಮದಾತೆಯಾಗಬೇಕು,” ಎಂದು ತನ್ನ ಕೊರಳಲಿದ್ದ ಹಾರವನ್ನು ಆ ತಾಯಿಯ ಕೊರಳಿಗೆ ಹಾಕಿ ಪಾದ ಮುಟ್ಟಿ ನಸಮ್ಕರಿಸಿದಾಗ, ನೆರೆದಿದ್ದ ಜನಸ್ತೋಮದಿಂದ ಭಾರೀ ಕರತಾಡನ!

ಆದರೆ ಹಿಂದೆ ಕುರ್ಚಿಯಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ಹೆಂಗಸಿನ ಕಣ್ಣಲ್ಲಿ ಮಾತ್ರ ನೀರು ಸುರಿಯುತ್ತಿತ್ತು. ಅವಳೇ ಮುನಿಯಮ್ಮ. ನಡೆಯುತ್ತಿದ್ದ ದೃಶ್ಯವನ್ನು ಕಣ್ತುಂಬಿಕೊಂಡು ಅಲ್ಲಿಂದ ತನ್ನ ಹಟ್ಟಿಯತ್ತ ನಡೆದಳು.

ಮುನಿಯಮ್ಮನಿಗೂ ಕಸಗುಡಿಸುವ ಕೆಲಸ. ಬೆಳಗ್ಗೆ ಬೇಗ ಎದ್ದು ತನ್ನ ಮನೆಗೆಲಸ ಮುಗಿಸಿ, ಬೀದಿ ಬೀದಿ ಕಸ ಗುಡಿಸಿ, ಮನೆ ಮನೆಗಳಿಗೆ ಹೋಗಿ ಕೆಲಸ ಮಾಡುತ್ತಾಳೆ. ವಾಸಕ್ಕೆ ಚಿಕ್ಕ ಗುಡಿಸಲು, ಅವಳಿಗೂ ಒಬ್ಬ ಮಗ. 10ನೇ ತರಗತಿ ಓದುತ್ತಿದ್ದಾನೆ.  ಬುದ್ಧಿ ಬಂದ ಮೇಲೆ ತಾಯಿಯ ಮೇಲೆ ಸಿಟ್ಟು, ಅಸಮಾಧಾನ! ವಿನಾಕಾರಣ ರೇಗಾಡುತ್ತಾನೆ.

ಒಂದು ದಿನ ಮಗ ಹಸಿದುಕೊಂಡು ಊಟದ ಡಬ್ಬಿಯನ್ನೂ ತೆಗೆದುಕೊಳ್ಳದೆ ಶಾಲೆಗೆ ಹೋದನೆಂದು ಬಾಕ್ಸ್ ನಲ್ಲಿ ಊಟವನ್ನು ತೆಗೆದುಕೊಂಡು ಮಗನ ಶಾಲೆಗೆ ಹೋದಳು. ಅವಳನ್ನು ಕಂಡೊಡನೆ ಕಿಡಿಕಿಡಿಯಾದ ಮಗ ಬಾಯಿಗೆ ಬಂದಂತೆ ಬಯ್ಯುತ್ತಾ, “ಎಷ್ಟು ಸರ್ತಿ ನಿನಗೆ ಹೇಳೋದು….. ಶಾಲೆಯ ಹತ್ತಿರ ಬಂದು ನನಗೆ ಅವಮಾನ ಮಾಡಬೇಡ ಅಂತ. ಬೀದಿ ಕಸ ಕುಡಿಸುವವಳ ಮಗನೆಂದು ಎಲ್ಲರೂ ನನ್ನನ್ನು ಕೀಳಾಗಿ ಕಾಣುತ್ತಾರೆ. ನನ್ನ ಕರ್ಮ ನಿನ್ನ ಮಗನಾಗಿ ಹುಟ್ಟಿದ್ದೇ ನನ್ನ ಅಕ್ಷಮ್ಯ ಅಪರಾಧ, ನಡೀ ಇಲ್ಲಿಂದ….” ಎಂದು ಕೂಗಾಡಿದ.

