ನೀಳ್ಗಥೆ –  ಶಂಕರಾನಂದ ಹೆಬ್ಬಾಳ

ಒಳ್ಳೆಯ ಮನೆತನದ ಹೆಣ್ಣು ಮಗಳು ಸೌಮ್ಯಾ, ಯಾರನ್ನೋ ನಂಬಿಕೊಂಡು ಮನೆಯವರು ನಿಶ್ಚಯಿಸಿದ್ದ ಮದುವೆ ತೊರೆದು, ಪ್ರೀತಿಸಿದವನೊಂದಿಗೆ ಓಡಿಹೋದಳು. ಮುಂದೆ ಅವಳ ಭವಿಷ್ಯ……..?

ಅದು ಮೊದಲೇ ನಿಶ್ಚಯವಾದ ಮದುವೆ. ಪಂಡರಾಪುರದ ದೇಗುಲದಲ್ಲಿ ಒಲ್ಲದ ಸೋದರ ಮಾವನ ಜೊತೆಗೆ ಮದುವೆ ನಡೆಯಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಮಾವಿನೆಲೆಯ ತೋರಣಗಳಿಂದ ಕಲ್ಯಾಣ ಮಂಟಪವನ್ನು ಅಲಂಕಾರ ಮಾಡಲಾಗಿತ್ತು. ಎಲ್ಲೆಡೆಯಲ್ಲೂ ವಾದ್ಯಗಳ ಸದ್ದು ಕಿವಿಯಲ್ಲಿ ಮಂಗಳಕರವಾಗಿ ಕೇಳುತ್ತಿತ್ತು.

ಕೈಗಳಿಗೆ ಮದರಂಗಿಯ ಕೆಂಪು ಬಣ್ಣ ಬಳಿದುಕೊಂಡಿದ್ದ ಮದುಮಗಳು ಒಂದೇ ಸಮ ಅರಳಿದ ಕುಸುಮದಂತೆ ಹೊಳೆಯುತ್ತಿದ್ದಳು.

ಮದುಮಗ ಅದೇ ತಾನೇ ಕಡೆಗೋಲಿನಲ್ಲಿ ಕಡೆದಿಟ್ಟ ನವನೀತದಂತೆ ಮೃದು ಮನಸ್ಸಿನ ಕೋಮಲ ನವಭಾವಗಳೊಂದಿಗೆ ಹಸೆಮಣೆಯಲ್ಲಿ ಹೊಸ ಕನಸುಗಳನ್ನು ಕಾಣುತ್ತಿದ್ದನು.

ಹುಡುಗಿಯ ಗೆಳತಿ ಮದುಣಗಿತ್ತಿ (ಸೌಮ್ಯಾ)ಗೆ, “ಇರಲಿ…. ಸಮಾಧಾನ ತಂದುಕೋ….! ಹೆಣ್ಣು ಜನುಮನೇ ಇಷ್ಟು….! ಎಷ್ಟೆಷ್ಟೋ ಆಸೆ ಪಡುತ್ತೇವೆ…. ಆದರೆ ಕೊನೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿಯಬೇಕು ಕಣೇ,” ಎಂದು ಸಮಾಧಾನಪಡಿಸಿ ಆಕೆಯ ಅಲಂಕಾರದ ವೈಭವವನ್ನು ಮುಗಿಸಿ ಹೊರಟಳು, “ಹತ್ತು ನಿಮಿಷ…. ಬರುವೆ, ನಮ್ಮ ತಾಯಿ ಫೋನ್‌ ಮಾಡುತ್ತಿದ್ದಾರೆ,” ಎಂದು ಮಾತಾಡಲು ಹೊರಟು ಹೋದಳು.

ಅದೇ ಕ್ಷಣನ್ನು ಸರಿಯಾಗಿ ಬಳಸಿಕೊಂಡು, ಅಲ್ಲಿಂದ ಯಾರಿಗೂ ಗೊತ್ತಾಗದಂತೆ ಆ ಕನ್ಯೆ ಪರಾರಿಯಾದಳು.

ಸ್ವಲ್ಪ ಸಮಯದ ನಂತರ…..“ಸೌಮ್ಯಾ….. ಎಲ್ಲಿದ್ದೀಯಾ….? ಬೇಗ ಬಾ… ಸಮಯ ಮೀರುತಿದೆ. ಎಲ್ಲಿ ಹೋದೆ ಹಾಳಾಗಿ…. ಇನ್ನೂ ಅಲಂಕಾರ ಮುಗಿದಿಲ್ಲವೇನೆ….” ಎಂದರೂ ಕಮಕ್‌ ಕಿಮಕ್‌ ಎನ್ನದ ಮಗಳನ್ನು ನೋಡಿ ಕಿಟಕಿಯಲ್ಲಿ ಕಣ್ಣಾಡಿಸಿದಳು. ಅಲ್ಲಿ ಆಕೆಯ ಸುಳಿವೇ ಇರಲಿಲ್ಲ.

ಒಂದು ಕ್ಷಣದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲ….. ಹುಡುಕಿದರೂ ಒಳಗೂ ಇಲ್ಲ ಹೊರಗೂ ಇಲ್ಲ…. ಗಾಬರಿಯಿಂದ ಓಡಿ ಬಂದ ಸೌಮ್ಯಾಳ ಗೆಳತಿ, “ಅಮ್ಮ ಏನಾಯಿತಮ್ಮ…..?” ಎಂದು ಗೆಳತಿಯ ತಾಯಿಯನ್ನು ಕೇಳಿದಳು.

“ಏನು ಹೇಳಲಮ್ಮ….. ಸೌಮ್ಯಾ ಕಾಣೆಯಾಗಿದ್ದಾಳೆ ಎಲ್ಲೂ ಇಲ್ಲ,” ಎಂದರು ಸೌಮ್ಯಾಳ ತಾಯಿ.

`ಕಡೆಗೂ ಸೌಮ್ಯಾ ಹೇಳಿದಂತೆ ಮಾಡಿದ್ದಾಳೆ,’ ಎಂದು ಮನಸ್ಸಿನಲ್ಲಿ ನೆನೆಸಿದ ಗೆಳತಿ, “ಇಲ್ಲೇ ಎಲ್ಲೋ ಇರಬಹುದಮ್ಮ ನೋಡೋಣ,” ಎಂದಳು.

ಹಾಗಾದರೆ ಸೌಮ್ಯಾ ಎಲ್ಲಿ ಹೋಗಿರಬಹುದು….? ಏನಾಯಿತು….? ಈ ಮದುವೆ ಅವಳಿಗೆ ಇಷ್ಟವಿತ್ತೋ… ಇಲ್ಲವೋ….? ಹೀಗಾಗಲು ಕಾರಣವೇನು….?

ಅಲ್ಲಿಂದ ಪಲಾಯನ ಗೈದ ಸೌಮ್ಯಾ ಕಾಣದಂತೆ ಕಣ್ಮರೆಯಾದಳು. ಸುಳಿವೇ ಇಲ್ಲದ ಸುಳಿಗಾಳಿಯಂತೆ ಹಾಗೆ ಇದ್ದು ಹೀಗೆ ಕಣ್ಮರೆಯಾದಳು.

ಆ ಮದುವೆ ನಡೆಯುತ್ತಿದ್ದ ದೇಗುಲದಲ್ಲಿ ಇದ್ದಕ್ಕಿದ್ದಂತೆ ಮೌನ ಆವರಿಸಿತು. ಜೊತೆಗೆ ಮದುವೆ ಅರ್ಧಕ್ಕೆ ನಿಂತು ಹೋಯಿತು. ಮದುಮಗ ಜೋಲು ಮೊಗದಿಂದ ಮದುವೆಯ ಕನಸುಗಳನ್ನು ಅದುಮಿಟ್ಟುಕೊಂಡು, “ಅಕ್ಕಾ… ಇರಲಿ ಬಿಡು….! ಮತ್ತೆ ಅವಳು ಬಂದಾಗ ನೋಡುತ್ತೇನೆ. ನನ್ನ ಹಣೆಬರಹ ಚೆನ್ನಾಗಿಲ್ಲ….,” ಎನ್ನುತ್ತಾ ಒಳಗೊಳಗೆ ನೊಂದುಕೊಂಡ ಸೌಮ್ಯಾಳ ಸೋದರಮಾವ ಶಿವ ಅವಳದೇ ಧ್ಯಾನದಲ್ಲಿ ಲೀನನಾಗಿದ್ದ.

