ಸುಜಾತಾಳ ಮನೆಯವರು ಸಂಪ್ರದಾಯದ ಸಂಕೋಲೆಯ ಹೆಸರಿನಲ್ಲಿ, ತಾವು ಆವರಿಸಿದ ವರನನ್ನೇ ಅವಳು ಮದುವೆಯಾಗಬೇಕೆಂದು ನಿರ್ಬಂಧ ಹೇರಿದರು. ಅವನು ಹಣವಂತನಿರಬಹುದು, ಆದರೆ ಅವಳ ಮನದ ಅಭಿಪ್ರಾಯಗಳಿಗೆ ಕಿಲುಬು ಕವಡೆಯ ಕಿಮ್ಮತ್ತೂ ಕೊಡುತ್ತಿರಲಿಲ್ಲ. ಕೊನೆಗೆ ಸುಜಾತಾ ತಾಳಿದ ನಿರ್ಧಾರವೇನು……?

“ಅಮ್ಮ, ಇಷ್ಟು ಬೇಗ ನನಗೆ ಮದುವೆ ಬೇಡ ಅಂತ ಎಷ್ಟು ಸಲ ಹೇಳಿದ್ದೀನಿ….. ನಾನು ಮುಂದೆ ಇನ್ನೂ ಓದಬೇಕು, ಡಬಲ್ ಗ್ರಾಜ್ಯುಯೇಟ್‌ ಆಗಬೇಕು…..” ಸುಜಾತಾ ಅಮ್ಮನ ಬಳಿ ಬಂದು ಅವರ ಕೈ ಹಿಡಿದುಕೊಳ್ಳುತ್ತಾ ಬಲು ಪ್ರೀತಿಯಿಂದ ಹೇಳಿದಳು.

“ಅಲ್ಲಮ್ಮ…. ಈ ಹುಡುಗನಲ್ಲಿ ನೀನು ಏನು ದೋಷ ಕಂಡೆ? ಹುಡುಗ ಬಿ.ಇ ಮುಗಿಸಿ ಉನ್ನತ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌, ಉತ್ತಮ ಸಂಬಳ, ಅನುಕೂಲಸ್ಥ ಮನೆತನ….. ಹೈ ಫೈ ಫ್ಯಾಮಿಲಿ….. ನಿನ್ನ ತಂದೆಯ ಗೆಳೆಯರಿಗೆ ಬಹು ಪರಿಚಿತರ ಮಗನಂತೆ…. ಒಳ್ಳೆ ಆದಾಯದ ಜೊತೆಗೆ ಈ ಕಾಲಕ್ಕೆ ತಕ್ಕಂತೆ ಬೇಕಾದ ಅನುಕೂಲಗಳಿವೆ, ನೋಡೋಕೆ ಬಹಳ ಸ್ಮಾರ್ಟ್‌ ಅಲ್ಲದಿದ್ದರೂ ತೀರಾ ತೆಗೆದು ಹಾಕು ಹಾಗಿಲ್ಲ. ಅವರ ಮನೆಯಲ್ಲಿ ಬೇಕಾದಷ್ಟು ಆಳುಕಾಳು ತುಂಬಿದ್ದಾರೆ, ನೀನು ಆ ಮನೆಯಲ್ಲಿ ಮಹಾರಾಣಿ ಹಾಗಿರಬಹುದು…. ಇಂಥ ಒಳ್ಳೆ ಹುಡುಗ ಸಿಕ್ಕಿರುವಾಗ ಈ ಅವಕಾಶ ಯಾರಾದರೂ ಕಳೆದುಕೊಳ್ಳುತ್ತಾರೆಯೇ?” ತಾಯಿ ಲಲಿತಮ್ಮ ಮಗಳ ಕೆನ್ನೆ ತಟ್ಟುತ್ತಾ ಅವಳನ್ನು ಓಲೈಸಲು ನೋಡಿದರು.

ಅಮ್ಮನ ಕೊರಳಿಗೆ ಕೈ ಸುತ್ತಿಕೊಳ್ಳುತ್ತಾ ಸುಜಾತಾ, “ಅಮ್ಮ ದಯವಿಟ್ಟು ನನ್ನ ಮಾತು ಅರ್ಥ ಮಾಡಿಕೋ….. ಯಾರದೋ ಆಸ್ತಿ ನನಗೆ ಮುಖ್ಯ ಅಲ್ಲ…. ನಾನು ಕಲಿತ ವಿದ್ಯೆಗೆ ಉತ್ತಮ ನೌಕರಿ ಸಿಗಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು…. ಆಮೇಲೆ ಈ ಮದುವೆ ಗಿದುವೆ…..” ಮಹಾ ಸ್ವಾಭಿಮಾನದ ನುಡಿಗಳು ಅವಳದು.

ಅವಳು ತಾಯಿಯನ್ನು ಒಪ್ಪಿಸಿ, ತಂದೆಯನ್ನು ವಿರೋಧಿಸಲು ಹರಸಾಹಸ ಮಾಡುತ್ತಿದ್ದಳು. ಅಮ್ಮ ತಾನಾಗಿ ಬೇಡ ಎಂದು ಅಪ್ಪನ ಮುಂದೆ ಹೇಳಿದಾಗ ಮಾತ್ರ ಈ ಸಂಬಂಧದಿಂದ ತನಗೆ ಬಿಡುಗಡೆ ಎಂದು ಅವಳಿಗೆ ಗೊತ್ತಿತ್ತು.

“ಸುಜಿ, ಒಂದು ಕೆಲಸ ಮಾಡು. ನೀನು ಆ ಹುಡುಗನ ಜೊತೆ ಒಮ್ಮೆ ನಿಧಾನವಾಗಿ ಮಾತನಾಡು. ನಿಮ್ಮಿಬ್ಬರ ಅಭಿಪ್ರಾಯ ಏನು ಅಂತ ಗೊತ್ತಾಗುತ್ತದೆ,” ಹಠ ಹಿಡಿದ ಮಗಳನ್ನು ಒಪ್ಪಿಸಲು ತಾಯಿ ಕೊನೆಗೆ ಈ ಅಸ್ತ್ರ ಪ್ರಯೋಗಿಸಿದರು.

ತಿದ್ದಿ ತೀಡಿದ ಕಣ್ಣು ಮೂಗಿನ ಸುಜಾತಾ ಲಕ್ಷಣವಾದ ದಂತದ ಮೈ ಬಣ್ಣದ ಹುಡುಗಿ. ಸಂಗೀತ ಕಲಿತಿದ್ದು, ಕಲಿಕೆಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿದ್ದಳು. ಎಂ.ಎಸ್ಸಿ ಮುಗಿಸಿ, ಇದೀಗ ಪಿ.ಎಚ್‌.ಡಿ ಸೇರಲು ತಯಾರಿ ನಡೆಸಿದ್ದಳು.

ಅವರ ನೆಂಟರಿಷ್ಟರು, ಪರಿಚಿತರು ಎಲ್ಲರೂ ಸುಜಾತಾಳ ಸರಳ ವ್ಯಕ್ತಿತ್ವ, ಸ್ನೇಹಮಯ ಗುಣ ಸ್ವಭಾವಗಳಿಂದ ಬಹಳ ಪ್ರಭಾವಿತರಾಗಿದ್ದರು. ಗುಂಪಿನಲ್ಲಿ ನಾಲ್ವರ ಮಧ್ಯೆ ಅವಳು ಸದಾ ಕೇಂದ್ರಬಿಂದುವಾಗಿ ಆಕರ್ಷಣೆ ಗಳಿಸುತ್ತಿದ್ದಳು.

