ಕಂಡೂ ಕೇಳರಿಯದ ಮನೀಶನ ಪ್ರೇಮಕ್ಕೆ ಸಿಲುಕಿದ ನಿಯತಿ ಹಿಂದೆ ಮುಂದೆ ಯೋಚಿಸದೆ ಅವನನ್ನು ನಂಬಿದ್ದಕ್ಕೆ ಮೋಸ ಹೋಗಬೇಕಾಗುತ್ತದೆ. ಪ್ರೇಮವೆಂದು ಭಾವಿಸಿ ಹೋದಳು ಜ್ವಾಲೆಯಲ್ಲಿ ಸಿಲುಕಬೇಕಾಯಿತು. ಅದರಿಂದ ಅವಳು ಹೊರಬಂದು ನೆಮ್ಮದಿಯ ಜೀವನ ಕಂಡುಕೊಂಡದ್ದು ಹೇಗೆ……..?

ಅದು ಒಂದು ಸುಂದರವಾದ ಮನೆ, ಪ್ರಕೃತಿಯ ಮಧ್ಯದಲ್ಲಿ ಭವ್ಯವಾದ ಅರಮನೆ. ಎಲ್ಲೆಲ್ಲಿ ನೋಡಿದರೂ ಅಲ್ಲೆಲ್ಲ ಹಸಿರು, ಮನಸ್ಸಿಗೆ ಮುದ ನೀಡುವುದು. ಸಿಂಚನಾಗೆ ಆ ಜಾಗ ನೋಡಿ ಲೋಕವೇ ಮರೆತು ಹೋದಂತೆ ಅನುಭವ. ಆಹಾ, ಎಂತಹ ಸುಂದರ ಜಾಗ ಇದು! ಇಲ್ಲೇ ಇದ್ದು ಬಿಡೋಣವೆನಿಸುತ್ತದೆ ಮನಸ್ಸಿಗೆ.

ಅವಳು ಸಿಂಚನಾ. ಅವಳು ತನ್ನ ಬಾಲ್ಯದ ಗೆಳತಿ ನಿಯತಿಯನ್ನು ನೋಡಲು ಏಳು ವರ್ಷಗಳ ಬಳಿಕ ಅವಳ ಮನೆಗೆ ಬಂದಿರುತ್ತಾಳೆ. ಕಣ್ಣಿನಲ್ಲಿ ಅವಳನ್ನು ಕಾಣುವ ಕಾತುರ. ಅವಳ ಬಗ್ಗೆ ತಿಳಿಯುವ ಆತುರ, ಮನಸ್ಸಿನಲ್ಲಿ ಅವರಿಬ್ಬರೂ ಕಳೆದ ಕ್ಷಣಗಳು, ಬಾಲ್ಯದ ಆ ದಿನಗಳನ್ನು ಮೆಲುಕು ಹಾಕುತ್ತಾ ಕಾಯುತ್ತಿರುತ್ತಾಳೆ.

ನಿಯತಿ ತುಂಬಾ ಮೃದು ಸ್ವಭಾವದ ಹುಡುಗಿ. ಪಟಪಟ ಅಂತ ಮಾತಾನಾಡುವ ಮಾತಿನ ಪಟಾಕಿ, ಆದರೆ ಈಗ ಅವಳ ಬದುಕಿನ ರೀತಿಯೇ ಬೇರೆ. ಈಗ ನಿಯತಿ ಒಬ್ಬ ಗಾಯಕಿ, ಲೇಖಕಿ, ಸಮಾಜ ಸೇವಕಿ. ಒಂದು ಆಶ್ರಮವನ್ನು ದತ್ತು ತೆಗೆದುಕೊಂಡು ಅಲ್ಲಿರುವ ಎಲ್ಲಾ ಮಕ್ಕಳಿಗೂ ಅವಳು ಪ್ರೀತಿಯ ತಾಯಿ.

ಡಿಗ್ರಿ ಎರಡನೇ ವರ್ಷ ಮುಗಿದ ಮೇಲೆ ಇದ್ದಕ್ಕಿದ್ದಂತೆ ನಾಪತ್ತೆ ಆದಳು ನಿಯತಿ. ಅವರ ಮನೆಯವರೆಲ್ಲ ಎಲ್ಲಿ ಹೋದರು ಎಂದು ಯಾರಿಗೂ ಗೊತ್ತಿರಲಿಲ್ಲ. ಯಾವ ಸಂಪರ್ಕ ಇರಲಿಲ್ಲ. ನಂತರ ಸಿಂಚನಾ ಮದುವೆ ಆಗಿ ಬೇರೆ ದೇಶಕ್ಕೆ ಹೋಗಿಬಿಡುತ್ತಾಳೆ.

ನಿಯತಿ ಬಗ್ಗೆ ತಿಳಿಯಲು ಪ್ರಯತ್ನಿಸಿದರೂ ಯಾವುದೇ ಉಪಯೋಗವಿರಲಿಲ್ಲ. ಅವಳು ಪ್ರತಿದಿನ ನಿಯತಿಯನ್ನು ನೆನಪು ಮಾಡಿಕೊಂಡು ಕೊರಗಿದ್ದೆಷ್ಟೋ…. ಆದರೆ ಟಿವಿಯಲ್ಲಿ ಅವಳ ಬಗ್ಗೆ ಕೇಳಿ ಅಚ್ಚರಿಯ ಜೊತೆಗೆ ಶಾಕ್‌ ಕೂಡ ಆಗುತ್ತದೆ. ನಂತರ ತುಂಬಾ ಪ್ರಯತ್ನಪಟ್ಟು ಅವಳನ್ನು ಸಂಪರ್ಕಿಸಿ, ರಜೆಯಲ್ಲಿ ಭಾರತಕ್ಕೆ ಬಂದಾಗ ಸಿಗುವೆ ಎಂದು ಹೇಳಿ ವಿಳಾಸ ಪಡೆದು ಈಗ ಅವಳನ್ನು ಕಾಣಲು ಬಂದಿರುತ್ತಾಳೆ.

ಸಿಂಚನಾ ಮನೆಯ ಒಳಗೆ ಬಂದಾಗ, ವಿಸಿಟರ್ಸ್‌ ರೂಮಿನಲ್ಲಿ ಕೂತು ಕಾಯಲು ಹೇಳುತ್ತಾರೆ ಆ ಮನೆಯ ಕೆಲಸದವರು. ಅವಳು ಅಲ್ಲಿ ಕಾಯುತ್ತಾ ಕುಳಿತುಕೊಳ್ಳುತ್ತಾಳೆ.

ಐದು ನಿಮಿಷಗಳ ಬಳಿಕ ನಿಯತಿ ಬರುತ್ತಾಳೆ, ಬಂದವಳೇ ಸಿಂಚನಾಳ ಬಳಿ ಬಂದು, “ಸಾರಿ ಸಿಂಚು, ಸ್ನಾನಕ್ಕೆ ಹೋಗಿದ್ದೆ. ಲೇಟ್‌ ಆಗಿ ಹೋಯಿತು. ತುಂಬಾ ಕಾಯಿಸಿಬಿಟ್ಟೆನಾ…?” ಎಂದು ಕೇಳುತ್ತಾಳೆ.

“ನೋ ನೀತೀ, ಪರವಾಗಿಲ್ಲ. ಹೌ ಆರ್‌ ಯು? ಎಷ್ಟು ಚೇಂಜ್‌ ಆಗಿಬಿಟ್ಟಿದ್ದೀಯಾ ನೀನು? ನಿನ್ನ ಗುರುತೇ ಸಿಗುವುದಿಲ್ಲ,” ಎನ್ನುತ್ತಾಳೆ ಸಿಂಚನಾ.

“ಬದುಕು ಹಾಗೆ ಎಲ್ಲವನ್ನೂ ಕಲಿಸಿಬಿಡುತ್ತದೆ. ಅದೆಲ್ಲ ಬಿಡು, ಇಷ್ಟು ವರ್ಷ ಆದ ಮೇಲೆ ಸಿಕ್ಕಿದ್ದೀಯಾ…. ಫಸ್ಟ್ ಬ್ರೇಕ್‌ ಫಾಸ್ಟ್. ಆಮೇಲೇ ಬೇರೆ ಎಲ್ಲಾ… ಬಾ ಹೋಗೋಣ,” ಎಂದು ನಿಯತಿ ಅವಳ ಕೈ ಹಿಡಿದುಕೊಂಡು ಡೈನಿಂಗ್‌ ಹಾಲ್ ‌ಗೆ ಕರೆದುಕೊಂಡು ಹೋಗುತ್ತಾಳೆ.