ಅಷ್ಟರಲ್ಲಿ ಆವಳು ಮಗನೊಬ್ಬ ಬಂದು, “ಅಮ್ಮಾವ್ರೆ…. ಚಿಕ್ಕ ಅಮ್ಮಾವ್ರು ಹೊಳೆ ದಡದ ತವಾ ತೆಪ್ಪ ಏರಿ ಹೋಗುತ್ತಿದ್ದುದನ್ನು ನೋಡಿದೆ,” ಎಂದು ಹೇಳಿದ.

ಎಲ್ಲರೂ ಅವಸರವಸರದಲ್ಲಿ ಸೌಮ್ಯಾಳ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದರು. ಸೌಮ್ಯಾಳ ಅಜ್ಜ ಯಂಕನಗೌಡ ವಿಷಯ ತಿಳಿದ ಮರುಕ್ಷಣವೇ, “ಹುಚ್ಚು ಹುಡುಗಿ ನಮ್ಮ ಮನೆತನದ ಮಾನ ಮರ್ಯಾದೆ ಕಳೆದು, ಮಸಿ ಹಚ್ಚಿಬಿಟ್ಲು…..,” ಎನ್ನುವ ಕೊರಗಿನಲ್ಲೇ ಪರಂಧಾಮಕ್ಕೆ ಸೇರಿದರು.

ಇದನ್ನು ನೋಡುತ್ತಿದ್ದಂತೆ ಯಂಕನಗೌಡರ ಮಗ ಶಂಕರಗೌಡ ತಂದೆಯ ಪರಿಸ್ಥಿತಿಯನ್ನು ನೋಡಿ ಕಣ್ಣೀರು ಸುರಿಸಿದ. ಪರಿಸ್ಥಿತಿ ಹೀಗಾಗಿದ್ದರಿಂದ ಒಂದಿಬ್ಬರು ಆಳುಗಳನ್ನು ಬಿಟ್ಟು ಸೌಮ್ಯಾಳನ್ನು ಹುಡುಕಲು ಮುಂದಾದರು.

ಮದುವೆ ಮನೆ ಮಸಣವಾಯಿತು. ಎಲ್ಲೆಲ್ಲೂ ಈಗ ನೀರವ ಮೌನ. ಮನೆಗೆ ಆಧಾರ ಸ್ತಂಭವಾಗಿದ್ದ ಯಂಕನಗೌಡ ತೀರಿಕೊಂಡಿದ್ದು ಕುಟುಂಬದಲ್ಲಿ ಎಲ್ಲರಿಗೂ ಆತೀ ದುಃಖ ಉಂಟಾಗಿತ್ತು.

ನಂತರ ಯಂಕನಗೌಡನ ಅಂತ್ಯ ಸಂಸ್ಕಾರ ದುಃಖದಿಂದ ನೆರವೇರಿತು. ಸೌಮ್ಯಾಳ ವರ್ತನೆಯಿಂದ ಎಲ್ಲರ ಮನಸ್ಸು ಘಾಸಿಗೊಂಡು ಹಿಡಿ ಶಾಪ ಹಾಕಿದರು. ಅದೇ ಸಮಯಕ್ಕೆ ಅತ್ತ ಕಡೆಯಿಂದ ಆಳು ಮಗನಿಂದ ಫೋನ್‌ ಬಂದಿತು.

“ಹಲೋ ಅಮ್ಮಾವ್ರೇ…. ನಾನು ಸುಬ್ಬು, ತೆಪ್ಪ ಏರಿ ಬಂದ್ರೂ ಕೂಡ ಚಿಕ್ಕಮ್ಮಾವ್ರ ಸುಳಿವು ಇಲ್ಲವೇ ಇಲ್ಲ…..” ಎಂದ.

“ಸರಿ ನೀವು ಆದಷ್ಟು ಬೇಗ ವಾಪಸ್‌ ಬನ್ನಿ. ಹುಷಾರು,” ಎಂದು ಫೋನ್‌ ಇಟ್ಟಳು ಸೌಮ್ಯಾಳ ತಾಯಿ.

`ಈ ದರಿದ್ರ ಈ ರೀತಿ ಮರ್ಯಾದೆ ಕಳೆಯೋ ಬಂದವಳು ನಾವು ಸತ್ತು ಹೋಗಿದ್ರೆ ಚೆನ್ನಾಗಿರುತ್ತಿತ್ತು,’ ಎಂದುಕೊಂಡಳು.

ಅತ್ತ ಸೌಮ್ಯಾ ನದಿ ದಾಟಿ ಓಡಬೇಕೆನ್ನುವಷ್ಟರಲ್ಲಿ ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿಸಿಕೊಂಡಳು. ಹೋಗಲು ದಾರಿ ಗೊತ್ತಿಲ್ಲ. ಯಾರಿಗಾದರೂ ಫೋನ್‌ ಮಾಡೋಣವೆಂದರೆ ನೆಟ್‌ ವರ್ಕ್‌ ಸಿಗದೆ ಬಲು ಗೊಂದಲದ ಸಮಸ್ಯೆಗೆ ಸಿಲುಕಿಕೊಂಡಳು. ಅಲ್ಲದೆ, ಅಜ್ಞಾತ ಪ್ರದೇಶದಲ್ಲಿ ಸಿಲುಕಿದ ಅವಳು ಅಜ್ಞಾನಿಯಂತಾದಳು.

ಅಲ್ಲೇ ಎಲ್ಲರನ್ನೂ ನೆನೆದು ನಿದ್ದೆಗೆ ಜಾರಿದಳು. ಸಮಯ ಕಳೆಯಿತು. ಸೂರ್ಯ ನಡುನೆತ್ತಿಯಿಂದ ಪಡುವಣಕ್ಕೆ ಜಾರಿದ್ದ. ಇನ್ನೇನು ಎಲ್ಲೆಲ್ಲೂ  ನಾಯಿ ನರಿ, ಸಿಂಹ, ಹುಲಿಗಳ ಕೂಗು ಕೇಳಿದಂತಿತ್ತು. ಅವಳು ಕಣ್ಣು ತೆರೆದು ನೋಡಿದರೆ, ಯಾವುದೋ ಕಾಡಿನ ದೇವಿ ಮುಂದೆ ಅವಳನ್ನು ಬಲಿ ಪಶುವನ್ನಾಗಿ ನಿಲ್ಲಿಸಿದ್ದರು.

ಬೊಬ್ಬೆ ಹೊಡೆದರೂ ಕೇಳುವವರಿಲ್ಲ…. ಹೇಗೆ ತಪ್ಪಿಸಿಕೊಳ್ಳುವುದು ಎಂದು ಭಯವಾಯಿತು. ಮನದಲ್ಲಿ ನೊಂದಕೊಂಡು ಅತ್ತು ಚೀರಾಡಿದಳು, ನರಳಾಡಿದಳು. ತಾನು ಹೀಗೆ ಮಾಡಬಾರದಿತ್ತು ಎಂದು ತನ್ನನ್ನು ತಾನೇ ಹಳಿದುಕೊಂಡಳು. ಆದರೂ ಆ ಕಾಡಿನ ಜನರಿಗೆ ಅವಳನ್ನು ನೋಡಿ ಎಳ್ಳಷ್ಟೂ ಕನಿಕರ ಬರಲಿಲ್ಲ.

`ಇನ್ನು ತನ್ನ ಪ್ರಾಣ ಆ ಪರಮೇಶ್ವರನ ಪಾದ ಸೇರುವುದು ಗ್ಯಾರಂಟಿ ಎಂದು ನಿಶ್ಚಯಿಸಿದಳು. ಇದರ ಬದಲು ಸೋದರ ಮಾವನನ್ನು ಮದುವೆಯಾಗಿದ್ದರೆ ಎಷ್ಟೋ ಪಾಲು ಉತ್ತಮವಾಗಿರುತ್ತಿತ್ತು,’ ಎಂದು ಗೊಣಗಿದಳು.