ದಿನದಿನಕ್ಕೆ ಅವನ ಸಿಟ್ಟು ದ್ವೇಷವಾಗಿ ಪರಿಣಮಿಸಿತು. ಪಾಪ, ಮುನಿಯಮ್ಮ ಮಗ ಏನೇ  ಬಯ್ದರೂ, ಅಂದು ಆಡಿದರೂ ಮನನೊಂದರೂ, `ಹುಡುಗು ಮುಂಡೇದು….’ ಎಂದು  ಸುಮ್ಮನಾಗುತ್ತಿದ್ದಳು.

ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಮಗ ಇದ್ದಕ್ಕಿದ್ದಂತೆ ಕಣ್ಮರೆಯಾದ. ಮುನಿಯಮ್ಮ ಮಗನಿಗಾಗಿ ಹುಡುಕಾಡದ ಜಾಗವಿಲ್ಲ, ಬೇಡದ ದೇವರಿಲ್ಲ. ಎಲ್ಲೇ ಇರಲಿ ಮಗ ಸುಖವಾಗಿರಲೆಂದು ದೇವರಿಗೆ ಕೈಮುಗಿಯುವಳು. ಹೀಗೆ ಹಲವು ವರ್ಷ ಕಳೆಯಿತು. ಒಂದು ದಿನ ಪಕ್ಕದ ಮನೆ ಕೆಂಚಪ್ಪ ಮುನಿಯಮ್ಮನ ಬಳಿ ಬಂದು, “ಮುನಿಯಮ್ಮ, ನಿನ್ನೆ ನಿನ್ನ ಮಗನನ್ನು ನೋಡಿದೆ! ದೊಡ್ಡ ಆಫೀಸಿನಲ್ಲಿ ದೊಡ್ಡ ಅಧಿಕಾರಿಯಾಗಿದ್ದಾನೆ. ನಿನ್ನ ಅದೃಷ್ಟ ಖುಲಾಯಿಸಿತು. ಇನ್ನು ನಿನ್ನ ಮಾತನಾಡಿಸೋಕೆ ಆಗೋಲ್ಲ ಬಿಡು,” ಎಂದು ಹೇಳಿದ.

ಮುನಿಯಮ್ಮನಿಗೆ ಸ್ವರ್ಗಕ್ಕೆ ಮೂರೇ ಗೇಣು. ಎಷ್ಟು ಬೇಗ ಮಗನನ್ನು ನೋಡುತ್ತೇನೋ ಎಂದು ರಾತ್ರಿಯೆಲ್ಲಾ ಒದ್ದಾಡಿದಳು. ಬೆಳಗಾಗುತ್ತಿದ್ದಂತೆ ಇದ್ದುದರಲ್ಲಿ ಒಳ್ಳೆಯ ಸೀರೆ ಉಟ್ಟುಕೊಂಡು, ಕೆಂಚಪ್ಪ ಹೇಳಿದ ವಿಳಾಸ ಹುಡುಕಿಕೊಂಡು ಮಗನ ದೊಡ್ಡ ಆಫೀಸಿಗೆ ಹೋದಳು.

“ಸಾಹೇಬರನ್ನು ನೋಡಬೇಕು,” ಎಂದು ಜವಾನನನ್ನು ಕೇಳಿದಳು. ಅವನು ಒಳಗೆ ಬಿಟ್ಟ.

ಮಗ ಸಿಂಹಾಸನದಂತಹ ಕುರ್ಚಿಯಲ್ಲಿ ಕುಳಿತು ಅದೇನೋ ಪೇಪರ್‌ ಗಳಿಗೆ ಸಹಿ ಹಾಕುತ್ತಿದ್ದ. ಹತ್ತಾರು ಮಂದಿ ಅವನನ್ನು ನೋಡಲು ಸಾಲಿನಲ್ಲಿ ನಿಂತಿದ್ದಾರೆ. ಕೈಗೊಬ್ಬ ಆಳು, ಕಾಲಿಗೊಬ್ಬ ಆಳು ಅವನ ಆಜ್ಞೆ ಪಾಲಿಸುತ್ತಿದ್ದಾರೆ. ಏನು ನಯ, ಏನು ವಿನಯ….. ನಗುನಗುತ್ತಾ ಎಲ್ಲರ ಸಮಸ್ಯೆಗಳ ಬಗೆಹರಿಸುವ ಧೀಮಂತ ಅಧಿಕಾರಿ. ಮಗನನ್ನು ನೋಡಿ ಅವಳ  ಕಣ್ಣರಳಿತು.