ಅಮ್ಮನ ಮಾತು ತಳ್ಳಿಹಾಕಲಾರದೇ ಅವಳು ಆ ಅನುಕೂಲಸ್ಥ ರ ಸುಧೀರ್‌ ನನ್ನು ಭೇಟಿಯಾಗಲು ನಿರ್ಧರಿಸಿದಳು. ಆ ಹುಡುಗ ತಾನು ಅಂದುಕೊಂಡದ್ದಕ್ಕಿಂತ ಸ್ಮಾರ್ಟ್‌ ಆಗಿದ್ದಾನೆ ಎನಿಸಿತು. ಹೀಗೆ 3-4 ಸಲ ಭೇಟಿ ಆಗಿ, ಔಪಚಾರಿಕ ಮಾತುಕಥೆ ನಡೆಸಿದಾಗ, ಸುಧೀರ್‌ ಇವಳಿಗೂ ಇಷ್ಟವಾಗತೊಡಗಿದ.

ಅದಾದ 2-3 ವಾರಗಳಲ್ಲಿ ಅವಳಿಗೆ ಒಂದು ಖಾಸಗಿ ಕಾಲೇಜಿನಲ್ಲಿ ಗಣಿತದ ಪ್ರಾಧ್ಯಾಪಕಿಯಾಗಿ ಕೆಲಸ ಸಿಕ್ಕಿತು. ಉನ್ನತ ಹುದ್ದೆ, ಉತ್ತಮ ಸಂಬಳ, ಅವಳು ಪ್ರಗತಿ ಪಥದಲ್ಲಿ ಮುಂದುವರಿಯಲು ಮೊದಲ ಮೆಟ್ಟಿಲಾಯಿತು. ಇವರ ಮದುವೆ ಕುದುರಿದ್ದರಿಂದಲೇ ಅವಳಿಗೆ ಸಲೀಸಾಗಿ ಕೆಲಸ ಸಿಕ್ಕಿತು ಎಂದು ಎಲ್ಲರೂ ಭಾವಿಸಿದರು.

ಮೊದಲು ಲಗ್ನಪತ್ರಿಕೆ ಶಾಸ್ತ್ರ ನಡೆದುಹೋಗಲಿ, ಆಮೇಲೆ ಅವಳು ಕಾಲೇಜಿನ ಕೆಲಸಕ್ಕೆ ಸೇರಲಿ ಎಂಬುದು ತಾಯಿ ತಂದೆಯರ ಅಭಿಪ್ರಾಯ. ಇಬ್ಬರೂ ಬೆಂಗಳೂರಿನವರೇ ಆದ್ದರಿಂದ ಈ ವಿಷಯದಲ್ಲಿ ಅಂಥ ತೊಂದರೆ ಏನೂ ಇರಲಿಲ್ಲ. ಅದಕ್ಕೆ ನಕಾರ ಸೂಚಿಸಲು ನೆಪ ಹೊಳೆಯದ್ದರಿಂದ ಅವಳು ಒಪ್ಪಲೇ ಬೇಕಾಯಿತು.

ಅಂತೂ ಅವಳು ನೌಕರಿಗೆ ಸೇರುವ ಮೊದಲೇ ಅವರಿಬ್ಬರ ಎಂಗೇಜ್‌ ಮೆಂಟ್‌ ಅದ್ಧೂರಿಯಾಗಿ ನಡೆಯಿತು. ಅವರಿಬ್ಬರ ಒಡನಾಟ ಹಾರ್ದಿಕವಾಗಿತ್ತು. ಬಹಳ ಖುಷಿಯಿಂದಲೇ ಸುಜಾತಾ ತನ್ನ ಹೊಸ ಕೆಲಸಕ್ಕೆ ಸೇರಿದಳು.

ಇವರು ಮೊದಲಿನಿಂದಲೂ ಮಲ್ಲೇಶ್ವರಂನ ಒಂದು ಸುಮಾರಾದ ಅಪಾರ್ಟ್‌ ಮೆಂಟ್‌ ಒಂದರಲ್ಲಿ 2 ಬೆಡ್‌ ರೂಮಿನ ಫ್ಲಾಟ್‌ ಕೊಂಡು, ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದರು. ಸುಧೀರನದು ಜಯನಗರದ ಅದ್ಧೂರಿ ಬಂಗಲೆ ಆಗಿತ್ತು. ಅವಳು ಕೆಲಸಕ್ಕೆ ಸೇರಿದ ಮೇಲೆ, ಸಂಜೆ ಸುಜಾತಾಳನ್ನು ಭೇಟಿಯಾಗಲು ಬರುತ್ತಿದ್ದ ಸುಧೀರ್‌, ಅವಳನ್ನು ತನ್ನ ಕಾರಿನಲ್ಲೇ ಅವಳ ಮನೆಗೆ ಡ್ರಾಪ್ ಮಾಡುತ್ತಿದ್ದ.

ಇದೀಗ ಅವರ ಮಧ್ಯೆ ಮೊದಲಿಗಿಂತಲೂ ಹೆಚ್ಚಿನ ನಿಕಟತೆ, ಆತ್ಮೀಯತೆ ಬೆಳೆದಿತ್ತು. ಅವನನ್ನು ಈಗ ಹತ್ತಿರದಿಂದ ಗಮನಿಸ ತೊಡಗಿದ ಸುಜಾತಾಳಿಗೆ, ಸುಧೀರನಲ್ಲಿ ವಿನಮ್ರತೆ, ಶಿಷ್ಟಾಚಾರದಂತಹ ಸದ್ಗುಣಗಳು ಇಲ್ಲದಿರುವುದು ಗೋಚರವಾಯಿತು. ಶ್ರೀಮಂತರ ಒಬ್ಬನೇ ಮಗನಾದ್ದರಿಂದ ಸಹಜವಾಗಿಯೇ ಹಣ, ಅಂತಸ್ತು, ಅಧಿಕಾರದ ಅಹಂ ತುಂಬಿರಬಹುದು ಎಂದು ಊಹಿಸಿದಳು. ಅವಳು ಬೆಳೆದು ಬಂದಿದ್ದ ಸುಸಂಸ್ಕೃತ ವಾತಾವರಣಕ್ಕೂ, ಅವನ ಗುಣನಡತೆಗಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಫೋನ್‌ ನಲ್ಲಿ ಮಾತನಾಡುವಾಗ ಸಹ, ಆ ಕಡೆಯವರ ಮಾತಿಗೆ ಒಂದಿಷ್ಟೂ ಲಕ್ಷ್ಯ ಕೊಡದೆ, ಅವರನ್ನು ತನ್ನ ದಾರ್ಷ್ಟೀಕ ಮಾತುಗಳಿಂದ ಬಗ್ಗು ಬಡಿಯುತ್ತಿದ್ದ.