ಕಳೆದು ಹೋದ ಕ್ಷಣ ಮತ್ತೆ ಬರುವುದಿಲ್ಲ ಎನ್ನುವ ಮಾತು ನೆನೆದು, ಜೀವವನ್ನು ಕಳೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಅಲ್ಲಿ ಗುಂಡಿನ ಸದ್ದು ಕೇಳಿಸಿತು. ಆ ಶಬ್ದಕ್ಕೆ ಕಾಡಿನ ಜನ ಬೆಚ್ಚಿಬಿದ್ದರು. ಅಲ್ಲಿ ರಣಧೀರನಂತೆ ಆಗಮಿಸಿದ್ದು ಇವಳ ಪ್ರಿಯಕರ ರಾಕೇಶ್‌. ಮಿಂಚಿನಂತೆ ಆಗಮಿಸಿ ಇವಳಲ್ಲಿ ನವ ಉತ್ಸಾಹ ತುಂಬಿ ಎಲ್ಲರನ್ನೂ ಕೊಂದು ಅಲ್ಲಿಂದ ಪರಾರಿಯಾದರು ಆ ಪ್ರೇಮಿಗಳು. ಆ ಕಾಡನ್ನು ದಾಟಿದ ಪ್ರೇಮಿಗಳು ಹೇಗೋ ಏನೋ ರೈಲ್ವೆ ಸ್ಟೇಷನ್‌ ಹತ್ತಿರ ಬಂದು ಪರಸ್ಪರ ತಬ್ಬಿಕೊಂಡರು.

umarbhar-ka-rista-story

“ಸೌಮ್ಯಾ…..!”

“ರಾಕು…. ನೀನು ಬರದಿದ್ದರೆ ನನ್ನ ಪ್ರಾಣ ಯಮನ ಕೈಯಲ್ಲಿರುತ್ತಿತ್ತು,” ಎಂದು ಕಣ್ಣೀರ ಧಾರೆ ಸುರಿಸಿದಳು.

“ನನಗೆ ನೀನು ಫೋನ್‌ ಮಾಡಿದಾಗ,  ಕಾಡಿನಲ್ಲಿ ಹೀಗೇನಾದ್ರೂ ಅವಘಡ ಸಂಭವಿಸುತ್ತೆ ಎಂದು ಗೊತ್ತಿತ್ತು. ಇರಲಿ ಬಿಡು, ಈಗೇಕೆ ಆ ಚಿಂತೆ? ನಾನಿದ್ದೀನಲ್ಲ ಎಲ್ಲಾ ಸರಿಹೋಗುತ್ತೆ,” ಎನ್ನುತ್ತಾ ಬಲವಾದ ಹಿಡಿತದಲ್ಲಿ ಪರಸ್ಪರ ಅಗಲದ ಜೀವಗಳಂತೆ ಒಬ್ಬೊರನ್ನೊಬ್ಬರು ತಬ್ಬಿಕೊಂಡರು. ಇಬ್ಬರೂ ರೈಲಿನ ಆಗಮನಕ್ಕಾಗಿ ಕಾದು ಕುಳಿತರು. ಆಗ ಸಮಯ ರಾತ್ರಿ 10 ಗಂಟೆ ದಾಟಿತ್ತು.

“ಸೌಮ್ಯಾ, ಸ್ವಲ್ಪ ಇಲ್ಲೇ ಇರು… ಈಗ ಯಾವ ರೈಲು ಇದೆಯೆಂದು ಸ್ಟೇಷನ್‌ ಮಾಸ್ಟರ್‌ ನ್ನು ಕೇಳಿ ಬರುತ್ತೇನೆ,” ಎಂದ ರಾಕೇಶ್.

“ಸರಿ…” ಎಂದಳು ಸೌಮ್ಯಾ.

ರಾಕೇಶ್‌ ಸ್ಟೇಷನ್‌ ಮಾಸ್ಟರ್‌ ಬಳಿ ಹೋಗಿ, “ಸರ್‌….”

“ಹೇಳಿ ಏನಾಗಬೇಕಿತ್ತು….” ಕೇಳಿದರು ಸ್ಟೇಷನ್‌ ಮಾಸ್ಟರ್‌.

“ತಿರುಚ್ಚಿಗೆ ಹೋಗಲು ಗಾಡಿ ಯಾವುದಿದೆ….? ಎಷ್ಟು ಹೊತ್ತಿಗೆ ಬರುತ್ತದೆ?”

“ಈಗ 11 ಗಂಟೆಗೆ ನಾಗರ ಕೋಯಿಲ್ ರೈಲು ಇದೆ. ಅದು ಬೆಳಗ್ಗೆ 6 ಗಂಟೆಗೆ ತಿರುಚ್ಚಿಗೆ  ಹೋಗುತ್ತೆ.”

ಎರಡು ಟಿಕೆಟ್‌ ಖರೀದಿಸಿದ ರಾಕೇಶ್‌, “ನಾಳೆ ಬೆಳಗ್ಗೆ 6 ಗಂಟೆಗೆ ತಿರುಚ್ಚಿಗೆ ಹೋಗುತ್ತೇವೆ ಡೋಂಟ್‌ ವರಿ,” ಎಂದು ಸೌಮ್ಯಾಳನ್ನು ಸಮಾಧಾನ ಪಡಿಸಿದ.

ಅಷ್ಟು ಹೊತ್ತಿಗೆ ಗುಡುಗು, ಸಿಡಿಲಿನ ಮಳೆಯ ಆರ್ಭಟ ಪ್ರಾರಂಭವಾಯಿತು. ಹೊಟ್ಟೆ ಕೂಡ ಹಸಿಯುತ್ತಿತ್ತು. ತಿನ್ನಲೂ, ಕುಡಿಯಲು ಏನೂ ಇರಲಿಲ್ಲ. ಸರಿ ಹೇಗೋ ರೈಲು ಗಾಡಿ ಬಂದಿತು. ಇಬ್ಬರೂ ಗಾಡಿ ಹತ್ತಿ ಕುಳಿತರು.

“ರಾಕು…. ನನ್ನ ಕೈ ಬಿಡಬೇಡ ನಿನ್ನನ್ನೇ ನಂಬಿದ್ದೇನೆ,” ಎಂದು ಅಳುತ್ತಾ ನಿದ್ದೆಗೆ ಜಾರಿದಳು. ರಾಕೇಶ್‌ ವಿಚಾರ ಮಗ್ನನಾಗಿದ್ದ.

ರೈಲು ಗಡ ಗಡ ಎಂದು ಸದ್ದು ಮಾಡುತ್ತಾ ಸಾಗುತ್ತಿತ್ತು. ಸೌಮ್ಯಾ ಮನೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಾಗಿದಳು. ಈ ಮಧ್ಯೆ ಸಮಯ ರಾತ್ರಿ 1 ಗಂಟೆ. ಸೊಲ್ಲಾಪುರ ಬೈಪಾಸ್‌ ಹತ್ತಿರ ಗಾಡಿ ಒಮ್ಮಿಂದೊಮ್ಮೆಲೆ ದಡಕ್‌ ದಡಕ್‌ ಎಂದು ನಿಂತೇ ಬಿಟ್ಟಿತು. ರಾಕೇಶ್‌ ಎದ್ದು ತಿನ್ನಲು ಏನಾದರೂ ತರೋಣವೆಂದು ಕೆಳಗಿಳಿದ. ಅಲ್ಲಿ ಸಿಗುವ ಗಿರ್‌ ಮಿಟ್‌ ನಾಲ್ಕು ಪಾರ್ಸಲ್ ಕಟ್ಟಿಸಿಕೊಂಡು, ಜೊತೆಗೆ ನೀರಿನ ಬಾಟಲ್ ತಂದ.

“ಸೌಮ್ಯಾ…. ಏಳು,” ಎಂದು ಅವಳನ್ನು ಎಬ್ಬಿಸಿ ಗಿರ್‌ ಮಿಟ್‌ ತಿನ್ನಿಸಿದ.

