ಪತಿ : ಥೂ…! ಇದೆಂಥ ಟೊಮೇಟೊ ಗೊಜ್ಜು ಮಾಡಿದ್ದೀಯಾ? ಇಷ್ಟು ಸಪ್ಪೆ ಇದೆಯಲ್ಲ… ಇದಕ್ಕೊಂದಿಷ್ಟು ಉಪ್ಪು ಖಾರ ಹಾಕಬಾರದಿತ್ತೇ?
ಪತ್ನಿ : ಬಡ್ಕೊಂಡ್ರು ನನ್ನ ಕರ್ಮಕ್ಕೆ! ಆ ಹಾಳಾದ ಮೊಬೈಲ್ ನ್ನು ಎಡಗೈಲಿ ಹಿಡ್ಕೊಂಡು ಚಪಾತೀನಾ ಗೊಜ್ಜಿನ ಬದಲು ನೀರಲ್ಲಿ ಅದ್ದಿ ತಿಂದರೆ ಇನ್ನೇನಾದೀತು….?!
ಒಂದು ಅಂಗಡಿಯಲ್ಲಿ ನಿಂಗಿ ಚಿಪ್ಸ್ ಪ್ಯಾಕೆಟ್ ಕದಿಯಲು ಹೋಗಿ ಅಂಗಡಿಯವನ ಬಳಿ ಸಿಕ್ಕಿಬಿದ್ದಳು. ಆತ ತಕ್ಷಣ ಪೊಲೀಸರಿಗೆ ಫೋನಾಯಿಸಲು, ಅವರು ಬಂದು ನಿಂಗಿಯನ್ನು ಅರೆಸ್ಟ್ ಮಾಡಿ, ಕೋರ್ಟಿನಲ್ಲಿ ಹಾಜರುಪಡಿಸಿದರು.
ಜಡ್ಜ್ : ಏನಮ್ಮ….. ನೀನು ಕದ್ದಿದ್ದನ್ನು ಒಪ್ಪಿಕೊಳ್ತೀಯಾ?
ನಿಂಗಿ : ಹ್ಞೂಂ ಸ್ವಾಮಿ… ನನ್ನ ಪ್ರಾಮಾಣಿಕತೆಗೆ ಮೆಚ್ಚಿ ದಯವಿಟ್ಟು ಕಡಿಮೆ ಶಿಕ್ಷೆ ಕೊಡಿ.
ಜಡ್ಜ್ : ಇರಲಿ…. ಈ ಪ್ಯಾಕೆಟ್ ನಲ್ಲಿ 25 ಚಿಪ್ಸ್ ಇದೆ, ಹಾಗಾಗಿ ನಿನಗೆ 25 ದಿನ ಸೆರೆವಾಸ!
ನಿಂಗ : ಸ್ವಾಮಿ, ನಾನು ಇವಳ ಗಂಡ. ಪ್ರಾಮಾಣಿಕವಾಗಿ ಹೇಳ್ತಿದ್ದೀನಿ…. ಜೊತೆಗೆ ಇವಳು ಕಾಲು ಕೆ.ಜಿ. ಗಸಗಸೆ ಪ್ಯಾಕೆಟ್ ಸಹ ಕದ್ದಿದ್ದಾಳೆ….. ತಾವು ಪರಾಂಬರಿಸಬೇಕು!
ರಾತ್ರಿ 2.30ರ ಹೊತ್ತಿಗೆ ರವಿ ಗಾಬರಿಯಿಂದ ಡಾಕ್ಟರಿಗೆ ಫೋನಾಯಿಸಿದ.
ರವಿ : ಡಾಕ್ಟರ್, ಬಹುಶಃ ನನಗೆ ಅನಿದ್ರೆಯ ರೋಗ ತಗುಲಿದೆ ಅನ್ಸುತ್ತೆ! ಏನು ಮಾಡಿದರೂ ನಿದ್ದೆಯೇ ಬರುತ್ತಿಲ್ಲವಲ್ಲ….?