ಟೇಬಲ್ ಮೇಲೆ ಬಿಸಿ ಬೇಳೆಭಾತ್‌ ಮತ್ತು ಪೈನಾಪಲ್ ಕೇಸರಿಭಾತ್‌ರೆಡಿ ಇರುತ್ತದೆ. ಸ್ವತಃ ನಿಯತಿಯೇ ಖುದ್ದಾಗಿ ತನ್ನ ಗೆಳತಿಗಾಗಿ ಅಂತ ತಯಾರಿಸಿರುತ್ತಾಳೆ. ಸಿಂಚನಾಳಿಗೆ ಬಿಸಿ ಬೇಳೆಭಾತ್‌ ಮತ್ತು ಪೈನಾಪಲ್ ಕೇಸರಿಭಾತ್‌ ಅಂದರೆ ಪಂಚಪ್ರಾಣ. “ತಿಂಡಿ ನೋಡಿದರೇನೇ ಬಾಯಲ್ಲಿ ನೀರು ಬರುತ್ತಿದೆ ನೀತೀ….” ಎನ್ನುತ್ತಾ ಸಿಂಚನಾ ತಿಂಡಿ ತಿನ್ನಲು ಕುಳಿತುಕೊಳ್ಳುತ್ತಾಳೆ. ಅವಳು ನಿಯತಿಯನ್ನು ನೀತೀ ಅಂತಲೇ ಕರೆಯುವುದು.

“ನೀತೀ, ನಿನಗೆ ಇನ್ನೂ ನೆನಪಿದೆಯಾ….” ಎನ್ನುತ್ತಾ ತಿಂಡಿ ತಿನ್ನ ತೊಡಗುತ್ತಾಳೆ. ಒಂದು ಚಮಚ ಬಾಯಿಗೆ ಇಟ್ಟ ಕೂಡಲೇ, “ವಾವ್ ‌ನೀತೀ ಸೂಪರ್ಬ್‌. ನಿನ್ನ ಕೈ ರುಚಿ ಇಷ್ಟು ವರ್ಷ ಎಷ್ಟು ಮಿಸ್‌ ಮಾಡಿಕೊಂಡೇ ಗೊತ್ತಾ….” ಎನ್ನುತ್ತಾಳೆ ಸಿಂಚನಾ.

“ಓ ಮೈ ಗಾಡ್‌…..! ಒಂದು ಸ್ಪೂನ್‌ ತಿಂದ ಕೂಡಲೇ ನಾನೇ ಮಾಡಿದ್ದು ಅಂತ ಗೊತ್ತಾಗಿಬಿಟ್ಟಿತಾ ಸಿಂಚು….. ಇನ್ನೂ ನಿನಗೆ ಅದೆಲ್ಲ ನೆನಪಿದೆಯಾ….?” ಎಂದು ಕೇಳುತ್ತಾಳೆ.

“ಇದನ್ನೇ ಫ್ರೆಂಡ್‌ ಶಿಪ್‌ ಅನ್ನೋದು….. ಇಷ್ಟು ವರ್ಷಗಳಲ್ಲಿ ನಿನ್ನನ್ನು ನೆನಪಿಸಿಕೊಳ್ಳದ ದಿನವಿಲ್ಲ ನೀತೀ…. ನಿನ್ನನ್ನು ಕಾಣದೆ ನಿನ್ನ ಬಗ್ಗೆ ಸುಳಿವೇ ಸಿಗದೇ ಎಷ್ಟು ಒದ್ದಾಡಿಬಿಟ್ಟೆ ಗೊತ್ತಾ…..? ನೀತೀ, ಐ ರಿಯಲಿ ಮಿಸ್ಡ್ ಯು ಸೋ ಮಚ್‌!” ಎನ್ನುತ್ತಾಳೆ ಸಿಂಚನಾ.

ನಿಯತಿಗೆ ಕಣ್ಣಲ್ಲಿ ನೀರು ಬರುತ್ತದೆ. ತಕ್ಷಣ ಸಾವರಿಸಿಕೊಂಡು, “ಸಿಂಚು, ಐ ಟೂ ಮಿಸ್ಡ್ ಯು ಎ ವಾಟ್‌. ನಿನ್ನ ಹತ್ತಿರ ಮಾತನಾಡುವುದು ಬಹಳ ಇದೆ. ಈಗ ನಿನ್ನ ಬಗ್ಗೆ ಹೇಳು ಸಿಂಚು,” ಎಂದು ಕೇಳಿದಳು ನಿಯತಿ.

ಸಿಂಚನಾ ಹೇಳತೊಡಗಿದಳು, “ಡಿಗ್ರಿ ಕಂಪ್ಲೀಟ್‌ ಆಯ್ತು. ಕೆಲಸಕ್ಕೆ ಸೇರಬೇಕು ಎನ್ನುವಷ್ಟರಲ್ಲಿ ಒಂದು ಸಂಬಂಧ ಬಂದಿತು. ಯಾರದೋ ಮದುವೆಯಲ್ಲಿ ನನ್ನನ್ನು ನೋಡಿ, ಇಷ್ಟಪಟ್ಟು ಹುಡುಗನ ಮನೆಯವರೇ ಕೇಳಿಕೊಂಡು ಬಂದರು. ಹುಡುಗನ ಹೆಸರು ರಾಹುಲ್. ಅವರಿಗೆ ಒಬ್ಬ ಅಣ್ಣ. ಇಲ್ಲೇ ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿದ್ದಾರೆ. ಚಿಕ್ಕವರೇ ರಾಹುಲ್‌. ಯುಎಸ್‌ಎನಲ್ಲಿ ಇರುವುದು. ಇನ್ನೂ ಹತ್ತು ವರ್ಷ ಬಿಟ್ಟು ವಾಪಸ್‌ ಭಾರತಕ್ಕೆ ಬರುವ ಯೋಚನೆ ಇದೆ.

“ಒಳ್ಳೆಯ ಅನುಕೂಲಸ್ಥ ಕುಟುಂಬ. ಹಾಗಾಗಿ ಎರಡೂ ಕಡೆ ಒಪ್ಪಿಗೆಯಾಗಿ ಮದುವೆ ನಿಶ್ಚಯವಾಯಿತು. ರಾಹುಲ್ ‌ಗೆ ಮತ್ತೆ ಒಂದು ವರ್ಷ ರಜೆ ಸಿಗದ ಕಾರಣ ಹದಿನೈದು ದಿನಗಳಲ್ಲೇ ಮದುವೆ ಆಯಿತು. ಮದುವೆ ಆಗಿ ಎರಡೇ ದಿನಕ್ಕೆ ರಾಹುಲ್ ‌ಯುಎಸ್ ಗೆ ಹೋದರು. ಮೂರು ತಿಂಗಳ ಬಳಿಕ ನನಗೂ ವೀಸಾ ಸಿಕ್ಕಿದ್ದರಿಂದ ನಾನೂ ಯುಎಸ್‌ ಗೆ ಹೋದೆ.

“ರಾಹುಲ್ ‌ಒಳ್ಳೆಯ ಹುಡುಗ. ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಎರಡು ವರ್ಷಗಳ ನಂತರ ಮಗಳು ರಿಯಾ ಹುಟ್ಟಿದಳು. ಮದುವೆ ಆದ ಮೇಲೆ ಲೈಫ್‌ ಈಸ್‌ ಮೋರ್‌ ಬ್ಯೂಟಿಫುಲ್! ನೆಮ್ಮದಿಯ ಪುಟ್ಟ ಸಂಸಾರ ನನ್ನದು. ಇಷ್ಟೇ ನನ್ನ ಕಥೆ,” ಎನ್ನುತ್ತಾಳೆ ಸಿಂಚನಾ.

“ಸಿಂಚು, ವೆರಿ ಗುಡ್‌! ನನಗೆ ತುಂಬಾ ಖುಷಿ ಆಯ್ತು ಕೇಳಿ. ಎಲ್ಲಿ ನಮ್ಮ ಪುಟ್ಟ ರಾಜಕುಮಾರಿ. ಅವಳನ್ನು ನೋಡಬೇಕು ನಾನು. ಮುಂದಿನ ಸಲ ಬರುವಾಗ ಎಲ್ಲರನ್ನೂ ಕರೆದುಕೊಂಡು ಬರದೆ ಇದ್ದರೆ ನೋಡು ಅಷ್ಟೇ…. ಈಗ ಕಾಫಿ ಕುಡಿ. ನಂತರ ಟೆರೇಸ್ ಮೇಲೆ ಕುಳಿತುಕೊಂಡು ಮಾತನಾಡೋಣ,” ಎನ್ನುತ್ತಾಳೆ ನಿಯತಿ.

ಇಬ್ಬರೂ ಕಾಫಿ ಕುಡಿದು ಟೆರೇಸ್‌ ಮೇಲೆ ಬರುತ್ತಾರೆ. ಅಲ್ಲಿಗೆ ಬಂದ ಕೂಡಲೇ, “ವಾವ್‌… ವಾಟ್‌ ಎ ಬ್ಯೂಟಿಫುಲ್‌ ಪ್ಲೇಸ್‌ ನೀತೀ,” ಎಂದು ಉದ್ಗರಿಸುತ್ತಾಳೆ. ಎಲ್ಲಾ ಕಡೆ ಹಸಿರು, ಅಲ್ಲಿಂದ ಇಡೀ ಊರೇ ಕಾಣಿಸುತ್ತದೆ. ಎಲ್ಲಿ ನೋಡಿದರೂ ಹಸಿರು ಸಿಂಗಾರಗೊಂಡಂತೆ ಮಧ್ಯೆ ಮಧ್ಯೆ ಬಣ್ಣ ಬಣ್ಣದ ಹೂಗಳು.