ರಾಕೇಶ್‌ ಗಿರ್‌ ಮಿಟ್‌ ತಿನ್ನುತ್ತಾ ಒಂದೆರಡು ಪ್ರೀತಿಯ ಮಾತನಾಡಿದ. ಅವಳು ಕೂಡಾ ಮನೆಯವರನ್ನು ನೆನೆಸಿಕೊಂಡರೂ, ಇವನ ಪ್ರೀತಿಯ ಮುಂದೆ ಅದು ಒಂದು ಕ್ಷಣ ಬಿದ್ದ ಕನಸಿನಂತೆ ಮರೆತೇ ಹೋಯಿತು. ಗಾಡಿ ಮತ್ತೆ ಪ್ರಾರಂಭವಾಯಿತು. ಮತ್ತೆ ಪ್ರೇಮಿಗಳಿಬ್ಬರೂ ನಿದ್ರಾ ಲೋಕಕ್ಕೆ ಜಾರಿದರು. ಸಮಯ 2.30 ಗಂಟೆ.

ಎಚ್ಚರಗೊಂಡ ಸೌಮ್ಯಾ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕತೊಡಗಿದಳು.

ಅವಳು ಹುಟ್ಟಿದ್ದು ಕಲಬುರುಗಿಯಲ್ಲಿ. ತಂದೆ ಶಂಕರಗೌಡ, ಅಜ್ಜ ಯಂಕನಗೌಡ. ಊರಿನ ದೊಡ್ಡ ಗೌಡರ ಮನೆತನ ಅವರದು. ಆವಳು ಕಾಳು ಜೊತೆಗೆ ಎಲ್ಲೆಲ್ಲೂ ಹೊಲ ಮನೆ ಮುದ್ದಾದ ಒಬ್ಬಳು ತಂಗಿ. `ತಾನೇಕೆ ಹೀಗೆ ಮಾಡಿದೆ….? ನಾನು ಮಾಡಿದ್ದು ತಪ್ಪಾಯಿತೆ….? ನಾನು ಮಾಡಿದ್ದು ಸರಿಯೇ….? ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿತಿದ್ದು ತಪ್ಪಾಯಿತೆ…?’ ಎಲ್ಲವೂ ಪ್ರಶ್ನೆಯಾಗಿ ಉಳಿದವು.

ಅದು ಹರೆಯದ ವಯಸ್ಸು…. ಬೇಕಿದ್ದನ್ನು ಪಡೆಯಲೇಬೇಕೆಂದು ತವಕದಿಂದ ಹೀಗೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಬಂಗಾರದಂತಹ ಮನೆತನವನ್ನು ಬಿಟ್ಟು ಹೀಗೆ ಬಂದಿದ್ದು ತನ್ನದೇ ತಪ್ಪು ಎಂದು ಪಶ್ಚಾತ್ತಾಪ ಪಟ್ಟುಕೊಂಡಳು.

ರೈಲು ಗಾಡಿ ಉರುಳಿದಂತೆ ನೆನಪುಗಳ ಸರಮಾಲೆಯಲ್ಲಿ ಮಿಂದ ಆಕೆ ಬಾಲ್ಯದ ಹಳೆಯ ನೆನಪುಗಳಲ್ಲಿ ಮುಳುಗಿದಳು. ತಾನು ಹೆಚ್ಚಿಗೆ ಓದಬೇಕೆಂದು ಹಠ ಹಿಡಿದು, ಒಂದು ವಾರ ಊಟ ಬಿಟ್ಟಿದ್ದು, ನಂತರ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಪ್ರವೇಶ ಪಡೆದದ್ದು, ಎಲ್ಲವೂ ಕಣ್ಮುಂದೆ ಮರೀಚಿಕೆಯಂತೆ ಕುಣಿಯತೊಡಗಿತು. ಇರಲಿ ನನ್ನ ಹಣೆಬರಹವೇ ಇಷ್ಟು ಎಂದುಕೊಂಡು ರಾಕೇಶನ ತೊಡೆ ಮೇಲೆ ಮಲಗಿ ನಿದ್ರೆಗೆ ಜಾರಿದಳು. ರಾಕೇಶ್‌ ಕೂಡ ವಿದ್ಯಾಂತನಾಗಿದ್ದ. ಆದರೆ ರಾಕೇಶನ ಅಂತರಾಳವನ್ನು ಸೌಮ್ಯಾ ಅರ್ಥ ಮಾಡಿಕೊಳ್ಳದೆ ಮೇಲ್ನೋಟ ಮಾತ್ರ ನಂಬಿದ್ದಳು. ಇಷ್ಟಕ್ಕೂ ರಾಕೇಶ್‌ ಒಬ್ಬ ದುಷ್ಟ, ಹೆಣ್ಣು ಮಕ್ಕಳ ಮಾರಾಟದ ಏಜೆಂಟ್‌ ಎಂದು ಅವಳಿಗೆ ಗೊತ್ತಿರಲಿಲ್ಲ. ಬಹುಶಃ ಅವನ ಮೇಲ್ನೋಟದ ಮುಗ್ಧ ನಗೆಯನ್ನು ನಂಬಿ ಮರುಳಾದ ಹೆಣ್ಣು ಸೌಮ್ಯಾ…..!

ರಾಕೇಶ್‌ ಅವಳನ್ನು ಹೇಗಾದರೂ ಮಾಡಿ ರೆಡ್‌ ಲೈಟ್‌ ಏರಿಯಾಕ್ಕೆ ಲಕ್ಷಾಂತರ ರೂ.ಗಳಿಗೆ ಮಾರಬೇಕೆಂದು ನಿಶ್ಚಯಿಸಿ ಕರೆದುಕೊಂಡು ಹೊರಟಿದ್ದ. ಸೌಮ್ಯಾಳಿಗೆ ಎಚ್ಚರವಾಯಿತು. ಕಣ್ತೆರೆದು ನೋಡಿದಳು. ಹೊರಗಡೆ ಚುಮುಚುಮು ಬೆಳಕು. ಸೂರ್ಯ ಅದೇ ತಾನೇ ಡ್ಯೂಟಿಗೆ ಹಾಜರಾಗುತ್ತಿದ್ದ. ನಿತ್ಯ ಕರ್ಮಗಳನ್ನು ರೈಲಿನಲ್ಲೇ ಮುಗಿಸಿ, ಬಂದವಳಿಗೆ ರಾಕೇಶ್‌ ಕುಡಿಯಲು ಚಹಾ ತಂದುಕೊಟ್ಟ. ಚಹಾವನ್ನು ಹೀರುತ್ತಾ, ಸವಿ ಮಾತುಗಳನ್ನಾಡುತ್ತಾ ರಾಕೇಶನ ಜೊತೆ ಆಡುತ್ತಾ ಅವನ ಭುಜದ ಮೇಲೆ ಒರಗಿ ಅವನ ಕೈ ಹಿಡಿದುಕೊಂಡು, “ರಾಕೇಶ್‌ ನನ್ನ ಕೈಬಿಡುವುದಿಲ್ಲ ತಾನೇ….,” ಎಂದು ಪದೇ ಪದೇ ಕಣ್ಣೀರಿಟ್ಟು ಅವನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು.

“ಡೋಂಟ್‌ ವರಿ ಸೌಮ್ಯಾ…. ನಾನಿರೋವಾಗ ನಿನಗೇಕೆ ಚಿಂತೆ….?” ಎಂದು ಸಮಾಧಾನ ಪಡಿಸಿದ.

ಗಾಡಿ ಚಲಿಸುತ್ತಿತ್ತು. ತಿರುಚ್ಚಿ 10 ಕಿ.ಮೀ. ಇದೆ ಎಂದು ರಾಕೇಶ್‌ ಯಾರಿಗೋ ಫೋನ್‌ ಮಾಡಿ, “ನಾನು ಬರುತ್ತಿದ್ದೇನೆ. ಎಲ್ಲಾ ವ್ಯವಸ್ಥೆ ಮಾಡು,” ಎಂದು ತಿಳಿಸಿದ.

