ಮಹೇಶ : ಗಂಡನನ್ನು ಸಾಮಾನ್ಯವಾಗಿ `ಮನೆದೇವ್ರು’ ಅಂತಾರಲ್ಲ…. ಯಾಕೆ?
ಸುರೇಶ : ಯಾಕಂದ್ರೆ, ಅವನು ಮಾತಾಡೋ ಹಾಗೇ ಇಲ್ಲ! ದೇವರ ತರಹ ತೆಪ್ಪಗೆ ಕುಳಿತು, ತುಟಿ ಪಿಟಕ್ ಎನ್ನದೆ ಕೊಟ್ಟ ನೈವೇದ್ಯ ಸ್ವೀಕರಿಸಬೇಕು ಅಂತ!
ಸುಗುಣಾ : S.S.L.C ಓದಿದರ ರಿಸ್ಟ್‌ಬಂತು. PUC ಓದಿದವರ ರಿಸಲ್ಟ್ ಬಂದಾಯ್ತು. ಮತ್ತೆ…. ಇನ್ಯಾರದು ಬಾಕಿ ಇದೆ?
ಸುಮತಿ : ಅದೇ….. ಏನೂ ಓದದೆ ಚುನಾವಣೆಗೆ ನಿಲ್ಲುತ್ತಾರಲ್ಲ ಅವರದ್ದೇ ಇರಬೇಕು.
ಮಗ : ಅಪ್ಪ, `ಕಷ್ಟ ಕಾರ್ಪಣ್ಯಗಳ ಸುರಿಮಳೆ’ ಅಂತಾರಲ್ಲ, ಅದು ಯಾವುದರ ಕುರಿತಾಗಿ ಹೇಳುತ್ತಾರೆ?
ಮಗನ ಆ ಪ್ರಶ್ನೆಗೆ ತಂದೆ ಮೌನವಾಗಿ ತಾಯಿಯ ಕಡೆ ತಿರುಗಿ ನೋಡಿದರು. ಆಕೆಯ ಉಗ್ರ ನೋಟ ಕಂಡು ಸುಮ್ಮನಾದರು. ಮಗರಾಯ ಸುಮ್ಮನಿರಬೇಡವೇ?
“ಗೊತ್ತಾಯ್ತು ಬಿಡಪ್ಪ, ನೀನು ಹೇಳಿದ ಉತ್ತರ!” ಅನ್ನುವುದೇ?
ರಾಜೇಶ್ : ಅಲ್ಲ ಕಣಯ್ಯ, ನೀನೇಕೆ ಪಾರ್ಕಿಗೆ ಬಂದವನು ವಾಕಿಂಗ್ ಕಡೆ ಗಮನ ಕೊಡದೆ, ಇಲ್ಲಿನ ಹೆಂಗಸರ ಕಡೆ ತಿರುಗಿ ನೋಡ್ತಾ ಇರ್ತೀಯಾ? ಇಲ್ಲಿನ ಹೆಂಗಸರೆಲ್ಲ ಮದುವೆ ಆದರು ಅಂತ ನೆನಪಿರಲಿ!
ದಿನೇಶ್ : ಅದಕ್ಕೆ ಕಣಯ್ಯ ನೋಡ್ತಾ ಇರೋದು! ಅನ್ಯಾಯವಾಗಿ ಇಂಥ ಸೌಂದರ್ಯದ ರೂಪರಾಶಿಗಳು ಇತರರ ಪಾಲಾಯ್ತಲ್ಲ ಅಂತ…..
ಟೀಚರ್ : ಏಕವಚನ ಮತ್ತು ಬಹುವಚನಕ್ಕೆ ವ್ಯತ್ಯಾಸ ಹೇಳುವಿರಾ?
ಗುಂಡ : ನಮ್ಮಪ್ಪ ಆಡೋದು ಒಂದೇ ಮಾತು, ಅದು ಏಕವಚನ. ನಮ್ಮಮ್ಮ ಶುರು ಮಾಡಿದರೆ ಮಾತೇ ನಿಲ್ಲಿಸೋದಿಲ್ಲ, ಅದು ಬಹುವಚನ!