ಅಲ್ಲೇ ಇದ್ದ ಉಯ್ಯಾಲೆ ಮೇಲೆ ಇಬ್ಬರೂ ಕುಳಿತುಕೊಳ್ಳುತ್ತಾರೆ. ಈಗ ನಿಯತಿ ತನ್ನ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾಳೆ.

man-ki-daraj-se-2

ನಿಯತಿ ಮತ್ತು ಸಿಂಚನಾ ಇಬ್ಬರೂ ಒಂದೇ ಶಾಲೆಯಲ್ಲಿ ನರ್ಸರಿಯಿಂದ ಒಟ್ಟಿಗೇ ಓದಿದ್ದು. ಇಬ್ಬರೂ ಜೀವದ ಗೆಳತಿಯರು. ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಎಲ್ಲಿಗೆ ಹೋದರೂ ಒಟ್ಟಿಗೆ ಹೋಗುತ್ತಿದ್ದರು. ಪಿಯುಸಿ ಮುಗಿಯಿತು. ಇಬ್ಬರಿಗೂ ಒಳ್ಳೆಯ ಅಂಕವೇ ಬಂದಿತ್ತು.

ಇಬ್ಬರೂ ಡಿಗ್ರಿಗೆ ಒಂದೇ ಕಾಲೇಜಿಗೆ ಸೇರಬೇಕೆಂದು ಮೂರು ನಾಲ್ಕು ಕಾಲೇಜ್‌ ನಿಂದ ಅಪ್ಲಿಕೇಶನ್‌ ತಂದಿದ್ದರು. ಆದರೆ ಸಿಂಚನಾ ಮನೆಗೆ ಬರುತ್ತಿದ್ದಂತೆ ಅವಳ ತಂದೆಗೆ ಮೂರು ವರ್ಷಗಳ ಕಾಲ ದೆಹಲಿಗೆ ವರ್ಗಾವಣೆ ಆಗಿದ್ದು ತಿಳಿದು ಗೆಳತಿಯರಿಬ್ಬರಿಗೂ ತುಂಬಾ ದುಃಖವಾಯಿತು. ಬೇರೆ ದಾರಿ ಇಲ್ಲದೆ ದಿನಾ ಫೋನ್‌ ನಲ್ಲೇ ಮಾತನಾಡೋಣವೆಂದು ಸಮಾಧಾನ ಮಾಡಿಕೊಂಡರು.

ಸಿಂಚನಾ ಮತ್ತು ನಿಯತಿ ಬೇರೆ ಬೇರೆ ಊರಲ್ಲಿ ಡಿಗ್ರಿ ಓದುವ ಹಾಗಾಯಿತು. ಆದರೂ ದಿನಾ ಇಬ್ಬರೂ ಫೋನ್‌ ನಲ್ಲಿ ಮಾತನಾಡಿಕೊಳ್ಳತ್ತಿದ್ದರು. ಹೀಗೆಯೇ ಒಂದು ವರ್ಷ ಕಳೆಯಿತು.

“ನೀತೀ ಹೇಳು ನಿನ್ನ ಕಥೆ,” ನಿಯತಿ ತನ್ನ ಬದುಕಿನ ಪುಟವನ್ನು ಸಿಂಚನಾಳ ಮುಂದೆ ತೆರೆದಿಡಲು ಶುರು ಮಾಡುತ್ತಾಳೆ. “ಸಿಂಚು, ನಾವು ಎರಡನೇ ವರ್ಷ ಡಿಗ್ರಿಯಲ್ಲಿದ್ದಾಗ ರಜೆಯಲ್ಲಿ ನೀನು ಕಸಿನ್‌ ಮದುವೆಗೆಂದು ಯಾವುದೋ ಹಳ್ಳಿಗೆ ಹೋಗಿದ್ದೆಯಲ್ಲಾ, ಅಲ್ಲಿ ನೆಟ್‌ ವರ್ಕ್‌ ಸಿಗದ ಕಾರಣ ನಾವು ಒಂದು ತಿಂಗಳು ಸಂಪರ್ಕದಲ್ಲಿ ಇರಲಿಲ್ಲ. ಆಗ ನನಗೆ ಫೇಸ್‌ ಬುಕ್ ಹುಚ್ಚು ಹೆಚ್ಚಾಗಿತ್ತು. ನೀನೂ ಇರಲಿಲ್ಲ. ಮೂರು ಹೊತ್ತೂ ಆನ್‌ ಲೈನ್‌ ನಲ್ಲಿ ಇರುತ್ತಿದ್ದೆ. ಚ್ಯಾಟ್‌ ಮಾಡುತ್ತಿದ್ದೆ.

“ಆ ಸಮಯದಲ್ಲಿ ನನಗೆ ಪರಿಚಯವಿರದ ಒಬ್ಬ ವ್ಯಕ್ತಿಯಿಂದ ಫ್ರೆಂಡ್‌ ರಿಕ್ವೆಸ್ಟ್ ಬಂದಿತ್ತು. ನಾನು ಅಕ್ಸೆಪ್ಟ್ ಮಾಡಲಿಲ್ಲ. ಮತ್ತೆ ಅವನಿಂದ ಒಂದು ವಾಯ್ಸ್ ಮೆಸೇಜ್‌ ಬಂದಿತು. `ಪ್ಲೀಸ್‌ ನನ್ನ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ. ನಾನು ನಿಮಗೆ ಯಾವುದೇ ತೊಂದರೆ ಕೊಡುವುದಿಲ್ಲ. ನಾನು ನಿಮ್ಮ ದೊಡ್ಡ ಫ್ಯಾನ್‌.  ಪ್ಲೀಸ್‌….ಪ್ಲೀಸ್‌….’ ನನಗೆ ಈ ತರಹದ ವಾಯ್ಸ್ ಮೆಸೇಜ್‌ ಎಲ್ಲ ಹೊಸ ಅನುಭವ. ಇಂಟರೆಸ್ಟಿಂಗ್‌ ಎನಿಸುತ್ತಿತ್ತು. ಒಂದು ಥರ ಥ್ರಿಲ್ ‌ಆಯಿತು. ಜೊತೆಗೆ ಅವನ ಧ್ವನಿ ತುಂಬಾ ತುಂಬಾ ಚೆನ್ನಾಗಿತ್ತು. ಸೋ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಬಿಟ್ಟೆ.

“ಅವನ ಹೆಸರು ಮನೀಶ್‌ ಅಂತ. ಅವನು ಧಾರಾವಾಹಿಯ ನಿರ್ದೇಶಕ, ಜೊತೆಗೆ ಒಂದೆರಡು ಸಿನಿಮಾಗೆ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದ. ಅವನು ವಾಯ್ಸ್ ಚ್ಯಾಟಿಂಗ್‌ ಶುರು ಮಾಡಿದ. ನಿಮ್ಮ ಧ್ವನಿ ಕಳುಹಿಸಿ ಎಂದ. ನಾನು ನನ್ನ ಧ್ವನಿ ಚೆನ್ನಾಗಿಲ್ಲ ಎಂದೆ. ಅವನು ತುಂಬಾ ಬಲವಂತ ಮಾಡಿದ. ನಾನು ಕಳುಹಿಸಿದೆ. ಅದಕ್ಕವನು `ಓ ಮೈ ಗಾಡ್‌! ಇಷ್ಟು ಅದ್ಭುತವಾದ ಕಂಠ ಇಟ್ಟುಕೊಂಡು ಧ್ವನಿ ಚೆನ್ನಾಗಿಲ್ಲ ಅಂತ ಹೇಳಿದ್ರಾ….  ನಿಮ್ಮ ಕಂಠಸಿರಿಗೆ ನಾನು ಕಳೆದುಹೋದೆ….’ ಎಂದ. ನನಗೆ ಒಂದು ತರ ಹೊಸ ಅನುಭವ. ಅವನ ಹೊಗಳಿಕೆಗೆ ನಾನು ಮಾರುಹೋದೆ. ನನಗೆ ತುಂಬಾ ಖುಷಿ ಆಗುತ್ತಿತ್ತು.

“ನಂತರ ಅವನು ಒಂದು ಹಾಡು ಹೇಳು ಎಂದು ಬಹಳ ಬಲವಂತ ಮಾಡಿದ. ಸರಿ ಎಂದು ಹಾಡು ಹೇಳಿ ಕಳುಹಿಸಿದೆ. ಅದಕ್ಕೆ ಅವನು, `ನಾನು ನಿನ್ನ ಧ್ವನಿಗೆ ಫಿದಾ ಆಗಿಹೋದೆ. ಪ್ಲೀಸ್‌ ಇನ್ನೊಂದು ಹಾಡು ಹೇಳು,’ ಎಂದು ಪೀಡಿಸಿದ.