“ಎಲ್ಲಿಗೆ ಹೋಗುತಿದ್ದೇವೆ?” ಎಂದು ಸೌಮ್ಯಾ ಕೇಳಿದಳು.

“ಹೋಟೆಲ್ ‌ರೂಂ ಬುಕ್‌ ಮಾಡುತ್ತಿದ್ದೇನೆ,” ಎಂದು ಸವಿಯಾಗಿ ಮಾತನಾಡುತ್ತಾ ಮಸ್ಕಾ ಹೊಡೆದ.

ತಿರುಚ್ಚಿ ನಿಲ್ದಾಣ ಬಂದಿತು. ಪ್ರಯಾಣಿಕರು ಗುಂಪು ಗುಂಪಾಗಿ ಇಳಿದು ಹೊರಟರು. ಸೌಮ್ಯಾ ಮತ್ತು ರಾಕೇಶ್‌ ಇಳಿದರು. ಟ್ಯಾಕ್ಸಿ ರೆಡಿ ಇತ್ತು. ಹೋಟೆಲ್ ವೈಭವ್ ಗೆ ಹೊರಡೋಣವೇ ಎಂದು ಹೇಳಿ ಟ್ಯಾಕ್ಸಿಯಲ್ಲಿ ಹೋಟೆಲ್ ‌ವೈಭವ್ ತಲುಪಿ, ರೂಮಿಗೆ ಹೋದರು. ಇಬ್ಬರೂ ಫ್ರೆಶ್‌ ಅಪ್‌ ಆದರು.

ಅಷ್ಟರಲ್ಲಿ  ಬಾಗಿಲ ಬೆಲ್ ‌ಸದ್ದಾಯಿತು. ಯಾರಿರಬಹುದು ಎಂದು ಬಾಗಿಲು ತೆರೆದಾಗ ಟಿಫಿನ್‌ ಎಂದು ಮಾಣಿ ಬಂದು ನಿಂತಿದ್ದ.

“ಓ…. ಟಿಫನ್‌ ಬಂದಿತು,” ಎನ್ನುತ್ತಾ ಹೊಟ್ಟೆ ತುಂಬಾ ತಿಂದು ನೆಮ್ಮದಿಯ ನಿಟ್ಟುಸಿರುಬಿಟ್ಟಳು ಸೌಮ್ಯಾ.

ರಾಕೇಶ್‌ ಕೂಡ ಟಿಫಿನ್‌ ತಿಂದ. ಇಬ್ಬರೂ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರು.

“ಸೌಮ್ಯಾ….. ನಾನು ಒಂದು ಕೆಲಸಕ್ಕೆ ಅರ್ಜಿ ಕೊಟ್ಟಿದ್ದೆ. ಹೋಗಿ ಬರ್ತೀನಿ…. ನೀನು ಇಲ್ಲೇ ಇರು. ಆ ಕೆಲಸ ಸಿಕ್ಕರೆ ಒಬ್ಬ ಮನುಷ್ಯನನ್ನು ನಿನ್ನ ಹತ್ತಿರ ಕಳಿಸ್ತೀನಿ. ಅವನ ಜೊತೆಗೆ ನೀನು ಬಂದುಬಿಡು,” ಎಂದು ಹೇಳಿ ಹೊರಟುಹೋದ.

ಸೌಮ್ಯಾಳಿಗಾಗಿ ಅವಳ ಮನೆಯಲ್ಲಿ ನಿರಂತರ ಶೋಧ ನಡೆಯುತ್ತಲೇ ಇತ್ತು. ಅವಳ ತಂದೆ ಶಂಕರಗೌಡ ಮಗಳ ಈ ದುಶ್ಕೃತ್ಯಕ್ಕಾಗಿ ಶಪಿಸಿ ಶಪಿಸಿ ಛೀಮಾರಿ ಹಾಕುತ್ತಿದ್ದ.

“ಎಷ್ಟು ದಿನ ಕಾಯ್ದುಕೊಂಡಿದ್ದಳೋ ಹೀಗೆ ಮಾಡಲಿಕ್ಕೆ…. ನಮ್ಮ ಹೊಟ್ಟೆ ಉರಿಸೋದಕ್ಕೆ ಹುಟ್ಟಿದ ಅನಿಷ್ಠ ಪಿಂಡ ಇದು,” ಎಂದು ಬಾಯಿಗೆ ಬಂದಂತೆ ಬೈಯುತ್ತಲೇ ಇದ್ದ.

ಅವಳ ತಾಯಿಯಂತೂ ಜೀವಂತ ಶವವಾಗಿ ಊಟ, ನಿದ್ದೆಯಿಲ್ಲದೆ ಮಗಳಿಗಾಗಿ ಹಂಬಲಿಸುತ್ತಿದ್ದಳು.

ಜನರಂತೂ ಅವರ ಪರಿಸ್ಥಿತಿ ಕಂಡು, “ಎಂಥ ಮನೆತನದವರಿಗೆ ದೇವರು ಎಂಥಾ ಶಿಕ್ಷೆ ಕೊಟ್ಟುಬಿಟ್ಟ ಪಾಪ….. ಹೀಗಾಗಬಾರದಿತ್ತು,”  ಎಂದು ದೇವರನ್ನೇ ಶಪಿಸುತ್ತಿದ್ದರು.

ಶಂಕರಗೌಡ ತನ್ನ ಮೈದುನ ಶಿವನಿಗೆ ಬೇರೆ ಕಡೆ ಹೆಣ್ಣು ಹುಡುಕತೊಡಗಿದ.

“ಭಾವ… ಇರಲಿ ಬಿಡು. ನೀನು ತಾನೇ ಏನು ಮಾಡ್ತೀಯಾ….? ಎಲ್ಲಾ ಅವಳಿಷ್ಟ,” ಎಂದ ಜೀವನದಲ್ಲಿ ಜಿಗುಪ್ಸೆ ತಾಳಿದ್ದ ಶಿವ.

ಕೊನೆಗೆ ಮನೆಯ ಎಲ್ಲರೂ ಅವನನ್ನು ಒಪ್ಪಿಸಿ ಮೂಲೆ ಮನೆ ಶಿಲ್ಪಾಳನ್ನು ಅವನಿಗೆ ಕೊಟ್ಟು ಮದುವೆ ಮಾಡಲಾಯಿತು. ಶಿಲ್ಪಾ ತಾಯಿಯಿಲ್ಲದ ಹೆಣ್ಣು. ಮೆಟ್ರಿಕ್‌ ತನಕ ಓದಿದ ಹುಡುಗಿ. ಸುಸಂಸ್ಕೃತ ಮನೆತನದ ಹುಡುಗಿ. ಶಂಕರಗೌಡನ ಬಾಲ್ಯ ಸ್ನೇಹಿತ ಈರಪ್ಪನ ಮಗಳೇ ಈ ಶಿಲ್ಪಾ.

ದೈವೇಚ್ಛೆ ಎಂದರೆ ಇದೇ ತಾನೇ….. ಬಂಗಾರದಂಥ ಮನೆಗೆ ಬಂಗಾರವೇ ಅರಸಿ ಬರುವಂತೆ ಶಿಲ್ಪಾ ಗೌಡರ ಮನೆ ಮಗಳಾಗಿ ಶಿವನಿಗೆ ಹೆಂಡತಿಯಾಗಿ ಜೀವನ ಆರಂಭಿಸಿದಳು.

ಶಂಕರಗೌಡನ ನೆಚ್ಚಿನ ಮಗಳಾಗಿ ಮಗಳಿಲ್ಲ ಎಂಬ ಕೊರಗನ್ನು ಶಿಲ್ಪಾ ತುಂಬಿದ್ದಳು. ಶಿಲ್ಪಾ ಮನೆ ಸೊಸೆಯಾಗಿ ಬಂದ ಮೇಲೆ ಎಲ್ಲರ ಮೊಗದಲ್ಲಿ ಕಳೆ ತುಂಬಿ ಬಂದಿತ್ತು.

ಹೀಗೆ 10 ವರ್ಷಗಳು ಸಂದವು. ಶಿಲ್ಪಾಳಿಗೆ ಈಗ ಎರಡು ಮಕ್ಕಳು ಒಂದು ಗಂಡು, ಒಂದು ಹೆಣ್ಣು. ಶಂಕರಗೌಡನಂತೂ ಶಿವನನ್ನು ಮಗನೆಂದು, ಶಿಲ್ಪಾಳನ್ನು ಮಗಳೆಂದೇ ಭಾವಿಸಿದ್ದನು. ಮೊಮ್ಮಕ್ಕಳ ಜೊತೆಗೆ ಸದಾಕಾಲ ಕಾಲ ಕಳೆಯುತ್ತಿದ್ದ ಶಂಕರಗೌಡ. ಒಮ್ಮೊಮ್ಮೆ ಮುದ್ದಿನ ಮಗಳ ನೆನಪು ಮೊಮ್ಮಗಳ ಮುಖ ನೋಡಿದಾಗ ಬರುತ್ತಿತ್ತು.

“ಸೌಮ್ಯಾ ಚಿಕ್ಕವಳಿದ್ದಾಗ ಹೀಗೆ ಇದ್ದಳಲ್ಲ….” ಎಂದು ಹೆಂಡತಿಗೆ ಸಾವಿರ ಸಲ ಹೇಳುತ್ತಿದ್ದ.

“ಕಳೆದ ವಿಷಯವನ್ನು ನೆನಪಿಸಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ ಅಪ್ಪಾಜಿ….” ಎಂದು ಶಿಲ್ಪಾ ಗೌಡರಿಗೆ ಹೇಳುತ್ತಿದ್ದಳು.

“ಹೌದು ಶಿಲ್ಪಾ…. ನಿನ್ನ ಮಾತು ಸತ್ಯ. ಅವಳಿಂದ ನನಗೆ ಸಿಕ್ಕಿದ್ದು ಬರೀ ನೋವು. ಈಗ ಅವಳೆಲ್ಲಿದ್ದಾಳೋ ಏನೋ….? ಬದುಕಿದ್ದಾಳೋ ಸತ್ತಿದ್ದಾಳೋ ಗೊತ್ತಿಲ್ಲ…..” ಎಂದು ನಿಟ್ಟುಸಿರುಬಿಡುತ್ತಿದ್ದ.

ಅತ್ತ ಕೆಲಸಕ್ಕೆಂದು ಹೋದ ರಾಕೇಶ್‌ ಎರಡು ದಿನವಾದರೂ ಮರಳಿ ಬರಲೇ ಇಲ್ಲ. ಫೋನ್‌ ಸ್ವಿಚ್‌ ಆಫ್‌ ಮಾಡಿದ್ದ.  ಏನು ಮಾಡುವುದೆಂದು ತಿಳಿಯದಾಯಿತು. ಅದೇ ಸಮಯಕ್ಕೆ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಹೋಗಿ ಬಾಗಿಲನ್ನು ತೆಗೆದರೆ ಒಬ್ಬ ನಡುವಯಸ್ಸಿನ ಹೆಣ್ಣು ಮಗಳು, “ಅಮ್ಮಾ…. ರಾಕೇಶ್‌ ಅಣ್ಣನವರು ಕರೆದುಕೊಂಡು ಬಾ ಎಂದು ಕಳಿಸಿದ್ದಾರೆ,” ಎಂದಳು.

“ನೀನು ಯಾರು….?” ಎಂದು ಪ್ರಶ್ನಿಸಿದಳು ಸೌಮ್ಯಾ.

“ನಾನು ಅವರ ಮನೆಯ ಕೆಲಸದವಳು. ಒಂದು ರೀತಿ ತಂಗಿ ಇದ್ದಂತೆ…. ಅಣ್ಣ ಕೆಲಸಕ್ಕೆ ಹೋಗುವ ಅವಸರದಲ್ಲಿ ಬಹಳ ಬ್ಯುಸಿ ಆಗಿದ್ದು, ನೀನೇ ಕರೆದುಕೊಂಡು ಬಾ, ಎಂದು ಅಡ್ರೆಸ್‌ ಕೊಟ್ಟು ಕಳಿಸಿದ್ದಾರೆ,” ಎಂದು ತಿಳಿಸಿದಳು.

maphi-story2

“ಸರಿ…. ಲಗೇಜ್‌ ಪ್ಯಾಕ್‌ ಮಾಡಿಕೋ….,” ಎಂದು ಲಗೇಜ್‌ ಪ್ಯಾಕ್‌ ಮಾಡಿಸಿ ರೂಮ್ ಕೀ ಕೊಟ್ಟು ಅವಳ ಹಿಂದೆ ಹೋದಳು. ಅದಾಗಲೇ ರಾಕೇಶ್‌ ಅವಳನ್ನು ವೇಶ್ಯಾವಾಟಿಕೆ ದಂಧೆ ಮಾಡುವವರಿಗೆ 10 ಲಕ್ಷಕ್ಕೆ ಮಾರಿಬಿಟ್ಟಿದ್ದ. ಅದೂ ಅವಳಿಗೇ ಗೊತ್ತಾಗದಂತೆ. ಅವಳು ಆ ಹೆಂಗಸಿನ ಜೊತೆಗೆ ಹೋದಾಗ ಅವಳು ಸ್ವಲ್ಪ ದುಗುಡದಿಂದಲೇ  ಹೋದಳು. ಹೋದ ಜಾಗ ರೆಡ್ ಲೈಟ್‌ ಏರಿಯಾ ಎಂದು ಆಕೆಗೆ ಗೊತ್ತಾಗಲಿಲ್ಲ.

ಒಂದು ಮನೆಯಲ್ಲಿ ಅವಳನ್ನು ಇರಿಸಲಾಯಿತು. ಎರಡು ದಿನ ಇಲ್ಲೇ ಉಳಿದುಕೋ. ನಂತರ ರಾಕೇಶ್‌ ಬರುತ್ತಾನೆ ಎಂದು ಹೇಳಿ ಆ ಹೆಂಗಸು ಹೊರಟುಹೋದಳು.

ಅಲ್ಲಿ ಮತ್ತೊಬ್ಬ ಹೆಣ್ಣು ಇವಳ ಗುಣಗಾನ ಮಾಡುತ್ತಾ…. “ಏನ್‌ ಪಸಂದಾಗಿದಿಯಾ ಕಣಮ್ಮಿ…..! ಯಾವೂರು….?”

“ಸೊಲ್ಲಾಪುರ…..” ಎಂದಳು.

“ಇಲ್ಲಿಗೆ ಬಂದ ಕಾರಣ….?”

“ಪ್ರೀತಿಸಿದ ಹುಡುಗನ ಜೊತೆ ಬಂದಿದ್ದೇನೆ….” ಎಂದು ಸುಮ್ಮನಾದಳು.

ಅವರ ಹಾವ ಭಾವ ವರ್ತನೆ ನೋಡಿ ಕೊಂಚ ಅನುಮಾನ ಬಂದು ಹೊರಗೆ ಇಣುಕಿ ನೋಡಿದಾಗ ವಿಚಿತ್ರ ಪ್ರಪಂಚದಲ್ಲಿ ತಾನಿದ್ದೇನೆ ಎಂದು ಸೌಮ್ಯಾಳಿಗೆ ಭಾಸವಾಯಿತು.

ಒಂದು ವಾರ ಹೀಗೆ ಕಳೆಯಿತು. ಸೌಮ್ಯಾಳನ್ನು ಕರೆದುಕೊಂಡು ಬಂದವಳು ಮತ್ತೆ ಇವಳನ್ನು ಸಂದರ್ಶಿಸಿ ವಿಚಾರಿಸಿ….. ರಾತ್ರಿ ರೆಡಿಯಾಗಿರು ಎಂದಳು.

“ಏಕೆ…?” ಎಂದಳು ಸೌಮ್ಯಾ

“ಸುಮ್ನೆ….”

“ಸರಿ….”

ರಾತ್ರಿ ದೊಡ್ಡ ಪಾರ್ಟಿಯೊಂದನ್ನು ಅವಳ ರೂಮಿಗೆ ಕಳಿಸಲಾಯಿತು. ಬಾಗಿಲು ಹೊರಗಡೆಯಿಂದ ಲಾಕ್‌ ಆಯಿತು.