ಡಾಕ್ಟರ್ : ಇದನ್ನು ನಾಳೆ ಆಸ್ಪತ್ರೆಗೆ ಬಂದು ಹೇಳಿದ್ದರೆ ಆಗುತ್ತಿರಲಿಲ್ಲವೇ? ಈ ಕರ್ಮಕ್ಕೆ ನನ್ನ ನಿದ್ದೆ ಹಾಳು ಮಾಡಬೇಕೇ?
ದಿನೇಶ್ : ಹಿಂದಿನ ಕಾಲ ವಿಭಿನ್ನವಾಗಿತ್ತು. ಆಗಿನ ಅಪ್ಪಂದಿರು ತಾವೇ ಅಪ್ಪ ಅಂತ ನಿರೂಪಿಸಲು `ಫಾದರ್ಸ್ ಡೇ’ಗಾಗಿ ಕಾಯುತ್ತಾ ಕೂರುತ್ತಿರಲಿಲ್ಲ.
ಸತೀಶ್ : ಈಗ ಇದರಲ್ಲಿ ಹೊಸತನ ಏನು ಬಂತು?
ದಿನೇಶ್ : ತಪ್ಪು ಮಾಡಿದ ಮಗನ ಮುಂದೆ ಕೆಂಗಣ್ಣು ಬೀರುತ್ತಾ, ಕೈಗೆ ಚಪ್ಪಲಿ ತೆಗೆದುಕೊಂಡರೆ, ಫಾದರ್ ಯಾರು ಅಂತ ಇಡೀ ವಠಾರಕ್ಕೆ ಗೊತ್ತಾಗಿಬಿಡುತ್ತಿತ್ತು!
ರೋಹಿತ್ : ನಿನ್ನೆ ನಾನು ಮಹಡಿಯಿಂದ ಬಿಟ್ಟ ಪೇಪರ್ ರಾಕೆಟ್ ಯಾರಿಗೆ ತಗುಲಿತು ಗೊತ್ತಾ?
ಮೋಹಿತ್ : ಓಹೋ…. ಸೀದಾ ಚಂದ್ರಮಂಡಲಕ್ಕಾ!
ರೋಹಿತ್ : ಅಲ್ಲ… ಎದುರು ಮನೆಯ ಚಂದ್ರಾಳಿಗೆ!
ಮೋಹಿತ್ : ಗಮ್ಮತ್ತಾಗಿದೆ… ಅವಳು ಸುಖಾ ಸುಮ್ಮನೆ `…. ನಲ್ಲನೇ ಸವಿ ಮಾತೊಂದ ನುಡಿವೆಯಾ?’ ಅಂತ ಹಾಡು ಹೇಳಿದಳೇ?
ರೋಹಿತ್ : ಇಲ್ಲ….! ಎಲ್ಲಿದ್ದನೋ ಅವರಪ್ಪ ಸೂರ್ಯ ಪ್ರಕಾಶ್ ಎದ್ದು ಬಂದವನೇ, `ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾರು?’ ಅಂತ ಕೈಯಲ್ಲಿದ್ದ ದೊಣ್ಣೆಯನ್ನು ನನ್ನ ಕಡೆಗೇ ಬೀಸುವುದೇ?
ಗುಂಡ : ಹೆಣ್ಣು ಸಹನಾಮಯಿ ಅಂತಾರೆ. ಇದು ನಿಜವೇ?
ಕಿಟ್ಟಿ : ಕಟ್ಟಿಕೊಂಡಾಗಿನಿಂದ ಕೊನೆಯವರೆಗೂ ಅವಳ ಶೋಷಣೆ ಸಹಿಸುತ್ತಾನಲ್ಲ ಅವಳ ಗಂಡ, ಇವಳಿಗಿಂತ ಅವನಿಗೆ ಸಹನೆ ಹೆಚ್ಚಲ್ಲವೇ?