“ಮಗಾ….” ಎಂದಳು.

ದನಿ ಕೇಳಿ ತಲೆ ಎತ್ತಿ ನೋಡಿದ ಮಗನ ಮುಖ ಇಂಗು ತಿಂದ ಮಂಗನಂತಾಯಿತು. ಎಲ್ಲರನ್ನೂ ಹೊರಗೆ ಕಳುಹಿಸಿದ ಮಗ,, ತಾಯಿ ಬಂದದ್ದಕ್ಕೆ ಆಕ್ಷೇಪಿಸುತ್ತಾ…., “ಯಾಕೆ ಬಂದೆ ಇಲ್ಲಿಗೆ….? ನಾನು ಚೆನ್ನಾಗಿರಲು ಬಿಡುವುದಿಲ್ಲವಲ್ಲ ನೀನು…. ಇನ್ನೊಂದು ಸಾರಿ ನನ್ನ ಮಗ ಅಂತ ಹೇಳಿಕೊಂಡು ಇಲ್ಲಿಗೆ ಬರಬೇಡ… ಚೆನ್ನಾಗಿರಲ್ಲ….. ನಾನು ಈ ಊರೇ ಬಿಟ್ಟು ಹೋಗುವೆ…. ತಗೋ ಈ ಹಣ. ಮತ್ತೊಮ್ಮೆ ಇಲ್ಲಿ ಕಾಲಿಡಬೇಡ,” ಎಂದು ಮುಖದ ಮೇಲೆ ನೋಟಿನ ಕಂತೆಗಳನ್ನು ಎಸೆದ.

ಮುನಿಯಮ್ಮನಿಗೆ ದೊಡ್ಡ ಆಘಾತ! ನೋಟುಗಳು ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದ್ದವು. ಒಂದು ಕ್ಷಣ ಕಲ್ಲಿನಂತೆ ನಿಂತಿದ್ದ ಮುನಿಯಮ್ಮ ಸಾವರಿಸಿಕೊಂಡು ನಿಟ್ಟುಸಿರುಬಿಡುತ್ತಾ, ನೋಟುಗಳತ್ತ  ತಿರುಗಿಯೂ ನೋಡದೆ ಹೊರಗೆ ಬಂದುಬಿಟ್ಟಳು.

ಇದಾಗಿ ಎಷ್ಟೋ ದಿನಗಳಾದರೂ ಮುನಿಯಮ್ಮನಿಗೆ ಮಗನ ಮೇಲಿನ ವ್ಯಾಮೋಹ ಹೋಗಲಿಲ್ಲ. ಮತ್ತೆ ಕೆಂಚಪ್ಪನ ಮೂಲಕ ಹೇಗೋ ಮಗನ ಮನೆಯ ವಿಳಾಸ ಪಡೆದುಕೊಂಡಳು. ಏನಾದರೂ ಸರಿ ಮೊಮ್ಮಕ್ಕಳನ್ನು ಒಮ್ಮೆ ನೋಡಿ ಬರಲೇಬೇಕೆಂದು ತಾಯಿ ಕರುಳು ಮಿಡಿಯಿತು. ಅಂತೂ ಹುಡುಕಿಕೊಂಡು ಹೊರಟೇಬಿಟ್ಟಳು.

ವಿಶಾಲವಾದ ಜಾಗದಲ್ಲಿ ಮನಸೆಳೆಯುವ ಹೂದೋಟದ ನಡುವೆ ಅರಮನೆಯಂತಹ ಬಂಗಲೆ. ಸೆಕ್ಯೂರಿಟಿಯ ಮನವೊಲಿಸಿ ಮನೆಯ ಕಾಲಿಂಗ್‌ ಬೆಲ್ ‌ಒತ್ತಿದಳು ಮುನಿಯಮ್ಮ. ಬಾಗಿಲು ತೆರೆಯಿತು. ಮನೆಯಲ್ಲಿ ಆರು ವರ್ಷದ ಹೆಣ್ಣುಮಗು, ನಾಲ್ಕು ವರ್ಷದ ಗಂಡು ಮಗು. ಮಕ್ಕಳು ಮುದ್ದಾಗಿದ್ದವು. ಮುನಿಯಮ್ಮನಿಗೆ ಮೊಮ್ಮಕ್ಕಳನ್ನು ಕಂಡು ಮುದ್ದಾಡಬೇಕೆನಿಸಿದರೂ ಕೈ ಮುಂದಾಗಲಿಲ್ಲ.