ಬಂದವನು ದಢೂತಿ ಮನುಷ್ಯ…. ಸುಖ ಪಡೆಯಬೇಕೆಂದು ನಿದ್ರೆಯಲ್ಲಿದ್ದ ಅವಳನ್ನು ಬಲಾತ್ಕರಿಸಲು ಯತ್ನಿಸಿದ. ಅವಳಿಗೆ ಎಚ್ಚರವಾಯಿತು…. ಏನಾಗುತ್ತಿದೆ ಎಂದು ಅವಳಿಗೆ ಎಳ್ಳಷ್ಟೂ ಗೊತ್ತಾಗಲಿಲ್ಲ. ಅವಳು ವಿವಸ್ತ್ರಳಾಗಿದ್ದಳು ಚಿಟ್ಟನೆ ಚೀರಿದಳು. ದಢೂತಿ ಮನುಷ್ಯ ಅವಳ ಬಳಿ, “ಇದೆಲ್ಲಾ ಕಾಮನ್‌….. ಡೋಂಟ್‌ ವರಿ ಸ್ವಲ್ಪ ರೂಢಿಯಾಗೋವರೆಗೂ ಅಷ್ಟೆ ಆಮೇಲೆ ಅಭ್ಯಾಸವಾಗಿಬಿಡುತ್ತೆ…..” ಎಂದ.

ರೊಚ್ಚಿಗೆದ್ದ ಸೌಮ್ಯಾ…..  ಅವನನ್ನು ಬಾಯಿಗೆ ಬಂದಂತೆ ಬೈದು ಕೂಗಾಡಿದಳು. ಶಬ್ದ ಕೇಳಿ ಆ ಹೆಂಗಸು ಒಳಗೆ ಬಂದಳು. ಅವಳನ್ನು ನೋಡಿದ್ದೇ ಸೌಮ್ಯಾಳ ಕೋಪ ನೆತ್ತಿಗೇರಿತು, “ಏ…. ನೀನೊಂದು ಹೆಣ್ಣಾಗಿ…. ಹೆಣ್ಣನ್ನು ಈ ರೀತಿ ದುಡಿಸಿ ತಿನ್ನುವ ನಿನಗೆ ಬರಬಾರದ್ದು ಬರಲಿ,” ಎಂದು ಶಪಿಸಿ, ಬೈಯಲಾರಂಭಿಸಿದಳು.

“ಏ ಸೌಮ್ಯಾ…. ಹೆಚ್ಚಿಗೆ ಮಾತಾಡಬೇಡ. ನಿನ್ನನ್ನು 10 ಲಕ್ಷಕ್ಕೆ ಡೀಲ್ ‌ಮುಗಿಸಿಕೊಂಡು ಬಂದಿದ್ದೇನೆ. ನಾನು ಹೇಳಿದಂತೆ ನೀನು ಕೇಳಲೇಬೇಕು,” ಎಂದು ಅವಳ ಕಪಾಳಕ್ಕೆ ಎರಡು ಬಿಗಿದಳು.

ಸೌಮ್ಯಾಳ ರೋಷ ನೀರಾಗಿ ಹೋಯಿತು.

“ಆ ನಿನ್ನ ಪ್ರಿಯಕರ ರಾಕೇಶ್‌…. ನಿನ್ನನ್ನು ನನಗೆ ಮಾರಿ ಹೋಗಿದ್ದಾನೆ. ನೀನೇನು ನನ್ನ ಹತ್ತಿರ ಪುಗಸಟ್ಟೆ ಕೆಲಸ ಮಾಡುತ್ತಿಲ್ಲ…. ದುಡ್ಡು ಕೊಟ್ಟಿದ್ದೀನಿ… ಮುಚ್ಕೊಂಡು ದಂಧೆ ಮಾಡು ಹುಷಾರು…..” ಎಂದು ಬೆದರಿಕೆ ಹಾಕಿದಳು.

`ಇನ್ನು ತಾನು ಇಲ್ಲಿರುವುದು ಒಳ್ಳೆಯದಲ್ಲ. ರಾತ್ರೋರಾತ್ರಿ ಪರಾರಿಯಾಗಬೇಕು,’ ಎಂದು ನಿಶ್ಚಯಿಸಿ ಬರುತ್ತಿದ್ದ ಪಾರ್ಟಿಗಳ ಕೈ ಕಾಲು ಹಿಡಿದು ಬೇಡಿಕೊಂಡರೂ ಪ್ರಯೋಜನವಿಲ್ಲವಾಯಿತು. ಏಳೆಂಟು ಜನ ಅವಳ ಶೀಲಹರಣ ಮಾಡೇ ಬಿಟ್ಟಿದ್ದರು.

ಹಾಸಿಗೆಯಲ್ಲಿ ಮಲಗಿಕೊಂಡು ಅಳುತ್ತಾ, `ಅಮ್ಮಾ…. ಅಮ್ಮಾ….. ನಾನು ನಿನ್ನ ಮನೆತನದ ಮರ್ಯಾದೆ ಹಾಳು ಮಾಡಿದೆನಮ್ಮಾ…. ನಾನಿನ್ನು ಬದುಕಲು ಯೋಗ್ಯಳಲ್ಲ,’ ಎಂದುಕೊಂಡು ಹೇಗೋ ಅಲ್ಲಿಂದ ಪರಾರಿಯಾದಳು.

ಅಲ್ಲಿಂದ ಅವರಿವರ ಮನೆಯಲ್ಲಿ ಕಸಮುಸುರೆ ತಿಕ್ಕುತ್ತ ಜೀವನ ಸಾಗಿಸಿದಳು. ಪಾಪದ ಪಿಂಡ ಹೊಟ್ಟೆಯಲ್ಲಿ ಅಂಕುರಿಸಿತು. ಹೇಗೋ ಏನೋ ದಿನ ಕಳೆಯುತ್ತಾ ರೈಲ್ವೇ ಸ್ಟೇಷನ್‌ ಗೆ ಬಂದಳು.

ಎಲ್ಲ ಕಡೆಯೂ ಇವಳದೇ ಹುಡುಕಾಟ. ಕೂಡಿಟ್ಟಿದ್ದ ಪುಡಿಗಾಸಿನಿಂದ ಟಿಕೆಟ್‌ ತೆಗೆಸಿ ಪಂಡರಾಪುರ ಗಾಡಿ ಹತ್ತಿದಳು. ಗಾಡಿಯಲ್ಲಿ ಕುಳಿತ ಅವಳು ಮುಖ ಮುಚ್ಚಿಕೊಂಡು ತಪ್ಪಿಸಿಕೊಂಡಳು.

ಅತ್ತ ರಾಕೇಶ್‌ ಆ ಹೆಂಗಸಿಗೆ ಕರೆ ಮಾಡಿದಾಗ ಅವಳು, “ಲೋ ರಾಕೇಶ, ನೀನು ಹೇಳಿದ ಸೌಮ್ಯಾ ತಪ್ಪಿಸಿಕೊಂಡಿದ್ದಾಳೆ ಕಣೋ…..” ಎಂದಳು. ರಾಕೇಶ್‌ ಗೆ ದಿಗಿಲು ಬಡಿಯಿತು. ಅವಳ ಹುಡುಕಾಟ ಪ್ರಾರಂಭವಾಯಿತು. ರಾಕೇಶ್‌ ಅವಳಿಗೆ ಫೋನ್ ಮಾಡಿ, “ಹಲೇ ಸೌಮ್ಯಾ….. ನಾನು ರಾಕೇಶ್‌…. ಹೇಗಿದ್ದೀಯಾ?” ಎಂದು ಕೇಳಿದ.

ರೊಚ್ಚಿಗೆದ್ದ ಸೌಮ್ಯಾ, “ಲೋ ನಾಚಿಕೆಗೆಟ್ಟವನೇ, ನಿನ್ನ ನಾನು ಏನೋ ಅಂದ್ಕೊಂಡೆ….. ನೀನೇ ನನ್ನ ಸರ್ವಸ್ವ ಅಂತ ನಿನ್ನ ಹಿಂದೆ ಬಂದಿದ್ದಕ್ಕೆ ನೀನು ನನಗೆ ಸರಿಯಾಗಿ ಪಾಠ ಕಲಿಸಿದೆ…. ನಿನ್ನಂಥ ತಲೆಹಿಡುಕನನ್ನು ಪ್ರೀತಿಸಿದ್ದು ನನ್ನ ತಪ್ಪು,” ಎಂದು ಬಾಯಿಗೆ ಬಂದಂತೆ ಬೈದಳು.

ರಾಕೇಶ್‌ ಸುಮ್ಮನಾದ. ಆ ನಡುವಯಸ್ಸಿನ ಆ ಹೆಂಗಸು ರಾಯಚೂರು ಸ್ಟೇಷನ್‌ ವರೆಗೂ ಬೆನ್ನು ಹತ್ತಿದರೂ ಸೌಮ್ಯಾ ಅವಳ ಕೈಗೆ ಸಿಗಲಿಲ್ಲ.

ಮರುದಿನ ಬೆಳಗ್ಗೆ  7 ಗಂಟೆಗೆ ಸೌಮ್ಯಾ ಸೊಲ್ಲಾಪುರ ತಲುಪಿದಳು. ಅಂದು ಶಂಕರಗೌಡರ ಮನೆಯಲ್ಲಿ ಸಂಭ್ರಮದ ದಿನ. ಗೌಡರು  ಸೊಸೆಯನ್ನು ಮಗಳಂತೆಯೇ ಭಾವಿಸಿದ್ದರಿಂದ ಅವಳಿಗಾಗಿ ಒಂದು ಮನೆ ಕಟ್ಟಿಸಿದ್ದರು. ಅಂದು ಆ ಮನೆಯ ಗೃಹಪ್ರವೇಶ.

“ಮಾವ….. ಇವರು ಮನೆಯಲ್ಲೇ ಇರಬಹುದಲ್ಲ ಹೊಸ ಮನೆಯೇಕೆ….?” ಎಂದು ಶಿವ ಕೇಳಿದ.

“ಇರಲಿ ಶಿವ….. ನಾಳೆ ಎಲ್ಲಾ ಸಮಯ ಒಂದೇ ತರಹ ಇರಲ್ಲ. ಮೊಮ್ಮಕ್ಕಳ ಖುಷಿಗೆ ನನ್ನ ಚಿಕ್ಕ ಕಾಣಿಕೆ,” ಎಂದರು ಮಾವ.

ಇತ್ತ ಸೌಮ್ಯಾ ಊರಿಗೆ ಬಂದು ಸಮೀಪದ ಚಂದ್ರಭಾಗಾ ನದಿ ಹತ್ತಿರ ನಿಂತು, `ಈ ಅನಿಷ್ಠ ಮುಖವನ್ನು ಒಮ್ಮೆಯಾದರೂ ತೋರಿಸಿದರೆ ಶಾಂತಿ ಸಿಗಬಹುದೇನೋ ಎಂಬ ಆಸೆ ಇತ್ತು. ಅದಕ್ಕೆ ಇಲ್ಲಿಗೆ ಬಂದೆ, ಮನೆತನಕ್ಕೆ ಮಸಿ ಹಚ್ಚಿದವಳು ಇದ್ದರೆಷ್ಟು ಬಿಟ್ಟರೆಷ್ಟು? ಪಾಂಡುರಂಗ  ತಪ್ಪು ಒಪ್ಪುಗಳನ್ನು ನೀನೇ ನೋಡಿಕೋ,’ ಎಂದುಕೊಂಡು ನೀರಿಗೆ ಹಾರಿದಳು.

ಗೌಡರ ಮನೆ ಕೆಲಸದವಳ ಗಂಡ ಸ್ನಾನಕ್ಕೆಂದು ಹೊಳೆಗೆ ಹೋದಾಗ ಅಲ್ಲಿ ಮುಳುಗೇಳುತ್ತಿದ್ದ ಹೆಣ್ಣನ್ನು ನೋಡಿ, ಹತ್ತಿರ ಹೋಗಿ ನೋಡಿ, `ಇದು ನಮ್ಮ ಗೌಡರ ಮಗಳು ಸೌಮ್ಯಾ ತಾನೇ….’ ಎಂದು ಗುರುತು ಹಿಡಿದು ದಡಕ್ಕೆ ತಂದು ಹಾಕಿದ.

ಪ್ರಾಣ ಅದಾಗಲೇ ಹೋಗಿತ್ತು. ಜೊತೆಗೆ ತುಂಬು ಗರ್ಭಿಣಿ. ಮಗು ಕೂಡ ಒಳಗೆ ಸತ್ತಿತ್ತೋ ಏನೋ….? ಅವನು ಮಗನಿಗೆ, “ಲೋ, ಗೌಡರಿಗೆ ಕೂಡಿ ಹೊಳೆ ಹತ್ತಿರ ಬರಹೇಳು. ಯಾಕೆ ಅಂತ ಕೇಳಿದರೆ ಅರ್ಜೆಂಟ್‌ ಅಂತ ಹೇಳು,” ಎಂದು ಹೇಳಿ ಕಳುಹಿಸಿದ.

ಮಗ ಓಡಿ ಹೋಗಿ, “ಗೌಡ್ರೇ….. ಗೌಡ್ರೇ….. ನಮ್ಮಪ್ಪ ನಿಮ್ಮನ್ನು ಹೊಳೆತವಾ ಕರೆದುಕೊಂಡು ಬರೋದಕ್ಕೆ ಹೇಳಿದ್ದಾರೆ. ಬೇಗ ಬನ್ನಿ,” ಎಂದು ಕರೆದ.

“ಯಾಕಂತೆ….?”

“ಗೊತ್ತಿಲ್ಲ…..”

“ಸರಿ ನಡೆ ನಡೆ…. ಹೋಗೋಣ,” ಎಂದು ಇಡೀ ಕುಟುಂಬವೇ ನದಿ ಹತ್ತಿರ ಧಾವಿಸಿತು. ನೋಡಿದರೆ ಜನಜಾತ್ರೆಯೇ ಅಲ್ಲಿ ಸೇರಿತ್ತು.

ಅಲ್ಲಿಂದಲೇ ಪರಾರಿಯಾದ ಹೆಣ್ಣು, ಅಲ್ಲೇ ಬಂದು ಪ್ರಾಣ ಬಿಟ್ಟಿತ್ತು. ಶಂಕರಗೌಡ ಮಗಳ ಮುಖ ನೋಡುತ್ತಲೇ ಅಳುತ್ತಾ ನಿಂತ.  ಅವಳ ತಾಯಿ, “ಸೌಮ್ಯಾ….. ಎಂತಹ ಕೆಲಸ ಮಾಡಿಕೊಂಡು ಬಿಟ್ಟೆ…. ಹೇಗಿದ್ದವಳು ಹೇಗಾದೆಯಲ್ಲ…..,” ಎಂದು ಗೋಳಾಡಿದಳು.

ಶಿವ ಕೂಡ, “ಸೌಮ್ಯಾ…. ನೀನು ಹೀಗೆ ಮಾಡಿಕೊಳ್ಳಬಾರದಿತ್ತು…” ಎಂದು ನೊಂದುಕೊಂಡ.

ಶಿಲ್ಪಾ ಕೂಡ ಅವಳ ಬಗ್ಗೆ ತಿಳಿದುಕೊಂಡು ಅವಳೂ ಸಹ ಮರುಕಪಟ್ಟಳು. ಇಡೀ ಕುಟುಂಬವೇ ಕಣ್ಣೀರ ಕೋಡಿ ಹರಿಸಿತು.  ಪ್ರೀತಿಯನ್ನು ನಂಬಿದವಳ ಪರಿಸ್ಥಿತಿ ಎಂತಹ ಹಾಳು ನರಕದ ಕೂಪಕ್ಕೆ ತಳ್ಳಿ ಸಾವು ತರಿಸಿತ್ತು.

ಪರಾರಿಯಾದ ವಧು ಆ ಊರಿಗೆ ದೊಡ್ಡ ಒಗಟಾಗಿ ಉಳಿದಳು…..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