ಸುಜಾತಾಳಂಥ ಸೌಮ್ಯ ಸ್ವಭಾವದ ಹುಡುಗಿ ತನ್ನೆದುರು ಇದ್ದಾಳೆಂಬುದನ್ನೂ ಮರೆತು, ಫೋನ್‌ ಅಟೆಂಡ್‌ ಮಾಡುವಾಗ ಬೈಗುಳದ ಬ್ಯಾಚುಲರ್‌ ಭಾಷೆ ಬಳಸುತ್ತಿದ್ದ.

ಸುಜಾತಾ ಎಷ್ಟೇ ಆಧುನಿಕಳಾಗಿದ್ದರೂ, ತೆರೆದ ಮನಸ್ಸಿನ ವಿಚಾರಗಳನ್ನು ತುಂಬಿಕೊಂಡಿದ್ದರೂ, ಸುಸಂಸ್ಕೃತ ಸ್ವಭಾವದ ಹುಡುಗಿ. ಮೃದುಭಾಷಿಯಾದ ಅವಳು ಇನ್ನೊಬ್ಬರ ಮನಸ್ಸಿಗೆ ಹರ್ಟ್‌ ಆಗುವಂತೆ ಎಂದೂ ಮಾತನಾಡುತ್ತಿರಲಿಲ್ಲ. ತನ್ನ ಸಾಂಪ್ರದಾಯಿಕ ಮನೋಭಾವ, ರೀತಿ ರಿವಾಜುಗಳ ಪಕ್ಕಾ ಮಧ್ಯಮ ವರ್ಗದ ಭಾರತೀಯ ಪರಂಪರೆ ಬೆಳೆಸಿಕೊಂಡಿದ್ದ ತರುಣಿಯಾಗಿದ್ದಳು.

ಒಂದು ಸಲ ಸುಜಾತಾ ಏನೋ ಶಾಪಿಂಗ್‌ ಮುಗಿಸಿ ತನ್ನ ಅಪಾರ್ಟ್‌ ಮೆಂಟ್‌ ಗೇಟ್‌ಒಳಗೆ ಪ್ರವೇಶಿಸಿದ್ದಳು. ಅವಳ ಎರಡೂ ಕೈಗಳಲ್ಲಿ ಭಾರದ 2 ಚೀಲಗಳಿದ್ದವು. ಹೈ ಹೀಲ್ ‌ಕಾರಣ ಕಾಲು ತುಸು ಉಳುಕಿದಂತಾಯಿತು. ಆ ಕಾರಣದಿಂದ ಆಯತಪ್ಪಿ ಅವಳು ಬಿದ್ದೇ ಹೋದಳು.

ಆಗ ಆಕಸ್ಮಿಕ ಎಂಬಂತೆ ಎರಡು ಬಲಿಷ್ಠ ಕೈಗಳು ಅವಳ ಬಳಿ ಬಂದು, ಅವಳನ್ನು ಎಬ್ಬಿಸಿ, ಆಸರೆ ನೀಡಿದ. “ಅರೆ, ನಿಮಗೆ ಪೆಟ್ಟಾಗಿದೆ ಅನ್ಸುತ್ತೆ. ಈ ಬೇಸ್‌ ಮೆಂಟ್‌ ಮೇಲೆ ಕುಳಿತಿರಿ, ನಾನು ಈ ಬ್ಯಾಗ್‌ ಸರಿಪಡಿಸಿ ತರ್ತೀನಿ,” ಎನ್ನುತ್ತಾ ಆ ಯುವಕ,  ಬ್ಯಾಗಿನಿಂದ ಹರಡಿದ್ದ ಅವಳ ಸಾಮಗ್ರಿಗಳನ್ನು ಅದಕ್ಕೆ ತುಂಬಿಸಲು ನೆರವಾದ. ಅವಳನ್ನು ಬೇಸ್‌ ಮೆಂಟ್‌ ಬಳಿ ನಿಧಾನವಾಗಿ ಕರೆತಂದು ಕೂರಿಸಿದ. ಅವನ ಕೈ ಹಿಡಿದೇ ಕುಂಟುತ್ತಾ ಅವಳು ನಡೆಯಬೇಕಾಯಿತು. ತನಗೆ ಇಷ್ಟೆಲ್ಲಾ ಸಹಾಯ ಮಾಡಿದ ಆ ಅಪರಿಚಿತ ತರುಣ ಯಾರಪ್ಪ ಎಂದು ಅವನನ್ನು ದಿಟ್ಟಿಸಿದಾಗ, ಇವಳಿಗಿಂತ ಎತ್ತರ, ದುಷ್ಟಪುಷ್ಟವಾಗಿದ್ದ ಅವನು, ಕೆದರಿದ ಮುಂಗುರುಳಿನೊಂದಿಗೆ ನಿಷ್ಕಲ್ಮಶ ನಗು ಬೀರುತ್ತಾ, ಸ್ನೇಹಮಯಿಯಾಗಿ ನಡೆದುಕೊಂಡ. ಬಹುಶಃ ಅಪಾರ್ಟ್‌ ಮೆಂಟ್‌ ಗೆ ಯಾರೋ ಹೊಸಬರು ಬಂದಿರಬೇಕು ಎಂದುಕೊಂಡಳು.

ಅವಳ ಕಾಲು ಉಳುಕಿತ್ತು, ಮೊಣಕೈ ಬಳಿ ತುಸು ತರಚಿಕೊಂಡಿತ್ತು. ಕಾಲೆಳೆಯುತ್ತಾ ನಡೆಯಬೇಕಾಗಿತ್ತು.

ek-se-bad-kar-ek-story2

ಅವನು ಮುಂದೆ ಬಂದು ಅವಳ ಬ್ಯಾಗುಗಳನ್ನು ಒಂದೇ ಕೈಯಲ್ಲಿ ಸಲೀಸಾಗಿ ಹಿಡಿದು, ಮತ್ತೊಂದು ಕೈಯಿಂದ ಅವಳ ಹೆಗಲಿಗೆ ಆಸರೆ ನೀಡುತ್ತಾ ಲಿಫ್ಟ್ ಬಳಿ ಮೆಲ್ಲನೆ ಕರೆತಂದ.

“ನಿಮ್ಮ ಫ್ಲಾಟ್‌ ಹೇಳಿದರೆ ಮನೆಯವರೆಗೂ ನಿಮ್ಮನ್ನು ತಲುಪಿಸಿ ಹೋಗ್ತೀನಿ,” ಎಂದ.

ಅವಳು ಶಿಷ್ಟಾಚಾರಕ್ಕೆ ಥ್ಯಾಂಕ್ಸ್ ಹೇಳಿ ಮೆಲ್ಲನೆ ಕುಂಟುತ್ತಲೇ ಅವನ ಜೊತೆ ನಡೆದಳು. ಅವನಿಗೆ ಏನನ್ನಿಸಿತೋ…. “ಬೇಡ…. ಬೇಡ, ನಾನು ಸೆಕೆಂಡ್‌ ಫ್ಲೋರ್‌ ನಲ್ಲಿದ್ದೇನೆ. ಮೊದಲು ನನ್ನ ಮನೆಗೆ ಬನ್ನಿ. ಸ್ವಲ್ಪ ಸುಧಾರಿಸಿಕೊಂಡು ನಂತರ ನಿಧಾನವಾಗಿ ನಿಮ್ಮ ಮನೆಗೆ ಹೋಗ್ತೀರಂತೆ,” ಎಂದು ಅವಳ ಉತ್ತರಕ್ಕೂ ಕಾಯದೆ, ಎರಡನೇ ಮಹಡಿಯ ಬಟನ್‌ ಒತ್ತಿದ. ಸಂಕೋಚಕ್ಕೆ ಒಳಗಾಗಿದ್ದ ಅವಳು ವಿರೋಧಿಸಲು ಹೋಗಲಿಲ್ಲ.