ಮಂಗನೂರಿನ ಪ್ರೈಮರಿ ಸ್ಕೂಲ್ ಟೀಚರ್ ಒಬ್ಬರು ಮಧ್ಯಾಹ್ನದ ಊಟದ ನಂತರ ಗಡದ್ದಾಗಿ ಕ್ಲಾಸಿನಲ್ಲೇ ಗೊರಕೆ ಹೊಡೆಯುತ್ತಿದ್ದರು.
ಆಕಸ್ಮಿಕಾಗಿ ಇನ್ ಸ್ಪೆಕ್ಷನ್ ಗೆಂದು ಶಿಕ್ಷಣದ ಅಧಿಕಾರಿ ಅಲ್ಲಿಗೆ ಆಗಮಿಸಿದರು.
ಮಕ್ಕಳೆಲ್ಲ ಸೇರಿ ಇವರನ್ನು ಎಷ್ಟು ಸಲ ಎಬ್ಬಿಸಿದರೂ ಈಕೆ ಎಚ್ಚರಗೊಂಡಿದ್ದರೆ ಕೇಳಿ.
ಅಂತೂ ಜ್ಞಾನೋದಯವಾಗಿ ಕಣ್ಣು ಬಿಟ್ಟು ನೋಡುತ್ತಾರೆ, ಎದುರಿಗೆ ಅಧಿಕಾರಿ!
“ಮಕ್ಕಳೇ, ನಿನ್ನೆ ನಿಮಗೆ `ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಿದ್ದು’ ಪಾಠ ಮಾಡಿದ್ದೆನಲ್ಲ, ಅದು ಎಷ್ಟು ಕಷ್ಟಕರ ಅಂತ ನಿಮಗೆ ಹೀಗೆ ವಿವರಿಸುತ್ತಿದ್ದೆ. ಈಗ ಸ್ಪಷ್ಟ ಗೊತ್ತಾಯಿತಲ್ಲ….?” ಎಂದಾಗ ಮಕ್ಕಳೇನೋ ತಲೆ ಆಡಿಸಿದರು. ಇದಕ್ಕೆ ಈ ಟೀಚರ್ ನ್ನು ಹೊಗಳುವುದೋ ತೆಗಳುವುದೋ ತಿಳಿಯದೆ ಅಧಿಕಾರಿ ಕಂಗಾಲಾದರಂತೆ!
ಒಂದು ಸಲ ಮಾಡರ್ನ್ ಮಾಲತಿ ತನ್ನ ಹೊಸ ಕಾರು ನಡೆಸುತ್ತಾ ಸ್ನಿಗಲ್ ಬಳಿ ಬಂದಾಗ, ಎಡವಟ್ಟಾಗಿ ಕಾರು ನಿಂತೇ ಹೋಗಬೇಕೇ?
ಗ್ರೀನ್ ಸಿಗ್ನಲ್ ಬಂದಿದೆ, ಆದರೂ ಜಪ್ಪಯ್ಯ ಅಂದ್ರೂ ಕಾರು ಮಾತ್ರ ಸ್ಟಾರ್ಟ್ ಆಗಲೇ ಇಲ್ಲ. ಹಿಂದೆ ನಿಂತಿದ್ದ ಗಾಡಿಯವರಿಗೆಲ್ಲ ಸಿಟ್ಟು ಬಂದು ಜೋರು ಜೋರಾಗಿ ಹಾರ್ನ್ ಮಾಡತೊಡಗಿದರು. ಸಿಗ್ನಲ್ ಗ್ರೀನ್ ಹೋಗಿ ಯೆಲ್ಲೋ ಆಗಿ, ರೆಡ್ ಗೂ ತಿರುಗಿತು! ಆದರೂ ಈಕೆಯ ಕಾರು ಸ್ಟಾರ್ಟ್ ಆಗಲಿಲ್ಲ. ಹಿಂದಿದ್ದವರ ಅಸಹನೆ ಹೆಚ್ಚಿ ಇಡೀ ಊರಿಗೇ ಕೇಳಿಸುವಂತೆ ಹಾರ್ನ್ ಮಾಡತೊಡಗಿದರು.