“ಅವನೂ ಹಾಡು ಹಾಡಿ ಕಳುಹಿಸಿದ. ಅವನ ಧ್ವನಿ ತುಂಬಾ ಚೆನ್ನಾಗಿದ್ದುದರಿಂದ ಅವನ ಹೊಗಳಿಕೆಗೆ ನಾನು ಸೋತುಹೋದೆ. ಅವನನ್ನು ನಂಬಿ ಸ್ನೇಹ ಹಸ್ತ ಚಾಚಿದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮೊದಲು ನನ್ನ ಧ್ವನಿ ಕೇಳದೇ ಇದ್ದರೆ ಅವನಿಗೆ ಆಗುತ್ತಿರಲಿಲ್ಲ. ನಿನ್ನ ಧ್ವನಿಗೆ ನಾನು ಸೋತುಹೋದೆ ಎನ್ನುತ್ತಿದ್ದ. ಒಂದು ತಿಂಗಳು ಹೀಗೇ ಕಳೆಯಿತು. ಒಂದೇ ತಿಂಗಳಲ್ಲಿ ಒಂದು ಹತ್ತು ವರ್ಷ ಪರಿಚಯವಿರುವಷ್ಟು ಆಪ್ತ ಎನಿಸಿಬಿಟ್ಟ. ಎರಡು ಗಂಟೆಗಳ ಕಾಲ ಫೋನ್‌ ನಲ್ಲಿ ಮಾತನಾಡುತ್ತಿದ್ದ.

“ಒಂದು ದಿನ ಯಾವುದೋ ಫಂಕ್ಷನ್‌ ಗೆ ಹೋಗಿ ಬರುವುದರೊಳಗೆ ಮೊಬೈಲ್ ‌ಚಾರ್ಜ್‌ ಖಾಲಿಯಾಗಿ ಅದು ಆಫ್ ಆಗಿಹೋಯಿತು. ಆಮೇಲೆ ಅದು ಹಾಗೇ ಹಾಳಾಗಿಹೋಯಿತು. ಹಾಗಾಗಿ ಹೊಸ ಫೋನ್‌ ಖರೀದಿಸಿ ಅವನನ್ನು ಸಂಪರ್ಕಿಸಲು ಮೂರು ದಿನವಾಯಿತು. ಮೂರು ದಿನದ ನಂತರ ಅವನನ್ನು ಸಂಪರ್ಕಿಸಿದಾಗ, ಅವನು ಜೀವವೇ ಹೋದ ಹಾಗೆ ಒದ್ದಾಡಿದ ಅಥವಾ ಹಾಗೆ ನಟಿಸಿದ್ದ…. `ನನಗೆ ತುಂಬಾ ಭಯವಾಗಿತ್ತು. ಈ ಗಾಬರಿಯಲ್ಲಿ ನಾನು ಊಟ, ನಿದ್ದೆ ಮಾಡಲಿಲ್ಲ,’ ಎಂದ. ನಾನು ಅವನ ಮಾತನ್ನು ನಿಜವೆಂದೇ ನಂಬಿದ್ದೆ.

“ನಮ್ಮ ಸಿನಿಮಾ ರಂಗದಲ್ಲಿ ಯಾರೂ ಹೀಗೇ ಇರುವುದಿಲ್ಲ. ನೀನು ತುಂಬಾ ಸಿಂಪಲ್. ನಿನ್ನದು ತುಂಬಾ ಮುಗ್ಧ ಮನಸ್ಸು. ನಿನ್ನ ನಿಷ್ಕಲ್ಮಶ ಮನಸ್ಸು ನನಗೆ ತುಂಬಾ ತುಂಬಾ ಇಷ್ಟ ಎಂದು ಹೇಳುತ್ತಿದ್ದ. ಹೀಗೆ ಒಂದು ವಾರ ಕಳೆದ ಬಳಿಕ ಅವನು ನನಗೆ ಪ್ರಪೋಸ್‌ ಮಾಡಿ ಐ ಲವ್ ಯು ಜಾನು, ನಾನು ನಿನ್ನ ದೊಡ್ಡ ಅಭಿಮಾನಿ. ನಿನ್ನ ನಿಷ್ಕಲ್ಮಶ ಮನಸ್ಸಿಗೆ ಸಿಂಪ್ಲಿಸಿಟಿಗೆ ನಾನು ಬಿದ್ದುಹೋದೆ ಕಣೆ, ನಿನ್ನ ಧ್ವನಿ ನನಗೆ ಹುಚ್ಚು ಹಿಡಿಸಿದೆ, ಐ ಲವ್ ಯೂ ಸೋ ಮಚ್‌. ನೀನು ನನ್ನ ಒಪ್ಪಿಕೋ ಅಥವಾ ಬಿಡು, ನನಗೆ ಮಾತ್ರ ಈ ಜನ್ಮಕ್ಕೆ ನೀನೊಬ್ಬಳೇ…. ನೀನು ಒಪ್ಪಿದರೆ ರಾಜಕುಮಾರಿಯ ಹಾಗೆ ನೋಡಿಕೊಳ್ತೀನಿ. ಒಪ್ಪದೆ ಇದ್ದರೆ ನಿನ್ನ ಸವಿ ನೆನಪಲ್ಲೇ ನನ್ನ ಇಡೀ ಜೀವನವನ್ನು ಹಾಗೆ ಕಳೆದುಬಿಡ್ತೀನಿ,” ಎಂದ.

man-ki-daraj-se-3

“ನನ್ನನ್ನು ಇಷ್ಟೊಂದು ಹೊಗಳುತ್ತಾನೆ. ನನ್ನನ್ನು ಕಂಡರೆ ಇವನಿಗೆ ಎಷ್ಟು ಇಷ್ಟ ಅಂತ ನನಗೆ ಒಳಗೊಳಗೆ ತುಂಬಾ ಖುಷಿ. ಆದರೂ ನಾನು ತಕ್ಷಣ ಒಪ್ಪಲಿಲ್ಲ. ಯಾವಾಗಲೂ ದಿನಕ್ಕೆ ಒಂದು ಸಾವಿರ ಸಾರಿ ಐ ಲವ್ ಯು ಅಂತ ಹೇಳುತ್ತಿದ್ದ. ಒಂದೇ ಒಂದು ಸಾರಿ ಐ ಲವ್ ಯು ಟೂ ಎಂದು ಹೇಳು ಎಂದು ನನ್ನನ್ನು ಗೋಗರೆಯುತ್ತಿದ್ದ. ನಾಲ್ಕು ದಿನ ಬಿಟ್ಟು ನೀನು ಹೇಳಿಲ್ಲ ಎಂದರೆ ನಾನೀಗಲೇ ವಿಷ ಕುಡಿಯುತ್ತೇನೆ ಎಂದು ಹೆದರಿಸಿದ. ಹೆದರಿಕೆಗೋ ಅಥವಾ ಅವನ ಮಾತಿನ ಮೋಡಿಗೋ ತಿಳಿಯದೆ ಅಂದು ಎಡವಿ ಅವನ ಪ್ರೀತಿಯನ್ನು ಒಪ್ಪಿಕೊಂಡೆ.

“ಹಾಗೆಯೇ ಒಂದು ತಿಂಗಳು ಕಳೆಯಿತು. ಬದುಕೀಗ ಚಂದ ಅನಿಸುತ್ತಿತ್ತು. ಅವನನ್ನು ತುಂಬಾ ಪ್ರೀತಿಸಲು ಆರಂಭಿಸಿದೆ. ನನಗೆ ಸದಾ ಅವನದೇ ಯೋಚನೆ ಧ್ಯಾನ. ಹೀಗೆ ಒಂದು ದಿನ ಭೇಟಿಯಾಗೋಣ ಎಂದು ತುಂಬಾ ಒತ್ತಾಯ ಮಾಡಿದ. ನಾನು ಅವನ ಮಾತಿಗೆ ಮರುಳಾಗಿ ಸಮ್ಮತಿಸಿದೆ. ಸರಿ, ನಾಲ್ಕು ಗಂಟೆಗೆ ಒಂದು ಪಾರ್ಕ್‌ ಗೆ ಬರಹೇಳಿದ. ಅಂತೂ ಆ ದಿನ ಬಂದೇಬಿಟ್ಟಿತ್ತು. ನಾನು ತುಂಬಾ ಆಸಕ್ತಿಯಿಂದ ಅಲಂಕಾರ ಮಾಡಿಕೊಂಡೆ. ಆದರೆ ಆ ರಾತ್ರಿ ನನ್ನ ಬದುಕಿನ ಕರಾಳ ರಾತ್ರಿ ಎಂದು ಆಗ ನನಗೆ ಗೊತ್ತಿರಲಿಲ್ಲ. ಬಹುಶಃ ಸಣ್ಣ ಸುಳಿವು ಇದ್ದರೂ ನಾನು ಆಚೆ ಹೋಗುತ್ತಲೇ ಇರಲಿಲ್ಲ.

“ನಾಲ್ಕು ಗಂಟೆಗೆ ರೆಡಿ ಆಗಿ ಐದು ಗಂಟೆಗೆ ಪಾರ್ಕ್‌ ಗೆ ತಲುಪಿದೆ. ಅಷ್ಟರಲ್ಲಿ ಮನೀಶ್‌ ಬಂದು ಕಾಯುತ್ತಿದ್ದ. ಇಬ್ಬರೂ ಮಾತನಾಡುತ್ತಾ ಒಂದು ಗಂಟೆ ಕಳೆಯಿತು. ನಾನು ಅವನ ಮಾತಿನ ಮೋಡಿಗೆ ಸಂಪೂರ್ಣ ಮರುಳಾಗಿಬಿಟ್ಟೆ. ಆರೂವರೆ ಆಯಿತು. ಇನ್ನೇನು ಹೊರಡೋಣ ಅಂತ ಹೊರಟೆ. ಅದಕ್ಕೆ ಅವನು ಮೊದಲನೇ ಸಲ ಸಿಕ್ಕಿದ್ದೀಯಾ ಬಾ ಹೋಟೆಲ್ ‌ಗೆ ಹೋಗಿ ಏನಾದರೂ ತಿಂದು ಹೋಗೋಣ ಎಂದ. ನಾನು, ಬೇಡ ಟೈಮ್ ಆಯಿತು, ಅಮ್ಮ ಗಾಬರಿ ಆಗ್ತಾರೆ ಇನ್ನೊಂದು ಸಾರಿ ಸಿಕ್ಕಿದಾಗ ಹೋಗೋಣ ಎಂದರೂ ಕೇಳದೆ ಹಠ ಮಾಡಿ ಅಲ್ಲೇ ಪಕ್ಕದ ಬೀದಿಯಲ್ಲಿ ಇರುವ ಹೋಟೆಲ್ ‌ಗೆ ಕರೆದುಕೊಂಡು ಹೋದ.

“ನೀನು ಸಿಕ್ಕ ಖುಷಿಗೆ ಮೊದಲು ಸಿಹಿ ತಿನ್ನೋಣ ಎಂದು ಜಿಲೇಬಿಯನ್ನು ತಂದ. ಹಾಗೇ ಮಾತನಾಡುತ್ತಾ, ನನಗೆ ಸ್ವಂತವಾಗಿ ಎರಡು ಸಿನಿಮಾಕ್ಕೆ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದೆ. ಬಜೆಟ್‌ ದೊಡ್ಡದು. ಇದನ್ನು ಮಾಡಿದರೆ ಮುಂದೆ ನನಗೆ ಒಳ್ಳೆಯ ಅವಕಾಶಗಳು ಬರುತ್ತವೆ. ಆಗ ನಿನ್ನನ್ನು ಮದುವೆ ಆಗಬಹುದು ಎಂದೆಲ್ಲಾ ನಂಬಿಸಿದ. ಅರ್ಧ ಗಂಟೆ ಕಳೆಯಿತು. ನಾನು ಲೇಟ್‌ಆಗುತ್ತೆ ಎಂದೆ. ಓ.ಕೆ. ಜ್ಯೂಸ್‌ ಕುಡಿದು ಹೊರಡೋಣ ಎಂದಾಗ ಸಮಯ ಏಳು ಮುಕ್ಕಾಲು ಆಗಿತ್ತು.

“ಜ್ಯೂಸ್‌ ಕುಡಿದ ಮೇಲೆ ನನಗೆ ಏನೋ ಆದಂತೆ ಅನಿಸಿತು. ನಂತರ ನನಗೆ ಪ್ರಜ್ಞೆ ತಪ್ಪಿಹೋಯಿತು. ಅವನು ಜ್ಯೂಸ್‌ ನಲ್ಲಿ ಸ್ಲೀಪಿಂಗ್‌ಪಿಲ್ಸ್ ಬೆರೆಸಿದ್ದ ಅನಿಸುತ್ತದೆ. ಸ್ವಲ್ಪ ಹೊತ್ತು ಬಿಟ್ಟು ಪ್ರಜ್ಞೆ ಮರಳಿದರೂ ಏನೋ ಒಂದು ವಿಧವಾದ ಮಂಪರು, ನಿಶ್ಶಕ್ತಿ. ಮಾತನಾಡಲು ಆಗದ ಪರಿಸ್ಥಿತಿಯಲ್ಲಿ ಇದ್ದೆ. ಆಮೇಲೆ ಅವನ ಇಬ್ಬರು ಗೆಳೆಯರು ಬಂದರು. ಮೂರು ಜನರು ಸೇರಿ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು, ಮೊಬೈಲ್ ‌ಆಫ್‌ ಮಾಡಿ ಯಾವುದೋ ನಿರ್ಜನ ಪ್ರದೇಶದಲ್ಲಿದ್ದ ಒಂದು ಮನೆಗೆ ಕರೆದುಕೊಂಡು ಹೋದರು.

“ಸುತ್ತಮುತ್ತಲು ಯಾವುದೇ ಮನೆಗಳಿರಲಿಲ್ಲ. ಅಲ್ಲಿಗೆ ಹೋದ ಮೇಲೆ ಒಬ್ಬರಾದ ಮೇಲೆ ಒಬ್ಬರಂತೆ ಮತ್ತೆ ಮತ್ತೆ ಇಡೀ ರಾತ್ರಿ ಮೃಗಗಳ ಹಾಗೆ ನನ್ನ ಮೇಲೆ ದಾಳಿ ಮಾಡಿ, ಹಿಂಸಿಸಿ, ನನ್ನ ಜೀವನವನ್ನು ನಾಶ ಮಾಡಿದರು. ನನಗೆ ಏನೂ ಮಾಡಲಾಗದಷ್ಟು ನಿಶ್ಶಕ್ತಿ. ಜೋರಾಗಿ ಕೂಗಲು ಕೂಡ ಶಕ್ತಿ ಇರಲಿಲ್ಲ. ಮತ್ತಿಬ್ಬರು ಯಾರೆಂದು ಕೂಡ ನನಗೆ ಗೊತ್ತಾಗಲಿಲ್ಲ. ನಾನು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಮೇಲೆ ಬೆಳಗ್ಗೆ ನಾಲ್ಕು ಗಂಟೆಗೆ ಮತ್ತೆ ಅದೇ ಕಾರಲ್ಲಿ ಕೂರಿಸಿಕೊಂಡು ನಮ್ಮ ಮನೆಯ ಹತ್ತಿರದ ಪಾರ್ಕ್‌ ಬಳಿ ನನ್ನನ್ನು ಬಿಸಾಡಿ ವಾಪಸ್‌ ಹೋದರು.

“ಆಗ ಬೆಳಗ್ಗೆ ಐದೂವರೆ. ನನ್ನ ಮೈ ಮೇಲಿನ ಬಟ್ಟೆಯೆಲ್ಲ ಹರಿದು ಹೋಗಿತ್ತು. ನನಗೆ ಪ್ರಜ್ಞೆಯೇ ಇರಲಿಲ್ಲ. ನಮ್ಮ ಪಕ್ಕದ ಮನೆಯ ಅಂಕಲ್ ನನ್ನನ್ನು ನೋಡಿ ನಮ್ಮ ಅಪ್ಪನಿಗೆ ಕಾಲ್ ‌ಮಾಡಿ ಕಾರು ತರಲು ಹೇಳಿದರು. ಇಡೀ ರಾತ್ರಿ ಅಪ್ಪ, ಅಮ್ಮ, ತಂಗಿ ನಕ್ಷತ್ರಾ ನನ್ನ ಬಗೆಗಿನ ಸುಳಿವೇ ಸಿಗದೇ ಗಾಬರಿಯಾಗಿದ್ದರು. ಅವರು ನನ್ನ ಸ್ಥಿತಿ ಕಂಡು ಕುಸಿದುಬಿದ್ದರು. ಮತ್ತೆ ಸುಧಾರಿಸಿಕೊಂಡು ತಕ್ಷಣ ಆಸ್ಪತ್ರೆಗೆ ಸೇರಿಸಿದರು.

“ನಾನು ಉಳಿಯುವುದೇ ಕಷ್ಟ ಎಂದರು ಡಾಕ್ಟರ್‌. ಆಮೇಲೆ ಹೇಗೋ ಬದುಕಿದೆ ಆದರೆ ತುಂಬಾ ಪೆಟ್ಟುಬಿದ್ದ ಕಾರಣ ನನ್ನ ಗರ್ಭಕೋಶವನ್ನು ತೆಗೆಯಬೇಕಾಯಿತು. ಒಂದು ತಿಂಗಳ ನಂತರ ದೈಹಿಕವಾಗಿ ಸುಧಾರಿಸಿದೆ. ಆದರೆ ಮಾನಸಿಕವಾಗಿ ಡಿಪ್ರೆಶನ್ ಗೆ ಹೋದೆ. ಅವನ ಸುದ್ದಿ ಇಲ್ಲ. ಈ ಘಟನೆ ನಡೆದ ಬಳಿಕ, ಫೋನ್‌ ನಂಬರ್‌ ಕೂಡ ಬದಲಾಯಿಸಿಬಿಟ್ಟಿದ್ದ.

“ನಾನು ಅವನ ಮಾತಿಗೆ ಮರುಳಾಗಿ, ಏನೋ ಥ್ರಿಲ್ ‌ಅಂತ ಅವನ ಸಹವಾಸ ಮಾಡಿ, ನನ್ನ ಜೀವನವನ್ನು ಹಾಳು ಮಾಡಿಕೊಂಡೆ ಅಷ್ಟೆ, ಒಟ್ಟಿನಲ್ಲಿ ಜೀವಂತ ಶವದ ಹಾಗೆ ಆದೆ. ಅದಾದ ಮೇಲೆ ಅಪ್ಪ, ಅಮ್ಮ, ನಕ್ಷತ್ರಾ ಎಲ್ಲರಿಗೂ ನನ್ನ ಈ ಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. ನಕ್ಷತ್ರಾಳ ಐಎಎಸ್‌ ಪಾಸ್‌ ಆಯಿತು. ಟ್ರೈನಿಂಗ್‌ ಎಂದು ಅವಳನ್ನು ದೆಹಲಿಗೆ ಹಾಕಿದರು. ಅವಳು ಹೊರಡಲೇಬೇಕಿತ್ತು. ಹೀಗೇ ಬಿಟ್ಟರೆ ನನ್ನನ್ನು ಕಳೆದುಕೊಂಡು ಬಿಡಬಹುದು ಎಂಬ ಭಯ ಅವರಿಗೆ ಆವರಿಸಿತು.

“ಎಲ್ಲಾದರೂ ಪ್ರಕೃತಿ ಮಧ್ಯದಲ್ಲಿ ಜನರ ಸಂಪರ್ಕವೇ ಇರದ ಜಾಗದಲ್ಲಿ ಅವಳು ಇದ್ದರೇ ಸರಿಯಾಗುತ್ತಾಳೆ. ಪ್ರಕೃತಿಗೆ ಎಲ್ಲವನ್ನೂ ಮರೆಸುವ ಶಕ್ತಿ ಇರುತ್ತದೆ, ಎಂದ ನಕ್ಷತ್ರಾ ಅಪ್ಪ, ಅಮ್ಮನ ಬಳಿ ಹೇಳಿದಳು. ಅದನ್ನು ಸರಿ ಎಂದು ಯೋಚಿಸಿದ ಅಪ್ಪ ಅವರ ಹಳೇ ಸ್ನೇಹಿತರ ಸಂಬಂಧಿಕರ ಒಂದು ತೋಟದ ಮನೆ ಮಾರಾಟಕ್ಕೆ ಇತ್ತು. ತೀರ್ಥಹಳ್ಳಿಯಲ್ಲಿನ ನಮ್ಮ ಮನೆ, ಅಪ್ಪನ ಸೇವಿಂಗ್ಸ್ ಎಲ್ಲಾ ಸೇರಿಸಿ ಹಾಗೆ ಸ್ವಲ್ಪ ಸಾಲ ಮಾಡಿ ನನ್ನ ಸಲುವಾಗಿ ಎಲ್ಲಾ ಬಿಟ್ಟು ಇಲ್ಲಿಗೆ ಬಂದೆ.”

ಸಿಂಚನಾ ಕಣ್ಣಿನಲ್ಲಿ ನೀರು ಬಂದು ಜೋರಾಗಿ ಅಳುತ್ತಾ ಉಯ್ಯಾಲೆಯಿಂದ ಇಳಿದು ಬಂದು ನೀತೀ ಎನ್ನುತ್ತಾ ಅವಳನ್ನು ತಬ್ಬಿ ಬಿಕ್ಕುತ್ತಾಳೆ. ನಿಯತಿಯ ಕಣ್ಣಿನಲ್ಲೂ ನೀರು ಬರುತ್ತದೆ. ಊಟ ಮಾಡಿದ ಆಮೇಲೆ ಮಾತನಾಡೋಣ ಎಂದು ಅವಳನ್ನು ಕರೆದುಕೊಂಡು ಹೋಗುತ್ತಾಳೆ. ಊಟ ಮುಗಿಸಿ ಅದೇ ಜಾಗಕ್ಕೆ ಬರುತ್ತಾರೆ. ನಿಯತಿ ತನ್ನ ಕಥೆ ಮುಂದುವರಿಸುತ್ತಾಳೆ.

“ಆಮೇಲೆ ಇಲ್ಲಿಗೆ ಬಂದರೂ ಯಾವಾಗಲೂ ಒಬ್ಬಳೇ ಇರುತ್ತಿದ್ದೆ. ಕೇಳಿದ್ದಕ್ಕಷ್ಟೇ ಉತ್ತರ, ಅಷ್ಟೇ ಮಾತು. ಹೀಗೆ ಎರಡು ತಿಂಗಳು ಕಳೆಯಿತು. ಆಗ ಪರಿಚಯವಾದವನೇ ಅಭಯ್‌ ಕಶ್ಯಪ್‌. ಮಾನಸಿಕ ತಜ್ಞ, ಅಪ್ಪನ ಆಪ್ತ ಸ್ನೇಹಿತರ ಮಗ. ನನ್ನ ಕಥೆಯನ್ನೆಲ್ಲ ಕೇಳಿ ನನಗೆ ಸಹಾಯ ಮಾಡಲು ಬಂದಿದ್ದ.

“ಅವನು ನನ್ನ ಬಳಿ ಮಾತನಾಡುತ್ತಾ, `ಹೀಗೆ ಕೊರಗಿ ಕೂತು ಏನು ಪ್ರಯೋಜನ? ಅವನಿಗೆ ತಕ್ಕ ಶಾಸ್ತಿ ಮಾಡಲೇಬೇಕಲ್ಲಾ? ಆದರೇ ಹೀಗೆ ಅವನ ಬಳಿ ಹೋದರೆ ಏನು ಪ್ರಯೋಜನವಿಲ್ಲ, ಸಾಧನೆ ಮಾಡಬೇಕು. ನಿಮ್ಮ ಸಾಧನೆ ಅವನಿಗೆ ಚಾಟಿ ಏಟಿನ ಹಾಗೆ ಇರಬೇಕು, ಅವನು ನಿಮ್ಮ ಕಾಲ ಕೆಳಗೆ ಅಸಹಾಯಕತೆಯಿಂದ ಬೀಳಬೇಕು. ಹಾಗೇ ನೀವು ಸಾಧಿಸಬೇಕು,’ ಎಂದ. ಅವನ ಮಾತುಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಅವನ ಮಾತುಗಳು ನನ್ನಲ್ಲಿ ಛಲ ತುಂಬಿತು. ಸಾಧನೆ ಮಾಡಲೇಬೇಕು ಎಂಬ ಹಠ ಬಂದಿತ್ತು. ಹೀಗೆ ಆರು ತಿಂಗಳು ಕಳೆಯಿತು. ಅಭಯನ ಸ್ನೇಹ, ಪ್ರೀತಿಯ ಮಾತುಗಳಿಂದ ಮತ್ತೆ ನಾನು ಮೊದಲಿನಂತೆ ಆದೆ.

“ಒಂದು ಪ್ರಮುಖ ಚಾನೆಲ್ ‌ನ ರಿಯಾಲಿಟಿ ಶೋನಲ್ಲಿ ಹಾಡಿನ ಕಾಂಪಿಟಿಶನ್‌ ನಲ್ಲಿ ಗೆದ್ದೆ. ಆಮೇಲೆ ತುಂಬಾ ದೊಡ್ಡ ಗಾಯಕಿಯಾದೆ. ನನಗೆ ಬರೆಯುವ ಹವ್ಯಾಸ ಇತ್ತಲ್ಲ, ಎಂದೋ ಬರೆದ ಕಥೆಯನ್ನು ಒಬ್ಬ ನಿರ್ಮಾಪಕರಿಗೆ ಕೊಟ್ಟೆ, ಆ ಸಿನಿಮಾ ಸೂಪರ್‌ ಹಿಟ್‌ ಆಯಿತು. ಆಮೇಲೆ ನನ್ನ ಕಥೆಗಳಿಗೆ ಡಿಮ್ಯಾಂಡ್‌ ಹೆಚ್ಚಾಯಿತು. ನಿರ್ಮಾಪಕರು, ನಿರ್ದೇಶಕರು ನನ್ನ ಕಥೆಯೇ ಬೇಕೆಂದು ಒತ್ತಾಯಿಸುತ್ತಿದ್ದರು.

“ಹಾಗಿರುವಾಗ ಮನೀಶ್‌ ಮತ್ತೆ ನಮ್ಮ ಮನೆ ಹುಡುಕಿಕೊಂಡು ಬಂದ. ನಾನು ಅವನನ್ನು ಚೆನ್ನಾಗಿ ಬೈದು ಸೆಕ್ಯೂರಿಟಿ ಕೈಯಲ್ಲಿ ಆಚೆ ಹಾಕಿಸಿದೆ. ಅಭಯ್‌ ಹೇಳಿದ ಹಾಗೆ ನನ್ನ ಸಾಧನೆಯಿಂದಲೇ ಅವನನ್ನು ಸೋಲಿಸಿದ್ದೆ. ನನಗೆ ತುಂಬಾ ಆತ್ಮ ತೃಪ್ತಿ ಸಿಕ್ಕಿತು. ನಂತರ ಮನೀಶ್‌ ಎಲ್ಲಾ ಕಳೆದುಕೊಂಡು ಬೀದಿಗೆ ಬಂದ. ಅವನ ಜೊತೆ ಮದುವೆ ಆಗಬೇಕೆಂದಿದ್ದ ಹುಡುಗಿ ಅವನನ್ನು ಬಿಟ್ಟುಹೋದಳು. ಈಗ ಅವನ ಬಳಿ ಏನೂ ಇಲ್ಲ.“ನನಗೆ ಹಣ, ಯಶಸ್ಸು, ಖ್ಯಾತಿ ಎಲ್ಲವೂ ಸಿಕ್ಕಿತು. ಆದರೂ ಈ ಊರು ಜಾಗ ಯಾವುದನ್ನೂ ಬಿಡಲು ಮನಸ್ಸು ಒಪ್ಪಲಿಲ್ಲ. ಇಲ್ಲೇ ಒಂದು ಫಾರ್ಮ್ ಹೌಸ್‌ ಖರೀದಿಸಿದೆ. ಎಲ್ಲದಕ್ಕೂ ಕೆಲಸದವರು ಇದ್ದಾರೆ. ಅಪ್ಪ ಅಮ್ಮ ಆರಾಮಾಗಿ ಓಡಾಡಿಕೊಂಡಿದ್ದಾರೆ. ನಕ್ಷತ್ರಾಳ ಮದುವೆ ಆಯಿತು. ಅವಳು ಬೇರೆ ಊರಿನಲ್ಲಿ ಐಎಎಸ್‌ ಆಫೀಸರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ನನ್ನ ಪ್ರತಿಯೊಂದು ಹೆಜ್ಜೆಯ ಹಿಂದೆ ಅಭಯ್‌ ಇದ್ದ. ನನ್ನ ಇವತ್ತಿನ ಯಶಸ್ಸಿಗೆ ಅವನೇ ಕಾರಣ. ಆಮೇಲೆ ಒಂದು ಅನಾಥಾಶ್ರಮ ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ತಾಯಿಯಾದೆ. ಪ್ರತಿ ದಿನ ಅಲ್ಲಿಗೆ ಹೋಗಿ ಕಾಲ ಕಳೆದರೆ ನನಗೆ ನೆಮ್ಮದಿ. ನಾನು ಬ್ಯುಸಿ ಆಗಿದ್ದೇನೆಂದರೆ, ಅದರ ಸಂಪೂರ್ಣ ಜವಾಬ್ದಾರಿ ಅಭಯನದು.

“ಮತ್ತೆ ಮನೀಶ್‌ ನನ್ನ ಬಳಿ ಬಂದು, `ನಾನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಯಿತು, ನನಗೆ ನನ್ನ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ಕೊಡು. ನಾನು ನಿನ್ನನ್ನು ಮದುವೆ ಆಗ್ತೀನಿ,’ ಎಂದ. ಆದರೆ ಈ ಸಾರಿ ಅವನ ಬಣ್ಣದ ಮಾತಿಗೆ ನಾನು ಮರುಳಾಗಲಿಲ್ಲ. ಅವನ ಮೋಸದ ಜಾಲ ನನಗೆ ತಿಳಿಯಿತು. ಅವನಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಅವನು ಒಬ್ಬ ಅಯೋಗ್ಯ, ಅವನ ಬಗ್ಗೆ ನನ್ನಲ್ಲಿ ಯಾವುದೇ ಕನಿಕರ ಮೂಡಲಿಲ್ಲ. ನಾನು ಚೆನ್ನಾಗಿ ಬೈದು ಆಚೆ ಹಾಕಿದೆ. ಅದಕ್ಕವನು, `ನಾನು ಮೀಡಿಯಾದಲ್ಲಿ ಎಲ್ಲಾ ಹೇಳ್ತೀನಿ. ಆಗ ನಿನ್ನ ಮರ್ಯಾದೆ ಹೋಗುತ್ತದೆ. ಎಲ್ಲ ನಿನ್ನನ್ನೇ ಥೂ ಛೀ ಎನ್ನುತ್ತಾರೆ. ಆಗ ನಿನಗೆ ಬೇರೆ ದಾರಿ ಇಲ್ಲದೇ ನನ್ನನ್ನು ಮದುವೇ ಆಗಲೇ ಬೇಕಾಗುತ್ತದೆ,’ ಎಂದ. ಅವನನ್ನು ಅಲ್ಲೇ ಕೊಂದು ಹಾಕಿ ಬಿಡುವಷ್ಟು ಸಿಟ್ಟು ಬಂದಿತು. ಆದರೆ ಅಪ್ಪ, ಅಮ್ಮ, ಅಭಯ್‌ ಸಮಾಧಾನ ಮಾಡಿ ಅವನನ್ನು ಹೊರಗೆ ಕಳುಹಿಸಿದರು.

“ಆದರೆ ವಿಧಿಯೇ ಅವನ ಮೇಲೆ ಪ್ರತೀಕಾರ ತೆಗೆದುಕೊಂಡಿತ್ತು. ಮಾರನೇ ದಿನ ಅವನು ಒಂದು ಅಪಘಾತದಲ್ಲಿ ಸ್ಥಳದಲ್ಲಿಯೇ ಮರಣಹೊಂದಿದ. ಅವನು ಅಷ್ಟು ಆರಾಮವಾಗಿ ಸಾಯಬಾರದಿತ್ತು. ನರಳಿ, ನರಳಿ ಸಾಯಬೇಕಿತ್ತು ಎಂದು ಅನಿಸಿತು ನನಗೆ. ಆದರೆ ಅವನ ಪಾಪದ ಕೊಡ ತುಂಬಿತ್ತು ಸತ್ತ.

“ಕೆಲವು ತಿಂಗಳು ಕಳೆಯಿತು. ಅಭಯ್‌ ಗೆ ಅವನ ಮನೆಯಲ್ಲಿ ಮದುವೆಯಾಗೆಂದು ಒತ್ತಾಯಿಸಿದರು. `ಮದುವೆ ಅಂತ ಆದರೆ ಅದು ನಿಯತಿಯನ್ನು ಮಾತ್ರ,’ ಎಂದು ಕಟ್ಟುನಿಟ್ಟಾಗಿ ಹೇಳಿದ. ನಾನು ಅವನಿಗೆ, `ನಾನು ಪರಿಶುದ್ಧಳಲ್ಲ. ನಿನಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ,’ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. `ನಿನ್ನ ಮನಸ್ಸು ಪರಿಶುದ್ಧವಾಗಿದೆ. ನಾನು ಇಷ್ಟಪಟ್ಟಿದ್ದು ನಿನ್ನನ್ನು ಮಾತ್ರ,’ ಎಂದ. ಅದಕ್ಕೆ ನಾನು, `ನನಗೆ ಮಕ್ಕಳಾಗುವುದಿಲ್ಲ. ಈ ಮದುವೆ ಬೇಡ,’ ಎಂದೆ ನಾನು. `ನನಗೆ ನೀನು ಮಗು, ನಿನಗೆ ನಾನು ಮಗು. ಹೇಗೂ ಮನೆ ತುಂಬಾ ಮಕ್ಕಳಿದ್ದಾರೆ. ಇನ್ನೇಕೆ ಆ ಯೋಚನೆ? ಅನಾಥಾಶ್ರಮದ ಮಕ್ಕಳೆಲ್ಲ ನಮ್ಮ ಮಕ್ಕಳೇ ತಾನೇ…?’ ಎಂದ. ನಾನು ಸತ್ತು ಹೋದರೆ ಅವನು ಹೇಗೂ ಬೇರೆ ಮದುವೆ ಆಗುತ್ತಾನೆ ಎಂದು ನೆನೆಸಿ, ಅವನಿಗೆ ಒಂದು ಪತ್ರ ಬರೆದು ಅದರಲ್ಲಿ ನನ್ನ ಕೊನೆ ಆಸೆ ಅವನ ಮದುವೆ ಎಂದು ಬರೆದಿಟ್ಟು ನಾನು ಸಾಯಲು ನಿರ್ಧರಿಸಿದೆ.

“ನಿದ್ದೆ ಮಾತ್ರೆ ಸೇವಿಸಲೆಂದು ಡಬ್ಬ ತೆಗೆದುಕೊಂಡೆ… ಅಷ್ಟರಲ್ಲಿ ಅಭಯ್‌ ಅಲ್ಲಿಗೆ ಬಂದ. ನನ್ನನ್ನು ಹಿಡಿದು ಅಳುತ್ತಾ, `ನಿಯತಿ, ನನಗೆ ಇಂತಹ ದೊಡ್ಡ ಶಿಕ್ಷೆ ಕೊಡಬೇಡ. ಪ್ಲೀಸ್‌ ಅದನ್ನು ತಡೆದುಕೊಳ್ಳಲು ಆಗುವುದಿಲ್ಲ ನನಗೆ, ನನ್ನ ಜೀವದ ಉಸಿರು ನೀನು, ಉಸಿರು ಇಲ್ಲದೆ ಬದುಕುವುದೇ ಈ ಜೀವಾ? ನಾನು ನಿನ್ನನ್ನು ನೋಡಿದ ದಿನವೇ ನಿನ್ನ ಮೇಲೆ ಪ್ರೀತಿ ಹುಟ್ಟಿತು. ಅದು ದಿನೇ ದಿನೇ ಮತ್ತಷ್ಟು ಆಳವಾಗಿ ಹೆಚ್ಚಾಗಿ ಹೆಮ್ಮರವಾಗಿದೆ. ನಾನು ಪ್ರೀತಿಸಿದ್ದು ನಿನ್ನನ್ನು ಮಾತ್ರ!

“ನೀನು ಜೊತೆಯಲ್ಲಿದ್ದರೆ ನನಗೆ ಅದೇ ಪ್ರತಿ ಕ್ಷಣ ಸಂಭ್ರಮ. ಯಾರೋ ಏನೋ ಅಂತಾರೆ ಅಂತ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಏನೂ ಬೇಕಾದರು ಅಂದುಕೊಳ್ಳಲಿ. ಅದರಿಂದ ನನಗೆ ಏನೂ ಆಗುವುದಿಲ್ಲ. ನೀನು ನನಗೆ ಜೊತೆ ಆಗಬೇಕು, ಅಷ್ಟೇ ಸಾಕು ನನಗೆ. ನಿನ್ನ ಒಪ್ಪಿಗೆ ಇಲ್ಲ ಅಂದರೆ ಪರವಾಗಿಲ್ಲ. ನನ್ನಲ್ಲೇ ನೀನು ಸದಾ ಇರುತ್ತೀಯಾ, ನಿನ್ನ ನೆನಪೊಂದೇ ಸಾಕು. ನನಗೆ ಜೀವಿಸಲು. ಹೀಗೆ ಇದ್ದುಬಿಡೋಣ. ನಾನು ನಿನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ನಿನಗೆ ನನ್ನ ನೋಡುವುದು ಕಷ್ಟವಾದರೆ ನಾನು ದೂರ ಹೋಗ್ತೀನಿ. ಆದರೆ ತಮಾಷೆಗೂ ಇನ್ನೆಂದೂ ಹೀಗೆ ಮಾಡಬೇಡ. ಆ ಕ್ಷಣವೇ ನಾನು ಸತ್ತುಹೋಗಿ ಬಿಡ್ತೀನಿ ಅಷ್ಟೇ,’ ಎಂದ ಅಭಯ್‌.

“ಇಂತಹ ಪ್ರೀತಿಗೆ, ಮನಸ್ಸಿಗೆ ನಾನು ಇನ್ನೇನು ಕೊಡಲಿ? ಜೀವ ಇರುವವರೆಗೂ ಅವನಿಗಿಂತ ಹೆಚ್ಚಾಗಿ ನಾನು ಅವನನ್ನು ಪ್ರೀತಿ ಮಾಡಬೇಕು ಅಷ್ಟೇ, ಎಂದು ಮನಸ್ಸಿನಲ್ಲಿ ನಿರ್ಧಾರ ಮಾಡಿದೆ. ಅವನ ಕೈಯನ್ನು ಬಿಡಿಸಿಕೊಂಡು ಅವನು ಕಣ್ಣೀರು ಒರೆಸಿ, `ಐ ಲವ್ ಯೂ ಎ ಲಾಟ್‌ ಅಭಯ್‌. ನಾನು ನಿನ್ನನ್ನು ಬಿಟ್ಟು ಇನ್ನೂ ಯಾವತ್ತೂ ಎಲ್ಲಿಗೂ ಹೋಗುವುದಿಲ್ಲ,’ ಎಂದೇ. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ತಿಂಗಳಲ್ಲಿ ನಮ್ಮಿಬ್ಬರ ಮದುವೆ ಆಯಿತು. ಮದುವೆ ಆದ ಮೇವೆ ಬದುಕಲ್ಲಿ ಬರೀ ಖುಷಿಯೇ ಸಿಕ್ಕಿತು ನನಗೆ.

“ಆರು ತಿಂಗಳು ಕಳೆಯಿತು. ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುವ ನಿರ್ಧಾರ ಮಾಡಿ, ಐವಿಎಫ್‌ ಮಾಡಿಸಿದ್ದೇವೆ. ಇನ್ನೇನು ಹೆರಿಗೆಯ ದಿನ ಹತ್ತಿರ ಬಂದಿತು. ನಕ್ಷತ್ರಾ ಮತ್ತು ಅವಳ ಮಗುವನ್ನು ಕರೆದುಕೊಂಡು ಬರಲು ಏರ್‌ ಪೋರ್ಟ್‌ ಗೆ ಅಪ್ಪ, ಅಮ್ಮ  ಅಭಯ್‌ ಜೊತೆಗೆ ಹೋಗಿದ್ದಾರೆ. ಇನ್ನೇನು ಬರುವ ಹೊತ್ತಾಯಿತು. ಇಷ್ಟೇ ಸಿಂಚು ನನ್ನ ಕಥೆ ವ್ಯಥೆ,” ಎಂದಳು ನಿಯತಿ.

“ಎಷ್ಟು ಅನುಭವಿಸಿಬಿಟ್ಟೆ ನೀತೀ ನೀನು… ನನಗೆ ಕಲ್ಪನೆ ಮಾಡಿಕೊಳ್ಳಲು ಕೂಡ ಆಗುತ್ತಿಲ್ಲ. ಸಧ್ಯ! ಈಗಲಾದರೂ ಖುಷಿಯಾಗಿ ಇದ್ದೀಯಲ್ಲ ಅಷ್ಟು ಸಾಕು,” ಎಂದಳು ಸಿಂಚನಾ. ಅಷ್ಟರಲ್ಲಿ ನಿಯತಿಯ ಅಪ್ಪ, ಅಮ್ಮ, ಅಭಯ್‌, ನಕ್ಷತ್ರಾ ಎಲ್ಲರೂ ಬಂದರು. ಸಿಂಚನಾಳನ್ನು ಬಹಳ ಪ್ರೀತಿಯಿಂದ ಮಾತನಾಡಿಸಿದರು.

ಅಭಯ್‌ ನನ್ನು ನೋಡಿ ಸಿಂಚನಾಳಿಗೆ ಬಹಳ ಖುಷಿಯಾಯಿತು. ನಿಮ್ಮ ಜೋಡಿ ಮೇಡ್‌ ಫಾರ್‌ ಈಚ್‌ ಅದರ್‌ ಎಂದಳು. ಅಷ್ಟರಲ್ಲಿ ಫೋನ್‌ ರಿಂಗ್‌ ಆಯಿತು. ನಕ್ಷತ್ರಾ ತೆಗೆದುಕೊಂಡಳು. ಫೋನ್‌ ನಲ್ಲಿ ಕೇಳಿಸಿದ ವಿಷಯದಿಂದ ಬಹಳ ಹರ್ಷಗೊಂಡ ಅವಳು, “ನಿಯತಿ… ಅಭಯ್‌… ನಿಮಗೆ ಬಂಪರ್‌!, ಅವಳಿ ಮಕ್ಕಳು ಹುಟ್ಟಿವೆ. ಒಂದು ಹೆಣ್ಣು, ಒಂದು ಗಂಡು. ಆರತಿಗೊಂದು…. ಕೀರ್ತಿಗೊಂದು….” ಖುಷಿಯಿಂದ ಹೇಳಿದಳು.

ವಿಷಯ ಕೇಳಿ ಎಲ್ಲರಿಗೂ ಸಂತಸ ಮತ್ತು ಆನಂದವಾಯಿತು. ನಿಯತಿಯ ಕಣ್ಣಿನಲ್ಲಿ ಸಂತೃಪ್ತಿಯ ಭಾವ ಮೂಡಿತು. ಎಲ್ಲರೂ ಮಕ್ಕಳನ್ನು ನೋಡಲು ಆಸ್ಪತ್ರೆಗೆ ಹೊರಟರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