ಅವಳನ್ನು ತನ್ನ ಮನೆಯ ಹಾಲ್ ನಲ್ಲಿದ್ದ ದೀವಾನ್‌ ಮೇಲೆ ಕೂರಿಸಿ, ಅವಳ ಸಾಮಗ್ರಿಗಳನ್ನು ಟೇಬಲ್ ಮೇಲೆ ಇರಿಸುತ್ತಾ, “ಒಂದೇ ನಿಮಿಷ…. ಫಸ್ಟ್ ಏಡ್‌ ಬಾಕ್ಸ್ ತರ್ತೀನಿ,” ಎಂದು ಒಳಗೆ ಓಡಿದ. ಅವಳ ಉತ್ತರಕ್ಕೂ ಕಾಯದೇ ಒಳಗಿನಿಂದ ಬಾಕ್ಸ್ ತಂದು, ಅವಳ ಗಾಯ ಒರೆಸಿ, ಬ್ಯಾಂಡೇಜ್‌ ಕಟ್ಟತೊಡಗಿದ. ಆ ಕೆಲಸದಲ್ಲಿ ಅವನು ಪಳಗಿದಂತಿದ್ದ. ಇಷ್ಟು ಹೊತ್ತಿಗೆ ಅವಳು ಸಾಕಷ್ಟು ಸುಧಾರಿಸಿಕೊಂಡಿದ್ದಳು.

ಒಂದು ಹೊಸ ಫ್ಲಾಟ್‌ ನಲ್ಲಿ ಒಬ್ಬಂಟಿಯಾಗಿ ಅಪರಿಚಿತ ತರುಣನೊಂದಿಗೆ ತಾನು ಆ ಕೋಣೆಯಲ್ಲಿರುವುದು ಅವಳಿಗೇಕೋ ಕಸಿವಿಸಿ ಎನಿಸಿತು. ಆದರೆ ಆ ತರುಣ ಬಲು ಸಹಜವಾಗಿ ಒಬ್ಬ ಪೇಶೆಂಟ್‌ ನ ಟ್ರೀಟ್‌ ಮಾಡುವವನಂತೆ. ಅವಳ ಗಾಯ ಒರೆಸಿ, ಪಟ್ಟಿ ಕಟ್ಟಿದ. ಅವನ ಸ್ಪರ್ಶದಿಂದ ಸುಜಾತಾ ಅಸಹಜತೆಯ ಜೊತೆಗೆ ರೋಮಾಂಚನನ್ನೂ ಅನುಭವಿಸುತ್ತಿದ್ದಳು.

“ಹಾಗೇ ಸ್ವಲ್ಪ ಆರಾಮ ಕುರ್ಚಿಯಲ್ಲಿ ಒರಗಿ ಕುಳಿತಿರಿ….. ಈಗಲೇ ಒಂದಿಷ್ಟು ಬಿಸಿ ಟೀ ತರ್ತೀನಿ” ಎನ್ನುತ್ತಾ ಆತ ಒಳ ನಡೆದ. ಅವಳು ತನ್ನದೇ ಆಲೋಚನೆಯಲ್ಲಿ ಮುಳುಗಿಹೋಗಿದ್ದಳು.

ಸ್ವಲ್ಪ ಹೊತ್ತಿಗೆ ಆತ ಟ್ರೇನಲ್ಲಿ ಟೀ, ಬಿಸ್ಕತ್ತು ತೆಗೆದುಕೊಂಡು ಬಂದ.

ಅವಳು ಬೇಡ ಬೇಡ ಎಂದರೂ ಬಲವಂತಾಗಿ ಟೀ ತೆಗೆದುಕೊಂಡು ತುಸು ವಿಶ್ರಾಂತಿ ಪಡೆಯಲು ಆಗ್ರಹಿಸಿದ. ನಂತರ ಅವರಿಬ್ಬರೂ ಔಪಚಾರಿಕ ಪರಿಚಯ ಮಾಡಿಕೊಂಡರು. ಆತನ ಹೆಸರು ಪ್ರಸಾದ್‌, ಖಾಸಗಿ ಬ್ಯಾಂಕೊಂದರಲ್ಲಿ ಸೀನಿಯರ್‌ಮ್ಯಾನೇಜರ್‌ ಆಗಿದ್ದ. ಇಬ್ಬರ ಕುಟುಂಬಗಳ ಪರಿಚಯ ಆಯ್ತು. ನಂತರ ಅವಳು ಹೊರಡುತ್ತೇನೆ ಎಂದಾಗ ಆತ ತನ್ನ ಫ್ಲಾಟ್ ನಂಬರ್‌ ನೆನಪಿಸಿ, “ಏನೇ ಸಹಾಯ ಬೇಕಾದರೂ ಕೂಡಲೇ ನನ್ನನ್ನು ಸಂಪರ್ಕಿಸಿ. ಏನೂ ಸಂಕೋಚ ಬೇಡ,” ಎಂದು ಒತ್ತಾಯಿಸಿ, ಮುಗುಳ್ನಗೊಡನೆ ಬೀಳ್ಕೊಂಡ.

ಹೀಗೆ ಒಂದೇ ಅಪಾರ್ಟ್‌ ಮೆಂಟ್‌ ನವರಾದ್ದರಿಂದ ಆಗಾಗ ಭೇಟಿ ಆಗುತ್ತಿರಬೇಕಾಯಿತು. ಹಾರ್ದಿಕ ಮಂದಹಾಸ, ನಮಸ್ಕಾರಗಳ ನಂತರ ಈಗ ಅವರಲ್ಲಿ ಸ್ನೇಹ ಮುಂದುವರಿಯಿತು. ಒಮ್ಮೆ ಸಂಜೆ ಭೇಟಿ ಆದಾಗ, ತಾನೇ ಅವನನ್ನು ಕಾಲೇಜ್‌ ಬಳಿಯ ಹೋಟೆಲ್ ‌ಗೆ ಕರೆದೊಯ್ದು, ಕಾಫಿತಿಂಡಿ ಕೊಡಿಸಿದಳು.

ತನಗೇ ಅರಿಯದಂತೆ ಸುಜಾತಾಳ ಮನಸ್ಸು ಅನತ್ತ ವಾಲತೊಡಗಿತು. ಪ್ರಸಾದ್‌ ನ ಸಂಸ್ಕಾರಂತ ಗುಣನಡತೆ, ಮಾತಿನಲ್ಲಿ ನಯವಿನಯ, ಉತ್ತಮ ವ್ಯವಹಾರ, ಅವಳನ್ನು  ಪದೇ ಪದೇ ಸೆಳೆಯುತ್ತಿತ್ತು. ಸುಧೀರ್‌ ಗಿಂತಲೂ ಇವನು ಇನ್ನೂ ಹೆಚ್ಚಿನ ಆಕರ್ಷಕವಾಗಿದ್ದಾನೆ ಎಂದು ಅವಳ ಒಳಮನಸ್ಸು ಹೇಳುತ್ತಿತ್ತು. ಎಂಗೇಜ್‌ ಮೆಂಟ್‌ ಆದ ತಾನು ಈ ರೀತಿ ಯೋಚಿಸುವುದು ಸರಿಯೇ ಎಂದು ಅವಳು ದ್ವಂದ್ವಕ್ಕೆ ಸಿಲುಕಿದಳು.

ಆದರೆ ಆ ನಿಟ್ಟಿನಲ್ಲಿ ಹೆಚ್ಚು ಯೋಚಿಸಲು ಅವಳ ಸಂಸ್ಕಾರವಂತ ಮನಸ್ಸು ತಡೆಯುತ್ತಿತ್ತು. ಆದರೆ ಸುಧೀರನತ್ತ ವಾಲದ ಮನಸ್ಸು, ಒಲವಿನಿಂದ ಪ್ರಸಾದನೆಡೆಗೆ ನಿರಂತರ ಸೆಳೆಯಲ್ಪಡುತ್ತಿತ್ತು. ಸುಧೀರ್‌ ಹೆಚ್ಚು ಭೇಟಿಯಾಗದೇ ಇದ್ದದ್ದು ಸಹ ಒಂದು ಕಾರಣ ಆಗಿರಬಹುದು. ಅವಳ ಮನಹೊಕ್ಕು ಒಲವಿನ ಅಜ್ಞಾತ ಭಾವ, ಅವಳ ಹೃದಯವನ್ನು ದಿನೇದಿನೇ ಸ್ಪರ್ಶಿಸಿ, ಪ್ರಸಾದನತ್ತ ಯೋಚಿಸುವಂತೆ ಮಾಡಿತು.

ಆದರೆ ಸುಧೀರ್‌ ನ ಸಾಂಗತ್ಯದಲ್ಲಿ ಅವಳು ಎಂದೂ ಈ ಕೋಮಲ ಭಾವವನ್ನೂ ಗುರುತಿಸಿರಲೇ ಇಲ್ಲ. ಕೇವಲ ಕರ್ತವ್ಯದ ದೃಷ್ಟಿಯಿಂದ ಮಾತ್ರ ಅವನೊಂದಿಗೆ ವ್ಯವಹರಿಸುತ್ತಿದ್ದಳು. ಕ್ರಮೇಣ ಪ್ರಸಾದನತ್ತ ಅವಳ ಮನಸ್ಸು ಸಂಪೂರ್ಣ ಒಲಿಯತೊಡಗಿತು. ತನಗರಿಯದ ತುಂಬು ಪ್ರೇಮ ಉಕ್ಕಿ ಹರಿಯತೊಡಗಿತು. ಪ್ರಸಾದ್‌ ಸಹ ಇವಳನ್ನು ಆಪ್ಯಾಯಮಾನತೆಯಿಂದ ಬಹಳ ವರ್ಷದ ಪರಿಚಿತಳು ಎಂಬಂತೆ ನಡೆದುಕೊಳ್ಳುತ್ತಿದ್ದ.

ಪ್ರಸಾದ್‌ ನ ಸಾಮೀಪ್ಯದಿಂದಾಗಿ ಈಗ ಅವಳು ಧನ್ಯತಾ ಭಾವ ಅನುಭವಿಸುತ್ತಿದ್ದಳು. ಬಸ್‌ ಸ್ಟಾಪಿನಲ್ಲಿ ಕಾದಿರುತ್ತಿದ್ದ ಅವಳನ್ನು ದಿನ ಬಂದು ಬೈಕ್‌ ನಲ್ಲಿ ಪಿಕ್‌ ಮಾಡಿ ಕಾಲೇಜಿಗೆ ಬಿಡುತ್ತಿದ್ದ. ಎಷ್ಟೋ ಸಲ ಸಂಜೆ  ಹೊತ್ತು ಪಿಕ್‌ ಮಾಡಿ, ಮನೆಗೆ ಬಿಡುತ್ತಿದ್ದ. ಈಗಂತೂ ಅವಳು ಅದಕ್ಕೆ ಎಷ್ಟು ಹೊಂದಿಕೊಂಡಿದ್ದಳೆಂದರೆ, ಪ್ರಸಾದ್‌ ಡ್ರಾಪ್‌ ಮಾಡದೆ ಇದ್ದರೆ ತಾನು ಕಾಲೇಜಿಗೆ ಸಲೀಸಾಗಿ ಹೋಗಲಾರಳೇನೋ ಎಂಬಂತೆ ಆಗಿಹೋಗಿದ್ದಳು. ಹಿಂದೆಲ್ಲ ಸಂಕೋಚದಿಂದ ಮುದುರಿ ಬೈಕಿನಲ್ಲಿ ಹಿಂದೆ ಅಂಟಿ ಕೂರುತ್ತಿದ್ದಳು, ಈಗ ಅವನ ಸಮೀಪ ಸರಿದು, ಸಂಕೋಚವಿಲ್ಲದೆ, ಸೊಂಟ ಹಿಡಿದು ಕೂರುತ್ತಿದ್ದಳು.

ಆಗ ರಾತ್ರಿ 8 ಗಂಟೆ ಆಗಿತ್ತು. ಅಂದು ಸಂಜೆ ಬೇಗ ಮನೆಗೆ ಬಂದು, ನಿಧಾನವಾಗಿ ತಲೆಗೆ ಎರೆದುಕೊಂಡಳೇ, ಗುಲಾಬಿ ರಂಗಿನ ಕೇಪ್ರಿ ತೊಟ್ಟು ಮ್ಯಾಚಿಂಗ್‌ ಟಾಪ್‌ ಧರಿಸಿ ತಲೆ ಒಣಗಿಸಲೆಂದು ಬಾಲ್ಕನಿಯಲ್ಲಿ ನಿಂತಿದ್ದಳು. ಅಂದು ತುಂಬು ಬೆಳದಿಂಗಳು. ಅಂದು ಅವಳು ಬೆಳದಿಂಗಳ ಬಾಲೆಯಂತೆ ಮನೋಹರವಾಗಿ ಕಾಣುತ್ತಿದ್ದಳು. ಮ್ಯಾಚಿಂಗ್‌ ಕಿವಿ ಟಾಪ್ಸ್ ಜೊತೆ, ಕುತ್ತಿಗೆಗೆ ಅಚ್ಚ ಬಿಳುಪಿನ ಮುತ್ತಿನ ಮಾಲೆಯನ್ನು ಧರಿಸಿದ್ದಳು. ಇಂದು ಅವಳು ಬಹಳ ಖುಷಿಯಾಗಿದ್ದಳು. ಅವಳು ಅಡುಗೆ ಮನೆಯತ್ತ ಹೊರಡುವಷ್ಟರಲ್ಲಿ ಆಕಸ್ಮಿಕಾಗಿ ಕಾಲಿಂಗ್‌ ಬೆಲ್ ‌ಸದ್ದಾಯಿತು. ಯಾರು ಬಂದಿರಬಹುದು…. ಪ್ರಸಾದ್‌ ಇರಬಹುದೇ…. ಅವಳ ಮನ ಪುಳಕಿತವಾಗಿತ್ತು. ತಾನೇ ಬಂದು ಬಾಗಿಲು ತೆರೆದು ನೋಡಿದರೆ…. ಎದುರಿಗೆ ಸುಧೀರ್‌ ನಿಂತಿದ್ದ!

“ಓಹ್‌…. ಸುಧೀರ್‌ ನೀವು….. ಬನ್ನಿ….. ಬನ್ನಿ…..” ಎಂದು ಒಳಗೆ ಕರೆದಳು. ಅವಳ ತಾಯಿ ತಂದೆ ಏನೋ ತುರ್ತು ಕೆಲಸದ ಸಲುವಾಗಿ ಶಿವಮೊಗ್ಗಕ್ಕೆ ಹೊರಟಿದ್ದರು. ಹೀಗಾಗಿ ಹೊಸ ಅಳಿಯನ ಉಪಚಾರಕ್ಕೆ ಇವಳೇ ಮುಂದಾಗಬೇಕಾಯಿತು.

“ಕೂತ್ಕೊಳ್ಳಿ…. ಕಾಫಿ ಅಥವಾ ಟೀ ತರಲಾ?” ಎಂದು ಕೇಳಿದಳು.

“ಇವತ್ತು ನೀನು ಸುಪರ್ಬ್‌ ಆಗಿ ಮಿಂಚುತ್ತಿದ್ದೀಯಾ….. ಬ್ಯೂಟಿ ಕ್ವೀನ್‌ ಅಂದ್ರೂ ತಪ್ಪಿಲ್ಲ….. ಯಾರ ಹೃದಯ ಕೊಳ್ಳೆ ಹೊಡೆಯಲು ಈ ಅಲಂಕಾರ?” ಅವಳನ್ನು ಬಳಸುತ್ತಾ ತನ್ನ ಎದೆಗಾನಿಸಿಕೊಳ್ಳಲು ಯತ್ನಿಸಿದ ಸುಧೀರ್‌. ಹಿರಿಯರಿಲ್ಲದ್ದು ಅವನಿಗೆ ಏಕಾಂತದ ಅವಕಾಶ ಕಲ್ಪಿಸಿತ್ತು.

ಆಗ ತಾನೇ ಅವನು ಯಾವುದೋ ಪಾರ್ಟಿಯಿಂದ ಬಂದಿರಬೇಕು, ಹಾಟ್‌ ಡ್ರಿಂಕ್ಸ್ ನ ದಟ್ಟ ವಾಸನೆ ಅವಳನ್ನು ಇರಿಯಿತು, ಅವಳಿಗೆ ನಿಜಕ್ಕೂ ವಾಕರಿಕೆ ತರಿಸಿತು. ತಕ್ಷಣ ಅವನಿಂದ ದೂರವಾಗಿ ಗೋಡೆಗೊರಗಿ ನಿಂತಳು.

ಸುಧೀರ್‌ ತಾನೇ ಮುಂದೆ ಬಂದು ಪ್ರಣಯಾತುರನಾಗಿ ಅವಳ ಕೈ ಹಿಡಿದುಕೊಂಡ. ಅವಳು ಮತ್ತೆ ಮತ್ತೆ ಕೈ ಬಿಡಿಸಿಕೊಳ್ಳುತ್ತಾ, ದೂರ ಸರಿಯಲು ಯತ್ನಿಸಿದಳು. ಆದರೆ ಸುಧೀರನ ಮಜಬೂತಾದ ಕೈಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಹೈ ಫೈ ಸೊಸೈಟಿಯ ಸುಧೀರನಿಗೆ ಇದೆಲ್ಲ ಮಾಮೂಲಿ ಆಗಿತ್ತು. ಇವಳೋ…. ಎಂಗೇಜ್‌ ಮೆಂಟ್‌ ಆದ ಹುಡುಗಿ. ತನ್ನಳೇ ಆದ ರೂಪಸಿ. ಕೊಸರಿಕೊಂಡರೆ ಅವನು ಅಷ್ಟು ಸುಲಭವಾಗಿ ಬಿಟ್ಟಾನೆಯೇ?

ಇಂಥ ಒಂದು ಸಂದರ್ಭ ಹೀಗೆ ಧುತ್ತೆಂದು ಎದುರಾಗಬಹುದೆಂದು ಸುಜಾತಾ ಖಂಡಿತಾ ಎಣಿಸಿರಲಿಲ್ಲ. ಮುಖ್ಯವಾಗಿ ಅವನ ಕುಡಿತದ ಗಬ್ಬು ವಾಸನೆ ಅವಳನ್ನು ನಖಶಿಖಾಂತ ಉರಿಸಿತು. ಅವಳ ಮನಸ್ಸು ಮರಗಟ್ಟಿತು. ಏನು ಮಾಡಲಿ, ಹೇಗೆ ವಿರೋಧಿಸಲಿ…. ತಿಳಿಯದೆ ಪೇಚಾಡಿದಳು.

“ಸುಧೀರ್‌….. ಯಾಕೋ ಇವತ್ತು ನಿಮ್ಮ ಮೂಡ್‌ ಸರಿ ಇಲ್ಲ….. ಹೊರಟು ಬಿಡಿ, ನಾಳೆ ಸಿಗೋಣ,” ಎಂದು ಹೇಗೋ ಕೊಸರಿಕೊಂಡು ಅವಳು ಬಾಗಿಲು ತೆರೆದು ಅವನನ್ನು ಹೊರಡಿಸಲು ಯತ್ನಿಸಿದಳು.

“ನಾಳೇನಾ….? ನಾಳೆ ಯಾಕೆ ಡಾರ್ಲಿಂಗ್‌….? ಏನಾಗಬೇಕಿದೆಯೋ ಅದು ಇವತ್ತೆ ಈಗ ಆಗಿ ಹೋಗಲಿ…. ನಮ್ಮಿಬ್ಬರ ಎಂಗೇಜ್‌ ಮೆಂಟ್‌ ಆಗಿದೆ, ಮುಂದಿನ 2 ತಿಂಗಳಲ್ಲೇ ಮದುವೆ….. ಈಗ ಇಂಥ ಮಡಿವಂತಿಕೆ, ನಾಚಿಕೆ ಯಾಕೆ? ಬಾ ಡಾರ್ಲಿಂಗ್‌….” ಎನ್ನುತ್ತಾ ಮತ್ತೆ ಅವಳತ್ತ ನುಗ್ಗಿದ.

“ಮದುವೆ ಆಗಲಿದೆ…. ಇನ್ನೂ ಆಗಿಲ್ಲ….. ಸದ್ಯಕ್ಕಂತೂ ಏನೂ ಮಾತು ಬೇಡ! ಪ್ಲೀಸ್‌….. ಮೊದಲು ಇಲ್ಲಿಂದ ಹೊರಟು ಬಿಡಿ…..” ಸುಜಾತಾ ಹೇಗೋ ಸಂಯಮ ತಂದುಕೊಳ್ಳುತ್ತಾ ಅವನಿಗೆ ತಿಳಿಹೇಳಲು ಯತ್ನಿಸಿದಳು.