ಆಗ ಕೆಲಸಕ್ಕೆ ಹೊಸದಾಗಿ ಸೇರಿದ್ದ ಕ್ಯಾತಮಾರನ ಹಳ್ಳಿಯ ಸಿಗ್ನಲ್ ಮ್ಯಾನ್ ಸಿದ್ದಪ್ಪ ಪೊಲೀಸ್ ನಡಿಗೆಯಲ್ಲಿ ಓಡಿಬಂದು, “ಏನಾಯ್ತು ಮೇಡಂ? 3 ಬಣ್ಣಗಳಲ್ಲಿ ನಿಮಗೆ ಯಾವ ಬಣ್ಣ ಇಷ್ಟ ಆಗ್ತಿಲ್ಲವೇ?” ಎಂದು ಕಳಕಳಿಯಿಂದ ವಿಚಾರಿಸುವುದೇ?
ಮದುವೆಯಾದ 15 ದಿನಗಳಿಗೆ ಹೆಂಡತಿಯ ಬರ್ತ್ ಡೇ ಬಂತೆಂದು ಪರಮೇಶಿ ಹೂವಿನ ಬೊಕೆಗೆ ಆರ್ಡರ್ ಕೊಟ್ಟಿದ್ದ. ಬಿಸ್ ನೆಸ್ ಟೂರ್ ಎಂದು ಹೊರಟಿದ್ದರಿಂದ ಮುಂಬೈನಿಂದಲೇ ಬೆಂಗಳೂರಿನ ಫ್ಲವರಿಸ್ಟ್ ಗೆ ಆರ್ಡರ್ ಮಾಡಿ, ಹೊಸ ಹೆಂಡತಿಗೆ 24 ಹೂಗಳ ಬೊಕೆ ಕೊಡಲು ಸೂಚಿಸಿ, ಬೆಸ್ಟ್ ಹೂಗಳಿರಲಿ ಎಂದು 2 ಪಟ್ಟು ಹಣ ರವಾನಿಸಿದ್ದ.
ಹೆಂಡತಿಗೆ ಫೋನ್ ಮಾಡಿ ವಿಷ್ ಮಾಡುತ್ತಾ, “ನಿನಗೆ ಈಗ ಎಷ್ಟು ವರ್ಷ ತುಂಬಿದವೋ ಅಷ್ಟು ಹೂಗಳ ಬೊಕೆ ಬರಲಿದೆ!” ಎಂದು ತಿಳಿಸಿದ್ದ. ಅವಳು ಆತುರದಿಂದ ಅದಕ್ಕಾಗಿ ಕಾಯತೊಡಗಿದಳು.
ಅಂದಿನ ಡೀಲ್ ನಿಂದ ಸಂತೋಷಪಟ್ಟ ಫ್ಲಾರಿಸ್ಟ್ ಈ ಕಸ್ಟಮರ್ ಗೆ ಇನ್ನಷ್ಟು ಹೂಗಳ ಬೋನಸ್ ನನ್ನ ಪರವಾಗಿರಲಿ ಎಂದು ಬೊಕೆಗೆ 20 ಹೂಗಳನ್ನು ಹೆಚ್ಚಿಗೆ ಸೇರಿಸಿದ!
ಆ ಬೊಕೆಯ ಕೊರಿಯರ್ ಪಡೆದ ಪರಮೇಶಿಯ ಹೆಂಡತಿ, ಕೂಡಲೇ ಹೇಳದೇ ಕೇಳದೇ ತವರಿಗೆ ಹೊರಟು ಹೋದಳು ಎಷ್ಟು ದಿನಗಳಾದರೂ ವಾಪಸ್ಸು ಬರಲೇ ಇಲ್ಲ!
ಹೀಗೇಕಾಯಿತು ಎಂದು ಪರಮೇಶಿ ಲೆಕ್ಕ ಹಾಕುವುದರಲ್ಲಿ ಆತನಿಗೆ ವಯಸ್ಸಾಗಿ ಹೋಯಿತಂತೆ!
ಒಂದು ಸಲ ಒಬ್ಬ ತಾಯಿ ತನ್ನ 11 ವರ್ಷದ ಮಗಳಿಗೆ ಮೊಗ್ಗಿನ ಜಡೆ ಹಾಕಿಸಿ, ಗ್ರಾಂಡಾಗಿ ಫೋಟೋ ತೆಗೆಸಬೇಕೆಂದು ಸ್ಟುಡಿಯೋಗೆ ಕರೆದುಕೊಂಡು ಹೋದಳು.