ತಾನು ಮುನಿಯಮ್ಮ ಎಂದು ಪರಿಚಯಿಸಿಕೊಂಡಳು. ಮುನಿಯಮ್ಮ ಎಂಬ ಹೆಸರು ಕೇಳಿ ಮೊಮ್ಮಕ್ಕಳು ಗೊಳ್ಳೆಂದು ನಕ್ಕವು. ಹಿಂದೆಯೇ ಲಕ್ಷಣವಾಗಿದ್ದ ಹೆಣ್ಣುಮಗಳು ಬಂದಳು. ಇವಳೇ ಸೊಸೆಯೆಂದು ಮುನಿಯಮ್ಮನಿಗೆ ಖಾತ್ರಿಯಾಯಿತು.

“ಯಾರು ನೀವು…. ಏನಾಗಬೇಕೆಂದು,” ವಿಚಾರಿಸಿದಳು.

“ಸಾಹೇಬರನ್ನು ನೋಡಲು ದೂರದಿಂದ ಬಂದಿದ್ದೇನೆ. ದಯವಿಟ್ಟು ಕರೆಯಿರಿ,” ಎಂದು  ಕೈ ಮುಗಿದಳು.

ಮಕ್ಕಳನ್ನು ತೋಟದಲ್ಲಿ ಆಡಿಕೊಳ್ಳಿರೆಂದು ಹೇಳಿ, ಗಂಡನನ್ನು ಕರೆಯಲು ಒಳ ಹೋಗಿ ವಿಷಯ ತಿಳಿಸಿದಾಗ ಮಗ ಹೊರಬಂದ. ಅವನಿಗೆ ಅಲ್ಲಿ ಮುನಿಯಮ್ಮನನ್ನು ಮತ್ತೆ ನೋಡಿ ದಿಗ್ಭ್ರಮೆ ಆಯಿತು. ಕೋಪದಿಂದ, “ನೀನು ಇಲ್ಲಿಗೆ ಯಾಕೆ ಬಂದೆ…..? ಹೆಂಡತಿ ಮಕ್ಕಳೊಡನೆ ನೆಮ್ಮದಿಯಾಗಿ ಸುಖ ಸಂತೋಷದಿಂದಿರಲು ಬಿಡುವುದಿಲ್ಲಾ ನೀನು….  ಬೆನ್ನಿಗೆ ಬಿದ್ದ ಬೇತಾಳದಂತೆ ಎಲ್ಲಿ ಹೋದರಲ್ಲಿಗೆ ಬಂದು ವಕ್ರಿಸುತ್ತೀಯ…. ಏನು ಬೇಕು ನಿನಗೆ…?” ಎಂದು ಹೀನಾಮಾನವಾಗಿ ತಾಯಿಯನ್ನು ಮೂದಲಿಸಿದ.

“ನನಗೇನೂ ಬೇಡ…. ಒಂದೇ ಒಂದು ಸಲ ಸೊಸೆ, ಮೊಮ್ಮಕ್ಕಳನ್ನು ನೋಡಿ ಮಾತನಾಡಿಸಿ ಹೋಗುತ್ತೇನೆ. ಮತ್ತೆಂದೂ  ಬರುವುದಿಲ್ಲ,” ಎಂದು ಇನ್ನಿಲ್ಲದ ಹಾಗೆ ಗೋಗರೆದಳು. ಆದರೆ ಪಾಪಿ ಮಗನ ಮನಸ್ಸು ಮಾತ್ರ ಕರಗಲೇ ಇಲ್ಲ.

tera-jana-story2

“ಮಜ್ಜಿಗೆ ಕುಡಿದು ಹೋಗಿ,” ಎನ್ನುತ್ತಾ ಒಳಗಿನಿಂದ ಬಂದ ಸೊಸೆ, “ಯಾರು ಇವರು? ಏಕೆ ಬಂದಿದ್ದಾರೆ?” ಎಂದು ಗಂಡನನ್ನು ಕೇಳಿದಳು.