ಮೊದಲಿನಿಂದಲೂ ಹಣದ ಮದದಲ್ಲಿ ಬೆಳೆದಿದ್ದ ಅವನಿಗೆ ಇಂಥ ಶಿಷ್ಟಾಚಾರ ಏಕೆ ಎಂದು ಗೊತ್ತಾಗಲಿಲ್ಲ. ಪಾರ್ಟಿಯ ನಶೆ ಅವನ ಮೈಮನ ಆವರಿಸಿತ್ತು. ಇವಳು ಎಂದಿದ್ದರೂ ತನ್ನವಳು, ಇಂದೇ ಬಳಸಿಕೊಳ್ಳಬಾರದೇಕೆ ಎಂಬ ಪುರುಷತ್ವದ ಅಹಂ ಅವಳನ್ನು ಆಕ್ರಮಿಸಿ, ಅವಳ ಟಾಪ್‌ ಹಿಡಿದೆಳೆದ. ಈ ಹೋರಾಟದಲ್ಲಿ ಅವಳ ಟಾಪ್‌ ಹರಿಯತೊಡಗಿತು.

“ಯೂ ಬ್ಲಡೀ ಫೂಲ್‌! ಮದುವೆ ಆಗಲಿರುವ ನಾನು ಬೇಕೆಂದು ಬಂದು ಕೇಳದಾಗ…. ದೂರ ಹೋಗ್ತೀಯಾ? ನಿನ್ನಂಥ ಎಷ್ಟು ಹುಡುಗಿಯರನ್ನು ನಾನು ನೋಡಿಲ್ಲ…. ಆಫ್ಟ್ರಾಲ್ ಮಧ್ಯಮ ವರ್ಗದ ನಿನ್ನನ್ನು ಏನೋ ತೆಳ್ಳಗೆ ಬೆಳ್ಳಗಿದ್ದೀಯಾ ಎಂದು ಒಪ್ಪಿದರೆ…. ನನ್ನನ್ನೇ ದೂರ ತಳ್ತೀಯಾ? ನಾನು ಯಾವುದನ್ನು ಆಸೆಪಟ್ಟರೂ ಅದನ್ನೆಂದೂ ಅನುಭವಿಸದೇ ಬಿಡಲಾರೆ….. ನೀನು ಯಾವ ಮಹಾ?”

ಕುಡಿತದ ಅಮಲಿನಲ್ಲಿ ಅವನು ಬಾಯಿಗೆ ಬಂದಂತೆ ಒದರ ತೊಡಗಿದ. ಮತ್ತೆ ಅವಳನ್ನು ಆಕ್ರಮಿಸಲು ಮುಂದಾದನು, ಮುಗ್ಗರಿಸಿ ಅವಳ ಮುಂದೆ ಬಿದ್ದ.

ತನ್ನ ಶೀಲ ಕೆಣಕಲು ಬಂದ ಅವನ ಎದುರು ಸುಜಾತಾ ರಣಚಂಡಿಯಾಗಿ ನಿಂತಳು. ಕೈಗೆ ಸಿಕ್ಕಿದ ಮೂಲೆಯಲ್ಲಿದ್ದ ಕೋಲು ಹಿಡಿದು ಅವನಿಗೆ 4 ಬಾರಿಸಿ, ಹೇಗೋ ಹೊರತಳ್ಳಿ ಬಾಗಿಲು ಹಾಕಿಕೊಂಡಳು. ತನಗೆ ಎಲ್ಲಿತ್ತು ಈ ಶಕ್ತಿ ಎಂದು ಅವಳಿಗೇ ತಿಳಿಯಲಿಲ್ಲ.

ಸುಧೀರ್‌ ಮತ್ತೆ ಮತ್ತೆ ಬಾಗಿಲು ಬಡಿಯುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ. ಅವಳು ಕಿವಿ ಮುಚ್ಚಿ ಕಿವುಡಳಾಗಿ ಕುಳಿತಳು. ತನ್ನ ಅಸಹಾಯಕತೆ ನೆನೆಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ಬೈದು ಬೈದೂ ಸುಸ್ತಾದ ಸುಧೀರ್‌, ಕೊನೆಗೆ ಅರ್ಧ ಗಂಟೆ ನಂತರ ಅಲ್ಲಿಂದ ಕಾಲೆಳೆಯುತ್ತಾ ಹೊರಟು ಹೋದ.ದುಃಖ ತಡೆಯಲಾರದೆ ಅವಳು ಮಂಚದ ಮೇಲೆ ಧೊಪ್ಪೆಂದು ಬಿದ್ದು ಜೋರಾಗಿ ಅಳತೊಡಗಿದಳು. ಎಷ್ಟೋ ಹೊತ್ತಿನ ನಂತರ ಕಣ್ಣು ಮುಚ್ಚಿ ಮಲಗಲು ಯತ್ನಿಸಿದರೂ ಸುಧೀರ್‌ ನ ಕೆಂಪೇರಿದ ಕಂಗಳು ತನ್ನನ್ನು ಇರಿಯಲು ಬರುತ್ತಿರುವಂತೆ, ಕನಸಿನಿಂದ ಎಚ್ಚೆತ್ತು ಛೀತ್ಕರಿಸುತ್ತಾ ಎದ್ದು ಕೂರುತ್ತಿದ್ದಳು. ಅಂತೂ ಅವಳ ಬದುಕಲ್ಲಿ ಆ ರಾತ್ರಿ ಕಳೆಯುವುದು ಬಲು ದುಸ್ತರವಾಯಿತು.

ಆಗ ಅವಳಿಗೆ ಪ್ರಸಾದನ ಸೌಮ್ಯ ಮುಖ ನೆನಪಾಯಿತು. ಇವರಿಬ್ಬರ ಸ್ವಭಾವದಲ್ಲಿದ್ದ ಭೂಮಿ ಆವಕಾಶಗಳ ಅಂತರ ನೆನೆದು, ಅವಳಿಗೆ ಸುಧೀರನ ಬಗ್ಗೆ ತಿರಸ್ಕಾರ ಉಕ್ಕಿ ಬಂದಿತು.

ಆಗಿನ್ನೂ 11 ಗಂಟೆ, ಮೊಬೈಲ್ ‌ರಿಂಗ್‌ ಆಗಲು ಬೇಸರದಿಂದ ಅದನ್ನು ಸ್ವೀಕರಿಸಿದಳು. ಆ ಕಡೆಯಿಂದ ಲಲಿತಮ್ಮ ಹೆಮ್ಮೆಯಿಂದ ಮಗಳಿಗೆ ಹೇಳುತ್ತಿದ್ದರು, “ಸುಜಿ, ನೋಡೇ ನಿನ್ನ ಅದೃಷ್ಟ…. ಇವತ್ತು ಬೀಗರು ಸಂಜೆ ಇವರಿಗೆ ಫೋನ್‌ ಮಾಡಿದ್ದರು. ಮುಹೂರ್ತ ತುಂಬಾ ದೂರ ಆಯ್ತು, ಮಗ ಕಂಪನಿ ಸಲುವಾಗಿ ಜರ್ಮನಿಗೆ ಹೊರಡಲಿದ್ದಾನೆ. ಬರಲು 2 ತಿಂಗಳಾಗುತ್ತೆ. ಹೀಗಾಗಿ ಈ ವಾರದ ಕೊನೆಯಲ್ಲೇ ಮದುವೆ  ಮುಗಿಸೋಣ. ಸಿಂಪಲ್ ಆಗಿ ಮುಗಿಸಿಕೊಡಿ, ಅವರು ವಾಪಸ್ಸು ಬಂದ ಮೇಲೆ ಗ್ರಾಂಡ್‌ರಿಸೆಪ್ಶನ್‌ ಇಟ್ಟುಕೊಳ್ಳೋಣ ಅಂತ ಇನ್ನೂ ಏನೇನೋ ಹೇಳ್ತಾ ಇದ್ದರು…..”