ಲವ್ ಮ್ಯಾರೇಜ್ ಮಾಡಿಕೊಂಡ ಗುಂಡ ಹ್ಯಾಪ್ ವೋರೆ ಹಾಕಿಕೊಂಡು ಗೆಳೆಯರನ್ನು ಕಾಣಲು ಬಂದ.
ಕಲ್ಲೇಶಿ : ನಮ್ಮದಂತೂ ಅರೇಂಜ್ಡ್ ಮ್ಯಾರೇಜ್ ಕರ್ಮ… ನೀನ್ಯಾಕೋ ಹೀಗೆ ಸಪ್ಪಗಿದ್ದೀಯಾ?
ಗುಂಡ : ಎಂಥ ಮ್ಯಾರೇಜ್ ಆದರೇನು? ಈ ಲವ್ ಗಿವ್ ಅರ್ಧಕ್ಕೆ ನಿಂತುಹೋದರೆ, ಅದರ ಮಧುರ ನೆನಪಲ್ಲೇ ಕಾಲ ಕಳೆಯಬಹುದು.
ಕಿಟ್ಟಿ : ಅಂಥದ್ದೇನಪ್ಪ ನಿನಗೀಗ ವೈರಾಗ್ಯ?
ಗುಂಡ : ಹಿಂದೆ ಅವಳು ಪ್ರೇಯಸಿ ಆಗಿದ್ದಾಗ ಕರೆನ್ಸಿ ಚಾರ್ಜ್, ಸಿನಿಮಾ, ಪಾರ್ಟಿ…. ಇಷ್ಟರಲ್ಲಿ ಮುಗಿಸಿಕೊಳ್ಳುತ್ತಿದ್ದಳು…. ಈಗ ಹೆಂಡ್ತಿ ಪೋಸ್ಟ್ ಸಿಕ್ಕಿರೋದ್ರಿಂದ ಕಸಮುಸುರೇನೂ ನನ್ನ ಕೈಲೇ ಮಾಡಿಸೋದೇ?
ಗಿರೀಶ : ಎಲ್ಲೆಲ್ಲೂ ಕೊರೆಯುವ ಚಳಿ, ಥಂಡಿಯಿಂದ ಜನ ಗಡಗಡ ನಡುಗುತ್ತಿದ್ದಾರೆ. ಸರ್ಕಾರ ಇದಕ್ಕೇನಾದರೂ ಮಾಡಲೇಬೇಕು.
ಮಹೇಶ : ಸರ್ಕಾರ ಇದಕ್ಕಾಗಿ ಎಲ್ಲರಿಗೂ ಶಾಲು, ಸ್ವೆಟರ್ ಕೊಡಿಸಲಿಕ್ಕಾಗುತ್ತದೆಯೇ?
ಗಿರೀಶ : ಅದೇನೂ ಬೇಡ, ಈ ಚಳಿಯಲ್ಲಿ ಸ್ನಾನ ಅಂತೂ ಸಾಧ್ಯವಿಲ್ಲ. ಯಾರು ಸ್ನಾನ ಮಾಡಿದ್ದಾರೋ ಅವರನ್ನು ಸ್ಪರ್ಶಿಸಿದ ವ್ಯಕ್ತಿ ಸಹ ಸ್ನಾನ ಮಾಡಿದ್ದಕ್ಕೆ ಸಮ ಅಂತ ಘೋಷಿಸಬೇಕು!
ಕಲಾ : ದಿನೇದಿನೇ ಚಳಿ ಜಾಸ್ತಿ ಆಗ್ತಿ ಇದೆ. ನಮ್ಮ ನಮ್ಮ ಆರೋಗ್ಯದ ಕಡೆ ನಿಗಾ ವಹಿಸಲೇಬೇಕು.
ಲೀಲಾ : ಇದೇನು ಮಹಾ ಹೊಸ ವಿಷಯವೇ?