ಫೋಟೋಗ್ರಾಫರ್ : ಮಗು, ಸೈಲೆಂಟ್ ಆಗಿ ಕುಳಿತು, ಸ್ಟೈಲಾಗಿ ಈ ಕಡೆ ಕ್ಯಾಮೆರಾ ನೋಡುತ್ತಿರು. ಒಂದು ಕ್ಷಣದಲ್ಲಿ ಕ್ಯಾಮೆರಾದಿಂದ ಗಿಣಿ ಹಾರಿ ಬರುತ್ತೆ!
ಮಗಳು : ಸಾಕು ಸುಮ್ನಿರ್ರೀ! ಮೊದಲು ನಿಮ್ಮ ಕ್ಯಾಮೆರಾ ಪಿಕ್ಸೆಲ್ ಸರಿ ಇದೆಯಾ ನೋಡಿ. ಅದನ್ನು ಪೋರ್ಟ್ರೇಟ್ ಮೋಡ್ ಗೆ ಸೆಟ್ ಮಾಡಿ, ಗುಡ್ ಪಿಕ್ಚರ್ ಕ್ಲಿಕ್ ಮಾಡಿ! ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಬೇಕು, ಹೈ ರೆಸಲ್ಯೂಶನ್ ಬರುತ್ತೆ ತಾನೇ? ಇದನ್ನೆಲ್ಲ ಬಿಟ್ಟು ಕ್ಯಾಮೆರಾದಿಂದ ಗಿಣಿ ಬರೋ ಕಥೆ ಹೇಳ್ಬೇಡಿ!
ಡಾಕ್ಟರ್ : ನೋಡಪ್ಪ, ನನ್ನ ಚಿಕಿತ್ಸೆಯಿಂದ ನಿನಗೆ ರೋಗ ಬೇಗ ವಾಸಿ ಆಯ್ತು ಅಂತ ಇಟ್ಕೋ, ಆಗ ನೀನು ನನಗೆ ಏನು ಕೊಡ್ತೀಯಾ?
ರೋಗಿ : ನಾನು ಬಹಳ ಬಡವ ಸ್ವಾಮಿ, ನಿಮ್ಮಂಥವರಿಗೆ ನಾನು ಏನು ಉಡುಗೊರೆ ಕೊಡಲಿ? ಸ್ಮಶಾನದಲ್ಲಿ ನಾನು ಹೆಣ ಹೂಳುವನು, ಬೇಕೆಂದ್ರೆ ನಿಮಗಾಗಿ ಫ್ರೀಯಾಗಿ ಹಳ್ಳ ತೋಡಿಡುವೆ ಸ್ವಾಮಿ!
ಬೆಂಗಳೂರಿಗೆ ಹೊಸದಾಗಿ ಬಂದ ರಾಜು, ವಾಸಕ್ಕೆಂದು ಅಂತೂ ಇಂತೂ ಒಂದು ಬಾಡಿಗೆ ಮನೆ ಹುಡುಕಿಕೊಂಡ.
ಎಂದಿನಂತೆ IPL ಕ್ರಿಕೆಟ್ ಸೀಸನ್ ಶುರುವಾಯಿತು. ಇದರಲ್ಲಿ ಹೇಗೆ ಪಂದ್ಯ ಕಟ್ಟಿ ಹಣ ಗೆಲ್ಲಬಹುದು ಎಂದು ರಾಜು ಮನೆ ಮಾಲೀಕರ ಜೊತೆ ಚರ್ಚಿಸ ತೊಡಗಿದ.
IPL ಸೀಸನ್ ಮುಗಿದಾಗ, ರಾಜು ಮಾತ್ರವಲ್ಲದೆ ಅವನ ಮಾಲೀಕನೂ, ಅವನ ಒಂಟಿ ಬಾಡಿಗೆ ಕೋಣೆಯಲ್ಲಿ ಶೇರ್ ಮಾಡಿಕೊಂಡು ವಾಸ ಮಾಡುವುದೇ?
ಗೀತಾ ತನ್ನ ಗ್ಲಾಮರಸ್ ಗೆಳತಿ ಸ್ಮಿತಾಳನ್ನು ಮನೆಗೆ ಆಹ್ವಾನಿಸಿದ್ದಳು. ಅವಳ ಪತಿರಾಯ ಸ್ಮಿತಾಳನ್ನು ಕಂಡು, ಮರೆತು ಹೆಂಡತಿ ಜೊತೆ ಬಂದ ಅತಿಥಿ ಎದುರು ಹರಟೆಗೆ ಕೂತೇಬಿಟ್ಟ.