ಮಗಳ ಬಗ್ಗೆ ಏನೂ ವಿಚಾರಿಸದೆ ಅವರ ಬಡಬಡಿಕೆ ಮುಂದುವರಿಯುತ್ತಿತ್ತು. “ಅಮ್ಮ… ಬೇಡ… ಖಂಡಿತಾ ಈ ಮದುವೆ ಬೇಡವೇ ಬೇಡ! ನಾನಂತೂ ಆ ನೀಚ ಸುಧೀರನ ಮುಖ ನೋಡೋದಿಕ್ಕೂ ಇಷ್ಟಪಡಲ್ಲ….” ಎಂದು ಜೋರಾಗಿ ಬಿಕ್ಕಳಿಸಿದಳು.

“ಏನಾಯ್ತೇ ಸುಜಿ? ಯಾಕಿಷ್ಟು ಟೆನ್ಶನ್‌….. ಏನೇನೋ ಮಾತಾಡ್ತಾ ಇದ್ದೀಯಲ್ಲೇ…..”

“ಹೌದಮ್ಮ….. ಇವತ್ತು ನಿನ್ನ ಮಗಳು ಸತ್ತು ಬದುಕಿದಳು ಅಂದುಕೋ….” ಎನ್ನುತ್ತಾ ಸುಜಾತಾ ಸುಧಾರಿಸಿಕೊಂಡು ನಡೆದ ವಿಷಯ ಚುಟುಕಾಗಿ ವಿವರಿಸಿದಳು.

“ಅಮ್ಮಾ…. ಪತ್ನಿಯ ಮನ ಗೆಲ್ಲಲು ಪತಿಯ ಮನದಲ್ಲೂ ಭಾವನಾತ್ಮಕ ಮಿಡಿತ ಇರಬೇಕು. ಆದರೆ ಸುಧೀರನಿಗೆ ಹೆಣ್ಣು ಅಂದ್ರೆ ಕಾಮದ ಬೊಂಬೆ…. ಅವನಿಗೆ ನನ್ನ ಮೈ ಬೇಕೇ ಹೊರತು ಹೆಂಡತಿ ಅಲ್ಲ…. ಹೇಗಾದರೂ ನನ್ನನ್ನು ಕೆಡಿಸಿ ತನ್ನ ಅಹಂ ತೃಪ್ತಿ ಪಡಿಸಿಕೊಳ್ಳಲೆಂದೇ ಬಂದಿದ್ದ….. ಇಂಥ ಪಾಪಿಷ್ಟನ್ನ ನಾನೆಂದೂ ಮದುವೆ ಆಗಲಾರೆ….. ಅಪ್ಪನಿಗೆ ಹೇಳಿ ಅವರಪ್ಪನಿಗೆ ವಿಷಯ ತಿಳಿಸಿ ಬಿಡಿ….” ಅವಳ ಅಳು ನಿಲ್ಲದಾದಾಗ ತಾಯಿಯ ಮನ ವಿಲವಿಲ ಒದ್ದಾಡಿತು.

ಸುಧೀರನ ಈ ಕುಕೃತ್ಯದಿಂದ ಸುಜಾತಾಳ ತಾಯಿ ತಂದೆಯರಿಗೆ ಅವನೆಂಥ ನಡತೆಗೆಟ್ಟವನು, ಕೇವಲ ತೋರಿಕೆಗೆ ಒಳ್ಳೆ ವರನಾಗಿ ಬಂದಿದ್ದ ಎಂಬುದು ಅರ್ಥವಾಯಿತು.

“ಹಾಗೇ ಆಗಲಮ್ಮ….. ನಾವು ಅವರೊಂದಿಗೆ ಮಾತನಾಡ್ತೀವಿ. ನಾಳೆ ಬೆಳಗ್ಗೇನೇ ಮೊದಲ ಬಸ್ಸಿಗೆ ಹೊರಟು ಮನೆಗೆ ಬರ್ತಿದ್ದೇವೆ. ನೀನು ಧೈರ್ಯವಾಗಿರಮ್ಮ…..” ಎಂದು ತಾಯಿ ಫೋನ್‌ ಇಟ್ಟರು.

ಆಗ ಮಾತ್ರ ಅವಳಿಗೆ ಎಷ್ಟೋ ಸಮಾಧಾನವಾಯಿತು, ಇದ್ದುದರಲ್ಲಿ ತುಸು ಧೈರ್ಯ ತಳೆದು, ಒಂದಿಷ್ಟು ನೀರು ಕುಡಿದು ಬಂದು ಮಲಗಿದಳು. ಇಡೀ ರಾತ್ರಿ ಅವಳಿಗೆ ನಿದ್ದೆ ಬರಲಿಲ್ಲ.

ಹಿಂದಿನ ವಾರ ಆಫೀಸ್‌ ಕೆಲಸದ ನಿಮಿತ್ತ ಪ್ರಸಾದ್‌ ಮುಂಬೈಗೆ ಹೊರಟಿದ್ದ. ಅವನು ಮಾರನೇ ದಿನ ಬರುವವನಿದ್ದ. ಅಂದು ಅವನನ್ನು ಭೇಟಿಯಾದ ಸುಜಾತಾ, ಸಂಜೆ ಮರೆಯದೆ ಕಾಲೇಜ್‌ ಬಳಿ ಬರಲು ಹೇಳಿದಳು.

ಸಂಜೆ ಅವರು ಭೇಟಿಯಾದಾಗ, ಪಾರ್ಕ್‌ ನಲ್ಲಿ ಕುಳಿತ ಸುಜಾತಾ, ಬಿಕ್ಕಿ ಬಿಕ್ಕಿ ಅಳುತ್ತಾ, ಪ್ರಸಾದನ ಕೈ ಹಿಡಿದು ಎಲ್ಲಾ ವಿಷಯ ತಿಳಿಸಿದಳು. ಅವಳಿಗೆ ಎಂಗೇಜ್‌ ಮೆಂಟ್‌ ಆಗಿತ್ತು ಎಂಬುದೂ ಅವನಿಗೆ ತಿಳಿದಿರಲಿಲ್ಲ.

ಅವಳನ್ನು ಎದೆಗಾನಿಸಿಕೊಂಡ ಪ್ರಸಾದ್‌, ಅವಳಿಗೆ ಸಂಪೂರ್ಣ ಧೈರ್ಯ ತುಂಬಿದ. ಇದೊಂದು ಕೆಟ್ಟ ಕನಸು ಎಂದು ಮರೆಯಲು ತಿಳಿಸಿದ. ಅವರ ಅನುರಾಗ ದೃಢವಾಗಿ ಬೆಳೆಯಿತು. ಮುಂದಿನ 2 ತಿಂಗಳ ನಂತರ ಅದೇ ಮುಹೂರ್ತದಲ್ಲಿ ಇವರ ಮದುವೆ ನಡೆಯಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