ಮಗ ನಿಷ್ಠೂರಾಗಿ, “ಈಕೆ ನಮ್ಮೂನರಿನಲ್ಲಿ ಬೀದಿ ಗುಡಿಸುವವಳು. ಏನೋ ಸಹಾಯ ಕೇಳಿ ಬಂದಿದ್ದಾಳೆ. ನೀನು ಮಕ್ಕಳನ್ನು ಕರೆದುಕೊಂಡು ಒಳಗೆ ಹೋಗು!” ಎಂದು ಗದರಿಸಿದ.

ತಾಯಿಯ ಕಡೆ ತಿರುಗಿ, “ನಡೆ ಇಲ್ಲಿಂದ…. ಇನ್ನೊಮ್ಮೆ ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ನಡಿ ಹೊರಗೆ,” ಎಂದು ಹೇಳಿದವನೇ ದಢಾರನೆ ಬಾಗಿಲು ಹಾಕಿಕೊಂಡ. ಮುನಿಯಮ್ಮ ಅಲ್ಲೇ ಜಗುಲಿಯಲ್ಲಿ ಎದೆ ಹಿಡಿದು ಕುಸಿದು ಕುಳಿತಳು. ಎಷ್ಟೋ ಹೊತ್ತಿನ ಮೇಲೆ ನೆನಪು ಬಂದು ಮೆಲ್ಲಗೆ ಎದ್ದು ಆ ಮನೆ ಕಡೆಗೊಮ್ಮೆ ದೀನಳಾಗಿ ನೋಡುತ್ತಾ ಬಸ್‌ ನಿಲ್ದಾಣದತ್ತ ನಿಧಾನವಾಗಿ ನಡೆದಳು.

ಬಸ್ಸಿನಲ್ಲಿ ಬರುವಾಗ ಹಳೆಯ ನೆನಪುಗಳ ಜೋಕಾಲಿ. ಮೆಚ್ಚಿ ಮದುವೆಯಾಗಿದ್ದ ಗಂಡ ಕೆಲವು ವರ್ಷ ಸುಖವಾಗಿ ಸಂಸಾರ ಮಾಡಿ, ಮಕ್ಕಳಾಗಲಿಲ್ಲವೆಂದು ಇನ್ನೊಬ್ಬಳ ಆಕರ್ಷಣೆಗೆ ಬಲಿಯಾಗಿ ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟು ರಾತ್ರೋರಾತ್ರಿ ಪರಾರಿಯಾದ. ಆಘಾತದಿಂದ ತತ್ತರಿಸಿ ಬದುಕು ಕೊನೆಗಾಣಿಸಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಕತ್ತಲ ಬದುಕಿಗೆ ಚಂದಿರನಾಗಿ ಬಂದಿದ್ದ ಈ ಮಗ. ಮಗನಿಗಾಗಿ ಜೀವ  ಹಿಡಿದುಕೊಂಡು ಬಾಳತೊಡಗಿದಳು. ಮಗ ಹುಟ್ಟಿ ಏಳೆಂಟು ವರ್ಷಗಳ ಕಾಲ ಆನಂದವಾಗಿ ಕಾಲ ಕಳೆದಳು.

ಮಗ ಬೆಳೆಯುತ್ತಾ ಬಂದಂತೆ ವಿಚಿತ್ರವಾಗಿ ಬದಲಾದ. ಮಗ ಎಷ್ಟೇ ಬೈದರೂ ಅಸಹ್ಯಪಟ್ಟು ಟೀಕಿಸಿದರೂ, ನಿಂದಿಸಿದರೂ ಬೇಸರಿಸದ ಮುನಿಯಮ್ಮ, ಅವನನ್ನು ಪ್ರಾಣದಂತೆ ಜೋಪಾನವಾಗಿ ಕಾಪಾಡಿದಳು. ಒಂದು ಮಾತಿನಲ್ಲಿ ಹೇಳುವುದಾದರೆ ಮಗನೇ ಅವಳ ಪ್ರಪಂಚ ಸರ್ವಸ್ವ. ಮಗನ ದ್ವೇಷದ ನಂಜನ್ನು ನೀಲಕಂಠನಂತೆ ನುಂಗಿ ತನ್ನ ನೋವಿನಲ್ಲೇ ಮಗನ ನಲಿವು, ಅವನ ಏಳ್ಗೆಯಲ್ಲೇ ಸಂತೋಷವನ್ನು ಕಂಡು ಬದುಕುತ್ತಿದ್ದ ಮುನಿಯಮ್ಮನಿಗೆ ಮಗನ ನಡೆ ನುಡಿ ಶೂಲದಂತೆ ಇರಿಯತೊಡಗಿತು. ನಾನಿನ್ನು ಬದುಕಿ ಏನಾಗಬೇಕೆನ್ನುವ ದೃಢ ನಿರ್ಧಾರಕ್ಕೆ ಬಂದಳು.

ಕೊರಗಿ ಕೊರಗಿ ಹಾಸಿಗೆ ಹಿಡಿದಳು. ಅಕ್ಕಪಕ್ಕದವರು ಅವಳನ್ನು ಆಸ್ಪತ್ರೆಗೆ ಸೇರಿಸಿದರು. ದಿನೇ ದಿನೇ ಅವಳ ಸ್ಥಿತಿ ಹದಗೆಡುತ್ತಿತ್ತು. `ತಾವೆಷ್ಟೂ ಪ್ರಯತ್ನಪಟ್ಟರೂ ಆಕೆಯ ದೇಹ ಔಷಧಕ್ಕೂ ಸ್ಪಂದಿಸುತ್ತಿಲ್ಲ. ಮನೋರೋಗಕ್ಕೆ ಮದ್ದಿಲ್ಲ,’ ಎಂದು ವೈದ್ಯರು ಕೈ ಚೆಲ್ಲಿದರು.

ಮುನಿಯಮ್ಮನ ಕಷ್ಟಸುಖದಲ್ಲಿ ಜೊತೆಯಾಗಿದ್ದ ಆಕೆಯ ಗೆಳತಿ ಮಲ್ಲಮ್ಮ, ಆಕೆಯ ಆರೈಕೆಗೆ ನಿಂತಳು. ಮುನಿಯಮ್ಮ ಬೇಗ ಗುಣವಾಗಲೆಂದು ಕಂಡ ಕಂಡ ದೇವರಿಗೆ ಹರಕೆ ಹೊತ್ತಳು, ಪೂಜೆ ಮಾಡಿಸಿದಳು. ಮುನಿಯಮ್ಮ ದಿನೇ ದಿನೇ `ಮಗಾ… ಮಗಾ…’ ಎಂದು ಕೊರಗುವುದನ್ನು ನೋಡಲಾರದೆ, ವಿಧಿಯಿಲ್ಲದೆ ಮುನಿಯಮ್ಮನ ಮಗನ ಮನೆಯನ್ನು ಹುಡುಕಿಕೊಂಡು ಹೋಗಿ ಎಲ್ಲ ವಿಷಯವನ್ನು ಅವನಿಗೆ ತಿಳಿಸಿದಳು ಮಲ್ಲಮ್ಮ. ಏನಾಶ್ಚರ್ಯ! ಮಲ್ಲಮ್ಮ ಅದೇನು ಮಂತ್ರ ಹಾಕಿದ್ದಳೋ ಮಗ ಓಡಿ ಬಂದವನೇ ತಾಯಿ ಕಾಲುಗಳ ಮೇಲೆ ಬಿದ್ದು ರೋದಿಸತೊಡಗಿದ. ಗೋಗರದ ತನ್ನನ್ನು ಬಿಟ್ಟು ಹೋಗಬೇಡವೆಂದು ಅಂಗಲಾಚಿದ, “ಈ ಪಾಪಿ ಮಗನನ್ನು ಕ್ಷಮಿಸಿಬಿಡವ್ವಾ….” ಎಂದು ಬಾಯಿ ಬಾಯಿ ಬಡಿದುಕೊಂಡವನೇ, “ತಿಪ್ಪೆಯಲ್ಲಿ ಬಿದ್ದವನನ್ನು ಉಪ್ಪರಿಗೆ ಮೇಲೆ ಕೂರಿಸಿದ ನಿನ್ನ ತ್ಯಾಗಕ್ಕೆ ಎಣೆಯಿಲ್ಲ. ನಿನ್ನ ಹೃದಯ ವೈಶಾಲ್ಯತೆ, ಮಾನವೀಯತೆ ಅರಿಯದ ಮೂಢ ನಾನು. ಅ ದೇವರು ನನ್ನ ಕ್ಷಮಿಸಲ್ಲ….” ಎಂದು ಎದೆ ಎದೆ ಬಡಿದುಕೊಂಡು ಹೃದಯ ವಿದ್ರಾವಕವಾಗಿ ಅತ್ತ.

ಏನು ಮಾಡಿದರೇನು? ಕಣ್ಣೀರು ಸುರಿಸಿದರೇನು? ಹೋಗುತ್ತಿರುವ ಪ್ರಾಣವನ್ನು ನಿಲ್ಲಿಸಲು ಸಾಧ್ಯವೇ? ಎಷ್ಟೋ ಹೊತ್ತಿನ ಮೇಲೆ ಮಗನ ಕರೆಗೆ ತಾಯಿಯ ಹೃದಯ ಮಿಡಿದು ಕಣ್ಣು ತೆರೆದು, “ಮಗಾ….” ಎಂದಳು ಮೆಲ್ಲಗೆ.

“ಅವ್ವಾ…..” ಎನ್ನುತ್ತಾ ಬಳಿಗೆ ಬಂದ ಮಗನ ಕೈಗಳನ್ನು ಹಿಡಿದು, “ಚೆನ್ನಾಗಿರು ಮಗಾ…..” ಎಂದಳು ಮೆಲ್ಲಗೆ. ಮಲ್ಲಮ್ಮನ ಕಡೆ ತಿರುಗಿ, “ಬರ್ತೀನಿ ಮಲ್ಲಿ,” ಎಂದಳು ಅಷ್ಟೆ. ಮಗನನ್ನು ನೋಡ ನೋಡುತ್ತಲೇ ಮುನಿಯಮ್ಮ ದೇವರ ಪಾದ ಸೇರಿದಳು.

ಅಳುತ್ತಾ ಕುಳಿತಿದ್ದ ಮಲ್ಲಮ್ಮ ಹಳೆಯದನ್ನು ನೆನೆಸಿಕೊಂಡಳು. ಮುನಿಯಮ್ಮನ ಮಗ ಅವಳ ಸ್ವಂತ ಮಗನೇ ಅಲ್ಲ. ಗಂಡ ಅವಳನ್ನು ಬಿಟ್ಟುಹೋದ ಮೇಲೆ ಹೇಗೋ ಬದುಕಬೇಕಲ್ಲ ಎಂದು ಜೀವಿಸುತ್ತಿದ್ದಳು. ಒಂದು ದಿನ ಮಲ್ಲಮ್ಮ, ಮುನಿಯಮ್ಮ ಬೆಳಗಿನ ಜಾವ ಬೀದಿ ಕಸವನ್ನು ಗುಡಿಸುತ್ತಿದ್ದಾಗ, ಕಸದ ತೊಟ್ಟಿಯ ಬಳಿ ಕಂಡ ದೃಶ್ಯ ಅವರನ್ನು ಬೆರಗಾಗಿಸಿತು. ತೊಟ್ಟಿಯೊಳಗೆ ಎಳೆಯ ಮಗುವಿನ ಆಕ್ರಂದನ! ನಾಯಿಗಳು ಮಗುವನ್ನು ತಿನ್ನಲು ಶತಪ್ರಯತ್ನ ಮಾಡುತ್ತಿದ್ದವು. ಮುನಿಯಮ್ಮ ಓಡಿ ಬಂದವಳೇ ನಾಯಿಗಳನ್ನು ಓಡಿಸಿ, ಮಗುವನ್ನು ಕೈಯಲ್ಲಿ ಎತ್ತಿಕೊಂಡಳು. ದರಿದ್ರನಿಗೆ ಬಂಗಾರದ ತುಣುಕು ಸಿಕ್ಕಂತಾಗಿತ್ತು. ಪ್ರೀತಿಯಿಂದ ಮಗುವನ್ನು ಬಿಗಿದಪ್ಪಿದಳು.

ಪೊಲೀಸರಿಗೆ ಕೊಟ್ಟು ಬಿಡೋಣ ಎಂದ ಮಲ್ಲಮ್ಮನನ್ನು ಕಾಡಿ ಬೇಡಿ, ಸಮ್ಮತಿಸುವಂತೆ ಮಾಡಿ ಮಗುವನ್ನು ಮನೆಗೆ ತಂದು ಮಮತೆಯಿಂದ ಸಾಕಿ ಸಲಹಿದಳು. ಮಗವನ್ನು ಬೆನ್ನಿಗೆ ಜೋಕಾಲಿ ಕಟ್ಟಿಕೊಂಡು, ಮಗು ಅತ್ತಾಗೆಲ್ಲ ಬಾಟಲಿ ಹಾಲು ಕುಡಿಸಿ, ನೆಲ ತಾಕದಂತೆ ಬೆಳೆಸಿದಳು. ತನ್ನ ಮಗ ತನ್ನಂತೆ ಬೀದಿ ಗುಡಿಸು ಹಾಗಾಗಬಾರದೆಂದು ಪಡಬಾರದ ಕಷ್ಟಪಟ್ಟು ದೊಡ್ಡವನನ್ನಾಗಿ ಮಾಡಿದಳು. ಮಗ ದೊಡ್ಡ ಅಧಿಕಾರಿ ಆಗಬೇಕೆಂದು ಕನಸು ಕಟ್ಟಿದ್ದಳು. ಹೆತ್ತಮ್ಮನಿಗಿಂತಲೂ ಒಂದು ಕೈ ಮೇಲಾಗಿ ಕಣ್ಣಲ್ಲಿ ಕಣ್ಣಿಟ್ಟು ಸಾಕಿದಳು. ಆದರೆ ಆ ಮಗ ಮಾತ್ರ ಹತ್ತಿದ ಏಣಿಯನ್ನೇ ಒದ್ದು ತಾಯಿಯೆಂಬ ಮಮಕಾರ ತೋರದೆ ಕಾಲ ಕಸದಂತೆ ಕಾಣತೊಡಗಿದ. ಇದರಿಂದ ಜರ್ಝರಿತಳಾದ ಮುನಿಯಮ್ಮ ಬದುಕುವ ಆಸೆಯನ್ನೇ ಕಳೆದುಕೊಂಡಳು.

ಇಂದು ದೊಡ್ಡ ಅಧಿಕಾರಿಯಾಗಿದ್ದ ಅದೇ ಮಗನಿಗೆ, ಮಲ್ಲಮ್ಮ ಹಿಂದಿನ ಅವನ ಜನ್ಮ ವೃತ್ತಾಂತವನ್ನು ತಿಳಿಸಿ ಛೀಮಾರಿ ಹಾಕಿ ಬಂದಿದ್ದಳು. ವಿಷಯ ತಿಳಿದ ಮುನಿಯಮ್ಮನ ಮಗ ತನ್ನ ಜನ್ಮ ವೃತ್ತಾಂತವನ್ನು ಕೇಳಿ ಗರ ಬಡಿದವನಂತೆ ಪಶ್ಚಾತ್ತಾಪದಿಂದ ಬೆಂದು ಮನಃಪರಿವರ್ತನೆಗೊಂಡು ಸಾಕುತಾಯಿಯನ್ನು ನೋಡಲು ಓಡೋಡಿ ಬಂದಿದ್ದ. ತನ್ನನ್ನು ಪ್ರಾಣಕ್ಕಿಂತ ಅಧಿಕವಾಗಿ ಪ್ರೀತಿಸಿದ ತಾಯಿಯನ್ನು ನೋಡಿಕೊಳ್ಳಬೇಕು, ಎಲ್ಲರೆದುರು ಮೆರೆಸಬೇಕೆಂದು ಕನಸು ಕಾಣುತ್ತಾ ಬಂದಿದ್ದ ಮುನಿಯಮ್ಮನ ಮಗ.  ಆದರೆ ವಿಧಿಯ ಲೀಲೆ ಬೇರೆಯೇ ಇತ್ತು. `ತಾನೊಂದು ಬಗೆದರೆ ಮಾನವ, ಬೇರೊಂದು ಬಗೆದು ದೈವ,’ ಎಂಬಂತೆ ಮಗನ ಅಪರಾಧಕ್ಕೆ ದೈವ ಸರಿಯಾದ ಶಿಕ್ಷೆ ನೀಡಿತ್ತು. ಕಷ್ಟಗಳ ಕೂಪದಲ್ಲಿ ಬಿದ್ದು ಎದ್ದು ನೊಂದು ಮಗನ ಪ್ರೀತಿ ಪಡೆಯುವಲ್ಲಿ ಸೋತು ಗೆದ್ದ ಮುನಿಯಮ್ಮನ ಜೀವ ಬಾರದ ಲೋಕಕ್ಕೆ ಹೋಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