ಕಲಾ : ಹಾಗಲ್ಲ… ಕಣ್ಣೀರು ಒರೆಸಲು ಬಹಳ ಮಂದಿ ಸಿಗ್ತಾರೆ, ಆದರೆ ಈ ಚಳಿಯಿಂದ ನೆಗಡಿ ಆಗಿ ಮೂಗು ಸೋರಲಾರಂಭಿಸಿದರೆ, ಆ ಗೊಣ್ಣೆ ಒರೆಸಲು ಯಾರು ಬರ್ತಾರೆ?
ಕಿಟ್ಟಿ : ನೆಗಡಿ ಆಗಿದೆ ಏನು?
ಸೀನ : ಹ್ಞೂಂನಪ್ಪ……
ಕಿಟ್ಟಿ : ಮೂಗು ಕಟ್ಟಿಕೊಂಡಿದೆ ಏನು?
ಸೀನ : ಹ್ಞೂಂನಪ್ಪ….
ಕಿಟ್ಟಿ : ಒಟ್ಟಾರೆ ಗೊಣ್ಣೆ ಸುರಿಸುತ್ತಾ ಆಕ್ಷಿ ಅಂತಿರ್ತೀಯಾ…!
ಸೀನ : ಹ್ಞೂಂನೋ …. ಹಾಳಾದವನೇ….!
ಕಿಟ್ಟಿ : ಮತ್ತೆ ಈ ಚಳೀಲಿ ಹೊರಗೆ ಯಾಕೆ ಬೀದಿ ಸುತ್ತುತ್ತಿದ್ದೀಯಾ? ಮನೆಗೆ ಹೋಗಿ ಔಷಧಿ ತಗೊಂಡು ತೆಪ್ಪಗೆ ಬಿದ್ದುಕೋಬಾರದೇ?
ರೋಗಿ : ಡಾಕ್ಟರ್ ಇದು ನನಗೇ ಮೊದಲನೇ ಆಪರೇಶನ್….. ಬಹಳ ಭಯ ಆಗ್ತಿದೆ…..
ಡಾಕ್ಟರ್ : ನಿನಗೇನು ಮಹಾ? ನನಗೂ ಇದೇ ಮೊದಲು…. ನಿನಗಿಂತ ಜಾಸ್ತಿ ಭಯ ಆಗ್ತಿದೆ!
ರೋಗಿ : ಅಯ್ಯೋ… ಸರ್ಜನ್ ಗೂ ವಿಸರ್ಜನೆಗೂ ಒಂದೇ ಅಕ್ಷರದ ವ್ಯತ್ಯಾಸ. ನೀವು ಸರ್ಜನ್ ಆಗಿ ಕತ್ತರಿಸಿದ್ದನ್ನು ಸರಿಯಾಗಿ ಹೊಲಿಗೆ ಹಾಕದಿದ್ದರೆ ಮಾರನೇ ಬೆಳಗ್ಗೆ ನನ್ನ ವಿಸರ್ಜನೆಗೆ ಮನೆಯವರು ರೆಡಿ ಆಗ್ತಾರೆ!
ಪತ್ನಿ : ಮದುವೆಯಾದ ಹೊಸತರಲ್ಲಿ ಸದಾ ನನ್ನನ್ನು `ಹಾಲುಖೀರು,’ `ಹಾಲುಬಾಯಿ,’ `ಹಾಲು ಹೋಳಿಗೆ’ ಅಂತೆಲ್ಲ ಸಿಹಿ ಸಿಹಿಯಾಗಿ ವರ್ಣಿಸುತ್ತಾ, ನನ್ನನ್ನೇ ಸುತ್ತಿ ಸುತ್ತಿ ಬರ್ತಿದ್ದರಲ್ಲ…. ಈಗೆಲ್ಲಿ ಹಾಳಾಗಿ ಹೋಯ್ತು ಆ ಪ್ರೀತಿ ಪ್ರೇಮ?
ಪತಿ : ಅಯ್ಯೋ… ಹೋಗೇ! ಎಷ್ಟು…. ವರ್ಷ ಆದರೂ ಹಾಲು ಕೆಡದೆ ಹಾಗೆ ಇರುತ್ತೇನು….?