ಅತ್ತ ಅಡುಗೆಮನೆಯಲ್ಲಿ ಕುಕ್ಕರ್ ಸೀಟಿ ಕೂಗುತ್ತಲೇ ಇತ್ತು. ಆದರೂ ಅಲ್ಲಿಂದ ಗೀತಾ ಏಳಲೇ ಇಲ್ಲ.
ಪತಿ : ಅಯ್ಯೋ…. ಕುಕ್ಕರ್ ಆಗಿನಿಂದ ಕೂಗ್ತಿದೆ. ಬೇಳೆ ಏನಾಯ್ತೋ ಏನೋ, ಹೋಗಿ ನೋಡಬಾರದೇ?
ಗೀತಾ : ಆ ಬೇಳೆ ಮನೆ ಹಾಳಾಯ್ತು, ಇಲ್ಲಿ ನಾನು ನಿಮ್ಮ ಬೇಳೆಕಾಳು ಬೇಯಲು ಬಿಡೋಲ್ಲ!
ಎಲ್ಲಾ ಕೋನಗಳಿಂದಲೂ ಬಗೆ ಬಗೆಯಾಗಿ 25 ಸೆಲ್ಛಿ ಕ್ಲಿಕ್ಕಿಸಿಕೊಂಡ ವೈಯಾರಿ ವಾಣಿಗೆ ಇನ್ನೂ ತೃಪ್ತಿ ಆಗಿರಲಿಲ್ಲ. ಯಾವುದನ್ನು FBಗೆ ಅಪ್ ಲೋಡ್ ಮಾಡಲಿ ಎಂದು ಯೋಚಿಸಿದ್ದೇ ಯೋಚಿಸಿದ್ದು.`ಮಾನಸಿಕ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯ ಏನೇನೂ ಹಿರಿದಲ್ಲ’ ಎಂದು ಹಿಂದಿನ ದಿನ ಲೇಖನದಲ್ಲಿ ಓದಿದ್ದು ನೆನಪಾಗಿ, ತನ್ನ ಎಲ್ಲಾ ಸೆಲ್ಛಿಗಳನ್ನೂ ಪರಾಮರ್ಶಿಸಿ, ಎಲ್ಲವನ್ನೂ ಒಂದೇ ಕ್ಲಿಕ್ ನಲ್ಲಿ ಡಿಲೀಟ್ ಮಾಡಿದಳಂತೆ!
ಹೊಸ ಸೊಸೆ : ಅತ್ತೆ…. ಅತ್ತೆ… ಇವತ್ತು ಸ್ವಲ್ಪ ನೀವೇ ಅಡುಗೆ ಮಾಡಿಬಿಡಿ. ನನಗೆ ತುಂಬಾ ತಲೆನೋವು. ಸ್ವಲ್ಪ ಹೊತ್ತು ಹಾಗೇ ಮಲಗಿರ್ತೀನಿ. ಮಧ್ಯಾಹ್ನ 2-3 ಗಂಟೆ ಹೊತ್ತಿಗೆ ಸರಿಹೋಗುತ್ತೆ ಅನ್ಸುತ್ತೆ….
ಹಳೆ ಅತ್ತೆ : ಆಗಲಿ ಬಿಡು, ಅದೇನು ಮಹಾ! ಆದರೆ ನಿನ್ನದೆಲ್ಲ ನಾಟಕ ಅಂತ ನನಗೆ ಗೊತ್ತಾಯಿತು ಬಿಡು. ಇಷ್ಟೆಲ್ಲ ಸುಳ್ಳ ಹೇಳಲೇ ಬೇಡ!
ಸೊಸೆ : ಅರೇ… ನಾನು ಹೇಳ್ತಿರೋದು ಸುಳ್ಳು ಅಂತ ನಿಮಗೆ ಹೇಗೆ ಗೊತ್ತಾಯ್ತು?
ಅತ್ತೆ : ನಾನೂ ಒಂದು ಕಾಲದಲ್ಲಿ ಹೊಸ ಸೊಸೆ ಆಗಿದ್ದೆ!