ಗುರು : ಏನ್ರಪ್ಪ….. ಇಷ್ಟೆಲ್ಲ ಶಕುಂತಲಾ ನಾಟಕದ ಬಗ್ಗೆ ಓದಿ ತಿಳಿದುಕೊಂಡಿರಿ, ಈಗ ಹೇಳಿ…. ಪ್ರೀತಿ ಪ್ರೇಮಕ್ಕೂ ಹಾಗೂ ವಾತ್ಸಲ್ಯಕ್ಕೂ ಇರುವ ವ್ಯತ್ಯಾಸವೇನು?
ಕಿಟ್ಟಿ : ಸಾರ್, ನೀವು ನಿಮ್ಮ ಮಗಳನ್ನು ಸುಮನಾ ಅಂತ ಕರೆದರೆ ಅದು ವಾತ್ಸಲ್ಯ. ನಾವು ಸ್ಟೈಲಾಗಿ `ಸುಮಿ!’ ಅಂತ ಕರೆದರೆ ಅದೇ ಪ್ರೀತಿ ಪ್ರೇಮ.
ಅಟ್ಟ ಹತ್ತಿ ಕಸ ಗುಡಿಸುತ್ತಿದ್ದ ಗುಂಡ, ಯಾವುದೋ ಲಹರಿಯಲ್ಲಿ…. `ಆಕಾಶವೇ ಬೀಳಲಿ ಮೇಲೆ… ನಾನೆಂದು ನಿನ್ನವನು!’ ಎಂದು ಹಾಡುತ್ತಿದ್ದ.
ಗುಂಡನ ಕರ್ಕಶ ಕಂಠ ಕೇಳಿ ತಡೆಯಲಾರದ ಗುಂಡಿ, “ಆಕಾಶ ಅದರ ಪಾಡಿಗೆ ಇದೆ, ನೀವು ಆ ಅಟ್ಟ ಕ್ಲೀನ್ ಮಾಡಿ ನೆಟ್ಟಗೆ ಕೆಳಗೆ ಇಳಿದು ಬನ್ನಿ, ಇಲ್ಲದಿದ್ದರೆ ಸೊಟ್ಟಗೆ ಕೆಳಗೆ ಬಿದ್ದು, ಕೈ ಕಾಲು ಮುರಿದುಕೊಂಡು…. `ಏನಿದು ಗ್ರಹಚಾರವೇ… ಏನಿದು ವನವಾಸವೇ….’ ಎಂದು ಹಾಡಬೇಕಾಗುತ್ತದೆ!”
ಗುಂಡ ಗುಂಡಿ ಘನಘೋರವಾಗಿ ಜಗಳವಾಡಿಕೊಂಡರು. ಆಗ ಗುಂಡಿ ಗುಂಡನ ಬಾಯಿ ಮುಚ್ಚಿಸಲು ಚೆನ್ನಾಗಿ ದಬಾಯಿಸುತ್ತಾ, “ನೋಡ್ರಿ, ಜಾಸ್ತಿ ರಾಂಗ್ ಮಾಡಬೇಡಿ! ನಿಮ್ಮ ಹತ್ತಿರ ಎಷ್ಟು ಬುದ್ಧಿ ಇದೆಯೋ ತಲೆ ಕೆಟ್ಟಾಗ ನನ್ನ ಹತ್ತಿರ ಅಷ್ಟೇ ಇರುತ್ತದೆ….!”
ಆ ಮಾತು ಕೇಳಿ ಆಘಾತಕ್ಕೆ ಒಳಗಾದ ಗುಂಡ, ಅದರರ್ಥ ಏನು ಎಂದು ತಿಳಿಯಲು ಕಂಡ ಕಂಡವರನ್ನು ಕೇಳಿಯೂ ಅರ್ಥವಾಗದೆ, ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾನೆ!